Tuesday, May 29, 2007

ಕಡಲಾಳದ ನೀಲಿಯಿಂದ ಒಂದು ಪತ್ರ !!!

ನನಗಿನ್ನು ಆ ದಿನ ಚೆನ್ನಾಗಿ ನೆನಪಿದೆ. ನಾನು ಅಪ್ಪ ಅಮ್ಮನ ಜೊತೆ ನಮ್ಮ ಕಾಲೇಜಿನ ಆ ನರಿ ಮೂತಿ ಮ್ಯಾನೇಜರ್ ಕೋಣೆ ಮುಂದೆ ಕೂತಿದ್ವಿ. ಅವನ ಹೆಸರೇನೋ ನನಗಿನ್ನು ಗೊತ್ತಿಲ್ಲ ದಿನೇಶಾನೋ ಗಣೇಶಾನೊ ಇರ್ಬೇಕು...

ನೀನು ನಿನ್ನ ತಂಗಿ ಜೊತೆ ಬಂದೆ. ಬಂದು, ಸೀದ ನುಗ್ಗುತ್ತಿದ್ದೀಯ ಮ್ಯಾನೇಜರ್ ಕೋಣೆಗೆ ಅಷ್ಟ್ ಹೊತ್ತಿನಿಂದ ಕಾದು ಕಾದು ರೋಸಿಹೋಗಿದ್ದ ನನಗೆ ಬರ್ತೀರೋ ಸಿಟ್ಟನ್ನೆಲ್ಲಾ ನಿನ್ನ ಮೇಲೆ ಕಕ್ಕೋಹಾಗಿತ್ತು. cant you see we are waiting here ಅಂದೆ ನಾನು. ನಿನ್ನ ಮುಖದಲ್ಲಿ ಒಂದು ತುಂಟ ನಗೆ...

ನಾನು ನಿನ್ನ ದುರುಗುಟ್ಟಿಕೊಂಡು ನೋಡುತಿದ್ರೆ,ನೀನು ನನ್ನ ಕಣ್ಣುಗಳನ್ನ ಅಷ್ಟೇ ಪ್ರೀತಿಯಿಂದ ನೋಡುತಿದ್ದೆ. ನಾನು ಸ್ವಲ್ಪ ಅಹಂಕಾರದ ಹುಡುಗಿ ಅಂತ ಎಲ್ಲರಿಗೂ ಗೊತ್ತು. ನನ್ನ ಮುಂದೆ ಹುಡುಗರ ಗುಂಪೇ ಹೋಗುತಿದ್ರೂ ಕುತೂಹಲಕ್ಕಾದರೂ ನಾನು ಕಣ್ನೆತ್ತಿ ನೋಡಿದವಳಲ್ಲ ನನ್ನ ಕಣ್ಣುಗಳಲ್ಲಿ ಅದೇ ನಿರ್ಲಿಪ್ತ ಅಹಂಕಾರ...

ಆದರೆ ಅವತ್ತು ಏನಾಯ್ತು ನನಗೆ? ನಿನ್ನನ್ನು ನನ್ನ ಕಣ್ಣುಗಳು ಪದೇ ಪದೇ ಯಾಕೆ ಹುಡುಕ ಹತ್ತಿದವು ? ? ಮತ್ತೆ ನೀ ಸಿಕ್ಕುಬಿಟ್ಟೆಯಲ್ಲ ನಿನ್ನ ಗುರು ಗುಟ್ಟೋ ಬೈಕಿನ ಮೇಲೆ! ನನಗೆ ಅಸೂಯ ಆಗುವಷ್ಟು ಆ ಬೈಕಿನ ಜೊತೆಗೇ ಇರತಿದ್ಯಲ್ಲ! ನೀನು ನೆಡದಿದ್ದೆ ನಾನು ನೋಡಿಲ್ಲ.

ನನ್ನ ಕಣ್ಣುಗಳು ನಿನ್ನ ಹುಡುಕುತ್ತಿದ್ದವು ಅನ್ನೋದೇನೊ ನಿಜ. ಆದರೆ, ಈ ಪರಿ ನೀನು ನನ್ನ ಆವರಿಸಿಕೊಂಡಿರಲಿಲ್ಲ. ನಿನ್ನ ಸ್ನೇಹಕ್ಕಾಗಿ ಒಂದು ಚಿಕ್ಕ ಪ್ರಯತ್ನ ಕೂಡ ಮಾಡಿರಲಿಲ್ಲ ನಾನು...

ಅವತ್ತು ನಿನ್ನ ತಂಗಿ ಲ್ಯಾಬ್ ನಲ್ಲಿ ನನ್ನ ಹತ್ರ ಬಂದು 'ಅಣ್ಣ ನಿಮ್ಮ ಹತ್ರ ಮಾತಾಡಬೇಕಂತೆ' ಅಂದಾಗ ಆಷ್ಚರ್ಯ ಆಯ್ತು ನೀನು ಮಾತಾಡಬೇಕು ಅಂತ ಹೇಳಿಕಳಿಸಿದ್ದಕ್ಕಲ್ಲ.. ನಿನ್ನ ತಂಗಿ ಮಾತಾಡಿದಳಲ್ಲ ಅದಕ್ಕೆ ಆ ಹುಡುಗೀನ ಏನು protectedಆಗಿ ಬೆಳಸಿದ್ದೀರೋ ಮಾರಾಯ? ಅವಳಿಗೆ ಮಾತಡಕ್ಕೆ ಬರುತ್ತೆ ಅಂತ ಗೊತ್ತಾಗಿ ಖುಷಿ ಆಯ್ತು ನನಗೆ...

ನಮ್ಮ ಭೇಟಿ ಬಿಡು ಎಲ್ಲಾ ಹುಡುಗ-ಹುಡುಗಿ ಭೇಟಿಗಳoತೆ ಒಂದು ಸಾಮಾನ್ಯ ಭೇಟಿ, ಅರ್ಧ ಅರ್ಧ ದಾಳಿಂಬೆ ಹಣ್ಣಿನ ಜ್ಯೂಸ್ ನಿಂದ ಶುರುವಾಗಿದ್ದು..ನಿನ್ನ ಜೊತೆ ಅರ್ಧ ಗ್ಲಾಸಿನ ದಾಳಿಂಬೆ ಜೂಸ್ ಕುಡಿಯುವಾಗ ನಮ್ಮ ಸ್ನೇಹ ಇಷ್ಟು ಗಟ್ಟಿಯಾಗಿ ಬೆಳೆಯುತ್ತೆ ಅನ್ನೋ ಕಲ್ಪನೆ ಖಂಡಿತ ಇರಲಿಲ್ಲ..

ಮೊದಮೊದಲು ನೀನು ನಂಗೆ ಇಷ್ಟ ಆಗಲಿಲ್ಲ ಉಹೂ...ನಿನ್ನ ಪ್ರೀತಿ ಹಂಚೋ ಕಣ್ಣುಗಳಷ್ಟೆ ಇಷ್ಟವಾಗಿದ್ದು ನನಗೆ!!

ಆದರೆ ಬರುಬರುತ್ತಾ ಏನಾಯ್ತ್ತು? ನಮ್ಮಿಬ್ಬರಿಗೂ? ಒಬ್ಬರನ್ನೊಬ್ಬರು ಅಷ್ಟು ಹಚ್ಚಿಕೊಂಡ್ವಿ. ಎಷ್ಟು ವಿಷಯ ಮಾತಡಿಲ್ಲ ನಾವು? ಬದುಕಿನೆಡೆಗೆ, ಪ್ರೀತಿಯೆಡೆಗೆ, ಕಾಮದೆಡೆಗೆ , ಆದ್ಯಾತ್ಮದೆಡೆಗೆ...ನನ್ನಲ್ಲಿದ್ದ ಪ್ರಶ್ನೆಗಳನ್ನ ನಾನು ಕೇಳುತ್ತಿದ್ದರೆ, ನೀನು ಆ ಎಲ್ಲಾ ಪ್ರಷ್ನೆಗಳಿಗೆ ಅತ್ಯಂತ ಸರಳವಾಗಿ, ಮುಜುಗರ ಆಗದೆ ಇರೊ ಹಾಗೆ ಉತ್ತರಿಸುತ್ತಿದ್ದೆ. ನಿನ್ನ ಉತ್ತರಗಳು ಯಾವತ್ತೂ ಭಾಷಣ ಅನ್ನಿಸಲಿಲ್ಲ ನಂಗೆ ನೀನು ಯಾವತ್ತು ನಿನ್ನ ಭಾವನೆಳಗನ್ನಾಗಲಿ, ಉತ್ತರಗಳನ್ನಾಗಲಿ, ಅನಿಸಿಕೆಗಳನ್ನಾಗಲಿ ಯಾವುದನ್ನು ನನ್ನ ಮೇಲೆ ಹೇರಲಿಲ್ಲ, ನನ್ನ ಉಸಿರುಕಟ್ಟಿಸಲಿಲ್ಲ! ಅದಕ್ಕೆ ನಾನು ಅಷ್ಟು ಇಂಪ್ರೆಸ್ಸ್ ಆಗಿದ್ದ?


ನಾವು ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದೀವಿ ಅಂತ ಗೊತ್ತಾದರೂ ಯಾಕೆ ಹೇಳಿಕೊಳ್ಳಲಿಲ್ಲ? ನಾನಾದರೂ ಹೇಳಿಕೊಳ್ಳುತ್ತಿದ್ದೆನೇನೋ...ಆದರೆ ನೀನು ಪ್ರಭಾವ ಬೀರಿಬಿಟ್ಟಿದ್ದೆ..ಭಾವನೆಗಳ ಅಲೆಯಲ್ಲಿ ತೇಲಿ ಹೋಗದೇ ವಾಸ್ತವತೆಯಲ್ಲಿ ಹೇಗೆ ಬದುಕಬೇಕು ಅನ್ನೋದನ್ನ ನಿನ್ನಿಂದ್ಲೇ ಅಲ್ವ ನಾನು ಕಲಿತಿದ್ದು?

ಆದ್ರೆ ನೀನು ಯಾಕೆ ಫ್ಲರ್ಟ್ ಮಾಡ್ತೀಯ ಎಲ್ಲರ ಜೊತೆ? ನಿನ್ನ ಮಾತನ್ನ ನಂಬೋದೇ ಕಷ್ಟ! ಆದರೂ ನಿನ್ನ ಯಾಕೆ ಅಷ್ಟು ಇಷ್ಟಪಡ್ತೀನಿ ಅಂತ ಯೋಚಿಸಿದರೆ ನಿನ್ನ ತುಂಟತನ ಮತ್ತು ನೀನು ಎಲ್ಲಾ ವಿಷಯದೆಡೆಗೂ ಬೆಳಸಿಕೊಂಡಿರುವ ದಿವ್ಯವಾದ ನಿರ್ಲಕ್ಷವೇ ಕಾರಣ ಅನ್ನಿಸುತ್ತೆ...

ಇಷ್ಟೆಲ್ಲಾ ಬರೆದರೂ ಇದನ್ನ ನಿನಗೆ ಕೊಡಬೇಕೆ? ಅಂತ ಯೋಚಿಸ್ತಿದ್ದಿನಿ..ಉಹೂಂ..ನಾಚಿಕೆ ಅಲ್ಲ, ಭಯ ಮೊದಲೇ ಇಲ್ಲ, ಆದರೂ ಕೊಟ್ರೆ ಏನು ಸಾಧಿಸಿದ ಹಾಗಾಯ್ತು ಅನ್ನುವ ನಿರ್ಲಕ್ಷ...ಆದರೂ ಕೊಡುತೀನಿ ಯಾಕೆ ಗೊತ್ತ? ನನ್ನ ತುಂಬಾ ಪ್ರೀತಿಸ್ತಿರೋ ಹುಡುಗನ್ನ ಮದುವೆಯಾಗ್ತಿದೀನಿ. ಅವನನ್ನೆ ಪ್ರಜ್ನಾಪೂರ್ವಕವಾಗಿ ಪ್ರೀತಿಸಬೇಕು, ಪ್ರೀತಿಸ್ತೀನಿ...

ಇಲ್ಲ! ನಾನು ನೀನು ಖಂಡಿತಾ ಮದುವೆ ಆಗಬಾರದು.` ಹೀಗೆ ಒಬ್ಬರೆಡೆಗೆ ಒಬ್ಬರು ಕುತೂಹಲವನ್ನು ಉಳಿಸಿಕೊಂಡೇ ಬದುಕಿಬಿಡಬೇಕು..ಮುಂದೆ ನನ್ನ ಗಂಡನ ಜೊತೆ ಒಂದು ಚಿಕ್ಕ ಜಗಳ ಆದಾಗ ನಿನ್ನ ನೆನಪು ಬರಬೇಕು, ನೀನು ಇದ್ದಿದ್ರೆ ಹೇಗೆ ರಿಯಾಕ್ಟ್ ಮಾಡ್ತಿದ್ದೆ ಅಂತ ಕಲ್ಪಿಸಿಕೊಳ್ಳಕ್ಕಾದರೂ ನಾವಿಬ್ಬರೂ ಬರೀ ಸ್ನೇಹಿತರಾಗೆ ಉಳಿದುಬಿಡೋಣ ...

ಸಂಜೆ ಕಾಫೀ ಡೇನಲ್ಲಿ ಸಿಗೋಣ" ಏನೆ ಹುಡುಗಿ ನಿನ್ನ ಪತ್ರ ನನ್ನ ಸೆಂಟಿ ಮಾಡಿಬಿಟ್ಟಿತ್ತಲ್ಲ" ಅಂತ ..ನಿನ್ನ ಎವರ್ಗ್ರೀನ್ ಡೈಲಾಗ್ ಹೊಡೆಯುತ್ತ...ಮುಖದಲ್ಲಿ ತುಂಟನಗೆ ಹೊತ್ತು ಒಳಗೆ ಬಾ.....

ಕಾಫಿಗಾಗಿ ಕಾದಿರುವವಳು

Saturday, May 26, 2007

ಬಂಧ!!!

ಯಾವತ್ತು 6 15ಕ್ಕೆ ಎಚ್ಚರ ಆಗೋಗೂತ್ತೆ ನಂಗೆ ಅಂದುಕೊಂಡು ಗಡಿಯಾರ ನೋಡಿದರೆ 6 23ಆಗಿತ್ತು ಸಧ್ಯ 7-8ನಿಮಿಷ ಜಾಸ್ತಿ ನಿದ್ದೆ ಬಂದಿದೆ ಅನ್ನಿಸಿ ಸಮಾಧಾನ ಮಾಡ್ಕೊಂಡೆ. ಎದುರುಗಡೆ ಬೆಡ್ ನೋಡಿದಾಗ ಮನಸ್ಸು ಖಾಲಿ ಅನ್ನಿಸುತ್ತಿದೆ..ಅವಳು ಅಲ್ಲಿ ಇದ್ದಿದ್ರೆ ಅವಳ ನಿದ್ದೆ ಕಣ್ಣನ್ನ ನೋಡುತ್ತಾ 'ನೆನ್ನೆ ರಾತ್ರಿ ನೀನು ಹಿಂಗೆ ಏನೇನೋ ಬಡಬಡಿಸುತ್ತಿದೆ' ಅಂತ ಹೇಳಿ ಗೋಳು ಹುಯ್ಕೋಬಹುದಿತ್ತು..ಹಾ ಅವಳ ಹೆಸರು ವಾತ್ಸಾಲ.. ಇವತ್ತಿಗೆ ಸರಿಯಾಗಿ ಒಂದು ವಾರದ ಹಿಂದೆ ಅವಳು ಭಾರತಕ್ಕೆ ಹಾರಿಹೋದಳು. ನನ್ನ ಜೊತೆಗೆ ಕೆಲಸ ಮಾಡೊಳು ನಾವಿಬ್ಬರೂ ಒಂದೇ ಕಂಪನೀಲೀ ಕೆಲಸ ಮಾಡುತ್ತಿದ್ದೀವಿ...ನನಗಿಂತ ಮೊದಲೇ ಹಾಲೆಂಡ್‌ಗೆ ಬಂದವಳು. ಚೆನ್ನಾಗಿದ್ಲೂ ನೋಡೊಕ್ಕೆ.. ಅವಳೂ ಕನ್ನಡದವಳು ಅಂತ ಗೊತ್ತಾಗಿ ನಾನು ಸ್ವಲ್ಪ ಜಾಸ್ತಿನೇ ಸಲುಗೆಯಿಂದ ವರ್ತಿಸೊಕ್ಕೆ ಶುರು ಮಾಡ್ದಾಗ "ನೀವು ನನ್ನ ಜೊತೆ ಫ್ಲಾರ್ಟ್ ಮಾಡ್ತಿದ್ದೀರಾ ಅಂತ ಗೊತ್ತಗ್ತಿದೆ.. ಆದ್ರೂ ಇಷ್ಟ ಆಗ್ತಿರ ಅಂದಿದ್ಲು."ಒಂದು ದಿನ ಆಫೀಸಿನಲ್ಲಿ ಜೋಲುಮುಖ ಹಾಕ್ಕೊಂದು ಕಾಫಿ ಕುಡೀತಿದ್ದೊಳ ಹತ್ತಿರ ಹೋಗಿ ಏನಾಯ್ತು ಅಂದಿದ್ದಕ್ಕೆ.. "ಒಂದು ವಾರದಿಂದ ಹೊಸಮನೆ ಹುಡುಕುತ್ತಾ ಇದ್ದೀನಿ, ಈಗಿನ ಒನರ್‍ದು ಸ್ವಲ್ಪ ಕಿರಿಕ್ಕು. ಮನೆ ಚೆನ್ನಾಗಿದ್ರೆ ಅಲ್ಲಿನ ಜನ ಸರಿ ಇಲ್ಲ, ಜನ ಸರಿ ಇದ್ರೆ ಮನೆ ಸರಿಯಾಗಿರಲ್ಲ, ಸಾಕಾಗ್ ಹೋಯ್ತು." ಅಂದಳೂ..'ಸರಿ ಹಾಗಾದ್ರೆ ನಮ್ಮನೆಗೆ ಬನ್ನಿ, ನಾವು ಮೂರು ಜನ ಇದ್ದೀವಿ. ನನ್ನ ಇಬ್ಬರು ಸ್ನೇಹಿತರು ಬೇರೆ ಕಂಪನೀಲಿ ಕೆಲಸ ಮಾಡ್ತಿದಾರೆ.' ಅಂತ ತಮಾಶೇ ಮಾಡಿ ಹಲ್ಲು ಕಿರಿದ್ರೆ.."ನಿಮ್ಮನೇ ಅಡ್ರೆಸ್ಸು ಕೊಡಿ" ಅಂತ ಸೀರಿಯಸ್ಸಾಗಿ ಅಡ್ರೆಸ್ಸು ಈಸ್‌ಕೊಂಡು ಸಂಜೆ ಮಾನೆಗ್ ಬಂದು ಸಂದೀಪ, ಸರ್ವನರನ್ನ ಮಾತಾಡ್ಸ್‌ಕೊಂಡು..ಮಾರನೇ ದಿನಾನೇ ಗಂಟು ಮೂಟೆ ಸಮೇತ ಮನೆ ಮುಂದೆ ಇಳಿದಳು!!!ಅವಳು ಒಂಥರ ಮೂಡಿ..ಒಂದಿನ ಪಟಪಟಾ ಅಂತ ಮಾತಾಡೋದು, ಇನ್ನೊಂದು ದಿನಾ ಪೂರಾ ಮೌನವಾಗಿ ಇರೋದು.. ರಾತ್ರಿ ಇಡೀ ತಪಸ್ಸು ಮಾಡೊರ ಥರ ನನಗೆ ತಲೆ ಬುಡ ಅರ್ಥವೆ ಆಗದ ಪುಸ್ತಕನ ಓದೋದು..ಇನ್ನುಸ್ವಲ್ಪ ದಿನ ನಂಗೆ ಫ್ರೆಂಚ್ ಕಲೀಬೇಕು ಅಂತ ಆಸೆ ಅಂತ ಫ್ರೆಂಚ್ ಕಲಿಯೂಕ್ಕೆ ಇರೋ ಸೀಡಿ- ಪುಸ್ತಕಗಳನ್ನ ಗುಡ್ಡೆ ಹಾಕ್ಕೊಂಡು ಅದರಲ್ಲಿ ಮುಳುಗಿಹೋಗದು..ಅಯ್ಯೂ ಈ ಹಾಳಾದ್ ಭಾಷೆ ಕಲಿಯೂಕ್ಕೆ ಹೋಗಿ ಎಷ್ಟು ಸಮಯ ಹಾಳು ಮಾಡಿದೆ ಅಂದುಕೊಂಡು..ಭಾರತದಲ್ಲಿರೋ ತನ್ನ ಸ್ನೇಹಿತೆಗೆ ಫೋನ್ ಮಾಡಿ ಗಂಟೆಗಟ್ಟಲೆ ಹರಟೆ ಹೊಡೆಯೋದು,ಇದ್ದಕ್ಕಿಧಂಗೆ ಒಂದು ದಿನ ಜ್ಞಾನೋದಯ ಆದ್ಹಂಗೆ ಆಗಿ, ಸಕತ್ ದಪ್ಪ ಆಗಿದೀನಿ, ಅನ್ನಿಸಿ ಜಿಮ್‌ಗೆ ಹೋಗಿ ಯಾದ್ವಾ ತದ್ವಾ ವೊರ್ಕ್ ಔಟ್ ಮಾಡೋದು..ಹೀಗೆ!!!ಮೊದಲು ಬೇರೆ ರೂಮ್ ನಲ್ಲಿ ಇರುತ್ತಿದ್ದ ಅವಳು ಸ್ವಲ್ಪ ದಿನದಲ್ಲೇ ನನ್ನ ಜೊತೆ ನನ್ನ ರೂಮ್ನಲ್ಲೇ ಇರೊಕ್ಕೆ ಶುರು ಮಾಡಿದಳು. ಒಂದು ದಿನಕ್ಕೂ ಸಂಬಂಧ ಕ್ಕೆ ಹೆಸರು ಕೊಡೋ ಪ್ರಯತ್ನ ಮಾಡಲಿಲ್ಲ ಅವಳು ಅದು ನನಗೂ ಬೇಕಿರಲಿಲ್ಲ ಅವಳನ್ನ ಮದುವೆ ಆಗ್ತೀನಾ ಅಂತ ಕೂಡ ಯೋಚಿಸಿರಲಿಲ್ಲ ನಾನು. ಸಂದೀಪ ಸರ್ವನರೇ ಗರ್ಲ್ ಫ್ರೆಂಡ್- ಬಾಯ್ ಫ್ರೆಂಡ್ ಅನ್ನೊಕ್ಕೆ ಶುರು ಮಾಡಿದ್ದರು 'ನೀನು ಅವಳನ್ನ ಪ್ರೀತಿಸುತ್ತಿಯ' ಅಂತ ಸರ್ವನ ಕೇಳಿದ್ದ 'ಇಲ್ಲ ,ಅವಳು ನಂಗೆ ಇಷ್ಟ ಆಗ್ತಾಳೆ ಅಷ್ಟೇ' ಅಂದಿದ್ದೆ ಅವಳನ್ನ ಇದೆ ಪ್ರಶ್ನೆ ಕೇಳಿದ್ದಕ್ಕೆ.."ಹಾ ಪ್ರೀತಿಸುತ್ತೀನಿ, ಆದರೆ ಅವನಿಗೆ ಈ ವಿಷಯ ಹೇಳಬೇಡ. ಅವನು ಹೇಗೆ ಅಂತ ನಂಗೆ ಗೊತ್ತು ಅವನಿಗೆ ಉಸಿರುಕಟ್ಟೋ ಹಂಗೆ ಆಗಬಾರದು. ನನ್ನ ಅವನ ಸಂಬಂಧಕ್ಕೆ ಹೆಸರು ಬೇಡ" ಅಂದಿದ್ದಳಂತೆ.ದಿನಾ ರಾತ್ರಿ ನಿದ್ದೇಲಿ ಮಾತಾಡೋ ಅಭ್ಯಾಸ ಇತ್ತು ಅವಳಿಗೆ. ಅವಳು ರಾತ್ರಿ ಹಿಂಗ್ ಕಿರಿಚುತ್ತಿದ್ದಳು, ಹಂಗೆ ಮಾತಡುತ್ತಿದ್ದಳು, ಅಂತ ಸಂದೀಪ ಸರ್ವನರಿಗೆ ಹೇಳಿ..ಮೂರು ಜನಾನು ಅವಳನ್ನ ಸಕತ್ತು ಚುಡಾಯಿಸುತ್ತಿದ್ದವಿ..ಅವಳೂ ಅದಕ್ಕೆ ಆಯುರ್ವೇದಿಕ್ಕು, ಆಲೋಪತಿ, ಹೋಮಿಯೋಪತಿ, ರೇಖಿ, ಯುನಾನೀ, ಎಲ್ಲ ಟ್ರೀಟ್ಮೆಂಟ್ ಮಾಡಿಸಿಕೊಂಡು ಯಾವುದು ಸರಿ ಹೋಗದೇ, "ನಾನು ರಾತ್ರಿ ಮಾತಾಡೋದೇ ಸರಿ' ಅಂತ ನಿರ್ಧಾರ ಮಾಡಿದ್ಲು.ಹೊರಡೋಕ್ಕೆ ಮುಂಚೆ ಚಿಗರೇ ಥರ ಆಗೋಗಿದ್ದಳು ಅವಳು. ಅಪ್ಪನಿಗೆ, ಅಮ್ಮನಿಗೆ, ತಮ್ಮನಿಗೆ, ಅಜ್ಜಿ- ತಾತನ್ಗೆ, ಸ್ನೆಹಿತರಿಗೇ ಅಂತ ಎಲ್ಲರಿಗೂ ಶೋಪಿಂಗ್ ಮಾಡಿ, ನಮ್ಮ ಮೂರು ಜನರಿಗೆ ಒಂದು ಚಂದದ ಪಾರ್ಟಿ ಕೊಟ್ಟಳು.ಅವಳಿಗೇನು ಕೊಟ್ಟಿರಲಿಲ್ಲ ನಾನು ಏನು ಕೊಡೋದು ಅಂತ ಯೋಚಿಸಿ ಒಂದು ಅತ್ಯಂತ ದುಬಾರಿಯಾದ ಟೆಡ್ಡಿ ಬೆರ್ ಕೊಟ್ಟೆ ಅವಳಿಗೆ ಅದರ ಹಾಲಿನ ಕೆನೆ ಬಣ್ಣ ಇಷ್ಟ ಆಯ್ತು.ತೀರಾ ಹೊರೋಡೋ ಮುಂಚೆ ಏರ್‌ಪೋರ್ಟ್ ನಲ್ಲಿ ನನ್ನ ಕೈಗೆ ಒಂದು ಕವರ್ ಕೊಡುತ್ತಾ ನಾನು "ಇಲ್ಲಿಂದ ಹೋಗಿ ಒಂದೆರೆಡು ವರ್ಷಕ್ಕೆ ಮದುವೆ ಆಗಬಹುದು..ಆದರೆ ನನಗೆ ಇಷ್ಟವಾದವನ ಜೊತೆ ಯಾವುದೇ ಬಂಧನವಿಲ್ಲದೇ, ಬಂಧನ ಹಾಕದೆ, ಇದ್ದ ಸಂತೋಷವಿದೆ ನನಗೆ. ನಿನ್ನ ಮದುವೆಗೆ ನನ್ನ ಕರೆಯೋದು ಮರೀಬೇಡ" ಅಂತ ಹೇಳಿ ಹೊರಟೆ ಹೋದಳು. ಕವರು ಬಿಚ್ಚಿ ನೋಡಿದರೆ ಮೊಲದ ಬಿಳುಪಿನ ಟವೆಲ್ ಅದಕ್ಕಂಟಿಸಿದ ಚೀಟಿ "ನನ್ನ ಮಿಸ್ ಮಾಡಿಕೊಂಡಾಗ ಇದು ನಿನ್ನ ಮೈ- ಮನಗಳನ್ನ ಸವರಲಿ" ಅಂತ!!

ಆಫೀಸಿಗೆ ಲೇಟಾಯ್ತು ಅನ್ನೋದು ನೆನಪಾಗಿ ಅವಳು ಕೊಟ್ಟಿದ್ದ ಟವೆಲ್ ತೆಗೆದುಕೊಂಡು ಸ್ನಾನದ ಮನೆ ಹೊಕ್ಕೆ.....

Tuesday, May 22, 2007

ಒಂದು ಮುತ್ತಿನ ಕಥೆ

ನಮ್ಮ ಮನೆ ಎದುರಿಗೆ ಒಬ್ಬ ನಿವೃತ್ತ ಸೇನೆಯ ಅಧಿಕಾರಿ ತಮ್ಮ ಕುಟುಂಬದ ಜೊತೆ ವಾಸವಾಗಿದ್ದರು. ಅವರಿಗೆ ಮೂರು ಜನ ಮಕ್ಕಳು ಮೊದಲನೆಯ ಅಣ್ಣ ವೈದ್ಯರು, ಮಧ್ಯದ ಹುಡುಗಿ ಟೀಚರ್, ಮೊರನೆಯ ಹುಡುಗ ಏನೂ ಮಾಡುತ್ತಿರಲಿಲ್ಲ ಏಕೆಂದರೆ ಅವನಿಗೆ ಬುದ್ಧಿಮಾoದ್ಯವಾಗಿತ್ತು.

ಆ ಮನೆಯವರು ತುಂಬಾ ಒಳ್ಳೇ ಜನ. ತಮ್ಮ ಕೈಯಲ್ಲಿ ಆದಷ್ಟು ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ನಾವು ಮನೆ ಕಟ್ಟಿಸುವಾಗಲೂ ಕಬ್ಬಿಣ, ಸೆಮೆಂಟು ಏನೂ ಕಳ್ಳತನ ಆಗದ ಹಾಗೆ ನೋಡಿಕೊಂಡಿದ್ದರು.ನಾವು ಆ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿದಾಗ ನಾನು 10ನೇ ತರಗತೇಲಿದ್ದೆ.

ಅವರ ಕೊನೇ ಹುಡುಗ ಕೈಗೆ ಸಿಕ್ಕಿದ ಚಪ್ಪಲಿ, ಟೀ ವಿಯ ರೆಮೋಟು ,ಚೇರು, ಪುಸ್ತಕ ಎಲ್ಲವನ್ನು ಹೊರಗೆ ಎಸೀತಿದ್ದ ಅವೆಲ್ಲ ನಮ್ಮ ಮನೆ ಮುಂದೆ ಬಂದು ಬೇಳುತ್ತಿದ್ದವು.ಆ ಮೇಂಟಲೀ ರಟಾರ್ಡೆಡ್ ಹುಡುಗ ಇವತ್ತು ಟೇಪ್ ರೆಕೊರ್ಡೆರ್ ಹೊರಗೆ ಎಸ್ದ ಕಣೆ ಅಂತ ನನ್ನ ತಂಗಿಗೆ ನಾನು ಹೇಳುವುದಕ್ಕೂ, ಅಪ್ಪ ಆಫೀಸಿನಿದ ಬರುವುದಕ್ಕೂ ಸರಿಯಾಯಿತು. "ಏನಮ್ಮ ಇದನ್ನೇನ ನಾನು ಕಲಿಸಿರೋದು ನಿಮಗೆ ಎಷ್ಟು ಓದಿದ್ರೆ ಏನು ಬಂತು? ಮನುಶ್ಯತ್ವ ಇಲ್ಲದಿರೊವಾಗ" ಅಂದರೂ ಅಪ್ಪ ನನಗೆ ಅರ್ಥವಾಗದೇ 'ನಾ ಏನು ಮಾಡ್ ದೇ ಈಗಾ..' ಅಂತ ರಾಗ ಎಳೆದೆ ."ಆ ಹುಡುಗನಿಗೆ ಹೆಸರಿಲ್ಲವ ಯಾವಾಗಲೂ ಮೇಂಟಲೀ ರಟಾರ್ಡೆಡ್ ಹಂಗೆ ಮಾಡ್ದ, ಹಿಂಗೆ ಮಾಡ್ದ ಅಂತಿರಲ್ಲ.... ಅವನ ಹೆಸರಿನಿಂದ ಕೆರೆಯೊಕ್ಕೆ ಏನು ಕಷ್ಟ ನಿಮಗೆ" ಅಂದರು. ನಾನು ಪುಟ್ಟಿ ಅಪ್ಪನ್ನ ಸಾರಿ ಕೇಳಿದ್ವಿ. ಅವನ ಹೆಸರು ರಾಮು ಅಂತ ಇಟ್ಕೋಳಿ.

ಈಗ ಮುಖ್ಯ ವಿಷಯಕ್ಕೆ ಬರೋಣ. ಆ ಮನೆಗೆ ಬಂದು ಎರಡು ವರ್ಷ ಆಗಿದ್ರೂ ಎದೂರುಗಡೆ ಮನೆಗೆ ನಾನು ಒಂದು ಸಲನು ಹೋಗಿರಲಿಲ್ಲ.ಅವರ ಮನೇಲಿ ಏನೇ ಫ್‌ಂಕ್ಷನ್ನು ಆದ್ರೂ ಅಪ್ಪ ಅಮ್ಮ ಪುಟ್ಟಿ ಹೋಗ್ತಿದ್ರು ನಾನು ಹೋಗ್ತಿರ್ಲಿಲ್ಲ. ನಾನು ಸೆಕೆಂಡ್ ಪಿ ಯು ಸಿ ನಲ್ಲಿದ್ದೆ ಅವತ್ತು ದೀಪಾವಳಿ ನಾನು ಸಚ್ಚು (ನನ್ನ ಕ್ಲಾಸ್ಸ ಮೇಟು) ಮತ್ತೆ ಪುಟ್ಟಿ ಮಾತಾಡುತ್ತಾ ನಿಂತಿದ್ವಿ.ಅಮ್ಮ ಬಂದು "ನೀನು ಇಷ್ಟು ದಿನ ಆದ್ರೂ ಅವರ ಮನೆಗೆ ಹೋಗಿಲ್ಲ ಜಂಬ ಅಂತ ತಿಳ್ಕೋತಾರೆ ಹೋಗಿ ಹೋಳಿಗೆ ತಿಂದು ಬಾ. ಸಚ್ಚು ನೀನು ಹೋಗಮ್ಮ, ಪುಟ್ಟಿ ನೀನು ಹೊಗೆ" ಅಂದ್ರೂ. ಸರಿ ಹೋಗಲೆ ಬೇಕಾಯ್ತು.

ಹೊದ್ವಿ ಡಾಕ್ಟರ್ ಅಣ್ಣ ಮಾತಾಡಿಸಿದರು.ಸಚ್ಚು, ಪುಟ್ಟಿ ಒಂದು ಸೊಫಾ ಮೇಲೆ ಕೊತ್ಕೊಂಡ್ರೂ. ನಾನು ಇನ್ನೊಂದರ ಒಂದು ಬದೀಲಿ ಕೊತ್ಕೊಂಡೆ ಆಂಟಿ ಹೋಳಿಗೆ ಕೊಟ್ರೂ.ಅಷ್ಟರಲ್ಲಿ ಆ ರಾಮು ನನ್ನ ಪಕ್ಕಾ ಖಾಲಿ ಇದ್ದ ಜಾಗದಲ್ಲಿ ಕೂತುಕೊಂಡ.ನನಗೆ ಎದೆಯಲ್ಲಿ ಅವಲ್ಕ್ಕಿ ಕುಟ್ಟಿದ ಹಾಗೆ ಆಗುತ್ತಿತ್ತು. ನಾನು ಹೋಳಿಗೆ ಮುರೀತಿದೀನಿ, ಅಷ್ಟರಲ್ಲಿ ನನ್ನ ಎರಡು ತೋಳು ಗಟ್ಟಿಯಾಗಿ ಹಿಡಿದುಕೊಂಡು ನನ್ನ ಎಡಗೆನ್ನೆಗೆ ಮುತ್ತಿಟ್ಟ ನಾನು ಕಿಟಾರ್.... ಅಂತ ಕಿರುಚಿಕೊಂಡು ತಟ್ಟೇನ ತ್ರೋ ಬಾಲ್ ತರ ದೂರಕ್ಕೆ ಎಸೆದು ಅಲ್ಲಿಂದ ಓಡಿದೆ.ಅಮ್ಮಂಗೆ ಕಿರುಚು ಕೇಳಿಸಿರಬೇಕು ಬಾಗಿಲ ಹತ್ತಿರ ಬಂದಿದ್ದರು. ಅಷ್ಟರಲ್ಲಿ ಪುಟ್ಟಿ, ಸಚ್ಚು, ಆಂಟಿಯು ಬಂದರೂ.ನನಗೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತಾಗುತ್ತಿರಲಿಲ್ಲ.ಆಕಸ್ಮಾತ್ ಅವನು ತುಟಿಗೆ ಏನಾದರೂ ಮುತ್ತು ಕೊಟ್ಟಿದ್ದರೆ ಏನು ಗತಿ ಅಂತ ಯೋಚಿಸುತ್ತಿದ್ದೆ.

ಅಮ್ಮ ತುಂಬಾ ಆರಾಮಾಗಿ 'ಹೋಗ್ಲಿ ಬಿಡು ಪಾಪ ಆ ಹುಡುಗನಿಗೆ ತಲೆ ಸರಿ ಇಲ್ಲ' ಅಂತ ನನಗೆ ಗೊತ್ತಿರೋದನ್ನೇ ಹೊಸ ವಿಷಯ ಅನ್ನೋಹಾಗೆ ಹೇಳಿದರು..ಅಮ್ಮ ಜೀವನದ ಮೊದಲನೆ ಕಿಸ್ಸು.. ಅಂತ ಏನೇನೋ ಗೊಣಗಿದೆ..ನೀನು ಚಿಕ್ಕವಳಾಗಿದ್ದಾಗ ಇಡೀ ರೋಡಿನವರು ನಿನ್ನ ಕೆನ್ನೆ ಹಿಂಡಿ, ಮುದ್ದು ಮಾಡಿ, ಮುತ್ತು ಕೊಟ್ಟು ಕಳಿಸೋರು ಇದನ್ನು ಹಾಗೆ ಅಂತ ತಿಳುಕೋ ಅಂದ್ರು.ಇದನ್ನು ಹಾಗೆ ಅಂತ ಹೇಗೆ ತಿಳ್ಕೋಳೋದು ಅಂತ ನನಗೆ ಅರ್ಥ ಆಗಲಿಲ್ಲ.ಆದ್ರೂ ಬೇರೆ ವಿಧಿ ಇಲ್ಲದೇ ಸುಮ್ಮನಾದೆ

Wednesday, May 16, 2007

ಒಂದು ಆಲೋಚನೆ!!!!

ನಾನು ಎಷ್ಟೋ ಸಲ ಯೋಚಿಸಿದ್ದೀನಿ ಈ ಜಗಳಗಳು ಅಸಮಾಧಾನ ಯಾಕೆ ಉಂಟಾಗುತ್ತೆ? ಏಷ್ಟು ಚೆನ್ನಾಗಿರೋರು ಆಷ್ಟೆ ಕೆಟ್ಟಾದಾಗಿ ಯಾಕೆ ಜಗಳ ಆಡ್ತಾರೆ? ಒಬ್ಬರಿಗೊಬ್ಬರು ಸ್ನೇಹದಿಂದ, ಪ್ರೀತಿಯಿಂದ ಇರೋಕೆ ಸಾದ್ಯನೇ ಇಲ್ಲವ?...

ಸಾಮನ್ಯವಾಗಿ ಇಬ್ಬರು ಜಗಳ ಆಡಿದ್ರೆ ಅವರಲ್ಲಿ ಒಬ್ಬರ ಸಣ್ಣತನದಿಂದ (ಅಥವಾ ಇಬ್ಬರದೂ ಇರಬಹುದು) ಅಥವಾ ತಪ್ಪು ತಿಳುವಳಿಕೆಯಿಂದ ಜಗಳ ಆಗಿರುತ್ತೆ.. ತಪ್ಪು ಗ್ರಹಿಕೆಯಿಂದ ಆಗಿರೋ ಜಗಳಗಳಿಗೆ ಸಮಾಧಾನ ಹುಡುಕಬಹುದು, ಆದರೆ ಈ ಸಣ್ಣತನಕ್ಕೆ ಏನು ಮಾಡೋದು?

ನಾನು ವಿಧ್ಯಾರ್ಥಿನಿಲಯದಲ್ಲಿ ಇರೋದ್ರಿಂದ ಸಣ್ಣತನಗಳ ಅನುಭವ ಚೆನ್ನಾಗಿ ಆಗಿದೆ. ಹುಡುಗೀರೆ ಹೀಗ? ಅಥವ ಹುಡುಗರಲ್ಲೂ ಹೀಗಾಗುತ್ತ? ಯಾಕೆ ಸಣ್ಣ ಪುಟ್ಟವಿಷಯಗಳನ್ನು ಹೀಗೆ ದೊಡ್ಡದು ಮಾಡಿ ಜಗಳ ಆಡ್ತಾರೆ? ಒಂದು ಕಡೆ ಮೂರು ಜನ ಇದ್ರು ಅಂತ ಇಟ್ಕೋಳ್ಳಿ.. ಅವರಲ್ಲಿ ಒಬ್ಬರು ಹೊರಗೆ ಹೋದ ತಕ್ಷಣ ಇನ್ನೊಬ್ಬರು ಅವರ ಬಗ್ಗೆ ಯಾಕೆ ಇಲ್ಲ ಸಲ್ಲದ ಮಾತಾಡಬೇಕು?ಯಾಕೆ ಒಬ್ಬರಿಗೊಬ್ಬರಿಗೆ ಪ್ರೀತಿ ಇರಲ್ಲ?ಮನೆಯವರು ಆಗಿದ್ರೆ ಚಿಕ್ಕ ಪುಟ್ಟ ತಪ್ಪುಗಳನ್ನ ಕ್ಷಮಿಸುತ್ತಿದ್ದರು ಅಲ್ಲವ? ನಮ್ಮ ಜೊತೆ ಇರುವವರು ಅವರ ಮನೆಯವರು ಅಲ್ಲ ಅಂದ ತಕ್ಷಣ ಯಾಕಿಷ್ಟು ಒರಟುತನ?

ಎಲ್ಲ ಹುಡುಗೀರು ಹೀಗೆ ಇರ್ತಾರೆ ಅಂತ ಅಲ್ಲ..ಆದ್ರೆ ಸ್ವಲ್ಪ ಜನ ಅಂತೂ ಹೀಗೆ ಇರ್ತಾರೆ..ನಿಜ ಹೇಳಬೇಕು ಅಂದ್ರೆ ಅವರು ಬೆಳೆದ ರೀತಿನೆ ಹಾಗಿರುತ್ತೆ, ಅವರ ಒರಟುತನ, ಅವರು ಸಂಸ್ಕೃತಿ ಇಲ್ಲದೆ ಬೆಳೆದ ರೀತಿ ಅಥವ ಚಿಕ್ಕವಯಸ್ಸಿನಿಂದ ಪ್ರೀತಿ ಸಿಗದೇ ಇರೋದು ಅಥವ ಇನ್ನು ಏನೇನೋ ಕಾರಣಗಳು ಅವರನ್ನ ಹಾಗೆ ಮಾಡಿರುತ್ತವೆ....

ಹೆಂಡತಿ ಗಂಡನನ್ನ, ಮಕ್ಕಳನ್ನ ಪ್ರೀತಿಸಬೇಕು. ಅತ್ತೆ, ಮಾವ, ನಾದೀನೀನ ದ್ವೇಶಿಸಬೇಕು ಅಂತ ಏನು ಇಲ್ಲವಲ್ಲ? ತಾಯಿ ಕೂಡ ಮಗನನ್ನ ಪ್ರೀತಿಸೋದು ಸೊಸೆಯನ್ನು ಗೋಳು ಹುಯ್ಕೋಳೊದು ಅಂತ ಏನು ಇಲ್ಲ?.. ಹೆಂಡತಿಗೆ ಗಂಡ ಮಾಡಿದ ತಪ್ಪು ಅಷ್ಟು ದೊಡ್ದದು ಅಂತ ಅನ್ನಿಸೊದಿಲ್ಲ; ಅನ್ನಿಸಿದರೂ ಅದನ್ನ ರಣರಂಪ ಮಾಡೋಲ್ಲ, ಅದೇ ತಪ್ಪು ಅತ್ತೆಯಿಂದ ಆದ್ರೆ ಯಾಕಿಷ್ಟು ಸಿಡಿ ಮಿಡಿ?

ನಾವು ಯಾವಾಗ ಬೆಳೆಯೋದು ನಾವು ಯಾವಾಗ ಎಲ್ಲರನ್ನ ಪ್ರೀತಿಸೋದನ್ನ ಕಲಿಯೋದು. ಈ ಸಣ್ಣತನಗಳಿಂದ ಹೊರಗೆ ಉಳಿಯೋದು ಹೇಗೆ?

ನಾವುಗಳೆ ಬದಲಾಗಬೇಕು, ಬದಲಾವಣೆ ತರಬೇಕು. ನಮಗೆ ಗೊತ್ತಿರೋರಿಂದ ಮತ್ತು ಹತ್ತಿರ ಇರೋರ 'ಮಾತು- ನಡುವಳಿಕೆಯಿಂದ' ನಮಗೆ ನೋವಾದರೆ ಎಲ್ಲರ ಮುಂದೆ ಹಿಂಗೆ ಮಾಡಿದರು, ಅವನು ಹಾಗಂದ, ಅವಳು ಹಾಗಂದಳು ಅಂತ ಕೊರಗೋದು ಅಥವ ಬೇರೆಯವರ ಹತ್ತಿರ ನಿಮಗೆ ನೋವು ಮಾಡಿರೋರ ಬಗ್ಗೆ, ಅವರ ವಯಕ್ತಿಕ ವಿಷಯಗಳ ಬಗ್ಗೆ ಗಾಸಿಪ್ ಮಾಡೊ ಬದಲು, ಅವರಿಗೇ ವಿಷಯ ಹೇಳಿ ಅರ್ಥ ಮಾಡಿಕೊಂಡ್ರೆ ಸರಿ..if not forget it ....
ನಿಮಗೆ ಹತ್ತಿರದೋರು ಮಾಡುತ್ತಿರುವುದು ತಪ್ಪು ಅನ್ನಿಸಿದರೆ ಅವರಿಗೇ ನೇರವಾಗಿ ಹೇಳಿ ಅವರನ್ನು ಪ್ರೀತಿಸ್ತೀರ ಆದ್ದರಿಂದ ಅವರ ಒಳ್ಳೇದನ್ನೆ ಬಯಸುತ್ತೀರ ಅನ್ನೋದು ಅವರಿಗೇ ಸ್ಪಷ್ಟವಾಗಲಿ.. ಬೇರೆ ಯಾರೋ ಮೂರನೆ ವ್ಯಕ್ತಿ ಬಗ್ಗೆ ಕುಹಕದ ಮಾತು ನಗು ಬೇಡವೇ ಬೇಡ ...ಅವರಿಗೆ ನೀವು ಹೇಳೋದು ಏನು ಇಲ್ಲ. ಅವರ ಹತ್ತಿರದವರು ಅವರಿಗೆ ಹೇಳ್ಕೋತಾರೆ.ಯಾರಾದರು ಇಬ್ಬರು ಜಗಳ ಆಡ್ತಿದ್ರೆ ದಯವಿಟ್ಟು ಅಲ್ಲಿಂದ ಹೊರಗೆ ಬಂದುಬಿಡಿ.ನೀವಿದ್ರೆ ನಿಮ್ಮ ಮುಂದೆ ಇನ್ನೊಬ್ಬರಿಗೆ ಸೋಲಬಾರದು ಅಂತ ಒಬ್ಬರಿಗೊಬ್ಬರು ಪ್ರತಿ ಮಾತು ಹೇಳ್ತಾನೇ ಇರ್ತಾರೆ..ನೀವು ಆ ರೂಮಿನಿಂದಹೋದ ತಕ್ಷಣ ಪಾತಾಳ ಶಾಂತ....

ಇಂದಿನ ಹುಡುಗ ಹುಡುಗೀರು ನಾವು- ನಮ್ಮ ಜೀವನ ಬದಲಾಗಬೇಕು, ನಮ್ಮದು ಸುಂದರವಾದ ಜೀವನವಾಗಬೇಕು..ಜಗಳ, ಅಸಮಧಾನ, ಇನ್ಯಾರದೋ ವಿಷಯಗಳಲ್ಲಿ ಮುಳುಗೋದು ಬೇಡ. ನಮ್ಮಗಳಿಗೆ ಬೇಕಾಗಿರೋದು ಬರೀ ಬೇಸಿಕ್ ನೀಡ್ಸ್ ಅಷ್ಟೇನ? ಬರೀ ಅಷ್ಟಕ್ಕೆ ಇಷ್ಟೆಲ್ಲ ಒದ್ದಾಡುತ್ತೀವ? ಎನಾದರು ಕಂಡು ಹಿಡಿಯೋಣ, ಮಾಡೋ ಕೆಲಸಗಳನ್ನೇ ಹೊಸ ಹೊಸ ರೀತಿಯಲ್ಲಿ ಸಮರ್ಥವಾಗಿ ಮಾಡೋಣ, ಚಿಕ್ಕ ಪುಟ್ಟ ಕ್ಷಣಗಳಲ್ಲಿ ಸಂತೋಷ ಹುಡುಕೋಣ.ದೊಡ್ಡ ದೊಡ್ಡ ಅಘಾತ ಅಸಂತೋಷವನ್ನ ಮರೆಯೋಣ..
ಭೈರಪ್ಪನವರ ವೈಚಾರಿಕ ದೃಷ್ಟಿ ಇರಲಿ,ರವಿ ಮಾಮನ ಥರ frankಆಗೋಣ , ತೇಜಸ್ವಿಯವರ ಹುಡುಕಾಟದಲ್ಲಿ ನಮ್ಮದೂ ಒಂದು ಹೆಜ್ಜೆ ಇರಲಿ, ಮಾಳವಿಕ ಅಕ್ಕನಿಂದ ಧೈರ್ಯ ಕಲಿಯೋಣ, ನಮ್ಮಲ್ಲಿ ಕೆ.ಎಸ್.ನ ಅವರ ಪ್ರೀತಿ ಇರಲಿ ದ್ರಾವಿಡ್ steadyness,ಸೆಹವಾಗ್ ಭೋರ್ಗರೆತದ ಜೊತೆಗೆ ಸುಬ್ಬಲಕ್ಷ್ಮಿ ಲತಾ ಚಿತ್ರ ಜಾನಕಿಯವರ ಸಂಗೀತದ ಮಾಧುರ್ಯವಿರಲಿ ನಮ್ಮ ನಿಮ್ಮಗಳ ಮದ್ಯೆ...

ಪ್ರಶ್ನೆ!!???

ಕಪ್ಪೆ ಸದ್ದು ಕೇಳಿ ಸಣ್ಣಗೆ ರೋಮಾಂಚನಗೊಳ್ಳುತ್ತಿದ್ದಳು ಅವಳು..ಮಳೆ ಬರುತ್ತೆ ಅಂತು ಮನಸ್ಸು..

ಅಜ್ಜಯ್ಯ ತನ್ನ ಪುಟ್ಟ ಮೊಮ್ಮಕ್ಕಳಿಗೆ ನಾಳೆ ಖಂಡಿತ ನವಿಲು ತೋರುಸ್ತೀನಿ ಅಂತ ಆಸೆ ತೋರಿಸುತ್ತಿರೋದು ..God promise ಮಾಡು ತಾತಾ mother promiseಮಾಡು ತಾತಾ ಅಂತ ಅವು ಗೋಳು ಹುಯ್ಕೋತಿರೋದು ಕೆಳುಸ್ತಿತ್ತು.

ಮನೆಯ ದೊಡ್ಡ ಮೊಮ್ಮಗಳಲ್ಲವೇ ಅವಳು...ತಾತ ಅವಳಿಗೂ ಮೊದಮೊದಲು ನವಿಲು ತೋರಿಸಿದ್ದ ಅವಳ ನಾಲ್ಕನೇ ವರ್ಷದಲ್ಲಿ...ಅವಳಿಗೆ ಒಂದು ಚಂದದ ಹೆಸರು ಇತ್ತು..ಅರುಂಧತಿ ಅಂತ 'ಅರೂ' ಅಂತ ಕರೀತಿದ್ರು ಪುಟ್ಟದಾಗಿ ಪ್ರೀತಿಯಿಂದ.... ಆದರೆ ತನ್ನ ಇಪ್ಪತ್ತನೆ ವಯಸ್ಸಿನಲ್ಲಿ ಸಿಕ್ಕ ಚುಂಬನ ಕೂಡ ನವಿಲಿನ ಮುಂದೇನೇ ಆಗುತ್ತೆ ಅಂತ ಖಂಡಿತ ಉಹೆ ಇರಲಿಲ್ಲ ಅವಳಿಗೆ.ಆ ಹುಡುಗನ ಎತ್ತರ ನೆನಪಿಗೆ ಬಂದು ಮುತ್ತು ಕೊಡೋಕ್ಕೆ ಅವನು ಬಗ್ಗಬೇಕಾಯ್ತಾಲ್ಲ... ಅನ್ನಿಸಿ ನಕ್ಕಳು.

ಬೆಳಗ್ಗೆ ತೋಟದ ಬಾವಿ ನೀರಲ್ಲಿ ಈಜಾಡಬೇಕು ಅಂತ ಬೇಗನೆ ಎದ್ದು, ತಾತನ ಜೊತೆ ಅಷ್ಟು ದೂರ ಬಾವಿ ಕಡೆ ಹೋದ್ರೆ.."ನಿನ್ನ ಚಿಕ್ಕಪ್ಪ ಇನ್ನೂ ವಂದಿಲ್ಲೇ ಅವನು ಬಂದ್ರೆ ಬೇಕಾದ್ರೆ ಈಜಡಿಕೊ" ಅಂತ ಕನ್ನಡ ತಮಿಳು mix ಮಾಡಿ ಹೇಳಿದ ತಾತನ ಮೇಲೆ ಸಿಟ್ಟು ಬಂದಿತ್ತು. "ಚಿಕ್ಕಪ್ಪ ವರಲ್ಲೇ ಅಂತ ಗೊತ್ತಾಗಿ ಅಲ್ಲೇ ಮಣ್ಣು ನೆಲದ ಮೇಲೆ ಅಡ್ಡಾದಳು ..ಜೂರು ನಿದ್ದೆ..

ಕರಿಯ ಬಂದು ಸಾಮಿ ಎದ್ದೇಳಿ ಮನೆ ತಾಕ್ಕೆ ಹೋಗ್‌ಬೇಕಂತೆ ದೊಡ್ಡ ಸಾಮಿ ಹೇಳ್ಟು ಅಂದಾಗ ಎಚ್ಚರ ಆಯ್ತು ಈ ಕರಿಯಂಗೆ ಹೆಣ್ಣು, ಗಂಡು, ದೊಡ್ಡವರು, ಚಿಕ್ಕವರು, ಅನ್ನೋ ಭೇದನೆ ಇಲ್ಲ ಅಪ್ಪಾಂಗು ಸಾಮಿ, ತಾತಂಗುಸಾಮಿ, ಅಜ್ಜಿಗೂ ಸಾಮಿ, ಮೊಮ್ಮಗಳಿಗೂ ಸಾಮಿ, ಮನೆ ಪುಟ್ಟ ಕಂದ - ರಾಘವಂಗು ಸಾಮಿ, ಅಂತನಲ್ಲ ಅನ್ನಿಸಿ.. ನಿದ್ದೆ ಕಣ್ಣಲ್ಲೇ ಅವನನ್ನೇ ನೋಡುತ್ತಿದ್ದಳು..ಅವನಿಗೆ ಗೊಂದಲವಾಗಿ 'ದೊಡ್ಡ ಸಾಮಿ ಕರಿತತೆ..' ಅಂತ ರಾಗ ಎಳೆದ...

ಈ ಕರಿಯ ಅಜ್ಜಯ್ಯನಿಗಿಂತ ಹತ್ತು ವರ್ಷಕ್ಕೆ ಚಿಕ್ಕವನಿರಬಹುದು ಮೊದಲನೆ ಸತಿ ಅವನನ್ನು ನೋಡಿದಾಗ ಸಂಜೆ ತಂಪಲ್ಲಿ ಅವನು ಕಾಯಿಸುಲೀತಿದ್ದ... ಆಗ ನಾನು ಮೂರನೇ ಕ್ಲಾಸ್‌ನಲ್ಲಿದ್ದನಾ ಅಂತ ಜ್ಞಾಪಿಸಿಕೊಂಡಳು ಅರೂ.. ಅಜ್ಜಿ ಸಕ್ಕರೆ ನೀರು ಕಾಸಿ, ಹಳೆ ಕಾಫಿಗೆ ಆ ನೀರನ್ನು ಸೇರಿಸಿ ಒಂದು ದೊಡ್ಡ ಲೋಟ ಕಾಫಿ ಮಾಡಿದಳು. "ಇದನ್ನ ಕರಿಯನ ಲೋಟಕ್ಕೆ ಮೇಲಿಂದ ಸುರಿದು ಬಾ, ಅವನ ಲೋಟಕ್ಕೆ ಈ ಲೋಟ ತಾಗುಲಿಸ ಬೇಡ" ಅಂತ ಭೋಧಿಸಿ ಕಳುಹಿಸಿದಳು. ಆ ಛತ್ರದಂತಹ ಮನೆಯ ಅಡುಗೆ ಮನೆ, ಆರಂಗು, ಹಾಲೂ , ವಾರಂಡ ದಾಟಿ ಜಗುಲಿಗೆ ಬರೋಹ್ತೊತ್ತಿಗೆ ಅಜ್ಜಿಯ ಮಾತು ಮರೆತಿತ್ತು ಮೂರನೇ ಕ್ಲಾಸಿನ ಪುಟ್ಟ ಅರುಗೆ. ಕಯ್ಯಲ್ಲಿ ಕಾಫಿ ಇದ್ದಿದ್ದರಿಂದ ಅದನ್ನ ಕರಿಯನಿಗೆ ಹಾಕ್‍ಬೇಕು ಅಂತ ಗೊತ್ತಾಯ್ತು 'ಸಾಮಿ ಇಲ್ಲ್ಹಾಕಿ' ಅಂತ ಲೋಟ ಇಟ್ಟು ಬೆವರು ಒರೆಸಿಕೊಳ್ಳುತ್ತಾ ದೂರ ಹೋದ ಕರಿಯ.ಅರೂ ಕಾಫಿ ಕೆಳಗೆ ಚಲ್ಲದಂತೆ ನೀಟಾಗಿ ಹಾಕಬೇಕು ಅಂತ ಆ ಲೋಟಕ್ಕೆ ಈ ಲೋಟ ತಗುಲಿಸಿಯೇ ಹಾಕಿದ್ಲು..ಅಲ್ಲೇ ಇದ್ದ ಅವಳ ಅಪ್ಪ "ಹಂಗೆ ಲೋಟ ತಗುಲಿಸಿ ಹಾಕಬಾರದು ಕಂದ ಅಜ್ಜಿಗೆ ಬೇಜಾರಾಗುತ್ತೆ ನೋಡಿದ್ರೆ ನಿನ್ನ ಗ್ರಹಚಾರ ಬಿಡಿಸೋಳು" ಅಂದ್ರು.

ಮಳೆ ಬಂದ್ರೆ ಅಜ್ಜಿ ನೆನೆಯಕ್ಕೆ ಬಿಡ್ತಾಳಾ.. ಅಂತ ಕೇಳಿಕೊಂಡಳು ..ಆದ್ರೆ ನಾನು ನೆಂದರೆ ಈ ಚಿಲ್ತಿ ಪಿಲ್‌ಟಿಗಳು ನೆನೆಯಕ್ಕೆ ಶುರು ಮಾಡುತ್ತವೆ.. ಚಿಕ್ಕಮ್ಮಂಗೆ ಬೇಜಾರಾಗುತ್ತೆ ಅನ್ನಿಸಿತು. ಹಾಳಾಗ್ ಹೋಗ್ಲಿ ನೆನೀದಿದ್ರೂ ಪರ್ವಾಗಿಲ್ಲ ಈ ಪುಟ್ಟ ಮಕ್ಕಳು ಗಲಾಟೆ ಮಾಡದಿದ್ರೆ ಮಳೆ ಸದ್ಡನ್ನಾದರೂ ಕೇಳಬೇಕು,ಜಗುಲಿಮೇಲೆ ಕೂತ್ಕೊಂಡು ಮಳೆ ನೋಡಬೇಕು ಅಂತ ಜಗುಲಿ ಕಡೆಗೆ ಹೋದ್ಲು.
ಮಲೆನಾಡಿನಲ್ಲಿ ಹುಟ್ಟಿ ಬೆಳೆದು ರಜಾದಲ್ಲಿ ಅಜ್ಜನ ತೋಟದ ಮನೇಲಿ ಸಮಯ ಕಳೆದ ಅವಳಿಗೆ ಮಳೆ everlasting ಅಚ್ಚರಿ ..ಬೆಳಗು, ಕಾಡು, ಕಡಲು, ಸಂಜೆ, ಉರಿಬಿಸಿಲು, ಬೆಳದಿಂಗಳು, ಎಲ್ಲಾನೂ ಒಂದು exitement..

ಬೇಕಂತಲೇ ಕಾಲೇಜಿಗೆ ಛತ್ರಿ ತೊಗೊಂಡು ಹೋಗದೇ ವಾಪಾಸಾಗುವಾಗ ಬರೋ ಮಳೆಯಲ್ಲಿ ಪೂರ್ತಿ ನೆನೆದು, ಕುಣಿದು..ಮನೆಗೆ ಬಂದಾಗ 'ಛೇ! ಎಂಥ ಮಳೆ! ಪೂರ್ತಿ ಬಟ್ಟೆ ನೆಂದು ಹೋಗಿದೆ..ಕಾಲೇಜು ಬಿಟ್ಟಾಗಲೇ ಬರಬೇಕಾ ಈ ಮಳೆ ಏನು ಖರ್‍ಮಾನೋ' ಅಂತ ದಪ್ಪ ಟೆವಲಿನಲ್ಲಿ ತಲೆ ಒರೆಸುತ್ತೀರೋ ಅಮ್ಮನ ಮುಂದೆ ನಾಟಕ ಆಡಿದ್ದು, ರಸ್ತೆಯಲ್ಲಿ ಮಳೆ ನೀರು ತುಂಬಿದ ಹೋಂಡಗಳ ಪಕ್ಕವೇ ನೆಡೆದು ಹೋಗುತ್ತಿರುವಾಗ ಲಾರಿಯೋ ಬಸ್ಸೊ ಬರ್‍ರ್‍ರ್ ಅಂತ ಅದರ ಮೇಲೆ ಹೋಗಿ ಇವಳ ಮೇಲೆ ನೀರಿನ ಅಭಿಷೇಕ ಆದಾಗ ಮನಸ್ಸಿನಲ್ಲಿ ಕುಣಿಯೊಅಷ್ಟು ಖುಷಿ ಆಗ್ತಿದ್ದ್ರೋ 'ಥತ್ ಈ ಲಾರಿ ಬಸ್ಸಿನವರಿಗೆ ಸರಿಯಾಗಿ drive ಮಾಡೋಕ್ಕೋ ಬರೋಲ್ಲ' ಅಂತ ಸುಮ್ಮನೇ ಬೈದಿದ್ದು ನೆನಪಾಯಿತು.

ಯಾರೋ ಕಪ್ಪಗಿನ ಹುಡುಗ ಬರುತ್ತಿರೋದು ಕಾಣಿಸಿತು ಜಗುಲಿ ಮೇಲೆ ಕೂತಿದ್ದವಳಿಗೆ..ನನ್ನ ಹುಡುಗನೂ ಹೇಗೆ ಇದಾನಲ್ಲ ಅನ್ನಿಸುತ್ತಿತ್ತು..ಆ ಹುಡುಗ ಬಂದದ್ದೆ "ಅಪ್ಪ ಎಲ್ಲೈತೆ ಗೊತ್ತಾ ಸಾಮಿ" ಅಂದ..ನೀ ಯಾರು ಅಂದಿದ್ದಕ್ಕೆ.."ಏ... ಕರಿಯನ ಕೊನೇ ಮಗ ಕನ ಸಾಮಿ" ಅಂದ ತೆಲೆ ಕೆರೆದುಕೊಳ್ಳುತ್ತಾ.."ತಾತನ ಜೊತೆ ತೋಟದ ಕಡೆಗೆ ಹೋದ ಎಂದಳು".

ಈ ಹುಡುಗನ ತರ ಇರೋದು ಮಾತ್ರವಲ್ಲ ನನ್ನ ಹುಡುಗನ ಜಾತಿ ಕೂಡ ಇವರದೇ ಜಾತಿ ಎಂದು ನೆನಪಿಗೆ ಬಂದಾಗ ಸಣ್ಣಗೆ ಬೆವರಿದಳು.....
'ಅಜ್ಜಿ ನೋಡಿದ್ರೆ ಗ್ರಹಚಾರ ಬಿಡಿಸೋಳು' ಅಂದಿದ್ದ ಅಪ್ಪ ಈ ಜಾತಿ ಹುಡುಗನ್ನ ಮದುವೆ ಆಗ್ತೀನಿ ಆಂದ್ರೆ ಏನುಹೇಳಬಹುದು ಅಂತ ಯೋಚಿಸುತ್ತಾ ಕುಳಿತ ಅವಳಿಗೆ ಮಳೆ ಸದ್ದು ಕೇಳುತ್ತಿರಲಿಲ್ಲ.....

ಒಂದು ಸತ್ಯ ಘಟನೆ

ಮೊನ್ನೆ ಶ್ರೀನಿಧಿಯವರು ಬರೆದಿದ್ದ ಪಲ್ಲಕ್ಕಿ movie review ನೋಡಿದಾಗ ಜ್ಞಾಪಾಕಕ್ಕೆ ಬಂದ ಘಟನೆ. ನಾನು ಶಿಲ್ಪ 'ಜೊತೇಜೊತೆಯಲಿ..' movie ನೊಡ್‌ಕೆ ಹೋಗಣ ಅಂತ ready ಆಗಿ ಹೊರಟಿದ್ವಿ. ಆಗ Indu(ಅವಳು ಉತ್ತರ ಭಾರತೀಯ ಹುಡುಗಿ) ಬಂದು where r u going ಅಂದ್ಲು ಕನ್ನಡ movie ಅಂದೆ . I too will come, I m getting bored ಅಂದ್ಲು. ಸರಿ ಬಾ ಅಂತ ಕರ್ಕೊಂಡ್ ಹೊದ್ವಿ ಇನ್ನೂ ಇವ್ಲಿಗೆ ಟ್ರಾನ್ಸ್ಲಟೆ ಮಾಡಿ ಬೇರೆ ಹೇಳ್‌ಬೆಕಲ್ಲ.. ಅಂತ ನನ್ನ ಯೋಚನೆ ಆಗಿತ್ತು.ಸರಿ movie ಮಧ್ಯದಲ್ಲಿ ಪ್ರೇಂ ಅಳುತ್ತಾ ಇದ್ದಾನೆ.... ಅವ್ನು ಅಳುತ್ತಾ ಇದ್ದಾನ ಅಥ್ವ ನಗ್ತಾ ಇದ್ದಾನ ಗೊತ್ತಾಗದೆ ನಾವು ಕಕ್ಕಾಬಿಕ್ಕಿ.ಅಷ್ಟ್ರಲ್ಲಿ ಇಂದು ನಗಕ್ಕೆ ಶುರು ಮಾಡಿದ್ಲು ಯಾಕೆ ನಗ್ತಿದ್ಯಾ ಅಂತ ಕೇಳಿದ್ದಕ್ಕೆ do u think I cant understand Kannad??I know he is laughing at some joke ಅಂದ್ಲು.
ನಾನು ಶಿಲ್ಪ ಮುಖ ಮುಖ ನೋಡ್ಕೊಂಡು ಸುಮ್ಮನಾದ್ವಿ

Tuesday, May 15, 2007

ಮನಸು ಹಗುರ ಹಗುರ..ನೆನಪು ಬಚ್ಚಲಲ್ಲಿ ಭದ್ರ .......

ಸ್ನಾನ ಅನ್ನೋದು ಎಷ್ಟು ಚೆನ್ನಾದ ಕೆಲಸ ಅಂತ ಅನ್ನಿಸುತ್ತೆ. ಕೆಲಸ ಅಂದ ತಕ್ಷಣ ಅದು ಎಷ್ಟೇ ಚೆನ್ನಾಗಿರಲಿ ಅದಕ್ಕೊಂದು ಕಷ್ಟದ ಲೇಪ ಹಚ್ಚಿಬಿಡ್ತೀವಿ . ಆದರೆ ಸ್ನಾನ ಮಾತ್ರ ಇಷ್ಟದ ಕೆಲಸಾನೆ.

ಸ್ವಚ್ಹ, ಶುಭ್ರವಾಗಿರೋದಕ್ಕೆ ಸ್ನಾನ ಮಾಡ್ತೀವಿ ಅಂದ್ರೂ ಅದೊಂದು ನೆಪ ಮಾತ್ರ.
ಗಡಿಬಿಡಿಲಿ ಸ್ನಾನ ಮಾಡೋದು ಬಿಟ್ಟು ಬಿಡಿ..... ಅರಾಮಾಗಿ ನೀವು ಸ್ನಾನ ಮಾಡಿರೋದು ಜ್ಞಾಪಿಸಿಕೊಳ್ಳಿ.. ಅದೊಂದು ಅದ್ಭುತ feeling...

ಟವೆಲ್ಲು ಬಟ್ಟೆ ತೊಗೊಂಡು ಸ್ನಾನದ ಮನೆಯನ್ನ ಹೊಕ್ಕು, ಒಂದು ಚೊಂಬು ಬಿಸಿ ನೀರು ಮೈಮೇಲೆ ಬಿದ್ದ ತಕ್ಷಣ ನೆನಪು-ರಿವರ್ಸ್ ಗೇರ್ ನಲ್ಲಿ! - ಅಮ್ಮನ ಹಾಡು, ತಂಗಿ ಜೊತೆ ಕೀಟಲೆ ,ಅಪ್ಪನ ತಮಾಷೆ-ಕಾಳಜಿಯ ಮಾತು, ತಾತನ ನಗು- ಪ್ರೀತಿ, ಅಜ್ಜಿಯ ಧಾವಂತಗಳು, ಚಿಕ್ಕಪ್ಪನ ಧೈರ್ಯ, ಪಕ್ಕದ ಮನೆ ಕುಳ್ಳೀ ಜಲಜನ ಜೊತೆ ಜಗಳ, ಹೀಗೆ ನೂರಾರು ನೆನಪುಗಳು ಸ್ನಾನದ ಕೋಣೆಯ ಪ್ರತಿ ನಲ್ಲಿಗು, ಷವರ್ ಗೂ, ಅಲ್ಲಿನ ಸೋಪ್ ಸ್ಟಾಂಡ್ ಗೂ, ಅಪ್ಪನ ಸಿಂತಾಲ್ ಸೋಪ್ ಗೂ - ಹೀಗೆ ನೂರು-ನೂರು ನೆನಪು ಹಂಚಬಹುದು.

ಇಲ್ಲಾ..ನಿಮ್ಮ ಮನಸ್ಸೆಂಬ ಹಕ್ಕಿಗೆ ನೂರಾರು ಕನಸು. ಇವತ್ತು ನಾನು ಮಾಡಬೇಕಾಗಿರೊ ಕೆಲಸಾನ ಹೇಗೆ ಮಾಡಬೇಕು, ಏನೇನು ವ್ಯವಸ್ಥೆ ಮಾಡಬೇಕು, ಮುಂದೆ ದುಡ್ಡಿದಾಗ ಅಂಥಾ ಮನೆ ಕಟ್ಟಿಸಬೇಕು, ಮತ್ತು ಎಲ್ಲೆಲ್ಲಿಗೆ ಪ್ರವಾಸ ಹೋಗಬೇಕು ಇನ್ನು ಏನೇನೋ ಕನಸುಗಳು....

ನಾನು ಸಾಮಾನ್ಯ ಸಂಜೆ ಸ್ನಾನ ಮಾಡ್ತೀನಿ.ಕ್ಲಾಸ್ ಅದಮೇಲೆ, ಅರಾಮಾಗಿ ಆರರಿಂದ ಏಳು. "ಈ ಹುಡುಗಿಗೆ ಏನಾಗಿದೆ ಸ್ನಾನದ ಮನೆಯಲ್ಲೆ ಎಷ್ಟೊಂದು ಹೊತ್ತು ಕಳೀತಾಳಲ್ಲ ಎಷ್ಟೊಂದು ಟೈಮ್ ವೇಸ್ಟ್".. ಅಂತ ಅಪ್ಪಂಗೆ ಚಿಂತೆ ಆದ್ರೆ "ಸೋಲಾರಿನ ಬಿಸಿ ನೀರೆಲ್ಲ ಇವಳೇ ಸುರುಕೊಂಡಾಗಿರುತ್ತೆ. ಛೇ.. ಬೆಳಗ್ಗೆ ಎದ್ದು ಗೀಸರ್ ಆನ್ ಮಡಬೇಕು.. ಎಷ್ಟೊಂದು ಕರೆಂಟ್ ವೇಸ್ಟ್" ಅನ್ನೋ ಚಿಂತೆ ಅಮ್ಮಂಗೆ.

ಗೀಸರ್, ಸೋಲಾರ್, ಬಾಯ್ಲರ್ಗಿಂತ ಹಂಡೇಲಿ ಕಾಸಿದ ನೀರು ಎಷ್ಟು ಚೆಂದ. ಒಂಥರ ಹಿತ.. ಸೌದೆ ಒಲೆ ಹತ್ತಿಸೋದು, ಅದರ ಹೊಗೆ ಈಗಿನ ಕಾಲದ ನಮಗೆ ರೇಜಿಗೆ ಅನ್ನಿಸಬಹುದು ಆದ್ರು ಹಂಡೆ ನೀರು ಅಂದ್ರೆ ಏನೋ ಒಂದು ಅಟ್ಯಾಚ್ ಮೆಂಟ್.. ರಜದಲ್ಲಿ ಅಜ್ಜನ ಮನೆಗೆ ಹೋದಾಗ ಎಷ್ಟು ಆರಾಮ..ಹಂಡೆ- ಬಿಸಿ ನೀರು -ಕರೆಗಟ್ಟಿದ ಬಚ್ಚಲು- ಮೂಲೇಲಿ ಮಣೆ- ತಾಮ್ರದ ಚೊಂಬು- ಗೂಡಲ್ಲಿ ಅರಿಶಿನ, ಪಕ್ಕದಲ್ಲಿ ಸೀಗೇಕಾಯಿ ಮೆಲೆ ಚಿಕ್ಕಪ್ಪನ ಮೈಸೂರು ಸ್ಯಾಂಡಲ್ ಸೋಪು ಘಮ್ ಅಂತ...

ಯಾರು ಸ್ನಾನ ಮಾಡ್ಕೊಳ್ಳೊಕೆ ಮಾತ್ರ ಬೇಜಾರು ಪಟ್ಟುಕೋಬಾರದು.ಯಾವಾಗಲಾದರೂ ಮಾಡಿ ದಿನಕ್ಕೊಂದು ಸಲ ಅರಾಮಾಗಿ. ಸ್ನಾನದಮನೆಯಿಂದ ಬಂದ ತಕ್ಷಣ-
ನಿಮ್ಮ ಮನಸು ಹಗುರ ಹಗುರ..ನೆನಪು ಬಚ್ಚಲಲ್ಲಿ ಭದ್ರ- ಕನಸು ಬಿಸಿನೀರಿನ ಆವಿ, ಹೊಗೆ ರೂಪದಲ್ಲಿ ಆಕಾಶದ ಹತ್ತಿರ...

Monday, May 14, 2007

ಬರೆಯೊಕ್ಕೆ ಶುರು ಮಾಡಿದ್ದರ ಬಗ್ಗೆ

ನನ್ನ ಬಗ್ಗೆ ಹೇಳಿಕೊಂಡು ನಿಮ್ಮ ತೆಲೆ ತಿನ್ನೋಕೆ ಇಷ್ಟ ಇಲ್ಲ..
ಆದ್ದರಿಂದ ಬರೆಯೊಕ್ಕೆ ಶುರು ಮಾಡಿದ್ದರ ಬಗ್ಗೆ ಹೇಳ್ತೀನಿ... ಹೋದ ವರ್ಷದ ಒಂದು ಛಳಿಗಾಲದ ಸಂಜೆ
ಒಂದು ಘಮ್ಮನೆಯ, ಬಿಸಿನೀರಿನ, ಅದ್ಭುತ ಸ್ನಾನ ಮಾಡ್ಕೊಂಡು ರೂಮಿಗ್ ಬಂದೆ.. ಏನಾದ್ರೂ ಬರೆಯೊಕ್ಕೆ ಕೈ ಚಡಪಡಿಸುತ್ತಿತ್ತು. ದೀಪ ಹಚ್ಚಿ, ಪೂಜೆ ಮಾಡಿದ್ ನೆಪ ಮಾಡಿ, ವಿಷ್ಣುಸಹಸ್ರನಾಮನ ಸಹಸ್ರಾರು ಮೈಲಿ ವೇಗದಲ್ಲಿ ಬಡಬಡಿಸಿ, ಯಾವುದೋ record ಬರಿತಿದ್ದ friend ಪೆನ್ ಕಿತ್ತುಕೊಂಡು ಬರೆಯೋಕ್ ಶುರು ಮಾಡಿದೆ. ಸ್ನಾನದ ಬಗ್ಗೆನೇ ನನ್ನ ಮೊದಲ ಬರಹ. ಈಗ ಏಳು ಎಂಟು ಬರಹಗಳು 3 ಕಥೆ ನನ್ನಲ್ಲಿವೆ.ವಾರಕ್ಕೊಂದು ಪೋಸ್ಟ್ ಮಾಡೋ ಆಲೋಚನೆ ಇದೆ ಲಹರಿಯಲ್ಲಿದ್ದರೆ ಬರೀತೀನಿ..ನಿಮ್ಮ ಅನಿಸಿಕೆಗಳನ್ನು ತಿಳಿಸುವಿರಲ್ಲವೇ??