Wednesday, December 12, 2007

ನೀಲಿ ನಕ್ಷತ್ರದಿಂದ ಬಂದ ಪತ್ರ

ಮಧ್ಯರಾತ್ರಿಯ ಕಪ್ಪಿನೊಳಗಣ ಬೆಳಕೇ...

ಅಮ್ಮ ಅಡುಗೆ ಮನೆಯಲ್ಲಿ ಏನೋ ದಡ ಬಡ ಮಾಡುತ್ತಿದ್ದಾಳೆ.ಚಿಕ್ಕಪ್ಪ ಅಪ್ಪ ಸೇರಿ ಟಿ ವಿ, ಸೋಫ, ಟೆಬಲ್ಲು- ಕುರ್ಚಿ, ಮಂಚ ಎಲ್ಲವನ್ನೂ ತಂದು ಜೋಡಿಸಿಟ್ಟಿದ್ದಾರೆ..ನೀನು ಅವತ್ತು ಬಂದಾಗ ಖಾಲಿ ಇದ್ದ ಮನೆ ಈಗ ತುಂಬಿದೆ. ಹುಚ್ಚು ಅಪ್ಪನಿಗೆ, ಮನೆ ತುಂಬಬಹುದು........ಮನಸ್ಸು...????

ಈ ಮನೆ ಕೊಂಡು 'ಶಿಫ್ಟ್ ಮಾಡ್ತೀನಿ ನಾನು' ಅಂದಾಗ 'ನಿಂಗೊಬ್ನಿಗೇ ಕಷ್ಟ ಆಗುತ್ತೆ, ನಾ ಬರ್ತೀನಿ.' ಅಂದು ಮೊದಮೊದಲು ಮನೆಗೆ ಬಂದವಳು ನೀನು. ಖಾಲಿ ಮನೆ ಏನು ಕೊಂಡುಬಂದಿರಲಿಲ್ಲ.. ಬರೀ ನನ್ನ ಬಟ್ಟೆ, ಚಪ್ಪಲಿಗಳು, ಶೂಗಳು, ಹಾಗೂ ಲ್ಯಾಪ್ ಟಾಪ್. ಮನೆಗೆ ಬಂದವಳೇ ಒಂದಿಷ್ಟು ವಸ್ತುಗಳನ್ನ ಪಟ್ಟಿ ಮಾಡಿ 'ತೊಗೊಂಡು ಬಾ' ಎಂದು ನನ್ನ ಕೈಗೆ ಕೊಟ್ಟು, ನಾನು ಬರುವುದೊರೊಳಗೆ ಪಕ್ಕದ ಮನೆಯವರ ಸ್ನೇಹ ಮಾಡಿ, ಪೊರಕೆ ತಂದು, ಮನೆ ಗುಡಿಸಿ ನನ್ನ ಹಳೇ ಟೀ ಷರ್ಟಿನಲ್ಲಿ ನೆಲ ಒರೆಸುತ್ತಿದ್ದೆ! ಆಮೇಲೆ ನಾನು ನೀನು ಸೇರಿ ಸಾದ್ಯವಾದಷ್ಟು ಮನೆ ಸ್ವಚ್ಚ ಮಾಡಿ, ಒಟ್ಟಿಗೆ ಸ್ನಾನ-ಅಡುಗೆ-ಊಟ ಮಾಡಿ ಗಡಿಯಾರ ನೋಡಿದರೆ, ಗಡಿಯಾರದ ಮುಳ್ಳುಗಳು ಒಂಭತ್ತು ಘಂಟೆ ಎನ್ನುತ್ತಿದ್ದವು.

ಟೆರೇಸಿನ ಮೇಲೆ ಹೋದರೆ, ನಕ್ಷತ್ರಗಳು ಕೈಗೆ ಸಿಗುವಷ್ಟು ಹತ್ತಿರ! ಮಲಗೋಣವೆಂದೆ ನೀನು.. ಹಾಸಿಗೆ ಇಲ್ಲ.... ದಿಂಬಿಲ್ಲ.... ಮರೆತೇ ಹೋಗಿತ್ತು ನನಗೆ. ನಿನ್ನ ಕಣ್ಣು ನೋಡಿದರೆ ಅದರಲ್ಲಿ ತುಂಟ ನಗು...'ನಕ್ಷತ್ರದಿಂದ ನೀಲಿ ನೀಲಿ ಹೊಳೆಯುವ ಧೂಳು ಉದುರುತ್ತೆ, ಇಲ್ಲೇ ಮಲಗೋಣ' ಎಂದು ನನ್ನ ತೋಳ ಮೇಲೆ ತಲೆ ಇಟ್ಟು ಮಲಗಿದೆ. ತಕ್ಷಣ ಆವರಿಸಿಕೊಂಡ ನಿದ್ರೆ.

ಮಧ್ಯರತ್ರಿ ಸುಮ್ಮನೆ ಎಚ್ಚರವಾಯಿತು.. ಕತ್ತೆತ್ತಿ ನೋಡಿದರೆ ಜೇನಿನಲ್ಲಿ ಅದ್ದಿ ತೆಗೆದಂತಿದ್ದ ಚಂದ್ರ... ಅವನ ಬೆಳಕಿನಲ್ಲಿ ನಿನ್ನ ಹಾಲು ಬಿಳುಪಿನ ಬಣ್ಣಕ್ಕೆ ಬಂಗಾರದ ಮೆರಗು...ನಿನಗೆ ನೀಲಿ ನಕ್ಷತ್ರದ ಕನಸು...ನಾನು ನಿನ್ನೊಳಗೆ ಉಕ್ಕಿದೆ, ನೀನು ಸಣ್ಣಗೆ ನನಗೆ ಕೇಳುವಷ್ಟೇ ಹಿತವಾಗಿ ಚೀರುತ್ತಿದ್ದರೆ, ಚಂದ್ರ ನಕ್ಷತ್ರಗಳೂ ಹೊಟ್ಟೆ ಉರಿದುಕೊಳ್ಳುತ್ತಿದ್ದವು...

ಅವತ್ತು ಡವ್ ಸೋಪಿನಿಂದ ಸ್ನಾನ ಮಾಡಿದೆವಲ್ಲ ಆ ಸೋಪು ದಿನದಿನವೂ ಇಷ್ಟಿಷ್ಟೇ ಕರಗುತ್ತಿದೆ... ನೀನು ತರಿಸಿದ ಗ್ಯಾಸ್ ಸ್ಟೋವಿನಲ್ಲೆ ಅಮ್ಮ ಅಡುಗೆ ಮಾಡುತ್ತಾಳೆ, ನಿನಗಿಷ್ಟವಾದ ಬಿಳಿ-ನೀಲಿ ಬಣ್ಣದ ಭಾರವಾದ ಪರದೆಗಳು ಕಿಟಕಿಗಳಹಿಂದೆ ತಣ್ಣಗೆ ನಿಂತಿವೆ.. ನಿನಗೆ ಕಾಯುತ್ತಾ...

ಅಪ್ಪ ಅಮ್ಮ ಒಪ್ಪಿದ್ದಾರೆ...ನಿನ್ನ ಅಪ್ಪನನ್ನು ಒಪ್ಪಿಸಿ ಬಂದೇ ಈ ಪತ್ರ ಬರೆಯುತ್ತಿದ್ದೇನೆ...ನಿನ್ನ ವಿಲನ್ ಅಪ್ಪನೇ ಒಪ್ಪಿಕೊಂಡಾಗಿದೆ ಅಂದಮೇಲೆ ನೀನು ಜಂಬ ಮಾಡಿದರೆ ಅರ್ಥವಿಲ್ಲ...

ಟೆರೇಸಿಗೆ ಹೋಗಲು ಮನಸ್ಸೇ ಬರುವುದಿಲ್ಲ ನಕ್ಷತ್ರಗಳು ಹೊಳೆಯುವ ನೀಲಿ ಧೂಳನ್ನು ನಿನಗಲ್ಲದೆ ಬೇರೆ ಯಾರಿಗೂ ಕೊಡೋಲ್ಲವಂತೆ..ಡವ್ ಸೋಪ್ ಪೂರ್ತಿ ಕರಗುವುದರೊಳಗೆ ಬಂದುಬಿಡು...
.................................................ತುಂಬ ನಿನ್ನವನು,ನೀಲಿ ನಕ್ಷತ್ರ;-)

Wednesday, December 5, 2007

ಅಪ್ಪ ಕಾಣಿಸಿದ ಕತೆಗಳು- 1.ವೈದೇಚಿತ್ತಿ

ನಾನು ಸಣ್ಣವಳಾಗಿದ್ದಾಗಿಂದಾನೂ, ನನಗೆ ನೆನಪಿರೋವಾಗ್ಲಿಂದಾನೂ, ಕರೆಂಟು ಹೋದಾಗ ಪುಸ್ತಕಗಳನ್ನು ಮಡಚಿಟ್ಟು ಅಪ್ಪ ಅಮ್ಮನ ಜೊತೆಗೆ ಬಂದು ಕೂರ್ತಿದ್ವಿ(ನಾನು,ನನ್ನ ತಂಗಿ). ಆಗ ಅಪ್ಪ ತಮ್ಮ ನೆನಪಿನ ಬುಟ್ಟಿಯಿಂದ ಊರಿನ ಜನರ ಜೀವನದ ಘಟನೆಗಳನ್ನ, ಕತೆಗಳನ್ನ, ಒಂದೊಂದಾಗಿ ಹೆಕ್ಕಿ ಹೇಳೋರು. ಅಥವಾ ಈಸೋಪನಾ ನೀತಿ ಕತೆಗಳೋ, ಪಂಚತಂತ್ರದ ಕತೆಗಳೋ ನೀತಿಚಿಂತಾಮಣಿಯ ಕತೆಗಳನ್ನೋ ಹೇಳೋರು....ಇಲ್ಲವೇ ಭಗವದ್ ಗೀತೆ, ಶ್ಲೋಕಗಳು, ಮುಕುಂದ ಮಾಲೆ ಬಾಯಿಪಾಠ ಮಾಡಿಸೋರು...ನನ್ನ facinate ಮಾಡ್ತಿದಿದ್ದು ನಮ್ಮೂರಿನ ಜನರ ಕತೆಗಳು, ಅವರನ್ನ, ಅವರ ಸ್ವಭಾವಗಳನ್ನ ಅಪ್ಪ analise ಮಾಡ್ತಿದ್ದ ರೀತಿ. ರಥೋತ್ಸವಕ್ಕೋ, ದೀಪಾವಳಿಗೋ, ಗೋಕುಲಷ್ಟಮಿಗೋ, ಇಲ್ಲವೇ ನವರಾತ್ರಿಯ ಪಾರಾಯಣದ ಸಮಯದಲ್ಲೋ... ಊರಿಗೆ ಹೋದಾಗ ಆ ಜನರನ್ನೆಲ್ಲಾ ನೋಡಿ ಅವರಿಗೆ ಸಂಬಂಧಿಸಿದ ಕತೆಗಳನ್ನ ಜ್ನಾಪಿಸಿಕೊಂಡು ಖುಶಿ ಪಡ್ತಿನಿ...

ಈಗೊಂದು ಹೊಸ ಪ್ರಯೊಗ, ನಮ್ಮೂರಿನ ಜನರನ್ನ ಒಬ್ಬೂಬ್ಬರನ್ನೂ ನಾನು ನೋಡಿದ ಹಾಗೆ ನಿಮ್ಮ ಮುಂದೆ ಇಡ್ತೀನಿ. ಅವರಿಗೆ ರಿಲೆಟ್ ಆಗಿರೊ ಪಾಸ್ಟ್ ಸ್ಟೋರೀಸ್ ಇದ್ರೆ ಹೇಳ್ತಿನಿ. ಈ ಕತೆಗಳಲ್ಲಿ ಭೋದನೆ ಇಲ್ಲ, ಏನೋ ಸಂದೆಶ ಇರ್ಲೇಬೇಕು ಅಂತ ಹುಡುಕಬೇಡಿ. ಏನಾದ್ರು ಕಂಡ್ರೆ ಸಂತೋಷ. continous ಆಗಿ ಬರೀತಿನಿ ಅಂತ ಅಲ್ಲ, ಮದ್ಯೆ ಮದ್ಯೆ ಯಾವಾಗ್ಲಾದ್ರು ಬರಿತಿನಿ 'ಅಪ್ಪ ಕಾಣಿಸಿದ ಕತೆಗಳು' ಅಂತ ಕರ್ಯೋಕ್ಕೆ ಖುಶಿ ನಂಗೆ. ನಮ್ಮೂರಿನ ಜನರ ಕತೆ ಇಷ್ಟ ಆಗಬಹುದು ನಿಮಗೆ...

ವೈದೇಚಿತ್ತಿ

1
"ಈ ವೈದೇಹಿಗೆ ಇಷ್ಟು ವಯಸ್ಸಾದರೂ ಇಂಥ ಬುದ್ದಿ ಯಾಕೆ ಅಂತ? ಅವಳಿಗೇನು ಒಡವೆಯಾ? ಸೀರೆಯಾ? ಗೋಪಾಲ ಬಂದು ಪಾಪ ಗೊಳೋ ಅಂತ ಅತ್ತುಕಂಡ. ತಿಂಗಳಿಗೆ ಐನೂರು ರುಪಾಯಿ ಕೊಡ್ತಾಳಂತೆ ಕಣೋ ನಾವು ಕೆಲ್ಸದವರಿಗೂ ಅಷ್ಟು ಕಡಿಮೆ ಕೊಡೋಲ್ಲ. ಅದೇನು ಜಿಗ್ಗತನವೋ... ಮಗಂಗೆ ಕೊಟ್ರೆ ಏನಾದ್ರು ಕಳ್ಕತಾಳ? ಅಂಥದ್ರಲ್ಲಿ ಫೋನ್ ಬಿಲ್ಲೂ ನೀನೇ ಕಟ್ಟು ಅಂತಾಳಂತೆ. ಇನ್ನೇನ್ ಉಳಿಯುತ್ತೆ ಇವ್ನ ಕೈಯಲ್ಲಿ ಪಾಪ? ಆಕಡೀಗೆ ತೋಟ ತೋಟ ಅಂತ ಹಿಂದಿನಿಂದ್ಲೂ ಅಲ್ಕಂಡು ಪೌರೋಹಿತ್ಯಾನೂ ಕಲೀಲಿಲ್ಲ, ಓದ್ಲೂ ಇಲ್ಲ, ಈಕಡೀಗೆ ತೋಟದಲ್ಲಿ ಎಷ್ಟು ಗೈದ್ರೂ ಉಪ್ಯೋಗ್ವಿಲ್ಲ... ಸಾಲದ್ದಕ್ಕೆ ಮೂರುಮೂರು ಮಕ್ಕಳು ಬೇರೆ... ಊಟಕ್ ಕಷ್ಟವಿಲ್ಲ ಅನ್ನೋದ್ ಬಿಟ್ರೆ ಕೈಯಲ್ಲಿ ನಾಲ್ಕು ಕಾಸೂ ಆಡಂಗಿಲ್ಲ..... ನಿ ಏನೇ ಹೇಳು ಶ್ರೀನಿವಾಸ ಅವ್ಳಿಗೆ ತಲೆ ಕೆಟ್ಟಿರೋದಂತೂ ಸತ್ಯವೇಯ.” ಅಂತ ಅಜ್ಜಿ ಬಿಸಿ ಬಿಸಿ ಕಾವಲಿ ಮೇಲೆ ದೊಸೆ ಹಾಕ್ತಾ ಹೇಳ್ತಿದ್ರೆ, ಪುಟ್ಟಿ "ಅದೇ ಆ ಮುಂಬಾವಿ ಮನೆ ವೈದೇಚಿತ್ತಿನ?" ಅಂದ್ಲು ದೋಸೆ ನುಂಗುತ್ತಾ "ಹೂಂ...." ಅಂದ ಅಪ್ಪ "ಇನ್ನೂ ತುಂಬ ಚಿಕ್ಕವರು ನೀವು ದೊಡ್ಡವರ ವಿಷಯಾನೆಲ್ಲಾ ಮಾತಾಡ್ ಬಾರ್ದು" ಅಂದ್ರು.


2
ವೈದೇಚಿತ್ತಿ ಪೂರ್ತಿ ಹೆಸರು ವೈದೇಹಿ ಅಂತ ಅವರು ಈಗ ಇರೊದನ್ನ ನೋಡಿದ್ರೆ ಒಂದು ಕಾಲಕ್ಕೆ ನೋಡೋಕ್ಕೆ ಅಷ್ಟು ಲಕ್ಷಣ ಇಲ್ಲ್ದಿದ್ರೂ ತೆಳ್ಳಗೆ ಗೋಧಿಬಣ್ಣಕ್ಕೆ ಇದ್ದಿರಬಹುದು. ಈಗ ಮುಖದಲ್ಲಿ ಎಂಥದ್ರದ್ದೋ ಕಲೆಗಳು ಇವೆ. ಇನ್ನೂ ಸ್ವಲ್ಪ ದಪ್ಪ ಇದ್ದಿದ್ದ್ರೆ ಅವರ ವಯಸ್ಸಿಗೆ ಒಪ್ಪುತ್ತಿತ್ತು. ಬೋಳಿಸಿದ ತಲೇನ ಕೆಂಪು ಸೀರೆಯಲ್ಲಿ ಮುಚ್ಚಿಕೊಂಡಿರ್ತಾರೆ. ವೈದೇಚಿತ್ತಿ ಈಗ ಇರೋ ಮನೆ ಮುಂದೆ ಭಾವಿ ಇರೋದ್ರಿಂದ, ಅವರ ಮನೇನ ಮುಂಭಾವಿ ಮನೆ ಅಂತ ಕರೀತಾರೆ. ಆದ್ರೆ ಹಿಂದೆ ಅವ್ರು ನಮ್ಮ ತೊಟ್ಟಿ ಮನೇಲೇ ಇದ್ರಂತೆ. ಈ ವೈದೇಚಿತ್ತಿನ ನಾವೆಲ್ಲಾ ವೈದೇಚಿತ್ತಿ ಅಂತ ಯಾಕೆ ಕರೀತಿವಿ ಅಂತ ಇತಿಹಾಸ ಕೆದಕಿದಾಗ ತಿಳಿಯೋದು ಇಷ್ಟು...... ಹಿಂದೆ ಅಂದ್ರೆ ಈಗಿಂದ ಒಂದು ನಲವತ್ತು ಐವತ್ತು ವರ್ಷದ ಹಿಂದೆ ಈಗಿನ ನಮ್ಮ ಚತ್ರದಂತಹಾ ದೊಡ್ಡ ಮನೇಲಿ ಈಗಿನ ತರ ಬರೀ ಎರಡೇ ಸಂಸಾರಗಳಿರಲಿಲ್ಲವಂತೆ ಇನ್ನೂ ಎರೆಡು ಸಂಸಾರ ಇತ್ತಂತೆ. ವೈದೇಚಿತ್ತಿಯವರದೂ ಅದರಲ್ಲಿ ಒಂದು. ಈ ತೊಟ್ಟಿ ಮನೆಗೆ ವೈದೇಚಿತ್ತಿ ಮದುವೆ ಆಗಿ ಬಂದಾಗ ಆ ಮನೆಯ ಸೊಸೆಯಂದಿರಲ್ಲಿ ಅವರೇ ಚಿಕ್ಕವರಾದ್ದರಿಂದ ಹಾಗೂ ಆ ತೊಟ್ಟಿಯವರೆಲ್ಲಾ ಒಂದೇ ಗೋತ್ರದವರಾದ್ದರಿಂದ ವೈದೇಹಿ ಮನೆಯ ಮಕ್ಕಳಿಗೆ ವೈದೇಹಿಚಿತ್ತಿಯಾಗಿ ಕೊನೆಗೆ ವೈದೇಚಿತ್ತಿ ಆದ್ಲು.

ವೈದೇಚಿತ್ತಿಗೆ ಗಂಡ ಅನ್ನೋರು ಇದ್ದಿರಬಹುದು ಅಂತ ನನಗನ್ನಿಸಿದ್ದೇ ತೀರ ಇತ್ತೀಚೆಗೆ. ಅವರು ಆ ಕೆಂಪು ಮಡಿ ಬಟ್ಟೆಯಲ್ಲಿ ಹುಟ್ಟುಬಟ್ಟೆನೋ ಅನ್ನೋಷ್ಟು ಸಹಜವಾಗಿ ಕಾಣ್ತಿದ್ರು. ಆದ್ರೆ ಅವರಿಗೆ ಈಗ ಮಕ್ಕಳಿವೆ ಹಾಗೂ ಈಗ ಅವರು ವಿಧವೆ ಅನ್ನೋ ಎರೆಡು ಅಂಶಗಳಿಂದ (ಈ ಎರೆಡನೇ ಅಂಶದಿಂದ ಅವ್ರಿಗೇನು ಬೇಜಾರಾದಂಗೆ ಕಾಣ್ಸಲ್ಲ) ಅವರಿಗೆ ಗಂಡ ಇದ್ದಿದ್ದಂತೂ ನಿಶ್ಚಯ. ವೈದೇಚಿತ್ತಿ ಗಂಡನಿಗೆ ಆ ಊರಿನ ಎಲ್ಲರಂತೆ ಅಡಿಕೆ ತೋಟ ಇತ್ತು. ಸ್ವಲ್ಪ ಕಮ್ಮೀನೇ ಇತ್ತು ಅರ್ಧ ಎಕರೆ. ಜೊತೆಗೆ ಪೌರೋಹಿತ್ಯಾನೂ ಮಾಡ್ತಿದ್ರು. ಮೂರು ಜನ ಮಕ್ಕಳು ಎರೆಡು ಹೆಣ್ಣು ಒಂದು ಗಂಡು. ದೊಡ್ಡ ಹುಡುಗಿ ಶ್ಯಾಮಲಾನ ಆ ಕಾಲಕ್ಕೇ ಡೆಲ್ಲಿಲಿದ್ದ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ರು. "ಅವ್ನಿಗೆ ನಮ್ಮ ಕಮಲನ್ನ ಕೊಡಣ ಅಂತಿದ್ವಿ ಕಣೇ ನಿಮ್ಮ ತಾತ ಡೆಲ್ಲಿ ತುಂಬ ದೂರ ಕಷ್ಟ ಸುಖ ಅಂದ್ರೆ ನೋಡೋಕ್ಕಾಗಲ್ಲ ಬೇಡ ಅಂದ್ರು. ಅವ್ಳು ಹತ್ರದಲ್ಲೇ ಇದ್ದು ಸುಖ ಸುರ್ಕೊಂಡಿದ್ದು ಗೊತ್ತಿದ್ಯಲ್ಲ." ಅಂತ ಒಂದು ಸತಿ ನಿಟ್ಟುಸಿರಿಟ್ಟಿದ್ದರು ಅಜ್ಜಿ. ಎರಡನೇ ಮಗಳು ವಿಮಲನ್ನ ಹತ್ತಿರದ ಊರಿಗೇ ಕೊಟ್ಟಿದ್ದರು. ಆ ಆಂಟಿ ಎಷ್ಟು ಬಿಗಿಯಾದ ಬ್ಲೌಸ್ ಹಾಕ್ತಾರೆ ಅಂದ್ರೆ ಇನ್ನೇನು ಹರಿದೇ ಹೋಗುತ್ತೇನೋ ಅನ್ಸುತ್ತೆ... ಅವರನ್ನ ನೋಡಿದಾಗಲೆಲ್ಲಾ ನನಗೇ ಉಸಿರುಕಟ್ಟಿದಂಗೆ ತೋಳುಬಿಗಿದಹಾಗಾಗುತ್ತೆ. ಇನ್ನು ಉಳಿದವರು ಗೋಪಾಲ ಅವರಿಗೆ ಪಕ್ಕದ ಹಳ್ಳಿಯಿಂದ ಹೆಣ್ಣು ತಂದಿದಾರೆ ಆ ಆಂಟಿ ಮನೆ ಹೊರಗೆ ಕಾಲೇ ಹಾಕೋಲ್ಲ.3
ವೈದೆಚಿತ್ತಿಗೆ ನಾನ್ಯಾರು ನನ್ನ ತಂಗಿ ಯಾರು ಅಂತ ಯಾವಾಗಲು ಗೊಂದಲವೇ ಅದೇನು ನಿಜವಾಗಲೂ ಗೊತ್ತಗಲ್ವೋ ಅಥ್ವಾ ಬೇಕ್ಬೇಕು ಅಂತ ಹಾಗೆ ಮಾಡ್ತಾರೋ ಗೊತ್ತಿಲ್ಲ. ನಾವು ನಾನು ನನ್ನ ತಂಗಿ ಪ್ರತಿ ಸಲ ಊರಿಗೆ ಹೋದಾಗಲೂ ನಮ್ಮಿಬ್ಬರಲ್ಲಿ ಅವರಿಗೆ ಯಾರು ಮೊದಲು ಸಿಕ್ಕಿದರೂ ಅವರು ಕೇಳೋದು ಒಂದೆ ರೀತಿಯ ಪ್ರಶ್ನೆಗಳು. ಉದಾಹರಣೆಗೆ ನಾನು ಸಿಕ್ಕಿದೆ ಅನ್ನಿ....

ವೈದೇಚಿತ್ತಿ: ನೀನು ಶ್ರೀನಿವಾಸನ ಮಗಳಲ್ಲವೇನೆ, ಯಾವಾಗ ಬಂದ್ರೆ? ನೀನು ಅಕ್ಕಾನೋ? ತಂಗಿಯೋ?
ನಾನು : ನಾನು ಅಕ್ಕ ತಂಗಿ ಒಳಗಡೆ ಇದಾಳೆ ನೀವು ಹೇಗಿದಿರ ವೈದೇಚಿತ್ತಿ?
ವೈದೇಚಿತ್ತಿ: ನಾನು ಚೆನ್ನಾಗಿದಿನಮ್ಮ..... ನಿನ್ನ ಅಮ್ಮ ಬ೦ದಿದಾಳೋ ? ಎಷ್ಟು ದಿನ ಇರ್ತಿರ?
ನಾನು : ಹೊ೦.... ಅಮ್ಮಾನು ಬ೦ದಿದಳೆ ರಥೋತ್ಸವ ಮುಗಿಸಿಕೊಂಡು ಹೊರ್ಡದು ಅಂತ.....
ವೈದೇಚಿತ್ತಿ: ಹಂಗಾದ್ರೆ ಇನ್ನು ನಾಲ್ಕೈದು ದಿನ ಇರ್ತಿರ ಅನ್ನಿ. (ದ್ರುಷ್ಟಿ ತೆಗೆಯುತ್ತಾ...) ಎಷ್ಟು ಚೆನ್ನಾಗಿದಿಯೇ ನನ್ನ ಕಂದ ಬೆಳ್ಳಿಗುಂಡು ಬೆಳ್ಳಿ ಗುಂಡುಈ ಬೆಳ್ಳಿ ಗುಂಡು ಅನ್ನೋದು ಒಂದು ಎಡವಟ್ಟು ಪದ. ನನ್ನ ಹಾಗೆ ಯಾರಾದರೂ ಕರೆದ್ರೆ ತುಂಬ ಗೊಂದಲ ಆಗುತ್ತೆ...ಯಾಕ್ ಗೊತ್ತ? ಅದರಲ್ಲಿ ಬೆಳ್ಳಿನೂ ಇದೆ ಗುಂಡೂ ಇದೆ, ಬೆಳ್ಳಗಿದಿಯಾ ಅಂತ ಹೊಗಳ್ತಾ ಇದಾರೋ ಅಥವಾ ಗುಂಡಗಿದಿಯಾ ಅಂತ ಆಡ್ಸ್ಕತಾ ಇದಾರೋ ಅಂತ ಗೊತ್ತಾಗದೇ ಸುಮ್ಮನೆ ಮಿಕ ಮಿಕ ಅಂತ ಹಾಗೆ ಕರೆದೋರನ್ನ ನೋಡ್ಕೊತಾ ನಿಂತ್ಕೊಬಿಡ್ತೀನಿ. ಇಂಥ ಎಡವಟ್ಟು ಪದಗಳಿಗೆ ಪ್ರತಿಕ್ರಯಿಸೋದಾದರೂ ಹೇಗೆ........


4
"ಗೋಪಾಲ ನೀನು ಶ್ಯಾಮಲನ ಕೈಲಿ ಹೇಳಿಸಿ ನೋಡು ವೈದೇಚಿತ್ತಿಗೆ ಶ್ಯಾಮಲ ಅಂದ್ರೆ ಸ್ವಲ್ಪ ಹೆಚ್ಚೇ ಪ್ರೀತಿ..." ಅಂತ ಅಪ್ಪ ಗೋಪಾಲ ಮಾಮಂಗೆ ಹೇಳ್ತಿದಿದ್ದು ಕೇಳಿಸ್ತು. ಪಕ್ಕದಲ್ಲಿದ್ದ ಚಿಕ್ಕಪ್ಪ "ಒಳಗಡೆ ಹೋಗಿ ಕಾಫಿ ಮಾಡ್ಸ್ಕಬಾಮ್ಮ" ಅಂದ್ರು. ಅಡುಗೇ ಮನೇಲಿ ಚಿಕ್ಕಮ್ಮ ಇದ್ರು "ಕಾಫಿ ಮಾಡ್ಬೇಕಂತೆ ಗೋಪಾಲ ಮಾಮ ಬಂದಿದಾರೆ ಅಂದೆ." " ಈ ಮನೇಲಿ ಒಂದು ಹಂಡೆಗಟ್ಲೆ ಕಾಫಿ ಮಾಡಿದ್ರೂ ಖಾಲಿಯಾಗೋಗುತ್ತೆ, ನನ್ ಜೀವನವೆಲ್ಲಾ ಕಾಫಿ ಮಾಡೋದ್ರಲ್ಲೇ ಕಳ್ದ್ಹೋಯ್ತು...." ಅಂತ ಚಿಕ್ಕಮ್ಮ ಗೊಣಗುತ್ತಾ ಕಾಫಿಗೆ ನೀರಿಟ್ಟಳು. ಕಾಫಿ ಮಾಡುವುದರ ಬಗ್ಗೆ ಅಮ್ಮ ಮತ್ತು ಚಿಕ್ಕಮ್ಮನಿಗೆ ಇರುವ ಅಸಮಾಧಾನದ ಪರಿಚಯವಿದ್ದ ನನಗೆ ಚಿಕ್ಕಮ್ಮನ ಮಾತುಗಳಿಗಿಂತ ತೊಟ್ಟಿಯಲ್ಲಿ ನಡೆಯುತ್ತಿರುವ ಮಾತುಗಳು ಮುಖ್ಯ ಅನ್ನಿಸಿ ಅಮ್ಮ ಆಗತಾನೆ ಒಗೆದು ತಂದು ಇಟ್ಟಿದ್ದ ಬಟ್ಟೆಗಳನ್ನು ಹಿಂಡಿ ಕೊಡಿಯ ಮೇಲೆ ಒಣಗಿಸುವ ನೆಪದಲ್ಲಿ ತೊಟ್ಟಿಗೆ ಬಂದು ಬಟ್ಟೆ ಹಿಂಡತೊಡಗಿದೆ.ನಾನು ಒಳಗೆ ಹೋಗಿ ಬರುವ ಹೊತ್ತಿಗೆ ಅಪ್ಪ ಮಾತು ಮುಗಿಸಿಯಾಗಿತ್ತು "ನಂಗು ಸಾಕಾಗ್ ಹೋಗಿದೆ ಶ್ರೀನಿವಾಸ ಎಲ್ಲರೂ ಅವಳಿಗೆ ಹೇಳಿದ್ದಾಯ್ತು ಶ್ಯಾಮಲಾನೂ ಹೇಳಿದ್ಲು, ಅವಳ ಮುಂದೆ ಹೂಂ ಹೂಂ.. ಅಂತಾಳೆ ಅವಳು ಮರೆಯಾದ ತಕ್ಷಣ ಅದೇ ರಾಗ ಅದೇ ತಾಳ. ಟವ್ನ್ ನಲ್ಲಿ ಯಾವುದಾದರೂ ಬೇಕರಿಗೆ ಹೋಗಿ ಸೇರ್ಕಳಣ, ಬೇಕರಿ ಇಡೋಕ್ಕಂತು ಭಾಗ್ಯವಿಲ್ಲ ತಿಂಗಳಿಗೆ ಎರೆಡು ಮೂರು ಸಾವ್ರನಾದ್ರೂ ಸಿಗುತ್ತೆ ಅನ್ಕಂಡ್ರೆ ಇಲ್ಲಿ ತೋಟ ನೋಡ್ಕಳೋರ್ಯಾರು? ಅಮ್ಮನ್ನ ಈ ಕೊನೇಗಾಲ್ದಲ್ಲಿ ಬಿಟ್ಟೊಗದ್ ಹ್ಯಾಗೆ? ಈಗ ಊಟಕ್ ಕಷ್ಟ್ವಿಲ್ಲ, ಆಮೇಲೆ ಅದಕ್ಕೂ ಕುತ್ತು ಬಂದ್ರೆ ಏನ್ ಮಾಡದು....?" ಅಷ್ಟು ಹೊತ್ತಿಗೆ ಕಾಫಿ ಬಂತು.. ಒಳಗಡೆ ಗೊಣಗುತ್ತಿದ್ದ ಚಿಕ್ಕಮ್ಮ ಅಷ್ಟೇ ವಿರುದ್ದವಾದ ಶಾಂತ ನಗುಮುಖದಿಂದ ಕಫಿ ತಂದು ಕೊಟ್ಟಳು. ಗೋಪಾಲಮಾಮನ ಮುಖ, ಗಂಟಲು ಕಾಫಿಯ ಹಿತದಿಂದ ತುಂಬಿಕೊಂಡಿತು. ಚಿಕ್ಕಮ್ಮ ಅಧ್ಭುತವಾಗಿ ಕಾಫಿ ಮಾಡ್ತಾಳೆ. ಚಿಕ್ಕಪ್ಪ ದಡಬಡಿಸಿ ಕಾಫಿ ಕುಡಿದು ತಮ್ಮ ಬುಲೆಟ್ಟಿನ ಗುಡು ಗುಡು ಶಭ್ದದೊಂದಿಗೆ ಅಂಗಡಿಗೆ ಹೋದರು.

ನಾನು ಹಿಂಡಿದ ಬಟ್ಟೆಯನ್ನ ಕಷ್ಟಪಟ್ಟು ಕೊಡಿಯಮೇಲೆ ಒಣಗಿಸುತ್ತಿದ್ದೆ ..."ಹೇಳ್ಕಳಕ್ಕೆ ನಾಚಿಕೆ ಯಾಗುತ್ತೆ ಶ್ರೀನಿವಾಸ, ಈಗೀಗ ಬ್ರಾಮ್ಹಣಾರ್ಥಕ್ಕೆ ಯಾರದ್ರು ಕರೀತಾರೇನೋ ಅಂತ ಕಾಯಂಗಾಗೋಗಿದೆ. ತಿಂಗಳಲ್ಲಿ ಒಂದು ನಾಲ್ಕೈದು ಬ್ರಾಮ್ಹಣಾರ್ಥ ಆದ್ರೆ ಕೈಯಲ್ಲಿ ಸ್ವಲ್ಪ ದುಡ್ಡಾಡುತ್ತೆ, ದುರಂತ ನೋಡು ಯಾರೂ ಸಿಗ್ದೆ ಈಗ ನಾನಂಥೋರ್ನೆಲ್ಲಾ ಬ್ರಾಮ್ಹಣಾರ್ಥಕ್ಕೆ ಕರೆಯೋಹಂಗಾಗೋಗಿದೆ. ನನಗೆ ಹೋಗೊಕ್ಕೆ ಎಷ್ಟು ಹಿಂಸೆ ಆಗುತ್ತೆ ಆದ್ರೆ ಹೋಗ್ದೆ ವಿದಿಯಿಲ್ಲ. ಹೆಚ್ಚು ಕಡಿಮೆ ಬ್ಯಾಂಕಿನಲ್ಲಿ ಹೆಚ್ಚು ಕಡಿಮೆ ಅಮ್ಮನ ಹೆಸರಿನಲ್ಲಿ ಮೂರು ಲಕ್ಷ ಇದೆ ಯಾಕ್ ಬೇಕು ಅವ್ಳಿಗೆ ನಂಗ್ ಬೇಡಪ್ಪ ಹೋಗ್ಲಿ ವಿಮ್ಲಂಗಾದ್ರೂ ಕೊಡ್ತಾಳ ಅವ್ಳೂ ಕಷ್ಟದಲ್ಲಿದ್ದಾಳೆ.... ಅಮ್ಮ ಸತ್ರೂ ಆ ಹಣನ ನಾ ಮುಟ್ಟೋಲ್ಲ...ಮೊದಲು ಅಮ್ಮ ಹೀಗಿರ್ಲಿಲ್ವೋ ಅಥವಾ ನಮಗೇ ಅಮ್ಮನ ಗುಣ ಗೊತ್ತಾಗಿದ್ದೇ ಅಪ್ಪ ಸತ್ತ ಮೇಲೆ ಅನ್ಸುತ್ತೆ. ಅಪ್ಪ ಇದ್ದಾಗ ಅಮ್ಮನ್ನ ಕಾರಣವಿಲ್ಲದೇ ಮಾತು ಮಾತಿಗೂ ಬೈದು ಹೀಯಾಳಿಸೋರು, ಅಮ್ಮನ ವ್ಯಕ್ತಿತ್ವ, ಅವಳು ಹೇಗೆ? ಅನ್ನೋದೇ ಗೊತ್ತಿರ್ಲಿಲ್ಲ. ಅಪ್ಪ ಸತ್ತ್ಮೇಲೇನೇ ಅಮ್ಮ ಸ್ವತಂತ್ರವಾಗಿದ್ದು, ಖುಶಿಯಾಗಿದ್ದು. ಅಪ್ಪಂಗೆ ಗಾಳಿ ಹಿಡ್ದು ಹೋದ್ರು ಅಂತಾರೆ ಅಪ್ಪಂಗೆ ಗಾಳಿ ಹಿಡ್ದಿದ್ದೋ, ಇವ್ಳಿಗೇ ಧನ ಪಿಚಾಚಿ ಹಿಡಿತೋ ಗೊತ್ತಿಲ್ಲ..."ಅನ್ನುತ್ತಿದ್ದ್ರು ಗೋಪಾಲ ಮಾಮ....


5
ಅಜ್ಜಿ ಜೊತೆ ಜಗುಲಿ ಮೇಲೆ ಕೂತ್ಕೊಂಡೋ ಅರಂಗಿನಲ್ಲಿ ಕೂತ್ಕೋಂಡೋ "ರಂಗಮಣಿ.... ವಿಶ್ಯ ಕೇಳಿದ್ಯ ಬಿ ಎ ಮೇಷ್ಟ್ರಿಗೆ ಈಗ ಕಿವಿ ಕೇಳಲ್ವಂತೆ....,ರಂಗಮಣೀ ಮೊನ್ನೆ ಆ ಹಾಲುಮಾರೋ ಕರಿಯನ್ ಮಗು ಸತ್ತೋಯ್ತಂತೆ..ಪಾಪ..." ಅಂತಾನೋ "ರಂಗಮಣಿ ನಮ್ಮ ಶ್ಯಾಮಲ ಹಿಂಗಂದ್ಲು, ನಮ್ಮ ಶ್ಯಾಮಲ ದೆಲ್ಲಿಯಿಂದ ಮಿಠಾಯಿ ಕಾಳ್ಸಿದಾಳೆ ತೊಗೋ... ಶ್ಯಾಮ್ಲನ್ನ ಮಕ್ಕ್ಳು ಕ್ಲಾಸ್ನಲ್ಲಿ ಫಸ್ಟ್ ಅಂತೆ, ಶ್ಯಾಮಲನ್ನ ಮೊದ್ಲನೇ ಮಗ ಗರುಡ ಗರುಡ(ಅಂದ್ರೇ ತುಂಬ ಚೆನ್ನಗಿದಾನೆ ಅಂತ)" ಅಂತ ಕೊರೆಯುತ್ತಾ ಕೂರುವ ವೈದೇಚಿತ್ತಿ ಹೀಗೆಲ್ಲಾ ಮಾಡ್ತಾರೆ ಅನ್ಸಲ್ಲ.. ಭೈರಪ್ಪನವರ ಸಾಕ್ಶಿಯಲ್ಲಿ ಬರೊ ಜಿಪುಣ ಮನುಷ್ಯನ ಥರಾನ ಇವರು? ಇವರು ಸತ್ತಾಗ ಗೋಪಲಮಾನೂ ಆ ಕಾದಂಬರಿಯಲ್ಲಿ ಬರೋ ರೀತಿಯಲ್ಲೇ ಮೂರು ಲಕ್ಷಾನ ಇವರ ಹೆಣದ ಜೊತೆ ಸುಡಬಹುದ..??? ಎಂದು ಏನೇನೋ ಅಸಂಭದ್ದವಾಗಿ ಯೋಚಿಸುತ್ತಾ ಜಗುಲಿಯ ಮೇಲೆ ಕೂತಿದ್ದೆ, ನನ್ನ ತಂಗಿಯೂ ಪಕ್ಕದಲ್ಲಿದ್ದಳು ಅದ್ಯಾವುದೋ ಮಾಯೆಯೆಲ್ಲಿ ಮನೆ ಬಾಗಿಲಿನ ಬಳಿ ಪ್ರತ್ಯಕ್ಷವಾದ ವೈದೇಚಿತ್ತಿ "ಶ್ರೀನಿವಾಸನ ಮಕ್ಕಳಲ್ವೇನ್ರೇ ಯಾವಾಗ ಬಂದ್ರಿ... ಇದರಲ್ಲಿ ಅಕ್ಕ ಯಾರು ತಂಗಿ ಯಾರು?" ಅಂದ್ರು....