Saturday, January 5, 2008

ನದಿಗೆ ನೆನಪಿನ ಹಂಗು

ಟ್ರೇನಿನ ಎ.ಸಿ ಕೋಚಿನಲ್ಲಿ ಸಿಕ್ಕಿದ ನೀನು ಸ್ವಲ್ಪವೇ ದಿನದಲ್ಲಿ ನನಗೆ ನನ್ನ ಮೊಬೈಲಿಗೆ ಮಾತು ಕಲಿಸಿದ್ದೆ... ಸ್ಕೂಟಿ 60ರಿಂದ 80ರಲ್ಲಿ ಓಡಲು ಶುರುವಾಗಿತ್ತು. ನಿತ್ಯ ಹೊಸ ಹೊಸ ಬಟ್ಟೆ ಹಾಕಿಕೊಳ್ಳುತ್ತಿದ್ದೆ, ಬಣ್ಣ ಬಣ್ಣದ ಲಿಪ್ ಸ್ಟಿಕ್ಕುಗಳು, ಪರ್ಪ್ಯೂಮುಗಳು ನನ್ನ ಮೇಕಪ್ ಕಿಟನ್ನು ತುಂಬಿತ್ತು... ಯಾರಿಗೂ ನಂಬರ್ ಕೊಡದ ನಾನು ನಿನಗೆ ಏಕೆ ಕೊಟ್ಟೆನೋ? ಆಕಾಶ್ ಎನ್ನುವ ಹೆಸರಿಗೆ ಮರುಳಾಗಿಯ? ಇಲ್ಲ ಹೆಸರಿನ ಭ್ರಮೆ ಇಲ್ಲ ನನಗೆ, ಯಾವ ಹೆಸರಾದರೇನು? ನನಗಿಷ್ಠವಾದ ಹಾಡುಗಳು ನಿನಗೂ ಇಷ್ಟ ಅನ್ನೋ ಒಂದೇ ಕಾರಣಕ್ಕೆ ಕೊಟ್ಟೆ ಅನ್ನುವುದಂತೂ ಸುಳ್ಳು. ಅದೊಂದೇ ಕಾರಣವಲ್ಲ, ಅದರ ಜೊತೆಗೆ ನೀನು ಶ್ರೀಮಂತ ಮತ್ತು ಮೆಚ್ಯೂರ್ಡ್ ಅನ್ನೋದನ್ನ ನಿನ್ನ ಮಾತು ತೋರಿಸಿಯಾಗಿತ್ತು. ಎಲ್ಲೋ ಅಪ್ಪನಂತೆ ಅನ್ನಿಸಿದ್ದೆ.


ನಿನಗೆ ಮದುವೆ ಆಗಿದೆ ಅಂತ ನೀನು ಹೇಳೋಕ್ಕೆ ಮೊದಲೇ ನನಗೆ ಗೊತ್ತಾಗಿ ಹೋಗಿತ್ತು. ನೀನು ನನ್ನ ಆವರಿಸಿಕೊಳ್ಳಲು ಮಾಡುತ್ತಿರುವ ಪ್ರತಿಯೊಂದು ಪ್ರಯತ್ನ, ಮಾತು,ನಗು,ಪ್ರೀತಿ,ದುಃಖ,ದುಮ್ಮಾನ.. ಎಲ್ಲವೂ.. ಆದರೂ ನಿನ್ನಿಂದ ನನ್ನ ಬಿಡಿಸಿಕೊಳ್ಳಲು ಆಗುತ್ತಿರಲಿಲ್ಲ. ನನ್ನ ವಯಸ್ಸಿನ, ನನ್ನ ಪ್ರೀತಿಸುತ್ತಿದ್ದ, ನನ್ನ ಸೌಂದರ್ಯವನ್ನು ಹೊಗಳುತ್ತಿದ್ದ, ನನ್ನ ಮುಂದೆ ಅವರ ಪ್ರೀತಿಯನ್ನು ಹೇಳಿಕೊಳ್ಳುತ್ತಿದ್ದ ಹುಡುಗರೆಲ್ಲಾ ಬುದ್ದಿ ಬಲಿಯದ ಶರಣಾಗತ ಹುಡುಗರಂತೆ ಕಾಣುತ್ತಿದ್ದರು. ನನಗೆ ಅವರ ಪ್ರೀತಿ ಅರ್ಥವೇ ಆಗುತ್ತಿರಲಿಲ್ಲ, ಅವರ ಪ್ರೀತಿಯನ್ನು ಆಡಿಸಿಕೊಂಡು ನಗುತ್ತಿದ್ದೆ. ನೀನು ಸಿಕ್ಕಿದೆ. ನಿನ್ನ ಮಾತುಗಳು ಅಪ್ಪಟ ಆರಾಧನೆ ನೀನು ಯಾವತ್ತಿಗೂ ನನ್ನ ಪ್ರೀತಿಸುತ್ತೀನಿ ಅಂತ ಹೇಳಿರಲಿಲ್ಲ, ಆದರೆ ನನ್ನ ಮನಸ್ಸಿನ ಪ್ರತಿಯೊಂದು ಎಳೆಯನ್ನೂ ಅರ್ಥ ಮಾಡಿಕೊಂಡು ಅದನ್ನು ವಿವರಿಸುತ್ತಿದ್ದೆ. ಸಮಾಧಾನ ಪಡಿಸುತ್ತಿದ್ದೆ. ನನ್ನ ಸೌಂದರ್ಯವನ್ನು ನಿನ್ನ ಕಣ್ಣ ತುಂಬ ತುಂಬಿಕೊಳ್ಳುತ್ತಿದ್ದೆ, ಹಾಗೆ ತುಂಬಿಕೊಳ್ಳುತ್ತಿದ್ದೇಯೆಂಬುದನ್ನು ನನಗೆ ತಿಳಿಯುವ ಹಾಗೆ ಮಾಡುತ್ತಿದ್ದೆ.


ಚೆನ್ನೈನಿಂದ ಬೆಂಗಳೂರಿಗೆ ಬರುವ ಟ್ರೇನಿನ ಎ.ಸಿ. ಕೋಚಿನಲ್ಲಿ ಕಿಟಕಿ ಪಕ್ಕ ಕುತು, ಕಿಟಕಿ ಹೊರಗೆ ನೋಡುತ್ತಿದ್ದ ನಾನು ಟ್ರೇನ್ ಹೊರಟಾಗ "ಸದ್ಯ ನನ್ನ ಪಕ್ಕ ಯಾರೂ ಇಲ್ಲವಲ್ಲ ತಲೆ ತಿನ್ನೋದಕ್ಕೆ." ಅಂದುಕೊಂಡು ಕಣ್ಣು ಮುಚ್ಚಿದೆ ಆದರೆ ಒಂದೇ ನಿಮಿಷ "ನಿಮ್ಗೆ ಡಿಸ್ಟರ್ಬ್ ಮಾಡ್ತಿದಿನಿ ಅನ್ಸತ್ತೆ ಇದು ನನ್ನ ಸಿಟು. ನಿಮ್ಮ ಲಗೇಜನ್ನು ಕೆಳಗಿಟ್ಟುಕೊಳ್ಳುತ್ತೀರ?" ಅಂದೆ ನೀನು. ಕಣ್ಣು ಬಿಟ್ಟು ನೋಡಿದೆ ನಿನ್ನ ಕಣ್ಣು ಗಳ ಭರ್ತಿ ಆರಾಧನೆ, ಆಶ್ಚರ್ಯ..'ಇನ್ನೊಬ್ಬ ಜೊಲ್ಲು.' ಎಂದು ಮನಸಲ್ಲೇ ಅಂದುಕೊಂಡು ಬ್ಯಾಗನ್ನು ಕೆಳಗಿಟ್ಟು ಮತ್ತೆ ಕಣ್ಣು ಮುಚ್ಚಿದೆ. "ಇನ್ನು ಇವನು ಮಾತಾಡಿಸುತ್ತಾನೆ ಹೇಗೆ ಶುರು ಮಾಡಬಹುದು?" ಅಂತ ಕಲ್ಪಿಸಿಕೊಳ್ಳುತ್ತಿದ್ದರೆ ನೀನು ನನ್ನ ಮಾತಾಡಿಸಲೇ ಇಲ್ಲ. ನನಗೆ ಹಠ ಹುಟ್ಟಿತು. ನಾನು ಮಲಗಿದ್ದೀನಿ ಅಂದುಕೊಂಡು ನೀನು ಮಾತಾಡಿಸುತ್ತಿಲ್ಲ ಅಂತ ಕಣ್ಣು ಬಿಟ್ಟು ಕಿಟಕಿ ಹೊರಗೆ ನೋಡುತ್ತಾ ಕೂತೆ. ನೀನು ಮಾತಾಡಿಸಲಿಲ್ಲ. ನನ್ನ ನೋಡುತ್ತಿರಬಹುದು ಅಂತ ಸುಮ್ಮನೆ ನಿನ್ನ ಕಡೆ ನೋಡಿದೆ ಇಲ್ಲ ನಿನ್ನ ಲೋಕವೇ ನಿನಗೆ. ನನಗೇ ಸಿಟ್ಟು ಬಂದು ನಾನೇ ಮಾತಾಡಿಸಿದೆ.


ನನ್ನ ಜೊತೆ ಮಾತಾಡದಿದ್ದರೆ, ನಾನು ಒಂದು ದಿವಸ ಸಿಗದಿದ್ದರೆ ಬದುಕು ಸಾಧ್ಯವಿಲ್ಲ ಅನ್ನೋ ಹಾಗೆ ಆಡುತ್ತಿದ್ದೆ ನೀನು. ಒಂದು ದಿನ 'ಮುತ್ತು ಕೊಡು' ಎಂದು ನೀನು ಕೇಳಿದಾಗ ಆಶ್ಚರ್ಯ ಆಗಿತ್ತು ನನಗೆ. ನಾವೆಷ್ಟು ಪ್ರೀತಿಯ ಮಾತು ಆಡಿದ್ದರೂ ಪ್ರೀತಿಯ ಆ ಮುಖದ ಬಗ್ಗೆ ಯೋಚಿಸೇ ಇರಲಿಲ್ಲ ನಾನು. ಸುಮ್ಮನೆ ನಿನ್ನ ಮುಖ ನೋಡಿದೆ, ನಿನ್ನ ಕಣ್ಣುಗಳು ನನ್ನ ತಿನ್ನುತ್ತಿದ್ದವು, ಹಿಂದೆ ನನ್ನ ಬಹಳಷ್ಟು ಜನ ನನ್ನ ಹಾಗೆ ನೋಡಿದ್ದರು ಆದರೆ ಆವಾಗ ಅದು ಯಾವ ಭಾವನೆ ಎಂದು ಅರ್ಥ ಆಗಿರಲಿಲ್ಲ ನನಗೆ. ಈಗ ಆ ಎಲ್ಲಾ ಕಣ್ಣುಗಳು ನನ್ನ ಅವಸರಿಸಿ ತಿನ್ನುತ್ತಿವೆ , ದೇಹದ ಮೇಲೆಲ್ಲಾ ಒಟ್ಟಿಗೆ ಸರಿದಾಡುತ್ತಿವೆ ಅನ್ನಿಸಿ, ತಲೆ ಸಿಡಿದು ಹೋಗುತ್ತಿದೆ ಅನ್ನಿಸಿತು. ಅಸಹ್ಯವಾಗಿ ಕಣ್ಣು ಮುಚ್ಚಿದೆ. ಅದು ನಿನಗೆ ಸಮ್ಮತಿ ಅನ್ನಿಸಿರಬೇಕು ನೀನು ಮುಂದುವರಿದೆ...

ನನ್ನ ಮೀಸಲು ಮುರಿದ ದಿನ ಅಳಲಿಲ್ಲ ನಾನು ಏನೂ ಅನಿಸಲಿಲ್ಲ ನನಗೆ ಆದರೆ ನನ್ನ ಕಲ್ಪನೆಯ ಮಿಲನ ಒಬ್ಬರೊನ್ನೊಬ್ಬರು ಹಂಚಿಕೊಳ್ಳುವುದು ಅದಕ್ಕೆ ಬೆಂಕಿ ಹಾಕಿದ್ದೆ ನೀನು ನಾನು ಅದಕ್ಕೆ ತಯಾರಾಗುವ ಮೊದಲೇ ನೀನು ನನ್ನ ಪಡೆದಾಗಿತ್ತು

ಮಿಲನವೆಂದರೆ ಅದೂ ಮಾತಿನಂತೆ ಮೊದಮೊದಲು ಆದ ಪರಿಚಯದಂತೆ. ಮೌನದಿಂದ ಕಣ್ಗಳ ಮುಗ್ಧ ನೋಟ, ನಗುವಿನ ಪರಿಚಯ-ಇಷ್ಟಿಷ್ಟೇ ಮಾತು, ನಡುವೆ ಸ್ವಲ್ಪ ಸ್ವಲ್ಪವೇ ಇಣುಕುವ ತುಂಟತನ- ಮುಂದುವರಿದು ಮಾತಿನ ಮಂಟಪ. ಹಾಗೇ ಮಿಲನವೆಂದರೆ ಚೂರು ಚೂರಾಗಿಯೇ ಶುರುವಾಗಿ ತುಂಟತನವನ್ನು ಮೀಟಿ, ಅಲ್ಲಲ್ಲಿ ತಡಕಿ ಇನ್ನೆಲ್ಲೋ ಬೆದಕಿ ಮುಂದುವರೆದು ಐಕ್ಯವಾಗುವ ಭವ್ಯ ಪ್ರಕ್ರಿಯೆ. ಸುಮ್ಮನೆ ಒಬ್ಬರು ಇನ್ನೊಬ್ಬರನ್ನು ತಿನ್ನುವುದಕ್ಕೆ ಮಿಲನವೆಂಬ ದೊಡ್ಡ ಹೆಸರು ಬೇಕಿಲ್ಲ.


ನೀನು ನನ್ನಿಂದ ಅಪೆಕ್ಷಿಸೋದಾದರೂ ಏನನ್ನ ಅಂತ ಅರ್ಥ ಮಾಡಿಕೊಳ್ಳಬೇಕಿತ್ತು ನಾನು. ಹದಿನಾರು ಹದಿನೇಳು ವರ್ಷದ ಹುಡುಗಿಗೆ ಅದೆಲ್ಲಾ ಅರ್ಥವಾಗೋದಾದರೂ ಹೇಗೆ? ನೀನು ಕೆಟ್ಟವನಾ? ಊಹುಂ ಗೊತ್ತಾಗಲಿಲ್ಲ ನಂಗೆ!


ಇಲ್ಲ ನೀ ನನ್ನ ಪ್ರೀತಿಸಲೇ ಇಲ್ಲ ಅಂತ ಹೇಳ್ತಿಲ್ಲ ನಾನು ಎಲ್ಲಿ ತುಂಬಿಡಲಿ ಎಂದು ಗೊತ್ತಾಗದಷ್ಟು ಪ್ರೀತಿಸುತ್ತಿದ್ದೆ ಅನ್ನಿಸುತ್ತಿತ್ತು.
ಆದರೆ ಪ್ರೀತಿಸುವವರು ತುಂಬಾ ನಂಬುತ್ತಾರೆ ಅಲ್ಲವ? ನೀನು ನನ್ನ ನಂಬುತ್ತಲೇ ಇರಲಿಲ್ಲ! 'ನಂಬದೇ ಇರುವುದಕ್ಕೂ' 'ಅಪನಂಬಿಕೆ' ಎನ್ನುವುದಕ್ಕೂ ವ್ಯತ್ಯಾಸವಿದೆ. ನಿನ್ನ ಮನೆಯ ನಂಬರ್ ಏನೆಂಬುದು ಇಂದಿಗೂ ನನಗೆ ಗೊತ್ತಿಲ್ಲ. ನಿನ್ನ ಮನೆಯಿರುವ ರಸ್ತೆಯಲ್ಲಿ ಎಂದೂ ಓಡಾದಿದ್ದೇ ಇಲ್ಲ ನಾನು. ನಿನ್ನ ಸ್ನೇಹಿತರು ಬಂಧುಗಳು ಯಾರೆಂಬುದರ ಬಗ್ಗೆ ಎಂದು ಹೇಳಲೇ ಇಲ್ಲ ನೀನು. ಆದರೆ ನನ್ನ ಸ್ನೇಹಿತರ ಬಂಧುಗಳ ವಿಳಾಸವೆಲ್ಲವೂ ತಿಳಿದಿತ್ತು ನಿನಗೆ. ನನ್ನ ಪತ್ರಗಳೆಲ್ಲವನ್ನೂ ಜೋಪಾನವಾಗಿ ಇರಿಸಿಕೊಂಡಿದ್ದೆ ನೀನು ಪತ್ರಗಳನ್ನೇ ಬರೆಯುತ್ತಿರಲಿಲ್ಲ...

ಆದರೆ ಇವೆಲ್ಲವುದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ನಾನು. ನನಗೆ ಬೇಕಾಗಿದ್ದಿದ್ದು ನಿನ್ನ ಪ್ರೀತಿ ಮಾತ್ರ.. ಹಾಗಂತ ನನ್ನ ಅಪ್ಪ "ಅಮ್ಮ ಪ್ರೀತಿಸುತ್ತಿರಲಿಲ್ಲ. ಅದಕ್ಕೆ ನಿನ್ನ ಬಳಿ ಬಂದೆ, ಹೊರಗಿನ ಪ್ರೀತಿಗೆ ಹಂಬಲಿಸಿದೆ." ಎಂದೆಲ್ಲಾ ಸುಳ್ಳು ಹೇಳುವುದಿಲ್ಲ ನಾನು. ತುಂಬ ಪ್ರೀತಿಸುತ್ತಿದ್ದರು ಮನೆಯವರೆಲ್ಲ ಎಲ್ಲರಿಗೂ ನಾನೆಂದರೆ ಮುದ್ದು ಆದರೂ ಹೊರಗಿನ ಪ್ರೀತಿಗೆ ಕಾತರಿಸಿದೆ. ಅದು ಯಾರ ತಪ್ಪು? ನಿಜವಾಗಲೂ ಹಾಗೆ ಅಪೇಕ್ಷಿಸುವುದು ತಪ್ಪೇ?



ದಿನೇದಿನೇ ನಿನ್ನ ಪ್ರೀತಿ ಹೆಚ್ಚಾಗುತ್ತಿತ್ತು ಮೊದಮೊದಲು ಇಷ್ಟ ಆಗುತ್ತಿದ್ದ ನಿನ್ನ ಪೊಸೆಸ್ಸಿವ್ನೆಸ್ ಬರಬರುತ್ತಾ ಉಸಿರುಕಟ್ಟಿಸತೊಡಗಿತ್ತು.
"ನನ್ನ ಹೆಂಡತಿ ನನ್ನ ಅರ್ಥವೇ ಮಾಡಿಕೊಳ್ಳೋಲ್ಲ. ಅವಳಿಗೆ ಅವಳ ಓದೇ ಹೆಚ್ಚು. ನನ್ನ ಬೇಕು ಬೇಡಗಳಿಗೆ ಸರಿಯಾಗಿ ಸ್ಪಂದಿಸಲ್ಲ." ಎಂದು ನೀ ಹೇಳಿದ ದಿನ ಹಿಂಸೆ ಆಗಿತ್ತು ನನಗೆ. ಅವಳು ಸರಿ ಇಲ್ಲ ಅದಕ್ಕೆ ನಿನ್ನ ಕಡೆ ವಾಲಿದೆ ಅನ್ನೋ ಎಕ್ಸ್ಕೂಸ್ ಅಲ್ಲವ? ಕಾಡೋ ಗಿಲ್ಟಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನ. ಅವ್ಳ ಬಗ್ಗೆ ಇನ್ನೂ ಹಾಗೇ ಏನೇನೋ ಹೇಳಿ ನಿನ್ನ ನೀನು ಸಮರ್ಥಿಸಿಕೊಳ್ಳುತ್ತಿದ್ದರೆ ಅಸಹ್ಯ ಕಿಬ್ಬೊಟ್ಟೆಯಾಳದಿಂದ ಉಕ್ಕುತ್ತಿತ್ತು ನನಗೆ. ನಿನ್ನ ಹೆಂಡತಿ ಚಂದದ ಹೆಂಗಸು. ದೊಡ್ಡ ಕಾಲೇಜೊಂದರಲ್ಲಿ ಲೆಚೆರರ್. ಇಷ್ಟ ಆಗುತ್ತಿದ್ದಳು ಎಲ್ಲರಿಗೂ, ನನಗೂ. ಅವಳು ಕೆಟ್ಟವಳಲ್ಲ, ಕೆಟ್ಟವಳಾದರೂ ನೀನು ಹಾಗೆ ಸಮರ್ಥನೆ ಮಾಡಿಕೊಳ್ಳಬಾರದಿತ್ತು. ತಪ್ಪು ಮಾಡಿದ್ದರೆ ತಾನೆ ಸಮರ್ಥನೆ? ನಿನಗೆ ನನ್ನ ಪ್ರೀತಿಸಿದ್ದು ಅನೈತಿಕ ಅನ್ನಿಸಿತ್ತಾ? ನೀನು ಇಷ್ಟ ಆಗ್ತಿಯ ಅದಕ್ಕೆ ಪ್ರೀತಿಸ್ತೀನಿ ಅನ್ನೋದು ಎಷ್ಟು ನೇರ ಅಲ್ಲವ.. ನೀನು ನನ್ನ ಪ್ರೀತಿಸೋದಕ್ಕೆ ಹೆಂಡತಿ ಕೆಟ್ಟವಳಾಗಬೇಕಿರಲಿಲ್ಲ...




ನದಿಗೆ ನೆನಪಿನ ಹಂಗಿಲ್ಲವೆಂದು ಹೇಳುತ್ತಾರೆ ನೀರಿನ ಮೇಲೆ ಚಿತ್ರ ಬರೆಯೋಕ್ಕಾಗೊದಿಲ್ಲ ಕತ್ತಿಯಲ್ಲಿ ಗಾಯ ಮಾಡೊಕ್ಕಾಗುವುದಿಲ್ಲ ಅನ್ನುತ್ತಾರಲ್ಲ ಬರೆದ ಚಿತ್ರಗಳು ಆದ ಗಾಯಗಳು ಎಲ್ಲವೂ ಕಾಣಲೇ ಬೇಕೆಂದಿದೆಯೇನು? ನದಿ ಎಂದರೇನು ಚಲಿಸುವ, ಹರಿಯುವ, ಉಕ್ಕುವ ನೀರಲ್ಲವೇ? ಈ ನೀರಿಗೆ ನೆನಪಿನ ಹಂಗು ಮಾತ್ರವಲ್ಲ, ಹೆಸರು ಬದಲಿಸಿಕೊಳ್ಳುವ ಚಟವೂ ಇದೆ. ಇಲ್ಲಿ ಪುಟ್ಟಗೆ ಹರಿಯುವ ಝರಿ ಎನಿಸಿಕೊಂಡರೆ, ಮತ್ತೆಲ್ಲೋ ಜಲಪಾಟವೆಂಬ ಭವ್ಯತೆ. ಮುಂದೆಲ್ಲೋ ನದಿ ಎಂದು ಸುಮ್ಮನಾದರೆ, ಮೊಗದೊಮ್ಮೆ ಸಮುದ್ರದ ವಿಷಾಲತೆ. ಸಮುದ್ರದ ಉಪ್ಪು ನದಿಯ ಗಾಯದ ಕಣ್ಣೀರಿಗೆ ಸಾಕ್ಷಿ. ನದಿಗೆ ನೆನಪಿನ ಹಂಗಿದೆ! ನದಿ ಹೆಣ್ಣೇ? ಛೆ! ನನ್ನ ತಲೆಯಲ್ಲಿ ಎನೇನೋ ಯೋಚನೆಗಳು ಅರ್ಥವಿಲ್ಲದ್ದು.
ಕತ್ತಲೆಯಲ್ಲಿ ಇರುಳು ಹೊರಳುತ್ತಿದೆ. ಎದುರು ಸಮುದ್ರವೆಂಬ ಹೆಸರಿನ ಹಂಗು ಹೊತ್ತು ಉಕ್ಕುತ್ತಿರುವ ನೀರಿನ ಬಣ್ಣ ಕಪ್ಪೋ? ನೀಲಿಯೋ? ಎರೆಡೂ ಅಲ್ಲ ಕತ್ತಲೆ ನನ್ನ ನಿನ್ನ ಸಂಭಂದದ ಬಣ್ಣವೇನು? ಗುಲಾಬಿಯೊ.. ನೀಲಿಯೋ.. ಎರಡೂ ಅಲ್ಲ....


ನನಗೆ ಬಣ್ಣದ ಆಟ ಹೇಳಿಕೊಡಲು ಬಂದವನನ್ನು ಒಳಗೆ ಬಿಟ್ಟುಕೊಡಲೂ ಭಯವಾಗುತ್ತಿತ್ತು. ನಿನ್ನ ಭಯ. ಹೌದು ನಿನಗೆ ನಾನು ಹೆದುತ್ತೀದ್ದೇನೆಂಬುದು ನನಗೆ ಸ್ಪಷ್ಟವಾಗಿ ಗೊತ್ತಾಗಿದ್ದೇ ಆಗ.ಬಣ್ಣ ತುಂಬಿಸಲು ಬಂದ ಹುಡುಗನಿಗೆ ಯಾರೋ ಕೆಂಬಣ್ಣದ ರುಚಿ ತೋರಿಸಿದ್ದಾರೆಂಬುದು ತಿಳಿಯಿತು. ಅವನು ಆಸ್ಪತ್ರೆಯೊಂದರಲ್ಲಿ ಚೆತರಿಸಿಕೊಳ್ಳುತ್ತಿದ್ದ. ಆವಾಗಲೇ ಅನ್ನಿಸಿದ್ದು ನಿನ್ನಿಂದ ತಪ್ಪಿಸಿಕೊಳ್ಳಲೇಬೆಕೆಂದು. ದೂರ ಓಡಿಹೋಗೋಣವೆಂದುಕೊಂಡೆ ಆದರೆ ನನ್ನ ಓದು ಮುಗಿಯಲು ಇನ್ನೂ ಆರು ತಿಂಗಳಿತ್ತು. ಪ್ರೀತಿ ಸತ್ತಿತ್ತು. ಅಲ್ಲಿಯವರೆಗೂ ನಿನ್ನ ಜೊತೆ ಪ್ರೀತಿಯ ನಾಟಕ ಆಡದೆ ವಿಧಿ ಇರಲಿಲ್ಲ. ಅಪ್ಪನಿಗೆ "ಮದುವೆ ಮಾಡಿಬಿಡು" ಎಂದು ಹೇಳೋಣವೆಂದುಕೊಂಡೆ ಆದರೆ ಕೆಲವುದಿನಗಳಾದರೂ ದುಡಿದು ಸ್ವತಂತ್ರವಾಗಿರಬೇಕೆಂಬನನ್ನ ಹಂಬಲವನ್ನು ಹತ್ತಿಕ್ಕಲಾಗಲಿಲ್ಲ. ಆರು ತಿಂಗಳ ನಂತರ ನಿನ್ನಿಂದ ದೂರ ಮೇಘಾಲಯಕ್ಕೆ ಹೋದೆ ಫೋನು ಕೊಳ್ಳಲಿಲ್ಲ, ನಿನ್ನ ಜೊತೆಯ ಸಂಪರ್ಕ ಸಂಪುರ್ಣವಾಗಿ ಕಡಿದುಕೊಂಡಿದ್ದೆ.ನಿನಗೆ ಪತ್ರ ಬರೆಯುವ ತಾಕತ್ತಿಲ್ಲವೆಂಬುದು ಗೊತ್ತಿತ್ತು . ಎಲ್ಲಿ ಮನೆಗೆ ಹೊಗಿ ವಿಚಾರಿಸುತ್ತಿಯೋ? ಒಮ್ಮಿಂದೊಮ್ಮೆ ಧುತ್ ಎಂದು ಪ್ರತ್ಯಕ್ಷವಾಗಿಬಿಟ್ಟರೆ? ಎಂದು ಬಹಳಷ್ಟು ದಿನ ಹೆದರಿದ್ದೆ.ಆದರೆ ಹಾಗೇನಾಗಲಿಲ್ಲ. ಇಗ ನನ್ನ ಬದುಕಿನಲ್ಲಿ ಬಣ್ಣಗಳ ಮೇಳ! ಅವನದು ಸಮುದ್ರ ಪ್ರೀತಿ.


ಮೊನ್ನೆ ನಿನ್ನ ಫ್ಲೈಟಿನಲ್ಲಿ ನೋಡಿದೆನಲ್ಲ ನೀನು ಮಲಗಿದ್ದೆ. ಪಕ್ಕದಲ್ಲಿ ಇನ್ಯಾರೋ ಹುಡುಗಿ. ಸುಮ್ಮನೆ ಹಿಂದಿನದೆಲ್ಲಾ ನೆನಪಾಯಿತು. ನದಿಗೆ ನೆನಪಿನ ಹಂಗು!
ನೀನು ಕೆಟ್ಟವನಾ? ಉಹುಂ ಇನ್ನು ಗೊತ್ತಾಗುತ್ತಿಲ್ಲ...

30 comments:

ARUN MANIPAL said...

:-)

ವಿ.ರಾ.ಹೆ. said...

nice one :-)

ರಂಜನಾ ಹೆಗ್ಡೆ said...

ತುಂಬಾ ಚನ್ನಾಗಿ ಬರೆದ್ದಿದೀಯಾ ನಯ್ನಿ.

Sushrutha Dodderi said...

"ಸಮುದ್ರದ ಉಪ್ಪು, ನದಿಯ ಗಾಯದ ಕಣ್ಣೀರಿಗೆ ಸಾಕ್ಷಿ"

ಐಶಹಬ್ಭಾಷ್! ಮೆಚ್ಚಿದೆ! ತುಂಬಾ ಚನಾಗ್ ಬರ್ದಿದೀ..

ಶಾಂತಲಾ ಭಂಡಿ (ಸನ್ನಿಧಿ) said...

ಮೃಗನಯಿನಿಯವರೇ...
ತುಂಬಾ ಚೆನ್ನಾಗಿ ಮೂಡಿ ಬಂದಿದೆ.

Unknown said...

"ನೀನು ಕೆಟ್ಟವನಾ? ಉಹುಂ ಇನ್ನು ಗೊತ್ತಾಗುತ್ತಿಲ್ಲ..."ಎಂಬುವ ಕಥಾ ನಾಯಕಿ ಯ ಮಾತು, ಅವಳ ಚಂಚಲತೆ ಗೆ ಹಿಡಿದ ಕನ್ನಡಿ ಯಾ ಅಥವಾ judgemental error, ಗೊತ್ತಾಗುತ್ತಿಲ್ಲ...

ಮಹೇಶ ಎಸ್ ಎಲ್ said...

ನೀನು ನನ್ನ ನಂಬುತ್ತಲೇ ಇರಲಿಲ್ಲ! 'ನಂಬದೇ ಇರುವುದಕ್ಕೂ' 'ಅಪನಂಬಿಕೆ' ಎನ್ನುವುದಕ್ಕೂ ವ್ಯತ್ಯಾಸವಿದೆ. ಎಲ್ಲಿಂದ ಹೆಕ್ಕತಿರಾ ನೀವು ಈ ತರಹದ ವಿಷಯಗಳನ್ನ ನದಿಗೆ ನೆನಪಿನ ಹಂಗು ಅದ್ಭುತ

ಶ್ರೀನಿಧಿ.ಡಿ.ಎಸ್ said...

!!!

ಮೃಗನಯನೀ said...

@Arun
;-) ;-)

@Vikaas

thnx ಕಣೋ..

@Ranjana

thnx ಹುಡ್ಗಿ

@Sushrutha
ಏನೋ ನಿಮ್ಮಂಥೋರ್ ಆಶಿರ್ವಾದ;-)

@Shantala

thnx dear... ಅವರೇ ಇವರೇ ಅಂತೆಲ್ಲಾ ತುಂಬ ಗೌರವ ಕೊಡ್ಬೇಡಿ plzzz ಚನ್ನಾಗ್ ಬರೆದ್ದಿದೀಯಾ ಕಣೇ ಅಂದ್ರೆ ಖುಷಿಯಾಗತ್ತೆ.;-)

ಮೃಗನಯನೀ said...

@ Prasad

ಚಂಚಲತೆ ಅಥವ judgement error alla...
ಕೆಟ್ಟವನೋ ಒಳ್ಳೆಯವನೋ ಎಂದು ಗೊತ್ತಾಗದ ವಾಸ್ತವತೆ. ಯಾರನ್ನಾದರೂ ಇಷ್ಟ ಪಡೋಕ್ಕೆ ಅಥವಾ ಇಷ್ಟ ಪಡದೆ ಇರೋಕ್ಕೆ ಪೂರ ಕೆಟ್ಟವರೋ ಇಲ್ಲಾ ಪೂರ ಒಳ್ಳೆಯವರೋ ಅಗಬೇಕಿಲ್ಲ ಅಲ್ಲವ?

ಮೃಗನಯನೀ said...

@ MahEsh
ಧನ್ಯವಾದಗಳು

@Shreeni
??? ;-0

Bigbuj said...

Hudgi...Full Dard andre Dard!!!#$%"____)))

Unknown said...

ಎನ್ ಗೊತ್ತಾ ನಿಂಗೆ ಹೀಗೆಲ್ಲ ಬರೆಯೋಕೆ ಹೇಗೆ ಸಾದ್ಯ ಆಗತ್ತೆ ಅಂತ ಮದುವೆ ಆಗಿಲ್ಲ ಅಂತಿಯಾ? ಅದ್ರುನು ಎಲ್ಲ ಭಾವನೆಗಳನ್ನ ಹೇಗೆ ಬರೆಯೋಕೆ ಸಾದ್ಯ ಆಗತ್ತೆ ಗ್ರೇಟ್ ಕಾಣೆ ಹುದ್ಗಿ ನೀನು

ಮೃಗನಯನೀ said...

@Sharnaa
;-)

@Anu
'ಕಲ್ಪನೆಯ ಕಣ್ಣು ಹರಿವನಕ.....' ಗ್ರೇಟ್ ಅಂತೆಲ್ಲ ಅಂದು ನಂಗೆ ಜಂಬ ಬಂದು ಬಿಟ್ಟ್ರೆ ಕಷ್ಟ ಮಾರಾಯ್ರೆ . ಧನ್ಯವಾದಗಳು. ಪ್ರೀತಿ ಹೀಗೆ ಇರಲಿ.

VENU VINOD said...

ನದಿಗೆ ನೆನಪಿನ ಹಂಗಿಲ್ಲವೆಂದು ಹೇಳುತ್ತಾರೆ ...
ಈ ಮೇಲಿನ ಪೂರ್ತಿ ಪ್ಯಾರಾ ಮನತಟ್ಟಿತು

Unknown said...

ಮೃಗನಯನಿ,,,

ನಿಮ್ಮ ಕಥನ ಶೈಲಿ ಮತ್ತು ಸೂಕ್ಷ್ಮ ಗ್ರಹಿಕೆ ನಿಜವಾಗಿಯೂ ಕುತೂಹಲಕಾರಿ. ಸೂಕ್ಷ್ಮ ಸಂವೇದನೆ ಕಥೆಗಾಗಿ ಥ್ಯಾಂಕ್ಸ್...

ಮೃಗನಯನೀ said...

@ವೇಣು
ನನಗೂ ಅದು ಇಷ್ಟ ಆಯ್ತು..:-)

@ಶಶಿ
ಧನ್ಯವಾದಗಳು. ಹೀಗೇ ಪ್ರಿತಿಯಿಂದ ಗಮನಿಸುತ್ತಿರಿ. ಆಗಾಗ ಗದರುತ್ತಿರಿ...

ವಿಜಯ್ ಜೋಶಿ said...

Chennagidhe:-)

Shree said...

ನದಿಯ ನೆನಪಿನ ಹಂಗು ಬರೆದವರಿಗೆ ನಾ ಹೇಳಬೇಕೆಂದುಕೊಂಡಿದ್ದನ್ನ ಕಥೆಯ ಮೂಲಕ ನೀವೇ ಹೇಳಿಬಿಟ್ರಿ,ಕಂಗ್ರಾಟ್ಸ್!

ಮೃಗನಯನೀ said...

@ Joshi

thnx hudga..

ಮೃಗನಯನೀ said...

@Shree
ನದಿಯ ನೆನಪಿನ ಹಂಗು ಓದಿದೆ ಇವತ್ತು. ಓದೋಕ್ಕೆ ಮುಂಚೆ ಮುಖ ಪುಟದಲ್ಲಿದ್ದ ಅವರ "ಈ ಕಾದಂಬರಿಯಲ್ಲಿ ಆಳವಿಲ್ಲ ವಿಸ್ತಾರವಿಲ್ಲ.." ಅಂತೆಲ್ಲಾ ಏನೇನೋ ಬರೆದುಕೊಂಡಿರುವುದನ್ನು ನೋಡಿ ವಿಮರ್ಶಕರು ಬಯಬಹುದದ್ದನ್ನೆಲ್ಲಾ ಮೊದಲೇ ಹೇಳಿಕೊಂಡು ಅವರಿಗೆ ಹೇಳೋಕೇನೂ ಆಗದ ಹಾಗೆ ರಕ್ಷಣಾ ತಂತ್ರ ರೂಪಿಸಿದ್ದಾರ ಅಂತ ಅನುಮಾನವಾಯಿತು...

ಆದರೆ ಓದಿದಮೇಲೇ ಗೊತ್ತಾಗಿದ್ದು ನಮ್ಮನ್ನೆಲ್ಲಾ ದಾಟಿ ಹೋಗೋ ಶಕ್ತಿ ಇದೆ ಈ ಕಾದಂಬರಿಗೆ ಅಂತ. ತುಂಬ ನಿಜ ಅನ್ನಿಸಿತು ಕಾದಂಬರಿ...

ಕಾದಂಬರಿ ಓದಿದ್ದು ಇವತ್ತಾದರಿಂದ ಅದಕ್ಕೆ ತುಂಬ ಮೊದಲೇ ಬರೆದ ಕತೆ ಉತ್ತರವಾದೀತಾದರೂ ಹೇಗೆ.. ಅದಕ್ಕೆಲ್ಲಾ ಉತ್ತರ ಕೊಡೋಷ್ಟು ಶಕ್ತಿ ನನ್ನಲ್ಲಿದೆಯೇ? ಅಸಲಿಗೆ ಅದಕೊಂದು ಉತ್ತರ ಕೊಡುವ ಅವಶ್ಯಕತೆ ಇದೆಯೇ..?

"ನೀರಿನ ಮೇಲೆ ಚಿತ್ರ ಬರೆಯೋಕ್ಕಾಗೊದಿಲ್ಲ ಕತ್ತಿಯಲ್ಲಿ ಗಾಯ ಮಾಡೊಕ್ಕಾಗುವುದಿಲ್ಲ ಅದಕ್ಕೆ ನದಿಗೆ ನೆನಪಿನ ಹಂಗಿಲ್ಲ."
ಎಂಬುದು ಕಾರ್ನಾಡರ 'ಹಯವದನ' ನಾಟಕದ ಸಾಲುಗಳು ಅದನ್ನು ಓದುತ್ತಿದ್ದಂತೆ ನದಿಗೆ ನೆನಪಿನ ಹಂಗು ಇರೊದಿಲ್ಲವೇ ಎಂಬ ಪ್ರಶ್ನೆ ಕಾಡಿತು.ನೆನಪಿನ ಹಂಗಿರುತ್ತದೆ ಅಂತ ತೀವ್ರವಾಗಿ ಅನ್ನಿಸಿದ್ದರಿಂದ ಮೂಡಿದ್ದು ಇದು...

ನಿಮಗೆ ಇದು ಉತ್ತರ ಅನ್ನಿಸಿದ್ದು ಯಾಕೆ ಅಂತ ಯೋಚಿಸ್ತಿದೀನಿ..ಯಾಕೆ ಹೇಳ್ತೀರ??

ತೇಜಸ್ವಿನಿ ಹೆಗಡೆ said...

ಕತ್ತಲೆ ನನ್ನ ನಿನ್ನ ಸಂಭಂದದ ಬಣ್ಣವೇನು? ನಿಜಕ್ಕೂ ಈ ಸಂಬಂಧಕ್ಕೆ ಬೆಳಕಿನ ಭವಿಷ್ಯವಿಲ್ಲ. ಚೆನ್ನಾಗಿದೆ.

ಸ್ವಗತ.... said...

Very interesting..but confusing too! through out the story I was thinking - Why is your heroine so biased in her thoughts?
But a catchy story all the way. Keep going!

ಮೃಗನಯನೀ said...

@Tejasvini hegde

ಧನ್ಯವಾದಗಳು ತೇಜಸ್ವಿನಿ

@Swagatha
biased??? thnx 4r the comment.. keep peeping into my blog...

ಪಯಣಿಗ said...

Heege chenda bareeta bareeta beLeeree.....balu ettarada guri nimmadirali...

Shree said...

ನೀರಿನ ಮೇಲೆ ಚಿತ್ರ ಬರೆಯೋಕ್ಕಾಗೊದಿಲ್ಲ ಕತ್ತಿಯಲ್ಲಿ ಗಾಯ ಮಾಡೊಕ್ಕಾಗುವುದಿಲ್ಲ ಅದಕ್ಕೆ ನದಿಗೆ ನೆನಪಿನ ಹಂಗಿಲ್ಲ - idu Karnaadara saalugalu anta gottirlilla, adre Jogiyavru barediddu modala dinave odi mugisidde nanu, nange adrindle aa Statement-na parichaya.

Jogi kathe odid mele Nadige nenapina hangu khanDitha ide aMta nange ansittu. Aa nantra nim kathe odidnalla? adke neevu kuda Jogi kathe odirteeri, athva atleast aa context gottirutte ankonDe, ashTe.

By the way, want to say it again, your narration style is superb, keep it up.

ಮೃಗನಯನೀ said...

@ಪಯಣಿಗ
ಧನ್ಯವಾದಗಳು..

@ಶ್ರೀ
ಧನ್ಯವಾದಗಳು... ಹೀಗೇ ಗಮನಿಸುತ್ತಿರಿ....

sunaath said...

Beautiful narration.

Unknown said...

hi nice read it, keep it up. Chennagi odisikoddue hogute.

wish all the best

Anonymous said...

really good story.