Monday, February 25, 2008

ನಾಣಿ

ಎಚ್ಚರವಾಯಿತು ನಾಣಿಗೆ. ಬೆಳಗಾಯಿತಾ ಅಂತ ತೊಟ್ಟಿ ಕಡೆ ನೋಡಿದ. ಜಗತ್ತಿನ ಕತ್ತಲನ್ನೆಲ್ಲಾ ತಮ್ಮ ತೊಟ್ಟಿಗೇ ಸುರಿದಿದ್ದಾರೇನೋ ಅಂತ ಅನುಮಾನ ಬಂತು. ಬೆಳಗಾಗಿಲ್ಲ ಹಾಗಿದ್ರೆ! ಇಷ್ಟು ಬೇಗ ಯಾಕೆ ಎಚ್ಚರ ಆಯ್ತು ಅಂದುಕೊಂಡು ಅಮ್ಮ ಮಲಗಿದ್ದ ಹಾಸಿಗೆ ಕಡೆ ನೋಡಿದ. ಅಮ್ಮ ಮಲಗಿದ್ದಳು. ಸಣ್ಣಗೆ ಗೊರಕೆ ಹೊಡೆಯುತ್ತಿರುವುದು ಅಮ್ಮನಾ? ತಮ್ಮನಾ? ಎಂದು ಗೊತ್ತಾಗದೆ ಮತ್ತೆ ತೊಟ್ಟಿಯ ಹೊರಗೆ ನೋಡತೊಡಗಿದ. ಚೂರು ಚೂರೇ ಬೆಳಗಾಗುತ್ತಿತ್ತು. ಮೊನ್ನೆ ಮೂಲೆಮನೆ ರಾಜು ಕೊಟ್ಟ ಪುಸ್ತಕದಲ್ಲಿದ್ದ ಮೂಡಲ ಮನೆಯ.... ಜ್ಞಾಪಕಕ್ಕೆ ಬಂತು. ಬೇಂದ್ರೆ ಒಬ್ಬ ಅನುಭಾವಿ ಕವಿ, ಹಿ ಮೂವ್ಸ್ ಫ್ರಮ್ ಸಿಂಪಲ್ ಟು ಸಬ್‌ಲೈಮ್ ಅಂದಿದ್ದ ರಾಜು. ಅನುಭಾವಿ ಕವಿ ಸಬ್‌ಲೈಮ್ ಎಂಬುವುದರ ಅರ್ಥ ಗೊತ್ತಾಗದಿದ್ದರೂ ಪದಗಳು ಚೆನ್ನಾಗಿವೆ ಅನ್ನಿಸಿತ್ತು. ಆ ಪದ್ಯದ ಸಾಲುಗಳನ್ನು ನೆನೆಪಿಸಿಕೊಳ್ಳತೊಡಗಿದ. ಗಂಧರ್ವರ ಸೀಮೆಯಾಯಿತು ಕಾಡಿನಾ.....

ನಾಣಿ ಇಷ್ಟು ಬೇಗ ಯಾಕೆ ಎದ್ಯಪ್ಪಾ... ಫೇಲಾಗಿದ್ರೆ ಏನಂತೆ? ಅದಕ್ಕೆಲ್ಲಾ ಹೀಗೆ ಚಿಂತೆ ಮಾಡ್ಕಂಡು ನಿದ್ದೆ ಬಿಟ್ರೆ ಆಗತ್ತಾ? ಪರೀಕ್ಷೆ ಸಮಯದಲ್ಲೇ ನೀನಿಷ್ಟು ಬೇಗ ಎದ್ದಿರ್‍ಲಿಲ್ಲ. ಸುಮ್ನೆ ಯೋಚಿಸಬೇಡ ಎನ್ನುತ್ತಾ ಎದ್ದು ತಾನು ಫೇಲಾಗಿದ್ದನ್ನು ಜ್ಞಾಪಿಸಿ ಬಚ್ಚಲಕಡೆಗೆ ಹೋದ ಅಮ್ಮನ ಮೇಲೆ ಸಿಟ್ಟು ಬಂತು ನಾಣಿಗೆ. ನಾ ಅದೇ ಚಿಂತೇಲ್ ಎದ್ದದ್ದು ಅಂತ ಇವಳಿಗೆ ಹೇಳ್ದವರ್‍ಯಾರು? ಅಂದುಕೊಂಡ.
ತಂಗಿ ಎದ್ದು ನಿದ್ದೆಗಣ್ಣಲ್ಲೆ ಕೈ ನೋಡುತ್ತಾ ಕೈಯ ಮೂಲೆಗಳಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿಯರನ್ನು ಹುಡುಕತೊಡಗಿದಳು. ನಾನು ಎದ್ದು ಇಷ್ಟು ಹೊತ್ತಾದರೂ ಹೇಳಿಕೊಳ್ಳಲೇ ಇಲ್ಲವಲ್ಲಾ ಎಂದು ಕೈಯ ನೋಡುತ್ತಾ ಮನಸ್ಸಿನಲ್ಲೇ,
ಕರಾಗ್ರೇ ವಸತೇ ಲಕ್ಷ್ಮೀ, ಕರಮಧ್ಯೇ ಸರಸ್ವತೀ
ಕರಮೂಲೆ ಸ್ಥಿತಾಗೌರಿ, ಪ್ರಭಾತೇ ಕರದರ್ಶನಂ... ಎಂದು ಹೇಳಿಕೊಂಡು ತಾನೂ ಆ ದೇವತೆಯರನ್ನೆಲ್ಲಾ ಕೈಯಲ್ಲಿ ಹುಡುಕಿದ.
ಹಲ್ಲುಜ್ಜಿದ ಶಾಸ್ತ್ರ ಮಾಡಿ ಬಂದ. ದೊಡ್ಡ ಅಕ್ಕ ಮತ್ತು ಅತ್ತೆ ಸೇರಿಕೊಂಡು ಎಲ್ಲರ ಹಾಸಿಗೆ ಸುತ್ತಿಡುತ್ತಿದ್ದರು. ತಮ್ಮ ಒಂದೊಂದಾಗಿ ಅದನ್ನೆಲ್ಲಾ ನಡುಮನೆಗೆ ಹೊತ್ತುಕೊಂಡು ಹೋಗಿ ಇಡುತ್ತಿದ್ದ. ಕೊನೆಯ ತಂಗಿ ಆಗಲೇ ಗುಡಿಸಲು ಶುರು ಮಾಡಿದ್ದಳು. ಇವಳಿಗೆ ಗುಡಿಸೋದಂದ್ರೆ ಯಾಕಿಷ್ಟು ಇಷ್ಟ? ಅನ್ನೋ ಬಗೆಹರಿಯದ ಪ್ರಶ್ನೆಯನ್ನ ಮತ್ತೆ ಕೇಳಿಕೊಂಡ.
-ಎರಡು-
ಕೊಟ್ಟಿಗೆಗೆ ಹೋಗಿ ಎಮ್ಮೆಗಳಿಗೆ ತೌಡು ಹಾಕಿ ಬರಲು ಹೊರಟ ನಾಣಿ. ತೌಡು ಕಲೆಸಿದ ಭಾರದ ಬಕೇಟನ್ನು ಹೊತ್ತು ಕೊಟ್ಟಿಗೆಗೆ ಹೋದಾಗ, ಇಡೀ ಎಂಟು ಹಳ್ಳೀಲೇ ನಿಮ್ಮ ಅಣ್ಣನಷ್ಟು ಚೆನ್ನಾಗಿ ಕೊಟ್ಟಿಗೆಯನ್ನು ಯಾರು ಕಟ್ಟಿಸಿಲ್ಲ ಅಂತ ಅಮ್ಮ ಅಂದಿದ್ದು ನೆನಪಾಯಿತು. ತೌಡಿನ ಬಕೇಟನ್ನು ಇಡಕ್ ಗತಿಯಿಲ್ಲ, ಎಮ್ಮೆಗಳು ಮುನ್ನುಗ್ಗಿ ಅದಕ್ಕೆ ಬಾಯಿ ಹಾಕಿದವು. ಇವಕ್ಕೆ ಯಾಕಿಷ್ಟು ಆತ್ರ? ಅಂದ್ಕೊಂಡ. ಹೌದು. ಅಣ್ಣ ಕೊಟ್ಟಿಗೆಯನ್ನು ತುಂಬಾ ಚೆನ್ನಾಗೇ ಕಟ್ಟಿದ್ದಾರೆ. ದೊಡ್ಡ ಕೊಟ್ಟಿಗೆ, ಅದಕ್ಕೆರಡು ಕಿಟಕಿ, ಈ ಎಮ್ಮೆಗಳು ಹುಯ್ದ ಗಂಜಲ, ಸಗಣಿ ಎಲ್ಲವೂ ಜಾರಿ ಒಂದು ಮೂಲೆಯಲ್ಲಿ ಶೇಖರವಾಗುವಂತೆ ಓರೆಯಾಗಿ ಹಾಸಿದ ಕಲ್ಲುಗಳು, ಶೇಖರವಾದ ಗಂಜಲ ಸಗಣಿಗಳನ್ನು ಆರಾಮಾಗಿ ತೆಗೆದು ತಿಪ್ಪೆಗೆ ಹಾಕಲು ಒಂದು ಬಕೀಟು... ಹೀಗೆ... ಆದ್ರೆ ಒಂದು ಕೊರತೆ ಅಂದ್ರೆ ಕೊಟ್ಟಿಗೆಯಲ್ಲಿ ಒಂದೇ ಒಂದು ಹಸುವೂ ಇಲ್ಲ. ಬೆಳಿಗ್ಗೆ ಎದ್ದು ಕರಾಗ್ರೇ ವಸತೇ ಹೇಳಿ ನಿತ್ಯ ಕರ್ಮಗಳಿಗೆ ತೆರಳೋ ಮುಂಚೆ ಹಸುಗಳ ದರ್ಶನ ಆಗಬೇಕು. ಆದರೆ, ನಮ್ಮ ಮನೇಲಿ ಹಸುವೇ ಇಲ್ಲವಲ್ಲ ಅಂತ ತಾತ ಎಷ್ಟೋ ಸಾರಿ ಬೇಸರಿಸಿಕೊಳ್ಳುತ್ತಿದ್ದರು. ಅಮ್ಮ ಅಂತೂ ಹಸುವಿನ ಹಾಲು ಶ್ರೇಷ್ಠ. ಒಂದ್ ಹಸುನೂ ಮನೇಲಿಲ್ಲ. ದೇವರಿಗೆ ನೈವೇದ್ಯಕ್ಕಿಡಕ್ಕಾದರೂ ಹಸುವಿನ ಹಾಲು ಬೇಡ್ವೇ? ಒಂದು ಹಸು ತನ್ನಿ ಅಂತ ಅಣ್ಣನಿಗೆ ಸಾಕಷ್ಟು ಸಾರಿ ಹೇಳಿದ್ರು ಅಣ್ಣ ಕಿವಿಗೆ ಹಾಕ್ಕೊಂಡಿರಲಿಲ್ಲ. ಅಮ್ಮ ಎಷ್ಟು ಒರಲಿದರೂ ತಲೆಕೆಡಿಸಿಕೊಳ್ಳದೆ ಸ್ಕೂಲು-ತೋಟ-ಇಸ್ಪೀಟು ಇಷ್ಟರಲ್ಲೇ ಮುಳುಗಿ ಹೋಗಿರುವ ಅಣ್ಣನ ಬಗ್ಗೆ ಸಿಟ್ಟು ಬಂತು ನಾಣಿಗೆ. ಆದ್ರೆ ತಾನು ಫೇಲಾಗಿದ್ದಕ್ಕೆ ಏನೂ ಬೈಯ್ಯದೆ ಸುನಂದ (ಅತ್ತೆ ಮಗಳು) ಪಾಸೋ....? ಅಂತ ಕೇಳಿದ್ದ ಅಣ್ಣ ತುಂಬಾ ಕೆಟ್ಟವರೇನಲ್ಲ ಅನ್ನಿಸಿತು. ಸುನಂದ ಪಾಸಾಗಿದ್ದೇನೋ ಸರಿ. ಆದರೆ ವೆಂಡರ್‌ಮನೆ ಗೋಪು ಹೆಂಗ್ ಪಾಸಾದ ಅನ್ನೋ ಪ್ರಶ್ನೆ ಮಾತ್ರ ಬಗೆಹರಿಲಿಲ್ಲ. ಹಿತ್ತಲಿಗೆ ಹೋಗಿ ಕೈ ತೊಳೆದುಕೊಂಡ.
-ಮೂರು-
ಅಡುಗೆ ಮನೆಯಿಂದ ಬಿಸಿಕಾಫಿ ಘಮ ಬರ್‍ತಿತ್ತು. ಕಾಫಿ ಕುಡಿದು ಹೊರಟಾಗ, ಹೊರಗಾಗಿದ್ದರಿಂದ ಜಗಲಿ ತುದಿ ಕೋಣೆಲಿ ಕೂತಿದ್ದ ಎರಡನೇ ಅಕ್ಕ ಲಲಿತ ಎಲ್ಲಿಗ್ ಹೊರಟೆಯೋ ಅಂತ ಕೂಗಿದ್ದನ್ನ ಕೇಳಿಸಿಕೊಳ್ಳದೆ ಮುನ್ನಡೆದು ಪುಟ್ಟಸ್ವಾಮಿ ಮನೆ ಕಡೆ ಹೊರಟ. ಪುಟ್ಸಾಮಿ ಮನೆಗೆ ಎರಡು ದಾರಿ. ಎದಿರು ಮನೆ ಆಚಾರಿ ಹಿತ್ತಲನ್ನ ದಾಟಿ ಎಣಿಸಿ ಒಂದೈವತ್ತು ಹೆಜ್ಜೆ ಇಡೋದ್ರೊಳಗೆ ಪುಟ್ಸಾಮಿ ಮನೆ. ಆದ್ರೆ ಅದನ್ನ ಆಚಾರ್‌ರ ವಟಾರದ ಕಕ್ಕಸ್‌ಗುಂಡಿ ಅಂತಾಳೆ ಅಮ್ಮ. ಇನ್ನೊಂದು ಬಳಸು ದಾರಿ. ಆದರೆ ಈ ಲಲಿತ ನೋಡ್ತಾ ಇರೋದ್ರಿಂದ ಹತ್ತಿರದ ದಾರೀಲಿ ಹೋದ್ರೆ ಅಮ್ಮಂಗೆ ಹೇಳಿ ಬೈಯಿಸ್ತಾಳೆ. ಇದರ ಉಸಾಬರಿನೇ ಬೇಡ ಅಂತ ಬಳಸು ದಾರಿಲೇ ಹೊರಟ.
-ನಾಲ್ಕು-
ಪುಟ್ಟಸ್ವಾಮಿ ಹಸು, ಎಮ್ಮೆ, ದನ, ಕರ, ಅಂತಾ ಅವುಗಳ ಮಧ್ಯೆನೇ ಬೆಳದೋನು ಅವುಗಳ ಸಕಲ ಚರಾಚರ ಭಾವನೆಗಳನ್ನ ಅರ್ಥಮಾಡಿಕೊಂಡು ಅವು ಯಾವ ಆಕ್ಷನ್ ಮಾಡಿದ್ರೆ ಏನ್ ಅರ್ಥ ಏನ್ ಹೇಳ್ತಿವೆ ಎಂದು ತಿಳ್ಕೊಂಡು ಬಿಡೋನು. ಅಲ್ಲದೇ ಅವುಗಳಿಗೆ ಏನೇ ಖಾಯಿಲೆ ಕಸಾಲೆ ಆದ್ರೂ ಅವನೇ ವೈದ್ಯ. ಬಿ.ಎ. ಮೇಸ್ಟ್ರು ಒಂದ್ ಸಾರಿ ಅವನಿಗೆ ನೀ ನಮ್ಮೂರಿನ ವೆಟರ್‌ನರಿ ಡಾಕ್ಟ್ರು ಕಣಯ್ಯ. ಪ್ರಾಣಿಗಳ ಡಾಕ್ಟ್ರಿಗೆ ಇಂಗ್ಲಿಷ್‌ನಲ್ಲಿ ಹಿಂಗಂತಾರೆ. ಯಾವ್ ಕಾಲೇಜನಲ್ ಓದ್ದೇ....? ಅಂತ ನಗ್‌ನಗ್ತಾ ಕೇಳಿದ್ದಕ್ಕೆ, ಸ್ವಾಮ್ಯೋರೇ... ಆ ಕ್ಲಾಸ್ ಮಾಡ್‌ಬ್ಯಾಡಿ ಅಂತ ಪೆಚ್ಚುಪೆಚ್ಚಾಗಿ ಖುಷಿ ಪಟ್ಟಿದ್ದ.
ಒಂದು ಸತಿ ಮನೆ ಎಮ್ಮೆ ಗೌರಿಗೆ ಕಣ್ಣಲ್ಲಿ ಪೊರೆ ಬಂದಿತ್ತು. ಇನ್ನೇನು ಪುಟ್ಸಾಮಿನೇ ವೈದ್ಯ. ಅವನ ವೈದ್ಯವೋ ಅದೊಂದು ವ್ರತ. ಅವನು ವೈದ್ಯ ಮಾಡೋವಾಗ ಮೌನದಿಂದ ಇರ್‍ತಿದ್ದ. ಅವ್ನು ಬೆಳಬೆಳಗೇನೇ ತುಂಬೆ ಎಲೆ ಕಿತ್ತುಕೊಂಡು ಬರ್‍ತಿದಿದ್ದು ಬೀದಿ ತುದೀಲಿ ಕಾಣಿಸ್ತಿದ್ದಾಂಗೆ ನಾಲ್ಕೈದು ಜನ ಗೌರಿಯನ್ನ ಹಿಡ್ಕೊಂಡು ಸಿದ್ಧರಾಗ್ತಿದ್ರು. ಅವ್ನು ಆ ತುಂಬೆ ಎಲೆಗಳನ್ನು ಚೆನ್ನಾಗಿ ಎರಡು ಕೈಯಲ್ಲಿ ಗಟ್ಟಿಯಾಗಿ ಹೊಸಕಿ ನೇರವಾಗಿ ಗೌರಿ ಕಣ್ಣಿಗೆ ಹಿಂಡುತ್ತಿದ್ದಾಗ ಗಟ್ಟಿಯಾದ ನಾಲ್ಕು ಹನಿ ಬಿದ್ದ ಕ್ಷಣ ಗೌರಿ ಒದ್ದಾಡುತ್ತಿದ್ದಳು. ಮತ್ತೆ ಅರ್ಧ ಚಮಚ ಉಪ್ಪಿನ ಪುಡಿ ಹಾಕಿದಾಗ ಗೌರೀನ ಹಿಡಿಯೋದೇ ಕಷ್ಟವಾಗುತ್ತಿತ್ತು. ಹೇಗೆ ಬಹಳಷ್ಟು ದಿನ ಮಾಡಿದ ಮೇಲೆ ಪೊರೆ ಪೂರಾ ಹೋಯ್ತು. ಆಂಥಾ ವೈದ್ಯ ಪುಟ್ಟಸ್ವಾಮಿ.
ಪುಟ್ಸಾಮಿ ನೀ ಹೆಳದಂಗೇ ಕೇಳುತ್ತಲ್ಲ ಗೋವುಗಳು ಹೇಗೋ? ಅಂತ ಕೇಳಿದ್ದಕ್ಕೆ ನಾರಾಯಣನೋರೇ ಯಾವುದಾದ್ರು ರಾಸಿನ ಕುತ್ತಿಗೆ, ಮೈಯ್ನ ನಾಲ್ಕು ದಿನ ಪ್ರೀತಿಯಿಂದ ಸವ್ರುತ್ತಿದ್ರೆ ಅವಕ್ಕೂ ನಮ್ ಪ್ರೀತಿ ಅರ್ಥವಾಗಿ ಅವು ನಾವ್ ಹೆಳ್ದಂಗೇ ಕೇಳತೆ ಎಂದಿದ್ದ. ಇದೆಲ್ಲಾ ಮನಸ್ಸಿನ ಅಂಗಳದಲ್ಲಿ ಹಾದು ಹೋಗುವಷ್ಟರಲ್ಲಿ ಪುಟ್ಸಾಮಿ ಮನೆ ಬಾಗಿಲ ಹತ್ತಿರ ಬಂದಾಗಿತ್ತು. ಈ ದಾರಿ ಸವೆದಿದ್ದೇ ಗೊತ್ತಾಗಿಲ್ವಲ್ಲ ಅಂದ್ಕೊಂಡ ನಾಣಿ.
ಬೊಗಸೆಯಲ್ಲಿ ನೀರು ತುಂಬಿಕೊಂಡು ಸೂರ್ಯನಿಗೆ ಅಭಿಮುಖವಾಗಿ ಕಣ್ಣುಮುಚ್ಚಿ ಭಕ್ತಿಯಿಂದ ಅರ್ಘ್ಯ ಕೊಡುತ್ತಿದ್ದ ಪುಟ್ಸಾಮಿ ಅಣ್ಣ ದೇವರ ಮನೇಲಿ ಕೂತು ಗಂಟೆಗಟ್ಟಲೆ ಮಾಡೋ ಪೂಜೆಗಿಂತ ಪುಟ್ಸಾಮಿಯ ಒಂದು ನಿಮಿಷದ ಪೂಜೆ ಹೆಚ್ಚಲ್ವಾ ಅನ್ನಿಸಿತು. ತಾನು ಬಂದ ಕೆಲಸಾನೇ ಮರೆತು ಪುಟ್ಸಾಮಿನೇ ನೋಡುತ್ತಾ ನಿಂತ ನಾಣಿ.
ಎರಡ್ ನಿಮಿಷದ ನಂತರ ಏನ್ ಅಯ್ನೋರೇ ಇಷ್ಟು ಬೆಳಬೆಳಗೇನೇ ಬಂದ್ರಿ? ಅಂತ ಹರಿದ ಲುಂಗಿಗೆ ಕೈ ಒರೆಸಿಕೊಳ್ಳುತ್ತಾ ಕೇಳಿದ ಪುಟ್ಸಾಮಿ. ಪುಟ್ಸಾಮಿ ಒಂದು ವಿಷ್ಯ. ಯಾರಿಗೂ ಹೇಳಕ್ ಹೋಗಬ್ಯಾಡ ಈಗಲೇ. ನಮ್ ಮನೇಗೆ ಒಂದು ಹಸು ಬೇಕು. ಯಾರ್ ಹತ್ರ ಇದೆ? ಇದ್ರೆ ನೋಡೋಣ ಅಂತ ನಾಣಿ ಅಂದದ್ದಕ್ಕೆ ದೊಡ್ಡ ಅಯ್ನೋರಿಗೆ ಹೇಳಿ. ನೀವ್ ಯಾಕೆ ತಲೆ ಕೆಡಿಸ್‌ಕೊಳಕ್ ಹೋಯ್ತೀರಾ? ಇನ್ನಾ ಚಿಕ್ಕವರು ನೀವು ಅಂತ. ಅದಕ್ಕೆ ನಾಣಿ ಇಲ್ವೋ.. ನಾ ಬಂದಿದ್ದೇ ಅಂತ ಅಣ್ಣನ ಹತ್ರ ಹೇಳಬ್ಯಾಡ. ಒಂದ್ ಹಸು ನೋಡು. ನಾನೇ ವ್ಯಾಪಾರ ಮಾಡ್ತೀನಿ. ಚಿಕ್ಕವನಲ್ಲ ನಾನು. ನಂಗೂ ಹದಿನೈದ್ ದಾಟ್ತು ಅಂದ. ಆಗ ಪುಟ್ಸಾಮಿ ಅಲ್ಲಾ ಪಟ್ನದ್ ಹೊನ್ನನ ಹತ್ರ ಹದಿನೈದ್ ದಿವಸದಲ್ಲಿ ಕರು ಹಾಕಿರೋ ಹಸು ಐತೆ. ತಿಂಡಿ ತಿನ್ಕಂಡ್ ದುಡ್ ತಕ್ಕಂಡ್ ಬನ್ನಿ, ನೋಡೋಣ ಎಂದ. ಸರಿ ನಾನ್ ಒಂದ್ ಗಂಟೇಲಿ ರೆಡಿಯಾಗಿ ಬರ್‍ತೀನಿ ಅಂತ ನಾಣಿ ಕೂಗಿಕೊಂಡಿದ್ದು ಆಚಾರಿ ಮನೆ ಹಿತ್ಲಿಂದ ಕೇಳಸ್ತು.

ತಾನು ಕೂಡಿಸಿಟ್ಟ ದುಡ್ನೆಲ್ಲಾ ಹರವಿಕೊಂಡ. ಅವು ಐವತ್ತೆರಡು ರೂಪಾಯಿ ಅನ್ನುತ್ತಿದ್ದವು. ಅಮ್ಮನನ್ನು ತುಂಬಾ ಹೊತ್ತು ಪುಸಲಾಯಿಸಿದ್ದಕ್ಕೆ ಅವಳು ಐವತ್ತು ರೂಪಾಯಿ ಕೊಟ್ಟಳು. ಹಸು ತರೋವರೆಗೂ ಅಣ್ಣನಿಗೆ ಹೇಳಬಾರದೆಂದು ಆಣೆ ಹಾಕಿಸಿಕೊಂಡು ಸ್ನಾನ ಸಂಧ್ಯಾವಂದನೆ ಮುಗಿಸಿ ಅಮ್ಮ ಮಾಡಿಕೊಟ್ಟ ರೊಟ್ಟಿ ಚಟ್ನಿ ತಿಂದು ದುಡ್ಡನ್ನ ಮತ್ತೆ ಎಣಿಸಿ ಜೋಬಿನಲ್ಲಿ ಭದ್ರವಾಗಿ ಇಟ್ಟುಕೊಂಡು ಪುಟ್ಸಾಮಿ ಮನೆಗೆ ಹೋದ. ಪುಟ್ಸಾಮಿನೂ ಹೊರಟು ನಿಂತಿದ್ದ.
-ಐದು-
ಅಲ್ಲಾಪಟ್ಟಣ ಹುಲಿಕಲ್‌ನಿಂದ ಪಶ್ಚಿಮಕ್ಕೆ ಒಂದು-ಒಂದೂವರೆ ಕಿ.ಮೀ. ದೂರದಲ್ಲಿದೆ. ಹೊನ್ನನ ಅಪ್ಪ ನಿಮ್ ಮನೆ ಗೇಣಿದಾರನಾಗಿದ್ದೋನೆ. ಈಗ ಅವ್ನು ಇರೋ ಜಮೀನು ನಿಮ್ದೆ ಆಗಿತ್ತು.... ಅಂತ ಯಾವುದೋ ಹಳೇ ಕಥೇನ ಸವಿಸ್ತಾರವಾಗಿ ಹೇಳ್ತಾ ಪುಟ್ಸಾಮಿ ಬಿರಬಿರನೆ ಹೆಜ್ಜೆ ಹಾಕ್ತಿದ್ದ. ಆದ್ರೆ ನಾಣಿ ಮನಸ್ಸು ಹಸು ಹೇಗಿರಬಹುದು ಅಂತ ಯೋಚಿಸುತ್ತಿತ್ತು. ಹೊನ್ನನ ಮನೆಗೆ ಎಷ್ಟು ದೂರ ಅಂತ ಮನಸ್ಸಿನಲ್ಲೇ ಲೆಕ್ಕ ಹಾಕತೊಡಗಿದ. ಮೊದಲು ಸಿಗೋದು ಜೋಯಿಸರ ತೋಟ, ನಂತರ ಬಿ.ಎ. ಮೇಷ್ಟ್ರದ್ದು, ಆ ತುದೀಗೆ ಅಲ್ಲಾ ಪಟ್ಣದ ಮನೆ ಶೀನಂದು. ಎಲ್ಲಾ ಅಡಿಕೆ ತೋಟಗಳು, ಅದಕ್ಕೆ ವೀಳ್ಯದೆಲೆ ಹಂಬು ಹಂಬ್ಸಿದ್ರು. ಮೇಲಕ್ಕೆ ಜಗನ್ನಾಥನ ಕೆರೆ, ಮುಂದಕ್ಕೆ ಪುಟ್ಸಾಮಿ ಹೊಲ, ನಂತರ ಸಿಗೋದೆ ಹೊನ್ನನ ಜಮೀನು. ಇವನ್ನೆಲ್ಲ ದಾಟಿ ಹೊನ್ನನ ಜಮೀನಿಗೆ ಬಂದ್ರೆ ಅಲ್ಲೇ ಹೊನ್ನ ಬದುವಿನಲ್ಲಿ ದನಗಳನ್ನ ಮೇಯಿಸ್ತಾ ಉಳುಮೆ ಮಾಡ್ತಿದ್ದ. ಹೊನ್ನಾ-ಪುಟ್ಸಾಮಿ ಏನೋ ಮಾತ್ನಾಡಿಕೊಂಡ್ರು. ಹೊನ್ನಾ ಇಲ್ಲೇ ಬದುನಲ್ ಮೇಯ್ತಿದೆ ನೋಡಿ ಬನ್ನಿ ಅಂದ. ತುಂಬಾ ಸಾಧು ಹಸ. ಹಾಯಕ್ಕಿಲ್ಲ, ಕಾಲೆತ್ತಕ್ಕಿಲ್ಲ. ತುಂಬಾ ಒಳ್ಳೆ ಹಸ ಅಂತೆಲ್ಲಾ ಹೊಗಳಿಕೊಂಡ. ಪುಟ್ಸಾಮಿ ಹಸು ತಡವಿ ಕೆಚ್ಚಲಿಗೆ ಕೈ ಹಾಕಿದ. ಹಸು ತುಂಬಾ ಸಾಧು ಒಳ್ಳೆದು ಅಂತ ನಿರ್ಧಾರವಾಯ್ತು. ಹಾಲೆಷ್ಟು ಕೊಡುತ್ತೆ? ಪ್ರಶ್ನೆ ಎದುರಾಯ್ತು. ಒಂದು ಮುಕ್ಕಾಲು ಸೇರು. ಕಿಂಚಿತ್ ಹೆಚ್ಚೆಯಾ ಅಂದಾ ಹೊನ್ನ. ಒಂದು ಪಡಿ (ಸುಮಾರು ಅರ್ಧ ಲೀಟರ್) ಹಾಲು ಕೊಟ್ರೆ ಸಾಕು ಅಂತ ಅಮ್ಮ ಹೇಳಿದ್ಲು. ಇದು ಮುಕ್ಕಾಲು ಸೇರು ಕೊಡುತ್ತೆ ಅಂತ ಖುಷಿಯಾಯ್ತು. ಮುನ್ನೂರು ಕೊಡೋದು ಅಂತ ತುಂಬಾ ಚೌಕಾಸಿ ನಂತರ ನಿರ್ಧಾರ ಆಯ್ತು. ಈಗ ನೂರು ರೂಪಾಯಿ ತಕ್ಕೋ. ನಾಳೆ ಪುಟ್ಸಾಮಿ ಹತ್ರಾ ಇನ್ನೂ ಇನ್ನೂರು ಕಳಿಸ್ತೀನಿ ಅಂತ ನಾಣಿ ಹೇಳಿದ್ದಕ್ಕೆ ಹೊನ್ನ ಹಸುವಿನ ಹಗ್ಗವನ್ನು ಕೊಡುತ್ತಾ ಹಗ್ಗದ ಕಾಸು ನಾಲ್ಕು ರೂಪಾಯಿ ಕೊಟ್ಬಿಡಿ ಅಂತ ಪಟ್ಟು ಹಿಡಿದ. ಕೊನೆಗೆ ಒಂದು ರೂಪಾಯಿ ಕೊಟ್ಟು ಹಸು ಹೊಡ್ಕೊಂಡು ಊರಕಡೆ ಹೊರಟಿದ್ದಾಯ್ತು. ಕರೂನ ಪುಟ್ಸಾಮಿ ಎತ್ಕಂಡಿದ್ದ. ಆ ಕರೂಗೆ ನಡೆಯಾಕ್ಕು ತ್ರಾಣ ಇರ್‍ಲಿಲ್ಲಾ. ಇವತ್ತು ಹೆಚ್ ಹಾಲ್ ಸಿಗಾಕಿಲ್ಲ. ಈಗ ಕರ ಕುಡ್ಕಂಬುಟದೆ ಅಂತ ಕೊನೆ ಮಾತು ಸೇರಿಸಿದ ಹೊನ್ನ. ಈವತ್ನಿಂದ ನಮ್ಮನೇಲು ಹಸು ಇರತ್ತೆ. ಅಮ್ಮಾ ಬೆಳಗ್ಗೆ ಎದ್ದ ತಕ್ಷಣ ಇದ್ರ ದರ್ಶನ ಮಾಡ್ಬೋದು, ದೇವ್ರಿಗೆ ನೈವೇದ್ಯಕ್ಕೆ ಹಾಲೆ ಇಡ್ಬೋದು, ಎಷ್ಟು ಸಂತೋಷ ಅವ್ಳಿಗೆ ಎಂದೆಲ್ಲಾ ಕಲ್ಪಿಸಿಕೊಳ್ಳುತ್ತಾ ಖುಷಿ ಖುಷಿಯಾಗಿದ್ದವನಿಗೆ ತೋಟವನ್ನು ಹಿಂದೆಹಾಕಿದ್ದು ಗೊತ್ತೇ ಆಗಲಿಲ್ಲ.
ಜಗುಲಿಯ ಬಳಿಯೇ ನಿಂತಿದ್ದ ಕೊನೆ ತಂಗಿ ಕನಕೆ ಹಸು ಕರುವನ್ನು ನೋಡಿ ಮುಖದಲ್ಲಿ ಆಶ್ಚರ್ಯ ತುಂಬಿಕೊಂಡು ಅಮ್ಮನ ಬಳಿ ಓಡಿದಳು. ಅಮ್ಮಾ ಬಂದು ಹಸುವನ್ನು ನೋಡಿ ಎಷ್ಟ್ ಹಾಲ್ ಕೊಡುತ್ತಂತೆ? ಅಂದ್ಲು. ಮುಕ್ಕಾಲ್ ಸೇರ್ ಕೊಡುತ್ತಂತೆ. ಆದ್ರೆ ಇವತ್ತು ಕರು ಕುಡ್ಕೊಂಡು ಬಿಟ್ಟಿದೆ ಅಂದ ನಾಣಿ. ಏನೋ..... ನೋಡಿದ್ರೆ ಹಂಗನ್‌ಸವಲ್ಲ ಅಚ್ಚೇರು ಕೊಟ್ರೆ ಸಾಕು ಅಂದುಕೊಳ್ಳುತ್ತಾ ಅಮ್ಮ ಒಳಗೆ ಹೋದಳು.
ಅಯ್ಯೋ ಅಮ್ಮಂಗೆ ಖುಷಿಯಾಗ್ಲೇ ಇಲ್ವಲ್ಲಾ. ಬರೀ ಹಾಲು ಕೊಡೋದ್ರ ಬಗ್ಗೆ ಕೇಳಿ ಹೋದ್ಲು. ದಿನಾ ಹಸುವಿನ ದರ್ಶನ ಮಾಡ್ಬೋದಲ್ಲಾ? ಬರೀ ಹಾಲೇ ಮುಖ್ಯವ? ಅಂತ ಏನೇನೋ ಅನ್ನಿಸಿ, ನಾ ಇಷ್ಟೆಲ್ಲಾ ಕಷ್ಟ ಪಟ್ರೂ ಅಮ್ಮಾ ಒಂಚೂರು ಹೋಗ್ಳಲೇ ಇಲ್ಲವಲ್ಲ ಅಂತ ಅಳು ಬಂತು. ನಾನ್ ಹುಡುಗ ಅಳ್ಬಾರ್‍ದು ಅಂದುಕೊಂಡ.
ಹಸು-ಕರುವನ್ನು ಕೊಟ್ಟಿಗೆಯಲ್ಲಿ ಕಟ್ಟಿ ಒಂದ್ ದೊಡ್ಡ ಲೋಟ ತಂದು ಇಷ್ಟ್ ಹಾಲ್ ಸಿಗ್ಬೋದು. ಇವತ್ತು ಕರೂಗೆ ಹಾಲ್ ಬಿಡಲ್ಲ. ಹೆಂಗಿದ್ರು ಅದು ಕುಡ್ಕಂಡಿದ್ಯಲ್ಲಾ ಅಂತ ಅಂದುಕೊಂಡು ಹಾಲು ಕರೆಯೋಕೆ ಶುರು ಮಾಡ್ದ. ಮುಕ್ಕಾಲು ಲೋಟ ತುಂಬಿತು. ಸರಿ ನಾಳೆಯಿಂದ ಸರಿಯಾಗಿ ತುಂಬುತ್ತಲ್ಲ ಅಂತ ದೇವ್ರ ಮನೇಲಿ ಹಾಲು ಇಟ್ಬಂದ.
ಚೆನ್ನಾಗಿ ತಿನ್ನಲಿ ಅಂತ ಮೂರ್‍ನಾಲ್ಕು ಎಮ್ಮೆಗಳಿಗೆ ಹಾಕುವಷ್ಟು ಹುಲ್ಲನ್ನು ಇದಕ್ಕೊಂದ್ದಕ್ಕೇ ಹಾಕಿದ. ಹೊನ್ನ ಈ ಹಸೂನ ಭೈರಿ ಅಂತ ಕರೀತಿದ್ದುದು ಜ್ಞಾಪಕಕ್ಕೆ ಬಂದು ಅಯ್ಯೋ ಹೆಸ್ರು ಚೆನ್ನಾಗಿಲ್ಲ ಅನಿಸಿ ಬೆಳ್ಳಿ ಅಂತ ಬದಲಿಸಿ ಬೆಳ್ಳಿ ಬೆಳ್ಳಿ ಅಂತ ಕರೆದು ಚೆನ್ನಾಗಿ ಮೈದಡವಿದ.
-ಆರು-
ಒಂದು ಚೊಂಬು ಭರ್ತಿ ಹಾಲನ್ನ ನೈವೇದ್ಯಕ್ಕೆ ಇಟ್ಟಿದ್ದಾಳೆ ಅಮ್ಮ. ನೋಡಿ ಅಷ್ಟು ದಿನದಿಂದ ಒರಲಿದ್ರು ಒಂದ್ ಹಸು ತರಲಿಲ್ಲ ನೀವು. ಈಗ ಇವ್ನೇ ಹೋಗಿ ಎಷ್ಟು ಚೆನ್ನಾಗಿರೋ ಹಸು ತಂದಿದ್ದಾನೆ ನೋಡಿ ಅಂತ ಅಣ್ಣನಿಗೆ ಅಮ್ಮ ಹೇಳ್ತಿದ್ದಿದು ಕೇಳಿಸ್ತು. ಬೆಳ್ಳಿ ಹೆಸರು ಎಷ್ಟು ಚೆನ್ನಾಗಿದೆ ಅಲ್ವೇನೆ? ಅಂತ ದೊಡ್ಡಕ್ಕ ಕಮಲ ಹೇಳಿದ್ಲು. ನಾ ಬೆಳ್ಳಿ ಅಂತ ಹೆಸ್ರಿಟ್ಟಿದ್ದು ಇವಳಿಗೆ ಗೊತ್ತಾಯ್ತಾ? ನಾನೇ ಹಾಲ್ ಕರೀ ಬೇಕು ಅಂದ್ಕೊಂಡಿದ್ನಲ್ಲಾ ಇವತ್ತು ಹಾಲ್ ಕರ್‍ದೋರು ಯಾರು? ನಿನ್ನೆ ಸಂಜೆ ಪಾಪ ಆ ಕರುಗೆ ನಾ ಹಾಲು ಕುಡಿಯೋಕೆ ಬಿಟ್ಟಿರಲಿಲ್ಲ. ಇವತ್ತಾದ್ರೂ ಬಿಟ್ರೋ ಇಲ್ವೋ ಅಂತ ಚಿಂತೆ ಹತ್ತಿತು. ತಕ್ಷಣ ಎಚ್ಚರಾಯಿತು. ಬೆಳಗಾಗಿರಲಿಲ್ಲ. ತೊಟ್ಟಿಯಲ್ಲಿ ಸುರಿದ ಕತ್ತಲು. ಏನು ಎತ್ತ ಅರ್ಥ ಆಗಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ ಓ ಕನಸು ಅಂತ ಹೊಳೀತು. ಬೆಳಿಗ್ಗೆ ಎದ್ದು ಹಸೂಗೆ ತೌಡು ಹಾಕಬೇಕು. ಎಷ್ಟು ಗಂಟೆ ಆಯ್ತು ಅಂತ ಕಣ್ಣು ಕೀಲಿಸಿ ನೋಡಿದ. ಗಡಿಯಾರಕ್ಕೂ ಕಪ್ಪು ಸುರಿದಿತ್ತು. ಗಡಿಯಾರ ನಿಂತು ಹೋಗಿದೆಯೇ ಅಂತ ಅನುಮಾನ ಆಯ್ತು. ಎದ್ದು ಹತ್ತಿರ ಹೋಗಿ ಟಾರ್ಚ್ ಬೆಳಕು ಬಿಟ್ಟು ನೋಡಿದ. ಇನ್ನೂ ಎರಡೂವರೆ ಗಂಟೆ. ವಾಪಾಸು ಬಂದು ಮಲಗ ಬೇಕಾದ್ರೆ ಕೊನೇ ತಮ್ಮ ಶೇಷನಿಗೆ ಕಾಲು ತಗುಲಿತು. ಅವನು ಸೀದ ಎದ್ದು ತೊಟ್ಟಿಯ ಸುತ್ತ ಓಡತೊಡಗಿದ. ನಾಣಿಗೆ ಕಕ್ಕಾಬಿಕ್ಕಿ. ಬಿದ್ದುಬಿಟ್ರೆ ಏನ್ ಗತಿ ಅಂತ ಭಯವಾಗಿ ಪಕ್ಕದಲ್ಲಿದ್ದ ಅತ್ತೆಯನ್ನು ಎಚ್ಚರಿಸಿದ. ಅಯ್ಯೋ ಬೀಳ್ತಾನೆ ಕಣೋ ಎನ್ನುತ್ತಾ ಅತ್ತೆ ಅವನ ಸುತ್ತ ಎರಡು ಸುತ್ತು ಸುತ್ತಿ ಗಟ್ಟಿಯಾಗಿ ಹಿಡಿದುಕೊಂಡು ಬಂದು ಪಕ್ಕದಲ್ಲೇ ಮಲಗಿಸಿಕೊಂಡ್ರು.
ನಾಣಿ ಮತ್ತೆ ಮಲಗಿದ. ಏನೇನೋ ಕನಸುಗಳು. ಬೆಳ್ಳಿ-ಹಾಲು-ಹೊನ್ನ-ಕರು-ಅದರ ದೈನ್ಯ ಮುಖ-ಹಲಸಿನ ಮರ-ಅಡಿಕೆ ತೋಟ.. ಏನೇನೋ.. ಸಂಬಂಧವಿಲ್ಲ, ಅರ್ಥವಿಲ್ಲ! ಮತ್ತೆ ಎಚ್ಚರವಾದಾಗ ಅಮ್ಮ ಮಡಿ ಕೋಲಲ್ಲಿ ಬಟ್ಟೆ ತೆಗೆದುಕೊಂಡು ಸ್ನಾನಕ್ಕೆ ಹೋದಳು. ನಾಣಿ ಅಡುಗೆ ಮನೆಗೆ ಹೋಗಿ ನೋಡಿದ ಬೇಕಾದಷ್ಟು ಮಜ್ಜಿಗೆ ಇತ್ತು. ಅದನ್ನು ಕೊಟ್ಟಿಗೆಗೆ ತೆಗೆದುಕೊಂಡು ಹೋಗಿ ಬಕೆಟ್‌ಗೆ ಸುರಿದ. ಅದಕ್ಕೆ ಒಂದು ರಾಶಿ ತೌಡನ್ನು ಸುರಿದು ಗಟಾಯಿಸಿ ಬೆಳ್ಳಿ ಮುಂದೆ ಇಟ್ಟ. ಅದು ಸರಿಯಾಗಿ ತಿನ್ನಲಿಲ್ಲ. ಮಜ್ಜಿಗೆ ವಾಸನೆಗೋ ಏನೋ ಚೂರು ಚೂರು ತಿಂದಿತು. ಅಷ್ಟೊಂದು ಕಲಸಿ ಹಾಕಿದ್ದೇನೆಂದು ಅಮ್ಮನಿಗೆ ಗೊತ್ತಾದ್ರೆ ತೊಂದರೆ ಎಂದುಕೊಂಡು ಅವನ್ನು ಎಮ್ಮೆಗಳ ಮುಂದಕ್ಕೆ ಇಟ್ಟ. ಎಮ್ಮೆಗಳು ಯಥಾ ಪ್ರಕಾರ ಕಿತ್ತಾಡಿಕೊಂಡು ತಿಂದವು. ಏಳು ಗಂಟೆ ಹೊತ್ತಿಗೆ ಒಂದು ದೊಡ್ಡ ಚೊಂಬು, ಲೋಟ ತೆಗೆದುಕೊಂಡು ಕೊಟ್ಟಿಗೆಯ ಕಡೆ ಹೋದ. ಲೋಟಕ್ಕೆ ಹಾಲು ಕರೆಕರೆದು ಅದು ತುಂಬಿದಂತೆ ಚೊಂಬಿಗೆ ಸುರಿಯುವುದೆಂಬ ಕಲ್ಪನೆಯೊಂದಿಗೆ ಕರುವಿಗೆ ಎಷ್ಟು ಹಾಲು ಬಿಡಬೇಕು ಎಂಬ ಪ್ರಶ್ನೆ ಎದುರಾಯಿತು. ಮೊದಲು ಹಾಲು ಕರೆದು ಬಂದು ಅರ್ಧ ಸೇರು ಆದ ಮೇಲೆ ಉಳಿದದ್ದನ್ನ ಕರುವಿಗೆ ಬಿಡೋಣ. ಸಾಕಾಗದಿದ್ದರೆ ಮನೆಯಲ್ಲಿ ಬೇರೆ ಹಾಲು ಇರುತ್ತಲ್ಲಾ? ಅಮ್ಮನ ಕಣ್ಣು ತಪ್ಪಿಸಿ ಅದನ್ನೆ ಕುಡಿಸೋಣ ಎಂದುಕೊಂಡ.
ಅಲ್ಲಿಗೆ ಸೌಭಾಗ್ಯತ್ತೆ ಬಂದು ನಿಂತಿದ್ದರು. ಅವರು ಅಣ್ಣನ ಅಕ್ಕ. ಬಹಳ ವರ್ಷಗಳಿಂದ ನಾಣಿಯ ಮನೆಯಲ್ಲೇ ಇದ್ದರು. ಮದುವೆಯಾಗಿ ಎಷ್ಟು ವರ್ಷಗಳಾದರೂ ಮಕ್ಕಳಾಗದೆ ಇದ್ದಾಗ ಸೌಭಾಗ್ಯತ್ತೆಯ ಗಂಡನ ಮನೆಯವರು ಇವರನ್ನು ಇಲ್ಲಿ ತಂದು ಬಿಟ್ಟಿದ್ದರು. ಅಣ್ಣ ಇಲ್ಲದಿರುವಾಗ ಅಮ್ಮ ಎಷ್ಟೋ ಸತಿ ಸೌಭಾಗ್ಯತ್ತೆಯನ್ನು ಹಂಗಿಸುತ್ತಿದ್ದರು. ಆದರೆ ಅತ್ತೆಯದು ಒಂದೇ ಉತ್ತರ-ಮೌನ. ಸೌಭಾಗ್ಯತ್ತೆಗೆ ನಾಣಿ ಎಂದರೆ ತುಂಬಾ ಪ್ರೀತಿ. ಕದ್ದುಮುಚ್ಚಿ ತೇಂಕೋಳು, ಚಕ್ಕುಲಿ, ಬರ್ವಡೆ, ಮಿಠಾಯಿ, ಲಾಡುಗಳನ್ನು ಕೊಡುತ್ತಿದ್ದರು. ಅವರು ಊಟಕ್ಕೆ ಬಡಿಸೋಕೆ ನಿಂತರೆ ಇವನಿಗೆ ಹೆಚ್ಚೇ ತುಪ್ಪ ಬೀಳುತ್ತಿತ್ತು. ಒಂದು ಸತಿ ನಾಣಿಗೆ ಜ್ವರ ಬಂದಾಗ ಮೂರ್‍ನಾಲ್ಕು ದಿನ ಕಾಯ್ತಿದ್ದರು. ಇವನು ಫೇಲ್ ಆದಾಗ ತಬ್ಬಿಕೊಂಡು ಸಮಾಧಾನ ಮಾಡಿದ್ದರು.
ನಾಣಿ ಹಾಲು ಕರೆಯಲು ಶುರು ಮಾಡಿದ. ಆದರೆ ಯಥಾ ಪ್ರಕಾರ ಮುಕ್ಕಾಲು ಲೋಟ ಮಾತ್ರ ತುಂಬಿತು. ಇನ್ನೊಂದು ಲೋಟ ಹಾಲಿಲ್ಲ! ಆಘಾತ! ಆಶ್ಚರ್ಯ! ಅಯ್ಯೋ ಏನೋ ಇದು ನಾಣಿ. ಇಷ್ಟೇ ಹಾಲ ಇದು ಕೊಡೋದು? ಆ ಹೊನ್ನ ನಿಂಗೆ ಸರಿಯಾದ ಪಂಗನಾಮ ಹಾಕಿದಾನೆ. ಅಣ್ಣ ಸರಿಯಾಗಿ ಬಯ್ತಾನೆ. ಉಪಯೋಗಕ್ಕೆ ಬಾರದ್ದನ್ನ ಯಾರೂ ಇಷ್ಟ ಪಡಲ್ಲ ಕಣೋ. ಈಗ ನನ್ನ ನೋಡು... ಏನೋ ಹೇಳಲು ಹೋಗಿ ಹುಮ್ ಅಂತ ನಿಟ್ಟುಸಿರು ಬಿಟ್ಟಳು. ಕರುವಿಗೊಂದು ತೊಟ್ಟು ಹಾಲಿರಲಿಲ್ಲ. ಕರುವನ್ನು ಹೋಗಿ ತಬ್ಬಿಕೊಂಡ ನಾಣಿ. ಅದರ ಹಳ್ಳೆ ಹೊಡೆದುಕೊಳ್ಳುತ್ತಿತ್ತು. ಅದಕ್ಕೆ ಅಂಬಾ ಎಂದು ಕಿರುಚಲು ಶಕ್ತಿ ಇರಲಿಲ್ಲ. ಸಂಕಟ ಆಯಿತು ನಾಣಿಗೆ. ಅತ್ತೇನ ಹೋಗಿ ತಬ್ಬಿಕೊಂಡು ಬಿಕ್ಕಳಿಸಿ ಅತ್ತ. ಅತ್ತೆ ದಯವಿಟ್ಟು ಅಣ್ಣನಿಗೆ ಈಗ್ಲೇ ಹೇಳ್ಬೇಡ ಎಂದು ಮತ್ತೆ ಬಿಕ್ಕಳಿಸಿದ. ಕರೆದ ಹಾಲಿಗೆ ನೀರನ್ನು ಸೇರಿಸಿ ಮುಕ್ಕಾಲು ಲೋಟ ಹಾಲನ್ನು ಒಂದು ಲೋಟ ಮಾಡಿ ಅಡಿಗೆ ಮನೆ ಹತ್ತಿರ ತಲುಪಿದ.
ಇವನಿಗೆ ವ್ಯಾಪಾರ ಮಾಡಕೆ ಹೇಳ್ದೋರ್ ಯಾರು? ನಾ ಕಬ್ಳಿಗೆರೆ ಇಂದಾನೋ, ಬೆಟ್ದಳ್ಳಿ ಇಂದಾನೋ ಒಳ್ಳೆ ಹಸು ತರ್‍ತಿದ್ದೆ ಅಂತ ಅಣ್ಣ ಹೇಳ್ತಿದ್ದದ್ದು ಕೇಳಿಸ್ತು. ಹಾಲೆಷ್ಟು ಕೊಡುತ್ತೆ ಅಂತ ಗೊತ್ತಾಗದೆ ಹೀಗೆ ಹೇಳುತ್ತಿರುವ ಅಣ್ಣನ ಮುಂದೆ ಒಂದು ಲೋಟ ಹಾಲನ್ನು ಹಿಡಿದುಕೊಂಡು ಹೋದರೆ ಏನೆನ್ನಬಹುದು ಯೋಚಿಸಿ ಮತ್ತೆ ಕೊಟ್ಟಿಗೆ ಕಡೆ ಹೋದ. ಆ ಹಸು ಇಷ್ಟು ಕಡಿಮೆ ಹಾಲ್ ಕೊಟ್ಟದ್ದಾದ್ರೂ ಯಾಕೆ ಎಂದು ತುಂಬಾ ಯೋಚಿಸಿ, ಕೊನೆಗೆ ಹೊಸ ಜಾಗ ಘಾಸಿಯಾಗಿರ್‍ಬೇಕು. ನಾ ಇಟ್ಟಿದ್ ತೌಡನ್ನು ಸರಿಯಾಗಿ ತಿನ್ಲಿಲ್ಲ. ಇವತ್ ಬೆಳಿಗ್ಗೆ ಎಲ್ಲಾ ಚೆನ್ನಾಗಿ ಮೇಯಿಸ್ತೀನಿ. ಆವಾಗಾದ್ರೂ ಸಂಜೆ ಸರಿಯಾಗಿ ಹಾಲು ಕೊಡ್ಬಹುದು ಅಂತೆಲ್ಲಾ ಸಮಜಾಯಿಷಿ ಕೊಟ್ಕೊಂಡ. ಅಣ್ಣ ಸ್ಕೂಲಿಗೆ ಹೋದ್ರು ಅಂತ ಗೊತ್ತಾದ್ ಮೇಲೆ ಅಡಿಗೆ ಮನೆಗೆ ಬಂದು ಅಮ್ಮನಿಗೆ ಹಾಲು ಕೊಟ್ಟ. ತನಗೆ ಹೊಳೆದ ಸಮಜಾಯಿಷಿಗಳನ್ನೇ ಅಮ್ಮನಿಗೆ ವಿವರಿಸಿ ಹೇಳಿದ. ಅಮ್ಮ ಬೇರೆ ಚಿಂತೆಯಲ್ಲಿ ಇದ್ದುದರಿಂದ ಅದರ ಕಡೆ ಹೆಚ್ ಗಮನ ಕೊಡಲಿಲ್ಲ.
ಹದಿನೈದು ವರ್ಷದಲ್ಲಿ ಒಂದು ದಿವಸವೂ ಹಸು ಮೇಯಿಸಿ ಗೊತ್ತಿಲ್ಲದ ಹುಡುಗ. ಹಸು ಮೇಯಿಸಿಕೊಂಡು ಬರಲು ಹೊರಟ. ದಾರಿಯಲ್ಲಿ ಸಿಕ್ಕ ಜೋಯಿಸ ಹೊಸ ಹಸನೇನೋ? ಎಷ್ಟು ಕೊಟ್ರಿ? ಯಾಕೋ ಚಿರೂಪು ಅಂತೆಲ್ಲಾ ಹೇಳಿ ಅವನ ಆತಂಕಕ್ಕೆ ಇನ್ನಷ್ಟು ಆತಂಕ ಸೇರಿಸಿದ್ರು.
ಒಂದು-ಒಂದೂವರೆ ಗಂಟೆ ಮೇಯಿಸುವಷ್ಟು ಹೊತ್ತಿಗೆ ಛೇ ಎಷ್ಟೊಂದು ಸಮಯ ಹಾಳು ಎನಿಸಿತು. ಅಷ್ಟರಲ್ಲಿ ಒಂದು ಉಪಾಯ ಹೊಳೆಯಿತು. ಒಂದು ದೊಡ್ಡ ಹಗ್ಗವನ್ನು ತಂದು ಹಸುವಿಗೆ ಕಟ್ಟಿ ಹಗ್ಗದ ಮತ್ತೊಂದು ತುದಿಯನ್ನು ಗೂಟಕ್ಕೆ ಕಟ್ಟಿ ಅದು ಅಲ್ಲೆಲ್ಲಾ ಓಡಾಡಿಕೊಂಡು, ಮೇಯುವಂತೆ ವ್ಯವಸ್ಥೆ ಮಾಡಿ ಪುಟ್ಸಾಮಿ ಮನೆ ಕಡೆ ಓಡಿದ. ಕೊಟ್ಟಿಗೆಯಲ್ಲಿದ್ದ ಪುಟ್ಸಾಮಿಗೆ ಇವತ್ ಬೆಳಿಗ್ಗೆ ತನಗೆ ಆದ ಆಘಾತವನ್ನು ವಿವರಿಸಿದ ನಾಣಿ. ಅಯಿನೋರೆ ಹೊಸ ಜಾಗ ಅಲ್ವ? ಅದಕ್ಕೆ ಘಾಸಿಯಾಗಿರ್‍ಬೇಕು. ಸಂಜೆ ಚೆನ್ನಾಗಿ ಹಾಲು ಕೊಡ್‌ತದೆ ಬಿಡಿ. ಚಿಂತೆ ಮಾಡ್ಬೇಡಿ ಅಂತ ಪುಟ್ಸಾಮಿ ತನಗೆ ಅನಿಸದ್ದನ್ನೇ ಹೇಳಿದ್ದನ್ನು ಕೇಳಿಸಿಕೊಂಡು ಮನೆಗೆ ಹೋಗಿ ಊಟ ಮಾಡಿ ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಹಿಡಿದುಕೊಂಡು ಹಸು ಕಟ್ಟಿದ ಜಾಗಕ್ಕೆ ಹೋದ. ಹಸು ಚೆನ್ನಾಗಿ ಮೇಯ್ತಿತ್ತು. ಬೆಳ್ಳಿ ಬೆಳ್ಳಿ ಅಂತ ಕರೆದು ಮುದ್ದು ಮಾಡಿದ.
ಸಂಜೆ ಪುಸ್ತಕವನ್ನು ಹಿಡಿದುಕೊಂಡು ಬೆಳ್ಳಿಯನ್ನು ಹೊಡೆದುಕೊಂಡು ಮನೆ ಕಡೆ ಹೊರಟ್ರೆ ಮಧ್ಯದಲ್ಲಿ ರಾಜು ಸಿಗಬೇಕೆ! ಅವನು ಈಗ ಕೆ.ಎಸ್.ನ. ಅವರ ಬಗ್ಗೆ ಕೊರೆದ. ಹೊಸ ಹಸುವ? ಕೇಳಿದ ಅವನಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಹಾಲು ಕರೆದರೆ ಎನ್ನಿಸಿತು ನಾಣಿಗೆ.
ಮನೆಗೆ ಬಂದ. ಜಗುಲಿ ಮೇಲೆ ಅಮ್ಮ ಕುಳಿತಿದ್ದಳು. ಹಾಲು ಕರೆದು ಇಡೋ ಎಂದಳು. ಚಂಬು ಲೋಟ ಹಿಡಿದುಕೊಂಡು ಹಾಲು ಕರೆಯೋಕೆ ಕೊಟ್ಟಿಗೆಗೆ ಹೋದ ನಾಣಿ. ಸ್ವಲ್ಪಹೊತ್ತಿನಲ್ಲೇ ಪುಟ್ಸಾಮಿ ಮನೆ ಮುಂದೆ ನಿಂತಿದ್ದ. ಕಣ್ಣುಗಳಲ್ಲಿ ಕಾರ್ಮೋಡ. ಅತ್ತೆಯ ಜ್ಞಾಪಕ ಬಂದಿತ್ತು. ಪುಟ್ಸಾಮಿ ಮನೆ ಹೊರಗೆ ಬಂದು ಅಲ್ಲಾಪಟ್ನದ ಕಡೆ ನೋಡಿದ. ಕತ್ತಲು ನಿಧಾನವಾಗಿ ಸುರಿಯಲು ಮೊದಲಿಟ್ಟಿತು.
(ದಿ ಸಂಡೇ ಇಂಡಿಯನ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕತೆ ಇದು.)

23 comments:

Unknown said...

ಕಥೆ ಎಂದಿನಂತೆಯೇ ಚೆನ್ನಾಗಿದೆ.

ಆದರೆ ಭಾಷೆಯಲ್ಲಿ consistancy ಇಲ್ಲ. ಕಥೆಯ ಪ್ರದೇಶದ ಬಗ್ಗೆ ಲೇಖಕಿಗೇ ಖಾಚಿತ್ಯ ಇಲ್ಲದೇ ಇರುವುದೂ ಕಾರಣವಿರಬಹುದು.
post ಮಾಡುವ ಮೊದಲು ಒಂದು ಬಾರಿ proof ನೋಡುವುದು ಒಳಿತು. ಓದುವ ಓಘ ಮಧ್ಯೆ ಮಧ್ಯೆ break ಆಗುವುದು ತಪ್ಪಬಹುದು ಎಂಬ ಸದಾಶಯ.

ನನಗನ್ನಿಸಿದ್ದನ್ನು ಹೇಳಿದ್ದೇನೆ. ಅಷ್ಟೇ.
'ಹೊಳೆದಿದ್ದು ತಾರೆ ಉಳಿದದ್ದು ಆಕಾಶ'

Shree said...

kate is very nice adikke ansthe ishtu dina togondidu one thing nim prakara puttswami is good adre avnu yake antha hasu kodisi mosa madida was there any commision given to him by honna whatever good topic and good style of expressions

ARUN MANIPAL said...

@ krutavarma:ಪ್ರದೇಶದ ಬಗ್ಗೆ ಖಾಚಿತ್ಯ ಇಲ್ಲ ಅನ್ನುವುದು ಹೇಗೆ ಹೇಳುತ್ತೀರಿ "ಹೊನ್ನನ ಮನೆಗೆ ಎಷ್ಟು ದೂರ ಅಂತ ಮನಸ್ಸಿನಲ್ಲೇ ಲೆಕ್ಕ ಹಾಕತೊಡಗಿದ. ಮೊದಲು ಸಿಗೋದು ಜೋಯಿಸರ ತೋಟ, ನಂತರ ಬಿ.ಎ. ಮೇಷ್ಟ್ರದ್ದು, ಆ ತುದೀಗೆ ಅಲ್ಲಾ ಪಟ್ಣದ ಮನೆ ಶೀನಂದು. ಎಲ್ಲಾ ಅಡಿಕೆ ತೋಟಗಳು, ಅದಕ್ಕೆ ವೀಳ್ಯದೆಲೆ ಹಂಬು ಹಂಬ್ಸಿದ್ರು. ಮೇಲಕ್ಕೆ ಜಗನ್ನಾಥನ ಕೆರೆ, ಮುಂದಕ್ಕೆ ಪುಟ್ಸಾಮಿ ಹೊಲ, ನಂತರ ಸಿಗೋದೆ ಹೊನ್ನನ ಜಮೀನು. ಇವನ್ನೆಲ್ಲ ದಾಟಿ ಹೊನ್ನನ ಜಮೀನಿಗೆ ಬಂದ್ರೆ ಅಲ್ಲೇ ಹೊನ್ನ ಬದುವಿನಲ್ಲಿ ದನಗಳನ್ನ ಮೇಯಿಸ್ತಾ ಉಳುಮೆ ಮಾಡ್ತಿದ್ದ. " ಇಷ್ಡು ವಿವರ ಸಾಕಾಗದ ..? ಅಥವಾ ನಿಮ್ಮ ಕಲ್ಪನೆಯ ಪ್ರದೇಶಕ್ಕೆ ಇದಿಷ್ಟು ಹೊಂದಿಕೊಳ್ಳುವುದಿಲ್ಲ ಅಂದುಕೊಳ್ಳಬಹುದಾ..?

Unknown said...

@arun,

ಪ್ರದೇಶದ ವಿವರವನ್ನು ಕಟ್ಟಿಕೊಡುವುದರ ಬಗ್ಗೆ ಎರಡು ಮಾತೇ ಇಲ್ಲ. ಆದರೆ ನಾನು ಹೇಳಿದ್ದು, ಬಯಲು ಸೀಮೆಯೋ, ಮಲೆನಾಡೋ .. ಒಂದೊಂದು ಪ್ರಾಂತ್ಯಕ್ಕೂ ಪಂಗಡಕ್ಕೂ ಅದರದ್ದೇ ಆದ ಭಾಷೆ ಇರುತ್ತೆ ಅಲ್ವಾ?

Sangama said...

@ krutavarma...

ತಾವು ಮೊಸರಿನಲ್ಲಿ ಕಲ್ಲು ಹುಡುಕೊದನ್ನು ಬಿಟ್ಟರೆ ಒಳ್ಳೇದಿತ್ತು...

@ mruganayani

ಕತೆ ಚೆನ್ನಾಗಿದೆ..ಈ ಕತೆ ಓದಿದ ಮೇಲೆ ನಿಮ್ಮಿಂದ ಇನ್ನೂ ಹೆಚ್ಚಿನದನ್ನು ನಿರೀಕ್ಷೆ ಮಾಡಬಹುದು ಅನ್ನಿಸಿತು...

ರವಿ..

ಮೃಗನಯನೀ said...

@Krutavarma

ನಿಮಗೆ ಹಾಗೇಕೆನ್ನಿಸಿತೋ ಗೊತ್ತಿಲ್ಲ. ನಮ್ಮೂರಿನ ಕತೆ ಇದು. ಅಪ್ಪ ಹೇಳಿದ್ದು(ofcourse ನನ್ನ ಕಲ್ಪನೆಗಳೂ ಸೇರಿವೆ). ಅಪ್ಪ ಹೇಳಿದ ಕತೆಗಳಿನ ಜನರನ್ನು ರಜದಲ್ಲಿ ಊರಿಗೆ ಹೊದಾಗ ಜೀವಂತವಾಗಿ ನೆಡೆದಾಡುವುದನ್ನ ಅವರ ಹಾವಭಾವಗಳನ್ನ ಭಾಷೆಯ ರೀತಿಯನ್ನ ನೋಡಿಕೊಂಡೇ ಬೆಳೆದಿದ್ದಿನಿ. ಹೊನ್ನ ಪುಟ್ಸಾಮಿಯವರ ವಂಶಜರು ಇನ್ನೂ ನಮ್ಮ ಮನೆಗೆ ಹಾಲು ತಂದುಕೊಡುತ್ತಾರೆ, ನನ್ನ ಚಿಕ್ಕಪ್ಪನ ಅಂಗಡಿಯಲ್ಲಿ ನಮ್ಮ ತೋಟದಲ್ಲಿ ಕೆಲಸ ಮಾಡುತ್ತಾರೆ...

'ಹೊಳೆದಿದ್ದು ತಾರೆ ಉಳಿದದ್ದು ಆಕಾಶ'ಅಂದಿದಿರ ಭಯ ಆಗತ್ತೆ ಮಾರಾಯ್ರೆ ಅಷ್ಟೊಂದು ತಪ್ಪು ಮಾಡ್ತೀನ? ;-)

ಧನ್ಯವಾದಗಳು...

ಮೃಗನಯನೀ said...

@Agni

thnx ಕಣೇ.. ನೀನು ಅಲ್ಲಾಪಟ್ನದ ಕಡೆಗೆ ಯಾವತ್ತದ್ರೂ ಹೋಗಿದಿಯಾ? ನಾನು ಒಂದುಸತಿ ಮಾತ್ರ ಹೋಗಿದ್ದು. ಚಿಕ್ಕಪ್ಪನ ಜೊತೆ...;-)

ಮೃಗನಯನೀ said...

@Arun

;-) ;-)

@Ravi

ಧನ್ಯವಾದಗಳು... will try writing up to ur expectations...;-)

Shree said...

hooo hogidini ansutte nanu tow months 10th admeli raje ittallae avaga adu yettina gadili tatan jote alli firstu kadale kaye belithidrla

ಶ್ರೀನಿಧಿ.ಡಿ.ಎಸ್ said...

not upto my expectations!! Kathe OK..

Girish Rao H said...

ಅಗ್ನಿಯ ಕುತೂಹಲ ಚೆನ್ನಾಗಿದೆ.ಪುಟ್ಸಾಮಿ ಮೋಸ ಮಾಡಿದ್ನಾ, ಅವನೂ ಪೆದ್ದನೇ ಆಗಿದ್ನಾ ಅನ್ನೋ ಸಂದೇಹ. ತುಂಬ ಬುದ್ದಿವಂತ ಅಂತ ಹೇಳ್ಕೋಳ್ಳೋರು ಎಷ್ಟೋ ಸಾರಿ ಪಿಗ್ಗಿ ಬೀಳೋದಿಲ್ಲವಾ. ತಾನು ನಂಬಿದವನೇ ಮೋಸ ಮಾಡಿದಾಗ ಅವನ ಮುಂದೆ ಹಸುವಿನ ಜೊತೆ ಹೋಗ ನಿಲ್ಲುವ ಹುಡುಗನಿಗೂ ಹಸುವಿಗೂ ಯಾವ ವ್ಯತ್ಯಾಸವೂ ಕಾಣಿಸಲಿಲ್ಲ. ಅಷ್ಟಕ್ಕೂ ಹಸುವನ್ನು ಹಾಲಿಗೋಸ್ಕರ ಮಾತ್ರ ಕೊಳ್ಳುತ್ತಾರಾ. ಹಾಗಿದ್ದರೆ ಅದರ ಪಾವಿತ್ರ್ಯ ಎಲ್ಲಿಗೆ ಹೋಯ್ತು ಎಂಬ ಕೇಳದ ಪ್ರಶ್ನೆಗಳಲ್ಲಿ ಕತೆಯ ಸತ್ವ ಅಡಗಿದೆ ಎಂದನ್ನಿಸುತ್ತದೆ.
ಕೆಲವು ಕತೆಗಳನ್ನು ಕತೆಗೋಸ್ಕರ ಓದಬಾರದು.
-ಜೋಗಿ

ತೇಜಸ್ವಿನಿ ಹೆಗಡೆ said...

ಕಥಾ ವಸ್ತುವಿನಲ್ಲಿ ಗಟ್ಟಿತನವಿದೆ. ಕೊನೆಯ ಸಾಲು ("ಕತ್ತಲು ನಿಧಾನವಾಗಿ ಸುರಿಯಲು ಮೊದಲಿಟ್ಟಿತು") ತುಂಬಾ ಅರ್ಥಗರ್ಭಿತವಾಗಿದೆ. ನಾಣಿಯ ಪಾಲಿಗೆ ನಿಜಕ್ಕೂ ಕತ್ತಲು ಸುರಿಯತೊಡಗಿತು!

Tina said...

ನಯನೀ,
ಚೆನ್ನಾಗಿ ಕಥೆ ಹೇಳುತ್ತೀ. ಓದುತ್ತ ಓದುತ್ತ ಅದು ನನ್ನೊಳಗೇನೆ ಬೆಳೀತಾ ಹೋಯ್ತು. ಸೂಕ್ಷ್ಮಗಳು ಬರೀತಾ ಬರೀತಾ ಇನ್ನೂ ಖಚಿತವಾಗ್ತಾ ಹೋಗ್ತವೆ. ನನಗಂತೂ ಕಥೆಯ ಪ್ಲಾಟ್ ಹಾಗೂ ನಿರೂಪಣೆಯ ಹರಿವು ಬಹಳ ಹಿಡಿಸಿತು.
-ಟೀನಾ.

ಅಮರ said...

ಪ್ರಿಯ ಮಲ್ನಾಡ್ ಹುಡುಗಿಯವರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

-ಅಮರ

ಮೃಗನಯನೀ said...

@Shreenidhi

;-)

@Jogi

Sir ಇಷ್ಟು ಬೇಗ ಕಾಡು ಕರೀತಾ... ಯಾವ ಕಾಡಲ್ಲಿದೀರ???

@Tejasvini nd Teena

ನೀವೆಲ್ಲಾ ಇಷ್ಟು ಪ್ರೀತಿಯಿಂದ ಬಂದು ಓದುತ್ತೀರಲ್ಲಾ ತುಂಬಾ ಧನ್ಯವಾದಗಳು. ಕಥೆ ಇಷ್ಟ ಆಯ್ತು ಅಂದಿದ್ದು ಖುಶಿ ಕೊಟ್ಟಿತು.

ಮೃಗನಯನೀ said...

ಪ್ರೀತಿಯ ಅಮರ

ನೀವೆಲ್ಲಾ ಸೇರ್ಕೊಂಡು ಚಂದದ್ ಮೀಟ್ ಮಾಡ್ತಿದಿರ ಚೆನ್ನಾಗ್ ಆಗ್ಲಿ.
ನಂಗೂ ಬರ್ಬೇಕು ಅಂತ ತುಂಬ ಆಸೆ ಇದೆ ಆದ್ರೆ ಅವತ್ತೇ ನಮ್ಮೂರಲ್ಲಿ ನನ್ನ ತಾತನ ೮೦ನೇ ವರ್ಷದ ಹುಟ್ಟು ಹಬ್ಬ ಬಹಳ ಕಾರ್ಯಕ್ರಮಗಳನ್ನ ನನ್ನ ತಂದೆಯವರೆಲ್ಲಾ ಸೇರ್ಕೊಂಡು ಹಮ್ಮಿಕೊಂಡಿದಾರೆ. ನೀವೆಲ್ಲಾ ಎಂಜಾಯ್ ಮಾಡಿ. ಇನ್ನೊಂದ್ ಸತಿ ಎಲ್ಲಾ ಸೇರ್ದಾಗ ಬರ್ತೀನಿ.....

sunaath said...

ಮೃಗನಯನಿಯವರೆ,
ಕತೆ ಸ್ವಾರಸ್ಯಕರವಾಗಿದೆ. ಈ ಕತೆಯನ್ನು ಈ ಮೊದಲೆ ಇಂಗ್ಲಿಶ್‌ನಲ್ಲಿ ಪ್ರಕಟಿಸಿದ್ದಿರಾ? ಅದನ್ನೇ ಅನುವಾದ ಮಾಡಿ ಕೊಟ್ಟಿರಾ? ಹಾಗಿದ್ದರೆ ಉಭಯಭಾಷಾ ಲೇಖಕಿ ನೀವು! ಕತೆಯ natural environment ತುಂಬ ಹಿಡಿಸಿತು ನನಗೆ. ಇಂತಹ ಒಳ್ಳೆಯ ಕತೆಗಳು ಇನ್ನಿಷ್ಟು ಬರಲಿ.
ಅಲ್ಲಾ, "Don't look into my eyes, you will be lost" ಎಂದು ಹೇಳಿದ್ದೀರಿ. ನಿಮ್ಮ ಫೋಟೋದಲ್ಲಿ ಅದಕ್ಕಾಗಿ ಒಂದೇ ಕಣ್ಣು ತೋರಿಸಿದ್ದೀರಾ. ಅಷ್ಟೇ ಸಾಕು, ಮರಳು ಮಾಡಲು!

ನಾವಡ said...

ಕಥೆ ಇಷ್ಟವಾಯಿತು. ಬರಹ ಶೈಲಿ ಚೆನ್ನಾಗಿದೆ. ಹೊಸ ಕಥೆಗೆ ಕಾಯ್ತಾ ಇದ್ದೀವಿ.
ನಾವಡ

Ultrafast laser said...

Hi Nayani,
Hope you are fine.
Indeed a very nice story depicting many messages. I feel, it could be possible to write in a bit "tighter" way so that the focus would be more clear.

Also, I couldnot imagine "NaaNi's failure in studies and his sensitive personality, simultaneously (Usually, sensitive personalities are good at studies: a retrospective view).

Regards
Dr.D.M.Sagar (Original)

ಮೃಗನಯನೀ said...

@ನಾವಡ
ಧನ್ಯವಾದಗಳು.. ಹೊಸ ಕಥೆ ಹಾಕಿದ್ದೇನೆ...

@Saagar

fine thank you. hope same 4m ur side.

ya will try to do the same in following stories. nd abt Naani's studies... he has passed in lifes exam.. ;-)...

would be lokking 4rward 4r ur comments in comming stories. u are a nice critic..

Anonymous said...

I think u r writing well.. But i don have luck to read it..

Madhava said...

kate ista aitu. halli jeevanada sanna sanna amshagalannuu neenu hididittiddu kateya geluvige kaanike needive. kannige pore, adke oushidi.... innuu eneno ideyalla ellavu ontara visheshave.

Anonymous said...

is this the first part of it is the entire story?? the ending is very abrupt; pls try to end the story in a logical way.