Thursday, March 13, 2008

ಓಲೆ

ಆ ಮುತ್ತಿನ ಕಿವಿಯೋಲೆ ನೋಡುತ್ತಾ ಬೆಚ್ಚಿಬಿದ್ದೆ. ಅದು ಅಚ್ಚು ಹಾಗೇ ಇತ್ತು. ನನಗೆ ಯಾವಾಗಲೂ ಕಾಣುತ್ತಿದ್ದ ಓಲೆಯೇ ಅದು. ವ್ಯತ್ಯಾಸವೇ ಇಲ್ಲ. ಮೊಟ್ಟೆಯಾಕಾರದ ಮಾಸಿದ ಬಿಳುಪಿನ ಮುತ್ತು, ಅದರ ಬೆನ್ನಿಗೆ ಅಂಟಿಕೊಂಡ ಚಿನ್ನ. ಒಂದು ಚೂರು ಆಚೀಚೆ ಇಲ್ಲ. ಹಾಗೇ ಥೇಟ್. ಆ ಎಲ್ಲ ರಾಶಿ ಆಭರಣಗಳ ಮಧ್ಯೆ ಅದು ಕಣ್ಣಿಗೆ ಬಿದ್ದಿದ್ದು ವಿಶೇಷವೇನಲ್ಲ.

ಈಗ ಅಭ್ಯಾಸವಾಗಿ ಹೋಗಿದೆ. ಇದು ಶುರುವಾದದ್ದು ನಾನು ಪಿಯುಸಿಯಲ್ಲಿದ್ದಾಗ. ರಾಜಾಜಿನಗರದಲ್ಲಿ ಅವರ ಟ್ಯೂಷನ್ ಐದೂವರೆಗೆ ಶುರುವಾಗುತ್ತಿತ್ತು. ನಾನು ನಮ್ಮ ಹೆಸರುಘಟ್ಟದ ಮನೆಯನ್ನ ನಾಲ್ಕೂ ಕಾಲಿಗೆ ಬಿಟ್ಟು ಬಿಡುತ್ತಿದ್ದೆ. ಮನೆಯಿಂದ ಬಸ್ ಸ್ಟಾಪ್ ಗೆ ಹದಿನೈದು ನಿಮಿಷದ ದಾರಿ. ಹಾಗೇ ನೆಡೆದುಕೊಂಡು ಹೋಗುತ್ತಿದ್ದರೆ ಅವನು ನನ್ನನ್ನು ನೋಡುತ್ತಲೇ ನಿಂತಿರುತ್ತಿದ್ದ. ಅವನು ಯಾರಂತ ಗೊತ್ತಿರಲಿಲ್ಲ. ಇವತ್ತಿಗೂ ಗೊತ್ತಿಲ್ಲ. ಅವನೇನು ನನ್ನ ಕರೆದಿರಲಿಲ್ಲ. ಸುಮ್ಮನೆ ನನ್ನನ್ನು ನೋಡುತ್ತಿದ್ದ. ಆದರೆ ಅವನಲ್ಲಿ ಎಂಥ ವಿಲಕ್ಷಣವಾದ ಆಕರ್ಷಣೆ ಇತ್ತೆಂದರೆ ಒಂದು ದಿನ ನಾನೇ ಹತ್ತಿರ ಹೋಗಿದ್ದೆ. ನಾನು ಅವನ ಮುಂದೆ ನಿಂತ ತಕ್ಷಣ ಅವನು ನಡೆದುಕೊಂಡು ಹೋದ. ನಾನು ಕುರಿಯಂತೆ ಹಿಂಬಾಲಿಸಿದೆ. ಆಮೇಲೆ ನಡೆದದ್ದು ಕನಸೆಂದೇ ನನ್ನ ಭ್ರಮೆ. ಹೂವಂತೆ ನನ್ನ ಅರಳಿಸಿದ್ದ. ಹಿತವಾಗಿ ಕಲಕಿದ್ದ ಅವನು. ನಾನು ಹೇಗೆ ಮನೆಗೆ ವಾಪಸ್ಸು ಬಂದೆ ಎಂಬುದು ನನಗೆ ಗೊತ್ತಿಲ್ಲ. ಯಾರಿಗೂ ಗೊತ್ತಾಗದಂತೆ (ನನಗಾದರೂ ಗೊತ್ತಾಗಿತ್ತಾ?) ನನ್ನ ಜೀವನದಲ್ಲಿ ಏನೋ ನಡೆದುಹೋಗಿತ್ತು. ಅವನ ಎಡಕಿವಿಯಲ್ಲಿದ್ದ ಮುತ್ತಿನ ಓಲೆ ಮಾತ್ರ ಜ್ಞಾಪಕವಿತ್ತು. ಆಮೇಲಿಂದ "ಅಪ್ಪಾ ನಂಗೆ ಭಯ ಆಗತ್ತೆ, ನನ್ನ ಬಸ್ ಸ್ಟಾಪ್ ವರೆಗೂ ಬಿಡು" ಅಂತ ಕರೆದುಕೊಂಡು ಹೋಗಲು ಶುರು ಮಾಡಿದೆ. ಅಪ್ಪ ಬಂದು ಬಸ್ಸಲ್ಲಿ ಕೂರಿಸಿ ವಾಪಾಸು ಹೋಗಿ ಮಲಗುತ್ತಿದ್ದರು. ಹಾಗೆ ಒಂದು ದಿನ ಹೋಗುತ್ತಿದ್ದಾಗ ನನ್ನ ಹಿಂದೆ ಯಾರೋ ಬರುತ್ತಿದ್ದಾರೆನ್ನಿಸಿತು. ಬಲಗಡೆಗಿದ್ದ ಅಪ್ಪನ ಜೊತೆ ಮಾತನಾಡುತ್ತಲೇ ಎಡಗಡೆಗೆ ತಲೆ ತಿರುಗಿಸಿ ನೋಡಿದರೆ ಕಂಡಿದ್ದು ಮುತ್ತಿನ ಓಲೆ. ನನ್ನ ಮುಖ ಬಿಳಿಚಿದ್ದು ಅಪ್ಪನಿಗೆ ಕತ್ತಲಲ್ಲಿ ಗೊತ್ತಾಗಲಿಲ್ಲ. ಅವತ್ತು ಶುರು ಆಗಿದ್ದು ನನಗೆ ಬಹಳಷ್ಟು ಸಲ ಕಾಣಿಸಿದೆ. ಮುಖ ತೊಳೆದುಕೊಂಡು ಕನ್ನಡಿ ನೋಡಿಕೊಳ್ಳುವಾಗ ಎಲ್ಲರ ಜೊತೆ ಕೂತು ಏನನ್ನೋ ಹರಟುತ್ತಿರುವಾಗ, ಆಟಾಡುವಾಗ, ಹಾಲು ಕಾಯಿಸುವಾಗ, ಕಾಲೇಜಿನಲ್ಲಿ ಪಾಠ ಮಾಡುವಾಗ, ಇಸ್ತ್ರಿ ಮಾಡುವಾಗ ಹೀಗೆ.... ಪ್ರತಿಯೊಂದು ಬಾರಿಯೂ ನನ್ನ ಹಿಂದೆ ಎಡಗಡೆಗೆ ಯಾರೋ ಇರುತ್ತಾರೆ. ಆ ಮುತ್ತಿನ ಓಲೆ ಹಾಕಿಕೊಂಡು. ಅವರು ಕಾಣಿಸುವುದಿಲ್ಲ, ಬರೀ ಓಲೆ ಕಾಣಿಸುತ್ತದೆ.


ಹೀಗೆ ಕಾಣಿಸಲು ಶುರುವಾಗಿ ಆರು ತಿಂಗಳಾದರೂ ಯಾರಿಗೂ ಹೇಳಿರಲಿಲ್ಲ ಇದರ ಬಗ್ಗೆ. ಏನೆಂದು ಹೇಳಲಿ? ಮುತ್ತಿನ ಓಲೆ ಕಾಣಿಸುತ್ತದೆ ಎಂದಾ? ಹುಚ್ಚು ಅನ್ನುವುದಿಲ್ಲವಾ? ಆದರೆ ಒಂದು ದಿನ ತಡೆಯಲಾಗದೆ ಅಕ್ಕನಿಗೆ ಹೇಳಿದೆ. ಅವಳು ಆಗ ತಾನೆ ಬಿ.ಎಸ್.ಸಿ ಸೈಕಾಲಜಿ ಓದುತ್ತಿದ್ದಳು. ತಕ್ಷಣ ಅವಳು ಇದನ್ನ ಹಾಲೂಸಿನೇಶನ್ ಎಂದಳು. "ಹಂಗಂದ್ರೆ ನಿಜವಾಗಲೂ ಅಲ್ಲಿ ಏನೂ ಇರೋದಿಲ್ಲ, ಆದರೆ ನಮಗೆ ಮತ್ತೆ ನಮ್ಮ ಸೆನ್ಸ್ ಆರ್ಗನ್ಸ್ ಗಳಿಗೆ ಏನಾದ್ರೂ ಇರುತ್ತೆ ಅನಿಸುತ್ತೆ. ಉದಾಹರಣೆಗೆ ಕೆಲವೊಬ್ಬರು ನಮಗೆ ದೇವರು ಕಾಣಿಸುತ್ತೆ ಅಂತನೋ, ಅಥವಾ ಯಾವದ್ಯಾವುದೋ ಸದ್ದುಗಳು ಕೇಳುತ್ತೆ ಅಂತನೋ ಹೇಳ್ತಾರಲ್ಲ ಹಂಗೆ, ಇದೊಂದು ಮಾನಸಿಕ ಸಮಸ್ಯೆ ಅಷ್ಟೇ" ಎಂದಿದ್ದಳು. ಸರಿ, ನನಗೆ ಎಲ್ಲಾ ರೀತಿಯ ಮನಶ್ಯಾಸ್ತ್ರದ ಪರೀಕ್ಷೆಗಳನ್ನ ಮಾಡಿಸಿದ್ದಾಯ್ತು, ಎಂಥೆಂತದೊ ಮಾತ್ರೆಗಳನ್ನ ತಿಂಗಳುಗಟ್ಟಲೇ ತಿನ್ನಿಸಿದ್ದಾಯ್ತು. ಆದರೆ ನನ ಓಲೆ ಕಾಣಿಸುವುದು ನಿಂತಿರಲಿಲ್ಲ. ಅದು ಕಾಣಿಸುತ್ತಿತ್ತು ಅನ್ನೋದು ಬಿಟ್ಟರೆ ಬೇರೇನು ತೊಂದರೆ ಆಗಿರಲಿಲ್ಲ ನನಗೆ. ಹಾಲೋಸಿನೇಶನ್ ಗೆ ಒಳಗಾಗಿರುವ ರೋಗಿಗಳ ಬೇರೆ ಯಾವ ಗುಣ ಲಕ್ಷಣಗಳೂ ನನ್ನಲ್ಲಿ ಇರಲಿಲ್ಲ. ಅಪ್ಪ ಅಮ್ಮ ಮಾಡಿಸಿದ ಟ್ರೀಟ್ ಮೆಂಟ್ ಗಳ ನಂತರವೂ ನನಗೆ ಓಲೆ ಕಾಣಿಸುತ್ತದೆ ಎಂದು ಹೇಳಿದರೆ ಅವರು ಸಂಕಟ ಪಟ್ಟುಕೊಳ್ಳುತ್ತಾರೆ ಅಂತ ಗೊತ್ತಿತ್ತು. ಅದಕ್ಕೆ ನನಗೆ ಈಗ ಅಂತದ್ದೇನು ಕಾಣುವುದಿಲ್ಲ ಎಂದು ಸುಳ್ಳು ಸುಳ್ಳೇ ಹೇಳೆ ಅಪ್ಪ ಅಮ್ಮನನ್ನು ಸಮಾಧಾನ ಪಡಿಸಿದ್ದೆ.

ನಾನೇ ಮನಶ್ಯಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ಆರಿಸಿಕೊಂಡು ಅದರಲ್ಲೇ ಪಿ.ಜಿ ಮಾಡಿ ಈಗ ಅದೇ ವಿಷಯವನ್ನು ಪಾಠ ಮಾಡುತ್ತಿದ್ದೇನೆ. ಏನೂ ವ್ಯತ್ಯಾಸವಾಗಿಲ್ಲ. ಇಂದಿಗೂ ಹಾಗೇ ಆಗಾಗ ಆ ಮುತ್ತಿನ ಓಲೆ ಕಾಣಿಸಿಕೊಳ್ಳುತ್ತದೆ.

ಅಂತ ಓಲೆಯನ್ನು ಸುಮಾರು ಇಪ್ಪತ್ತು ವರ್ಷದಿಂದ ಹುಡುಕುತ್ತಿದ್ದೇನೆ. ಆಭರಣದ ಅಂಗಡಿಗಳನ್ನೆಲ್ಲಾ ಜಾಲಾಡಿದ್ದೇನೆ. ಇಷ್ಟು ದಿನ ಆದರೂ ಸಿಕ್ಕಿರಲಿಲ್ಲ. ಈಗ ಇವತ್ತು ಕಂಡಿತು. ಆ ಮುತ್ತಿನ ಓಲೆಯನ್ನ ಕೊಂಡು ತಂದೆ. ನನ್ನ ಗಂಡನಿಗೋ ಮಕ್ಕಳಿಗೋ ಈ ವಿಷಯದ ಬಗ್ಗೆ ಒಂದು ಚೂರು ಸುಳಿವುಕೊಡಲಿಲ್ಲ. ಅವರಿಗೆ ನಾನು ಕೊಂಡು ತಂದ ಮುತ್ತಿನ ಓಲೆಯನ್ನೇ ತೋರಿಸಲಿಲ್ಲ. ಅದನ್ನ ಲಾಕರಿನಲ್ಲಿ ಭದ್ರವಾಗಿ ಮುಚ್ಚಿಟ್ಟೆ. ಅವತ್ತಿನಿಂದ ನನಗೆ ಆ ಓಲೆ ಕಾಣಿಸುವುದು ನಿಂತು ಹೋಗಿದೆ.


ಬರೀ ಇಷ್ಟೇ ಆಗಿದ್ದರೆ, ಇದನ್ನೆಲ್ಲಾ ಹೇಳಬೇಕಾಗಿರಲಿಲ್ಲ. ಮೊನ್ನೆ ನನ್ನ ಹದಿನಾರು ವರ್ಷದ ಮಗಳಿಗೆ ತಲೆಸ್ನಾನ ಮಾಡಿಸುತ್ತಾ ಅವಳ ಉದ್ದಕೂದಲನ್ನು ಸೀಗೇಪುಡಿಯಲ್ಲಿ ಉಜ್ಜುತ್ತಿದ್ದೆ. ಆಗ ಹೇಳಿದಳು "ಅಮ್ಮ, ಮೊನ್ನೆಯಿಂದ ನಂಗೆ ನನ್ನ ಹಿಂದೆ ಯಾರೋ ಇದ್ದಾರೆ ಅನ್ಸುತ್ತೆ. ಬರೀ ಅವರು ಹಾಕಿಕೊಂಡಿರೋ ಮುತ್ತಿನ ಓಲೆ ಕಾಣ್ಸುತ್ತೆ, ಹಿಂತಿರುಗಿ ನೋಡಿದ್ರೆ ಯಾರೂ ಇರಲ್ಲ" ಅಂದಳು. ನನ್ನ ಎದೆ ಧಸಕ್ ಎಂದಿತು. ರೂಮಿಗೆ ಹೋಗಿ ಲಾಕರ್ ಬೀಗ ತೆಗೆದು ನೋಡಿದೆ. ಆ ಮುತ್ತಿನ ಓಲೆ ಅಲ್ಲಿರಲಿಲ್ಲ.!!

24 comments:

ಅಮರ said...

........ :))

ರಂಜನಾ ಹೆಗ್ಡೆ said...

ಇದರಲ್ಲಿ ಯಾಕೋ ನಂಗೆ ಜೋಗಿಯ ಒಂದು ಕಥೆಯ ಚಾಪು ಕಾಣಿಸ್ತಾ ಇದೆ. but good.

Unknown said...

NANU MUTTIA OOLE HAKKONDIDDINI.
IDUVAREGA YARU NANNA NODIDE ANTA HELILLA.
---------------------
TUMBA CHANNAGIDE KHUSHI AYTU.
BEGA INNONDU BARLI.
YAKO LATE MADTIDIYA ANNISUTTE.

Unknown said...

ನಾನು ಕೂಡ ಮುತ್ತಿನ ಓಲೆ ಹಾಕ್ಕೊಂಡಿದ್ದೇನೆ. ಆದರೆ ಯಾರು ನನ್ನ ನೋಡಿದೆ ಅಂಥ ಹೇಳಿಲ್ಲ.
ಈ ಬ್ಲಾಗ್ ಲೋಕಕ್ಕೆ ಹೊಸಬ. ಮೊನ್ನೆ ನಿಮ್ಮ ಎಲ್ಲ ಲೇಖನ ಓದಿದೆ . ಚೆನ್ನಾಗಿದೆ. ಈ ಎಲ್ಲ ಲೇಖನ ಬಗ್ಗೆ ಯಾವಾಗಲಾದರೂ ವಿವರವಾಗಿ ಬರೆಯುತ್ತೇನೆ.

Unknown said...

NANU MUTTIA OOLE HAKKONDIDDINI.
IDUVAREGA YARU NANNA NODIDE ANTA HELILLA.
---------------------
TUMBA CHANNAGIDE KHUSHI AYTU.
BEGA INNONDU BARLI.
YAKO LATE MADTIDIYA ANNISUTTE.

ಶಾಂತಲಾ ಭಂಡಿ (ಸನ್ನಿಧಿ) said...

ಮೃಗನಯಿನಿ...
ಚೆನ್ನಾಗಿ ಬರೆದಿದ್ದೀರಾ....
ಓದಿಮುಗಿದಾಗ ಪ್ರಶ್ನೆಗಳು ಆವರಿಸಿಕೊಂಡವು, ಉತ್ತರವನ್ನೂ ಹೊತ್ತುಕೊಂಡು.
(ಬೇಜಾರಾಗ್ಬೇಡಿ, ನಂಗೂ ರಂಜನಾ ಹೇಳಿದಂಗೆ ಕಥೆ ಓದುತ್ತಾ ಜೋಗಿಯವರ "ಅವನು ಮರಳಿ ಬಂದಿದ್ದ.." ಕಥೆ ನೆನಪಾಯ್ತು. :)
ಕಥಾ ಹಂದರ ಇಷ್ಟವಾಯ್ತು. ಸರಳವಾಗಿ ಸಾಗಿ ನೇರ ಮನದೊಳಕ್ಕೇ ಹೊಕ್ಕು ಪ್ರಶ್ನೆಗಳನ್ನು ನೆಟ್ಟು ಬಿಡುವಂತಿದೆ.
ಬರೆಯುತ್ತಿರಿ. ಓದುತ್ತಿರುತ್ತೇವೆ.

ARUN MANIPAL said...

ಕಥೆ ತುಂಬಾ ಚೆನ್ನಾಗಿದೆ...ಮ್ಯಾಜಿಕ್ ರಿಯಲಿಸಮ್ ಒಳಗೊಂಡಿರುವ ಕಥೆಗಳನ್ನು ಜೋಗಿ ತುಂಬಾ ಅದ್ಬುತವಾಗಿ ಹೇಳುತ್ತಾರೆ.ಹಾಗಾಗಿ ನೀನು ಅಂತದ್ದೇ subject ಕಥೆ ಹೇಳಲು ಎತ್ತಿಕೊಂಡಾಗ ಅವರ ನೆನಪಾಯ್ತು.;-)

Unknown said...

ಅಬ್ಬ್ಬಾ!!!!! "ಆಪ್ತಮಿತ್ರ" ಚಿತ್ರ ನೋಡಿದ ಹಾಗಾಯಿತು...:-)

-ಪ್ರಸಾದ್

ವಿಜಯ್ ಜೋಶಿ said...

:-):-):-) CHENNAAGIDHE :-):-):-)

ವಿ.ರಾ.ಹೆ. said...

ಆಹ್ ! ಮೈ ಜುಮ್ಮೆನಿಸುವಂತ ಕಥೆ. ಆಗಾಗ ಇಂತ ಕಥೆಗಳು ಬರುತ್ತಿರಲಿ. ಹಾಲೂಸಿನೇಶನ್ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಮೂಡಿಸಿದೆ ಇದು.

ಅಂದ ಹಾಗೆ, ಇತ್ತೀಚೆಗೆ ನಿಮ್ಮ typing mistakeಗಳು ಬಹಳ ಕಡಿಮೆಯಾಗಿವೆಯಲ್ಲ! ಹ್ಮ್..good development ;)

Anonymous said...

Hello. This post is likeable, and your blog is very interesting, congratulations :-). I will add in my blogroll =). If possible gives a last there on my blog, it is about the Wireless, I hope you enjoy. The address is http://wireless-brasil.blogspot.com. A hug.

Shree said...

hagendre magaligu adee kayelena whatever its nice

ಮೃಗನಯನೀ said...

@Amar
;-)

@Ranjana nd Shaantala

ಜೋಗಿ ನೆನಪು ತರಿಸಿದರೆ ಕುಷಿ. ಅವ್ರ ಹಂಗೇ ಬರ್ದಿದೀನಿ ಅಂದ್ರೆ ಮುಜುಗರ. ಪ್ರಶ್ನೆಗಳು ಆವರಿಸಿಕೊಂಡರೆ ಬರೆದ ಕಥೆ ಸಾರ್ಥಕ.

ಮೃಗನಯನೀ said...

@MaLLi

ಧನ್ಯವಾದಗಳು. ನಾನು ಮನಸ್ಸು ಬಂದಾಗ ಬರೆಯೋ ಹುಡುಗಿ. ಲೇಟಾದರೆ ಅದು ನನ್ನ ಲಹರಿಯ ತಪ್ಪು.

@ಅರುಣ್

ಅವರ ಕಥೆ ನೋಡಿ ನನಗೂ ಅಂಥದ್ದನ್ನು ಬರೆಯ್ಬೇಕೆನಿಸಿದ್ದು ನಿಜ. ನಿಮ್ಗೆ ಇಷ್ಟವ್ವದರೆ ನನಗೆ ಕುಷಿ.

@ಪ್ರಸಾದ್
:-).. ನಾಗವಲ್ಲಿ ಬದಲು ....

@ವಿಜಯ್
;-)

ಮೃಗನಯನೀ said...

@ವಿಕಾಸ
;-) ;-) ನಂಗೆ ಟೈಪ್ ಮಾಡಿಕೊಟ್ಟ ಚಂದದ ಹುಡುಗನಿಗೆ ಧನ್ಯವಾದಗಳನ್ನು ಸಲ್ಲಿಸುತ್ತಾ....

@Wireless

thnx wireless happy that u likd it.

@ಅಗ್ನಿ

ನಂಗೂ ಗೊತ್ತಿಲ್ಲ ಪುಟ್ಟ. ಅವ್ಳನ್ನೇ ಕೇಳು. ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳು ಇರಲೇಬೇಕಾ...್

Unknown said...

ಇತ್ತೀಚೆಗೆ 'ಓಲೆ'ಗಳನ್ನ ಬರೆಯುವವರೇ ಇಲ್ಲ ಅಂತ ಹಿರಿಯರು ಪೇಚಾಡ್ತಿರ್ತಾರೆ. ಆದ್ರೆ ನಿಮ್ಮ ಬರಹ ಆ ಕೊರತೆಯನ್ನ ಕಡಿಮೆ ಮಾಡಿದೆ.
ನಿರೂಪಣೆ ಇನ್ನೊಂದಿಷ್ಟು ಆಸಕ್ತಿಕರವಾಗಿದ್ದಿದ್ರೆ ಜೋಗಿ ಕಥೆಗೆ ಸರಿಸಾಟಿಯಾಗ್ತಿತ್ತು.
(ಮನಶ್ಯಾಸ್ತ್ರ ಅಲ್ಲ. ಅದು ಮನಶ್ಶಾಸ್ತ್ರ. ಕನ್ನಡವನ್ನ ಬೆಳೆಸದೇ ಇದ್ರೂ ಉಳ್ಸೋಣ. ಅಲ್ವಾ?)

Tina said...

ಫ್ರೀತಿಯ ಹುಡುಗೀ,
ನಮ್ಮಲ್ಲಿ ಸಸ್ಪೆನ್ಸು ಮಿಸ್ಟರಿ ಇತ್ಯಾದಿ genreಗಳನ್ನ ಯಾವ ಹುಡುಗೀರೂ ಟ್ರೈ ಮಾಡುತ್ತಿಲ್ಲ ಅಂತ ಮೊನ್ನೆ ಯಾರ ಹತ್ತಿರಾನೋ ಮಾತಾಡಿದ್ದೆ. RGV ಮೂವಿಯೊಂದನ್ನ ನೋಡಿದ ಹಾಗೆ ಭಾಸವಾಯ್ತು! ಚನಾಗಿ ಬರ್ದಿದೀ. ಇನ್ನೂ ಈ ದಿಸೆಯಲ್ಲಿ ಪ್ರಯತ್ನ ಮಾಡು. Who knows,ಕನ್ನಡಕ್ಕೊಬ್ಬ ಅಗಾಥಾ ಕ್ರಿಸ್ಟಿಯೋ, ಲೇಡಿ ಸ್ಟೀಫನ್ ಕಿಂಗೋ ಸಿಕ್ಕಿಬಿಡಬಹುದು!!
ಪ್ರೀತಿಯಿಂದ,
-ಟೀನಾ
p.s.: ಇತರ ಬ್ಲಾಗುಗಳ ಹಾಗೆ ನೀನೂ ಕಮೆಂಟುಗಳಿಗೆ ಓಪನ್ ಐಡಿ, ಯುಆರೆಲ್ ಗಳ ಆಪ್ಷನ್ನುಗಳನ್ನ ಯಾಕೆ ಕೊಟ್ಟಿಲ್ಲ? ನಿನ್ನ ಬ್ಲಾಗ್ ಸೆಟ್ಟಿಂಗಿನಲ್ಲಿ ಬದಲಾವಣೆ ಮಾಡು. ವರ್ಡ್ ಪ್ರೆಸ್ ನಿಂದ ಬರುವ ನಮ್ಮಂಥವರಿಗೆ ಅನುಕೂಲ.

Madhava said...

kathe ista aitu. odi eneno nenapaitu. eneno maretuhoitu.

Ultrafast laser said...

"ಹೂವಂತೆ ನನ್ನ ಅರಳಿಸಿದ್ದ. ಹಿತವಾಗಿ ಕಲಕಿದ್ದ ಅವನು"
ಈ ಪ್ರೇಸ್ ಅನ್ನು ತೀರ ವಯಸ್ಸಾದವರು ಬರೆದಿದ್ದರೆ ಅನುಭವ ಎಂದು ಅಸಡ್ಡೆ ಮಾಡಬಹುದಿತ್ತು!. ಒಟ್ಟಾರೆ ಕತಾ ಹಂದರವನ್ನು ಹೊರತುಪಡಿಸಿ , ಆ ಫ್ರೆಸ್ ಬರೆಯುವಾಗ ತಮ್ಮ ಮನದಾಳದಲ್ಲಿ ಆಗಿದ್ದಿರಬಹುದಾದ ರೋಮಾಂಚನವನ್ನು ಉಹಿಸಿಕೊಳ್ಳುವುದು ಏಕೋ ನನಗೆ ಕುಶಿ ಕೊಡುವ ವಿಚಾರ!.(ಫಾರ್ ಅ ಚೇಂಜ್ , ತುಂಟು ಅಭಿವ್ಯಕ್ತಿಗೆ ಕ್ಷಮೆ ಇದೆ ಎಂದು ಭಾವಿಸಿದ್ದೇನೆ!)

Dr.D.M.Sagar (Original)

Ultrafast laser said...

"ಹೂವಂತೆ ನನ್ನ ಅರಳಿಸಿದ್ದ. ಹಿತವಾಗಿ ಕಲಕಿದ್ದ ಅವನು"
ಈ ಪ್ರೇಸ್ ಅನ್ನು ತೀರ ವಯಸ್ಸಾದವರು ಬರೆದಿದ್ದರೆ ಅನುಭವ ಎಂದು ಅಸಡ್ಡೆ ಮಾಡಬಹುದಿತ್ತು!. ಒಟ್ಟಾರೆ ಕತಾ ಹಂದರವನ್ನು ಹೊರತುಪಡಿಸಿ , ಆ ಫ್ರೆಸ್ ಬರೆಯುವಾಗ ತಮ್ಮ ಮನದಾಳದಲ್ಲಿ ಆಗಿದ್ದಿರಬಹುದಾದ ರೋಮಾಂಚನವನ್ನು ಉಹಿಸಿಕೊಳ್ಳುವುದು ಏಕೋ ನನಗೆ ಕುಶಿ ಕೊಡುವ ವಿಚಾರ!.(ಫಾರ್ ಅ ಚೇಂಜ್ , ತುಂಟು ಅಭಿವ್ಯಕ್ತಿಗೆ ಕ್ಷಮೆ ಇದೆ ಎಂದು ಭಾವಿಸಿದ್ದೇನೆ!)

Dr.D.M.Sagar (Original)

ಮೃಗನಯನೀ said...

@Krutavarma
ಎಲ್ಲಾ ರೀತಿಯಿಂದಲೂ ಇನ್ನೂ ಚೆನ್ನಗ್ ಬರೆಯೋಕ್ಕೆ try ಮಾಡಿಂಗ್.... ;-)

ಪ್ರೀತಿಯ ಟೀನಾ

thank U thank U... ಹಿಂಗೆಲ್ಲಾ ನೀವು ಹೊಗ್ಳ್ತಿದ್ರೆ ನಾನು ತೆಂಗಿನ್ ಮರ ಹತ್ತಿ ಕೂರೋದು ಖಂಡಿತ..;-)

ಅದೇನ್ ಸೆಟ್ಟಿಂಗ್ಸೋ ನಂಗಂತು ಅರ್ಥ ಆಗಲ್ಲ ನನ್ನ ಸ್ನೇಹಿತರಿಗೆ ಹೇಳಿ ಆದಷ್ಟು ಬೇಗ ಸರಿ ಮಾಡಸ್ತೆ.

@Maadhava

ಏನೇನ್ ನೆನ್ಪಾಯ್ತು...??? ;-o

@Saagar

;-O ;-O !!!!!

ಮಲ್ನಾಡ್ ಹುಡ್ಗಿ(ಒರಿಜಿನಲ್)

Unknown said...

ಲೇಟ್ ಆದ್ರು ಪರವಾಗಿಲ್ಲ..
'ಓಲೆ' ಹಿಡಿಸಿತು. ಟಿಪಿಕಲ್ ಮಲ್ನಾಡ್ ಹುಡ್ಗಿ ಸ್ಟೈಲ್‍ನಲ್ಲೇ ಮೂಡಿ ಬಂದಿದೆ ಕತೆ. ಮೂಡಿಬಂದ ಪ್ರಶ್ನೆಗಳಷ್ಟೇ ಆಗಿದ್ದರೆ ಸರಿಹೋಗುತಿತ್ತೇನೋ ಕತೆ ಮುಗಿದ ಬಳಿಕ ಯಾವುದೋ ಒಂದು ಬಗೆಯ ಅನೂಹ್ಯ ಭೀತಿ ಮನಸನ್ನ ಆವರಿಸಿಕೊಳ್ಳುವಂತೆ ಮಾಡಿದ್ದು ಕತೆಯ ಗರಿಮೆ!

Anonymous said...

Jogis infleunce DhaaLaagide,Swantike hechchisikolli ,madam(nimallina nimmatana bahaLanE ide,adannu anaavaraNagoLise)

Anonymous said...

mruganayanee,
obbara Chaaye innobbara mEle aavarusuvudu sahaja,anteye neevu jOgiyavara hang over nalli iddEri,horabanni ,nimma Chaapu mUDisiri,nimmalli aa satvavide.good luck