Tuesday, June 10, 2008

ಮನಸು ಮಹಾಮರ್ಕಟದ ಸುಳಿ

1
"ಕೊಲ್ಲುವ ಭಯ, ಹಸಿದುಕೊಂಡಿರುವ ಭರವಸೆ, ತಣ್ಣಗಿನ ನೋವು, ನನ್ನದಲ್ಲವೆನಿಸುವ ಕೆಲಸ, ಮಡುವುಗಟ್ಟುವ ಆತಂಕ ಅನುಮಾನಗಳು, ಗೊತ್ತೇ ಇಲ್ಲದ ಹೆಸರಿಸಲಾಗದ ದುಖ , ಕುರುಡು ಯೋಚನೆಗಳು ದಟ್ಟವಾಗಿ ಮೋಡದಂತೆ ನನ್ನನ್ನು ಆವರಿಸಿಕೊಳ್ಳುತ್ತಿದೆ ಅಂದುಕೊಳ್ಳುತ್ತಿರುವಾಗಲೇ, ಅವಳಿದ್ದಿದ್ದರೆ "ಇವೆಲ್ಲ ಮೋಡದಂತೆ ಆವರಿಸಿಕೊಳ್ಳುತ್ತಿವೆ ಅಂತ ಯಾಕೆ ಅಂದುಕೋತಿಯ? ದುಖಕ್ಕೆ ಮೋಡಾನೆ ಯಾಕೆ ಉಪಾಮಾನವಾಗಿ ಬಳಸಿಕೊಳ್ಳಬೇಕು?" ಅಂತ ಕೇಳಿರೋಳು. ಮೋಡ ಬೇಡ, ಮತ್ತೇನು? ಉಸಿರುಗಟ್ಟಿಸುವ ಗಾಳಿಯಂತೆ, ಮುಳುಗಿಸುವ ನೀರಿನಂತೆ, ಗಡಚಿಕ್ಕುವ, ಆಕ್ರಂದನದಂತೆ, ಯಾವುದಂತೆಯೋ ಆವರಿಸಿಕೊಳ್ಳುತ್ತಿರುವ ಈ ಎಲ್ಲವುಗಳಿಂದ ದೂರ ಹೋಗಿ ದನ ಕಾಯಬೇಕು, ರಂಜೆ ಮರದಡಿಯ ಹೂವು ಹೆಕ್ಕಬೇಕು,ನೆಲ್ಲಿಕಾಯಿ ತಿನ್ನಬೇಕು. ನಾನು ಕೇವಲ ಹತ್ತು ವರ್ಷದವನಾಗಿದ್ದಾಗ ಪಕ್ಕದ ಮನೆಯ ೨೧ ವರ್ಷದ ಹುಡುಗಿ ನನ್ನ ಕರೆದು ತೋರಿಸಿದ ಅವಳ ಬೆತ್ತಲು ದೇಹವನ್ನು ಮತ್ತೆ ಸುಮ್ಮನೇ ಅದೇ ಮುಗ್ಧತೆಯಿಂದ ನೋಡಬೇಕು, ಕೃಷ್ಣನ ಜೊತೆ ಪಂದ್ಯ ಕಟ್ಟಿ ನರ್ಮದೆಯಲ್ಲಿ ಕೈಸೋಲೋವರೆಗೂ ಈಜಬೇಕು, ತೆಳ್ಳಗೆ ಹರಡಿದ ಕಾಡುಗಳಲ್ಲಿ, ಅವಳ ಜೊತೆ ಕೈ ಕೈ ಹಿಡಿದುಕೊಂಡು ಮಾತೇ ಆಡದೆ ಅಲೆಯಬೇಕು" ಕಾರಿನ ಸೀಟನ್ನು ಹಿಂದಕ್ಕೆ ಮಾಡಿ ಒರಗಿಕೊಂಡು ಕಣ್ಣು ಮುಚ್ಚಿದ.

ಇಪ್ಪತ್ತು ವರ್ಷದ ಹಿಂದೆ ಓದಿದ್ದ ಅರುಣ್ ಜೋಶಿಯವರ ಕಾದಂಬರಿಯ ಮೊದಲ ಪುಟದಲ್ಲಿದ್ದ ಸಾಲು "it irked him to be here, he could not rest ", ನೆನಪಾಯಿತು. ಅನಘಗೆ ಈ ಕಾದಂಬರಿಯನ್ನು ಓದಲು ಹೇಳಬೇಕು ಅಂದುಕೊಂಡ.ಆ ಸಾಲು ಯಥಾವತ್ತಾಗಿ ಯಾಕೆ ನೆನಪಾಯಿತು? ಕಿಟಕಿ ಹೊರಗಡೆ ನೋಡಿದ ಬೆಳಕು ನಿಧಾನವಾಗಿ ಹೊಂಬಣ್ಣವಾಗುತ್ತಾ ಕಿತ್ತಲೆಯ ರಸದಂತೆ ಆಕಾಶವನೆಲ್ಲ ತುಂಬುತ್ತಿದೆ ಅನಿಸುತಿದ್ದರೆ ಇದಕ್ಕೆ ಸಂಜೆ ಎಂಬ ಮುದ್ಡಾದ ಹೆಸರಿದೆಯಲ್ಲ ಅಂದುಕೊಳ್ಳುತ್ತಾ ಅವನ ಮನಸ್ಸು ಖುಷಿಯಾಗುತ್ತಿರುವಾಗಲೇ ತನ್ನ ಭಾರವಾದ ಕಂಗಳನ್ನು ಇನ್ನೂ ಭಾರವಾಗಿಸಿಕೊಂಡು ನೆಲ ನೋಡುತ್ತಾ ಶಮಾ ಕಾರ್ ಬಳಿ ಬಂದಳು. "ಶಿವು ನೀನು ಇಲ್ಲಿರ್ತಿಯ ಅಂತ ಗೊತ್ತಿತ್ತು. ಅಲ್ಲಿ ಕ್ಯಾಬಿನ್ ಹತ್ರ ಇಲ್ಲ ಅಂದ್ರೆ ಇಲ್ಲೇ ಇರ್ತಿಯ ಅಂತ ಬಂದೆ" ನಕ್ಕಳು. ಇವಳ್ಯಾಕೆ ಅನವಶ್ಯಕವಾಗಿ ಅಗತ್ಯಕ್ಕಿಂತ ಹೆಚ್ಚಾಗಿ ನಗುತ್ತಾಳೆ ಅಂದುಕೊಂಡ. ಇವಳು ಪರಿಚಯವಾದ ದಿನ ನೆನಪಾಯಿತು " ಇವಳು ಶಮಾ ನನ್ನ ಅಕ್ಕನ ಮಗಳು ಅಂತ ಕೃಷ್ಣ ಪರಿಚಯ ಮಾಡಿ ಕೊಡುವಾಗ ಇವಳ ಕಣ್ಣುಗಳು ತುಂಬಾ ಭಾರಾವಾಗಿದೆ ಅನಿಸಿದ್ದು ಬಿಟ್ಟರೆ ಇವಳಲ್ಲಿ ನನ್ನನ್ನು ಹಿಡಿದಿದಬಹುದಾದದ್ದು ಏನು ಇಲ್ಲ ಅಂತ ಅನಿಸಿದ್ದು ಜ್ಞಾಪಕವಾಯಿತು. "ನಿದ್ದೆ ಮಾಡ್ತಿದ್ದೆ, ಬಾ ಕ್ಯಾಂಟಿನ್ ಗೆ ಹೋಗಿ ತಿನ್ನುತ್ತಾ ಮಾತಾಡೋಣ..." ಶಮಾ ಬಂದಿದ್ಲು ಅಂದ್ರೆ ಅನಘ ಎಷ್ಟೊಂದು ಚುಡಾಯಿಸಬಹುದು ಅಂದುಕೊಂಡ.

2

ಮುದ್ಡಾದ ನಿದ್ದೆ ಮುಗಿಸಿ ಎದ್ದು ಕಿಟಕಿ ಹೊರಗಡೆ ನೋಡಿದಳು ಅನಘ. ಭುವಿಗೆ ಎಲ್ಲವನ್ನು ಸುರಿದುಖಾಲಿಯಾದ ಆಕಾಶ ಹಿತವಾಗಿ ಮುಲುಗುಟ್ಟುತ್ತಿದೆ ಅನ್ನಿಸಿತು. ಅವಳಿಗೆ ಹಾಗೆ ತನ್ನ ರೂಮಿನಿಂದ ಹೊರಗಡೆ ನೋಡುತ್ತಾ ಕೂರುವುದೆಂದರೆ ಬಹಳ ಇಷ್ಟ ಅನ್ನುವುದು ಅವಳು ಕೂತಿರುವುದನ್ನು ನೋಡಿದರೆ ಗೊತ್ತಾಗುತಿತ್ತು. ಕತ್ತಲು, ಕಡಲು, ಮಳೆ, ಅಮ್ಮ ನನಗೆ ಪೂರ್ತಿ ಅರ್ಥ ಆದ ದಿನ ಬದುಕೊಕ್ಕೆ ಏನು ಉಳಿದೇ ಇರೋಲ್ಲ ಅಂತ ಹೊಳೀತು. ಆದರೆ ನದಿ, ಹಕ್ಕಿ, ನಗು, ನಕ್ಷತ್ರ ಇಲ್ಲ ಅಂದ್ರೆ ನಂಗೆ ಬದುಕೊಕ್ಕೆ ಆಗಲ್ಲ ಅಂದಿದ್ದ ಅವನ ಮಾತುಗಳ ಪುನರಾವರ್ತನೆಯೇ ತನ್ನ ಮನಸಿನಲ್ಲಿ ಮೂಡಿದ್ದು ಅನ್ನಿಸಿದರೂ ಅವನ ನೆನಪೇ ಉಸಿರಲ್ಲಿ ಸಣ್ಣ ಪುಳಕವನ್ನು ತುಂಬಿತು.


ಅವತ್ತು ಅವನು ಬೆಂಗಳೂರಿನಲ್ಲಿ ಸಿಕ್ಕಾಗ ತುಂಬಾ ಬೇಜಾರಾಗಿದ್ದಾನೆ ಅಂತ ಗೊತ್ತಾಗುತ್ತಿತ್ತು. ಬೇಜಾರ್ ಯಾಕೆ? ಕಾರಣ ಹೇಳು ಅಂತ ಕೇಳಿದ್ದು ಸ್ಟುಪಿಡಿಟಿ. ಎಷ್ಟೊಂದು ಸತಿ ಬೇಜಾರಾಗಿರೋವಾಗ ಯಾರಾದರು ಕಾರಣ ಕೇಳಿದರೆ "ಕಾರಣ ಗೊತ್ತಿಲ್ಲ ನಂಗ್ ಒಂದೊಂದ್ ಸತಿ ಹಿಂಗಾಗುತ್ತೆ ಅಂತ ನಾನೇ ಹೇಳಿಲ್ಲವ...."

ಅಡುಗೆ ಮನೆಗೆ ಎದ್ದು ಹೋದಳು.ಅಜ್ಜಿ ಎಂದಿನಂತೆ ಬಿಡದೆ ಮಾತಾಡುತಿದ್ರೆ ಚಿಕ್ಕಮ್ಮ ತಾನು ಈ ಲೋಕದವಳೇ ಅಲ್ಲ ಅನ್ನೋತರ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಾ ಅಜ್ಜಿಯ ಮಾತು ತನಗೆ ತಾಕುತ್ತಲೇ ಇಲ್ಲ ಅನ್ನೋ ರೀತಿ ಇರುವುದು ಕಂಡಿತು.ಇದು ದಿನಾ ನೋಡುವ ದೃಶ್ಯವಾದರೂ ಚಿಕ್ಕಮ್ಮಂಗೆ ಹಂಗೆ ಹೇಗೆ ಇರೋಕೆ ಸಾಧ್ಯ ಅಂತ ಮತ್ತೆ ಅಶ್ಚರ್ಯವಾಯಿತು. "ಕಾಫಿ ಫ್ಲಾಸ್ಕ್ ನಲ್ಲಿದೆಯ?" ತಾನು ಯಾರನ್ನು ಕೇಳಿದೆ? ಚಿಕ್ಕಮ್ಮನನ್ನೋ, ಅಜ್ಜಿಯನ್ನೋ ಎಂದು ಗೊಂದಲಗೊಳ್ಳುತ್ತಲೇ, ಗ್ರೈಂಡರ್ ನಿಂದ ದೋಸೆ ಹಿಟ್ಟನ್ನು ಇಳಿಸುತಿದ್ದ ಚಿಕ್ಕಮ್ಮನನ್ನು ಹೊಸದಾಗಿ ಅನ್ನುವಂತೆ ನೋಡಿದಳು. ಚಿಕ್ಕಮ್ಮ ಎಷ್ಟು ಲಕ್ಷಣ ಅಲ್ಲವ ಮತ್ತೆ ಅನ್ನಿಸಿತು. "ಒಂದೈದೆ ನಿಮಿಷ ಕಾಯಿ ಪುಟ್ಟಾ, ಬಿಸಿ ಕಾಫಿ ಮಾಡ್ಕೊಡ್ತಿನಿ." ಅಂದರು ಅಜ್ಜಿ.


ಮತ್ತೆ ರೂಮಿಗೆ ಬಂದರೆ ಅಲ್ಲಿ ಅವನದೇ ಘಮ. ಅವನು ಈ ಮನೆಗೆ ಬಂದದ್ದೆ ಇಲ್ಲ ಆದ್ರೆ ಇಲ್ಲಿ ಮಾತ್ರ ನನಗೆ ಅವನ ಸಾಮಿಪ್ಯದ ಅನುಭವವಾಗುತ್ತೆ. ಅವನು ಯಾಕೆ ಇಷ್ಟು ಡಿಜೆಕ್‌ಟೆಡ್ ಆಗಿದಾನೆ ಈ ಮೆಲಂಖಲಿಗೆ ಕಾರಣ ಏನು ಅಂದುಕೊಳ್ಳುತ್ತಿರುವಾಗಲೇ ಡಿಜೆಕ್ಷನ್, ಮೆಲಂಖಲಿ, ಡೆಸ್ಪಾಂಡನ್ಸೀ, ಮಾರ್ಬಿಡಿಟೀ ಎಲ್ಲ ಹತ್ತಿರ ಹತ್ತಿರದ ಪದಗಳು ಆದರೆ ಒಂದಕ್ಕೊಂದಕ್ಕೆ ಇರುವ ವ್ಯತ್ಯಾಸ ಏನಂತ ನೋಡಲು ಡಿಕ್ಷನರಿ ಪುಟಗಳನ್ನು ತಿರುವಿದಳು. ಖಿನ್ನತೆ, ಮ್ಲಾನತೆ, ಉಮ್ಮಳ, ನಿರಾಸೆ, ಮಂಕು ಕವಿ, ಗೀಳು ಹಿಡಿದ ಮನಸ್ಸು ಅಂತೆಲ್ಲಾ ಎಲ್ಲ ಪದಗಳಿಗೂ ಒಂದೇ ತರ ಇರುವ ಅರ್ಥಗಳನ್ನು ನೋಡುವಾಗ, "ಡಿಕ್ಷನರಿಗಳು ಇರಬಾರದು ಕಣೇ ನಮ್ಮ ಮನಸಿಗೆ ಬಂದ ಹಾಗೆ ಪದಗಳನ್ನ ಬಳಸಿಕೊಳ್ಳಬಹುದು ಅನ್ನೋ ಸ್ವಾತಂತ್ರನ ಕಿತ್ತುಕೊಳ್ಳತ್ತೆ ಅದು" ಅಂತ ಅವನು ಯಾವತ್ತೋ ಅಂದಿದ್ದು ಜ್ಞಾಪಕವಾಗಿ ಡಿಕ್ಷನರಿಯನ್ನ ಟಪ್ ಅಂತ ಮುಚಿಟ್ಟು ಅದರ ಮೇಲೆ ಸಿಟ್ಟು ಮಾಡಿಕೊಂಡಳು.


ನಿರಾಸೆ, ಮ್ಲಾನತೆ, ಖಿನ್ನತೆ, ಇತ್ಯಾದಿಗಳ ಮೂಲ ಯಾವುದು? ಯಾಕೆ ಯಾವಾಗಲಾದರೊಮ್ಮೆ ಎಲ್ಲರಿಂದ ದೂರ ಹೊರಟು ಹೋಗೋಣ ಅನ್ನಿಸುತ್ತೆ? ಯಾಕೆ ಎಲ್ಲರ ಮೇಲೆ ಅಘಾಧವಾಗಿ ಸಿಟ್ಟು ಬರುತ್ತೆ? ಬೇಜಾರಾಗುತ್ತೆ?ಸಂಕಟ, ಹಿಂಸೆ ಆಗುತ್ತೆ? ಸಿಟ್ಟನ್ನು ಚಲ್ಲಲಾರದೆ ಅಸಹಾಯಕವಾಗಿ ಯಾಕೆ ಓದ್ದಾಡುತ್ತೇವೆ? ಅಹಂಗೆ ತುಂಬಾ ಪೆಟ್ಟಾದರೆ ಹಾಗಾಗುತ್ತಲ್ಲವ? ನಮ್ಮನ್ನು ಯಾರಾದರೂ ಅಸಡ್ಡೆ ಮಾಡಿದಾಗ, ಗಮನಿಸದೇ ಹೋದಾಗ, ಅವಮಾನ ಮಾಡಿದಾಗ, ಅರ್ಥವೇ ಮಾಡಿಕೊಳ್ಳುತ್ತಿಲ್ಲ ಅನ್ನಿಸಿದಾಗ ಹೀಗೆ ಆಗುತ್ತೆ ಆದರೆ ನಾವು ನಮ್ಮ ದುಃಖವನ್ನ, ನಿರಾಸೆಯನ್ನ ಇನ್ನ್ಯಾವುದೋ ಕಾರಣದಿಂದ ಆಗಿದೆ ಅಂದುಕೊಳ್ಳುತ್ತೇವೆ. "ನಿನ್ನ ಅಹಂಗೆ ಪೆಟ್ಟು ಕೊಟ್ಟೋರು ಯಾರು? ಯಾರಾದರಾಗಲಿ ಹೇಳಬೇಡ ಆದರೆ ಇನ್ನೂ ಮುಂದೆ ಅದಕ್ಕೆಲ್ಲಾ ತಲೆಕೆಡಸಿಕೊಳ್ಳಬೇಡ." ಅಂತ ನಾನು ಹೇಳಿದ್ದು ಸರಿ ಅಂದುಕೊಂಡಳು .


3

ಆಂಧ್ರ ಹೊಟೇಲಿನಲ್ಲಿ ಉಟಕ್ಕೆ ಅಂತ ಆಫೀಸಿನವರ ಜೊತೆ ಹೋದಾಗ ಅಲ್ಲಿ ಅವರು ಬಡಿಸಿದ ಚಟ್ನಿಪುಡಿ ನೋಡುತ್ತಲೇ ಅನಘಳ ನೆನಪಾಯಿತು. ಅವಳು ಹೇಳಿದ್ದನ್ನು ನೆನಪಿಸಿಕೊಳ್ಳತೊಡಗಿದ................. " ಅಪ್ಪನ ಜೊತೆ ನಾನು ನನ್ನ ತಮ್ಮ ಉಟ ಮಾಡ್ತಿದ್ದಿದ್ದು ಅಂದ್ರೆ ಶನಿವಾರ, ಭಾನುವಾರದ ದಿನ ಮಾತ್ರ. ಭಾನುವಾರ ಪುಲಾವೋ, ಬಿಸಿಬೇಳೆ ಬಾತ್, ಪುಳಿಯೊಗ್ರೆನೊ ಏನಾದ್ರೂ ಮಾಡಿರೋರು, ಜೊತೆಗೆ ಕಂಪಲ್ಸರಿ ಜಿರಿಗೆ,ಮೆಣಸು, ತೆಂಗಿನ ಕಾಯಿ ಹಾಕಿದ ಮೊಸರನ್ನ. ಅಪ್ಪ ಅಮ್ಮಂಗೆ ಮೊಸರನ್ನಕ್ಕೆ ತೆಂಗಿನಕಾಯಿ ಹಾಕೋದರ ಬಗ್ಗೆ ಯಾವಾಗಲೂ ಪುಟ್ಟ ಜಗಳ ಆಗೋದು. "ನೀ ಕಾಯಿ ತುರ್ದಿದ್ದು ಕಮ್ಮಿ ಆಯ್ತು ಸಾಕಾಗಲ್ಲ." ಅಂತ ಅಪ್ಪ ಅಮ್ಮಂಗ್ ಹೇಳದು, "ನೀವು ಮೊಸರನ್ನಕ್ಕೆ ಒಂದ್ ರಾಶಿ ಕಾಯಿ ಪೆಟ್ಟಿದ್ರೆ ನಾ ತಿನ್ನಲ್ಲ" ಅಂತ ಅಮ್ಮ ಕೂಗಾಡದು ರೂಮಿನಲ್ಲಿ ಓದ್‌ಕೊಂಡು ಕೂರುತಿದ್ದ ನಂಗೆ ನನ್ನ ತಮ್ಮನಿಗೆ ಕೇಳಿಸುತ್ತಿತ್ತು. ನೀ ಹಿಂಗ್ ಕೂಗಿದ್ರೆ ಮಕ್ಕಳು ಏನ್ ಓದ್ತಾರೆ ಅನ್ನೋರು ಅಪ್ಪ. ಆಮೇಲೆ ವಾದ ತುಂಬಾ ಮೆತ್ತಗೆ ನಡೆಯುತ್ತಿತ್ತು. ಅರ್ಥ ಆಗದ ವಿಷಯ ಅಂದ್ರೆ ಪ್ರತಿ ವಾರ ಅದೇ ವಿಷಯದ ಮೇಲೆ ಜಗಳ ಆಡ್ತಿದ್ರಲ್ಲ ಅಂತ.


ನನಗೆ ಇವತ್ತಿಗೂ ಕಾಡೋದು ಅಂದ್ರೆ ಶನಿವಾರದ ಮಧ್ಯಾನ್ಹದ ಉಟ. ನಾನು ನನ್ನ ತಮ್ಮ ಅಪ್ಪ ಬರೋಹೊತ್ತಿಗೆಲ್ಲಾ ಉಟ ಮುಗಿಸಿರ್ತಿದ್ವಿ.ಅಪ್ಪ ಅಮ್ಮ ಉಟಕ್ಕೆ ಕೂತ್ರೆ, ನಾ ಬಡಿಸುತ್ತಿದ್ದೆ. ನಮ್ಮ ಊಟ ಹಿಂಗಿರ್ತಿತ್ತು.... ಅನ್ನ ಸಾರು ನೆಂಚಿಕೊಳ್ಳೋಕೆ ಯಾವುದಾದರೂ ಪಲ್ಯ ಅಥವಾ ಸಂಡಿಗೆ, ಹಪ್ಪಳ, ಆಮೇಲೆ ಅನ್ನ ಚಟ್ನಿ ಪುಡಿ ಎಣ್ಣೆ ಹಾಕಿ ಕಲ್ಸೊದು, ಅದಕ್ಕೆ ನೆಂಚಿಕೊಳ್ಳೊಕ್ಕೆ ಸಾರಿನ ತಳದಲ್ಲಿರೊ ಬೇಳೆ. ಆಮೇಲೆ ಅನ್ನ ಮೊಸರು ಉಪ್ಪಿನಕಾಯಿ. ವಾರದಲ್ಲಿ ಮೂರು ನಾಲ್ಕು ದಿನ ಸಾರಿನ ಬದಲು ಹುಳಿನೊ ಅಥವಾ ಮಜ್ಜಿಗೆ ಹುಳಿನೊ ಇರ್ತಿತ್ತು. ಆದ್ರೆ ಚಟ್ನಿ ಪುಡಿ ಅನ್ನ ಮೊಸರನ್ನ ಇರಲೇ ಬೇಕು. ಚಟ್ನಿ ಪುಡಿ ಖಾಲಿಯಾದ ಒಂದೆರಡು ದಿನ ಪುಳಿಯೊಗ್ರೆ ಗೊಜ್ಜಿನಲ್ಲೋ ಅಥವಾ ಉಪ್ಪಿನಕಾಯಿ ರಸದಲ್ಲೋ ಕಲಸಿಕೊಂಡು ತಿನ್ನುತಿದ್ವಿ. ಅಷ್ಟರೊಳಗೆ ಅಮ್ಮ ಚಟ್ನಿ ಪುಡಿ ಮಾಡಿರೋಳು. ಮತ್ತೆ ಅದೇ ರೊಟೀನು.

ಶನಿವಾರ ಮಧ್ಯಾನ್ಹ ನಾವು ಸ್ಕೂಲಿನಿಂದ ಬಂದು ಉಟ ಮಾಡಿ ಟೀವಿ ನೋಡ್ತಾ ಕೂರ್ತಿದ್ವಿ. ೨ ಕಾಲು ೨.೩೦ ಹೊತ್ತಿಗೆ ಅಪ್ಪ ಆಫೀಸಿನಿಂದ ಬಂದು ಕೈ ಕಾಲ್ ತೊಳೆದು ಅಮ್ಮನ ಜೊತೆಗೆ ಉಟಕ್ಕೆ ಕೂರೋರು. ನಾನು ಬಡಿಸ್ಟಿದ್ದೆ. ಅಪ್ಪ ಚಟ್ನಿ ಪುಡಿ ಅನ್ನದಲ್ಲಿ ಕಲಸಿಕೊಂಡು ತಿನ್ನೋವಾಗ ಬರೋ ಘಮ ಇದೆಯಲ್ಲಾ ನಂಗೆ ತುಂಬಾ ಇಷ್ಟ್ಟ ಅದು. ನಾ ಕಲ್ಸಿಕೊಂಡಾಗ ಯಾಕೆ ಹಂಗೆ ಘಮ ಬರ್ತಿರ್ಲಿಲ್ಲ ಅಂತ ಇನ್ನೂ ಗೊತ್ತಾಗಿಲ್ಲ. ನಾನು ಎಲ್ಲಾ ರೀತಿಯ ಕಾಂಬಿನೇಷನ್ ಅಂದರೆ ಒಂದು ದಿನ ಚಟ್ನಿ ಪುಡಿ ಜಾಸ್ತಿ ಹಾಕೊಂಡು, ಇನ್ನೊಂದಿನ ಎಣ್ಣೆ ಕಮ್ಮಿ ಹಾಕೊಂಡು, ಎರಡೂ ಜಾಸ್ತಿ ಹಾಕೊಂಡು, ಇನ್ನೂ ಹೀಗೆ ಏನೇನೋ ಪ್ರಯತ್ನ ಮಾಡಿ ಕೊನೆಗೆ ಅಪ್ಪ ಎಷ್ಟು ಚಟ್ನಿ ಪುಡಿ ಎಷ್ಟು ಎಣ್ಣೆ ಹಾಕ್ಕೊತಾರೆ ಅಂತ ಗಮನಿಸಿ ಅದೇ ರೀತಿ ಹಾಕ್ಕೊ೦ಡು ಪ್ರಯತ್ನ ಮಾಡಿದ್ರೂ ಅಪ್ಪ ತಿನ್ನೋವಾಗ ಬರ್ತಿದ್ದ ಘಮ ಬೇರೇನೆ. ಜಸ್ಟ್ ಔಟ್ ಆಫ್ ದ್ ವರ್ಲ್ಡ್ ಅಂತಾರಲ್ಲ ಹಾಗೆ. ಅಪ್ಪ ತಿನ್ನೋವಾಗ ನಂಗೆ ಎಷ್ಟು ಟೆಂಪ್ಟ್ ಆಗೋದು ಅಂದ್ರೆ ಅಪ್ಪನ ತಟ್ಟೆಗೆ ಕೈಹಾಕಿ ತಿಂದುಬಿಡಣ ಅನ್ನ್ಸೋದು. ಆದ್ರೆ ಯಾವತ್ತೂ ಹಂಗ್ ಮಾಡಿರ್ಲಿಲ್ಲ ನಾನು. ಹಂಗ್ಯಾಕೆ ಮಾಡಲಿಲ್ಲ ಅಂತ ನಂಗೆ ಗೊತ್ತಿಲ್ಲ. ಅಪ್ಪ ಒಂದ್ಚೂರು ತಿನ್ಸೂ ಅಂದ್ರೆ ಅಪ್ಪ ಖಂಡಿತ ತಿನ್ಸಿರೋರು.ಆದ್ರೆ ನಂಗೆ ಕೇಳಬೇಕು ಅಂತಾನೆ ಗೊತ್ತಾಗುತ್ತಿರಲಿಲ್ಲ. ಹಂಗೇನಾದ್ರೂ ತಿನ್ನಿಸಿಬಿಟ್ಟಿದ್ದಿದ್ರೆ, ನಿರಾಶೆ ಆಗೋಗದೇನೋ..ಅಥವಾ ಚಟ್ನಿ ಪುಡಿ ಅನ್ನ ಕಲಸ್‌ಕೊಂಡು ತಿನ್ನೋವಾಗ್ಲೆಲ್ಲ ಅಪ್ಪನ ನೆನಪು ಬರ್ತಿಲಿಲ್ವೇನೋ ಅಂದಿದ್ದಳು. ವಾಸ್ತವತೆಯ ನಿರಾಸೆಗೆ ಹೆದರಿ ಕಲ್ಪನೆಯಲ್ಲೇ ಸುಖ ಕಂಡುಕೊಳ್ಳುವ ಹುಡುಗಿ ಅವಳು.ಅದಕ್ಕೆ ಮತ್ತೊಮ್ಮೆ ಪುರಾವೆ ಸಿಕ್ಕಿತಲ್ಲಾ....


ನಾವು ಅಂದು ಮೊದಮೊದಲು ಸೇರಿದ್ದೆವು ಅವತ್ತು ಎರಡನೆ ಸುತ್ತು ಪ್ರೀತಿ ಮುಗಿದ ಮೇಲೆ ಅವಳು ಮಾತಾಡದೆಕೂತಿದ್ದಳು ಕಣ್ಣುಗಳಲ್ಲಿ ಶೂನ್ಯ ಸುಸ್ತಾಗಿರಬೇಕು ಅನ್ನಿಸಿತು.
"ಅನಘ ಸುಸ್ತಾಯ್ತಾ' ಕೇಳಿದೆ.
"ಉಹೂ.." ಮಾತು ಮುಂದುವರಿಸುತ್ತಾಳೆ ಎಂದು ತಿಳಿದಿತ್ತು ಸ್ವಲ್ಪ ಹೊತ್ತು ಸುಮ್ಮನಿದ್ದೆ.
"ಶಿವು ಇದು ಬರಿ ಇಷ್ಟೇನಾ ಇದನ್ನೇ ಕವಿಗಳು, ಲೇಖಕರು ಅಷ್ಟು ಪರಿಪರಿಯಾಗಿ ಬಣ್ಣಿಸುತ್ತಾರ? ಇಷ್ಟ್ಟಕ್ಕಾಗಿ ಜನ ಅಷ್ಟೊಂದು ಹಾತೊರೆಯುತ್ತಾರ? ಹುಚ್ಚಾರಾಗುತ್ತರ? ಇದೇ ಉತ್ಕಟತೆಯ ಔನತ್ಯ ಅನ್ನುವಂತೆ ಆಡುತ್ತಾರ, ನಿನಗೆ ನನ್ನ ಜೊತೆಗೆ ಸಿಕ್ಕ ಅನುಭವವೇ ಬೇರೆ ಶಮಾಳ ಜೊತೆ ಸಿಗೋ ಅನುಭವವೇ ಬೇರೆ ಅನ್ನಿಸುತ್ತಾ? ಅಥವಾ ನಾನೇ ಏನೇನೋ ಕಲ್ಪಿಸಿಕೊಂಡಿದ್ದೇನಾ? ಅದಕ್ಕೆ ನಂಗೆ ನಿರಾಸೆ ಆಗ್ತಿದೆಯಾ?" ಅಂತ ಅವಳು ಪ್ರಶ್ನಿಸುತ್ತಲೊ ತನ್ನನ್ನೇ ತಾನು ಕೇಳಿಕೊಳ್ಳುತ್ತಳೋ ಇದ್ದರೆ ನನಗೆ ಮೊದಮೊದಲು ಇಜಿಪ್ಟ್ ನ ಪಿರಮಿಡ್ ನೋಡಿದಾಗ ಆದ ನಿರಾಸೆ ನೆನಪಾಯಿತು. ಎಲ್ಲರೂ ಹೊಗಳುತಿದ್ದ ಜಗತ್ತಿನ ಅಧ್ಬುತಗಳಲ್ಲಿ ಒಂದಾದ ಅವನ್ನು ನೋಡಿದಾಗ ಅನ್ನಿಸಿದ್ದು ಇದು ಬರಿ ಇಷ್ಟೇನಾ? ನನ್ನ ಕಲ್ಪನೆಯಲ್ಲಿ ಅಖಂಡವಾದದ್ದು ಬೇರೇನೋ ಇತ್ತಲ್ಲಾ ಅಂತ ತಳಮಳವಾಗಿತ್ತು. ವಾಸ್ತವಿಕತೆಗೂ ಕಲ್ಪನೆಗೂ ಎಷ್ಟೊಂದು ವ್ಯತ್ಯಾಸ ಅಲ್ಲವ? "supremecy of fantacy over fact" ಅಂತ ಒಂದು ಎಡವಟ್ಟಾದ ಸಾಲು ಹೊಳೆದು, ಸಾಲು ಎಡವಟ್ಟಾಗಿದ್ದರು ಹಿತವಾಗಿದೆ ಅನ್ನಿಸಿತು. 'ಪಿರಮಿಡ್ದಿನ ಬಗ್ಗೆ ಏನೇನೋ ಕಲ್ಪಿಸಿಕೊಂಡು ನಿರಾಸೆಗೊಂಡಿದ್ದು ನನ್ನ ತಪ್ಪಲ್ಲವ? ಪಿರಮಿಡ್ದೆನು ತನ್ನ ಬಗ್ಗೆ ತಾನು ಹೇಳಿಕೊಂಡಿರಲಿಲ್ಲವಲ್ಲ ಅಂತ ತನಗೆ ಅನ್ನಿಸಿದ್ದು, ಅವಳ ಕಲ್ಪನೆಯ ಎತ್ತರಕ್ಕೆ, ಅದರ ಆಳ ವಿಸ್ತಾರಗಳಿಗೆ ತಕ್ಕಂತೆ ತನಗೆ ಅವಳನ್ನು ತೃಪ್ತಿ ಪಡಿಸಲಾಗಲಿಲ್ಲವಲ್ಲ ಎಂಬ ಸುಪ್ತ ಮಾನಸಿನ ಹತಾಶೆಗೆ ಮುಲಾಮಿನಂತೆ ಹೊಳೆದ ಸಮರ್ಥನೆಯಿರಬಹುದ? "ಪಿರಮಿಡ್ದೆನು ತನ್ನ ಬಗ್ಗೆ ತಾನು ಹೇಳಿಕೊಂಡಿರಲಿಲ್ಲ ಅನ್ನುವುದು ನಾನು ಅವಳಿಗೆ ನಿನ್ನ ಸುಖದ ಉತ್ಕಟತೆಯನ್ನು ಮೀಟುತ್ತೇನೆ ಎಂದೇನೂ ಹೇಳಿರಲಿಲ್ಲವಲ್ಲಎಂಬುದರ ರೂಪಕವಾ?' ಅನಿಸಿದ್ದು ನೆನಪಾಗಿ ನಿಟ್ಟುಸಿರಿಟ್ಟ.ಹಾಗಾದರೆ ಅವಳ ಚಟ್ನಿಪುಡಿಯ ಅನುಭವಾದಂತೆ ಬರಿ ಕಲ್ಪನೆಗಳಲ್ಲೇ ಉಳಿದುಹೋಗಬೇಕಾ? ವಾಸ್ತವಕ್ಕೆ ಎದುರಾಗಬಾರದ? ಕೇಳಿಕೊಂಡ.

"ನಿನಗೆ ನನ್ನ ಜೊತೆಗೆ ಸಿಗೋ ಅನುಭವವೇ ಬೇರೆ ಶಮಾಳ ಜೊತೆ ಸಿಗೋ ಅನುಭವವೇ ಬೇರೆ ಅನ್ನಿಸುತ್ತಾ?" ಅಂತ ಅವಳು ಯಾಕೆ ಕೇಳಿದ್ದಳು? ಶಮಾಳನ್ನು ನಾನು ಸೇರುತ್ತೇನೆ ಅಂತ ಅವಳು ಅಂದುಕೊಂಡದ್ದು ಯಾಕೆ? ಶಮಾ ನನ್ನ ಆಸಕ್ತಿ ಕೆರಳಿಸಲು ಪ್ರಯತ್ನಿಸುತ್ತಾ ನನ್ನ ಜೊತೆ ಮಾತಾಡೋವಾಗಲೆಲ್ಲ , ವ್ಯವಹರಿಸೋವಾಗಲೆಲ್ಲ ನನ್ನ ಒರಗಿಕೊಂಡೋ ಪಕ್ಕದಲ್ಲಿ ಕೂತುಕೊಂಡೋ ಇರುವುದನ್ನು ಹಾಗೂ ನಾನು ಇದ್ಯಾವುದನ್ನು ವಿರೋಧಿಸದೆ ಸುಮ್ಮನೇ ಇರುವುದನ್ನು ನೋಡಿದ್ದರಿಂದ ಹಾಗೆಂದುಕೊಂಡಳ, ನಿಜವಾಗಲೂ ನಾನು ಶಮಾಳನ್ನುಕೂಡಿದ್ದು ಮೊನ್ನೆ ಮೊನ್ನೆ, ಅವಳನ್ನು ಕೂಡಿದ್ದು ನನ್ನ ಇಚ್ಛೆಯಿಂದ ಅಂತೂ ಅಲ್ಲ. ಅವಳು ಎಡೆಬಿಡದೆ ನನ್ನ ಬೆನ್ನು ಬಿದ್ದಿದರಿಂದ ಅಲ್ಲವ. ಸುಮ್ಮನಿದ್ದವನು ಆಫೀಸಿನವರ ಮೇಲಿದ್ದ ಸಿಟ್ಟನ್ನ ತೀರಿಸಿ ಕೊಳ್ಳಲು,ಅಲ್ಲಿ ಆದ ಅವಮಾನ ಅಸಡ್ಡೆಯನ್ನು ನೀಗಿಕೊಳ್ಳಲು ಇವಳನ್ನು ಬಳಸಿಕೊಂಡೆನ? ಬಳಸಿಕೊಂಡೆ ಅನ್ನುವುದು ಸರಿಯಾದ ಪದವೇ ಅಲ್ಲ.. ಬಳಸಿಕೊಂಡೆ ಅನ್ನಬೇಕಾದರೆ ನನಗೆನಾದರೂ ಉಪಯೋಗವಗಿರಬೇಕು ಅಲ್ಲವಾ? ಆದರೆ ನನಗೇನು ಅನ್ನಿಸಲೇ ಇಲ್ಲವಲ್ಲ.. ನನ್ನ ಮನಸಿನಲ್ಲಿ ಕಡೆಯುತ್ತಿದ್ದ ಕಳಮಲಗಳು ಕಡೆದು ನಿರಾಗುವ ಬದಲು ಇನ್ನೂ ಹೆಪ್ಪುಗಟ್ಟಿದುವಲ್ಲ. ಬಳಸಿಕೊಂಡಿದಿದ್ದು ನಾನಾ ಅವಳಾ..' ನಿಟ್ಟುಸಿರಿಟ್ಟ!

4

ಅವಳು ಭಾನುವಾರಕ್ಕೆ ಇಟ್ಟಿರುವ ಮತ್ತೊಂದು ಹೆಸರೇ, ಅಭ್ಯಂಜನದ ದಿನ ಎಂದು. ಭಾನುವಾರ ಬೆಳಿಗ್ಗೆ ಏಳುತ್ತಲೇ ಹಲ್ಲುಜ್ಜಿ ಅಜ್ಜಿ ಮಾಡಿರುವ ಸಕ್ಕರೆ ಪಾನಕದಂತೆ ಇರುವ ಕಾಫಿಯನ್ನ ಲೋಟಕ್ಕೆ ಬಗ್ಗಿಸಿಕೊಂಡು ಹಾಲಿಗೆ ಬಂದು ಕಸಾಗುಡಿಸುತ್ತಿರುವ ಬೈರನ ಹೆಂಡತಿಯನ್ನ ನೋಡುತ್ತಾ ತಾನು ಚಿಕ್ಕವಳಿದ್ದಾಗ ಅಮ್ಮನ ಹಳೆ ಸೀರೆಯನ್ನು ಉಟ್ಟಿದ್ದ ಅವಳನ್ನೇ ಅಮ್ಮ ಎಂದುಕೊಂಡಿದ್ದು ನೆನಪಾಗುತ್ತಿರುವಾಗಲೆ ಅಮ್ಮ ಬಂದು "ಬೇಗ ಬೇಗ ಕಾಫಿ ಕುಡಿ ಎಣ್ಣೆ ಹಾಕ್ಬಿಡ್ತೀನಿ ಸ್ನಾನ ಮಾಡ್ಕೊಂಬಿಡು. ಇಲ್ಲ ತಿಂಡಿ ತಿಂದು ಎಣ್ಣೆ ಹಾಕ್ಕೋತಿಯೋ?" ಎಂದು ಕೇಳಿದ ಪ್ರಶ್ನೆಗೆ
"ತಿಂಡಿ ಬೇಕು.." ಎಂದು ಉತ್ತರಿಸಿದ್ದು ಅವಳಿಗೆ ಕೇಳಿಸಿತೋ ಇಲ್ಲವೋ ಎಂದುಕೊಳ್ಳುತ್ತಿರುವಾಗಲೇ
"ದೋಸೆ ಹಾಕಾಗಿದೆ ಆಮೇಲೆ ಆರ್ ಹೋಯ್ತು ಅಂತಿಯ ಬಂದು ತಿನ್ನು." ಎಂದು ಕೂಗಿಕೊಳ್ಳುತ್ತಿರುವ ಅಮ್ಮನ ಮಾತು ಕೇಳಿಸಿ, ತಿಂಡಿ ತಿಂದು, ಆಮೇಲೆ ಎಣ್ಣೆ ಹಾಕಿಕೊಂಡು ಒಂದರ್ಧ ಗಂಟೆ ಬಿಟ್ಟು ಸ್ನಾನಕ್ಕೆ ಇಳಿದಾಗ, "ಅಮ್ಮ ಹಂಡೆಯಿಂದ ಸುರಿವ ಬಿಸಿನೀರಿಗೆ ಬಚ್ಚಲಿನ ಬಿಳಿ ಗೋಡೆಗಳೇ ಕೆಂಪಾಗಿವೆ ನಾನು ಕೆಂಪಾಗುವುದು ಏನು ಮಹಾ..." ಎಂದು ಕೊಂಡು ಸ್ನಾನ ಮುಗಿಸಿ ಅಮ್ಮ ಹೊದೆಸುವ ಕಪ್ಪು ರಗ್ಗಿನೊಳಗೆ ಸಾದ್ಯಾಂತವಾಗಿ ಬೆವರಿ,ಎದ್ದು,ಬಟ್ಟೆ ಹಾಕಿಕೊಂಡು, ದೇವರಿಗೆ ನಮಸ್ಕಾರ ಮಾಡಿ, ಜಗುಲಿಗೆ ಬಂದರೆ ಎಳನೀರು ಕೊಚ್ಚಿ ಕೊಡುವ ಭೈರ........


ಸೊಂಟದ ಕೆಳಗಿನವರೆಗೂ ಇಳಿಬಿಟ್ಟ ತಲೆಗೂದಲು ತುಂಬಾ ಕಪ್ಪಗೆನಿಲ್ಲ ಅದಕ್ಕೆ ಹೊಂಬಣ್ಣದ ಲೇಪನವಿದೆ. ಅವಳು ಅಭ್ಯಂಜನ ಮಾಡಿದ ಸಂಜೆ ನೀಲಿ ಬಣ್ಣದ ದೂರ ದೂರ ಹಲ್ಲಿರುವ ಹಾಗೂ ಜೇನಿನ ಬಣ್ಣದ ಹತ್ತಿರ ಹತ್ತಿರ ಹಲ್ಲಿರುವ ಬಾಚಣಿಗೆಗಳನ್ನು ಪಕ್ಕ ಪಕ್ಕದಲ್ಲಿಟ್ಟುಕೊಂಡು, ಸಿ ಡಿ ಯಲ್ಲಿ ಮಂದ್ರ ಸ್ವರದಲ್ಲಿ ಬರುತ್ತಿರುವ ಗಜಲ್ಗಳಿಗೆ ಕಿವಿಯಾಗುತ್ತಾ, ಕಿಟಕಿಯ ಹೊರಗೆ ಕಾಣುವ ಸಂಜೆಯ ಬಣ್ಣಗಳಿಗೆ ಬೆರಗಾಗುತ್ತಾ, ಅವುಗಳ ಆಳವನ್ನು ಅಳೆಯುತ್ತಾ, ಕೂದಲ ಒಂದೊಂದು ಸಿಕ್ಕು ಬಿಡಿಸಿದಾಗಲೂ ಹಾಯ್...ಎನಿಸಿ, ಹಾಯ್... ಎನಿಸುತ್ತಲೇ ಅವನ ನೆನಪಾಗಿ, ಅವನ ನೆನಪಾಗುತ್ತಲೇ ಯಾವುದೋ ಯೋಚನೆಯಲ್ಲೋ, ನೆನಪಿನಲ್ಲೋ, ಕಲ್ಪನೆಯಲ್ಲೋ ಕಳೆದು ಹೋಗುವ, ಕಳೆದುಹೋದಂತೆಲ್ಲಾ ತಿಳಿಯಾಗುವ ಪ್ರಕ್ರಿಯೆಗೆ ಅವಳು ಸಿಕ್ಕುಬಿಡಿಸಿಕೊಳ್ಳುವುದು ಎಂದು ಹೆಸರಿಟ್ಟಿರುವುದು ಎಷ್ಟೊಂದು ಸೂಕ್ತವಾದದ್ದು ಅನಿಸುತ್ತದೆ.

ಹೀಗೆ ಸಿಕ್ಕು ಬಿಡಿಸಿಕೊಳ್ಳುತ್ತಲೇ ಅವನು ಹೇಳಿದ್ದನ್ನು ಜ್ಞಾಪಿಸಿಕೊಂಡಳು " ನಾನು ಅಷ್ಟೆಲ್ಲಾ ಸುತ್ತಿ ಮಾಡಿ ಆ ಬಳ್ಳಾರಿ , ಬಿಜಾಪುರಗಳ ಸುಡು ಬಿಸಿಲಿನಲ್ಲಿ ಕೆಲಸಮಾಡಿಕೊಂಡು ಬಂದರೆ ನನ್ನ ಯಾವುದೊಂದು ರಿಪೋರ್ಟು ಸರಿಯಾಗಿ ಪ್ರಕಟ ಆಗಿಲ್ಲ. ಹೀಗೆ ಮಾಡುವುದಾಗಿದ್ದಾರೆ ನನ್ನನ್ನೇ ಅಷ್ಟು ದೂರ ಕಳುಹಿಸುವ ಅವಶ್ಯಕತೆ ಏನಿತ್ತು? ನನಗೆ ಇವರ್ಯಾರು ಬೆಲೆ ಕೊಡ್ತಿಲ್ಲ ನನ್ನ ಅವಶ್ಯಕತೆ ಇವರಿಗಿಲ್ಲ ಅಂತ ಅನ್ನಿಸುತ್ತೆ. "ಹೀಗ್ಯಾಕೆ ಮಾಡಿದಿರಿ? ಹೀಗೇಕಾಯ್ತು?" ಅಂದರೆ "ಈ ಸರಿ ಅಡ್ಜಸ್ಟ್ ಮಾಡ್‌ಕೊಳಿ ಶಿವು, ಮುಂದಿನ ಸತಿಯಿಂದ ಈ ತಪ್ಪುಗಳು ಆಗದಂತೆ ನೋಡ್ಕೋತಿವಿ." ಅಂತಾರೆ. ನನ್ನನೆಲ್ಲ ಇವರು ತುಳಿಯಕ್ಕೆ ಪ್ರಯತ್ನ ಪಡ್ತಿದ್ದಾರೆ, ನಾನು ಖ್ಯಾತಿಗೆ ಬರುತ್ತಿರೋದು ಇವರಿಗೆ ತಡೆಯೊಕ್ಕೆ ಆಗ್ತಿಲ್ಲ ಅದಕ್ಕೆ ಹೀಗೆ ಮಾಡ್ತಿದಾರೆ ಅಂತ ಸ್ಪಷ್ಟವಾದಾಗ ಹಿಂಸೆ ಆಗುತ್ತೆ. ಎಲ್ಲರೂ ಹೀಗೆ ಮಾಡಿ ನನ್ನ ಬೆಳೆಯೋಕೆ ಬಿಡಲ್ಲವೇನೋ ಅಂತ ಭಯವಾಗುತ್ತೆ." ಅಂದಿದ್ದ ಅವನ ಕಣ್ಣ ಅಂಚಿನಲ್ಲಿ ನೀರು ಹೆಪ್ಪುಗಟ್ಟಿದ್ದು ಕಂಡದ್ದು ನನ್ನ ಕಲ್ಪನೆಯೋ ಅಥವಾ ನಿಜವೋ ಎಂದು ಗೊಂದಲವಾಯಿತು. ಅವನು ಆ ರೀತಿ ಇದ್ದದ್ದು ನೆನಪಾಗಿ ಸಂಕಟವಾಯಿತು.

5

"ದೇಹಕ್ಕೆ ಗಾಯವಾದರೆ ಮುಲಾಮು ಹಚ್ಚಿ ಸರಿಪಡಿಸಿಕೊಳ್ಳಬಹುದು, ಆದರೆ ಮನಸ್ಸಿಗೆ ಗಾಯವಾದರೆ ಏನು ಮಾಡಲಾಗುವುದಿಲ್ಲ." ಅಂತ ಯಾವುದೋ ಒಂದು ಉಪನ್ಯಾಸದಲ್ಲಿ ಕೇಳಿದ್ದ ನೆನಪಾಗಿ ಮನಸ್ಸಿನ ಗಾಯಕ್ಕೆ ಮರೆವೆಂಬ ಮುಲಾಮಿದೆಯಲ್ಲಾ ದಿನಗಳು ಉರುಳಿದಂತೆ ಎಂಥಾ ಗಾಯಗಳು ವಾಸಿಯಾಗುತ್ತದೆ ಅಂದುಕೊಂಡ.

'ಸಿರಿಗೆರೆಯ ನೀರಿನಲ್ಲಿ ಅರಳಿದ ತಾವರೆಯಲಿ ಕೆಂಪಾಗಿ ನಿನ್ನ ಹೆಸರು......', ಎಂದು ಸಿ ಡಿ ಇಂದ ಹಾಡು ಹೊಮ್ಮುತಿತ್ತು. ಹಾಡು ಮುಗಿಯುತ್ತಲೇ ಕೆ. ಎಸ್. ನಾ ರ ಈ ಹಾಡಿನ ಹುಡಿಗಿಯ ಹೆಸರೆನಿರಬಹುದೆನ್ದು ಅಶ್ಚರ್ಯವಾಯಿತು! ಯೋಚಿಸಿದ "ಹೊಂದಾಳೇ ಹೂವಿನಲಿ ಹೊರಟ ಪರಿಮಳದಲಿ ಕೆಂಪಾಗಿ ನಿನ್ನ ಹೆಸರು.." ಎಂದು ಖುಷಿಯಿಂದ ಗುನುಗಿದ. ಹೆಸರೇನೆಂದು ಹೋಳಿಯಲಿಲ್ಲ 'ಶಾರದೆ ಇರಬಹುದ?' ಕೇಳಿಕೊಂಡ. ಅನಘನನ್ನು ಕೇಳೋಣ ಅನ್ನಿಸಿತು. ಆದರೆ ಅವಳು ಕೊಡಬಹುದಾದ ಉತ್ತರ ಹೊಳೆಯಿತು. "ಹೆಸರು ಮುಖ್ಯ ಅಲ್ಲ ಕಣೋ ಅವಳ ನೆನಪಿನಲ್ಲಿ ಅವರು ಹಾಡಿದ ಹಾಡಿನ ಭಾವ ಮುಖ್ಯ" ಆದರೂ ಫೋನು ಮಾಡಿ " ಅನಘ , ಕೆ. ಎಸ್. ನಾ ರ 'ನಿನ್ನ ಹೆಸರು...' ಪದ್ಯದ ಹುಡುಗಿ ಹೆಸರೆನಿರಬಹುದೆ?" ಕೇಳಿದ. ಅವನು ಅಂದುಕೊಂಡಿದಕ್ಕಿಂತ ಭಿನ್ನವಾಗಿ ತಕ್ಷಣ ಅವಳು " ಉಲ್ಲಸಿನಿ" ಅಂದಳು. ಅಶ್ಚರ್ಯವಾಗಿ "ಯಾಕೆ?" ಕೇಳಿದ. " ಅಷ್ಟು ಬೇಜಾರಾಗಿದ್ದವನಿಗೆ ಉಲ್ಲಾಸ ತುಂಬಿದ ಹುಡುಗಿಯ ಹಾಡಲ್ಲವ ಅದು ಅದಕ್ಕೆ" ಅಂದಳು ಖುಷಿಯಿಂದ....ಖುಷಿ ಹರಡಿತು...

Monday, May 19, 2008

ಅಲೆಬಂದು ಕರೆಯುವುದು ನಿನ್ನೊಲುಮೆಯರಮನೆಗೆ

ಬೆಳಗ ಚೈತನ್ಯವೇ..
ಚುನಾವಣೆಯ ಬಿಸಿ ವಾತಾವರಣಕ್ಕೂ ತಟ್ಟಿರಬೇಕು, ಇಲ್ಲಿ ಚಳಿ ಇಲ್ಲ. ಒಳ್ಳೆಯದಾಯಿತು ಚಳಿ ಇದ್ದಿದ್ದರೆ ನೀನು ಇನ್ನೂ ಬೇಕೆನಿಸುತ್ತಿದ್ದೆ. ನೀನು ಹಾಲೆಂಡಿಗೆ ಹೋದಮೇಲೆ ಇಲ್ಲಿ ತುಂಬಾ ಬೋರು. ಅಮ್ಮ ಮನೆಗೆ ಬಾ ಅಂದಳು, ಕೆಲಸಕ್ಕೆ ಒಂದುವಾರ ರಜ ಹಾಕಿ ಅಮ್ಮನ ಜೊತೆ ಸುಮ್ಮನೆ ಶಾಪಿಂಗು, ಮೂವಿ ಅಂತ ಸುತ್ತುತ್ತಿದ್ದೇನೆ.

ನಾನು ಅಮ್ಮ ಸಮುದ್ರದ ಬಳಿ ಹೋಗಿದ್ದೆವು. ಸಂಜೆ ಹೊತ್ತು, ಗಾಳಿ. ಅಪ್ಪಳಿಸುತ್ತಿದ್ದ ಅಲೆಗಳಿಗೆ ಪಾದಗಳನ್ನು ಒದ್ದೆ ಮಾಡಿ ಹೋಗುವ ಸಂಭ್ರಮ. ಅಲ್ಲೆಲ್ಲೋ ಸಮುದ್ರದಾಳದಲ್ಲಿ ಹುಟ್ಟಿ ಸುಳಿಸುಳಿದು ಬರುತ್ತಿದೆ ಅನಿಸುತ್ತಿದ್ದ ಗಾಳಿಗೆ ಮುಖಒಡ್ಡಿ ನಿಂತಿದ್ದರೆ ಅದು ನನ್ನ ತುಂಬ fierce ಆಗಿ, ಸಾದ್ಯಂತವಾಗಿ ಮುದ್ದಿಸುತ್ತಿದೆ ಅನ್ನಿಸಿತು. ಥೇಟು ನಿನ್ನಂತೆಯೇ ಅಂದುಕೊಂಡೆ.

ಅಲೆಬಂದು ಕರೆಯುವುದು ನಿನ್ನೊಲುಮೆಯರಮನೆಗೆ
ಒಳಗಡಲ ರತ್ನ ಪುರಿಗೆ
ಅಲೆಯಿಡುವ ಮುತ್ತಿನಲೇ ಕಾಣುವುದು ನಿನ್ನೊಲುಮೆ
ಒಳಗುಡಿಯ ಮೂರ್ತಿಮಹಿಮೆ...

ಇವತ್ತು ಒಬ್ಬಳೇ ಇರಬೇಕೆನ್ನಿಸಿತು. ಅಮ್ಮನನ್ನು ಅವಳ ಮನೆಯಲ್ಲಿ ಬಿಟ್ಟು ನಾನು ಇಲ್ಲಿ ಮನೆಗೆ ಬಂದೆ. ನೀನು ಚಿಕ್ಕ ಮಕ್ಕಳ ಹಾಗೆ ಎಲ್ಲವನ್ನೂ ನಿನ್ನ ಮುಂದೆ ಹರವಿಕೊಂಡು ಕೆಲಸ ಮಾಡುತ್ತಿರುತ್ತೀಯಲ್ಲ ಆ ಚಿತ್ರ ಕಣ್ಣ ಮುಂದೆ ಹಾದು ಹೋಯಿತು. ನೀನು ಹಾಗೆ ಕೂತಿರೋವಾಗ ನಂಗೆ ಎಷ್ಟು ಇಷ್ಟ ಆಗ್ತೀಯ ಗೊತ್ತಾ... ಮನೆ ತುಂಬ ನೀಟಾಗಿದೆ, ಏನೂ ಹರಡಿಲ್ಲ ಕೊಳೆಯಾಗಿಲ್ಲ. ನೀನಿಲ್ಲವಲ್ಲ..ಉಹುಂ ಕೊರಗ್ತಾ ಇಲ್ಲ ನಾನು, ನಿನ್ನ ನೆನಪುಗಳಿಂದ ನನ್ನ ಒಂಟಿತನ ಘಮ ಘಮ.


ಕಿಷನ್ ಮೆಸೇಜ್ ಕಳುಹಿಸಿದ್ದ
"I have seen old ship
sail like swans asleep" ಇದರ ಬಗ್ಗೆ ಕಮೆಂಟು ಮಾಡು ಅಂತ. ಪದ್ಯ ಯಾರದು ಕೇಳಿದೆ. 'ಯಾರದೋ ಗೊತ್ತಿಲ್ಲ, ಪದ್ಯದ ಹೆಸರೂ ನೆನಪಿಲ್ಲ ಸಾಲುಗಳು ಮಾತ್ರ ನೆನಪಾದವು' ಅಂದ. ಖುಷಿಯಾಯಿತು ನನಗೆ. ಸಾಲುಗಳು ಹಾಗೇ ನೆನಪಾಗಬೇಕು ಅಲ್ಲವ.. ಹೆಸರಿನ ಹಂಗಿಲ್ಲದೆ, ಕವಿಯ ಹಂಗಿಲ್ಲದೆ? ಹಾಗೆ ನೆನಪಾಗೋದ್ರಲ್ಲೇ ಆ ಸಾಲುಗಳ ಸಾರ್ಥಕತೆ ಇದೆ ಅನ್ನಿಸಿತು. ನಿಂಗೇನನ್ನಿಸುತ್ತೆ ಹುಡುಗಾ..?


J.M CoetzeeDisgrace ಕಾದಂಬರಿ ಒದುತ್ತಿದ್ದೆ ಹಾಯ್ ಬೆಂಗಳೂರಿನಲ್ಲಿ ಜಾನಕಿ ಈ ಪುಸ್ತಕದ ಬಗ್ಗೆ ಬರೆದಿದ್ದರು. ತುಂಬ ವಿಭಿನ್ನವಾಗಿದೆ ಕಣೋ ಕಾದಂಬರಿ ಅದರಲ್ಲಿ ಬರೋ David Lurie ಒಂದು ಕಡೆ ಹೀಗೆ ಹೇಳುತ್ತಾನೆ
"But in my experience poetry speaks to you either at first sight or not at all. A flash of revelation a flash of response like lightning like falling in love." ಮತ್ತೆ ಇನ್ನೊಂದು ಕಡೆ ಲೇಖಕ ಹೇಳುತ್ತಾನೆ "Exactly good or bad, he just does it. He dosent act on principle but on impulse." ನನಗೆ ಎಲ್ಲಕ್ಕಿಂತ ಅದರ ಆರನೇ ಅಧ್ಯಾಯ ತುಂಬ ಇಷ್ಟ ಆಯ್ತು.ನಿನ್ನ ತೋಳಿನ ಮೇಲೆ ತಲೆ ಇಟ್ಟು ಮಲಗಬೇಕು, ಇದನ್ನೆಲ್ಲಾ ಮಾತಾಡಬೇಕು, ಮಾತಾಡುತ್ತಾ ನಿನ್ನ ಎದೆಯ ಇಂಚಿಂಚನ್ನೂ ನನ್ನ ಬೆರಳುಗಳಲ್ಲಿ ಅಳೆಯಬೇಕು, ಅದರ ಹರವಿಗೆ ಸೋಲಬೇಕು, ಸುಸ್ಥಾಗಬೇಕು, ಸುಖ ಭೋರ್ಗರೆಯಬೇಕು... ಬೇಗ ಬಾ ಹುಡುಗಾ..........

.....ನಿನ್ನ ಪೇಪೆಜೀನ್ಸ್

Friday, March 28, 2008

ನಿಜದ ನೆರಳಿನ ನೆಲೆ

ಅನಂತಮೂರ್ತಿಗೆ ತಾನು ಚಿತ್ರಕಾರನೋ ಕವಿಯೋ ಲೇಖಕನೋ ಆಗಬೇಕಿತ್ತೆಂದು ಬಹಳ ಸಲ ಅನ್ನಿಸಿದ್ದುಂಟು. ಏಕೆಂದರೆ ಅವನೇ ಹೇಳುವಂತೆ ಉದಾಹರಣೆಗೆ ನಿಮಗೆ ಟ್ರೈನ್ ಪದ ಕೇಳಿದ ತಕ್ಷಣ ಏನನ್ನಿಸುತ್ತೆ? ಉದ್ದದ ಟ್ರೇನು, ಅದರ ಚುಕುಬುಕು ಶಬ್ದ ಅಥವ ಹೆಚ್ಚಂದರೆ ಅದರ ಬಣ್ಣ ಇಲ್ಲವೇ ನೀವು ಟ್ರೇನಿಗಾಗಿ ಕಾದೂ ಕಾದೂ ಬೇಸತ್ತ ದಿನ ಜ್ಞಾಪಕಕ್ಕೆ ಬರಬಹುದು . ಆದ್ರೆ ಅನಂತಮೂರ್ತಿಗೆ ಹಾಗಲ್ಲ ಅವನಿಗೆ ಟ್ರೇನೆಂದರೆ ಉದ್ದಕೆ ಓಡುತ್ತಿರುವ ಟ್ರೇನು, ಅದರಲ್ಲಿನ ಸೀಟು ತುಂಬಿ ಸೀಟುಗಳು ಸಾಲದೆ ನಿಂತಿರುವ ಜನ, ಅವರು ಯಾರಾದರೂ ಮುಂದಿನ ಸ್ಟಾಪಿನಲ್ಲಿ ಇಳಿಯುತ್ತಾರ ಎಂದು, ಕೂತಿರುವವರು ಬ್ಯಾಗನ್ನು ಸರಿಸುವುದನ್ನೇ ಗಮನಿಸುತ್ತಾ ಬ್ಯಾಗಿನ ಬಳಿ ಅವರ ಕೈ ಹೋದಾಗ ಖುಶಿ ಪಟ್ಟು ನಿಟ್ಟುಸಿರುಡುವ ಮೊದಲೇ ಆ ಬ್ಯಾಗಿಗೆ ಕೈ ಹಾಕಿದವನು ಅದೊರಳಗಿಂದ ಡಬ್ಬವೊಂದನ್ನು ತೆಗೆದು ಎಂಥದನ್ನೋ ತಿನ್ನಲು ಶುರು ಮಾಡಿದಾಗ ಆಗುವ ನಿರಾಸೆ, ಒಂದು ಹೆಡಿಗೆ ಸಾಮಾನನ್ನು ತೌರುಮನೆಯಿಂದ ತಂದು ಹೊರಟು ಬಂದಿರುವ ಹೆಂಗಸು ಆಗಾಗ ಸಾಮಾನನ್ನು ಲೆಕ್ಕ ಹಾಕುತ್ತಾ, ಅಲ್ಲೆಲ್ಲೋ ಬಾಗಿಲ ಬಳಿ ನಿಂತಿರುವ ದಾಸಯ್ಯನನ್ನು ಮಾತಾಡಿಸುತ್ತಿರುವ ತನ್ನ ತುಂಟ ಮಗನನ್ನು ಕಣ್ಣಲ್ಲೇ ಗದರಿಸುತ್ತಿರುವುದು, ಕಡಲೇ ಕಾಯಿಯೋ, ಪೇರಲೇ ಹಣ್ಣೋ, ಮಂಡಕ್ಕಿಯನ್ನೋ, ಎಂಥದೋ ವಡೆಯನ್ನೋ ಮಾರುವ ಹುಡುಗರು. ಅಲ್ಲೆಲ್ಲೋ ಏ.ಸಿ. ಛೇಂಬರಿನಲ್ಲಿ ಒಳ್ಳೊಳ್ಳೆ ಬಟ್ಟೆಯನ್ನ ಹಾಕಿಕೊಂಡು ಕೈಯಲ್ಲೊಂದು ಇಂಗ್ಲೀಷ್ ಪುಸ್ತಕವನ್ನು ಹಿಡಿದುಕೊಂಡೋ, ಇಯರ್ ಫೋನನ್ನು ಕಿವಿಯಲ್ಲಿ ಸಿಕ್ಕಿಸಿಕೊಂಡೋ ಕೂತಿರುವ ಹುಡುಗರು, ನಿದ್ದೆ ಮಾಡುತ್ತಿರುವ ಗಂಡಸರು, ಮುದ್ದು ಮುದ್ದಾದ ಬೆಳ್ಳಗಿನ ಮಕ್ಕಳು ಅಷ್ಟೇ ಚಂದದ ಅವರ ಅಮ್ಮಂದಿರು.. ಇನ್ನೂ ಏನೇನೋ ಕಲ್ಪನೆ ಬರುತ್ತೆ. ಬರೀ ಟ್ರೇನಿನ ವಿಷಯವಲ್ಲ ಯಾರಿಗಾದರೂ ಒಂದು ಪ್ರಶಸ್ತಿ ಬಂದಿದೆ ಅಂದರೆ ಆ ಪ್ರಶಸ್ತಿಗೆ ಎಷ್ಟು ಜನ ಆಸೆ ಪಟ್ಟಿರಬಹುದು? ಅದು ಸರಿಯಾದವನಿಗೇ ಸಿಕ್ಕಿರಬಹುದಾ..? ಅಲ್ಲಿ ಏನೇನು ರಾಜಕೀಯಗಳು ನೆಡದಿರಬಹುದು? ಪ್ರಶಸ್ತಿಯನ್ನ ಸ್ವಲ್ಪದರಲ್ಲೇ ತಪ್ಪಿಸಿಕೊಂಡವನ ಗೋಳಿನ ಕಥೆಯೇನು? ಎಂದು ಯೋಚಿಸುತ್ತಿರುತ್ತಾನೆ. ಹೀಗೇ ಏನೇನೋ ಸ್ಕೂಲಿನ ಮಕ್ಕಳ ಬಗ್ಗೆ, ಅಲ್ಲೆಲ್ಲೋ ಆದ ಯುದ್ದದಲ್ಲಿ ಹೋರಾಡುತ್ತಿರುವ ಯೋಧನ ಯೋಚನೆಗಳ ಬಗ್ಗೆ, ಇತ್ಯಾದಿ.. ಆದರೆ ಅವನು ವಿದೇಶೀ ಕಂಪನಿಯೊಂದರಲ್ಲಿ ‘ಫಿನಾನ್ಸ್ ಮ್ಯಾನೇಜರ್’ ಆಗಿರೊದ್ರಿಂದ ಬಡ್ಜೆಟ್, ಪ್ರಾಫಿಟ್, ಲಾಸ್, ಫೋರ್ಕಾಸ್ಟ್ ಇತ್ಯಾದಿಗಳಲ್ಲೇ ಮುಳುಗಿ ಹೋಗಿರೊದ್ರಿಂದ ಮತ್ತು ಬರೆಯಲು ಕೂತಾಗಲೆಲ್ಲಾ ಹೇಗೆ ಶುರುಮಾಡಬೇಕು ಎಂದು ತಿಳಿಯದೇ ಹೋಗುವುದರಿಂದ ಸುಮ್ಮನಾಗುತ್ತನೆ.

ಅವನು ಆಫೀಸಿಗೆ ಹೋಗಬೇಕಾದರೆ ದಿನವೂ ಆ ಹಾದಿಯಲ್ಲೇ ಬರುತ್ತನೆ. ಅದೇ ತಿರುವು, ಅದೇ ಹೊಂಡ, ಅದೆ ದಾರಿಯ ಬದಿಯ ಕರಿಬೇವಿನ ಮರ, ಅದೇ ಗಾಡಿಯ ಗೇರನ್ನು ಬದಲಿಸುವ ರೀತಿ, ಕಾರಲ್ಲಿ ಕೂತಾಗಿನಿಂದ ಏನೇನನ್ನೋ ಯೋಚಿಸುತ್ತಾ- ಕಲ್ಪಿಸಿಕೊಳ್ಳುತ್ತಾ ಹೊರಡುವವನಿಗೆ ಆಫೀಸು ತಲುಪುವುದು ಗೊತ್ತಾಗುತ್ತಿರಲಿಲ್ಲವೋ ಏನೋ ಆದರೆ ಅಲ್ಲೇ ಹತ್ತಿರದ ಆಸ್ಪತ್ರೆಯಿಂದ ಹೊರಹೊಗುವ ಅಥವ ಆಸ್ಪತ್ರೆಯೊಳಗೆ ದೊಡ್ಡ ಸದ್ದು ಮಾಡುತ್ತಾ ಒಳಬರುವ ಆಂಬ್ಯುಲೆನ್ಸ್‌ಗಳನ್ನು ನೋಡುತ್ತಲೇ ಅನಂತಮೂರ್ತಿಗೆ ವಿಚಿತ್ರ ಸಂಕಟ ಆಗುತ್ತೆ. ಅದರ ಒಳಗೆ ಮಲಗಿರಬಹುದಾದ ಪೇಷಂಟಿನ ಕಲ್ಪನೆಗಳು ಬರುತ್ತೆ. ಸುಟ್ಟ ಗಾಯವಿರಬಹುದಾ? ಬೈಕಿನಿಂದ ಬಿದ್ದಿದ್ದೋ? ಟಿ.ಬಿ? ಹಾರ್ಟಟ್ಯಾಕ್? ಕ್ಯಾನ್ಸರ್? ಯಾರ ಹೆಂಡತಿ, ಯಾರ ಮಾವ ಯಾರ ತಮ್ಮ ಇನ್ನ್ಯಾರ ಅಕ್ಕ, ಅವರ ಕಣ್ಣ ಕೆಂಪು, ಬದಲಿಸದ ಸೀರೆ, ಬಿಕ್ಕಳಿಸುವ ದುಃಖ, ತೂತಾದ ಬನೀನು, ಹೆದರಿದ ಹಣೆಯಂಚಿನ ಬೆವರು, ರಕ್ತ, ಮುಗ್ಗಲು ಬದಲಿಸುತ್ತಿರುವ ಸಂಕಟ, ಗ್ಲೂಕೊಸು, ಇಂಜೆಕ್ಷನ್ನು, ಕುಳ್ಳ ಡಾಕ್ಟ್ರು, ಬಿಳೀ ಬಟ್ಟೆಯ ವಾರ್ಡ್ ಬಾಯ್, ಮಲಿಯಾಳಿ ನರ್ಸು ಎಲ್ಲಾ ಮನಸ್ಸಿನಲ್ಲಿ ಮೂಡುವುದರಿಂದ ಆಫೀಸಿಗೆ ಬಂದು ಬೇಜಾರಾಗಿ ಕೂರುತ್ತನೆ.


“ಅವನನ್ನ ನಂಗೆ ಪ್ರೀತ್ಸಕ್ಕಾಗಲ್ಲ. ಅವನು ನನ್ನ ಪೂರ್ತಿ ಅರ್ಥ ಮಾಡ್ಕೊಂಡಿದಾನೆ. ನನ್ನ ಪ್ರತಿಯೊಂದು ರೀತಿಯೂ ಅವನಿಗೆ ಅರ್ಥ ಆಗುತ್ತೆ. ಮಾತಾಡೋಕ್ಕೆ ಕಷ್ಟ ಪಡುತ್ತಾ ಏನೋ ಹೇಳುತ್ತಿದ್ದರೆ ‘ನೀನು ಏನೋ ಹೇಳ್ಬೇಕು ಆದ್ರೆ ಏನನ್ನೋ ಹೇಳ್ತಾ ಇದೀಯ’ ಅಂತಾನೆ. ನಾನು ಎನಾದ್ರೂ ಹೇಳೋಕ್ ಮುಂಚೆ ಅದು ಅವನಿಗೆ ಗೊತ್ತಾಗಿಬಿಡುತ್ತೆ. ನಾನು ಎಲ್ಲಿಗೋ ಬರ್ತಿನಿ ಅಂತ ಹೇಳಿ, ಹೋಗದಿದ್ದಾಗ ಅವನೂ ಬಂದಿರೋಲ್ಲ. ‘ನೀ ಬರಲ್ಲ ಅಂತ ಅನ್ನಿಸ್ತು ಅದಕ್ಕೇ ನಾನೂ ಬರೋಕ್ ಹೋಗ್ಲಿಲ್ಲ’ ಅಂತಾನೆ. ಬಟ್ಟೆ ಅಂಗಡಿಗೆ ಹೋಗಿರ್ತೀವಿ ನಂಗೆ ಇಷ್ಟ ಆಗಿರೋ ಜೀನ್ಸ್‌ನ ತೋರಿಸುತ್ತ ‘ಇದು ನಿಂಗೆ ಇಷ್ಟ ಆಯ್ತಲ್ವ?’ ಅಂತಾನೆ. ಅವತ್ತು ಎಲ್ಲರೂ ಹೋಟಲಿಗೆ ಹೋಗಿದ್ವಲ್ಲ ನೆನಪಿದ್ಯಾ? ನಾನು ವೆಜ್ ಬಿರ್ಯಾನಿ ತಿನ್ನಣ ಅಂತಿದ್ದೆ.. ಮೆನು ನೋಡುತ್ತಾ ನಿಮಗೆಲ್ಲಾ ಏನು ಬೇಕು ಅಂತ ಕೇಳುತ್ತಾ ಆರ್ಡರ್ ಮಾಡುತ್ತಿದ್ದವನು ನನ್ನ ಸರದಿ ಬಂದಾಗ ‘ನಿಂಗೆ ವೆಜ್ ಬಿರ್ಯಾನಿ ಅಲ್ವಾ’ ಅಂತ ಕಣ್ ಹೊಡ್ದಾ.. ಆಶ್ಚರ್ಯ ಆಯ್ತು ನಂಗೆ. ಬರೀ ಇಷ್ಟೇ ಅಲ್ಲ.. ಪುಸ್ತಕ ತೊಗೊಳೋವಾಗ, ಮೂವಿಗೆ ಹೋಗಣ ಅನ್ಕೊಂಡಾಗ ಗಿಫ್ಟ್ ಹುಡುಕೋವಾಗ, ಎಲ್ಲಿಗಾದ್ರೂ ಹೋಗಣ ಅನ್ಕೊಂಡಾಗ ಏನಾದ್ರೂ ಅವನಿಗೆ ಗೊತ್ತಾಗುತ್ತೆ.

ಅಷ್ಟೆಲ್ಲಾ ಅರ್ಥ ಮಾಡ್ಕೊಂಡಿದಾನಲ್ಲ ಅದಕ್ಕೇ ಹಿಂಸೆ ಆಗತ್ತೆ ನಂಗೆ. ನಾನು ಏನು ಯೋಚಿಸಿರೂ ಗೊತ್ತಾಗುತ್ತಲ್ಲ ಅಂತ ಭಯವಾಗುತ್ತೆ. ನಾನು ಬಿಚ್ಚಿಟ್ಟ ಪುಸ್ತಕ ಅವನಿಗೆ. ಓದಿ ಮುಗಿಸಿದಾನೆ. ಬಹಳ ಇಷ್ಟವಾದ ಪುಸ್ತಕವನ್ನ ಮತ್ತೆ ಮತ್ತೆ ಓದುವ ಪ್ರೀತಿ ಇರಬಹುದು, ಆದರೆ ಮೊದಲನೆ ಸತಿ ಓದೋವಾಗ ಇರೋ ಕಾತರತೆ ಇರಲ್ಲ. ಅದು ದೇವರ ಪ್ರೀತಿ, ನಿಶ್ಚಲ ಸರೋವರದಂತೆ ಭೋರ್ಗರೆಯುವುದಿಲ್ಲ, ಉಕ್ಕುವುದಿಲ್ಲ. ನನಗೆ ಅಂಥ ಪ್ರೀತಿ ಬೇಕಾಗಿಲ್ಲ.... ಎಲ್ಲರಿಗೂ ಅರ್ಥ ಆಗೋದಿಲ್ಲ ಇದು. ಹೇಳಿದ್ರೆ ಹುಚ್ಚು ಅನ್ಕೊತಾರೆ. ಅಣ್ಣಾ ನೀನು ಇಷ್ಟು ಬಲವಂತ ಮಾಡಿದ್ಯಲ್ಲ ಅಂತ ಹೇಳ್ದೆ.” ಅಂತ ತುಂಬ ನಿಧಾನವಾಗಿ ಪಿಸುಗುಟ್ಟುವಂತೆ ಹೇಳಿದಳು ವಸುಂಧರ.

ಅವಳು ಪಿಸುಗುಟ್ಟುತ್ತಿದ್ದುದು ಕರೆಂಟು ಹೋಗಿ ಕತ್ತಲಾಗಿರುವುದಕ್ಕೋ ಇಲ್ಲವೇ ಮಹಡಿಮೇಲಿರುವ ಸೋದರತ್ತೆಗೆ ಕೇಳಿಸುತ್ತದೆ ಎಂಬ ಕಾರಣದಿಂದಲೋ ಎಂದು ಅರ್ಥವಾಗಲಿಲ್ಲ. ಮೇಲಿರುವ ಅತ್ತೆಗೆ ಕೇಳಿಸುವ ಪ್ರಮೇಯವಿರಲಿಲ್ಲ ಅವರು ಅಮ್ಮನ ಜೊತೆ ದೊಡ್ಡ ದನಿಯಲ್ಲಿ ಮಾತಾಡುತ್ತಿದ್ದರು. ಅತ್ತೆಗೆ ತಮ್ಮ ಮಗ ಜನ್ನ ಮತ್ತು ವಸುವಿನ ಮದುವೆಯಾಗಲಿ ಎಂಬ ಆಸೆ ಇತ್ತು. ಅವನಂತೂ ಇವಳನ್ನು ತುಂಬಾ ಪ್ರೀತಿಸುತ್ತಿದ್ದ, ತುಂಬಾ ಹಚ್ಚಿಕೊಂಡಿದ್ದ. ಇವಳೂ ‘ಅವನು ತುಂಬಾನೇ ಒಳ್ಳೆ ಹುಡ್ಗ ಆದ್ರೆ ಅವನನ್ನ ಮದುವೆ ಮಾತ್ರ ಆಗಲ್ಲ.’ ಅನ್ನುತ್ತಿದ್ದಳು. ಅವನು ಯಾಕೆ ಬೇಡ ಕಾರಣ ಹೇಳು ಅಂದಿದ್ದಕ್ಕೆ ಉತ್ತರ ಮಾತ್ರ ಕೊಟ್ಟಿರಲಿಲ್ಲ. ಸಂಜೆ ಆಫೀಸಿನಿಂದ ಬಂದಮೇಲೆ ಏನೇನೋ ಮಾತಡುತ್ತಾ ಕೂತಿರುವಾಗ ಫಕ್ಕನೆ ಕರೆಂಟು ಹೊಯಿತು. ಸ್ವಲ್ಪ ಹೊತ್ತು ಸುಮ್ಮನಿದ್ದು ಅಮೇಲೆ ಹೇಳಿದಳಲ್ಲಾ.....

ಹೌದಾ, ಕತ್ತಲು ಮೌನವನ್ನು ಕಲಿಸುತ್ತದಾ? ಕತ್ತಲಲ್ಲಿ ಬೊಬ್ಬೆ ಹಾಕಲಾಗುವುದಿಲ್ಲ. ನಾವ್ಯಾಕೆ ಕತ್ತಲಿಗೆ ಹೆದರಿ ಸುಮ್ಮನಾಗುತ್ತೇವೆ? ಇಲ್ಲವೇ ಕಳೆದುಹೋಗುತ್ತೇವೆ, ನಮ್ಮ ಒಳಗುಗಳನ್ನು ತಡಕಾಡುತ್ತೇವೆ? ಕತ್ತಲಾಗುತ್ತಾ ಹಕ್ಕಿಗಳೂ ಸುಮ್ಮನಾಗುತ್ತವಲ್ಲ..? ಕತ್ತಲಲ್ಲಿ ಮೌನವಾಗಿ ಆಪ್ತವಾಗುತ್ತೇವೆ, ಹತ್ತಿರ್‍ವಾಗುತ್ತೇವೆ ನಿಜವಾಗುತ್ತೆವೆ. ಕತ್ತಲಿಗೆ ನಮ್ಮ ಅಸ್ಥಿತ್ವವನ್ನ ಹಿರಿದಾಗಿಸುವ ಶಕ್ತಿ ಇದೆ. ಕತ್ತಲು ಗುಟ್ಟುಗಳನ್ನು ಅಡಗಿಸಿಕೊಳ್ಳುತ್ತೇನೆ ಎಂಬ ಭ್ರಮೆಯನ್ನ ಹುಟ್ಟಿಸುತ್ತದೆ ಅದಕ್ಕೆ ಧೈರ್ಯ ಮಾಡುತ್ತೇವೆ. ಕತ್ತಲಿಗೆ ವಿಚಿತ್ರವಾದ ಶಕ್ತಿ ಇದೆ. ಅದು ಸುಮ್ಮನೆ ಇರುತ್ತದೆ, ತಣ್ಣಗೆ ಕರೆಯುತ್ತದೆ. ಬೆಳಕಿನಲ್ಲಿ ಬತ್ತಲಾಗಿಸುತ್ತದೆ ಅಸಹಾಯಕವಾಗಿ ಕೈಚಲ್ಲುತ್ತದೆ ಅಂದುಕೊಂಡ.

ಅನಂತಮೂರ್ತಿಗೆ ಕಾಲೇಜು ದಿನಗಳ ನೆನಪು ಬರ್ತಿತ್ತು. ಜೋಗ್‌ಗೆ ಹೋದಾಗ ಅಲ್ಲಿ ಇನ್ನೊಂದು ಕಾಲೇಜಿನವರು ಇಪ್ಪತ್ತು ಜನ ಬಂದಿದ್ದರು. ಅವರಲ್ಲಿ ಎಂಟು ಜನ ಹುಡುಗರು, ಇಬ್ಬರು ಹುಡುಗೀರು ಪೂರ್‍ತಿ ಕೆಳಗಿಳಿದಿದ್ದರು. ಇಳಿಯೋದೇನೋ ಇಳಿದಿದ್ದಾರೆ ವಾಪಸ್ ಹೋಗೋಕ್ ಗೊತ್ತಾಗ್ತಿಲ್ಲ. ನೀರು-ಪಾಚಿ. ಒಬ್ಬಳು ಹುಡುಗಿಯಂತೂ ಸಂಜೆ ಕತ್ತಲಾಗುತ್ತಿದ್ದರೂ ಇನ್ನೂ ಸ್ವಲ್ಪ ಹೊತ್ತು ಇಲ್ಲೇ ಇರಣ ಅಂತ ಹಠ ಮಾಡುತ್ತಿದ್ದಳು. ಅವಳ ಉತ್ಸಾಹ ಹೇಗಿತ್ತೆಂದರೆ ಯಾವುದೋ ಹಕ್ಕಿಯ ಮುದ್ದು ಧ್ವನಿಯನ್ನ ನುಂಗಿದಾಳೇನೋ, ಆ ಧ್ವನಿಯ ಮಂದ್ರ ಆಲಾಪಗಳು ದೇಹದ ಮೂಲೆ ಮೂಲೆಗೂ, ಕಣ್ಣಿನ ಬೆಳಕಿಗೂ, ಮೂಗಿನ ಹಟಕ್ಕೂ, ನುಣುಪು ಕೆನ್ನೆಯ ಅಹಂಕಾರಕ್ಕೂ, ಅವಳು ಅಕಸ್ಮಾತಾಗಿ ಕಚ್ಚಿದರೂ ಸಾಕು ರಕ್ತ ಹೊರಬರುತ್ತೆ ಅನ್ನುವಂತಿದ್ದ ಕೆಂಪು ತುಟಿಯೊಳಗಿನ ಜೀವಕ್ಕೂ, ಒದ್ದೆಕೂದಲಿನಲ್ಲಿ ಸಿಕ್ಕಿ ಹಾಕಿಕೊಂಡ ನೀರ ಹನಿಗಳಿಗೂ, ಕೈ ಬೀರಳಿನ ಕೆಂಪಿಗೂ, ಕಾಲಿನ ಕಿರುಬೆರಳಿನ ಉಗುರಿಗೆ ಹಚ್ಚಿಕೊಂಡ ತೆಳು ನೇರಳೆ ಬಣ್ಣಕ್ಕೂ ಹರಡಿದೆ ಎನ್ನುವಂತೆ ಪುಟಿಯುತ್ತಿದ್ದಳು. ಅನಂತಮೂರ್ತಿ ಜನ್ನ ಸೇರಿಕೊಂಡು ಎಲ್ಲರಿಗೂ ಮೇಲೆ ಹೋಗಲು ಸಹಾಯ ಮಾಡುತ್ತಿದ್ದರು. ಎಲ್ಲರಿಗಿಂತಲೂ ಮುಂದೆ ಹೋಗುತ್ತಾ ಎಲ್ಲಿ ಜಾರುತ್ತೋ ಅಲ್ಲಿ ನಿಂತುಕೊಂಡು ಹಿಂದೆ ಬರುತ್ತಿರುವವರನ್ನು ದಾಟಿಸುತ್ತಿದ್ದರು. ಅವಳು ಬಂದಳು ದಾಟಿಸೋದಕ್ಕೆ ಅಂತ ಕೈ ಹಿದಿದುಕೊಂಡಾಗ ನೋಡಿದ.... ಪಾರದರ್ಶಕ ಕಣ್ಗಳು. ಆ ಕಣ್ಗಳಲ್ಲಿ ಎಂಥಾ ನಿರ್ಲಕ್ಷವಿತ್ತು ಅಂದರೆ ’ಅಬ್ಬ!’ ಅನ್ನಿಸಿತ್ತು.

ಜೋಗದಿಂದ ವಾಪಸ್ಸು ಬಂದಮೇಲೂ ಅವಳ ಕಣ್ಗಳು ಅವನನ್ನು ಎಡಬಿಡದೆ ಕಾಡಿದ್ದವು. ಆ ಹುಡುಗಿ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನವಳು ಅಂತ ಮಾತ್ರ ಗೊತ್ತಿತ್ತು. ಅವಳ ಬಗ್ಗೆ ಇಂಟರ್ನೆಟ್ಟಿನ ಆರ್ಕುಟ್ಟಿನಲ್ಲಿ ಹುಡುಕಲು ಪ್ರಯತ್ನ ಮಾಡಿದ, ಸಹ್ಯಾದ್ರಿ ಕಾಲೇಜಿನ ತನ್ನ ಸ್ನೇಹಿತರನ್ನು ವಿಚಾರಿಸಿದ ಆದರೆ ಉಪಯೋಗವಾಗಿರಲಿಲ್ಲ. ಅವಳ ಕಣ್ಗಳು ಅದರ ನಿರ್ಲಕ್ಷ ಇಂದಿಗೂ ಯಾಕೆ ಕಾಡುತ್ತೆ ಅಂದುಕೊಂಡ.

ಅಂಥ ನಿರ್ಲಕ್ಷ ವಸುವಿನ ಸ್ವಭಾವದಲ್ಲೇ ಇದೆ ಬರೀ ಕಣ್ಗಳಲಲ್ಲ, ಅವಳನ್ನ ಆಶ್ಚರ್ಯ ಪಡಿಸೋಕ್ಕೆ ಸಾಧ್ಯಾನೇ ಇಲ್ಲವೇನೋ ಅನ್ನೋಥರ ಇರುತ್ತಾಳಲ್ಲಾ.. ಅವಳಿಗೆ ಅಮ್ಮನ ಸಂಕಟ ಅರ್ಥ ಆಗೋದೇ ಇಲವ? ಮದುವಯೇ ಆಗೋಲ್ಲವಾ ಇವಳು? ಎಂಬ ಪ್ರಶ್ನೆಗಳು ಅವನ ತಲೆಯನ್ನ ಸುತ್ತುತ್ತಿದ್ದವು.

“ವಸು ನಿಂಗೆ ಬೇರೆ ಯಾರಾದ್ರೂ ಇಷ್ಟ ಆಗಿದಾರೇನೆ..?” ತಂಗಿಯನ್ನ ಪ್ರೀತಿಯಿಂದ ನೋಡಿದ “ಅಣ್ಣಾ ನಿಂಗೆ ರಾಘು ಜ್ಞಾಪಕ ಇದಾನಾ?” ಅಣ್ಣ ತನ್ನ ನೆನಪಿನ ಪುಟಗಳನ್ನ ತಿರುವುತ್ತಾ ಗೊಂದಲಗೊಂಡಿರುವುದನ್ನ ಗುರುತಿಸಿ “ನಾವು ಹಾಸನದಲ್ಲಿದ್ದಾಗ ನಮ್ಮ ಮನೆ ಹತ್ರ ಇದ್ನಲ್ಲ ನೀನು ಆಗ ಬೆಂಗಳೂರಿನಲ್ಲೇ ಓದ್ತಿದ್ದೆ ನಿಂಗೆ ಸರಿಯಾಗಿ ಪರಿಚಯ ಇಲ್ವೇನೋ ಅಮ್ಮಂಗೆ ಚೆನ್ನಾಗ್ ಗೊತ್ತು. ಅಪ್ಪಂಗೆ ಇಲ್ಲಿಗೆ ಟ್ರಾನ್ಸ್ಫರ್ ಆಗಿ ನಾವು ಇಲ್ಲಿಗೆ ಬಂದ್ಮೇಲೆ ಕಾಂಟ್ಯಾಕ್ಟ್ನಲ್ಲಿರಲಿಲ್ಲ. ಒಂದು ವಾರದ ಹಿಂದೆ ಕಾಫಿಡೇನಲ್ಲಿ ಅಕಸ್ಮಾತಾಗಿ ಸಿಕ್ಕಿದ.” ಅಂದಳು ನೆಲ ನೋಡುತ್ತಾ. ಅನಂತನಿಗೆ ತನ್ನ ತಂಗಿಯ ಕೆನ್ನೆ ಕೆಂಪಾದುದ್ದನ್ನ ಗಮನಿಸಲು ಕಷ್ಟಾವಾಗಲಿಲ್ಲ. ಆಶ್ಚರ್ಯ ಆಯ್ತು ಅವನಿಗೆ ತನ್ನ ತಂಗಿಗೆ ಯಾರೋ ಇಷ್ಟ ಆಗಿದಾರೆ ಅನ್ನೋದಕ್ಕಲ್ಲ ಅವಳೂ ನಾಚಿಕೆ ಪಟ್ಟುಕೊಳ್ಳುತ್ತಾಳಲ್ಲ ಅನ್ನೋದಕ್ಕೆ.

ಅನಂತನ ಕಲ್ಪನೆ ಗರಿ ಬಿಚ್ಚಿಕೊಳ್ಳುತ್ತಿತ್ತು.... ತನಗೆ ಸರಿಯಾಗಿ ಜ್ನಾಪಕವೇ ಇರದ ರಾಘು ಹೇಗಿರಬಹುದು? ಅವನು ಬುಲೆಟ್ ಇಟ್ಟಿರ ಬೇಕು ಇವಳಿಗೆ ಬೈಕಿಟ್ಟಿರೊರಿಗಿಂತ ಬುಲೆಟ್ ಇರೋರು ಇಷ್ಟ ಆಗ್ತಾರೆ. ಅವನನ್ನ ಇವಳು ಅಕಸ್ಮಾತಾಗಿ ನೋಡಿದಾಗ ಇವಳ ಕಣ್ಣುಗಳ ನಿರ್ಲಕ್ಷಕ್ಕೂ ಆಶ್ಚರ್ಯ ಆಗಿರಬಹುದಾ.. ಅವನು ತುಂಬಾ ಉದ್ದಕೆ ಇರಬಹುದಾ.. ಇವರಿಬ್ಬರ ಮದುವೆಯನ್ನ ಊರಲ್ಲೇ ಮಾಡಬೇಕು.. ಮದುವೆಗೆ...


“ ನಾನು ಇವತ್ತು ಊಟ ಮಾಡ್ದೆ” ಅಂತ ನಕ್ಕ ಮಧ್ಯಾಹ್ನದ ಉರಿ ಸೂರ್ಯ, ಸಂಜೆಗೆ ಕಿತ್ತಲೆ ಬಣ್ಣವಾಗಿ ಆಕಾಶವೆಲ್ಲಾ ಹರಡುವಂತೆ ಅವನ ನಗು ತುಟಿಯಲ್ಲಿ ಹುಟ್ಟಿ ಮೈಮನಗಳನ್ನು ಸವರಿಕೊಂಡು ಹರಡಿತು. ಅವನ ತುಟಿ ಎಷ್ಟು ಕೆಂಪಲ್ಲವ ಅಂದುಕೊಂಡು “ನೀನು ದಿನಾ ಊಟ ಮಾಡ್ದೆ ಉಪವಾಸ ಇರ್ತಿದ್ಯಾ.” ಕೇಳಿದಳು. “ಹಂಗಲ್ಲ ಕೇಳು-” ಅಂತ ತಾನು ಕುತಿದ್ದ ಆ ಕುರ್ಚಿಯನ್ನ ಟೇಬಲ್ಲಿಗೆ ಹತ್ತಿರ ಎಳೆದುಕೊಂಡ.

ಹೌದು ಅವರು ಹದಿನೈದು ದಿನಗಳಿಂದ ಮಾತಾಡಿಕೊಂಡಿದಾರೇನೋ ಅನ್ನುವಂತೆ ಜಯನಗರದ ಫೋರ್ಥ್ ಬ್ಲಾಕ್ನಲ್ಲಿರೋ ಕಲ್ಮನೆ ಕಾಫಿ ಹೌಸ್ ನಲ್ಲಿ ಸರಿಯಾಗಿ ನಾಲ್ಕೂ ಹದಿನೈದಕ್ಕೆ ಭೇಟಿಯಾಗುತ್ತಿದ್ದರು. ಹದಿನೈದು ದಿನಗಳ ಮುಂಚೆ ಅವರು ನಾಲು ವರ್ಷದ ನಂತರ ಅಲ್ಲಿ ಭೇಟಿಯಾಗಿದ್ದರು, ತುಂಬ ಅನಿರೀಕ್ಷಿತವಾಗಿ. ಸ್ನೇಹಿತೆಯೊಬ್ಬಳು ಎನೋ ಹೇಳಬೇಕು ಅಲ್ಲಿಗೆ ಬಾ ಅಂತ ಕರೆದಿದ್ದರಿಂದ ಅವಳಿಗೆ ಕಾಯುತ್ತಾ ಕುಳಿತಿದ್ದಳು ವಸು. ಇವನು ಸುಮ್ಮನೆ ಒಳಗೆ ಬಂದ ಇವಳ ಕಣ್ಗಳಲ್ಲಿ ದೀಪದ ಕಾಂತಿ. ಏನೂ ಹೇಳಲು ತೋಚದೆ ಸುಮ್ಮನೆ ನೋಡುತ್ತಿದ್ದಳು.. ಅವನೂ ನೋಡಿದ- ಮುಖ ಸಿಂಡರಿಸಿದ ಅವಳು ಮರೆತು ಹೋಗಿದ್ದಳಾ.. ಇಲ್ಲ ನಕ್ಕ “ವಸೂ.....” ಎದುರು ಬಂದು ಕೂರುತ್ತಲೇ “ಈಗಲೂ ನೀನು ಚಳಿಗಾಲದಲ್ಲಿ ಸ್ವೆಟರನ್ನು ಹಾಕಿಕೊಳ್ಳೋದಿಲ್ಲವ” ಕೇಳಿದ ಅವಳ ದುಂಡುಮಲ್ಲಿಗೆ ಬಿಳುಪಿನ ಟೀ ಶರ್ಟಿನ ವಿ ಆಕಾರದ ಕುತ್ತಿಗೆ ನೋಡುತ್ತಾ.. ಟಿ-ಷರ್ಟಿನ ಮೇಲೆ ಏನು ಬರೆದಿದ್ದಾರೆಂದು ಓದಬೇಕೆಂಬ ಆಸೆಯನ್ನು ಹತ್ತಿಕ್ಕಿಕೊಂಡು ಅವಳ ಕಣ್ಗಳನ್ನೇ ನೋಡಿದ. “ನೀನು ದಪ್ಪ ಆಗ್ಲೇ ಇಲ್ಲ ಅಂದಳು” ಅಷ್ಟೊತ್ತಿಗೆ ವಸುವಿನ ಸ್ನೇಹಿತೆ ಬಂದಳು ಪರಿಚಯ ಮಾಡಿಕೊಟ್ಟದ್ದಾಯಿತು, ಕಾಫಿ ಕುಡಿದು- ಮಾತಾಡಿ, ಲೇಟಾದರೆ ಅಮ್ಮ ಬೈಯುತ್ತಾಳೆಂದು ಜ್ಞಾಪಕಕ್ಕೆ ಬಂದು ಮನೆ ಕಡೆ ಹೊರಟಳು. ಅಮ್ಮನನ್ನು ಕೇಳ್ದೆ ಅಂತ ಕೂಗಿ ಹೇಳಿದ ರಾಘು.. ತಿರುಗಿ ನೋಡಿ ನಕ್ಕಳು.

ನಾಳೆ ಸಿಗು ಅಂತ ಅವನೇನೂ ಹೇಳಿರಲಿಲ್ಲ. ಇವಳೂ ಮಾತು ಕೊಟ್ಟಿರಲಿಲ್ಲ ಆದರೂ ಮಾರನೇ ದಿನ ಬಂದು ಕಾಯತೊಡಗಿದ್ದಳು, ಎದೆ ಹೊಡೆದುಕೊಳ್ಳುತ್ತಿತ್ತು.. “ಅವನು ಬರೂದಿಲ್ಲವ?” ಅವನು ಬಂದ ಬರುತ್ತಲೇ ಇವಳನ್ನು ನೋಡಿ ಸಮಾಧಾನದ ನಿಟ್ಟುಸಿರಿಟ್ಟ. ಅವನ ಕಣ್ಗಳಲ್ಲಿದ್ದ ಆತಂಕ ವಸುವನ್ನು ನೋಡುತ್ತಲೇ ಕರಗತೊಡಗಿದ್ದು ಕಾಣಿಸಿತು. ಇಬ್ಬರೂ ಮುದ್ದಾಗಿ ನಕ್ಕರು.

“-ಊಟ ಮಾಡೋದಕ್ಕೂ ಅನ್ನ ತಿನ್ನೋದಕ್ಕೂ ವ್ಯತ್ಯಾಸ ಇದೆ. ಅನ್ನ ತಿನ್ನೋದು ಅಂದ್ರೆ ಬದುಕೋಕ್ಕೆ ಏನಾದ್ರೂ ತಿನ್ನ ಬೇಕಲ್ಲ ಅದಕ್ಕೆ ಏನನ್ನದರೂ ತಿಂದು ಸುಮ್ಮನಾಗೋದು ಊಟ ಮಾಡೋದು ಅಂದ್ರೆ ಇವತ್ತು ಮಾಡಿದೆನಲ್ಲ ನನ್ನ ದೊಡ್ಡಮ್ಮನ ಮನೇಲಿ ಅದು. ಅದರಲ್ಲಿ ತಿಂದ ಸಂತೋಷ ಇರತ್ತೆ.....”

ಕಲ್ಮನೆ ಕಾಫಿ ಹೌಸಿನ ಪುಸ್ತಕಗಳು, ಅಲ್ಲಿನ ಚೌಕಾಕಾರದ ಮರದ ಕುರ್ಚಿಗಳು, ಅದಕ್ಕೆ ಒರಗಿಕೊಳ್ಳೋಕ್ಕೆ ಇಲ್ಲದಿರೋದ್ರಿಂದ ಮುಂದೆ ಬಾಗಿ ಕೂರುವ ಜನ, ಕಾಫಿ ಬೀಜದ ಬಣ್ಣದ ಕುಷನ್ನು, ಪಕ್ಕದ ಟೇಬಲ್ಲಿನ ಕುರ್ಚಿಯಲ್ಲಿ ಕೂತ ಕಾಲೇಜು ಹುಡುಗನ ಕೈಯಲ್ಲಿರುವ ಲೋಟ, ಅದರ ಬಿಸಿಯನ್ನ ಅನುಭವಿಸುತ್ತಿರುವ ಅವನ ತೆಳುಗಪ್ಪು ಬೆರಳುಗಳು, ದೂರದಲ್ಲಿರುವ ಪುಸ್ತಕಗಳನ್ನ ಕಣ್ಣಲ್ಲೇ ಅಳೆಯುತ್ತಿರುವ ಅಜ್ಜ ಯಾವುದೇ ಬಣ್ಣದ ಹಂಗಿಗೆ ಬೀಳದೆ ಹರಡಿರುವ ಅವರ ಬಿಳೀಗೂದಲು, ಈವಯಸ್ಸಿನಲ್ಲೂ ಹಿರೊವಿನಂತೆ ಕಾಣುತ್ತಿದ್ದ ಅವರು.... ಇವನು ವಯಸ್ಸಾದಮೆಲು ಹೀಗೇ ಇರುತ್ತಾನ..... “ಮದುವೆ ಆಗು ಈ ಕಷ್ಟನೇ ಇರಲ್ಲ ದಿನಾ ಊಟ ಮಾಡಬಹುದು” ಆಂದಳು. “ಆಗೋಣ” ಅಂದ. ನಕ್ಕಳು. ಅಣ್ಣನ ನೆನಪು ಬಂತು..... ಅಮ್ಮನಿಗೆ ಖುಷಿಯಾಗುತ್ತದಾ ಕೇಳಿಕೊಂಡಳು.


ಟ್ರಾಫಿಕ್ ಸಿಗ್ನಲ್ ನೋಡಿ ಫಕ್ಕನೆ ಕಾರು ನಿಲ್ಲಿಸಿದ ಅನಂತಮೂರ್ತಿ. ಆಂಬ್ಯುಲೆನ್ಸ್ ಒಂದು ದೊಡ್ಡದಾಗಿ ಶಬ್ಧ ಮಾಡುತ್ತಾ ಪಕ್ಕದ ರೋಡಿನಲ್ಲಿ ಹಾದು ಹೋಯಿತು. “ನಂ ಕಡಿ ಆಂಬ್ಯುಲೆನ್ಸ್‌ಗೆ ‘ಹೋಗು ಬಾ ಹೋಗು ಬಾ’ ಅಂತಾರೆ ಅಂತ ಆಫೀಸಿನಲ್ಲಿ ವೀರು ಹೇಳಿದ್ದು ಜ್ಞಾಪಕ ಬಂದು ನಗು ಬಂತು. ಅದ್ಯಾವುದೂ ನೆನಪಾಗಲಿಲ್ಲ ಆಗ ರಕ್ತ, ಗ್ಲೂಕೋಸು, ತೂತು ಬನೀನು, ಹಣೆಯಂಚಿನ ಬೆವರು, ಬದಲಿಸದ ಸೀರೆ.. ಅವರ್ಯಾರ ಬಗ್ಗೆಯೂ ಎನೂ ಅನ್ನಿಸಲಿಲ್ಲ ಯರದೋ ಅಣ್ಣ, ಇನ್ನ್ಯಾರದೋ ತಾಯಿ, ಮತ್ತ್ಯಾರ ಮಾವ.. ಆ ಸದ್ದಿಗೆ ಸಾಹಿತ್ಯವೋ ಅನ್ನುವಂತೆ ಹೋಗು ಬಾ ಹೋಗು ಬಾ ಎಂದು ಗುನುಗಿಕೊಳ್ಳುತ್ತಾ ಆಫೀಸಿನಿಂದ ಮನೆಗೆ ಹೋದರೆ ಮನೆಯಲ್ಲಿ ಯಾರೂ ಇಲ್ಲ. ಈ ಹೊತ್ತಿನಲ್ಲಿ ಎಲ್ಲರೂ ಎಲ್ಲಿ ಹೋದರು ಎಂದುಕೊಂಡು ಕಾಲ್ ಮಾಡಲು ಮೊಬೈಲ್ ತೆಗೆದು ನೋಡಿದರೆ ಹದಿನಾರು ಮಿಸ್ಡ್ ಕಾಲ್ ಇದ್ದವು. “ಛೆ ಸೈಲೆಂಟ್ ಮೋಡ್ನಲ್ಲೇ ಇದೆ.” ಕಾಲು ಯಾರು ಮಾಡಿದ್ದು ಅಂತ ನೋಡೋ ಹೊತ್ತಿಗೆ ಮತ್ತೆ ಕಾಲ್ ಬಂತು. ಎತ್ತಿದರೆ ಅಮ್ಮ “ವಸು!-ವಸು! ಆಕ್ಸಿಡೆಂಟ್.....” ಅಂತ ಬಿಕ್ಕುತ್ತಿದ್ದಳು. ಏನೂ ಅರ್ಥವಾಗಲಿಲ್ಲ ಜನ್ನ ಫೋನ್ ತೆಗೆದುಕೊಂಡು ಹೇಳಿದ “ಹಾಸನದಲ್ಲಿ ನಿಮ್ಮ ಮನೆ ಹತ್ರ ಇದ್ದನಂತಲ್ಲ ರಾಘು ಅಂತ ವಸು ಅವನ ಜೊತೆ ಬುಲೆಟ್ಟಿನಲ್ಲಿ ಬರುತ್ತಿದ್ದಳಂತೆ ಆಕ್ಸಿಡೆಂಟ್ ಆಗಿದೆ ಹುಡುಗ ಸ್ಪಾಟ್ನಲ್ಲೇ ಹೋಗ್ಬಿಟ್ಟಿದಾನೆ, ವಸುನ ನಿಮ್ಮ ಆಫೀಸಿನ ಹತ್ತಿರದಲ್ಲೇ ಇರೋ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರ್ಕೊಂಡು ಬಂದು ಸೇರ್ಸಿದಿವಿ” ಅಂತ ವರದಿ ಮಾಡುವವನ ಥರ ತಣ್ಣಗೆ ಹೇಳುತ್ತಿದ್ದಾನೆ ಅನ್ನೋದನ್ನ ಎಷ್ಟು ನಿರ್ಲಕ್ಷಿಸಬೇಕು ಅಂದುಕೊಂಡರೂ ಅನಂತಮೂರ್ತಿಗೆ ಅವನ ಧ್ವನಿಯಲ್ಲಿದ್ದ ತಣ್ಣಗಿನ ನಿರ್ಲಕ್ಷವನ್ನ- ಮಾತ್ಸರ್ಯವನ್ನ ಗಮನಿಸಿದೆ ಇರಲಾಗಲಿಲ್ಲ. ದುಃಖ ಉಮ್ಮಳಿಸಿ ಬರುತ್ತಿತ್ತು.


ತನಗೆ ಮುಖವೇ ಜ್ಞಾಪಕವಿರದ ರಾಘು ಮತ್ತು ತನ್ನ ತಂಗಿಯ ಜೀವನದ ಬಗ್ಗೆ ಕಲ್ಪಿಸಿಕೊಂಡಿದ್ದೆಲ್ಲಾ ಕಲ್ಪನೆಯಾಗೇ ಉಳಿದಿತ್ತು. ಹೌದು ತಾನು ಕವಿಯೋ ಲೇಖಕನೋ ಚಿತ್ರಕಾರನೋ ಆಗಬೇಕು ಅಂದುಕೊಂಡು ಬರೆಯಲು ಶುರು ಮಾಡಿದ ಅನಂತಮೂರ್ತಿ.... ಅವನು ಇಂದು ದೊಡ್ಡ ಲೇಖಕನಾಗಿದ್ದಾನೆ.

(ಕನ್ನಡ ಪ್ರಭ ದಲ್ಲಿ ಪ್ರಕಟವಾದ ಕಥೆ )

Tuesday, March 18, 2008

ಮಳೆ ನೀರಿನಲ್ಲಿ...

ಸಿಹಿ ಘಮವೇ...
ವಾತಾವರಣವನ್ನೆಲ್ಲಾ ಘಂ ಎನಿಸುತ್ತಾ ಹಿತವಾಗಿ ನೆಲವನ್ನು ಒದ್ದೆಯಾಗಿಸುತ್ತಿದ್ದ ಮಳೆ ಅಮಲೇರಿ ಧೋ ಧೋ ಎಂದು ಸುರಿಯುತ್ತಿದೆ. ಕಿಟಕಿಯಿಂದ ನೋಡುತ್ತಿದ್ದರೆ ಆಸೆ ಹತ್ತಿಕ್ಕಲಾಗಲಿಲ್ಲ. ಯಾರಾದರೂ ಏನಾದರೂ ಅಂದುಕೊಂಡು ಸಾಯಲಿ ಅಂತ ಕನಕಾಂಬರದ ಗಿಡಗಳನ್ನ, ಮಲ್ಲಿಗೆ ಬಳ್ಳಿಯನ್ನ ಹಬ್ಬಿಸಿರುವ ಹಿತ್ತಲಿಗೆ ಹೋಗಿ ನನೆಯುತ್ತಿದ್ದರೆ ನೀನು ಈಜುತ್ತಿದ್ದ ನೆನಪು.ನದಿಯಲ್ಲಿ, ನನ್ನಲ್ಲಿ. ಪ್ರೀತಿ ಮಳೆಯಲ್ಲಿ ಒದ್ದೆ ಒದ್ದೆ.
ಇಬ್ಬನಿಯಲಿ ನೆಂದಿದೆ
ಪ್ರೀತಿಯಲಿ ತೊಯ್ದಿದೆ
ನೆನಪಿನಲಿ ನೇಯ್ದಿದೆ
ಈ ಪ್ರೇಮ..

ಅಜ್ಜಿಗೆ ಇನ್ನಿಲ್ಲದ ಹೊಟ್ಟೆಗಿಚ್ಚು. ನಾನು ಮಳೇಲಿ ನೆನಿತಾ ನಿನ್ನ ನೆನಪಿಸಿಕೊಳ್ಳುತ್ತಿರುವ ವಾಸನೆ ಹತ್ತಿದವಳಂತೆ ಕೊಡೆ ಹಿಡಿದುಕೊಂಡು ಹಿತ್ತಲಿಗೆ ಬಂದು ನೀ ಹಿಂಗೆಲ್ಲಾ ಮಳೇಲಿ ನೆಂದು ಹುಶಾರ್ ತಪ್ಪಿಸ್ಕೊಳದಾದ್ರೆ ಹಳ್ಳಿಗೆ ಬರ್ಲೇ ಬೇಡ ಅಂತ ಗುಟುರು ಹಾಕಿದಳು. ನೀನು ನನಗೆ ಸಮುದ್ರ ತೋರಿಸಿದೆಯಲ್ಲ, ಅಬ್ಬಾ! ಅದು ನಿನ್ನ ಥರವೇ... ಸಮುದ್ರದ ಅಲೆಗಳು ದಡವನ್ನು ಅಪ್ಪಳಿಸುತ್ತವೆ ಅಂತ ಯಾರೋ ಬರೆದಿದ್ದು ಸುಳ್ಳು. ಸಮುದ್ರದ ತುಟಿಗಳು ದಡವನ್ನು ಮುತ್ತಿಕ್ಕುತ್ತಿರುವುದನ್ನು ನೊಡಿ ನನ್ನ ಒಳಗುಗಳು ಸ್ಥಬ್ಧ. ಅವತ್ತೆಲ್ಲಾ ಅಲ್ಲೆ ಇದ್ದೆವಲ್ಲಾ ಪ್ರತೀ ಅಲೆ ಉಕ್ಕೋವಾಗಲೂ ನೀನು ಸುರಿಸುತ್ತಿದ್ದ ಮುತ್ತುಗಳ ರಾಶಿ. ಸಾಗರದಲ್ಲಿ ಮುತ್ತು ಸಿಗುತ್ತೆ ಅಂತಾರಲ್ಲ ಇದಕ್ಕೇನಾ?

ಇಂದು ಮರಳಿಗೆ ಹಬ್ಬ.. ಅಪ್ಪೋ ಅಲೆಗೂ ಹಬ್ಬ..

ನೀನು ಅಲ್ಲಿ ಬೆಳ-ಬೆಳಗ್ಗೆ ಜಿಮ್ಮಿನಲ್ಲಿ ಬೆವರು ಸುರಿಸುತ್ತಾ ಜೋರಾಗಿ ಏದುಸಿರಾಗುತ್ತಿದ್ದರೆ ನನಗೆ ಇಲ್ಲಿ ನಿನ್ನ ಉಸಿರು ತಾಕಿದ ಅನುಭವ. ತುಂಬ ದಿನ ಆಯಿತಲ್ವಾ ಮಾತಾಡಿ. ನೀನು ಸಿಟ್ಟಾಗಿ ಕಳಿಸಿದ ಮೆಸೇಜ್ ನೋಡಿದೆ... ಜಗಳಗಂಟ. ಇನ್ನೇನು ನಾಡಿದ್ದು ಬಂದುಬಿಡ್ತೀನಿ, ಬೈಕೊಬೇಡ. ನಿನ್ನ ಬಿಟ್ಟು ಖುಶಿಯಾಗೇನಿಲ್ಲ ನಾನು..

ತೌರ ಸುಖದೊಳೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು
ನಿಮ್ಮ ನೆನಹೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮಾ ಕನಸು

-ನೀ ಅಪ್ಪುವ ದಡ

Thursday, March 13, 2008

ಓಲೆ

ಆ ಮುತ್ತಿನ ಕಿವಿಯೋಲೆ ನೋಡುತ್ತಾ ಬೆಚ್ಚಿಬಿದ್ದೆ. ಅದು ಅಚ್ಚು ಹಾಗೇ ಇತ್ತು. ನನಗೆ ಯಾವಾಗಲೂ ಕಾಣುತ್ತಿದ್ದ ಓಲೆಯೇ ಅದು. ವ್ಯತ್ಯಾಸವೇ ಇಲ್ಲ. ಮೊಟ್ಟೆಯಾಕಾರದ ಮಾಸಿದ ಬಿಳುಪಿನ ಮುತ್ತು, ಅದರ ಬೆನ್ನಿಗೆ ಅಂಟಿಕೊಂಡ ಚಿನ್ನ. ಒಂದು ಚೂರು ಆಚೀಚೆ ಇಲ್ಲ. ಹಾಗೇ ಥೇಟ್. ಆ ಎಲ್ಲ ರಾಶಿ ಆಭರಣಗಳ ಮಧ್ಯೆ ಅದು ಕಣ್ಣಿಗೆ ಬಿದ್ದಿದ್ದು ವಿಶೇಷವೇನಲ್ಲ.

ಈಗ ಅಭ್ಯಾಸವಾಗಿ ಹೋಗಿದೆ. ಇದು ಶುರುವಾದದ್ದು ನಾನು ಪಿಯುಸಿಯಲ್ಲಿದ್ದಾಗ. ರಾಜಾಜಿನಗರದಲ್ಲಿ ಅವರ ಟ್ಯೂಷನ್ ಐದೂವರೆಗೆ ಶುರುವಾಗುತ್ತಿತ್ತು. ನಾನು ನಮ್ಮ ಹೆಸರುಘಟ್ಟದ ಮನೆಯನ್ನ ನಾಲ್ಕೂ ಕಾಲಿಗೆ ಬಿಟ್ಟು ಬಿಡುತ್ತಿದ್ದೆ. ಮನೆಯಿಂದ ಬಸ್ ಸ್ಟಾಪ್ ಗೆ ಹದಿನೈದು ನಿಮಿಷದ ದಾರಿ. ಹಾಗೇ ನೆಡೆದುಕೊಂಡು ಹೋಗುತ್ತಿದ್ದರೆ ಅವನು ನನ್ನನ್ನು ನೋಡುತ್ತಲೇ ನಿಂತಿರುತ್ತಿದ್ದ. ಅವನು ಯಾರಂತ ಗೊತ್ತಿರಲಿಲ್ಲ. ಇವತ್ತಿಗೂ ಗೊತ್ತಿಲ್ಲ. ಅವನೇನು ನನ್ನ ಕರೆದಿರಲಿಲ್ಲ. ಸುಮ್ಮನೆ ನನ್ನನ್ನು ನೋಡುತ್ತಿದ್ದ. ಆದರೆ ಅವನಲ್ಲಿ ಎಂಥ ವಿಲಕ್ಷಣವಾದ ಆಕರ್ಷಣೆ ಇತ್ತೆಂದರೆ ಒಂದು ದಿನ ನಾನೇ ಹತ್ತಿರ ಹೋಗಿದ್ದೆ. ನಾನು ಅವನ ಮುಂದೆ ನಿಂತ ತಕ್ಷಣ ಅವನು ನಡೆದುಕೊಂಡು ಹೋದ. ನಾನು ಕುರಿಯಂತೆ ಹಿಂಬಾಲಿಸಿದೆ. ಆಮೇಲೆ ನಡೆದದ್ದು ಕನಸೆಂದೇ ನನ್ನ ಭ್ರಮೆ. ಹೂವಂತೆ ನನ್ನ ಅರಳಿಸಿದ್ದ. ಹಿತವಾಗಿ ಕಲಕಿದ್ದ ಅವನು. ನಾನು ಹೇಗೆ ಮನೆಗೆ ವಾಪಸ್ಸು ಬಂದೆ ಎಂಬುದು ನನಗೆ ಗೊತ್ತಿಲ್ಲ. ಯಾರಿಗೂ ಗೊತ್ತಾಗದಂತೆ (ನನಗಾದರೂ ಗೊತ್ತಾಗಿತ್ತಾ?) ನನ್ನ ಜೀವನದಲ್ಲಿ ಏನೋ ನಡೆದುಹೋಗಿತ್ತು. ಅವನ ಎಡಕಿವಿಯಲ್ಲಿದ್ದ ಮುತ್ತಿನ ಓಲೆ ಮಾತ್ರ ಜ್ಞಾಪಕವಿತ್ತು. ಆಮೇಲಿಂದ "ಅಪ್ಪಾ ನಂಗೆ ಭಯ ಆಗತ್ತೆ, ನನ್ನ ಬಸ್ ಸ್ಟಾಪ್ ವರೆಗೂ ಬಿಡು" ಅಂತ ಕರೆದುಕೊಂಡು ಹೋಗಲು ಶುರು ಮಾಡಿದೆ. ಅಪ್ಪ ಬಂದು ಬಸ್ಸಲ್ಲಿ ಕೂರಿಸಿ ವಾಪಾಸು ಹೋಗಿ ಮಲಗುತ್ತಿದ್ದರು. ಹಾಗೆ ಒಂದು ದಿನ ಹೋಗುತ್ತಿದ್ದಾಗ ನನ್ನ ಹಿಂದೆ ಯಾರೋ ಬರುತ್ತಿದ್ದಾರೆನ್ನಿಸಿತು. ಬಲಗಡೆಗಿದ್ದ ಅಪ್ಪನ ಜೊತೆ ಮಾತನಾಡುತ್ತಲೇ ಎಡಗಡೆಗೆ ತಲೆ ತಿರುಗಿಸಿ ನೋಡಿದರೆ ಕಂಡಿದ್ದು ಮುತ್ತಿನ ಓಲೆ. ನನ್ನ ಮುಖ ಬಿಳಿಚಿದ್ದು ಅಪ್ಪನಿಗೆ ಕತ್ತಲಲ್ಲಿ ಗೊತ್ತಾಗಲಿಲ್ಲ. ಅವತ್ತು ಶುರು ಆಗಿದ್ದು ನನಗೆ ಬಹಳಷ್ಟು ಸಲ ಕಾಣಿಸಿದೆ. ಮುಖ ತೊಳೆದುಕೊಂಡು ಕನ್ನಡಿ ನೋಡಿಕೊಳ್ಳುವಾಗ ಎಲ್ಲರ ಜೊತೆ ಕೂತು ಏನನ್ನೋ ಹರಟುತ್ತಿರುವಾಗ, ಆಟಾಡುವಾಗ, ಹಾಲು ಕಾಯಿಸುವಾಗ, ಕಾಲೇಜಿನಲ್ಲಿ ಪಾಠ ಮಾಡುವಾಗ, ಇಸ್ತ್ರಿ ಮಾಡುವಾಗ ಹೀಗೆ.... ಪ್ರತಿಯೊಂದು ಬಾರಿಯೂ ನನ್ನ ಹಿಂದೆ ಎಡಗಡೆಗೆ ಯಾರೋ ಇರುತ್ತಾರೆ. ಆ ಮುತ್ತಿನ ಓಲೆ ಹಾಕಿಕೊಂಡು. ಅವರು ಕಾಣಿಸುವುದಿಲ್ಲ, ಬರೀ ಓಲೆ ಕಾಣಿಸುತ್ತದೆ.


ಹೀಗೆ ಕಾಣಿಸಲು ಶುರುವಾಗಿ ಆರು ತಿಂಗಳಾದರೂ ಯಾರಿಗೂ ಹೇಳಿರಲಿಲ್ಲ ಇದರ ಬಗ್ಗೆ. ಏನೆಂದು ಹೇಳಲಿ? ಮುತ್ತಿನ ಓಲೆ ಕಾಣಿಸುತ್ತದೆ ಎಂದಾ? ಹುಚ್ಚು ಅನ್ನುವುದಿಲ್ಲವಾ? ಆದರೆ ಒಂದು ದಿನ ತಡೆಯಲಾಗದೆ ಅಕ್ಕನಿಗೆ ಹೇಳಿದೆ. ಅವಳು ಆಗ ತಾನೆ ಬಿ.ಎಸ್.ಸಿ ಸೈಕಾಲಜಿ ಓದುತ್ತಿದ್ದಳು. ತಕ್ಷಣ ಅವಳು ಇದನ್ನ ಹಾಲೂಸಿನೇಶನ್ ಎಂದಳು. "ಹಂಗಂದ್ರೆ ನಿಜವಾಗಲೂ ಅಲ್ಲಿ ಏನೂ ಇರೋದಿಲ್ಲ, ಆದರೆ ನಮಗೆ ಮತ್ತೆ ನಮ್ಮ ಸೆನ್ಸ್ ಆರ್ಗನ್ಸ್ ಗಳಿಗೆ ಏನಾದ್ರೂ ಇರುತ್ತೆ ಅನಿಸುತ್ತೆ. ಉದಾಹರಣೆಗೆ ಕೆಲವೊಬ್ಬರು ನಮಗೆ ದೇವರು ಕಾಣಿಸುತ್ತೆ ಅಂತನೋ, ಅಥವಾ ಯಾವದ್ಯಾವುದೋ ಸದ್ದುಗಳು ಕೇಳುತ್ತೆ ಅಂತನೋ ಹೇಳ್ತಾರಲ್ಲ ಹಂಗೆ, ಇದೊಂದು ಮಾನಸಿಕ ಸಮಸ್ಯೆ ಅಷ್ಟೇ" ಎಂದಿದ್ದಳು. ಸರಿ, ನನಗೆ ಎಲ್ಲಾ ರೀತಿಯ ಮನಶ್ಯಾಸ್ತ್ರದ ಪರೀಕ್ಷೆಗಳನ್ನ ಮಾಡಿಸಿದ್ದಾಯ್ತು, ಎಂಥೆಂತದೊ ಮಾತ್ರೆಗಳನ್ನ ತಿಂಗಳುಗಟ್ಟಲೇ ತಿನ್ನಿಸಿದ್ದಾಯ್ತು. ಆದರೆ ನನ ಓಲೆ ಕಾಣಿಸುವುದು ನಿಂತಿರಲಿಲ್ಲ. ಅದು ಕಾಣಿಸುತ್ತಿತ್ತು ಅನ್ನೋದು ಬಿಟ್ಟರೆ ಬೇರೇನು ತೊಂದರೆ ಆಗಿರಲಿಲ್ಲ ನನಗೆ. ಹಾಲೋಸಿನೇಶನ್ ಗೆ ಒಳಗಾಗಿರುವ ರೋಗಿಗಳ ಬೇರೆ ಯಾವ ಗುಣ ಲಕ್ಷಣಗಳೂ ನನ್ನಲ್ಲಿ ಇರಲಿಲ್ಲ. ಅಪ್ಪ ಅಮ್ಮ ಮಾಡಿಸಿದ ಟ್ರೀಟ್ ಮೆಂಟ್ ಗಳ ನಂತರವೂ ನನಗೆ ಓಲೆ ಕಾಣಿಸುತ್ತದೆ ಎಂದು ಹೇಳಿದರೆ ಅವರು ಸಂಕಟ ಪಟ್ಟುಕೊಳ್ಳುತ್ತಾರೆ ಅಂತ ಗೊತ್ತಿತ್ತು. ಅದಕ್ಕೆ ನನಗೆ ಈಗ ಅಂತದ್ದೇನು ಕಾಣುವುದಿಲ್ಲ ಎಂದು ಸುಳ್ಳು ಸುಳ್ಳೇ ಹೇಳೆ ಅಪ್ಪ ಅಮ್ಮನನ್ನು ಸಮಾಧಾನ ಪಡಿಸಿದ್ದೆ.

ನಾನೇ ಮನಶ್ಯಾಸ್ತ್ರವನ್ನು ಮುಖ್ಯ ವಿಷಯವನ್ನಾಗಿ ಆರಿಸಿಕೊಂಡು ಅದರಲ್ಲೇ ಪಿ.ಜಿ ಮಾಡಿ ಈಗ ಅದೇ ವಿಷಯವನ್ನು ಪಾಠ ಮಾಡುತ್ತಿದ್ದೇನೆ. ಏನೂ ವ್ಯತ್ಯಾಸವಾಗಿಲ್ಲ. ಇಂದಿಗೂ ಹಾಗೇ ಆಗಾಗ ಆ ಮುತ್ತಿನ ಓಲೆ ಕಾಣಿಸಿಕೊಳ್ಳುತ್ತದೆ.

ಅಂತ ಓಲೆಯನ್ನು ಸುಮಾರು ಇಪ್ಪತ್ತು ವರ್ಷದಿಂದ ಹುಡುಕುತ್ತಿದ್ದೇನೆ. ಆಭರಣದ ಅಂಗಡಿಗಳನ್ನೆಲ್ಲಾ ಜಾಲಾಡಿದ್ದೇನೆ. ಇಷ್ಟು ದಿನ ಆದರೂ ಸಿಕ್ಕಿರಲಿಲ್ಲ. ಈಗ ಇವತ್ತು ಕಂಡಿತು. ಆ ಮುತ್ತಿನ ಓಲೆಯನ್ನ ಕೊಂಡು ತಂದೆ. ನನ್ನ ಗಂಡನಿಗೋ ಮಕ್ಕಳಿಗೋ ಈ ವಿಷಯದ ಬಗ್ಗೆ ಒಂದು ಚೂರು ಸುಳಿವುಕೊಡಲಿಲ್ಲ. ಅವರಿಗೆ ನಾನು ಕೊಂಡು ತಂದ ಮುತ್ತಿನ ಓಲೆಯನ್ನೇ ತೋರಿಸಲಿಲ್ಲ. ಅದನ್ನ ಲಾಕರಿನಲ್ಲಿ ಭದ್ರವಾಗಿ ಮುಚ್ಚಿಟ್ಟೆ. ಅವತ್ತಿನಿಂದ ನನಗೆ ಆ ಓಲೆ ಕಾಣಿಸುವುದು ನಿಂತು ಹೋಗಿದೆ.


ಬರೀ ಇಷ್ಟೇ ಆಗಿದ್ದರೆ, ಇದನ್ನೆಲ್ಲಾ ಹೇಳಬೇಕಾಗಿರಲಿಲ್ಲ. ಮೊನ್ನೆ ನನ್ನ ಹದಿನಾರು ವರ್ಷದ ಮಗಳಿಗೆ ತಲೆಸ್ನಾನ ಮಾಡಿಸುತ್ತಾ ಅವಳ ಉದ್ದಕೂದಲನ್ನು ಸೀಗೇಪುಡಿಯಲ್ಲಿ ಉಜ್ಜುತ್ತಿದ್ದೆ. ಆಗ ಹೇಳಿದಳು "ಅಮ್ಮ, ಮೊನ್ನೆಯಿಂದ ನಂಗೆ ನನ್ನ ಹಿಂದೆ ಯಾರೋ ಇದ್ದಾರೆ ಅನ್ಸುತ್ತೆ. ಬರೀ ಅವರು ಹಾಕಿಕೊಂಡಿರೋ ಮುತ್ತಿನ ಓಲೆ ಕಾಣ್ಸುತ್ತೆ, ಹಿಂತಿರುಗಿ ನೋಡಿದ್ರೆ ಯಾರೂ ಇರಲ್ಲ" ಅಂದಳು. ನನ್ನ ಎದೆ ಧಸಕ್ ಎಂದಿತು. ರೂಮಿಗೆ ಹೋಗಿ ಲಾಕರ್ ಬೀಗ ತೆಗೆದು ನೋಡಿದೆ. ಆ ಮುತ್ತಿನ ಓಲೆ ಅಲ್ಲಿರಲಿಲ್ಲ.!!

Monday, February 25, 2008

ನಾಣಿ

ಎಚ್ಚರವಾಯಿತು ನಾಣಿಗೆ. ಬೆಳಗಾಯಿತಾ ಅಂತ ತೊಟ್ಟಿ ಕಡೆ ನೋಡಿದ. ಜಗತ್ತಿನ ಕತ್ತಲನ್ನೆಲ್ಲಾ ತಮ್ಮ ತೊಟ್ಟಿಗೇ ಸುರಿದಿದ್ದಾರೇನೋ ಅಂತ ಅನುಮಾನ ಬಂತು. ಬೆಳಗಾಗಿಲ್ಲ ಹಾಗಿದ್ರೆ! ಇಷ್ಟು ಬೇಗ ಯಾಕೆ ಎಚ್ಚರ ಆಯ್ತು ಅಂದುಕೊಂಡು ಅಮ್ಮ ಮಲಗಿದ್ದ ಹಾಸಿಗೆ ಕಡೆ ನೋಡಿದ. ಅಮ್ಮ ಮಲಗಿದ್ದಳು. ಸಣ್ಣಗೆ ಗೊರಕೆ ಹೊಡೆಯುತ್ತಿರುವುದು ಅಮ್ಮನಾ? ತಮ್ಮನಾ? ಎಂದು ಗೊತ್ತಾಗದೆ ಮತ್ತೆ ತೊಟ್ಟಿಯ ಹೊರಗೆ ನೋಡತೊಡಗಿದ. ಚೂರು ಚೂರೇ ಬೆಳಗಾಗುತ್ತಿತ್ತು. ಮೊನ್ನೆ ಮೂಲೆಮನೆ ರಾಜು ಕೊಟ್ಟ ಪುಸ್ತಕದಲ್ಲಿದ್ದ ಮೂಡಲ ಮನೆಯ.... ಜ್ಞಾಪಕಕ್ಕೆ ಬಂತು. ಬೇಂದ್ರೆ ಒಬ್ಬ ಅನುಭಾವಿ ಕವಿ, ಹಿ ಮೂವ್ಸ್ ಫ್ರಮ್ ಸಿಂಪಲ್ ಟು ಸಬ್‌ಲೈಮ್ ಅಂದಿದ್ದ ರಾಜು. ಅನುಭಾವಿ ಕವಿ ಸಬ್‌ಲೈಮ್ ಎಂಬುವುದರ ಅರ್ಥ ಗೊತ್ತಾಗದಿದ್ದರೂ ಪದಗಳು ಚೆನ್ನಾಗಿವೆ ಅನ್ನಿಸಿತ್ತು. ಆ ಪದ್ಯದ ಸಾಲುಗಳನ್ನು ನೆನೆಪಿಸಿಕೊಳ್ಳತೊಡಗಿದ. ಗಂಧರ್ವರ ಸೀಮೆಯಾಯಿತು ಕಾಡಿನಾ.....

ನಾಣಿ ಇಷ್ಟು ಬೇಗ ಯಾಕೆ ಎದ್ಯಪ್ಪಾ... ಫೇಲಾಗಿದ್ರೆ ಏನಂತೆ? ಅದಕ್ಕೆಲ್ಲಾ ಹೀಗೆ ಚಿಂತೆ ಮಾಡ್ಕಂಡು ನಿದ್ದೆ ಬಿಟ್ರೆ ಆಗತ್ತಾ? ಪರೀಕ್ಷೆ ಸಮಯದಲ್ಲೇ ನೀನಿಷ್ಟು ಬೇಗ ಎದ್ದಿರ್‍ಲಿಲ್ಲ. ಸುಮ್ನೆ ಯೋಚಿಸಬೇಡ ಎನ್ನುತ್ತಾ ಎದ್ದು ತಾನು ಫೇಲಾಗಿದ್ದನ್ನು ಜ್ಞಾಪಿಸಿ ಬಚ್ಚಲಕಡೆಗೆ ಹೋದ ಅಮ್ಮನ ಮೇಲೆ ಸಿಟ್ಟು ಬಂತು ನಾಣಿಗೆ. ನಾ ಅದೇ ಚಿಂತೇಲ್ ಎದ್ದದ್ದು ಅಂತ ಇವಳಿಗೆ ಹೇಳ್ದವರ್‍ಯಾರು? ಅಂದುಕೊಂಡ.
ತಂಗಿ ಎದ್ದು ನಿದ್ದೆಗಣ್ಣಲ್ಲೆ ಕೈ ನೋಡುತ್ತಾ ಕೈಯ ಮೂಲೆಗಳಲ್ಲಿ ಲಕ್ಷ್ಮೀ, ಸರಸ್ವತಿ, ಗೌರಿಯರನ್ನು ಹುಡುಕತೊಡಗಿದಳು. ನಾನು ಎದ್ದು ಇಷ್ಟು ಹೊತ್ತಾದರೂ ಹೇಳಿಕೊಳ್ಳಲೇ ಇಲ್ಲವಲ್ಲಾ ಎಂದು ಕೈಯ ನೋಡುತ್ತಾ ಮನಸ್ಸಿನಲ್ಲೇ,
ಕರಾಗ್ರೇ ವಸತೇ ಲಕ್ಷ್ಮೀ, ಕರಮಧ್ಯೇ ಸರಸ್ವತೀ
ಕರಮೂಲೆ ಸ್ಥಿತಾಗೌರಿ, ಪ್ರಭಾತೇ ಕರದರ್ಶನಂ... ಎಂದು ಹೇಳಿಕೊಂಡು ತಾನೂ ಆ ದೇವತೆಯರನ್ನೆಲ್ಲಾ ಕೈಯಲ್ಲಿ ಹುಡುಕಿದ.
ಹಲ್ಲುಜ್ಜಿದ ಶಾಸ್ತ್ರ ಮಾಡಿ ಬಂದ. ದೊಡ್ಡ ಅಕ್ಕ ಮತ್ತು ಅತ್ತೆ ಸೇರಿಕೊಂಡು ಎಲ್ಲರ ಹಾಸಿಗೆ ಸುತ್ತಿಡುತ್ತಿದ್ದರು. ತಮ್ಮ ಒಂದೊಂದಾಗಿ ಅದನ್ನೆಲ್ಲಾ ನಡುಮನೆಗೆ ಹೊತ್ತುಕೊಂಡು ಹೋಗಿ ಇಡುತ್ತಿದ್ದ. ಕೊನೆಯ ತಂಗಿ ಆಗಲೇ ಗುಡಿಸಲು ಶುರು ಮಾಡಿದ್ದಳು. ಇವಳಿಗೆ ಗುಡಿಸೋದಂದ್ರೆ ಯಾಕಿಷ್ಟು ಇಷ್ಟ? ಅನ್ನೋ ಬಗೆಹರಿಯದ ಪ್ರಶ್ನೆಯನ್ನ ಮತ್ತೆ ಕೇಳಿಕೊಂಡ.
-ಎರಡು-
ಕೊಟ್ಟಿಗೆಗೆ ಹೋಗಿ ಎಮ್ಮೆಗಳಿಗೆ ತೌಡು ಹಾಕಿ ಬರಲು ಹೊರಟ ನಾಣಿ. ತೌಡು ಕಲೆಸಿದ ಭಾರದ ಬಕೇಟನ್ನು ಹೊತ್ತು ಕೊಟ್ಟಿಗೆಗೆ ಹೋದಾಗ, ಇಡೀ ಎಂಟು ಹಳ್ಳೀಲೇ ನಿಮ್ಮ ಅಣ್ಣನಷ್ಟು ಚೆನ್ನಾಗಿ ಕೊಟ್ಟಿಗೆಯನ್ನು ಯಾರು ಕಟ್ಟಿಸಿಲ್ಲ ಅಂತ ಅಮ್ಮ ಅಂದಿದ್ದು ನೆನಪಾಯಿತು. ತೌಡಿನ ಬಕೇಟನ್ನು ಇಡಕ್ ಗತಿಯಿಲ್ಲ, ಎಮ್ಮೆಗಳು ಮುನ್ನುಗ್ಗಿ ಅದಕ್ಕೆ ಬಾಯಿ ಹಾಕಿದವು. ಇವಕ್ಕೆ ಯಾಕಿಷ್ಟು ಆತ್ರ? ಅಂದ್ಕೊಂಡ. ಹೌದು. ಅಣ್ಣ ಕೊಟ್ಟಿಗೆಯನ್ನು ತುಂಬಾ ಚೆನ್ನಾಗೇ ಕಟ್ಟಿದ್ದಾರೆ. ದೊಡ್ಡ ಕೊಟ್ಟಿಗೆ, ಅದಕ್ಕೆರಡು ಕಿಟಕಿ, ಈ ಎಮ್ಮೆಗಳು ಹುಯ್ದ ಗಂಜಲ, ಸಗಣಿ ಎಲ್ಲವೂ ಜಾರಿ ಒಂದು ಮೂಲೆಯಲ್ಲಿ ಶೇಖರವಾಗುವಂತೆ ಓರೆಯಾಗಿ ಹಾಸಿದ ಕಲ್ಲುಗಳು, ಶೇಖರವಾದ ಗಂಜಲ ಸಗಣಿಗಳನ್ನು ಆರಾಮಾಗಿ ತೆಗೆದು ತಿಪ್ಪೆಗೆ ಹಾಕಲು ಒಂದು ಬಕೀಟು... ಹೀಗೆ... ಆದ್ರೆ ಒಂದು ಕೊರತೆ ಅಂದ್ರೆ ಕೊಟ್ಟಿಗೆಯಲ್ಲಿ ಒಂದೇ ಒಂದು ಹಸುವೂ ಇಲ್ಲ. ಬೆಳಿಗ್ಗೆ ಎದ್ದು ಕರಾಗ್ರೇ ವಸತೇ ಹೇಳಿ ನಿತ್ಯ ಕರ್ಮಗಳಿಗೆ ತೆರಳೋ ಮುಂಚೆ ಹಸುಗಳ ದರ್ಶನ ಆಗಬೇಕು. ಆದರೆ, ನಮ್ಮ ಮನೇಲಿ ಹಸುವೇ ಇಲ್ಲವಲ್ಲ ಅಂತ ತಾತ ಎಷ್ಟೋ ಸಾರಿ ಬೇಸರಿಸಿಕೊಳ್ಳುತ್ತಿದ್ದರು. ಅಮ್ಮ ಅಂತೂ ಹಸುವಿನ ಹಾಲು ಶ್ರೇಷ್ಠ. ಒಂದ್ ಹಸುನೂ ಮನೇಲಿಲ್ಲ. ದೇವರಿಗೆ ನೈವೇದ್ಯಕ್ಕಿಡಕ್ಕಾದರೂ ಹಸುವಿನ ಹಾಲು ಬೇಡ್ವೇ? ಒಂದು ಹಸು ತನ್ನಿ ಅಂತ ಅಣ್ಣನಿಗೆ ಸಾಕಷ್ಟು ಸಾರಿ ಹೇಳಿದ್ರು ಅಣ್ಣ ಕಿವಿಗೆ ಹಾಕ್ಕೊಂಡಿರಲಿಲ್ಲ. ಅಮ್ಮ ಎಷ್ಟು ಒರಲಿದರೂ ತಲೆಕೆಡಿಸಿಕೊಳ್ಳದೆ ಸ್ಕೂಲು-ತೋಟ-ಇಸ್ಪೀಟು ಇಷ್ಟರಲ್ಲೇ ಮುಳುಗಿ ಹೋಗಿರುವ ಅಣ್ಣನ ಬಗ್ಗೆ ಸಿಟ್ಟು ಬಂತು ನಾಣಿಗೆ. ಆದ್ರೆ ತಾನು ಫೇಲಾಗಿದ್ದಕ್ಕೆ ಏನೂ ಬೈಯ್ಯದೆ ಸುನಂದ (ಅತ್ತೆ ಮಗಳು) ಪಾಸೋ....? ಅಂತ ಕೇಳಿದ್ದ ಅಣ್ಣ ತುಂಬಾ ಕೆಟ್ಟವರೇನಲ್ಲ ಅನ್ನಿಸಿತು. ಸುನಂದ ಪಾಸಾಗಿದ್ದೇನೋ ಸರಿ. ಆದರೆ ವೆಂಡರ್‌ಮನೆ ಗೋಪು ಹೆಂಗ್ ಪಾಸಾದ ಅನ್ನೋ ಪ್ರಶ್ನೆ ಮಾತ್ರ ಬಗೆಹರಿಲಿಲ್ಲ. ಹಿತ್ತಲಿಗೆ ಹೋಗಿ ಕೈ ತೊಳೆದುಕೊಂಡ.
-ಮೂರು-
ಅಡುಗೆ ಮನೆಯಿಂದ ಬಿಸಿಕಾಫಿ ಘಮ ಬರ್‍ತಿತ್ತು. ಕಾಫಿ ಕುಡಿದು ಹೊರಟಾಗ, ಹೊರಗಾಗಿದ್ದರಿಂದ ಜಗಲಿ ತುದಿ ಕೋಣೆಲಿ ಕೂತಿದ್ದ ಎರಡನೇ ಅಕ್ಕ ಲಲಿತ ಎಲ್ಲಿಗ್ ಹೊರಟೆಯೋ ಅಂತ ಕೂಗಿದ್ದನ್ನ ಕೇಳಿಸಿಕೊಳ್ಳದೆ ಮುನ್ನಡೆದು ಪುಟ್ಟಸ್ವಾಮಿ ಮನೆ ಕಡೆ ಹೊರಟ. ಪುಟ್ಸಾಮಿ ಮನೆಗೆ ಎರಡು ದಾರಿ. ಎದಿರು ಮನೆ ಆಚಾರಿ ಹಿತ್ತಲನ್ನ ದಾಟಿ ಎಣಿಸಿ ಒಂದೈವತ್ತು ಹೆಜ್ಜೆ ಇಡೋದ್ರೊಳಗೆ ಪುಟ್ಸಾಮಿ ಮನೆ. ಆದ್ರೆ ಅದನ್ನ ಆಚಾರ್‌ರ ವಟಾರದ ಕಕ್ಕಸ್‌ಗುಂಡಿ ಅಂತಾಳೆ ಅಮ್ಮ. ಇನ್ನೊಂದು ಬಳಸು ದಾರಿ. ಆದರೆ ಈ ಲಲಿತ ನೋಡ್ತಾ ಇರೋದ್ರಿಂದ ಹತ್ತಿರದ ದಾರೀಲಿ ಹೋದ್ರೆ ಅಮ್ಮಂಗೆ ಹೇಳಿ ಬೈಯಿಸ್ತಾಳೆ. ಇದರ ಉಸಾಬರಿನೇ ಬೇಡ ಅಂತ ಬಳಸು ದಾರಿಲೇ ಹೊರಟ.
-ನಾಲ್ಕು-
ಪುಟ್ಟಸ್ವಾಮಿ ಹಸು, ಎಮ್ಮೆ, ದನ, ಕರ, ಅಂತಾ ಅವುಗಳ ಮಧ್ಯೆನೇ ಬೆಳದೋನು ಅವುಗಳ ಸಕಲ ಚರಾಚರ ಭಾವನೆಗಳನ್ನ ಅರ್ಥಮಾಡಿಕೊಂಡು ಅವು ಯಾವ ಆಕ್ಷನ್ ಮಾಡಿದ್ರೆ ಏನ್ ಅರ್ಥ ಏನ್ ಹೇಳ್ತಿವೆ ಎಂದು ತಿಳ್ಕೊಂಡು ಬಿಡೋನು. ಅಲ್ಲದೇ ಅವುಗಳಿಗೆ ಏನೇ ಖಾಯಿಲೆ ಕಸಾಲೆ ಆದ್ರೂ ಅವನೇ ವೈದ್ಯ. ಬಿ.ಎ. ಮೇಸ್ಟ್ರು ಒಂದ್ ಸಾರಿ ಅವನಿಗೆ ನೀ ನಮ್ಮೂರಿನ ವೆಟರ್‌ನರಿ ಡಾಕ್ಟ್ರು ಕಣಯ್ಯ. ಪ್ರಾಣಿಗಳ ಡಾಕ್ಟ್ರಿಗೆ ಇಂಗ್ಲಿಷ್‌ನಲ್ಲಿ ಹಿಂಗಂತಾರೆ. ಯಾವ್ ಕಾಲೇಜನಲ್ ಓದ್ದೇ....? ಅಂತ ನಗ್‌ನಗ್ತಾ ಕೇಳಿದ್ದಕ್ಕೆ, ಸ್ವಾಮ್ಯೋರೇ... ಆ ಕ್ಲಾಸ್ ಮಾಡ್‌ಬ್ಯಾಡಿ ಅಂತ ಪೆಚ್ಚುಪೆಚ್ಚಾಗಿ ಖುಷಿ ಪಟ್ಟಿದ್ದ.
ಒಂದು ಸತಿ ಮನೆ ಎಮ್ಮೆ ಗೌರಿಗೆ ಕಣ್ಣಲ್ಲಿ ಪೊರೆ ಬಂದಿತ್ತು. ಇನ್ನೇನು ಪುಟ್ಸಾಮಿನೇ ವೈದ್ಯ. ಅವನ ವೈದ್ಯವೋ ಅದೊಂದು ವ್ರತ. ಅವನು ವೈದ್ಯ ಮಾಡೋವಾಗ ಮೌನದಿಂದ ಇರ್‍ತಿದ್ದ. ಅವ್ನು ಬೆಳಬೆಳಗೇನೇ ತುಂಬೆ ಎಲೆ ಕಿತ್ತುಕೊಂಡು ಬರ್‍ತಿದಿದ್ದು ಬೀದಿ ತುದೀಲಿ ಕಾಣಿಸ್ತಿದ್ದಾಂಗೆ ನಾಲ್ಕೈದು ಜನ ಗೌರಿಯನ್ನ ಹಿಡ್ಕೊಂಡು ಸಿದ್ಧರಾಗ್ತಿದ್ರು. ಅವ್ನು ಆ ತುಂಬೆ ಎಲೆಗಳನ್ನು ಚೆನ್ನಾಗಿ ಎರಡು ಕೈಯಲ್ಲಿ ಗಟ್ಟಿಯಾಗಿ ಹೊಸಕಿ ನೇರವಾಗಿ ಗೌರಿ ಕಣ್ಣಿಗೆ ಹಿಂಡುತ್ತಿದ್ದಾಗ ಗಟ್ಟಿಯಾದ ನಾಲ್ಕು ಹನಿ ಬಿದ್ದ ಕ್ಷಣ ಗೌರಿ ಒದ್ದಾಡುತ್ತಿದ್ದಳು. ಮತ್ತೆ ಅರ್ಧ ಚಮಚ ಉಪ್ಪಿನ ಪುಡಿ ಹಾಕಿದಾಗ ಗೌರೀನ ಹಿಡಿಯೋದೇ ಕಷ್ಟವಾಗುತ್ತಿತ್ತು. ಹೇಗೆ ಬಹಳಷ್ಟು ದಿನ ಮಾಡಿದ ಮೇಲೆ ಪೊರೆ ಪೂರಾ ಹೋಯ್ತು. ಆಂಥಾ ವೈದ್ಯ ಪುಟ್ಟಸ್ವಾಮಿ.
ಪುಟ್ಸಾಮಿ ನೀ ಹೆಳದಂಗೇ ಕೇಳುತ್ತಲ್ಲ ಗೋವುಗಳು ಹೇಗೋ? ಅಂತ ಕೇಳಿದ್ದಕ್ಕೆ ನಾರಾಯಣನೋರೇ ಯಾವುದಾದ್ರು ರಾಸಿನ ಕುತ್ತಿಗೆ, ಮೈಯ್ನ ನಾಲ್ಕು ದಿನ ಪ್ರೀತಿಯಿಂದ ಸವ್ರುತ್ತಿದ್ರೆ ಅವಕ್ಕೂ ನಮ್ ಪ್ರೀತಿ ಅರ್ಥವಾಗಿ ಅವು ನಾವ್ ಹೆಳ್ದಂಗೇ ಕೇಳತೆ ಎಂದಿದ್ದ. ಇದೆಲ್ಲಾ ಮನಸ್ಸಿನ ಅಂಗಳದಲ್ಲಿ ಹಾದು ಹೋಗುವಷ್ಟರಲ್ಲಿ ಪುಟ್ಸಾಮಿ ಮನೆ ಬಾಗಿಲ ಹತ್ತಿರ ಬಂದಾಗಿತ್ತು. ಈ ದಾರಿ ಸವೆದಿದ್ದೇ ಗೊತ್ತಾಗಿಲ್ವಲ್ಲ ಅಂದ್ಕೊಂಡ ನಾಣಿ.
ಬೊಗಸೆಯಲ್ಲಿ ನೀರು ತುಂಬಿಕೊಂಡು ಸೂರ್ಯನಿಗೆ ಅಭಿಮುಖವಾಗಿ ಕಣ್ಣುಮುಚ್ಚಿ ಭಕ್ತಿಯಿಂದ ಅರ್ಘ್ಯ ಕೊಡುತ್ತಿದ್ದ ಪುಟ್ಸಾಮಿ ಅಣ್ಣ ದೇವರ ಮನೇಲಿ ಕೂತು ಗಂಟೆಗಟ್ಟಲೆ ಮಾಡೋ ಪೂಜೆಗಿಂತ ಪುಟ್ಸಾಮಿಯ ಒಂದು ನಿಮಿಷದ ಪೂಜೆ ಹೆಚ್ಚಲ್ವಾ ಅನ್ನಿಸಿತು. ತಾನು ಬಂದ ಕೆಲಸಾನೇ ಮರೆತು ಪುಟ್ಸಾಮಿನೇ ನೋಡುತ್ತಾ ನಿಂತ ನಾಣಿ.
ಎರಡ್ ನಿಮಿಷದ ನಂತರ ಏನ್ ಅಯ್ನೋರೇ ಇಷ್ಟು ಬೆಳಬೆಳಗೇನೇ ಬಂದ್ರಿ? ಅಂತ ಹರಿದ ಲುಂಗಿಗೆ ಕೈ ಒರೆಸಿಕೊಳ್ಳುತ್ತಾ ಕೇಳಿದ ಪುಟ್ಸಾಮಿ. ಪುಟ್ಸಾಮಿ ಒಂದು ವಿಷ್ಯ. ಯಾರಿಗೂ ಹೇಳಕ್ ಹೋಗಬ್ಯಾಡ ಈಗಲೇ. ನಮ್ ಮನೇಗೆ ಒಂದು ಹಸು ಬೇಕು. ಯಾರ್ ಹತ್ರ ಇದೆ? ಇದ್ರೆ ನೋಡೋಣ ಅಂತ ನಾಣಿ ಅಂದದ್ದಕ್ಕೆ ದೊಡ್ಡ ಅಯ್ನೋರಿಗೆ ಹೇಳಿ. ನೀವ್ ಯಾಕೆ ತಲೆ ಕೆಡಿಸ್‌ಕೊಳಕ್ ಹೋಯ್ತೀರಾ? ಇನ್ನಾ ಚಿಕ್ಕವರು ನೀವು ಅಂತ. ಅದಕ್ಕೆ ನಾಣಿ ಇಲ್ವೋ.. ನಾ ಬಂದಿದ್ದೇ ಅಂತ ಅಣ್ಣನ ಹತ್ರ ಹೇಳಬ್ಯಾಡ. ಒಂದ್ ಹಸು ನೋಡು. ನಾನೇ ವ್ಯಾಪಾರ ಮಾಡ್ತೀನಿ. ಚಿಕ್ಕವನಲ್ಲ ನಾನು. ನಂಗೂ ಹದಿನೈದ್ ದಾಟ್ತು ಅಂದ. ಆಗ ಪುಟ್ಸಾಮಿ ಅಲ್ಲಾ ಪಟ್ನದ್ ಹೊನ್ನನ ಹತ್ರ ಹದಿನೈದ್ ದಿವಸದಲ್ಲಿ ಕರು ಹಾಕಿರೋ ಹಸು ಐತೆ. ತಿಂಡಿ ತಿನ್ಕಂಡ್ ದುಡ್ ತಕ್ಕಂಡ್ ಬನ್ನಿ, ನೋಡೋಣ ಎಂದ. ಸರಿ ನಾನ್ ಒಂದ್ ಗಂಟೇಲಿ ರೆಡಿಯಾಗಿ ಬರ್‍ತೀನಿ ಅಂತ ನಾಣಿ ಕೂಗಿಕೊಂಡಿದ್ದು ಆಚಾರಿ ಮನೆ ಹಿತ್ಲಿಂದ ಕೇಳಸ್ತು.

ತಾನು ಕೂಡಿಸಿಟ್ಟ ದುಡ್ನೆಲ್ಲಾ ಹರವಿಕೊಂಡ. ಅವು ಐವತ್ತೆರಡು ರೂಪಾಯಿ ಅನ್ನುತ್ತಿದ್ದವು. ಅಮ್ಮನನ್ನು ತುಂಬಾ ಹೊತ್ತು ಪುಸಲಾಯಿಸಿದ್ದಕ್ಕೆ ಅವಳು ಐವತ್ತು ರೂಪಾಯಿ ಕೊಟ್ಟಳು. ಹಸು ತರೋವರೆಗೂ ಅಣ್ಣನಿಗೆ ಹೇಳಬಾರದೆಂದು ಆಣೆ ಹಾಕಿಸಿಕೊಂಡು ಸ್ನಾನ ಸಂಧ್ಯಾವಂದನೆ ಮುಗಿಸಿ ಅಮ್ಮ ಮಾಡಿಕೊಟ್ಟ ರೊಟ್ಟಿ ಚಟ್ನಿ ತಿಂದು ದುಡ್ಡನ್ನ ಮತ್ತೆ ಎಣಿಸಿ ಜೋಬಿನಲ್ಲಿ ಭದ್ರವಾಗಿ ಇಟ್ಟುಕೊಂಡು ಪುಟ್ಸಾಮಿ ಮನೆಗೆ ಹೋದ. ಪುಟ್ಸಾಮಿನೂ ಹೊರಟು ನಿಂತಿದ್ದ.
-ಐದು-
ಅಲ್ಲಾಪಟ್ಟಣ ಹುಲಿಕಲ್‌ನಿಂದ ಪಶ್ಚಿಮಕ್ಕೆ ಒಂದು-ಒಂದೂವರೆ ಕಿ.ಮೀ. ದೂರದಲ್ಲಿದೆ. ಹೊನ್ನನ ಅಪ್ಪ ನಿಮ್ ಮನೆ ಗೇಣಿದಾರನಾಗಿದ್ದೋನೆ. ಈಗ ಅವ್ನು ಇರೋ ಜಮೀನು ನಿಮ್ದೆ ಆಗಿತ್ತು.... ಅಂತ ಯಾವುದೋ ಹಳೇ ಕಥೇನ ಸವಿಸ್ತಾರವಾಗಿ ಹೇಳ್ತಾ ಪುಟ್ಸಾಮಿ ಬಿರಬಿರನೆ ಹೆಜ್ಜೆ ಹಾಕ್ತಿದ್ದ. ಆದ್ರೆ ನಾಣಿ ಮನಸ್ಸು ಹಸು ಹೇಗಿರಬಹುದು ಅಂತ ಯೋಚಿಸುತ್ತಿತ್ತು. ಹೊನ್ನನ ಮನೆಗೆ ಎಷ್ಟು ದೂರ ಅಂತ ಮನಸ್ಸಿನಲ್ಲೇ ಲೆಕ್ಕ ಹಾಕತೊಡಗಿದ. ಮೊದಲು ಸಿಗೋದು ಜೋಯಿಸರ ತೋಟ, ನಂತರ ಬಿ.ಎ. ಮೇಷ್ಟ್ರದ್ದು, ಆ ತುದೀಗೆ ಅಲ್ಲಾ ಪಟ್ಣದ ಮನೆ ಶೀನಂದು. ಎಲ್ಲಾ ಅಡಿಕೆ ತೋಟಗಳು, ಅದಕ್ಕೆ ವೀಳ್ಯದೆಲೆ ಹಂಬು ಹಂಬ್ಸಿದ್ರು. ಮೇಲಕ್ಕೆ ಜಗನ್ನಾಥನ ಕೆರೆ, ಮುಂದಕ್ಕೆ ಪುಟ್ಸಾಮಿ ಹೊಲ, ನಂತರ ಸಿಗೋದೆ ಹೊನ್ನನ ಜಮೀನು. ಇವನ್ನೆಲ್ಲ ದಾಟಿ ಹೊನ್ನನ ಜಮೀನಿಗೆ ಬಂದ್ರೆ ಅಲ್ಲೇ ಹೊನ್ನ ಬದುವಿನಲ್ಲಿ ದನಗಳನ್ನ ಮೇಯಿಸ್ತಾ ಉಳುಮೆ ಮಾಡ್ತಿದ್ದ. ಹೊನ್ನಾ-ಪುಟ್ಸಾಮಿ ಏನೋ ಮಾತ್ನಾಡಿಕೊಂಡ್ರು. ಹೊನ್ನಾ ಇಲ್ಲೇ ಬದುನಲ್ ಮೇಯ್ತಿದೆ ನೋಡಿ ಬನ್ನಿ ಅಂದ. ತುಂಬಾ ಸಾಧು ಹಸ. ಹಾಯಕ್ಕಿಲ್ಲ, ಕಾಲೆತ್ತಕ್ಕಿಲ್ಲ. ತುಂಬಾ ಒಳ್ಳೆ ಹಸ ಅಂತೆಲ್ಲಾ ಹೊಗಳಿಕೊಂಡ. ಪುಟ್ಸಾಮಿ ಹಸು ತಡವಿ ಕೆಚ್ಚಲಿಗೆ ಕೈ ಹಾಕಿದ. ಹಸು ತುಂಬಾ ಸಾಧು ಒಳ್ಳೆದು ಅಂತ ನಿರ್ಧಾರವಾಯ್ತು. ಹಾಲೆಷ್ಟು ಕೊಡುತ್ತೆ? ಪ್ರಶ್ನೆ ಎದುರಾಯ್ತು. ಒಂದು ಮುಕ್ಕಾಲು ಸೇರು. ಕಿಂಚಿತ್ ಹೆಚ್ಚೆಯಾ ಅಂದಾ ಹೊನ್ನ. ಒಂದು ಪಡಿ (ಸುಮಾರು ಅರ್ಧ ಲೀಟರ್) ಹಾಲು ಕೊಟ್ರೆ ಸಾಕು ಅಂತ ಅಮ್ಮ ಹೇಳಿದ್ಲು. ಇದು ಮುಕ್ಕಾಲು ಸೇರು ಕೊಡುತ್ತೆ ಅಂತ ಖುಷಿಯಾಯ್ತು. ಮುನ್ನೂರು ಕೊಡೋದು ಅಂತ ತುಂಬಾ ಚೌಕಾಸಿ ನಂತರ ನಿರ್ಧಾರ ಆಯ್ತು. ಈಗ ನೂರು ರೂಪಾಯಿ ತಕ್ಕೋ. ನಾಳೆ ಪುಟ್ಸಾಮಿ ಹತ್ರಾ ಇನ್ನೂ ಇನ್ನೂರು ಕಳಿಸ್ತೀನಿ ಅಂತ ನಾಣಿ ಹೇಳಿದ್ದಕ್ಕೆ ಹೊನ್ನ ಹಸುವಿನ ಹಗ್ಗವನ್ನು ಕೊಡುತ್ತಾ ಹಗ್ಗದ ಕಾಸು ನಾಲ್ಕು ರೂಪಾಯಿ ಕೊಟ್ಬಿಡಿ ಅಂತ ಪಟ್ಟು ಹಿಡಿದ. ಕೊನೆಗೆ ಒಂದು ರೂಪಾಯಿ ಕೊಟ್ಟು ಹಸು ಹೊಡ್ಕೊಂಡು ಊರಕಡೆ ಹೊರಟಿದ್ದಾಯ್ತು. ಕರೂನ ಪುಟ್ಸಾಮಿ ಎತ್ಕಂಡಿದ್ದ. ಆ ಕರೂಗೆ ನಡೆಯಾಕ್ಕು ತ್ರಾಣ ಇರ್‍ಲಿಲ್ಲಾ. ಇವತ್ತು ಹೆಚ್ ಹಾಲ್ ಸಿಗಾಕಿಲ್ಲ. ಈಗ ಕರ ಕುಡ್ಕಂಬುಟದೆ ಅಂತ ಕೊನೆ ಮಾತು ಸೇರಿಸಿದ ಹೊನ್ನ. ಈವತ್ನಿಂದ ನಮ್ಮನೇಲು ಹಸು ಇರತ್ತೆ. ಅಮ್ಮಾ ಬೆಳಗ್ಗೆ ಎದ್ದ ತಕ್ಷಣ ಇದ್ರ ದರ್ಶನ ಮಾಡ್ಬೋದು, ದೇವ್ರಿಗೆ ನೈವೇದ್ಯಕ್ಕೆ ಹಾಲೆ ಇಡ್ಬೋದು, ಎಷ್ಟು ಸಂತೋಷ ಅವ್ಳಿಗೆ ಎಂದೆಲ್ಲಾ ಕಲ್ಪಿಸಿಕೊಳ್ಳುತ್ತಾ ಖುಷಿ ಖುಷಿಯಾಗಿದ್ದವನಿಗೆ ತೋಟವನ್ನು ಹಿಂದೆಹಾಕಿದ್ದು ಗೊತ್ತೇ ಆಗಲಿಲ್ಲ.
ಜಗುಲಿಯ ಬಳಿಯೇ ನಿಂತಿದ್ದ ಕೊನೆ ತಂಗಿ ಕನಕೆ ಹಸು ಕರುವನ್ನು ನೋಡಿ ಮುಖದಲ್ಲಿ ಆಶ್ಚರ್ಯ ತುಂಬಿಕೊಂಡು ಅಮ್ಮನ ಬಳಿ ಓಡಿದಳು. ಅಮ್ಮಾ ಬಂದು ಹಸುವನ್ನು ನೋಡಿ ಎಷ್ಟ್ ಹಾಲ್ ಕೊಡುತ್ತಂತೆ? ಅಂದ್ಲು. ಮುಕ್ಕಾಲ್ ಸೇರ್ ಕೊಡುತ್ತಂತೆ. ಆದ್ರೆ ಇವತ್ತು ಕರು ಕುಡ್ಕೊಂಡು ಬಿಟ್ಟಿದೆ ಅಂದ ನಾಣಿ. ಏನೋ..... ನೋಡಿದ್ರೆ ಹಂಗನ್‌ಸವಲ್ಲ ಅಚ್ಚೇರು ಕೊಟ್ರೆ ಸಾಕು ಅಂದುಕೊಳ್ಳುತ್ತಾ ಅಮ್ಮ ಒಳಗೆ ಹೋದಳು.
ಅಯ್ಯೋ ಅಮ್ಮಂಗೆ ಖುಷಿಯಾಗ್ಲೇ ಇಲ್ವಲ್ಲಾ. ಬರೀ ಹಾಲು ಕೊಡೋದ್ರ ಬಗ್ಗೆ ಕೇಳಿ ಹೋದ್ಲು. ದಿನಾ ಹಸುವಿನ ದರ್ಶನ ಮಾಡ್ಬೋದಲ್ಲಾ? ಬರೀ ಹಾಲೇ ಮುಖ್ಯವ? ಅಂತ ಏನೇನೋ ಅನ್ನಿಸಿ, ನಾ ಇಷ್ಟೆಲ್ಲಾ ಕಷ್ಟ ಪಟ್ರೂ ಅಮ್ಮಾ ಒಂಚೂರು ಹೋಗ್ಳಲೇ ಇಲ್ಲವಲ್ಲ ಅಂತ ಅಳು ಬಂತು. ನಾನ್ ಹುಡುಗ ಅಳ್ಬಾರ್‍ದು ಅಂದುಕೊಂಡ.
ಹಸು-ಕರುವನ್ನು ಕೊಟ್ಟಿಗೆಯಲ್ಲಿ ಕಟ್ಟಿ ಒಂದ್ ದೊಡ್ಡ ಲೋಟ ತಂದು ಇಷ್ಟ್ ಹಾಲ್ ಸಿಗ್ಬೋದು. ಇವತ್ತು ಕರೂಗೆ ಹಾಲ್ ಬಿಡಲ್ಲ. ಹೆಂಗಿದ್ರು ಅದು ಕುಡ್ಕಂಡಿದ್ಯಲ್ಲಾ ಅಂತ ಅಂದುಕೊಂಡು ಹಾಲು ಕರೆಯೋಕೆ ಶುರು ಮಾಡ್ದ. ಮುಕ್ಕಾಲು ಲೋಟ ತುಂಬಿತು. ಸರಿ ನಾಳೆಯಿಂದ ಸರಿಯಾಗಿ ತುಂಬುತ್ತಲ್ಲ ಅಂತ ದೇವ್ರ ಮನೇಲಿ ಹಾಲು ಇಟ್ಬಂದ.
ಚೆನ್ನಾಗಿ ತಿನ್ನಲಿ ಅಂತ ಮೂರ್‍ನಾಲ್ಕು ಎಮ್ಮೆಗಳಿಗೆ ಹಾಕುವಷ್ಟು ಹುಲ್ಲನ್ನು ಇದಕ್ಕೊಂದ್ದಕ್ಕೇ ಹಾಕಿದ. ಹೊನ್ನ ಈ ಹಸೂನ ಭೈರಿ ಅಂತ ಕರೀತಿದ್ದುದು ಜ್ಞಾಪಕಕ್ಕೆ ಬಂದು ಅಯ್ಯೋ ಹೆಸ್ರು ಚೆನ್ನಾಗಿಲ್ಲ ಅನಿಸಿ ಬೆಳ್ಳಿ ಅಂತ ಬದಲಿಸಿ ಬೆಳ್ಳಿ ಬೆಳ್ಳಿ ಅಂತ ಕರೆದು ಚೆನ್ನಾಗಿ ಮೈದಡವಿದ.
-ಆರು-
ಒಂದು ಚೊಂಬು ಭರ್ತಿ ಹಾಲನ್ನ ನೈವೇದ್ಯಕ್ಕೆ ಇಟ್ಟಿದ್ದಾಳೆ ಅಮ್ಮ. ನೋಡಿ ಅಷ್ಟು ದಿನದಿಂದ ಒರಲಿದ್ರು ಒಂದ್ ಹಸು ತರಲಿಲ್ಲ ನೀವು. ಈಗ ಇವ್ನೇ ಹೋಗಿ ಎಷ್ಟು ಚೆನ್ನಾಗಿರೋ ಹಸು ತಂದಿದ್ದಾನೆ ನೋಡಿ ಅಂತ ಅಣ್ಣನಿಗೆ ಅಮ್ಮ ಹೇಳ್ತಿದ್ದಿದು ಕೇಳಿಸ್ತು. ಬೆಳ್ಳಿ ಹೆಸರು ಎಷ್ಟು ಚೆನ್ನಾಗಿದೆ ಅಲ್ವೇನೆ? ಅಂತ ದೊಡ್ಡಕ್ಕ ಕಮಲ ಹೇಳಿದ್ಲು. ನಾ ಬೆಳ್ಳಿ ಅಂತ ಹೆಸ್ರಿಟ್ಟಿದ್ದು ಇವಳಿಗೆ ಗೊತ್ತಾಯ್ತಾ? ನಾನೇ ಹಾಲ್ ಕರೀ ಬೇಕು ಅಂದ್ಕೊಂಡಿದ್ನಲ್ಲಾ ಇವತ್ತು ಹಾಲ್ ಕರ್‍ದೋರು ಯಾರು? ನಿನ್ನೆ ಸಂಜೆ ಪಾಪ ಆ ಕರುಗೆ ನಾ ಹಾಲು ಕುಡಿಯೋಕೆ ಬಿಟ್ಟಿರಲಿಲ್ಲ. ಇವತ್ತಾದ್ರೂ ಬಿಟ್ರೋ ಇಲ್ವೋ ಅಂತ ಚಿಂತೆ ಹತ್ತಿತು. ತಕ್ಷಣ ಎಚ್ಚರಾಯಿತು. ಬೆಳಗಾಗಿರಲಿಲ್ಲ. ತೊಟ್ಟಿಯಲ್ಲಿ ಸುರಿದ ಕತ್ತಲು. ಏನು ಎತ್ತ ಅರ್ಥ ಆಗಲಿಲ್ಲ. ಸ್ವಲ್ಪ ಹೊತ್ತಿನ ಮೇಲೆ ಓ ಕನಸು ಅಂತ ಹೊಳೀತು. ಬೆಳಿಗ್ಗೆ ಎದ್ದು ಹಸೂಗೆ ತೌಡು ಹಾಕಬೇಕು. ಎಷ್ಟು ಗಂಟೆ ಆಯ್ತು ಅಂತ ಕಣ್ಣು ಕೀಲಿಸಿ ನೋಡಿದ. ಗಡಿಯಾರಕ್ಕೂ ಕಪ್ಪು ಸುರಿದಿತ್ತು. ಗಡಿಯಾರ ನಿಂತು ಹೋಗಿದೆಯೇ ಅಂತ ಅನುಮಾನ ಆಯ್ತು. ಎದ್ದು ಹತ್ತಿರ ಹೋಗಿ ಟಾರ್ಚ್ ಬೆಳಕು ಬಿಟ್ಟು ನೋಡಿದ. ಇನ್ನೂ ಎರಡೂವರೆ ಗಂಟೆ. ವಾಪಾಸು ಬಂದು ಮಲಗ ಬೇಕಾದ್ರೆ ಕೊನೇ ತಮ್ಮ ಶೇಷನಿಗೆ ಕಾಲು ತಗುಲಿತು. ಅವನು ಸೀದ ಎದ್ದು ತೊಟ್ಟಿಯ ಸುತ್ತ ಓಡತೊಡಗಿದ. ನಾಣಿಗೆ ಕಕ್ಕಾಬಿಕ್ಕಿ. ಬಿದ್ದುಬಿಟ್ರೆ ಏನ್ ಗತಿ ಅಂತ ಭಯವಾಗಿ ಪಕ್ಕದಲ್ಲಿದ್ದ ಅತ್ತೆಯನ್ನು ಎಚ್ಚರಿಸಿದ. ಅಯ್ಯೋ ಬೀಳ್ತಾನೆ ಕಣೋ ಎನ್ನುತ್ತಾ ಅತ್ತೆ ಅವನ ಸುತ್ತ ಎರಡು ಸುತ್ತು ಸುತ್ತಿ ಗಟ್ಟಿಯಾಗಿ ಹಿಡಿದುಕೊಂಡು ಬಂದು ಪಕ್ಕದಲ್ಲೇ ಮಲಗಿಸಿಕೊಂಡ್ರು.
ನಾಣಿ ಮತ್ತೆ ಮಲಗಿದ. ಏನೇನೋ ಕನಸುಗಳು. ಬೆಳ್ಳಿ-ಹಾಲು-ಹೊನ್ನ-ಕರು-ಅದರ ದೈನ್ಯ ಮುಖ-ಹಲಸಿನ ಮರ-ಅಡಿಕೆ ತೋಟ.. ಏನೇನೋ.. ಸಂಬಂಧವಿಲ್ಲ, ಅರ್ಥವಿಲ್ಲ! ಮತ್ತೆ ಎಚ್ಚರವಾದಾಗ ಅಮ್ಮ ಮಡಿ ಕೋಲಲ್ಲಿ ಬಟ್ಟೆ ತೆಗೆದುಕೊಂಡು ಸ್ನಾನಕ್ಕೆ ಹೋದಳು. ನಾಣಿ ಅಡುಗೆ ಮನೆಗೆ ಹೋಗಿ ನೋಡಿದ ಬೇಕಾದಷ್ಟು ಮಜ್ಜಿಗೆ ಇತ್ತು. ಅದನ್ನು ಕೊಟ್ಟಿಗೆಗೆ ತೆಗೆದುಕೊಂಡು ಹೋಗಿ ಬಕೆಟ್‌ಗೆ ಸುರಿದ. ಅದಕ್ಕೆ ಒಂದು ರಾಶಿ ತೌಡನ್ನು ಸುರಿದು ಗಟಾಯಿಸಿ ಬೆಳ್ಳಿ ಮುಂದೆ ಇಟ್ಟ. ಅದು ಸರಿಯಾಗಿ ತಿನ್ನಲಿಲ್ಲ. ಮಜ್ಜಿಗೆ ವಾಸನೆಗೋ ಏನೋ ಚೂರು ಚೂರು ತಿಂದಿತು. ಅಷ್ಟೊಂದು ಕಲಸಿ ಹಾಕಿದ್ದೇನೆಂದು ಅಮ್ಮನಿಗೆ ಗೊತ್ತಾದ್ರೆ ತೊಂದರೆ ಎಂದುಕೊಂಡು ಅವನ್ನು ಎಮ್ಮೆಗಳ ಮುಂದಕ್ಕೆ ಇಟ್ಟ. ಎಮ್ಮೆಗಳು ಯಥಾ ಪ್ರಕಾರ ಕಿತ್ತಾಡಿಕೊಂಡು ತಿಂದವು. ಏಳು ಗಂಟೆ ಹೊತ್ತಿಗೆ ಒಂದು ದೊಡ್ಡ ಚೊಂಬು, ಲೋಟ ತೆಗೆದುಕೊಂಡು ಕೊಟ್ಟಿಗೆಯ ಕಡೆ ಹೋದ. ಲೋಟಕ್ಕೆ ಹಾಲು ಕರೆಕರೆದು ಅದು ತುಂಬಿದಂತೆ ಚೊಂಬಿಗೆ ಸುರಿಯುವುದೆಂಬ ಕಲ್ಪನೆಯೊಂದಿಗೆ ಕರುವಿಗೆ ಎಷ್ಟು ಹಾಲು ಬಿಡಬೇಕು ಎಂಬ ಪ್ರಶ್ನೆ ಎದುರಾಯಿತು. ಮೊದಲು ಹಾಲು ಕರೆದು ಬಂದು ಅರ್ಧ ಸೇರು ಆದ ಮೇಲೆ ಉಳಿದದ್ದನ್ನ ಕರುವಿಗೆ ಬಿಡೋಣ. ಸಾಕಾಗದಿದ್ದರೆ ಮನೆಯಲ್ಲಿ ಬೇರೆ ಹಾಲು ಇರುತ್ತಲ್ಲಾ? ಅಮ್ಮನ ಕಣ್ಣು ತಪ್ಪಿಸಿ ಅದನ್ನೆ ಕುಡಿಸೋಣ ಎಂದುಕೊಂಡ.
ಅಲ್ಲಿಗೆ ಸೌಭಾಗ್ಯತ್ತೆ ಬಂದು ನಿಂತಿದ್ದರು. ಅವರು ಅಣ್ಣನ ಅಕ್ಕ. ಬಹಳ ವರ್ಷಗಳಿಂದ ನಾಣಿಯ ಮನೆಯಲ್ಲೇ ಇದ್ದರು. ಮದುವೆಯಾಗಿ ಎಷ್ಟು ವರ್ಷಗಳಾದರೂ ಮಕ್ಕಳಾಗದೆ ಇದ್ದಾಗ ಸೌಭಾಗ್ಯತ್ತೆಯ ಗಂಡನ ಮನೆಯವರು ಇವರನ್ನು ಇಲ್ಲಿ ತಂದು ಬಿಟ್ಟಿದ್ದರು. ಅಣ್ಣ ಇಲ್ಲದಿರುವಾಗ ಅಮ್ಮ ಎಷ್ಟೋ ಸತಿ ಸೌಭಾಗ್ಯತ್ತೆಯನ್ನು ಹಂಗಿಸುತ್ತಿದ್ದರು. ಆದರೆ ಅತ್ತೆಯದು ಒಂದೇ ಉತ್ತರ-ಮೌನ. ಸೌಭಾಗ್ಯತ್ತೆಗೆ ನಾಣಿ ಎಂದರೆ ತುಂಬಾ ಪ್ರೀತಿ. ಕದ್ದುಮುಚ್ಚಿ ತೇಂಕೋಳು, ಚಕ್ಕುಲಿ, ಬರ್ವಡೆ, ಮಿಠಾಯಿ, ಲಾಡುಗಳನ್ನು ಕೊಡುತ್ತಿದ್ದರು. ಅವರು ಊಟಕ್ಕೆ ಬಡಿಸೋಕೆ ನಿಂತರೆ ಇವನಿಗೆ ಹೆಚ್ಚೇ ತುಪ್ಪ ಬೀಳುತ್ತಿತ್ತು. ಒಂದು ಸತಿ ನಾಣಿಗೆ ಜ್ವರ ಬಂದಾಗ ಮೂರ್‍ನಾಲ್ಕು ದಿನ ಕಾಯ್ತಿದ್ದರು. ಇವನು ಫೇಲ್ ಆದಾಗ ತಬ್ಬಿಕೊಂಡು ಸಮಾಧಾನ ಮಾಡಿದ್ದರು.
ನಾಣಿ ಹಾಲು ಕರೆಯಲು ಶುರು ಮಾಡಿದ. ಆದರೆ ಯಥಾ ಪ್ರಕಾರ ಮುಕ್ಕಾಲು ಲೋಟ ಮಾತ್ರ ತುಂಬಿತು. ಇನ್ನೊಂದು ಲೋಟ ಹಾಲಿಲ್ಲ! ಆಘಾತ! ಆಶ್ಚರ್ಯ! ಅಯ್ಯೋ ಏನೋ ಇದು ನಾಣಿ. ಇಷ್ಟೇ ಹಾಲ ಇದು ಕೊಡೋದು? ಆ ಹೊನ್ನ ನಿಂಗೆ ಸರಿಯಾದ ಪಂಗನಾಮ ಹಾಕಿದಾನೆ. ಅಣ್ಣ ಸರಿಯಾಗಿ ಬಯ್ತಾನೆ. ಉಪಯೋಗಕ್ಕೆ ಬಾರದ್ದನ್ನ ಯಾರೂ ಇಷ್ಟ ಪಡಲ್ಲ ಕಣೋ. ಈಗ ನನ್ನ ನೋಡು... ಏನೋ ಹೇಳಲು ಹೋಗಿ ಹುಮ್ ಅಂತ ನಿಟ್ಟುಸಿರು ಬಿಟ್ಟಳು. ಕರುವಿಗೊಂದು ತೊಟ್ಟು ಹಾಲಿರಲಿಲ್ಲ. ಕರುವನ್ನು ಹೋಗಿ ತಬ್ಬಿಕೊಂಡ ನಾಣಿ. ಅದರ ಹಳ್ಳೆ ಹೊಡೆದುಕೊಳ್ಳುತ್ತಿತ್ತು. ಅದಕ್ಕೆ ಅಂಬಾ ಎಂದು ಕಿರುಚಲು ಶಕ್ತಿ ಇರಲಿಲ್ಲ. ಸಂಕಟ ಆಯಿತು ನಾಣಿಗೆ. ಅತ್ತೇನ ಹೋಗಿ ತಬ್ಬಿಕೊಂಡು ಬಿಕ್ಕಳಿಸಿ ಅತ್ತ. ಅತ್ತೆ ದಯವಿಟ್ಟು ಅಣ್ಣನಿಗೆ ಈಗ್ಲೇ ಹೇಳ್ಬೇಡ ಎಂದು ಮತ್ತೆ ಬಿಕ್ಕಳಿಸಿದ. ಕರೆದ ಹಾಲಿಗೆ ನೀರನ್ನು ಸೇರಿಸಿ ಮುಕ್ಕಾಲು ಲೋಟ ಹಾಲನ್ನು ಒಂದು ಲೋಟ ಮಾಡಿ ಅಡಿಗೆ ಮನೆ ಹತ್ತಿರ ತಲುಪಿದ.
ಇವನಿಗೆ ವ್ಯಾಪಾರ ಮಾಡಕೆ ಹೇಳ್ದೋರ್ ಯಾರು? ನಾ ಕಬ್ಳಿಗೆರೆ ಇಂದಾನೋ, ಬೆಟ್ದಳ್ಳಿ ಇಂದಾನೋ ಒಳ್ಳೆ ಹಸು ತರ್‍ತಿದ್ದೆ ಅಂತ ಅಣ್ಣ ಹೇಳ್ತಿದ್ದದ್ದು ಕೇಳಿಸ್ತು. ಹಾಲೆಷ್ಟು ಕೊಡುತ್ತೆ ಅಂತ ಗೊತ್ತಾಗದೆ ಹೀಗೆ ಹೇಳುತ್ತಿರುವ ಅಣ್ಣನ ಮುಂದೆ ಒಂದು ಲೋಟ ಹಾಲನ್ನು ಹಿಡಿದುಕೊಂಡು ಹೋದರೆ ಏನೆನ್ನಬಹುದು ಯೋಚಿಸಿ ಮತ್ತೆ ಕೊಟ್ಟಿಗೆ ಕಡೆ ಹೋದ. ಆ ಹಸು ಇಷ್ಟು ಕಡಿಮೆ ಹಾಲ್ ಕೊಟ್ಟದ್ದಾದ್ರೂ ಯಾಕೆ ಎಂದು ತುಂಬಾ ಯೋಚಿಸಿ, ಕೊನೆಗೆ ಹೊಸ ಜಾಗ ಘಾಸಿಯಾಗಿರ್‍ಬೇಕು. ನಾ ಇಟ್ಟಿದ್ ತೌಡನ್ನು ಸರಿಯಾಗಿ ತಿನ್ಲಿಲ್ಲ. ಇವತ್ ಬೆಳಿಗ್ಗೆ ಎಲ್ಲಾ ಚೆನ್ನಾಗಿ ಮೇಯಿಸ್ತೀನಿ. ಆವಾಗಾದ್ರೂ ಸಂಜೆ ಸರಿಯಾಗಿ ಹಾಲು ಕೊಡ್ಬಹುದು ಅಂತೆಲ್ಲಾ ಸಮಜಾಯಿಷಿ ಕೊಟ್ಕೊಂಡ. ಅಣ್ಣ ಸ್ಕೂಲಿಗೆ ಹೋದ್ರು ಅಂತ ಗೊತ್ತಾದ್ ಮೇಲೆ ಅಡಿಗೆ ಮನೆಗೆ ಬಂದು ಅಮ್ಮನಿಗೆ ಹಾಲು ಕೊಟ್ಟ. ತನಗೆ ಹೊಳೆದ ಸಮಜಾಯಿಷಿಗಳನ್ನೇ ಅಮ್ಮನಿಗೆ ವಿವರಿಸಿ ಹೇಳಿದ. ಅಮ್ಮ ಬೇರೆ ಚಿಂತೆಯಲ್ಲಿ ಇದ್ದುದರಿಂದ ಅದರ ಕಡೆ ಹೆಚ್ ಗಮನ ಕೊಡಲಿಲ್ಲ.
ಹದಿನೈದು ವರ್ಷದಲ್ಲಿ ಒಂದು ದಿವಸವೂ ಹಸು ಮೇಯಿಸಿ ಗೊತ್ತಿಲ್ಲದ ಹುಡುಗ. ಹಸು ಮೇಯಿಸಿಕೊಂಡು ಬರಲು ಹೊರಟ. ದಾರಿಯಲ್ಲಿ ಸಿಕ್ಕ ಜೋಯಿಸ ಹೊಸ ಹಸನೇನೋ? ಎಷ್ಟು ಕೊಟ್ರಿ? ಯಾಕೋ ಚಿರೂಪು ಅಂತೆಲ್ಲಾ ಹೇಳಿ ಅವನ ಆತಂಕಕ್ಕೆ ಇನ್ನಷ್ಟು ಆತಂಕ ಸೇರಿಸಿದ್ರು.
ಒಂದು-ಒಂದೂವರೆ ಗಂಟೆ ಮೇಯಿಸುವಷ್ಟು ಹೊತ್ತಿಗೆ ಛೇ ಎಷ್ಟೊಂದು ಸಮಯ ಹಾಳು ಎನಿಸಿತು. ಅಷ್ಟರಲ್ಲಿ ಒಂದು ಉಪಾಯ ಹೊಳೆಯಿತು. ಒಂದು ದೊಡ್ಡ ಹಗ್ಗವನ್ನು ತಂದು ಹಸುವಿಗೆ ಕಟ್ಟಿ ಹಗ್ಗದ ಮತ್ತೊಂದು ತುದಿಯನ್ನು ಗೂಟಕ್ಕೆ ಕಟ್ಟಿ ಅದು ಅಲ್ಲೆಲ್ಲಾ ಓಡಾಡಿಕೊಂಡು, ಮೇಯುವಂತೆ ವ್ಯವಸ್ಥೆ ಮಾಡಿ ಪುಟ್ಸಾಮಿ ಮನೆ ಕಡೆ ಓಡಿದ. ಕೊಟ್ಟಿಗೆಯಲ್ಲಿದ್ದ ಪುಟ್ಸಾಮಿಗೆ ಇವತ್ ಬೆಳಿಗ್ಗೆ ತನಗೆ ಆದ ಆಘಾತವನ್ನು ವಿವರಿಸಿದ ನಾಣಿ. ಅಯಿನೋರೆ ಹೊಸ ಜಾಗ ಅಲ್ವ? ಅದಕ್ಕೆ ಘಾಸಿಯಾಗಿರ್‍ಬೇಕು. ಸಂಜೆ ಚೆನ್ನಾಗಿ ಹಾಲು ಕೊಡ್‌ತದೆ ಬಿಡಿ. ಚಿಂತೆ ಮಾಡ್ಬೇಡಿ ಅಂತ ಪುಟ್ಸಾಮಿ ತನಗೆ ಅನಿಸದ್ದನ್ನೇ ಹೇಳಿದ್ದನ್ನು ಕೇಳಿಸಿಕೊಂಡು ಮನೆಗೆ ಹೋಗಿ ಊಟ ಮಾಡಿ ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಹಿಡಿದುಕೊಂಡು ಹಸು ಕಟ್ಟಿದ ಜಾಗಕ್ಕೆ ಹೋದ. ಹಸು ಚೆನ್ನಾಗಿ ಮೇಯ್ತಿತ್ತು. ಬೆಳ್ಳಿ ಬೆಳ್ಳಿ ಅಂತ ಕರೆದು ಮುದ್ದು ಮಾಡಿದ.
ಸಂಜೆ ಪುಸ್ತಕವನ್ನು ಹಿಡಿದುಕೊಂಡು ಬೆಳ್ಳಿಯನ್ನು ಹೊಡೆದುಕೊಂಡು ಮನೆ ಕಡೆ ಹೊರಟ್ರೆ ಮಧ್ಯದಲ್ಲಿ ರಾಜು ಸಿಗಬೇಕೆ! ಅವನು ಈಗ ಕೆ.ಎಸ್.ನ. ಅವರ ಬಗ್ಗೆ ಕೊರೆದ. ಹೊಸ ಹಸುವ? ಕೇಳಿದ ಅವನಿಂದ ತಪ್ಪಿಸಿಕೊಂಡು ಮನೆಗೆ ಹೋಗಿ ಹಾಲು ಕರೆದರೆ ಎನ್ನಿಸಿತು ನಾಣಿಗೆ.
ಮನೆಗೆ ಬಂದ. ಜಗುಲಿ ಮೇಲೆ ಅಮ್ಮ ಕುಳಿತಿದ್ದಳು. ಹಾಲು ಕರೆದು ಇಡೋ ಎಂದಳು. ಚಂಬು ಲೋಟ ಹಿಡಿದುಕೊಂಡು ಹಾಲು ಕರೆಯೋಕೆ ಕೊಟ್ಟಿಗೆಗೆ ಹೋದ ನಾಣಿ. ಸ್ವಲ್ಪಹೊತ್ತಿನಲ್ಲೇ ಪುಟ್ಸಾಮಿ ಮನೆ ಮುಂದೆ ನಿಂತಿದ್ದ. ಕಣ್ಣುಗಳಲ್ಲಿ ಕಾರ್ಮೋಡ. ಅತ್ತೆಯ ಜ್ಞಾಪಕ ಬಂದಿತ್ತು. ಪುಟ್ಸಾಮಿ ಮನೆ ಹೊರಗೆ ಬಂದು ಅಲ್ಲಾಪಟ್ನದ ಕಡೆ ನೋಡಿದ. ಕತ್ತಲು ನಿಧಾನವಾಗಿ ಸುರಿಯಲು ಮೊದಲಿಟ್ಟಿತು.
(ದಿ ಸಂಡೇ ಇಂಡಿಯನ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಕತೆ ಇದು.)

Friday, January 25, 2008

ಮನಶ್ಯಾಸ್ತ್ರ

ಅವಳು ಬಾಗಿಲು ತೆಗೆದು ನೋಡಿದ್ರೆ ಅವನು ಅಲ್ಲಿ ನಿಂತಿದ್ದ. ಅವಳಿಗೆ ಯಾವತ್ತೂ ಆಗದಷ್ಟು ಖುಷಿಯಾಯಿತು. ಆವ್ನು ಅವ್ಳ ಹಿಂದೆನೇ ಒಳಗೆ ಬಂದ, ಅಲ್ಲೆಗೆ ಬಂದಿರೋದಕ್ಕೆ ತುಂಬ ಖುಷಿಯಾಗಿದಾನೆ ಅನ್ನಿಸಿತು.
'ಏನೂ ಕೆಲಸ ಇಲ್ಲವಲ್ಲ?'

'ಇಲ್ಲ ಕಾಫಿ ಮಾಡ್ಕೊಂಡು ಕುಡಿಯೋಣ ಅಂತಿದ್ದೆ.'

'ಮತ್ತೆ ಯಾರಾದ್ರೂ ಬರೋರು ಇದಾರ??'

'ಇಲ್ಲ ಯಾರೂ ಇಲ್ಲ' 'ಆಹಾ.. ಒಳ್ಳೇದಾಯ್ತು.'

ಕಾರ್ ಕೀಯನ್ನ ಟೇಬಲ್ಲಿನಮೇಲಿಟ್ಟು ಆರಾಮಾಗಿ ಜರ್ಕಿನ್ನನ್ನೂ ಶೂಸನ್ನೂ ಬಿಚ್ಚಿದ. ಆವನನ್ನ ನೋಡ್ತಿದ್ದ್ರೆ ಯಾವ್ದಕ್ಕೂ ಆತುರ ಇಲ್ಲವೇನೋ, ಆರಾಮಾಗಿದಾನೇನೋ ಅಥವ ಅವುಗಳೆಲ್ಲಾ ಜೀವನ ಪರ್ಯಂತ ಬೇಡ್ವೇನೋ ಅನ್ನೋಹಾಗೆ ಕಂಡ. ಬಚ್ಚಲಿಗೆ ಹೋಗಿ ಸುಖವಾಗಿ ಕೈಕಾಲು ತೊಳೆದುಕಂಡು ಬಂದ.

ಕಿಟಕಿಗಳನ್ನು ಮುಚ್ಚಿದ ಭಾರವಾದ ಪರದೆಗಳನ್ನ ದಾಟಿ ಒಳಬರುತ್ತಿರುವ ಮಬ್ಬು ಬೆಳಕಿನಲ್ಲಿ ಒಂದುಕ್ಷಣ ಇಬ್ಬರೂ ಸುಮ್ಮನಾದರು, ಸುಮ್ಮನಿರುವ ಮಬ್ಬು ಬೆಳಕಿನಂತೆ. ಅವರ ತುಟಿಗಳಲ್ಲಿ ಹರಡಿದ ಖುಷಿಯ ಸಿಹಿಯನ್ನು ಅನುಭವಿಸುತ್ತಾ.. ಅವರ ಒಳಗುಗಳು ಪಿಸುಗುಟ್ಟುತ್ತಿದ್ದವು.
‘ನಾವು ಯಾಕಾದರೂ ಮಾತಾಡಬೇಕು?

' ಇಷ್ಟು ಸಾಕಾಗದ?ಬೇಕಾದಷ್ಟು ಇದು.'

'ನನಗೆ ಇಲ್ಲಿಯವರೆಗೆ ಗೊತ್ತೇ ಆಗಲಿಲ್ಲವಲ್ಲ’

‘ನಿನ್ನ ಜೊತೆ ಸುಮ್ಮನೆ ಇರೋಕ್ಕೆ ಎಷ್ಟು ಚೆನ್ನಾಗಿರುತ್ತೆ’

'ಹೀಗೇ ಸುಮ್ನೆ.ಇಷ್ಟು ಸಾಕಪ್ಪಾ ಇನ್ನೇನು ಬೇಡ'


ಅವನ ಕಣ್ಗಳು ಅವಳದ್ದನ್ನು ಸಂಧಿಸಿದವು ಅವಳು ತಕ್ಷಣ ಬೇರೆ ಕಡೆ ನೋಡಿದಳು.
‘ಕಾಫಿ ! ಕಾಫಿ ಕುಡೀಬೇಕು ಅನ್ನಿಸ್ತಿದೆಯಾ?’

'ಇಲ್ಲ ಅನ್ನಿಸ್ತಿಲ್ಲ'

'ನಂಗೆ ಅನ್ನಿಸ್ತಿದೆ'

'ನೀನು ಹಾಸ್ಪಿಟಲ್ನಲ್ಲ ಕಾಫೀ ಡೇಲೇ ಹುಟ್ಟಿದ್ದು ನಿಜ…' ಎನ್ನುತ್ತಾ ಸೋಫಾಮೇಲೆ ಧಡಾರಂತ ಕೂತ

'ಹೌವ್ದು ಕಣೋ ಕಾಫಿ ಇಷ್ಟ ನಂಗೆ' ಎನ್ನುತ್ತಾ ಅಡುಗೆ ಮನೆಗೆ ಹೋದಳು, ಅವನೂ ಹಿಂದೆಯೇ ಬಂದ.ಅವಳು ಕಾಫಿ ಮಾಡೋದನ್ನೇ ನೋಡುತ್ತಿದ್ದ. ಅವಳು ಕಾಫಿ ಮಾಡೋ ರೀತಿಲೇ ಅವಳಿಗೆ ಕಾಫಿ ಮಾಡೋಕ್ಕೆ ತುಂಬ ಇಷ್ಟ ಅನ್ನೋದು ಗೊತ್ತಾಗುತ್ತಿತ್ತು.ಕಾಫಿಬೀಜವನ್ನ ಹುರಿಯೊಕ್ಕೇ ಎಂದು ಇಟ್ಟಿದ್ದ ಬಾಣಲೆಯಲ್ಲಿ ಕಾಫಿಬೀಜವನ್ನ ಹುರಿಯುತ್ತಿದ್ದರೆ.. ಪಕ್ಕದಲ್ಲಿ ತುಂಬ ಕಡಿಮೆ ಕಾವಲ್ಲಿ ನೀರು ಬೆಚ್ಚಗಾಗುತ್ತಿತ್ತು.’ಸಕ್ಕರೆ ಹಾಕೋಲ್ಲ’ ಕಣ್ಣಲ್ಲಿ 'ನಿಂಗೂ ಬೇಡ ಅಲ್ಲ್ವ?'ಅನ್ನೊ ಪ್ರಶ್ನೆ. ಕಾಫಿ ಬೀಜವನ್ನ ಹಾಲುಬಿಳುಪಿನ ಪುಟ್ಟ ಮಿಕ್ಸರ್ನಲ್ಲಿ ಟರ್ರ್ ರ್ ರ್.. ಎನಿಸುತ್ತಿದ್ದರೆ, ಮನೆಯೆಲ್ಲಾ ಘಮಘಮ.. ‘ನಂಗೆ ಬೇಡ ಆಮೇಲ್ ಬೇಕಾದ್ರೆ ಮೇಲೆ ಹಾಕೋತಿನಿ’ ಫ್ರಿಡ್ಜಿನಿಂದ ಹಾಲು ತೆಗೆದು ಕೊಟ್ಟು, ಹೊರಗೆ ಹೋಗಿ ಪೇಪರ್ ನೋಡುತ್ತಾ ಮನೆಯೆಲ್ಲಾ ಅಡ್ಡಾಡುತ್ತಿದ್ದ ಘಮವನ್ನ ಅನುಭವಿಸುತ್ತಿದ್ದ. ಕಾಫಿ ಬಂತು ಹಿಂದೆಯೇ ಏನೇನೋ ತಿಂಡಿಗಳು. ಅವ್ಳು ಯಾವಾಗ್ಲೂ ರುಚಿರುಚಿಯಾಗಿರೋದನ್ನೇ ಇಟ್ಟಿರುತ್ತಾಳೆ… ಚಕ್ಕುಲಿ, ತೇಂಗೊಳಲು ನೆಂಚಿಕೊಳ್ಳೊಕ್ಕೆ ಪುಳಿಯೋಗರೆ ಗೊಜ್ಜು. ಕಾಫಿಯನ್ನ ಬೆಚ್ಚಗೆ ಹೀರುತ್ತಾ ಹೇಳಿದ ‘ಹೋದ್ ಸತಿ ಸಿಕ್ಕಾಗ ಹೇಳಿದೆಯಲ್ಲ ಅದರ ಬಗ್ಗೆ ಯೋಚಿಸುತ್ತಿದ್ದೆ. ನಂಗೇನನ್ಸುತ್ತೆ ಅಂದ್ರೆ…’


ಹೌದು ಅದಕ್ಕಾಗೇ ಅವನು ಕಾಯುತ್ತಿದ್ದ ಅವಳೂ ಕೂಡ. ಅವಳು ನೋಡಿದಳು ಅವನು ಸೋಫಾಕ್ಕೆ ಒರಗಿಕೊಂಡು ಬಿಚ್ಚಿಕೊಳ್ಳತೊಡಗಿದ್ದ ಮತ್ತು ತಾನು ನೀಲಿ ಕುರ್ಚಿಯಲ್ಲಿ ಮುದುಡಿಕೊಳ್ಳುತ್ತಿದ್ದಳು. ಈ ಚಿತ್ರ ಎಷ್ಟು ವಿವರವಾಗಿ ಸ್ಪುಟವಾಗಿ ಅವಳ ಕಣ್ಣುತುಂಬಿತೆಂದರೆ ಬಿಡಿಸಬಹುದೇನೋ ಅಂದುಕೊಂಡಳು. ಆದರೂ ಆತುರ ಮಾಡೋಕ್ಕಾಗೋಲ್ಲ ಅವಳಿಗೆ ‘ನಂಗೆ ಟೈಮ್ ಬೇಕು’ ಅಂತ ಕಿರುಚಿಕೊಳ್ಳುತ್ತಾಳೆ' ಅನ್ನಿಸಿತು. ತನಿನ್ನೂ ಬೆಳೆಯುವುದ್ದಕ್ಕೆ, ಒಳಗೊಳಗೇ ಶಾಂತವಾಗುವದಕ್ಕೆ ಸಮಯಬೇಕಾಗಿತ್ತು ಅವಳಿಗೆ. ಇಷ್ಟು ವಿವರವಾಗಿ ಬದುಕಿದ ಸಂಗತಿಗಳಿಂದ ಕಳಚಿಕೊಳ್ಳಲು , ಬರಿದಾಗಲು ಬೇಕಿತ್ತು ಸಮಯ. ಅಲ್ಲಿದ್ದ ಸಂತೋಷ ಕೊಡುವ- ಅಳಿಸುವ ಪ್ರತಿಯೊಂದು ವಸ್ತುವೂ ಅವಳ ಭಾಗವೇ, ಅವಳ ಕುಡಿಯೇ, ಅವುಗಳೇ ಅತಿ ಹೆಚ್ಚು ಹಕ್ಕನ್ನು ಅವಳ ಮೇಲೆ ಸಾಧಿಸಿದ್ದವು.ಆದರೆ ಅವೆಲ್ಲವುಗಳಿಂದ ದೂರವಾಗಬೇಕು, ಬಿಡಿಸಿಕೊಳ್ಳಬೇಕು. ಅವೆಲ್ಲವನ್ನೂ ಮಡಚಿ- ಉಸಿರುಗಟ್ಟಿಸಿ- ಅಟ್ಟದಮೇಲೆ ತುರುಕಬೇಕು ರಾತ್ರಿಯಾಗುತ್ತಲೆ ಬಲವಂತ ಮಾಡಿ ಮಲಗಿಸಬೇಕಾದ ಮಕ್ಕಳಂತೆ-ಚೂರು ಸದ್ದಿಲ್ಲದೆ ಉಸಿರುಗಟ್ಟಿಸಬೇಕು.


ಸ್ನೇಹದಲ್ಲಿ ಸಂಪೂರ್ಣ ಸಮರ್ಪಿಸಿಕೊಂಡಿದ್ದರು ಅವರು. ಮೈದಾನದ ಎರಡು ಬದಿಗಳಲ್ಲಿರುವ ದೊಡ್ಡ ನಗರಗಳಂತೆ, ಅವರ ಮನಸುಗಳು ಒಬ್ಬರಿಗೊಬ್ಬರಿಗೆ ತೆರೆಯಲ್ಪಟ್ಟಿದ್ದವು. ಆವನು ಅವಳಲ್ಲಿಗೆ ಗೆದ್ದುಕೊಳ್ಳುವವನಂತೆ ಆಕ್ರಮಣಕಾರನಂತೆ ಬರುತ್ತಿರಲಿಲ್ಲ. ಮ್ರುದು ದಳಗಳ ಮೇಲೆ ನೆಡೆದುಕೊಂಡುಬರುವ ರಾಣಿಯಂತೆ ಬರುವುದು ಅವಳ ರೀತಿಯಲ್ಲ. ಊಹಂ, ಅವರದು ತುಂಬು ಪ್ರಯಾಣಗಳು, ಚಾರಣಗಳು, ತಿರುಗಾಟಗಳು, ನೋಡಬೇಕಾಗಿದ್ದನ್ನು ಅಡಗಿರುವುದನ್ನು ಹುಡುಕುವುದರಲ್ಲಿ ಮುಳುಗಿಹೊಗುತ್ತಿದ್ದರು.. ಇವೆಲ್ಲವುದರಿಂದ ಅವನು ಅವಳಿಗೆ ಸಂಪೂರ್ಣ ನಿಜವಾಗಿದ್ದ.. ಅವಳು ಅವನಿಗೆ ಪ್ರಾಮಾಣಿಕವಾಗಿದ್ದಳು.


ಆವರಲ್ಲಿ ತುಂಬ ಚಂದದ್ದೇನೆಂದರೆ, ಅವರಿಬ್ಬರೂ ಆ ಎಲ್ಲಾ ಸಾಹಸ ಕಾರ್ಯಗಳನ್ನ ಯಾವುದೇ ಹುಚ್ಚು ಭಾವನೆಗಳಿಗೆ ಒಳಗಾಗದೆ, ಖುಷಿಯಾಗಿ ಅನುಭವಿಸೋಷ್ಟು ದೊಡ್ಡವರಾಗಿದ್ದರು. ಯಾವುದೇ ಅನುರಾಗ ಮೋಹ ಅವರನ್ನು ನಿರ್ನಾಮ ಮಾಡಿಬಿಡುತ್ತದೆಂಬುದು ಅವರಿಗೆ ಗೊತ್ತಿತ್ತು. ಅಂಥದೆಲ್ಲಾ ಅವರ ಜೊತೆ ಆಗಿಹೋಗಿತ್ತು. ಅವನಿಗೆ ಮೂವತ್ತೊಂದು ಅವಳಿಗೆ ಮೂವತ್ತು. ಆವರಿಗೆ ಅವರದೇ ಆದ ಅನುಭವಗಳಿದ್ದವು ತುಂಬು ಅನುಭವಗಳು, ವಿವಿಧ ಅನುಭವಗಳು. ಆದರೆ ಇದು ಕುಯಿಲಿನ ಸಮಯವಲ್ಲವೇ…??


ತಟ್ಟೆಯಲ್ಲಿಟ್ಟಿದ್ದ ಮೈಸೂರುಪಾಕನ್ನು ಕತ್ತರಿಸುತ್ತಿದ್ದಳು ಅವನು ತಟ್ಟೆಗೆ ಕೈಹಾಕಿದ.
‘ಅದೆಷ್ಟು ಚೆನ್ನಾಗಿದೆ ಅನ್ನೋದನ್ನ ಅರ್ಥ ಮಾಡ್ಕೋ. ಆದನ್ನ ಅನುಭವಿಸುತ್ತಾ ತಿನ್ನಬೇಕು ಕಣ್ಣು ಮುಚ್ಚಿಕೊಂಡು. ಬೀದಿ ಬದಿಯಲ್ಲಿ ಸಿಗೋ ಕಡ್ಲೆ ಮಿಠಾಯಿಯಲ್ಲ ಇದು, ನೋಡು ಬಾಯಲ್ಲಿಟ್ಟರೆ ಹೇಗೆ ಕರಗಿಹೋಗತ್ತೆ. ಪುರಾಣದಲ್ಲಿ ಬರೋ ಅಮ್ರಥದ ಥರ ಇದು. ಅಮ್ರತಕ್ಕೆ ಕಿತ್ತಾಡಿದ್ದರು ಅನ್ನೋದನ್ನ ಮರೀಬೆಡ’ ಅಂದಳು

‘ನಂಗೆ ಅದ್ನೆಲ್ಲಾ ವಿವರಿಸಬೇಕಿಲ್ಲ ನೀನು. ನಂಗೊತ್ತು ನಾ ಇಲ್ಲಿ ತಿನ್ನೋದು ಬೇರೆಲ್ಲೂ ಸಿಗೋಲ್ಲ. ಆದ್ರೆ ಪ್ರಯಷಃ ಅಷ್ಟು ದಿನದಿಂದ ಒಬ್ಬನೇ ಇದ್ದಿದ್ದರಿಂದಲೋ, ತಿನ್ನೋವಾಗಲೆಲ್ಲಾ ಓದಿಕೊಂಡೋ, ಟೀ ವಿ ನೋಡಿಕೊಂಡೋ, ಇನ್ನೇನನ್ನೋ ಮಾಡುತ್ತಿರೋದ್ರಿಂದಲೋ ಏನೋ.. ಆಹಾರವನ್ನ ಆಹಾರದಂತೆ ನೊಡ್ತೀನಿ. ಯಾವಾಗಲೂ ಗಬಗಬ ತಿಂದು ಮುಗಿಸ್ತೀನಿ.’

ನಕ್ಕ ‘ಆಶ್ಚರ್ಯ ಆಗತ್ತಲ್ವಾ ನಿಂಗೆ?’

ಅವಳ ಕಣ್ಗಳು ನಗುತ್ತಿದ್ದವು ಅವನು ಮತ್ತೆ ನಕ್ಕ.


ಆದ್ರೆ ನೋಡಿಲ್ಲಿ ಹರಡಿದ್ದ ಪೇಪರನ್ನು ಮಡಚಿ ಟೇಬಲ್ಲಿನಮೇಲಿಟ್ಟು ಪಟಪಟ ಮಾತಾಡತೊಡಗಿದ. ‘ಹೊರಗಡೆಯ ಜೀವನವೇ ಇಲ್ಲ ನನಗೆ. ಎಷ್ಟೋ ವಸ್ತುಗಳ ಹೆಸರು ಗೊತ್ತಿಲ್ಲ-ಮರಗಳು, ರೋಡುಗಳು, ತಿರುವುಗಳು, ಅಂಗಡಿಗಳು, ಇನ್ನೂ ಏನೇನೋ.. ನಾ ಯಾವತ್ತೂ ಜಾಗಗಳನ್ನ ಪೀಠೋಪಕರಣಗಳನ್ನ, ಗಾಜುಗಳನ್ನ, ಗಮನಿಸಿದ್ದೇ ಇಲ್ಲ. ಅಥವ ಜನ ಹೆಂಗೆ ಕಾಣ್ತಾರೆ ಅಂತ ಗೊತ್ತಿಲ್ಲ. ಒಂದು ಕೋಣೆ ಇನ್ನೊಂದರಂತೆ ಕಾಣತ್ತೆ, ಒಂದು ಜಾಗ ಇನ್ನೊಂದರಂತೆ, ಒಂದು ಸ್ಥಳ ಮತ್ತೊಂದರಂತೆ. ಯಾವುದಾದರೊಂದು ಜಾಗ ಕೂರೋಕ್ಕೆ- ಓದೊಕ್ಕೆ- ಮಾತಾಡೋಕ್ಕೆ. ಆದರೆ ಈಗ...’ ಆವನು ಇಲ್ಲಿ ನಿಲ್ಲಿಸಿದ ನಿಷ್ಕಪಟವಾದ ಸುಂದರ ನಗು ಅವನ ತುಟಿಗಳನ್ನ ಸವರಿಕೊಂಡು ಹೋಯಿತು. ‘ಆದರೆ ಈ ಮನೆಯೊಂದನ್ನ ಬಿಟ್ಟು” ಅವನು ತನ್ನ ಅವಳ ಸುತ್ತ ನೋಡಿ ಖುಷಿಯಿಂದ ಆಶ್ಚ್ಯರ್ಯದಿಂದ ನಕ್ಕ. ಆವನು ಯಾವಥರದೋನೆಂದರೆ ಪಯಣದ ಕೊನೆಗೆ ಬಂದಾಗಿದೆಯೆಂದು ನಿದ್ದೆಯಿಂದೆದ್ದು ತಿಳಿದುಕೊಳ್ಳುವ ಪ್ರಯಾಣಿಕನಂತೆ.

‘ ಇಲ್ಲಿ ವಿಲಕ್ಷಣವಾದ್ದೊಂದಿದೆ. ನಾನು ಕಣ್ಣು ಮುಚ್ಚಿಕೊಂಡರೆ ಈ ಜಗದ ಚಿಕ್ಕ ಚಿಕ್ಕ ವಿವರವೂ ನನ್ನ ಕಣ್ಣು ಕಟ್ಟುತ್ತೆ. ಇವಾಗ ಅದು ನನಗೆ ಗೊತ್ತಾಗುತ್ತಿದ್ದೆ. ನಾನು ಇಲ್ಲಿಂದ ದೂರ ಇದ್ದಾಗಲೆಲ್ಲ ನನ್ನ ಮನಸ್ಸು ಇಲ್ಲಿಗೆ ಬಂದು ಹೋಗುತ್ತೆ.. ನಿನ್ನ ಕೆಂಪು ನೀಲಿ ಕುರ್ಚಿಗಳ ಸುತ್ತ ಅಡ್ಡಾಡುತ್ತೆ. ಹಣ್ಣುಗಳನ್ನು ಇಟ್ಟಿರುತ್ತಿಯಲ್ಲ ಆ ಗಾಜಿನ ಬಟ್ಟಲು ಅದನ್ನ ದಿಟ್ಟಿಸುತ್ತೆ, ಮ್ರುದುವಾಗಿ ಮುಚ್ಚಿದ ಭಾರವಾದ ಕಿಟಕಿ ಪರದೆಗಳ ಹಿಂದೆ ಅಡಗುತ್ತೆ.' ಹೀಗೆ ಮಾತನಾಡುತ್ತಾ ಅವುಗಳೆಲ್ಲದರ ಮೇಲೆ ಕಣ್ಣಾಡಿಸಿದ. ‘ಆ ನೀಲಿ ಪರದೆ ನಂಗೆ ತುಂಬ ಇಷ್ಟ’ ಖುಷಿಯಿಂದ ಗುನುಗಿದ. ಆಮೇಲೆ ಅವರಿಬ್ಬರ ಮಧ್ಯೆ ಧಿಗ್ ಎಂದು ಮೌನ ಪ್ರತ್ಯಕ್ಷವಾಯಿತು.

ಮೌನ ನಿಧಾನವಾಗಿ ಹರಡಿತು. ಸಮಾಧಾನವಾಗಿ ಹರಡಿದ್ದ ಆ ಮೌನವು ‘ಸರಿ ಇಲ್ಲಿ ಸೇರಿದೀವಿ ಕೊನೆಯಸಲ ಬಿಟ್ಟಲಿನಿಂದ ಶುರುಮಾಡದಿರಲು ಕಾರಣಗಳೇ ಇಲ್ಲವಲ್ಲ ಎಂದಿತು’
ಇಬ್ಬರೂ ಮೌನವನ್ನು ಮುರಿದರು ‘ನಾನು ಅಡುಗೆ ಮನೆ ಕ್ಲೀನ್ ಮಾಡಿ ಬರ್ತೀನಿ.' ಅವಸರಿಸಿದಳು. 'ಪೇಪರಿನ ಆ ಕಾಲಮ್ಮನ್ನು ಓದಲೇ ಇಲ್ಲ’ ಅವನು ಉಸುರಿದ.. ಇಬ್ಬರೂ ಒಬ್ಬರಿಂದೊಬ್ಬರು ತಪ್ಪಿಸಿಕೊಂಡರು. ಅವಳು ಡಬ್ಬಗಳನ್ನ ಶಲ್ಫಿನಮೇಲಿಟ್ಟು, ಸ್ಲಾಬನ್ನು ಮ್ರುದು ಗುಲಾಬಿ ಬಟ್ಟೆಯಲ್ಲಿ ಒರೆಸಿದಳು. ಬೇಗ!ಬೇಗ! ಅದು ಮತ್ತೆ ಆಗೋದನ್ನ ಅವರು ತಡೀಬೇಕು.


‘ಮತ್ತೆ , ನೀನು ಬಿಟ್ಟು ಹೊದ ಪುಸ್ತಕವನ್ನ ಓದಿದೆ’

'ಓ..ಏನನ್ಸುತ್ತೆ’ ಕೇಳಿದಳವಳು

'ಏಲ್ಲದರ ತರಾನೇ ಮ್ಮ್ಹ್ಹ್ ಹ್ಹ್ ಹ್.. ಆದ್ರೆ ಅವರದು ಸ್ವಲ್ಪ ಅವಸರ ಅನ್ನಿಸೋಲ್ವ? ತುಂಬ ನಿಜವಾಗುತ್ತಾರೆ, ತುಂಬ ಬೇಗ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುತ್ತಾರೆ, ಒಬ್ಬರೊಳಗೊಬ್ಬರು ಇಳಿಯುತ್ತಾರೆ..ಎಲ್ಲಾ ಕಲ್ಪನೆ ನಿಜ ಜೀವನದಲ್ಲಿ ಹಾಗಾಗಲ್ಲ ಅಲ್ವ?’ ಎಂದವನ ಎದೆ ಹೊಡೆದುಕೊಳ್ಳುತ್ತಿತ್ತು.. ಅವಳ ಕೆನ್ನೆಗಳು ಬಿಸಿಯಾದವು, ಕೆಂಪಾದವು. ಒಂದುನಿಮಿಷ ಅವರೆಲ್ಲಿದ್ದಾರೆ ಏನಾಗುತ್ತಿದೆ ಗೊತ್ತಾಗಲಿಲ್ಲ ಅವಳಿಗೆ.. ಮತ್ತೆ ಸಮಯ ಸಿಗೋಲ್ಲ.. ಇಷ್ಟು ದೂರ ಬಂದಮೇಲೂ ಹಿಗೇಕಾಯಿತು? ತೊದಲಿದರು, ಅನುಮಾನಿಸಿದರು, ಸುಸ್ಥಾದರು,ಸುಮ್ಮನಾದರು.. ಸುರಿದು ಪ್ರಶ್ನಿಸುವ ಬೆಳಕಿನಲ್ಲಿ ಮತ್ತೆ ಮತ್ತೆ ಜಾಗ್ರುತರಾದರು…

ಅವಳು ತಲೆ ಎತ್ತಿದಳು ‘ಮಳೆಯಾಗುತ್ತಿದೆ ಪಿಸುಗುಟ್ಟಿದಳು’ ನನಗೆ ನೀಲಿ ಪರದೆ ಇಷ್ಟ ಎಂದವನ ಕುಷಿಯಿತ್ತು ಅದರಲ್ಲಿ.
ಆದರೆ ಅವರು ಯಾಕೆ ಹಾಗೇ ಅದನ್ನ ಘಟಿಸಲು ಬಿಡೋಲ್ಲ-ಶರಣಾಗತರಾಗೊಲ್ಲ-ಏನಾಗುತ್ತೆ ಅಂತ ನೋಡೋಲ್ಲ? ಇಲ್ಲ! ಅನಿಶ್ಚಿತವಾದ್ದ್ದನ್ನು ಕದಡಿದ್ದರು ಅವರು. ಆವರ ಸ್ನೆಹ ಅಪಾಯದಲ್ಲಿದೆ ಅನ್ನೋದನ್ನ ತಿಳಿದುಕೊಳ್ಳೋಕ್ಕೆ ಕಷ್ಟವಾಗಲಿಲ್ಲ ಅವರಿಗೆ.

ಆವನು ಮತ್ತೆ ಪೇಪರು ಮಡಿಸಿಟ್ಟ ತನ್ನ ತನ್ನ ತಲೆಗೂದಲಲ್ಲಿ ಕೈಯಾಡಿಸಿದ.. 'ನಾನೇನು ಯೋಚಿಸುತ್ತಿದ್ದೆ ಅಂದ್ರೆ ಭವಿಷ್ಯದ ಕಾದಂಬರಿ ಮನಷ್ಯಾಸ್ತ್ರದ ಕಾದಂಬರಿ ಆಗಿರುತ್ತೋ ಇಲ್ಲವೋ ಅಂತ. ಸಾಹಿತ್ಯಕ್ಕೂ ಮನಷ್ಯಾಸ್ತ್ರಕ್ಕೂ ಸಂಭಂದವಿದೆ ಅನ್ನಿಸೋಲ್ವ??'

‘ಹಾಗಾದ್ರೆ ಇವತ್ತಿನ ಯುವಬರಹಗಾರರೆಲ್ಲ ಮನಷ್ಯಾಸ್ತ್ರ ವಿಷ್ಲೇಷಣೆಗಳನ್ನ ತಮ್ಮ ಹಕ್ಕು ಅಂತ ತಿಳ್ಕೊಂಡು ವಿಷ್ಲೇಷಣೆಗೆ ಇಳಿಯುತ್ತಾರೆ ಅಂತೀಯ? 'ಅವಳು ಹುರಿಗಟ್ಟತೊಡಗಿದಳು

'ಹೌದು ಮತ್ತೆ. ಯಾಕಂದ್ರೆ ಇವತ್ತಿನ ಹುಡುಗರು ಎಷ್ಟು ಬುದ್ದಿವಂತರೆಂದರೆ ಈಗಿನ ಉಸಿರುಗಟ್ಟಿಸುವ ಕೊಳಕು, ಅಸಹ್ಯ ಸ್ಥಿತಿ ಸರಿಹೊಗಬೇಕೆಂದರೆ ಅದರ ಮೂಲಗಳಿಗೇ ಹೋಗಬೇಕೆಂಬುದನ್ನು ತಿಳಿದುಕೊಂಡಿದ್ದಾರೆ. ಅವುಗಳ ಮೂಲಗಳಿಗೆ ಹೊಗಬೇಕು, ಅವುಗಳ ಬುಡಕ್ಕೆ ಇಳಿಯಬೇಕು, ಎಲ್ಲವನ್ನೂ ವಿವರವಾಗಿ ಅಭ್ಯಸಿಸಬೇಕು ಅಲ್ಲಿಂದಲೇ ರೋಗವನ್ನ ಕಿತ್ತೆಯಬೇಕು’ ಅವನೂ ಹುರಿಗಟ್ಟತೊಡಗಿದ.

'ಆದ್ರೆ ಹ್ಮ್ಮ್ ಮ್ ಮ್ ..’ ನರಳಿದಳು 'ಎಂಥ ಭಯಾನಕ ನೀರಸ ನೋಟ ಅನ್ನಿಸುತ್ತೆ’

ಖಂಡಿತ ಇಲ್ಲ..’ಅಂದನವ 'ನೋಡಿಲ್ಲಿ.. ಏನ್ಗೊತ್ತಾ..’ ಮಾತು ಮುಂದುವರೆಯಿತು ಈಗ ನಿಜವಾಗಿ ನಾವು ಗೆದ್ದೆವೇ?’ ಅವಳ ನಗು ಹೆಳಿತು ‘ನಾವು ಗೆದ್ದೆವು..’ ಅವನ ಕಣ್ಣು ನುಡಿಯಿತು ' ಹೌದುಗೆದ್ದೆವು’
ಆದರೆ ನಗು ಹೆಚ್ಚಾಯಿತು, ನೋವಾಯಿತು ಅವರಿಗೆ ತಮಗೆ ತಾವೇ ತೊಗಲು ಬೊಂಬೆಗಳಂತೆ ಇಲ್ಲದ್ದನ್ನು ಎಳೆದಾಡುತ್ತಿದ್ದೇವೆ ಅನ್ನಿಸಿತು.
‘ನಾವೇನು ಮಾತಾಡುತ್ತಿದ್ದೆವು’ ಯೊಚಿಸಿದ ಅವನು. ಆವನಿಗೆ ಎಷ್ಟು ಖಾಲಿ ಅನಿಸಿತೆಂದರೆ ಕಣ್ಣುಗಳು ತೆರೆದಿದ್ದರೂ ಎನೂ ಕಾಣಿಸುತ್ತಿಲ್ಲ ಅನ್ನಿಸಿತು.
'ಎಂಥ ಸನ್ನಿವೇಶ ನಮ್ಮಗಳದು' ಅನ್ನಿಸಿತು ಅವಳಿಗೆ. ನಿಧಾನವಾಗಿ ನೋಡಿದಳು ಅವನನ್ನ.. ತುಂಬಾ ನಿಧಾನವಾಗಿ ಅವಳಿಗೆ ತಾನು ಯಾವುದರ ಹಿಂದೆ ಓಡುತ್ತಿದ್ದೇನೆ ಅನ್ನಿಸಿತು. ಭೀಕರ ಮೌನ ಮಧ್ಯೆ.

ಗಡಿಯಾರ ಆರು ಗಂಟೆಯಾಯಿತೆಂದು ಆಕಳಿಸಿತು. ಎಂತ ದಡ್ಡರು ಅವರು-ಭಾರವಾದ ಹಿರಿದಾದ ಬುದ್ದಿಗಳು ಅವರದು.
ಮ್ರುದುವಾದ ಸಂಗಿತದಂತೆ ಮೌನವು ಅವರನ್ನು ಸುತ್ತುವರೆಯಿತು. ಆ ಸಂಗೀತದಲ್ಲಿ ಕೋಪವಿತ್ತು.. ಕೋಪ ಅವಳಿಗೆ ಅದನ್ನು ಸಹಿಸಿಕೊಳ್ಳಲು..ಅವನಂತೂ ಸತ್ತೇ ಹೋಗುತ್ತಿದ್ದ.. ಮೌನ ಮುರಿಯಬೇಕೆನ್ನಿಸಿತವನಿಗೆ ಆದರೆ ಮಾತಿನಿಂದಲ್ಲ.. ಯಾವುದೇ ಕಾರಣದಿಂದಲೂ ಹುಚ್ಚು ಬಡಬಡಿಕೆಗಳಿಂದಲ್ಲ. ಆವರಿಬ್ಬರಿಗೂ ಬೇರೆಯದೇ ಭಾಷೆಯಿತ್ತು ಮಾತನಾಡಲು..ಆ ರೀತಿಯಲ್ಲಿ ಅವನು ಪಿಸುಗುಟ್ಟಬೆಕೆಂದುಕೊಂಡ ‘ನಿನಗೂ ಹೀಗೆಲ್ಲ ಆಗುತ್ತಾ.. ? ಇದನ್ನೆಲ್ಲಾ ಅರ್ಥ ಮಾಡ್ಕೊತೀಯ ನೀನು?’
ಆದರೆ ನಾಲಿಗೆ ಮೋಸ ಮಾಡಿತು ಅವನ ಕಿವಿಗಳು ಕೇಳಿಸಿಕೊಂಡಿದ್ದೇ ಬೇರೆ ‘ನಾನು ಹೋಗಬೇಕು ರಾಯರು ಆರುಗಂಟೆಗೆ ಬರುತ್ತೆನೆಂದಿದ್ದರು’

'ದೇವರೇ ಹೀಗ್ಯಾಕೆ ಹೇಳಿದ’ ಅವಸರವಾಗಿ ಕುರ್ಚಿಯಿಂದ ಎದ್ದಳು ‘ಹಾಗದ್ರೆ ಓಡಬೇಕು ನೀನು ರಾಯರು ತುಂಬಾ ಶಿಸ್ತು ಸಮಯಕ್ಕೆ ಸರಿಯಾಗಿ ಹೊಗದಿದ್ರೆ ಬೇಜಾರಾಗುತ್ತೆ ಅವ್ರಿಗೆ’ ಅಂತ ಅವಳು ಹೇಳೋದನ್ನ ಅವನ ಕಿವಿಗಳು ಮತ್ತೆ ಕೇಳಿಸಿಕೊಂಡವು.


'ಯಾಕೆ ಹೀಗ್ ಮಾಡಿದೆ ಹುಡುಗ? ನೋಯಿಸಿದೆ ನನ್ನ.. ನಾನು ನಿನಗೆ ಅರ್ಥವಾಗುತ್ತಿಲ್ಲವಾ.. ನಾವು ಸೋತ್ವಿ’ ಅವಳ ಹ್ರುದಯ ನುಡಿಯಿತು ಜರ್ಕಿನ್ನನ್ನು ಕೈಗೆ ಕೊಟ್ಟಳು ಸಾಕ್ಸು ಹಾಕಿಕೊಂಡ. ಒಂದೇ ಒಂದು ಮಾತಿಗು ಅವಕಾಶ ಕೊಡದೆ ಸೀದ ಹೋಗಿ ಬಾಗಿಲು ತೆರೆದಳು.
ಅವರು ಒಬ್ಬರನ್ನೊಬ್ಬರು ಆ ಸ್ಥಿತಿಯಲ್ಲಿ ಬಿಡಬಹುದಾ..?ಅವನು ಹೊಸಲಿನ ಹೊರಗೆ ನಿಂತಿದ್ದ ಅವಳು ಬಾಗಿಲನ್ನು ಹಿಡಿದುಕೊಂಡು ಒಳಗೆ. ಈಗ ಮಳೆಬರುತ್ತಿರಲಿಲ್ಲ
'ನಂಗೆ ನೋವು ಮಾಡಿದೆ ಹುಡ್ಗ. ನೋವು ಮಾಡಿದೆ ಯಕ್ ಹೋಗ್ತಿಲ್ಲ ನೀನು? ಇಲ್ಲ ಹೋಗ್ಬೇಡ,ನಿಲ್ಲು ಬೇಡ ಹೋಗು,ಇಲ್ಲ-ನಿಲ್ಲು-ಹೋಗು.' ಕಣ್ಗಳು ಕತ್ತಲನ್ನು ದಿಟ್ಟಿಸುತ್ತಾ ನುಡಿಯುತ್ತಿದ್ದವು..
ಅವಳು ಅದೆಲ್ಲವನ್ನು ನೋಡಿದಳು..ಹಸಿರು ಹೂದೋಟ ಕಪ್ಪಗಾಗುತ್ತಿರುವುದು, ದೊಡ್ಡ ಕಿಟಕಿಗಳು ನಕ್ಷತ್ರಗಳನ್ನ ತುಂಬಿಕೊಳ್ಳುತ್ತಿರುವುದು, ಆದರೆ ಅವನು ಇದ್ಯಾವುದನ್ನೂ ನೋಡುವುದಿಲ್ಲ ಅವನಿಗಿರುವುದು ಆಧ್ಯಾತ್ಮಿಕ ದ್ರುಷ್ಟಿ

ಹೌದು ಅವಳಿಗನ್ನಿಸಿತು 'ಅವನೇನನ್ನೂ ನೊಡೋಲ್ಲ. ಇಲ್ಲ, ಇನ್ನು ಸರಿ ಮಾಡೋಕ್ಕೆ ಸಾಧ್ಯವೇ ಇಲ್ಲ. ತುಂಬ ನಿಧಾನವಾಯಿತು.' ತಣ್ಣನೆಯ ಕೊರೆಯುವ ಗಾಳಿ ಬೀಸಿತು.ಧಡಾರಂತ ಬಾಗಿಲು ಮುಚ್ಚಿದಳು
ಮತ್ತೆ ರೂಮಿಗೆ ಒಡಿಹೋಗಿ ಎಷ್ಟು ವಿಚಿತ್ರವಾಗಿ ಆಡಿದಳು ಕೈಯೆತ್ತಿ ಕೂಗಿದಳು. 'ಹುಚ್ಚು!' 'ಮೂರ್ಖತನ' ಹಾಸಿಗೆಯ ಮೇಲೆ ಅಡ್ಡಾದಳು, ಮ್ರುದು ಹಾಸಿಗೆ ಮುಲುಗುಟ್ಟಿತು. ಏನನ್ನೂ ಯೋಚಿಸುತ್ತಿರಲಿಲ್ಲ ಎಲ್ಲಾ ಖಾಲಿ ಖಾಲಿ. ನಿಧಾನವಾಗಿ ಅನ್ನಿಸಲು ಶುರುವಯಿತು ಎಲ್ಲಾ ಮುಗಿಯಿತ? ಏನಾದರೂ ಉಳಿಯಿತ? ಮುಗಿದ ಅಧ್ಯಾಯವ? ಅವನನ್ನು ಯಾವತ್ತೂ ನೋಡೋದಿಲ್ಲ ಅವಳು. ಬಾಗಿಲು ಬಡಿದ ಸದ್ದಾಯಿತು ಅವನೇ ಇರಬೇಕು ಹಾಗೆ ನಿಲ್ಲಿಸಿ ಬಡಿಯುವವನು ಅವನೇ. ಮನಸು ಎದ್ದಿತು, ದೇಹ ಮಲಗೇ ಇತ್ತು.. ನಾನು ಬಾಗಿಲು ತೆಗೆಯುವುದಿಲ್ಲ ಮನಸು ಹೇಳಿತು, ದೇಹ ಎದ್ದಿತು..ಅಷ್ಟರಲ್ಲಿ ಮತ್ತೆ ದಬದಬ ಇದು ಅವನಲ್ಲ..

ಬಗಿಲು ತೆರೆದಳು ಮದುವೆಯಾಗದ ವಯಸ್ಸಾದ ಮುದುಕಿ.. ದಿನಾ ಹೀಗೆ ಬಾಗಿಲು ಬಡಿದು ತೆರೆದಾಗ ‘ಹುಡುಗಿ ನನ್ನ ಹೊರಗೋಡಿಸು’ ಅನ್ನೋ ಅಭ್ಯಾಸವಿತ್ತು ಅವಳಿಗೆ. ಆದರೆ ಅವಳು ಯಾವತ್ತೂ ಕಳಿಸುತ್ತಿರಲಿಲ್ಲ ಅವಳನ್ನು. ಅವಳ ಕೆದರಿದ ಕೂದಲನ್ನು, ಕಂದಿದ ಕಣ್ಗಳನ್ನು, ಪ್ರೀತಿಯಿಂದ ನೋಡುತ್ತಿದ್ದಳು. ಧೂಳು ಮೆತ್ತಿದ ಹೂಗಳನ್ನು ಕೊಂಡುಕೊಳ್ಳುತ್ತಿದ್ದಳು.

ಆದರೆ ಇವತ್ತು'ಅಯ್ಯೋ ಆಗೋಲ್ಲ! ಇವತ್ತು ಯಾರೊ ಇದಾರೆ ತುಂಬ ಕೆಲಸ ಇದೆ.’ 'ಪರವಾಗಿಲ್ಲ ಹುಡುಗಿ ಹೂಗಳನ್ನ ಇಲ್ಲಿಟ್ಟು ಹೋಗಿರುತ್ತೇನೆ’ ನುಡಿದಳು ಅಜ್ಜಿ
ಅಜ್ಜಿ ಹೋಗತೊಡಗಿದಳು ಮತ್ತೆ ಅವೆಲ್ಲಾ ಕಾಣಿಸಿದವು.. ಕಪ್ಪು ಹೂದೋಟ, ನಕ್ಷತ್ರ ತುಂಬಿದ ಕಿಟಕಿ.. ಆದರೆ ಈಗ ಅವಳು ತಪ್ಪು ಮಾಡಲಿಲ್ಲ ಹೋಗಿ ತಬ್ಬಿಕೊಂಡಳು. ಆ ಅಜ್ಜಿ 'ಏನು ಅಲ್ಲ ಅವು ಕಡಿಮೆ ಬೆಲೆಯ ಹೂಗಳು’ ಅಂದಳು.ಇವಳು ಖುಷಿಯಾಗಿ ಹಣೆಗೆ ಮುತ್ತಿಟ್ಟಳು ‘ಹಾಗಾದರೆ ನಾ ಬಂದಿದ್ದು ನಿನಗೆ ನಿಜವಾಗಲೂ ಬೇಜಾರಿಲ್ಲವ’
'ಗುಡ್ ನೈಟ್ ಅಜ್ಜಿ' ಪಿಸುಗುಟ್ಟಿದಳು 'ಮತ್ತೆ ಮತ್ತೆ ಬಾ..’

ಈಗ ನಿಧಾನವಾಗಿ ಬಾಗಿಲು ಹಾಕಿದಳು ಸಾವಧಾನವಾಗಿ ರೂಮಿಗೆ ಹೋಗಿ ಕಣ್ಣು ಮುಚ್ಚಿ ನಿಂತರೆ 'ಎಷ್ಟು ಹಗುರವಾಗಿದ್ದೇನೆ'ಅನ್ನಿಸಿತು. ಮುಗ್ದ ನಿದ್ದೆಯನ್ನು ಮಾಡಿ ಮುಗಿಸಿದಂತೆ.ಉಸಿರಾಟವೂ ಖುಷಿ ಎನಿಸುತ್ತಿತ್ತು.

ಹರಡಿದ್ದೆಲ್ಲವನ್ನು ಜೋಡಿಸಿದಳು. ಪಾತ್ರೆ ತೊಳೆದಳು. ಬರೆಯೋಕ್ಕೆ ಹೋಗೋ ಮುಂಚೆ ಕೆಂಪು ನೀಲಿ ಕುರ್ಚಿಗಳನ್ನ, ನೀಲಿ ಪರದೆಗಳನ್ನ ಸರಿಮಾಡಿದಳು. ಹಣ್ಣುಗಳನ್ನ ಗಾಜಿನ ಬಟ್ಟಲಲ್ಲಿ ತುಂಬಿದಳು
‘ನಾನು ಆ ಮನಶ್ಯಾಸ್ತ್ರದ ಕಾದಂಬರಿಯ ಬಗ್ಗೆ ಯೋಚಿಸುತ್ತಿದ್ದೆ…’ಬರೆದೇ ಬರೆದಳು. 'ನಿಜವಾಗಲೂ ಎಷ್ಟು ಆಶ್ಚರ್ಯ ಅಲ್ವಾ…’ ಕೊನೆಗೆ ಕಪ್ಪು ಇಂಕು ಬರೆಯುತ್ತಿದ್ದುದು ಕಾಣಿಸಿತು 'ಗುಡ್ ನೈಟ್ ಸ್ನೇಹವೇ.. ಮತ್ತೆ ಮತ್ತೆ ಬಾ..'




(ಕ್ಯಾಥರೀನ್ ಮ್ಯಾನ್ಸ್-ಫೀಲ್ಡ್ ಬರೆದ psychology ಕತೆಯಿಂದ ಸ್ಪೂರ್ತಿಗೊಂಡು ಬರೆದ ಕತೆ)