Wednesday, December 12, 2007

ನೀಲಿ ನಕ್ಷತ್ರದಿಂದ ಬಂದ ಪತ್ರ

ಮಧ್ಯರಾತ್ರಿಯ ಕಪ್ಪಿನೊಳಗಣ ಬೆಳಕೇ...

ಅಮ್ಮ ಅಡುಗೆ ಮನೆಯಲ್ಲಿ ಏನೋ ದಡ ಬಡ ಮಾಡುತ್ತಿದ್ದಾಳೆ.ಚಿಕ್ಕಪ್ಪ ಅಪ್ಪ ಸೇರಿ ಟಿ ವಿ, ಸೋಫ, ಟೆಬಲ್ಲು- ಕುರ್ಚಿ, ಮಂಚ ಎಲ್ಲವನ್ನೂ ತಂದು ಜೋಡಿಸಿಟ್ಟಿದ್ದಾರೆ..ನೀನು ಅವತ್ತು ಬಂದಾಗ ಖಾಲಿ ಇದ್ದ ಮನೆ ಈಗ ತುಂಬಿದೆ. ಹುಚ್ಚು ಅಪ್ಪನಿಗೆ, ಮನೆ ತುಂಬಬಹುದು........ಮನಸ್ಸು...????

ಈ ಮನೆ ಕೊಂಡು 'ಶಿಫ್ಟ್ ಮಾಡ್ತೀನಿ ನಾನು' ಅಂದಾಗ 'ನಿಂಗೊಬ್ನಿಗೇ ಕಷ್ಟ ಆಗುತ್ತೆ, ನಾ ಬರ್ತೀನಿ.' ಅಂದು ಮೊದಮೊದಲು ಮನೆಗೆ ಬಂದವಳು ನೀನು. ಖಾಲಿ ಮನೆ ಏನು ಕೊಂಡುಬಂದಿರಲಿಲ್ಲ.. ಬರೀ ನನ್ನ ಬಟ್ಟೆ, ಚಪ್ಪಲಿಗಳು, ಶೂಗಳು, ಹಾಗೂ ಲ್ಯಾಪ್ ಟಾಪ್. ಮನೆಗೆ ಬಂದವಳೇ ಒಂದಿಷ್ಟು ವಸ್ತುಗಳನ್ನ ಪಟ್ಟಿ ಮಾಡಿ 'ತೊಗೊಂಡು ಬಾ' ಎಂದು ನನ್ನ ಕೈಗೆ ಕೊಟ್ಟು, ನಾನು ಬರುವುದೊರೊಳಗೆ ಪಕ್ಕದ ಮನೆಯವರ ಸ್ನೇಹ ಮಾಡಿ, ಪೊರಕೆ ತಂದು, ಮನೆ ಗುಡಿಸಿ ನನ್ನ ಹಳೇ ಟೀ ಷರ್ಟಿನಲ್ಲಿ ನೆಲ ಒರೆಸುತ್ತಿದ್ದೆ! ಆಮೇಲೆ ನಾನು ನೀನು ಸೇರಿ ಸಾದ್ಯವಾದಷ್ಟು ಮನೆ ಸ್ವಚ್ಚ ಮಾಡಿ, ಒಟ್ಟಿಗೆ ಸ್ನಾನ-ಅಡುಗೆ-ಊಟ ಮಾಡಿ ಗಡಿಯಾರ ನೋಡಿದರೆ, ಗಡಿಯಾರದ ಮುಳ್ಳುಗಳು ಒಂಭತ್ತು ಘಂಟೆ ಎನ್ನುತ್ತಿದ್ದವು.

ಟೆರೇಸಿನ ಮೇಲೆ ಹೋದರೆ, ನಕ್ಷತ್ರಗಳು ಕೈಗೆ ಸಿಗುವಷ್ಟು ಹತ್ತಿರ! ಮಲಗೋಣವೆಂದೆ ನೀನು.. ಹಾಸಿಗೆ ಇಲ್ಲ.... ದಿಂಬಿಲ್ಲ.... ಮರೆತೇ ಹೋಗಿತ್ತು ನನಗೆ. ನಿನ್ನ ಕಣ್ಣು ನೋಡಿದರೆ ಅದರಲ್ಲಿ ತುಂಟ ನಗು...'ನಕ್ಷತ್ರದಿಂದ ನೀಲಿ ನೀಲಿ ಹೊಳೆಯುವ ಧೂಳು ಉದುರುತ್ತೆ, ಇಲ್ಲೇ ಮಲಗೋಣ' ಎಂದು ನನ್ನ ತೋಳ ಮೇಲೆ ತಲೆ ಇಟ್ಟು ಮಲಗಿದೆ. ತಕ್ಷಣ ಆವರಿಸಿಕೊಂಡ ನಿದ್ರೆ.

ಮಧ್ಯರತ್ರಿ ಸುಮ್ಮನೆ ಎಚ್ಚರವಾಯಿತು.. ಕತ್ತೆತ್ತಿ ನೋಡಿದರೆ ಜೇನಿನಲ್ಲಿ ಅದ್ದಿ ತೆಗೆದಂತಿದ್ದ ಚಂದ್ರ... ಅವನ ಬೆಳಕಿನಲ್ಲಿ ನಿನ್ನ ಹಾಲು ಬಿಳುಪಿನ ಬಣ್ಣಕ್ಕೆ ಬಂಗಾರದ ಮೆರಗು...ನಿನಗೆ ನೀಲಿ ನಕ್ಷತ್ರದ ಕನಸು...ನಾನು ನಿನ್ನೊಳಗೆ ಉಕ್ಕಿದೆ, ನೀನು ಸಣ್ಣಗೆ ನನಗೆ ಕೇಳುವಷ್ಟೇ ಹಿತವಾಗಿ ಚೀರುತ್ತಿದ್ದರೆ, ಚಂದ್ರ ನಕ್ಷತ್ರಗಳೂ ಹೊಟ್ಟೆ ಉರಿದುಕೊಳ್ಳುತ್ತಿದ್ದವು...

ಅವತ್ತು ಡವ್ ಸೋಪಿನಿಂದ ಸ್ನಾನ ಮಾಡಿದೆವಲ್ಲ ಆ ಸೋಪು ದಿನದಿನವೂ ಇಷ್ಟಿಷ್ಟೇ ಕರಗುತ್ತಿದೆ... ನೀನು ತರಿಸಿದ ಗ್ಯಾಸ್ ಸ್ಟೋವಿನಲ್ಲೆ ಅಮ್ಮ ಅಡುಗೆ ಮಾಡುತ್ತಾಳೆ, ನಿನಗಿಷ್ಟವಾದ ಬಿಳಿ-ನೀಲಿ ಬಣ್ಣದ ಭಾರವಾದ ಪರದೆಗಳು ಕಿಟಕಿಗಳಹಿಂದೆ ತಣ್ಣಗೆ ನಿಂತಿವೆ.. ನಿನಗೆ ಕಾಯುತ್ತಾ...

ಅಪ್ಪ ಅಮ್ಮ ಒಪ್ಪಿದ್ದಾರೆ...ನಿನ್ನ ಅಪ್ಪನನ್ನು ಒಪ್ಪಿಸಿ ಬಂದೇ ಈ ಪತ್ರ ಬರೆಯುತ್ತಿದ್ದೇನೆ...ನಿನ್ನ ವಿಲನ್ ಅಪ್ಪನೇ ಒಪ್ಪಿಕೊಂಡಾಗಿದೆ ಅಂದಮೇಲೆ ನೀನು ಜಂಬ ಮಾಡಿದರೆ ಅರ್ಥವಿಲ್ಲ...

ಟೆರೇಸಿಗೆ ಹೋಗಲು ಮನಸ್ಸೇ ಬರುವುದಿಲ್ಲ ನಕ್ಷತ್ರಗಳು ಹೊಳೆಯುವ ನೀಲಿ ಧೂಳನ್ನು ನಿನಗಲ್ಲದೆ ಬೇರೆ ಯಾರಿಗೂ ಕೊಡೋಲ್ಲವಂತೆ..ಡವ್ ಸೋಪ್ ಪೂರ್ತಿ ಕರಗುವುದರೊಳಗೆ ಬಂದುಬಿಡು...
.................................................ತುಂಬ ನಿನ್ನವನು,ನೀಲಿ ನಕ್ಷತ್ರ;-)

Wednesday, December 5, 2007

ಅಪ್ಪ ಕಾಣಿಸಿದ ಕತೆಗಳು- 1.ವೈದೇಚಿತ್ತಿ

ನಾನು ಸಣ್ಣವಳಾಗಿದ್ದಾಗಿಂದಾನೂ, ನನಗೆ ನೆನಪಿರೋವಾಗ್ಲಿಂದಾನೂ, ಕರೆಂಟು ಹೋದಾಗ ಪುಸ್ತಕಗಳನ್ನು ಮಡಚಿಟ್ಟು ಅಪ್ಪ ಅಮ್ಮನ ಜೊತೆಗೆ ಬಂದು ಕೂರ್ತಿದ್ವಿ(ನಾನು,ನನ್ನ ತಂಗಿ). ಆಗ ಅಪ್ಪ ತಮ್ಮ ನೆನಪಿನ ಬುಟ್ಟಿಯಿಂದ ಊರಿನ ಜನರ ಜೀವನದ ಘಟನೆಗಳನ್ನ, ಕತೆಗಳನ್ನ, ಒಂದೊಂದಾಗಿ ಹೆಕ್ಕಿ ಹೇಳೋರು. ಅಥವಾ ಈಸೋಪನಾ ನೀತಿ ಕತೆಗಳೋ, ಪಂಚತಂತ್ರದ ಕತೆಗಳೋ ನೀತಿಚಿಂತಾಮಣಿಯ ಕತೆಗಳನ್ನೋ ಹೇಳೋರು....ಇಲ್ಲವೇ ಭಗವದ್ ಗೀತೆ, ಶ್ಲೋಕಗಳು, ಮುಕುಂದ ಮಾಲೆ ಬಾಯಿಪಾಠ ಮಾಡಿಸೋರು...ನನ್ನ facinate ಮಾಡ್ತಿದಿದ್ದು ನಮ್ಮೂರಿನ ಜನರ ಕತೆಗಳು, ಅವರನ್ನ, ಅವರ ಸ್ವಭಾವಗಳನ್ನ ಅಪ್ಪ analise ಮಾಡ್ತಿದ್ದ ರೀತಿ. ರಥೋತ್ಸವಕ್ಕೋ, ದೀಪಾವಳಿಗೋ, ಗೋಕುಲಷ್ಟಮಿಗೋ, ಇಲ್ಲವೇ ನವರಾತ್ರಿಯ ಪಾರಾಯಣದ ಸಮಯದಲ್ಲೋ... ಊರಿಗೆ ಹೋದಾಗ ಆ ಜನರನ್ನೆಲ್ಲಾ ನೋಡಿ ಅವರಿಗೆ ಸಂಬಂಧಿಸಿದ ಕತೆಗಳನ್ನ ಜ್ನಾಪಿಸಿಕೊಂಡು ಖುಶಿ ಪಡ್ತಿನಿ...

ಈಗೊಂದು ಹೊಸ ಪ್ರಯೊಗ, ನಮ್ಮೂರಿನ ಜನರನ್ನ ಒಬ್ಬೂಬ್ಬರನ್ನೂ ನಾನು ನೋಡಿದ ಹಾಗೆ ನಿಮ್ಮ ಮುಂದೆ ಇಡ್ತೀನಿ. ಅವರಿಗೆ ರಿಲೆಟ್ ಆಗಿರೊ ಪಾಸ್ಟ್ ಸ್ಟೋರೀಸ್ ಇದ್ರೆ ಹೇಳ್ತಿನಿ. ಈ ಕತೆಗಳಲ್ಲಿ ಭೋದನೆ ಇಲ್ಲ, ಏನೋ ಸಂದೆಶ ಇರ್ಲೇಬೇಕು ಅಂತ ಹುಡುಕಬೇಡಿ. ಏನಾದ್ರು ಕಂಡ್ರೆ ಸಂತೋಷ. continous ಆಗಿ ಬರೀತಿನಿ ಅಂತ ಅಲ್ಲ, ಮದ್ಯೆ ಮದ್ಯೆ ಯಾವಾಗ್ಲಾದ್ರು ಬರಿತಿನಿ 'ಅಪ್ಪ ಕಾಣಿಸಿದ ಕತೆಗಳು' ಅಂತ ಕರ್ಯೋಕ್ಕೆ ಖುಶಿ ನಂಗೆ. ನಮ್ಮೂರಿನ ಜನರ ಕತೆ ಇಷ್ಟ ಆಗಬಹುದು ನಿಮಗೆ...

ವೈದೇಚಿತ್ತಿ

1
"ಈ ವೈದೇಹಿಗೆ ಇಷ್ಟು ವಯಸ್ಸಾದರೂ ಇಂಥ ಬುದ್ದಿ ಯಾಕೆ ಅಂತ? ಅವಳಿಗೇನು ಒಡವೆಯಾ? ಸೀರೆಯಾ? ಗೋಪಾಲ ಬಂದು ಪಾಪ ಗೊಳೋ ಅಂತ ಅತ್ತುಕಂಡ. ತಿಂಗಳಿಗೆ ಐನೂರು ರುಪಾಯಿ ಕೊಡ್ತಾಳಂತೆ ಕಣೋ ನಾವು ಕೆಲ್ಸದವರಿಗೂ ಅಷ್ಟು ಕಡಿಮೆ ಕೊಡೋಲ್ಲ. ಅದೇನು ಜಿಗ್ಗತನವೋ... ಮಗಂಗೆ ಕೊಟ್ರೆ ಏನಾದ್ರು ಕಳ್ಕತಾಳ? ಅಂಥದ್ರಲ್ಲಿ ಫೋನ್ ಬಿಲ್ಲೂ ನೀನೇ ಕಟ್ಟು ಅಂತಾಳಂತೆ. ಇನ್ನೇನ್ ಉಳಿಯುತ್ತೆ ಇವ್ನ ಕೈಯಲ್ಲಿ ಪಾಪ? ಆಕಡೀಗೆ ತೋಟ ತೋಟ ಅಂತ ಹಿಂದಿನಿಂದ್ಲೂ ಅಲ್ಕಂಡು ಪೌರೋಹಿತ್ಯಾನೂ ಕಲೀಲಿಲ್ಲ, ಓದ್ಲೂ ಇಲ್ಲ, ಈಕಡೀಗೆ ತೋಟದಲ್ಲಿ ಎಷ್ಟು ಗೈದ್ರೂ ಉಪ್ಯೋಗ್ವಿಲ್ಲ... ಸಾಲದ್ದಕ್ಕೆ ಮೂರುಮೂರು ಮಕ್ಕಳು ಬೇರೆ... ಊಟಕ್ ಕಷ್ಟವಿಲ್ಲ ಅನ್ನೋದ್ ಬಿಟ್ರೆ ಕೈಯಲ್ಲಿ ನಾಲ್ಕು ಕಾಸೂ ಆಡಂಗಿಲ್ಲ..... ನಿ ಏನೇ ಹೇಳು ಶ್ರೀನಿವಾಸ ಅವ್ಳಿಗೆ ತಲೆ ಕೆಟ್ಟಿರೋದಂತೂ ಸತ್ಯವೇಯ.” ಅಂತ ಅಜ್ಜಿ ಬಿಸಿ ಬಿಸಿ ಕಾವಲಿ ಮೇಲೆ ದೊಸೆ ಹಾಕ್ತಾ ಹೇಳ್ತಿದ್ರೆ, ಪುಟ್ಟಿ "ಅದೇ ಆ ಮುಂಬಾವಿ ಮನೆ ವೈದೇಚಿತ್ತಿನ?" ಅಂದ್ಲು ದೋಸೆ ನುಂಗುತ್ತಾ "ಹೂಂ...." ಅಂದ ಅಪ್ಪ "ಇನ್ನೂ ತುಂಬ ಚಿಕ್ಕವರು ನೀವು ದೊಡ್ಡವರ ವಿಷಯಾನೆಲ್ಲಾ ಮಾತಾಡ್ ಬಾರ್ದು" ಅಂದ್ರು.


2
ವೈದೇಚಿತ್ತಿ ಪೂರ್ತಿ ಹೆಸರು ವೈದೇಹಿ ಅಂತ ಅವರು ಈಗ ಇರೊದನ್ನ ನೋಡಿದ್ರೆ ಒಂದು ಕಾಲಕ್ಕೆ ನೋಡೋಕ್ಕೆ ಅಷ್ಟು ಲಕ್ಷಣ ಇಲ್ಲ್ದಿದ್ರೂ ತೆಳ್ಳಗೆ ಗೋಧಿಬಣ್ಣಕ್ಕೆ ಇದ್ದಿರಬಹುದು. ಈಗ ಮುಖದಲ್ಲಿ ಎಂಥದ್ರದ್ದೋ ಕಲೆಗಳು ಇವೆ. ಇನ್ನೂ ಸ್ವಲ್ಪ ದಪ್ಪ ಇದ್ದಿದ್ದ್ರೆ ಅವರ ವಯಸ್ಸಿಗೆ ಒಪ್ಪುತ್ತಿತ್ತು. ಬೋಳಿಸಿದ ತಲೇನ ಕೆಂಪು ಸೀರೆಯಲ್ಲಿ ಮುಚ್ಚಿಕೊಂಡಿರ್ತಾರೆ. ವೈದೇಚಿತ್ತಿ ಈಗ ಇರೋ ಮನೆ ಮುಂದೆ ಭಾವಿ ಇರೋದ್ರಿಂದ, ಅವರ ಮನೇನ ಮುಂಭಾವಿ ಮನೆ ಅಂತ ಕರೀತಾರೆ. ಆದ್ರೆ ಹಿಂದೆ ಅವ್ರು ನಮ್ಮ ತೊಟ್ಟಿ ಮನೇಲೇ ಇದ್ರಂತೆ. ಈ ವೈದೇಚಿತ್ತಿನ ನಾವೆಲ್ಲಾ ವೈದೇಚಿತ್ತಿ ಅಂತ ಯಾಕೆ ಕರೀತಿವಿ ಅಂತ ಇತಿಹಾಸ ಕೆದಕಿದಾಗ ತಿಳಿಯೋದು ಇಷ್ಟು...... ಹಿಂದೆ ಅಂದ್ರೆ ಈಗಿಂದ ಒಂದು ನಲವತ್ತು ಐವತ್ತು ವರ್ಷದ ಹಿಂದೆ ಈಗಿನ ನಮ್ಮ ಚತ್ರದಂತಹಾ ದೊಡ್ಡ ಮನೇಲಿ ಈಗಿನ ತರ ಬರೀ ಎರಡೇ ಸಂಸಾರಗಳಿರಲಿಲ್ಲವಂತೆ ಇನ್ನೂ ಎರೆಡು ಸಂಸಾರ ಇತ್ತಂತೆ. ವೈದೇಚಿತ್ತಿಯವರದೂ ಅದರಲ್ಲಿ ಒಂದು. ಈ ತೊಟ್ಟಿ ಮನೆಗೆ ವೈದೇಚಿತ್ತಿ ಮದುವೆ ಆಗಿ ಬಂದಾಗ ಆ ಮನೆಯ ಸೊಸೆಯಂದಿರಲ್ಲಿ ಅವರೇ ಚಿಕ್ಕವರಾದ್ದರಿಂದ ಹಾಗೂ ಆ ತೊಟ್ಟಿಯವರೆಲ್ಲಾ ಒಂದೇ ಗೋತ್ರದವರಾದ್ದರಿಂದ ವೈದೇಹಿ ಮನೆಯ ಮಕ್ಕಳಿಗೆ ವೈದೇಹಿಚಿತ್ತಿಯಾಗಿ ಕೊನೆಗೆ ವೈದೇಚಿತ್ತಿ ಆದ್ಲು.

ವೈದೇಚಿತ್ತಿಗೆ ಗಂಡ ಅನ್ನೋರು ಇದ್ದಿರಬಹುದು ಅಂತ ನನಗನ್ನಿಸಿದ್ದೇ ತೀರ ಇತ್ತೀಚೆಗೆ. ಅವರು ಆ ಕೆಂಪು ಮಡಿ ಬಟ್ಟೆಯಲ್ಲಿ ಹುಟ್ಟುಬಟ್ಟೆನೋ ಅನ್ನೋಷ್ಟು ಸಹಜವಾಗಿ ಕಾಣ್ತಿದ್ರು. ಆದ್ರೆ ಅವರಿಗೆ ಈಗ ಮಕ್ಕಳಿವೆ ಹಾಗೂ ಈಗ ಅವರು ವಿಧವೆ ಅನ್ನೋ ಎರೆಡು ಅಂಶಗಳಿಂದ (ಈ ಎರೆಡನೇ ಅಂಶದಿಂದ ಅವ್ರಿಗೇನು ಬೇಜಾರಾದಂಗೆ ಕಾಣ್ಸಲ್ಲ) ಅವರಿಗೆ ಗಂಡ ಇದ್ದಿದ್ದಂತೂ ನಿಶ್ಚಯ. ವೈದೇಚಿತ್ತಿ ಗಂಡನಿಗೆ ಆ ಊರಿನ ಎಲ್ಲರಂತೆ ಅಡಿಕೆ ತೋಟ ಇತ್ತು. ಸ್ವಲ್ಪ ಕಮ್ಮೀನೇ ಇತ್ತು ಅರ್ಧ ಎಕರೆ. ಜೊತೆಗೆ ಪೌರೋಹಿತ್ಯಾನೂ ಮಾಡ್ತಿದ್ರು. ಮೂರು ಜನ ಮಕ್ಕಳು ಎರೆಡು ಹೆಣ್ಣು ಒಂದು ಗಂಡು. ದೊಡ್ಡ ಹುಡುಗಿ ಶ್ಯಾಮಲಾನ ಆ ಕಾಲಕ್ಕೇ ಡೆಲ್ಲಿಲಿದ್ದ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ರು. "ಅವ್ನಿಗೆ ನಮ್ಮ ಕಮಲನ್ನ ಕೊಡಣ ಅಂತಿದ್ವಿ ಕಣೇ ನಿಮ್ಮ ತಾತ ಡೆಲ್ಲಿ ತುಂಬ ದೂರ ಕಷ್ಟ ಸುಖ ಅಂದ್ರೆ ನೋಡೋಕ್ಕಾಗಲ್ಲ ಬೇಡ ಅಂದ್ರು. ಅವ್ಳು ಹತ್ರದಲ್ಲೇ ಇದ್ದು ಸುಖ ಸುರ್ಕೊಂಡಿದ್ದು ಗೊತ್ತಿದ್ಯಲ್ಲ." ಅಂತ ಒಂದು ಸತಿ ನಿಟ್ಟುಸಿರಿಟ್ಟಿದ್ದರು ಅಜ್ಜಿ. ಎರಡನೇ ಮಗಳು ವಿಮಲನ್ನ ಹತ್ತಿರದ ಊರಿಗೇ ಕೊಟ್ಟಿದ್ದರು. ಆ ಆಂಟಿ ಎಷ್ಟು ಬಿಗಿಯಾದ ಬ್ಲೌಸ್ ಹಾಕ್ತಾರೆ ಅಂದ್ರೆ ಇನ್ನೇನು ಹರಿದೇ ಹೋಗುತ್ತೇನೋ ಅನ್ಸುತ್ತೆ... ಅವರನ್ನ ನೋಡಿದಾಗಲೆಲ್ಲಾ ನನಗೇ ಉಸಿರುಕಟ್ಟಿದಂಗೆ ತೋಳುಬಿಗಿದಹಾಗಾಗುತ್ತೆ. ಇನ್ನು ಉಳಿದವರು ಗೋಪಾಲ ಅವರಿಗೆ ಪಕ್ಕದ ಹಳ್ಳಿಯಿಂದ ಹೆಣ್ಣು ತಂದಿದಾರೆ ಆ ಆಂಟಿ ಮನೆ ಹೊರಗೆ ಕಾಲೇ ಹಾಕೋಲ್ಲ.



3
ವೈದೆಚಿತ್ತಿಗೆ ನಾನ್ಯಾರು ನನ್ನ ತಂಗಿ ಯಾರು ಅಂತ ಯಾವಾಗಲು ಗೊಂದಲವೇ ಅದೇನು ನಿಜವಾಗಲೂ ಗೊತ್ತಗಲ್ವೋ ಅಥ್ವಾ ಬೇಕ್ಬೇಕು ಅಂತ ಹಾಗೆ ಮಾಡ್ತಾರೋ ಗೊತ್ತಿಲ್ಲ. ನಾವು ನಾನು ನನ್ನ ತಂಗಿ ಪ್ರತಿ ಸಲ ಊರಿಗೆ ಹೋದಾಗಲೂ ನಮ್ಮಿಬ್ಬರಲ್ಲಿ ಅವರಿಗೆ ಯಾರು ಮೊದಲು ಸಿಕ್ಕಿದರೂ ಅವರು ಕೇಳೋದು ಒಂದೆ ರೀತಿಯ ಪ್ರಶ್ನೆಗಳು. ಉದಾಹರಣೆಗೆ ನಾನು ಸಿಕ್ಕಿದೆ ಅನ್ನಿ....

ವೈದೇಚಿತ್ತಿ: ನೀನು ಶ್ರೀನಿವಾಸನ ಮಗಳಲ್ಲವೇನೆ, ಯಾವಾಗ ಬಂದ್ರೆ? ನೀನು ಅಕ್ಕಾನೋ? ತಂಗಿಯೋ?
ನಾನು : ನಾನು ಅಕ್ಕ ತಂಗಿ ಒಳಗಡೆ ಇದಾಳೆ ನೀವು ಹೇಗಿದಿರ ವೈದೇಚಿತ್ತಿ?
ವೈದೇಚಿತ್ತಿ: ನಾನು ಚೆನ್ನಾಗಿದಿನಮ್ಮ..... ನಿನ್ನ ಅಮ್ಮ ಬ೦ದಿದಾಳೋ ? ಎಷ್ಟು ದಿನ ಇರ್ತಿರ?
ನಾನು : ಹೊ೦.... ಅಮ್ಮಾನು ಬ೦ದಿದಳೆ ರಥೋತ್ಸವ ಮುಗಿಸಿಕೊಂಡು ಹೊರ್ಡದು ಅಂತ.....
ವೈದೇಚಿತ್ತಿ: ಹಂಗಾದ್ರೆ ಇನ್ನು ನಾಲ್ಕೈದು ದಿನ ಇರ್ತಿರ ಅನ್ನಿ. (ದ್ರುಷ್ಟಿ ತೆಗೆಯುತ್ತಾ...) ಎಷ್ಟು ಚೆನ್ನಾಗಿದಿಯೇ ನನ್ನ ಕಂದ ಬೆಳ್ಳಿಗುಂಡು ಬೆಳ್ಳಿ ಗುಂಡು



ಈ ಬೆಳ್ಳಿ ಗುಂಡು ಅನ್ನೋದು ಒಂದು ಎಡವಟ್ಟು ಪದ. ನನ್ನ ಹಾಗೆ ಯಾರಾದರೂ ಕರೆದ್ರೆ ತುಂಬ ಗೊಂದಲ ಆಗುತ್ತೆ...ಯಾಕ್ ಗೊತ್ತ? ಅದರಲ್ಲಿ ಬೆಳ್ಳಿನೂ ಇದೆ ಗುಂಡೂ ಇದೆ, ಬೆಳ್ಳಗಿದಿಯಾ ಅಂತ ಹೊಗಳ್ತಾ ಇದಾರೋ ಅಥವಾ ಗುಂಡಗಿದಿಯಾ ಅಂತ ಆಡ್ಸ್ಕತಾ ಇದಾರೋ ಅಂತ ಗೊತ್ತಾಗದೇ ಸುಮ್ಮನೆ ಮಿಕ ಮಿಕ ಅಂತ ಹಾಗೆ ಕರೆದೋರನ್ನ ನೋಡ್ಕೊತಾ ನಿಂತ್ಕೊಬಿಡ್ತೀನಿ. ಇಂಥ ಎಡವಟ್ಟು ಪದಗಳಿಗೆ ಪ್ರತಿಕ್ರಯಿಸೋದಾದರೂ ಹೇಗೆ........


4
"ಗೋಪಾಲ ನೀನು ಶ್ಯಾಮಲನ ಕೈಲಿ ಹೇಳಿಸಿ ನೋಡು ವೈದೇಚಿತ್ತಿಗೆ ಶ್ಯಾಮಲ ಅಂದ್ರೆ ಸ್ವಲ್ಪ ಹೆಚ್ಚೇ ಪ್ರೀತಿ..." ಅಂತ ಅಪ್ಪ ಗೋಪಾಲ ಮಾಮಂಗೆ ಹೇಳ್ತಿದಿದ್ದು ಕೇಳಿಸ್ತು. ಪಕ್ಕದಲ್ಲಿದ್ದ ಚಿಕ್ಕಪ್ಪ "ಒಳಗಡೆ ಹೋಗಿ ಕಾಫಿ ಮಾಡ್ಸ್ಕಬಾಮ್ಮ" ಅಂದ್ರು. ಅಡುಗೇ ಮನೇಲಿ ಚಿಕ್ಕಮ್ಮ ಇದ್ರು "ಕಾಫಿ ಮಾಡ್ಬೇಕಂತೆ ಗೋಪಾಲ ಮಾಮ ಬಂದಿದಾರೆ ಅಂದೆ." " ಈ ಮನೇಲಿ ಒಂದು ಹಂಡೆಗಟ್ಲೆ ಕಾಫಿ ಮಾಡಿದ್ರೂ ಖಾಲಿಯಾಗೋಗುತ್ತೆ, ನನ್ ಜೀವನವೆಲ್ಲಾ ಕಾಫಿ ಮಾಡೋದ್ರಲ್ಲೇ ಕಳ್ದ್ಹೋಯ್ತು...." ಅಂತ ಚಿಕ್ಕಮ್ಮ ಗೊಣಗುತ್ತಾ ಕಾಫಿಗೆ ನೀರಿಟ್ಟಳು. ಕಾಫಿ ಮಾಡುವುದರ ಬಗ್ಗೆ ಅಮ್ಮ ಮತ್ತು ಚಿಕ್ಕಮ್ಮನಿಗೆ ಇರುವ ಅಸಮಾಧಾನದ ಪರಿಚಯವಿದ್ದ ನನಗೆ ಚಿಕ್ಕಮ್ಮನ ಮಾತುಗಳಿಗಿಂತ ತೊಟ್ಟಿಯಲ್ಲಿ ನಡೆಯುತ್ತಿರುವ ಮಾತುಗಳು ಮುಖ್ಯ ಅನ್ನಿಸಿ ಅಮ್ಮ ಆಗತಾನೆ ಒಗೆದು ತಂದು ಇಟ್ಟಿದ್ದ ಬಟ್ಟೆಗಳನ್ನು ಹಿಂಡಿ ಕೊಡಿಯ ಮೇಲೆ ಒಣಗಿಸುವ ನೆಪದಲ್ಲಿ ತೊಟ್ಟಿಗೆ ಬಂದು ಬಟ್ಟೆ ಹಿಂಡತೊಡಗಿದೆ.ನಾನು ಒಳಗೆ ಹೋಗಿ ಬರುವ ಹೊತ್ತಿಗೆ ಅಪ್ಪ ಮಾತು ಮುಗಿಸಿಯಾಗಿತ್ತು "ನಂಗು ಸಾಕಾಗ್ ಹೋಗಿದೆ ಶ್ರೀನಿವಾಸ ಎಲ್ಲರೂ ಅವಳಿಗೆ ಹೇಳಿದ್ದಾಯ್ತು ಶ್ಯಾಮಲಾನೂ ಹೇಳಿದ್ಲು, ಅವಳ ಮುಂದೆ ಹೂಂ ಹೂಂ.. ಅಂತಾಳೆ ಅವಳು ಮರೆಯಾದ ತಕ್ಷಣ ಅದೇ ರಾಗ ಅದೇ ತಾಳ. ಟವ್ನ್ ನಲ್ಲಿ ಯಾವುದಾದರೂ ಬೇಕರಿಗೆ ಹೋಗಿ ಸೇರ್ಕಳಣ, ಬೇಕರಿ ಇಡೋಕ್ಕಂತು ಭಾಗ್ಯವಿಲ್ಲ ತಿಂಗಳಿಗೆ ಎರೆಡು ಮೂರು ಸಾವ್ರನಾದ್ರೂ ಸಿಗುತ್ತೆ ಅನ್ಕಂಡ್ರೆ ಇಲ್ಲಿ ತೋಟ ನೋಡ್ಕಳೋರ್ಯಾರು? ಅಮ್ಮನ್ನ ಈ ಕೊನೇಗಾಲ್ದಲ್ಲಿ ಬಿಟ್ಟೊಗದ್ ಹ್ಯಾಗೆ? ಈಗ ಊಟಕ್ ಕಷ್ಟ್ವಿಲ್ಲ, ಆಮೇಲೆ ಅದಕ್ಕೂ ಕುತ್ತು ಬಂದ್ರೆ ಏನ್ ಮಾಡದು....?" ಅಷ್ಟು ಹೊತ್ತಿಗೆ ಕಾಫಿ ಬಂತು.. ಒಳಗಡೆ ಗೊಣಗುತ್ತಿದ್ದ ಚಿಕ್ಕಮ್ಮ ಅಷ್ಟೇ ವಿರುದ್ದವಾದ ಶಾಂತ ನಗುಮುಖದಿಂದ ಕಫಿ ತಂದು ಕೊಟ್ಟಳು. ಗೋಪಾಲಮಾಮನ ಮುಖ, ಗಂಟಲು ಕಾಫಿಯ ಹಿತದಿಂದ ತುಂಬಿಕೊಂಡಿತು. ಚಿಕ್ಕಮ್ಮ ಅಧ್ಭುತವಾಗಿ ಕಾಫಿ ಮಾಡ್ತಾಳೆ. ಚಿಕ್ಕಪ್ಪ ದಡಬಡಿಸಿ ಕಾಫಿ ಕುಡಿದು ತಮ್ಮ ಬುಲೆಟ್ಟಿನ ಗುಡು ಗುಡು ಶಭ್ದದೊಂದಿಗೆ ಅಂಗಡಿಗೆ ಹೋದರು.

ನಾನು ಹಿಂಡಿದ ಬಟ್ಟೆಯನ್ನ ಕಷ್ಟಪಟ್ಟು ಕೊಡಿಯಮೇಲೆ ಒಣಗಿಸುತ್ತಿದ್ದೆ ..."ಹೇಳ್ಕಳಕ್ಕೆ ನಾಚಿಕೆ ಯಾಗುತ್ತೆ ಶ್ರೀನಿವಾಸ, ಈಗೀಗ ಬ್ರಾಮ್ಹಣಾರ್ಥಕ್ಕೆ ಯಾರದ್ರು ಕರೀತಾರೇನೋ ಅಂತ ಕಾಯಂಗಾಗೋಗಿದೆ. ತಿಂಗಳಲ್ಲಿ ಒಂದು ನಾಲ್ಕೈದು ಬ್ರಾಮ್ಹಣಾರ್ಥ ಆದ್ರೆ ಕೈಯಲ್ಲಿ ಸ್ವಲ್ಪ ದುಡ್ಡಾಡುತ್ತೆ, ದುರಂತ ನೋಡು ಯಾರೂ ಸಿಗ್ದೆ ಈಗ ನಾನಂಥೋರ್ನೆಲ್ಲಾ ಬ್ರಾಮ್ಹಣಾರ್ಥಕ್ಕೆ ಕರೆಯೋಹಂಗಾಗೋಗಿದೆ. ನನಗೆ ಹೋಗೊಕ್ಕೆ ಎಷ್ಟು ಹಿಂಸೆ ಆಗುತ್ತೆ ಆದ್ರೆ ಹೋಗ್ದೆ ವಿದಿಯಿಲ್ಲ. ಹೆಚ್ಚು ಕಡಿಮೆ ಬ್ಯಾಂಕಿನಲ್ಲಿ ಹೆಚ್ಚು ಕಡಿಮೆ ಅಮ್ಮನ ಹೆಸರಿನಲ್ಲಿ ಮೂರು ಲಕ್ಷ ಇದೆ ಯಾಕ್ ಬೇಕು ಅವ್ಳಿಗೆ ನಂಗ್ ಬೇಡಪ್ಪ ಹೋಗ್ಲಿ ವಿಮ್ಲಂಗಾದ್ರೂ ಕೊಡ್ತಾಳ ಅವ್ಳೂ ಕಷ್ಟದಲ್ಲಿದ್ದಾಳೆ.... ಅಮ್ಮ ಸತ್ರೂ ಆ ಹಣನ ನಾ ಮುಟ್ಟೋಲ್ಲ...ಮೊದಲು ಅಮ್ಮ ಹೀಗಿರ್ಲಿಲ್ವೋ ಅಥವಾ ನಮಗೇ ಅಮ್ಮನ ಗುಣ ಗೊತ್ತಾಗಿದ್ದೇ ಅಪ್ಪ ಸತ್ತ ಮೇಲೆ ಅನ್ಸುತ್ತೆ. ಅಪ್ಪ ಇದ್ದಾಗ ಅಮ್ಮನ್ನ ಕಾರಣವಿಲ್ಲದೇ ಮಾತು ಮಾತಿಗೂ ಬೈದು ಹೀಯಾಳಿಸೋರು, ಅಮ್ಮನ ವ್ಯಕ್ತಿತ್ವ, ಅವಳು ಹೇಗೆ? ಅನ್ನೋದೇ ಗೊತ್ತಿರ್ಲಿಲ್ಲ. ಅಪ್ಪ ಸತ್ತ್ಮೇಲೇನೇ ಅಮ್ಮ ಸ್ವತಂತ್ರವಾಗಿದ್ದು, ಖುಶಿಯಾಗಿದ್ದು. ಅಪ್ಪಂಗೆ ಗಾಳಿ ಹಿಡ್ದು ಹೋದ್ರು ಅಂತಾರೆ ಅಪ್ಪಂಗೆ ಗಾಳಿ ಹಿಡ್ದಿದ್ದೋ, ಇವ್ಳಿಗೇ ಧನ ಪಿಚಾಚಿ ಹಿಡಿತೋ ಗೊತ್ತಿಲ್ಲ..."ಅನ್ನುತ್ತಿದ್ದ್ರು ಗೋಪಾಲ ಮಾಮ....


5
ಅಜ್ಜಿ ಜೊತೆ ಜಗುಲಿ ಮೇಲೆ ಕೂತ್ಕೊಂಡೋ ಅರಂಗಿನಲ್ಲಿ ಕೂತ್ಕೋಂಡೋ "ರಂಗಮಣಿ.... ವಿಶ್ಯ ಕೇಳಿದ್ಯ ಬಿ ಎ ಮೇಷ್ಟ್ರಿಗೆ ಈಗ ಕಿವಿ ಕೇಳಲ್ವಂತೆ....,ರಂಗಮಣೀ ಮೊನ್ನೆ ಆ ಹಾಲುಮಾರೋ ಕರಿಯನ್ ಮಗು ಸತ್ತೋಯ್ತಂತೆ..ಪಾಪ..." ಅಂತಾನೋ "ರಂಗಮಣಿ ನಮ್ಮ ಶ್ಯಾಮಲ ಹಿಂಗಂದ್ಲು, ನಮ್ಮ ಶ್ಯಾಮಲ ದೆಲ್ಲಿಯಿಂದ ಮಿಠಾಯಿ ಕಾಳ್ಸಿದಾಳೆ ತೊಗೋ... ಶ್ಯಾಮ್ಲನ್ನ ಮಕ್ಕ್ಳು ಕ್ಲಾಸ್ನಲ್ಲಿ ಫಸ್ಟ್ ಅಂತೆ, ಶ್ಯಾಮಲನ್ನ ಮೊದ್ಲನೇ ಮಗ ಗರುಡ ಗರುಡ(ಅಂದ್ರೇ ತುಂಬ ಚೆನ್ನಗಿದಾನೆ ಅಂತ)" ಅಂತ ಕೊರೆಯುತ್ತಾ ಕೂರುವ ವೈದೇಚಿತ್ತಿ ಹೀಗೆಲ್ಲಾ ಮಾಡ್ತಾರೆ ಅನ್ಸಲ್ಲ.. ಭೈರಪ್ಪನವರ ಸಾಕ್ಶಿಯಲ್ಲಿ ಬರೊ ಜಿಪುಣ ಮನುಷ್ಯನ ಥರಾನ ಇವರು? ಇವರು ಸತ್ತಾಗ ಗೋಪಲಮಾನೂ ಆ ಕಾದಂಬರಿಯಲ್ಲಿ ಬರೋ ರೀತಿಯಲ್ಲೇ ಮೂರು ಲಕ್ಷಾನ ಇವರ ಹೆಣದ ಜೊತೆ ಸುಡಬಹುದ..??? ಎಂದು ಏನೇನೋ ಅಸಂಭದ್ದವಾಗಿ ಯೋಚಿಸುತ್ತಾ ಜಗುಲಿಯ ಮೇಲೆ ಕೂತಿದ್ದೆ, ನನ್ನ ತಂಗಿಯೂ ಪಕ್ಕದಲ್ಲಿದ್ದಳು ಅದ್ಯಾವುದೋ ಮಾಯೆಯೆಲ್ಲಿ ಮನೆ ಬಾಗಿಲಿನ ಬಳಿ ಪ್ರತ್ಯಕ್ಷವಾದ ವೈದೇಚಿತ್ತಿ "ಶ್ರೀನಿವಾಸನ ಮಕ್ಕಳಲ್ವೇನ್ರೇ ಯಾವಾಗ ಬಂದ್ರಿ... ಇದರಲ್ಲಿ ಅಕ್ಕ ಯಾರು ತಂಗಿ ಯಾರು?" ಅಂದ್ರು....

Friday, November 2, 2007

ಗೋಡೆ

1
ನನ್ನ ಬಿಟ್ಟು ಹೋಗ್ತೀಯ ಮೈತ್ರಿ? ನನ್ಗೆ ಭಯ ಆಗ್ತಿದೆ. ನಾನೇನ್ ತಪ್ಪು ಮಾಡಿದೀನಿ? ನೀನು ಹೇಳಿದ ಹಾಗೆ ಕೇಳ್ತೀನಿ, ನೀ ಹೇಳಿದ್ದರ ವಿರುದ್ದ ಏನಾದರೂ ಮಾಡಿದೀನ ಇಲ್ಲಿವರೆಗೂ? ದಯವಿಟ್ಟು ಬಿಟ್ಟು ಹೊಗಬೇಡ ಮೈತ್ರಿ. 'ನಾವು ಒಬ್ಬರಿಗೊಬ್ಬರು ಜೊತೆಯಾಗಿರ್ತೀವಿ ಕಷ್ಟ ಆಗ್ಲಿ, ಸುಖ ಆಗ್ಲಿ.' ಅಂತ ದೇವರ ಮುಂದೆ ಪ್ರಮಾಣ ಮಾಡಿದೀವಿ. ನಂಗೆ ಭಯ ಆಗ್ತಿದೆ, ನನ್ನ ಬಿಟ್ಟು ಹೋಗಬೇಡ... ಅಂತ ಪಕ್ಕದಲ್ಲಿ ಮಲಗಿದ್ದ ನನ್ನ ಗಂಡ ಒಂದೇ ಸಮನೆ ಬಡಬಡಿಸತೊಡಗಿದಾಗ ವ್ರಶಾಂಕ್ ಇವನ ಹತ್ತಿರ ಮಾತಾಡಿದಾನೆ ಅಂತ ಗೊತ್ತಾಯ್ತು..ಉತ್ತರ ಕೊಡೋಕ್ಕೂ ಹಿಂಸೆ ಆಗಿ ಎದ್ದು ಹೊಗಿ ವೆರೆಂಡಾದ ಈಸಿ ಕುರ್ಚಿ ಮೆಲೆ ಕೂತೆ.


ವರೆಂಡಾದ ಕಿಟಕಿಯಿಂದ ಕಾಣುತ್ತಿದ್ದ ಮನೆಯ ಮುಂದಿನ ನಲ್ಲಿಕಾಯಿ ಮರದ ರುಚಿ ಇಲ್ಲದ ಚಿಕ್ಕ ಚಿಕ್ಕ ಕಾಯಿಗಳ ಬಗ್ಗೆ ಏನೂ ಅನ್ನಿಸಲಿಲ್ಲ. ತನ್ನ ಗಂಡನ ಅತೀ ಒಳ್ಳೆಯತನದ, ಪ್ರತಿಯೊಂದಕ್ಕೂ 'ನೀ ಹೇಳಿದ ಹಾಗೆ' ಅನ್ನುವ, ನನ್ನ ಮುಂದೆ ತಾನು ಬುದ್ದಿವಂತ ಅಂತ ತೋರಿಸಿಕೊಳ್ಳಲು ಹೋಗಿ ಪೆಚ್ಚಾಗುವ, ತನ್ನ ಬಸುರಿ ಮಾಡಿದ್ದನ್ನೇ ದೊಡ್ಡ ಸಾಧನೆ ಅನ್ನುವಂತೆ ಆಡಿದ್ದ ಅವನ ಬಗ್ಗೆ ಅಸಹ್ಯ ಆಗುವುದೂ ನಿಂತು ಹೊಗಿತ್ತು. ಎನೂ ಅನ್ನಿಸುವುದಿಲ್ಲ ಅವನ ಬಗ್ಗೆ. ಯಾರ ವ್ಯಕ್ತಿತ್ವವೂ 'ಇಷ್ಟು' ಎಂದು ಅಳೆದು ಮುಗಿಸಿಬಿಡುವಂತೆ ಇರಬಾರದು ಗಟ್ಟಿಯಾಗಬೇಕು- ದೊಡ್ಡದಾಗಬೇಕು- ಅಗಲವಾಗಬೇಕು -ವಿಸ್ತಾರವಾಗಬೇಕು. ಇಲ್ಲವೇ ಚಿಕ್ಕದಾಗಬೇಕು- ಪುಟ್ಟದಾಗಬೇಕು- ಜೊಳ್ಳಾಗಬೇಕು. ಇರ್ಬಾರ್ದು ಹೀಗೆ, ಏನೂ ಅನ್ನಿಸದ ನಲ್ಲೀಕಾಯಿ ಮರದಂತೆ ಅನ್ನಿಸಿತು ಹೀಗೆ ಅನ್ನಿಸಿದ್ದು ಮೊದಲ ಸಲವೇನಲ್ಲವಲ್ಲ ಅಂದುಕೊಂಡಳು.


ಹುಡುಗರಿಗೆ ವಿಷಯಗಳು ಅರ್ಥವಾಗುವುದು ಎಲ್ಲಾ ಬಾಗಿಲು ಮುಚ್ಚಿ ಹೋಗಿದೆ, ಇನ್ನು ಬಿಡಿಸಿಕೊಂಡು ಹೋಗಲು ದಾರಿ ಇಲ್ಲ ಅನ್ನುವಾಗಲ? ಬಾಗಿಲು ತೆಗೆದಿದ್ದರೂ ನೆಡೆದುಕೊಂಡು ಹೋಗಲಾರೆ ಎನ್ನುವಷ್ಟು ನಿಷಕ್ತರಾಗಿ ತೋರುವವರು, ಎಲ್ಲಾ ಬಾಗಿಲು ಮುಚ್ಚಿದಮೇಲೆ ಗೋಡೆ ಒಡೆಯಲೂ ಹೆದರುವುದಿಲ್ಲ.


ನನ್ನ ಒಂದು ವರ್ಷದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು, 'ಇದು ನನ್ನ ಮಗು ಅಂತಾನೆ ನೋಡ್ಕೊತೀನಿ ದಯವಿಟ್ಟು ನೀ ನನ್ನ ಜೊತೆ ಬಾ' ಅಂದ.ನನ್ನ ಗಂಡ ಬದುಕಿದ್ದಾನೆ ಮತ್ತು ನನಗೂ ಅವನಿಗೂ ಡೈವೋರ್ಸ್ ಆಗೋ ಯಾವ ಛಾನ್ಸು ಇಲ್ಲ ಅಂತ ಹೇಳಿ ಜೋರಾಗಿ ನಕ್ಕಿದ್ದೆ.ಅವ್ನು 'ನಾನು ಜೊಕ್ ಮಾಡ್ತಿಲ್ಲ ಹುಡುಗಿ, ಅರ್ಥ ಮಾಡ್ಕೊ ನನ್ನ' ಅಂದ. ಆವಾಗ ನೀ ನನ್ನ ಅರ್ಥಮಾಡ್ಕೊಬಹುದಿತ್ತು ನಮ್ಮ ಸಂಭಂದದ ಬಗ್ಗೆ, ಅದರ ಸಾರ್ಥಕತೆ ಬಗ್ಗೆ ನಿಶ್ಚಿತತೆ ಇತ್ತು. ನೀನು ಅದನ್ನ ಅರ್ಥ ಮಾಡ್ಕೊಳಲಿಲ್ಲ. ಯಾರಿಗೋ ಪ್ರಾಮಿಸ್ ಮಾಡ್ಬಿಟ್ಟಿದ್ದೆ. ಪಾಪ... ನಿಂಗೆ ಆವಾಗ ಅರ್ಥ ಆಗ್ಲಿಲ್ಲ ,ನಿನ್ನ ತಪ್ಪೇನಿಲ್ಲ ಬಿಡು ಅಂದು ನಕ್ಕೆ. 'ನನ್ನ ಚುಚ್ಚ ಬೇಡ ಕಣೆ ನಂಗೆ ಅರ್ಥ ಆಗಿದೆ, ನಿನ್ನ ಬಿಟ್ಟು ಇರೊಕ್ಕಾಗಲ್ಲ ನಂಗೆ ಅಂತ. ನಾನು ನಿನ್ನ ಗಂಡನ್ನೇ ಕೇಳ್ತಿನಿ, ನನ್ನ ಹುಡುಗಿನ ನಂಗೆ ಕೊಡು ಅಂತ, ನೀ ಬೇಡ ಅನ್ನಬೇಡ' ಅಂದ. ಕೇಳು ಅಂದೆ.


2

'ವ್ರಶಾಂಕ್, ಲಾವಣ್ಯ ಅನ್ನೋ ಹುಡುಗೀನ ಪ್ರೀತಿಸ್ತಿದಾನೆ ಕಣೆ' ಅಂತ ಆದಿ ಹೇಳ್ದಾಗ ಒಂದು ದೊಡ್ಡ ನಿಟ್ಟುಸಿರು ಹೊರಟಿತ್ತು.ಲಾವಣ್ಯ ಹೆಸರು ಚೆನಾಗಿದೆ ಅಂದುಕೊಂಡಳು. ಎರಡು ತಿಂಗಳು ಬಿಟ್ಟು ವ್ರಶಾಂಕೇ ಫೋನ್ ಮಾಡಿ, ಮೈತ್ರಿ... ಅಂದಾಗ ಆಶ್ಚರ್ಯ ಆಗಿತ್ತು. ಮನೆಗೆ ಬಾ ಅಂದಳು, ಬಂದ. ಅಪ್ಪ ಅಮ್ಮ ಹಳ್ಳಿಗೆ ಹೋಗಿದ್ದರು ಅಲ್ಲಿಯ ದೇವಸ್ತಾನದಲ್ಲಿ ಎನೋ ಪೂಜೆ ಮಾಡಿಸಲು, ಆದ್ರೆ ಅಜ್ಜಿ ಮಾತ್ರ ಇದ್ದಳು ಮನೆಯಲ್ಲಿ, ಆಗಾಗ ಕೆಮ್ಮುತ್ತಾ.


ಏನೇನೋ ಮಾತಾಡಿದೆವು ಸ್ನೇಹಿತರ ವಿಷಯ,ಅವನ ಕೆಲಸದ ವಿಷಯ, ಅವಳ ಕೆಲಸದ ವಿಷಯ, ಲಾವಣ್ಯ ಹೇಗಿದಾಳೆ ಕೇಳಿದಳು 'ಅದು ಮಗು ಬಿಡು' ಅಂದ. ಇರಬಹುದು ಅನ್ನಿಸಿತು ಅವಳಿಗೆ. ಅಮ್ಮ ಬೆಳಗ್ಗೆ ಮಾಡಿಹೋಗಿದ್ದ ಉಪ್ಪಿಟ್ಟನ್ನೇ ಹಾಕಿಕೊಟ್ಟಳು, ಬಟ್ಟಲಲ್ಲಿ ಬಿಳಿ ಮೊಸರು. ನಿನಗೆ ಕೆನೆ ಮೊಸರು ಅಂದ್ರೆ ಈಗಲೂ ಆಗೋಲ್ಲವ? ಅಂದ. ಪರವಾಗಿಲ್ಲ ಹಳೇದೆಲ್ಲ ಇನ್ನು ನೆನಪಿದೆಯಲ್ಲ ಅಂದು ನಕ್ಕಳು. ಹತ್ತಿರ ಬಾರೆ ಅಂದ, ಹೋಗಿ ಪಕ್ಕದಲ್ಲಿ ಕೂತಳು. ಕಾಲೇಜಿನಲ್ಲಿ ನೀ ನನ್ನ ಪ್ರೀತಿಸ್ತಿದ್ದೆ ಅಲ್ವ? ಅಂದ.ಇಷ್ಟು ಹೊತ್ತು ಕೇಳಿಸಿದರು ಕೇಳಿಸದ ಹಾಗೆ ಇದ್ದ ಅಜ್ಜಿಯ ಕೆಮ್ಮು ಕೇಳಿಸತೊಡಗಿತ್ತು. ನೀನೂ ನನ್ನ ಪ್ರೀತಿಸುತ್ತಿದ್ಡೆ ವ್ರಶಾಂಕ್ ಅಂದಳು. ನಿನ್ನ ಅಜ್ಜಿಗೆ ತುಂಬ ಕೆಮ್ಮು ಅಲ್ವ? ಅಂದ, ಮುಗುಳ್ನಕ್ಕಳು. ಇನ್ನು ಎನೇನೊ ಮಾತಾಡಿದರು ಹೊರಡೋ ಮುಂಚೆ ಅಜ್ಜಿ..ನಿಮ್ಮ ಆರೋಗ್ಯ ನೋಡ್ಕೊಳಿ ಅಂದ. ದೂರ ಹೋದ ಮೇಲೆ ಲಾವಣ್ಯಳ ಫೋಟೊ ಮೇಲ್ ಮಾಡ್ತೀನಿ ಅಂತ ಕೂಗ್ದ.

ಸರಿಯಾಗಿ ಮೊಳಕೆಯೇ ಒಡೆಯದ್ದಿದ್ದ ಸಂಭಂದ, ಅಂದಿನಿಂದ ಜೀವ ಪಡೆಯಲು ಕಾತರಿಸುತ್ತಿತ್ತು, ಹಸಿರಾಗಲು ಶುರುವಾಗಿತ್ತು, ರಸ ಒಸರಲು ಪ್ರಾರಂಭಿಸಿತ್ತು.ಅದೇ ಸಮಯಕ್ಕೆ ಸರಿಯಾಗಿ ಅವಳಿಗೆ ಗಂಡು ನೋಡಲು ಶುರು ಮಾಡಿದ್ದರು ಪ್ರತಿಯೊಂದು ಹುಡುಗನನ್ನೂ ಬೇಡ ಬೇಡ ಎಂದು ನಿರಾಕರಿಸುತ್ತಿದ್ದಳು. ಏಕೆ ಅಂತ ಅವಳಿಗೇ ಗೊತ್ತಿರಲಿಲ್ಲ. ಅವಳ ಅಮ್ಮ ಅಳಲು ಶುರು ಮಾಡಿದ್ದರು, ಹಿಂಸೆ ಆಗುತಿತ್ತು ಮನೆಯಲ್ಲಿ. ಇವತ್ತು ನಿರ್ಧಾರಕ್ಕೆ ಬಂದೇ ಬಿಡಬೇಕು ಅಂತ ವ್ರಶಾಂಕ್ ಬಳಿ ಹೋಗಿ 'ನನ್ನ ಮದುವೆ ಆಗು ವ್ರಶಾಂಕ್' ಅಂದಿದ್ದಳು ನಾನೇನೋ ತಯಾರಿದ್ದೀನಿ ಆದ್ರೆ ಲಾವಣ್ಯಾಗೆ ಪ್ರಾಮಿಸ್ ಮಾಡಿಬಿಟ್ಟಿದೀನಲ್ಲ, ಪ್ರಾಮಿಸ್ ಮುರಿಯೋದು ತಪ್ಪಲ್ಲವ? ಅಂದಿದ್ದ. ತನ್ನ ಬಳಿ ಇರೋವಾಗ, ತನ್ನ ಸೇರೋವಾಗ, ಸುಖಿಸುವಾಗ, ಆಣೆ- ಪ್ರಮಾಣ, ನಂಬಿಕೆ, ಮನಸ್ಸು- ಮನಸ್ಸಾಕ್ಷಿ, ಎಲ್ಲವನ್ನೂ ಬೀದಿಗೆ ಎಸೆದಂತೆ ಆಡುತ್ತಿದ್ದವನಿಗೆ ಆಣೆ ಪ್ರಮಾಣದ ಜ್ನಾಪಕ ಬಂದ್ದಿದ್ದು ನೋಡಿ ಹೇಡಿ ಅನ್ನಿಸಿ 'ಸರಿ ನೀನು ನಿನ್ನ ಆಣೆ ಉಳಿಸಿಕೋ ಅವಳನ್ನೇ ಮದುವೆ ಆಗು.' ಅಂದಿದ್ದಳು. ಇದಾದ ಎರಡೇ ತಿಂಗಳಲ್ಲಿ ಮೈತ್ರಿಯ ಮದುವೆ ಆಗಿಹೋಗಿತ್ತು.


3
ಛೇ.. ನಾವು ಮತ್ತೆ ಸಿಗಲೇಬಾರದಿತ್ತು ಅವತ್ತು ಫೋನ್ನಲ್ಲಿ ಮಾತಾಡೋವಾಗ ನಾನು ಕೇರಳಕ್ಕೆ ಹೋಗ್ತಿದೀನಿ ಒಂದು ವಾರ ಅಂದೆ. ಲಾವಣ್ಯ ಬರ್ತಿದಾಳ ಅಂತ ಕೇಳಿದಳು, ಇಲ್ಲ ಅಂದೆ. ನಾ ಬರ್ತೀನಿ ವ್ರಶಾಂಕ್ ಅಂದಳು. ಆಶರ್ಯ ಆಯ್ತು ನಿಜವಾಗ್ಲು ಮೈತ್ರಿ!!! ಅಂದೆ. 'ನನಗು ತಿರುಗಬೇಕು ಅಂತ ಮನಸ್ಸಾಗಿದೆ, ಒಂದೇ ಕಡೆ ಇದ್ದು ಬೊರು. ಕೆಲಸಕ್ಕು ಒಂದುವಾರ ರಜೆ ಹಾಕಿಬಿಡ್ತೀನಿ, ಇವರೂ ಫಾರಿನ್ ಟೂರ್ನಲ್ಲಿದಾರೆ, ಮಗೂನು ಕರ್ಕೊಂಡು ಬರ್ತೀನಿ. ನಿನ್ನ ಕೆಲಸಕ್ಕೆ ತೊಂದರೆ ಮಾಡೋಲ್ಲ ಅಂದಿದ್ದಳು.

ಒಂದು ವಾರ ಪೂರ್ತಿ ಜೊತೆಲಿ ಕಳೆದೆನಲ್ಲ ಆವಾಗಲೇ ಗೊತ್ತಾಗಿದ್ದು ಅವಳಿಗೂ ಇವಳಿಗೂ ಎಷ್ಟು ವ್ಯತ್ಯಾಸ ಎಂದು. ಮೊದಮೊದಲು ಇನೊಸೆಂಟ್ ಅನ್ನಿಸುತ್ತಿದ್ದ ಲಾವಣ್ಯ, ಈಗ ನಾಟಕ ಮಾಡ್ತಾಳೆ ಅನ್ನಿಸುತಿತ್ತು. ಅವಳ ಜೊತೆ ಇರೋವಾಗಲೆಲ್ಲಾ ಉಸಿರುಕಟ್ಟುತ್ತಿರುವ ಭಾವನೆ. ಚಿಕ್ಕ ಚಿಕ್ಕ ವಿಷಯಗಳನ್ನೂ ದೊಡ್ಡದು ಮಾಡುವ, ನಾನು ಬೇರೆ ಹುಡುಗಿಯರನ್ನು ನೋಡಿದರೆ ಸಾಕು ಉರಿದು ಬೀಳುವ, ನನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳದ, ಸಂದರ್ಭಗಳಿಗೆ ಸರಿಯಾಗಿ ಸ್ಪಂದಿಸದ, ಅತ್ಯಂತ ಹಠಮಾರಿ-ಪೊಸೆಸ್ಸಿವ್ ಹುಡುಗಿ ಅವಳು. ಪಕ್ಕದಲ್ಲೇ ಕುಳಿತುಕೊಂಡು ನಾನು ಹುಡುಗಿಯರ ಜೊತೆ ಫ್ಲರ್ಟ್ ಮಾಡುವುದನ್ನು ಎಂಜಾಯ್ ಮಾಡುತ್ತಾ, ನನ್ನ ಚುಡಾಯಿಸುತ್ತಾ, ಹೆಚ್ಚು ಸ್ಪೇಸ್ ಕೊಡುವ, ಬೇಕಾದಲ್ಲಿ ಮಾತಾಗುವ-ಬೇಡವಾದಲ್ಲಿ ಮೌನವಾಗುವ, ಬರೀ ಪ್ರೀತಿ ಪ್ರೇಮದ ಮಾತಡಿ ಬೋರ್ ಮಾಡದೆ, ಏನೇ ವಿಷಯ ಎತ್ತಿಕೊಂಡರೂ ಸಮರ್ಥವಾಗಿ ವಾದ ಮಾಡುವ, ಆದರೆ ಜಗಳ ಆಡದ ಅಷ್ಟೇ ಪ್ರೀತಿಸುವ ಹುಡುಗಿ ಮೈತ್ರಿ.

ಹೌದು ನಾನಾಗ ತಪ್ಪೇ ಮಾಡಿರಬಹುದು. ಅವಳನ್ನ ಅರ್ಥ ಮಾಡಿಕೊಂಡಿದ್ದು ಬಹಳ ನಿಧಾನ ಇರಬಹುದು, ಆದ್ರೆ ಅವಳನ್ನ ತುಂಬಾ ಪ್ರೀತಿಸುತ್ತೇನೆ. ಅವಳ ಗಂಡ ಅವಳನ್ನ ನೋಡಿಕೊಳ್ಳೋದಕ್ಕಿಂತ ಚೆನ್ನಾಗಿ ನೋಡಿಕೊತೆನೆ ನಾನು. ಲಾವಣ್ಯಾಗೆ ಮೊನ್ನೇನೆ ಹೇಳಿಬಂದೆನಲ್ಲ ನನಗೂ ನಿನಗೂ ಆಗಿಬರೋಲ್ಲ, ನಮ್ಮಿಬ್ಬರ ಸ್ವಭಾವಗಳು ಬೇರೆ ಬೇರೆ, ಜೊತೇಗಿರೋದು ಕಷ್ಟ ಆಗುತ್ತೆ ಅಂತ. ಇದನ್ನ ಎಷ್ಟು ಹೊತ್ತು ಅವಳಿಗೆ ವಿವರಿಸಿದೆ ಆದ್ರೆ ಅವಳು ಮೊನ್ನೇನೂ ಅದೇ ಥರ ಆಡಿದಳು, ಅತ್ತಳು, ಬಾಯಿಗೆ ಬಂದ ಹಾಗೆ ಬೈದಳು, ಹೊಡೆದಳು, ನಾನು ಎದ್ದು ಬಂದೆ. ಆದ್ರೆ ಇನ್ನು ಮುಂದೆ ಎಲ್ಲಾ ಚೆನ್ನಾಗಿರುತ್ತೆ ನಾನು-ನನ್ನ ಮೈತ್ರಿ-ಅವಳ ಮಗು, ಅಲ್ಲ ನಮ್ಮ ಮಗು ಆ ಮಗುನ ನನ್ನ ಮಗು ಥರನೇ ನೋಡಿಕೊಳ್ತೀನಿ. ಅವಳ ಗಂಡನಿಗೂ ಹೇಳಿಯಾಯಿತು, ಆ ಪ್ರಾಣಿ ನನ್ನ ಹೆಂಡತಿ ಹತ್ತಿರ ಮಾತಾಡ್ತೀನಿ ಅಂತ ಹೇಳಿದಾನೆ.'ಈಗ ಮನೆಗೆ ಬಾ' ಅಂತ ಮೈತ್ರಿ ಫೋನ್ ಮಾಡಿದ್ದಳಲ್ಲ, 'ಮಾತಾಡಬೇಕು' ಅಂತ. ನನಗೆ ಗೊತ್ತು ಮೈತ್ರಿ ನನ್ನ ಜೊತೆಗೆ ಬಂದೇ ಬರ್ತಾಳೆ, ನನ್ನ ತುಂಬ ಪ್ರೀತಿಸುತ್ತಾಳೆ ಅವಳು, ಅಂದುಕೊಂಡು ಕಾರಿನ ಕೀ ತೆಗೆದುಕೊಂಡು ಹೊರಟ.


4
ತನ್ನ ದುಃಖ ದುಮ್ಮಾನವನ್ನೆಲ್ಲಾ ಬಸಿದು ಹಾಕುವ ಹವಣಿಕೆ ಇರಬೇಕು, ರಾತ್ರಿಯೆಲ್ಲಾ ಆಕಾಶವು ಬಿಕ್ಕಳಿಸಿ ಅಳುತ್ತಿತ್ತು. ಏಕೋ ನನಗರಿವಿಲ್ಲದೆಯೇ ನನ್ನ ಕೆನ್ನೆಯ ಮೇಲೂ ಇಳಿದ ನೀರು, ಕಾರಣ ತಿಳಿಯದು. ಸುಮ್ಮನೆ ಕಲ್ಪಿಸಿಕೊಂಡ ಆತಂಕಗಳು ನನ್ನ ಕಾಡುತ್ತಿದ್ದರೆ ನನ್ನ ಕಲ್ಪನೆಗಳ ಬಗ್ಗೆ ನನಗೇ ಭಯ ಮೂಡಿ, ಟೀವಿ ನೋಡಲು ಬೇಸರವಾಗಿ, ಓದಲು ತಂದ ಪುಸ್ತಕದಲ್ಲಿ ಮನಸ್ಸು ಇಳಿಯದೆ, ಏನೂ ಮಾಡಲು ಹೊಳಿಯದೆ, ಆ ರಾತ್ರಿಯಲ್ಲಿ ಮನೆ ಒರೆಸತೊಡಗಿದೆ.

ಯಾವಾಗ ಮಲಗಿದೆನೋ!! ಬೆಳಗ್ಗೆ ಎದ್ದು ರಂಗೋಲಿ ಹಾಕುತ್ತಿರುವಾಗ, ರಾತ್ರಿಯೆಲ್ಲಾ ಅತ್ತಿದ್ದರಿಂದಲೋ ಏನೋ ಎನ್ನುವಂತೆ ಕಣ್ಣು ಕೆಂಪಗಾಗಿರುವ ಆಕಾಶ, ದುಃಖ ಹೊರಹಾಕಿದ ಸುಖದ ಜೊತೆ. ಸುಮ್ಮನೆ ಅಚ್ಚರಿಯಿಂದ ನೋಡಿದೆ, ರಂಗೋಲಿ ಹಾಕುವುದನ್ನೂ ಮರೆತು- ಹಕ್ಕಿಯೊಂದು ತನ್ನ ಮೇಲಿದ್ದ ಮಳೆ ನೀರನ್ನು ಕೊಡಗಿಕೊಳ್ಳುತ್ತಿತ್ತು, ಅಲ್ಲೊಂದು ಮೈನಾ ಹಕ್ಕಿ ಮಾತಾಡುತ್ತಿದ್ದರೆ, ಹೆಸರೇ ಗೊತ್ತಿಲ್ಲದ ಹಕ್ಕಿಯೊಂದು ಹಾಡಾಗಿ ಉತ್ತರಿಸುತ್ತಿತ್ತು...

ಅವನ ಕಾರು ದೂರದಲ್ಲಿ ಬರುತ್ತಿರುವುದು ಕಾಣಿಸುತ್ತಿತ್ತು, ಅವನಿಗೆ ಉತ್ತರ ಹೇಳಬೇಕಲ್ಲ. ಪಾಪು ಅಮ್ಮಾ ಎಂದು ಕರೆದ ಹಾಗೆ ಅನ್ನಿಸಿತು ಒಳಗೆ ಹೋಗಿ ನಿದ್ದೆಗಣ್ಣಿನ ಮಗುವನ್ನು ಎತ್ತಿಕೊಂಡು ಬಂದೆ. ಅವನು ನಲ್ಲೀಕಾಯಿ ಮರಕ್ಕೆ ಒರಗಿ ನಿಂತ್ತಿದ್ದ. ವ್ರಶಾಂಕ್,ನಿನಗೆ ನನ್ನ ಗಂಡನ್ನ ಕೇಳೋಕ್ಕೆ ಒಪ್ಪಿಗೆ ಕೊಟ್ಟಿದ್ದರಲ್ಲಿ ನನ್ನ ಸ್ವಾರ್ಥವಿದೆ, ಏನೂ ಅನ್ನಿಸದಂತಹ ವ್ಯಕ್ತಿತ್ವದ ಅವನಿಗೆ ನೀ ಹೇಳುವ ವಿಚಾರದಿಂದ ಏನಾದರೂ ಅನ್ನಿಸಬಹುದು, ರೊಚ್ಚಿಗೆ ಬೀಳಬಹುದು, ರೇಗಬಹುದು, ಸಿಟ್ಟಾಗಬಹುದು ಅನ್ನೋ ಆಸೆಯಿಂದ, ಆದರೆ ಅಂತದೇನೂ ಆಗಲಿಲ್ಲ.

ಏನೂ ಅನ್ನಿಸದವನ ಜೊತೆ ಬದುಕಲು ಕಲಿತಿದೀನಿ, ಅಭ್ಯಾಸ ಆಗಿಹೋಗಿದೆ.ಅವನಿಗೆಪ್ರಾ ಪ್ರಾಮಿಸ್ ಮಾಡಿದೀನಿ ಅದಕೆ ಬರ್ತಿಲ್ಲಾ, ಅಥವಾ ಸಮಾಜಕ್ಕೆ ಹೆದರಿ ಬರ್ತಿಲ್ಲಾ ಅನ್ಕೊಬೇಡ. ನನಗೆ ಇದ್ಯಾವುದರ ಭಯ ಇಲ್ಲ. ಸೋ ಕಾಲ್ಡ್ 'ಎಥಿಕ್ಸ್', 'ಮಾರಲ್ಸ್' ಗಳಲ್ಲಿ ನನಗೆ ನಂಬಿಕೆ ಇಲ್ಲ. ಆದ್ರೂ, ನಾ ಬರೋಲ್ಲ. ಅಂದು ತೆರೆದ ಬಾಗಿಲಿಂದ ನೆಡೆದು ಹೋಗಲು ನೀನು ಒಪ್ಪಲಿಲ್ಲ, ಧೈರ್ಯ ಮಾಡಲಿಲ್ಲ, ನಿನಗೆ ತುಂಬ ಬಾಗಿಲುಗಳಿದ್ದವು. ಇಂದು ನನ್ನ ಬಾಗಿಲುಗಳು ಮುಚ್ಚಿವೆ, ಗೋಡೆ ಒಡೆಯುವ ಧೈರ್ಯ ಇದೆ ಆದರೆ ಮನಸಿಲ್ಲ. ನಾನು ಬರೋಲ್ಲ ಅಂದೆ, ನಲ್ಲೀ ಕಾಯಿ ಮರಕ್ಕೆ ಒರಗಿ ನಿಂತವನನ್ನು ನೋಡುತ್ತ.. ತೊಡೆಯ ಮೇಲಿನ ಮಗಳು ನಕ್ಕಂತಾಯ್ತು.

Wednesday, August 29, 2007

ಮಳೆ-ನೆನಪು

ನಾನು ಸುಶ್ ನಮ್ಮ ಹಾಸ್ಟಲೆಂಬ ಜೈಲಿನಲ್ಲಿ ನನ್ನ ರೂಮಿನ ಮುಂದಿನ ಕಿಟಕಿಯ ಬಳಿ ಬುಕ್ಕು ಪೆನ್ನು ಹಿಡಿದುಕೊಂಡು ಕುಳಿತಿದ್ದೆವು. ಮನೆಯಂಗಳದಲ್ಲೊಂದು ಸಾಹಿತ್ಯ ಸಂಜೆ ಎಂಬ ಕಾರ್ಯಕ್ರಮದ ರಿಪೋರ್ಟು ಮಾಡೊಕ್ಕಿತ್ತು.. ಜರ್ನಲಿಸಮ್ ಮೇಡಂ ಅಸೈನ್ಮೆಂಟ್ ಕೊಟ್ಟಿದ್ದರು. ಸುಶ್ ಬರೆಯೋಕ್ಕೆ ಶುರು ಮಾಡಿದ್ದಳು ನಾನು ಕಿಟಕಿಯಂದ ಕಾಣುವ ನಮ್ಮ ಕಾಲೇಜನ್ನೇ ನೋಡುತ್ತಾ ಕುಳಿತ್ತಿದ್ದೆ. ಸುಶ್ ಮಳೆ ಅಂದ್ರೆ ಏನನ್ನಿಸುತ್ತೆ ನಿಂಗೆ ಅಂತ ಕೇಳ್ದೆ ಅವಳು ಸುಮ್ನೆ ನನ್ನ ದುರುಗುಟ್ಟಿಕೊಂಡು ನೋಡಿ ಮತ್ತೆ ಬರೆಯೊದನ್ನ ಮುಂದುವರೆಸಿದಳು."ಇವಳಿಗೊಂದು ಮಳೆ ಹುಚ್ಚು" ಅಂತ ಗೊಣಗಿದ್ದು ಕೇಳಿಸಿತು.


ಕಡಲೂರಿನ ಮಳೆ ವಿಚಿತ್ರ .ನಮ್ಮೂರಲ್ಲಿ ಚಂದ, ಮಳೆ ಬರೋಕ್ಕೆ ಶುರುವಾದರೆ ಪೂರ್ತಿ ನಿಂತಿತು ಅಂತ ಹೇಳೋಕ್ಕಾಗಲ್ಲ ಸಣ್ಣಗೆ ಉದುರುತ್ತಾನೇ ಇರುತ್ತೆ.ಇಲ್ಲಿ ವಿಚಿತ್ರ ಸೂಚನೆಯನ್ನೇ ಕೊಡದೆ ದಬ ದಬ ಅಂತ ಸುರಿದು ಮತ್ತೆ ನಿಂತೇ ಹೋಗುತ್ತೆ ಅದರ ಘಮವನ್ನೂ ಉಳಿಸದೆ.

ನಮ್ಮೂರ ಮಳೆ ಅಮ್ಮ ಮಾಡೋ ಕಾಫಿ ಥರ; ಬೆಳಗ್ಗೆ ಆರು ಮೂವತ್ತಕ್ಕೆ ಸ್ವಲ್ಪವೇ ಸ್ವಲ್ಪ ಒಂದು ಅರ್ಧ ಹಿಡಿಯಷ್ಟು ಕಾಫಿ ಬೀಜವನ್ನು ಹುರಿದು, ಅದನ್ನ ಪುಡಿ ಮಾಡುವ ಬಿಳೀ ಮಿಷಿನ್ನಿಗೆ ಹಾಕಿ ಟರ್ರ್ ಅನ್ನಿಸುತ್ತಿರುವಾಗಲೇ ಮನೆಯೆಲ್ಲಾ ಹಿತವಾಗಿ ಹರಡಿದ ಕಾಫಿಯ ಘಮ ಅದನ್ನ ಕುದಿಯೋ ಸಕ್ಕರೆ ನೀರಿಗೆ ಹಾಕಿ, ಸೋಸಿ, ಆಗಷ್ಟೇ ಹಾಲಿನವನು ತಂದ ಹಾಲನ್ನು ಕಾಯಿಸಿ ಅದನ್ನ ಡಿಕಾಕ್ಷನ್ನಿಗೆ ಸೇರಿಸಿ ಕುಡಿಯಲು ಕೊಟ್ಟ ಹಾಗೆ.. ಮಳೆ ಬರುವ ಮುಂಚೆಯೂ ಬಂದ ಮೇಲೂ ಹಿತವಾಗಿ ಹರಡಿದ ಮಳೆಯ ವಾತಾವರಣ, ಥೇಟ್ ಅಮ್ಮನ ಕಾಫಿಯೇ ಕುಡಿಯೋ ಮುಂಚೆಯೂ ಕುಡಿದ ಮೇಲೂ ಹಿತವೆನಿಸುವ ಅದರ ರುಚಿಯಂತೆ.


ಈ ಯೋಚನಾ ಲಹರಿಯನ್ನು ತುಂಡರಿಸಿದ್ದು ಸೂಚನೆಯನ್ನೇ ಕೊಡದೆ ಸುರಿಯಲು ಶುರುವಾದ ಮಳೆ ಸುಶ್ ನನ್ನ ನೊಡಿ ಮುಗುಳ್ನಕ್ಕಳು. ನಮ್ಮ ಕಾಲೇಜು ಮಳೆಯಲ್ಲಿ ನೆನೆಯುತ್ತಿತ್ತು.ತಂಗಾಳಿಯ ಜೊತೆ ಚುರುಚೂರೇ ಕಿಟಕಿಯೊಳಕ್ಕೆ ನುಗ್ಗುತ್ತಿರುವ ಮಳೆಯ ಹನಿಗಳು ಹಿತವಾಗಿ ನಮ್ಮಿಬ್ಬರನ್ನೂ ಒದ್ದೆಯಾಗಿಸುತ್ತಿತ್ತು.. ಸುಶ್ ಪುಸ್ತಕ ಮುಚ್ಚಿಟ್ಟು ಏನೋ ಯೊಚಿಸತೊಡಗಿದಳು...


ಮಳೆ ಅಂದ್ರೆ ನೆನಪು. ಮಳೆ ನೆಲವನ್ನು ಅಪ್ಪಿ ಚಿಮ್ಮುತ್ತಿದ್ದರೆ, ನನ್ನೊಳಗಿನ ನೆನಪಿನ ಪುಟಗಳು ಒಂದೊಂದಾಗಿ ಬಿಚ್ಚಿಕೊಳ್ಳಲು ಶುರು. ತಾತನ ಮನೆ ನೆನಪು, ಮಳೆ ಬೀಳುತ್ತಿದ್ದಂತೆಯೇ ಉರಿನಲ್ಲಿ ಮನೆ ಮುಂದೆ ಹರಡಿರುವ ಅಡಕೆಯನ್ನೆಲ್ಲಾ ಆ ದೊಡ್ಡ ದೊಡ್ಡ ಗೋಣಿ ಚೇಲದ ಸಮೇತ ಒಳಗೆ ತೆಗದುಕೊಂಡು ಹೋಗುವ ಚಿಕ್ಕಮ್ಮ, ಸರ ಸರನೆ ಓಡಿ ಬಂದು ಅವಳ ಜೊತೆ ಕೈ ಜೊಡಿಸುವ ಚಿಕ್ಕಪ್ಪ, ಆಗಿನ ಗಡಿಬಿಡಿ, 'ಹಾಳು ಮಳೆ' ಎಂದು ಸುಮ್ಮನೆ ಬಯ್ಯುವ ಪಾಟಿ(ಅಜ್ಜಿ), ಮಳೆಯಲ್ಲಿ ಒದ್ದೆಯಾಗುತ್ತಿರುವ ತನ್ನ ಹದಿನಾರು ಮೊಳದ ಸೀರೆಯನ್ನು ತೆಗೆಯಲು ಬರುತ್ತಿರುವ ಎದುರು ಮನೆಯ ಶೇಶಮ್ ಪಾಟಿ, ಮಳೆ ಶುರುವಾಗುತ್ತಿದ್ದಂತೆಯೇ ಕಾಫಿಗೆ ಹವಣಿಸುವ ಅಜ್ಜ,ಇವನ್ನೆಲ್ಲಾ ಪ್ರತೀ ವರ್ಷವೂ ಹೊಸದು ಎನ್ನುವಂತೆ ನೋಡುವ ನಾವು.....

ಏನೋ ಯೋಚಿಸುತ್ತಿದ್ದವಳು, ಹ್ಮ್ ಮ್ ಮ್.. ಎಂದು ನಿಟ್ಟುಸಿರು ಬಿಡುತ್ತಾ "ಮಳೆ ಅಂದ್ರೆ ನೆನಪು." ಅಂದಳು ಸುಶ್. ನಾನು ಸುಮ್ಮನೆ ನಕ್ಕೆ....

Tuesday, August 21, 2007

ಅಮ್ಮಾ.. ನಿನ್ನ ಎದೆಯಾಳದಲ್ಲಿ..

ಉಹೂಂ, ಅಪ್ಪನ ಮುಖ ನೆನಪಿಲ್ಲ ನನಗೆ ನನಗೆ ನೆನಪಿರೋದೆಲ್ಲ ಬರೀ ಇಷ್ಟೆ ಅಮ್ಮ ಕೆಂಪು ಸೀರೆ ಉಟ್ಟುಕೊಂಡು ಒಂದು ಶವದ ಮುಂದೆ ಕೂತಿರೋದು (ಅದು ಶವ ಅಂತಾನೂ ಗೊತ್ತಿರಲಿಲ್ಲ ನಂಗೆ ಯಾರೋ ಮಲಗಿದಾರಲ್ಲ .. ಯಾಕೆ ಬೀದೀಲಿ ಮಲಗಿದಾರೆ ಅನ್ಕೊಂಡಿದ್ದೆ) ಮತ್ತೆ ಶೂನ್ಯವನ್ನು ದ್ರುಷ್ಟಿಸುವ ಅಮ್ಮನ ಕಣ್ಣುಗಳು. ಎಲ್ಲರೂ ಅಳುತ್ತಿದ್ದರು, ಅಮ್ಮನ ಕಣ್ಣು ಭಯವಾಗೊಷ್ಟು ಕೆಂಪಾಗಿತ್ತು. ಪ್ರಾಯಷಃ ರಾತ್ರಿಯೆಲ್ಲಾ ಅತ್ತಿರಬೇಕು. ಏನಾಗಿದೆ ಅಂತ ಗೊತ್ತಿರಲಿಲ್ಲ ನನಗೆ ಆದರೆ ಅಮ್ಮನಲ್ಲಿ ಆದ ಬದಲಾವಣೆ ನನಗೆ ಅಳು ತರಿಸಿತ್ತು.ಅಮ್ಮನ ಹತ್ತಿರ ಹೋಗೋಕ್ಕೆ ಬಿಟ್ಟಿರಲಿಲ್ಲ ನಮ್ಮನ್ನ
"ಈ ಮೂರು ವರ್ಷದ ಮಗೀಗೆ ನಿನ್ ಅಪ್ಪಜಿ ಸತ್ತ್ ಹೋಗೈತೆ ಅಂತ ಹೇಗ್ ಹೇಳಾದು?"
ಅಂತ ಅಜ್ಜಿ ದೊಡ್ಡ್ ದನಿ ಮಾಡಿ ಅಳೋಕ್ಕೆ ಶುರು ಮಾಡಿದ್ಲು ನನಗೆ ಭಯ ಆಗಿ ನಾನು ಮನೆಯಾಳು ಮಂಜನ ಹತ್ರ ಓಡೋಗಿದ್ದೆ
ಹ್ಮ್ಮ್ಮ್ಮ್ ಮ್ ಮ್... ಅಂತ ದೊಡ್ಡ ನಿಟ್ಟುಸಿರುಬಿಟ್ಟು ನಾನ್ಯಾವಾಗಲೂ ಇಷ್ಟೇ ನೆನಪುಗಳಲ್ಲೇ ಮುಳುಗಿ ಹೋಗಿರ್ತೀನಿ ಅವರು ಬರೋಷ್ಟೊತ್ತಿಗೆ ಬೀಟ್ರೂಟ್ ಪಲ್ಯ ಮಾಡಿಟ್ಟಿರಬೇಕು.ಇರೋ ಮೂರು ಜನಕ್ಕೆ ಎರಡು ಕೇಜಿ ಬೀಟ್ರೂಟ್ ತಂದಿಟ್ಟಿದಾರೆ ಬರೀ ಅದರದೇ ಪಲ್ಯ, ಸಾಂಬಾರು, ಗೊಜ್ಜು ಅಂತ ದಿನಾ ಮಾಡಿ ಹಾಕಬೇಕು. ಆವಾಗ ಬುದ್ದಿ ಬರುತ್ತೆ ಅಂದುಕೊಂಡು, ಅಡುಗೆ ಮನೆ ಕಡೆ ನೆಡೆದಳು.

ವಾಣಿ ಗ್ರುಹಿಣಿ ಮ್ ಸ್ ಸಿ ಮಡಿದಾಳೆ ಗಂಡ ಆರ್ ಬಿ ಐ ನಲ್ಲಿ ಮ್ಯಾನೇಜರ್. ದೊಡ್ಡ ಬ್ಯಾಂಕು, ದೊಡ್ಡ ಕೆಲಸ, ದೊಡ್ಡ ಸಂಬಳ. ಇವರಿಗೆ ಒಬ್ಬನೇ ಮಗ ರಾಘು. ವಾಣಿಗೆ ಅಮ್ಮ ತನ್ನ ಜೊತೇಲಿ ಇರಲಿ ಅನ್ನೋ ಆಸೆ ಆದರೆ ಅವಳ ಅಮ್ಮ ಮಾತ್ರ ತನ್ನ ಹಳ್ಳಿ ಮನೆಯೇ ಸ್ವರ್ಗವೆಂದುಕೊಂಡಾಕೆ. ಬೇಜಾರಾದಾಗ ವಾಣಿ ಮನೇಲಿ ಸ್ವಲ್ಪ ದಿನ ಇನ್ನೊಂದು ಸ್ವಲ್ಪ ದಿನ ವಾಣಿ ಅಕ್ಕ ವೀಣನ ಮನೇಲಿರ್ತಾರೆ.


ವಸುದಕ್ಕನ ಮದುವೆ ದಿನದ ಚಿತ್ರ ಇನ್ನೂ ಕಣ್ಣಲ್ಲಿ ಕಟ್ಟಿದಂತಿದೆ ಅವಳ ಅಮ್ಮ ಸತ್ತ ಮೇಲಲ್ಲವೆ ನಮ್ಮಮ್ಮ ಎರಡನೇ ಹೆಂಡತಿಯಾಗಿ ಆ ಮನೆ ಸೇರಿದ್ದು. ಅವಳೂ 'ಅಮ್ಮ' ಎಂದೇ ಕರೆಯುತ್ತಿದ್ದಳು ಆದರೆ ಅತ್ತೆ ,ಅಜ್ಜಿ, ಎಲ್ಲರೂ ಸೇರಿಕೊಂಡು ಅವಳ ಮದುವೆಯ ಯಾವ ಕೆಲಸಕ್ಕೂ ಕರೆಯದೆ ದೂರ ಇಟ್ಟಿದ್ದರು. ಮದುವೆಗೆ ಕರೆಯುವ ಯೋಚನೆಯನ್ನೂ ಮಾಡಿರಲಿಲ್ಲ ಅವರು ಅವಳ ಮದುವೆಯ ಓಲಗದ ಸದ್ದು ಬಸ್ಸ್ಟಾಂಡಿನಲ್ಲಿ ಮಂಗಳಜ್ಜಿ ಮನೆಗೆ ಹೋಗಲು ಬಸ್ಸಿಗೆ ಕಾಯುತ್ತ ಕುಳಿತಿದ್ದ ನಮಗೆ ಕೇಳಿಸುತ್ತಿತ್ತು. ನಾನು ಜೋರಾಗಿ ಅಳುತ್ತಿದ್ದೆ, ನನಗಿಂತ ಎರಡೇ ವರ್ಷಕ್ಕೆ ದೊಡ್ಡವಳಾದ ವೀಣ ವಯಸ್ಸಿಗೆ ಮೀರಿದ ಅರಿವನ್ನು ಮುಖದಲ್ಲಿ ಹೊತ್ತು ಮೌನವಾಗಿ ಕುಳಿತಿದ್ದಳು.ಅಮ್ಮನ ಕಣ್ಣು ಮತ್ತದೇ ಶೂನ್ಯದೆಡೆಗೆ...


ಗಂಗಜ್ಜಿ ಹೆಸರೇ ಒಂದು ನಡುಕ ಇಡೀ ಊರಿಗೆ ಊರೇ ಹೆದರುತ್ತಿತ್ತು ಈ ಹೆಸರಿಗೆ. ಗಂಗಜ್ಜಿಯಂತಹ ಅತ್ತೆ ಸಿಗುತ್ತಳೆ ಅಂತ ಗೊತ್ತಿದ್ದರೂ ಮಂಗಳಜ್ಜಿ ತನ್ನ ಪ್ರೀತಿಯ ಕೊನೇ ಮಗಳನ್ನು ಹೇಗೆ ಅವರ ಮನೆಗೆ ಕೊಟ್ಟರು ಅದೂ ಎರಡನೇ ಸಂಭಂದಕ್ಕೆ? ಶ್ರೀಮಂತರ ಮನೆ ಅಂತಲ? ಸೆರೆಮನೆ ಆದರೂ ಪರವಾಗಿಲ್ಲ ಬಂಗಾರದ್ದಲ್ಲವ ಅನ್ನೋ ಸ್ವಭಾವವ?
ನಿಮ್ಮ ಅಪ್ಪ ಎಂದರೆ ಗಂಡು ಗಂಡು ದೊಡ್ಡಪ್ಪ ಯಾವುದ್ದಕ್ಕೂ ಲಾಯಕ್ಕಿಲ್ಲ ಅನ್ನುತ್ತಿದ್ದರು ಊರಿನವರು ಯಾವುದೇ ಇತಿಮಿತಿ ಇಲ್ಲದೆ ಖರ್ಚು ಮಾಡುತ್ತಿದ್ದರಂತೆ ಅಪ್ಪ. ಗಂಗಜ್ಜಿಯಂತಹ ಗಂಗಜ್ಜಿ ಅಪ್ಪನಿಗೆ ಹೆದರುತ್ತ್ಹಿದ್ದಳಂತೆ.ತನಗೆ ಕಿಂಚಿತ್ತೂ ಹೆದರದ ಬಿಟ್ಟರೆ ತನ್ನನ್ನೇ ಹುರಿದು ತಿನ್ನುವಂತ ತನ್ನ ಮಗನ ಮೇಲೆ ಗಂಗಜ್ಜಿಗೆ ಅಸಾದ್ಯ ಸಿಟ್ಟು.
ಅವಳೇ ಅಪ್ಪನ ಮೊದಲನೇ ಹೆಂಡತಿಯನ್ನು ಸಾಯಿಸಿದ್ದು, ಆಮೇಲೆ ಅಪ್ಪನನ್ನೂ ಕೊಂದಳು. ನಾನು ಹುಟ್ಟಿದಾಗ ತಂದೆಗೆ ಆಗದ ನಕ್ಷತ್ರದಲ್ಲಿ ಹುಟ್ಟಿದಾಳೆ ಸಾಯಿಸಿಬಿಡಿ ಎಂದು ನನ್ನ ಕೊಲ್ಲಲು ಮಂಗಳಜ್ಜಿಯ ಮನೆಯವರೆಗೂ ಬಂದಿದ್ದಳಂತೆ. ಅಕ್ಕನ ಬಾಯಿಗೆ ಭಾರದ ಕಬ್ಬಿಣ ಹಾಕಿ ಅವಳು ಸಾಯುವ ಸ್ಥಿತಿ ತಲುಪಿ ಒದ್ದಾಡುತ್ತಿದ್ದರೂ ಸುಮ್ಮನೇ ಯಾವುದೇ ಭಾವನೆಗಳಿಲ್ಲದೆ ನೋಡುತ್ತಿದ್ದ ಅಜ್ಜಿಯನ್ನು ಕಂಡು ಮಂಜ ದಂಗಾಗಿದ್ದನಂತೆ, ಅವನು ಅ ದಿನ ಅಲ್ಲಿಲ್ಲದಿದ್ದರೆ ಅಕ್ಕ ಎಂದು ಕರೆಯಲೂ ಯಾರಿರುತ್ತಿರಲಿಲ್ಲ. ಅಜ್ಜಿಗೆ ಕೊಲೆ ಮಾಡುವುದು ಒಂದು fancy ಆಗಿಬಿಟ್ಟಿತ್ತಾ?



"ನಿಮ್ಮಪ್ಪ ರಾಜಪ್ಪ ಹೆಸರಿಗೆ ತಕ್ಕ ಹಾಗೆ ರಾಜನಂತೆ ಇರುತ್ತಿದ್ದ. ಬಿಳೀ ಪಂಚೆ, ಬಿಳೀ ಶರಟು, ಕೈಯಲ್ಲಿ ಪುಸ್ತಕ ಮತ್ತು ಪಂಚೆಯ ಗಂಟಿಗೆ ಸಿಗಿಸಿದ ಮಚ್ಚು ಅವನು ತೋಟದ ಕಡೆಗೆ ಹೊರಟ ಅಂದರೆ ಆಳುಗಳೆಲ್ಲಾ ಚುರುಕಾಗಿ ಕೆಲಸ ಮಾಡಲು ಶುರು ಮಾಡುತ್ತಿದ್ದರು. ಅವ್ನ ಗತ್ತೇ ಗತ್ತು"
ಎಂದು ಹೇಳುತ್ತಿದ್ದ ಪಕ್ಕದ ಮನೆ ಪದ್ಮಜ್ಜಿಯ ಮಾತುಗಳಿಂದ ಅಪ್ಪ ಹೇಗಿದ್ದಿರಬಹುದು ಎಂದು ತುಂಬ ಸಾರಿ ಕಲ್ಪಿಸಿಕೊಂಡಿದ್ದೇನೆ... ಅಪ್ಪ ಇರಬೇಕಿತ್ತು.....



ಆಸ್ತಿ ಭಾಗ ಮಾಡೋವಾಗ ಮಾವ ಸಹಾಯಕ್ಕೆ ಬಂದ್ದಿದ್ದ ಅನ್ನೋದೆನೋ ನಿಜ, ಆದರೆ ಆಮೇಲೆ ಅವನೂ ಅತ್ತೆಯೂ ಸೇರಿಕೊಂಡು ಗುಕ್ಕುಗುಕ್ಕಾಗಿ ನಮ್ಮ ಆಸ್ತಿಯನ್ನು ತಿನ್ನುತ್ತಿದ್ದುದು ಗೊತ್ತಾಗುತ್ತಿದ್ದರೂ, ಅಮ್ಮ ಏಕೆ ಸುಮ್ಮನಿದ್ದಳು ?ಗೊತ್ತಾಗುವುದಿಲ್ಲ."ಗಂಡು ದಿಕ್ಕಿಲ್ಲದ ಮನೆ ಅವನಾದರೂ ಒತ್ತಾಸೆಗೆ ಇರಲಿ ಅಂತ ಸುಮ್ಮನಿದ್ದೆ" ಅಂದಿದ್ದಳು ಬೇರೆ ಯಾವ ಕಾರಣವೂ ಹೊಳೆಯದೆ ನಿಜವಾದ ವಿಶಯವೆಂದರೆ ತನ್ನ ಅಣ್ಣನೆಂದರೆ ಸುಮ್ಮನೆ ಪ್ರೀತಿ ಅವಳಿಗೆ.ಅಣ್ಣನಿಗೆ ಏನೂ ಗೊತ್ತಗಲ್ಲ ಅತ್ತಿಗೆ ಹೇಳಿದಂಗೆ ಕುಣಿತಾನೆ ಪಾಪ ಅನ್ನೊ ನಂಬಿಕೆ ಅವಳದ್ದು ಆದರೆ ಮಾವ ಎಂಥವನೆಂದು ನನಗೆ ಗೊತ್ತಾಗುತ್ತಿತ್ತು ನಾನು ಇವತ್ತಿಗೂ ಮಾವನನ್ನು ಮಾತಾಡಿಸುತ್ತಿಲ್ಲ....



ಅಪ್ಪನ ಜೊತೆಯ ಐದು ವರ್ಷದ ದಾಂಪತ್ಯ ಜೀವನದಲ್ಲಿ ನೀನು ಸುಖವಾಗಿದ್ದೆಯ ಎಂದು ಕೇಳಿದರೆ ಅಮ್ಮ ಇಂದಿಗೂ ಉತ್ತರಿಸುವುದಿಲ್ಲ ಉತ್ತರ ಕೊಡದೇ ಇರುವುದೂ ಒಂದು ಉತ್ತರವೇ.. ಆದರೆ ನನಗೂ ಅಮ್ಮನ ಉತ್ತರ ಬೇಕಿಲ್ಲ.. ಈ ಪ್ರಶ್ನೆ ಕೇಳಿದ ನಂತರ ಮೌನವಾಗುವ ಅಮ್ಮ, ಇಪ್ಪತ್ತು ಇಪ್ಪತ್ತೆರೆಡು ವರ್ಷ ಹಿಂದಕ್ಕೆ ಹೋಗುವ ಅವಳ ಯೋಚನೆ, ಅವಳ ಮೌನದಿಂದ ವಿಸ್ತರಿತವಾಗುವ ನನ್ನ ಕಲ್ಪನೆ ಇಷ್ಟ ನನಗೆ ಎಂದುಕೊಳುತ್ತಾ ಸಾರು ಕುದಿಯುವುದನ್ನೆ ನೋಡುತ್ತಿದ್ದಳು.


ನಮ್ಮಿಬ್ಬರ ಓದಿನ ಪ್ರತಿ ಹಂತದಲ್ಲೂ ಅಮ್ಮ ಖುಷಿಯಾಗಿ ಪಾಲ್ಗೊಂಡಿದ್ದಾಳೆ. ಅಕ್ಕನ ಮದುವೆಯಲ್ಲೂ ಅವಳ ಕಣ್ಗಳು ಖುಷಿಯಿಂದ ಅರಳಿದ್ದವು, ಆದರೆ ನನ್ನ ಮದುವೆಯ ಸಿದ್ದತೆಗಳನ್ನು ಆಸಕ್ತಿಯಿಂದ ಮಾಡುತ್ತಿದ್ದವಳು ಮದುವೆಯ ದಿನ ಸುಮ್ಮನಾಗಿಬಿಟ್ಟಿದ್ದಳು. ಯಾವುದರಲ್ಲೂ ಆಸಕ್ತಿ ಇರದ ಹಾಗೆ ಇದ್ದಳು,.. ಕಡೇ ಪಕ್ಷ ನನ್ನ ಕಳಿಸಿಕೊಡುವಾಗ ಕೂಡ ಅಳಲಿಲ್ಲ ಕಣ್ಣು ಶೂನ್ಯದೆಡೆಗೆ...
ಅಮ್ಮ ಯಾಕವತ್ತು ಹಾಗಿದ್ದೆ ಅಂದರೆ ತುಂಬ ಹೊತ್ತಿನ ನಂತರ ಇದಕ್ಕೂ ಉತ್ತರ ಕೊಡುವುದಿಲ್ಲವೇನೋ ಅಂದುಕೊಳುತ್ತಿದ್ದಾಗ ನಿಧಾನವಾಗಿ ಹೆಳಿದಳು
"ನಿಮ್ಮಪ್ಪ ಇದ್ದಾಗ ಅಂಥವರನ್ನು ಅರ್ಥಮಾಡಿಕೊಳ್ಳಬೇಕೆಂಬ ಕನಸಿತ್ತು, ಅವರು ಸತ್ತಾಗ ಎಲ್ಲ ಶೂನ್ಯ ಅನ್ನಿಸುತ್ತಿತ್ತು. ಆದ್ದರೆ ನಿಮ್ಮನ್ನು ಚೆನ್ನಾಗಿ ಓದಿಸುವ ಕನಸು ಕಟ್ಟಿಕೊಂಡೆ. ನಿಮ್ಮ ಓದಾದಮೇಲೆ ನಿಮ್ಮಗಳ ಮದುವೆಯ ಕನಸು, ನಿನ್ನ ಮದುವೆಯಾದ ಮೇಲೆ ಮತ್ತೆ ಶೂನ್ಯಕ್ಕೆ ಹಿಂತಿರುಗಿದೆ. ನಿಮಗಾಗಿ ನನ್ನ ಜೀವನ ಮುಡುಪಿಟ್ಟೆ ಅನ್ನೊ ಬೊಗಳೆ ಮಾತು ಹೇಳೊಲ್ಲ ನಾನು. ಬದುಕೊಕ್ಕೆ ಕನಸು ಬೆಕಿತ್ತು. ನಿಮ್ಮಗಳ ಭವಿಷ್ಯದ ಕನಸು, ಸುಖದ ಕನಸು, ನಿಮ್ಮ ಸುಖ-ದುಃಖ, ಆಸೆ, ಅಚ್ಚರಿ, ಅಳು, ಪ್ರತಿಯೊಂದನ್ನೂ ನನ್ನ ಜೊತೆಗೇ ಹಂಚಿಕೊಳ್ಳುತ್ತಿದ್ದಿರಿ 'ನನ್ನ ಬಿಟ್ಟರೆ ನಿಮಗೆ ಇನ್ಯಾರೂ ಇಲ್ಲ' ಅನ್ನೋಭಾವನೆಯೇ ಖುಷಿ ಕೊಡುತ್ತಿತ್ತು ನಂಗೆ. ಆದರೆ ನೀನು ಮದುವೆಯಾಗಿ ಹೋದಾಗ ಎಲ್ಲ ಕಳಕೊಂಡ ಭಾವ ನಿನ್ನ ಮದುವೆ ಸಮಯದಲ್ಲಿ ಕವಿದ ಶೂನ್ಯ ಭಯಂಕರವಾದದ್ದು ನನಗೆ ಬದುಕೋಕ್ಕೆ ಬೇರಾವ ಕನಸುಗಳೂ ಇಲ್ಲ ನನ್ನ ಮೇಲೆ ಯಾರೂ ಅವಲಂಬಿತವಾಗಿಲ್ಲ ಅನ್ನೊ ವಾಸ್ತವ ಕಣ್ಣೆದುರಿಗೆ.....

ಅಂದಿದ್ದಳು ಅಂದುಕೊಳ್ಳುತ್ತಿದ್ದಾಗ ರಾಘವ ಧಡಾರಂತ ಬಾಗಿಲು ತಳ್ಳಿಕೊಂಡು ಒಳಗೆ ಬಂದು ಶೂಸು ಬಿಚ್ಚುತ್ತಾ ಅವನ ಸ್ಕೂಲಿನಲ್ಲಿ ನೆಡೆದುದ್ದನ್ನು ವರದಿ ಒಪ್ಪಿಸಲು ಶುರುಮಾಡಿದಾಗ, ಅವಳು ತನ್ನ ಆಲೊಚನೆಯ ಸರಣಿಯಿಂದ ಹೊರಬಂದು ಅವನ ಮುದ್ದು ಮಾತುಗಳಲ್ಲಿ ಮುಳುಗಿಹೋದಳು.

Sunday, August 12, 2007

ವನಸಿರಿಯ ಮಗಳು

ಯಾರೂ ಓಡಾಡದಿದ್ದಲ್ಲಿ ಅವಳಿದ್ದಳು

ಜೊತೆಗೆ ಕಾವೇರಿಯ ಝರಿ

ಇವಳನ್ನು ಹೊಗಳಲು ಯಾರೂ ಇರಲಿಲ್ಲ

ಪ್ರೀತಿಸುವವರು ಇನ್ನ್ಯಾರು




ಅವಳ ಓಡಾಟವೆಲ್ಲಾ ಹಸಿರ ಬಳಿ

ಜೊತೆಗೆ ಬೆಚ್ಚಗಾಗುತಿಹ ಸೂರ್ಯ

ದನಿಗೂಡಿಸಲು ಕೋಗಿಲೆಗಳಿವೆ

ಅಲ್ಲಿ ಇನ್ನೆಲ್ಲಿಯ ಕ್ರೌರ್ಯ




ಅವಳ ಊಟ ಕಾಡು ಫಲ

ಕುಡಿಯುವುದು ಮಕರಂದ

ವನಸಿರಿಯ ಮಗಳಲ್ಲವೇ

ನೋಡಲು ಬಲುಚಂದ




ಎಲೆಯ ಮರೆಯ ಸಂಪಿಗೆ

ಕಣ್ಣಿಗೆ ಕಾಣದೆ ಅಡಗಿಹಳು

ರಾತ್ರಿಯ ಒಂಟಿ ನಕ್ಷತ್ರ

ಬೆಳ್ಳನೆ ಬೆಳಗುತಿಹಳು




ಅವಳಿದ್ದಳೆಂಬುದೇ ಕೆಲವರಿಗೆ ಗೊತ್ತಿದ್ದು

ಸತ್ತರೆ ಹೇಗೆ ತಿಳಿಯಬೇಕು;

ಅವಳೀಗ ಮಣ್ಣಲ್ಲಿ ಮಣ್ಣಾಗಿದ್ದಾಳೆ

ಸಂಕಟವನ್ನು ನಾನೆಲ್ಲಿ ಬಚ್ಚಿಡಬೇಕು!







ಇದು William Wordsworthನ She dwelt amoung the untrodden waysನ ಭಾವಾನುವಾದ ಆ poem ಹೀಗಿದೆ



She dwelt among the untrodden ways

Beside the springs of Dove;

A Maid whom there were none to praise

And very few to love



A violet by a mossy stone

Half hidden from the eye

Fair as a star when only one

Is shining in the sky



She lived unknown and few could know

When Lucy ceased to be

She is in her grave, and,Oh!

The difference to me

Wednesday, August 1, 2007

ಮರೆತು ಹೋದವಳು

ಕಣ್ಣೀರು ತಡೆಯಕ್ಕೆ ಆಗ್ತಾ ಇಲ್ಲ...

ಗಂಡಸರು ಅಳಬಾರದು ಅಂತಾರಲ್ವ?? 'ಮದುವೇಲಿ ಹುಡುಗಿ ಅತ್ತರೆ ಎನೇ ಕಾರಣ ಇದ್ದರೂ ತವರು ಮನೆ ಬಿಟ್ಟು ಹೋಗುತ್ತಿದ್ದಾಳೆ ಅಂತ ಅಳುತ್ತಿದ್ದಾಳೆ' ಅಂದುಕೊಳ್ತಾರೆ ಈ ಮದುವೆ ಆಗಿ ನಿನ್ನಿಂದ ದೂರ ಆಗ್ತಿದೀನಿ ಅಂತ ಗೊತ್ತಾದರೂ ದು:ಖ ಆಗಬಾರದ? ಅಳು ಬಂದರೆ ಏನು ತಪ್ಪು?

ಮೊದಲನೇ ಸಾರಿ ನಾನು ಸಾಗರ ಸಮ್ಮುಖದಲ್ಲಿ ನಿನ್ನೊಳಗಿಳಿದಾಗ ನಿನ್ನ ಬಿಳಿಗೆನ್ನೆಮೇಲಿದ್ದ ಕಣ್ಣೀರು, ಕೂಗಬಾರದೆಂದು ನೀನು ತುಟಿ ಕಚ್ಚಿದ್ದರಿಂದ ಜಿನುಗಿದ ರಕ್ತ, ನನ್ನ ಕಣ್ಣು ಚ್ಚುಚ್ಚುತ್ತಿದೆ.
ಹ್ಮ್ ಮ್... ನಿನ್ನ ಆಸೆಗಳೇ ಹಾಗೆ ನೀನು ಎಷ್ಟು ಹತ್ತಿರವಾಗಿ ಸಿಕ್ಕಿದ್ದೆ ನನ್ನ ರೂಮಿನಲ್ಲೇ ಆದರೆ ನನಗೆ ನಿನ್ನ ಕೈ ಮುಟ್ಟೊಕ್ಕೆ ಬಿಟ್ಟಿರಲಿಲ್ಲ ನೀನು ನಿನ್ನ ಸೇರಬೇಕೆಂದರೆ ಅದು ಕಡಲ ಮುಂದೆಯೋ, ಜಲಪಾತದೆದುರಿಗೋ, ಹರಿಯುವ ನದಿ ಪಕ್ಕದಲ್ಲೋ ,ಸುಡುವ ಬಂಡೆಗಲ್ಲ ಮೇಲೊ....

ಅವತ್ತು ನನ್ನ ಮನೆಯಲ್ಲಿ ನಾವಿಬ್ಬರೇ ನಾನು ನಿನ್ನ ಆಸೆಯಿಂದ ನೋಡುತ್ತಿದ್ದರೆ
"ಯಾವುದೊ ರೂಮಿನ ಮೂಲೆಯಲ್ಲಿ ನನ್ನ ಮೀಸಲು ಮುರಿಯೋಕ್ಕೆ ಇಷ್ಟ ಇಲ್ಲ. ಕಡಲೆಂದರೆ ಆಸೆ ನಂಗೆ, ನೀನು ಕಡಲೂರಿನವನು ಸಮುದ್ರದೆದುರಿಗೆ ಬೆಳ್ದಿಂಗಳ ರಾತ್ರಿಯಲ್ಲಿ ಕಡಲ ಶಬ್ಧ ಕೇಳುತ್ತಾ ನಮ್ಮಿಬ್ಬರ ಮಿಲನವಾಗಲಿ ನನಗೂ ಇನ್ನು ಹೆಚ್ಚು ವರ್ಷ ತಡೆಯೋಕ್ಕಾಗಲ್ಲ ವರ್ಷ 24ಆಯಿತು ಅಂದಿದ್ದೆ.

ನೀನು ಯಾವತ್ತೂ ಹೀಗೆ.. ನೇರ- ನೇರ. ನನ್ನ ಕಣ್ಣ ಬೇಡಿಕೆ ಅರ್ಥವಾಗುತ್ತಿತ್ತು ನಿನಗೆ.
"ಕಾಡು ಕುದುರೆ ಸವಾರಿಗೆ ಸಿದ್ದವೇ ಹುಡುಗ?" ಎಂಡು ಕೇಳಿ ಝಲ್ಲನೆ ನಗುತ್ತಿದ್ದೆ ಅಷ್ಟೇ ಬೇಗ ತೆಕ್ಕೆಗೆ ಬಂದು ಬಿಡುತ್ತಿದ್ದೆ.
ಕ್ರೂರಿ ನೀನು ಯಾಕೆ ಹೀಗೆ ನೆನಪಾಗ್ತಾ ಇದ್ದೀಯ?? ಪುರೋಹಿತರು ಗೊಣಗುತ್ತಾ ಇದ್ದಾರೆ ಸರಿಯಾಗಿ ಮಂತ್ರ ಹೆಳುತ್ತಿಲ್ಲ ನಾನು ಅಂತ. ನಿನ್ನ ನೆನಪುಗಳಿಂದ ಕಳಚಿಕಂಡು ಮಂತ್ರ ಪಠಿಸೋದಾದರೂ ಹೇಗೆ?

ನನ್ನ ಪಕ್ಕದಲ್ಲಿ ಕುಳಿತಿರುವ ಹುಡುಗಿ ಎಷ್ಟು ಸಪೂರ- ಸಪೂರ ಬಗ್ಗಿಸಿದ ಕತ್ತು ಎತ್ತಿಲ್ಲ ,ನೀನೇ ಇಲ್ಲಿದ್ದಿದ್ದರೆ ದಿಟ್ಟ ಕಣ್ಣುಗಳಿಂದ ನನ್ನೇ ನೋಡುತ್ತಿರುತ್ತಿದ್ದೆ.. ಆದರೆ ನೀ ಇಲ್ಲಿರಲು ಹೇಗೆ ಸಾಧ್ಯ?

ಅವತ್ತು ನೀನು ನನ್ನ ಭುಜದ ಮೇಲೆ ಗಲ್ಲವನ್ನಿಟ್ಟುಕೊಂಡು ಮುದ್ದುಮುದ್ದಾಗಿ
"ಜಲತರಂಗದ ಸದ್ದು ಇದಕ್ಕಿಂತ ಚೆನ್ನಗಿರುತ್ತಾ?"
ಅಂತ ಕೇಳಿದ್ದೆ ಜಿಂಕ್ ಶೀಟಿನ ಮೇಲೆ ಬೀಳುತ್ತಿದ್ದ ಮಳೆ ಸದ್ದು ಕೇಳುತ್ತ.. ನಿನ್ನ ತುಂಬಿದ ಬಿಳಿಗೆನ್ನೆ ಕಚ್ಚಿಹಾಕಬೇಕೆನಿಸಿತ್ತು ಆವಾಗ.

ನಿನ್ನಷ್ಟು ಚಂದದ ಹುಡುಗಿ ಸುಮ್ಮನೆ ನನ್ನ ಬಳಿ ಬಂದ್ದಾದರೂ ಹೇಗೆ? ಎಂದು ಯೋಚಿಸುತ್ತಿರುತ್ತೇನೆ ಬಹಳ ಸಲ, ಅಂತೆಯೇ ಏನೂ ಕಾರಣ ಕೊಡದೆ ನನ್ನಿಂದ ದೂರವಾದ ಮೇಲೂ...

ನಿಂಗೆ ಅವತ್ತಿನ ದಿನ ನೆನಪಿದೆಯ? ಎಂದಿನಂತೆ ಬೆಳದಿಂಗಳ ರಾತ್ರಿಯಲ್ಲಿ ಕಡಲೆದುರಿಗೆ ಕುಳಿತಿದ್ದೆವು ಭೊರ್ಗರೆಯುವ ಕಡಲೆದುರಿಗೆ ಮೌನ ದೇವತೆ ನೀನು. ಆದರೆ ಅವತ್ತು ಕೇಳಿದ್ದೆ

"ಈಗ ಕಡಲನ್ನು ನೋಡಿದ್ರೆ ಹೇಗನ್ನಿಸುತ್ತೆ ನಿಂಗೆ... "

"ಅದರ ಭೋರ್ಗರೆತ ಗಂಡಸಿನ ಆವೇಷದಂತೆ.." ಎನ್ನುವುದು ನನ್ನ ಉತ್ತರ..

ನೀನು ಸ್ವಲ್ಪ ಹೊತ್ತು ಸುಮ್ಮನಿದ್ದು ಮುಂದುವರಿದೆ

"ನಮ್ಮ ಕವಿಗಳು ನದೀನ ಹೆಣ್ಣಿಗೆ ಸಮುದ್ರನ ಗಂಡಸಿಗೆ ಹೋಲಿಸುತ್ತಾರೆ .ಪೌರಾಣಿಕ ಪುಸ್ತಕಗಳಲ್ಲಿ ಸಮುದ್ರ ರಾಜನ ಕಲ್ಪನೆ ಬರುತ್ತೆ...ಅದಕ್ಕೆ ನಾವೆಲ್ಲ ಸಮುದ್ರದ ಭೊರ್ಗರೆತದಲ್ಲಿ ಗಂಡಸಿನ ಆವೇಶ ಕಾಣುತ್ತೀವಿ. ಆದ್ರೆ ನಂಗೆ ಈ ಬೆಳ್ದಿಂಗಳ ರಾತ್ರಿಯಲ್ಲಿ ಕಡಲು ಹೆಣ್ಣಾಗಿ ಕಾಣ್ತಾಳೆ, ಅವಳ ನಗ್ನತೆಯನ್ನು ತನ್ನ ತೆಳು ಬೆಳ್ಳನೆ ಹೊದಿಕೆಯಿಂದ ಮುಚ್ಚಿದಾನೆ ಎನ್ನಿಸುವ ಚಂದ್ರ, ನಿದ್ದೆಯಲ್ಲಿ ಮಗ್ಗಲು ಬದಲಿಸುತ್ತಿರುವಳೋ ಎನ್ನುವಂತೆ ದಡ ಮುಟ್ಟುವ ಅಲೆಗಳು... "
ಅವತ್ತಿನಿಂದ ನನಗೆ ಕಡಲನ್ನು ಗಂಡೆಂದು ನೋಡಲು ಸದ್ಯವೇ ಆಗಿಲ್ಲ....

ನೀನು ಹೇಳದೇ ಕೇಳದೇ ನನ್ನ ಬಿಟ್ಟು ಹೋಗಿ ಐದು ವರ್ಷಗಳಾದರೂ ನಾನು ಬೇರೆಯವರನ್ನು ಮದುವೆಯಾಗಲು ಒಪ್ಪಿರಲಿಲ್ಲ ನಿನ್ನ ಬಂಗಾರು ಬಣ್ಣದ ಕಣ್ಣುಗಳು ನಿನ್ನನ್ನು ಮರೆಯಲು ಬಿಟ್ಟಿರಲಿಲ್ಲ...ಆದರೆ ಮದುವೆಯಾಗಲೇಬೇಕಿತ್ತು ನಿನ್ನ ಮರೆಯಲಾದರೂ ಈ ಹುಡುಗಿಯಲ್ಲಿ ನಿನ್ನ ಹುಡುಕುವುದಿಲ್ಲ ನಾನು. ನನಗೆ ಒಂದು ಮಾತೂ ಹೇಳದೇ ಹೋದವಳಿಗೆ ಇನ್ನೇನು ಶಿಕ್ಷೆ ಕೊಡಲಿ?

"ಸಂತು ನೆನಪು ಬರ್ತಾ ಇದೆ ಬೀಚ್ ಹತ್ರ ಹೋಗ್ತೀನಿ"
ಅಂತ ನಿನ್ನ ಸ್ನೇಹಿತೆಗೆ ಹೇಳಿ ಹೋದವಳು ಎಷ್ಟು ಹೊತ್ತಾದರೂ ವಾಪಸ್ಸು ಬಂದಿರಲಿಲ್ಲ ಅವಳು ಗಾಭರಿಗೊಂಡು ಫೊನ್ ಮಾಡಿದ್ದಳು ನಾನು ದಡಬಡಿಸಿ ಬೆಂಗಳೂರಿನಿಂದ ಓಡಿ ಬಂದಿದ್ದೆ... ನಮ್ಮ ಘಾಬರಿ ಧಾವಂತಗಳು ಕಡಲಾಳಡಲ್ಲಿ ನೆಮ್ಮದಿಯ ಚಿರನಿದ್ದೆಗೆ ಇಳಿದವಳಿಗೆ ಹೇಗೆ ಗೊತ್ತಾಗಬೇಕು ನೆನಪಾಗಿ ಕಾಡಬೇಡ ಇನ್ನು ನಿನ್ನವನಲ್ಲ ನಾನು....

Friday, July 6, 2007

ಮಳೆ-ನೆನೆಯುವ ಖುಷಿ

ಕಡಲೂರಿನಲ್ಲಿ ಅದ್ಭುತ ಮಳೆ.ಗುಡುಗಿನ ತಬಲಕ್ಕೆ ಸಿಡಿಲಿನ ನರ್ತನ ಗಾಳಿಯ ಹಿಮ್ಮೇಳದಲ್ಲಿ ಮಳೆಯ ಹಾಡು.

ನೀವು ಮಳೆಲಿ ನೆಂದಿದೀರಾ? ಅಯ್ಯೋ ಯಾರು ನೆಂದಿರೋಲ್ಲ ಎಲ್ಲ ನೆಂದಿರ್‌ತಾರೆ ಅನ್ನಬೇಡಿ.. ಒಂದೇ ಸಮನೆ ಸುರಿಯೋ ಮಳೆಲಿ, ಒಂದು ಅರ್ಧ ಗಂಟೆ ಬೇರೇನು ಮಾಡದೇ, ಕುಣಿದೆ, ಕಿರುಚದೆ ಸುಮ್ಮನೇ ಮಳೆ ಸದ್ದು ಕೇಳುತ್ತಾ ನೆಂದಿದೀರಾ? ಇಲ್ಲ ಅನ್ನೋದಾದರೆ ಈ ಮಳೆಗಾಲದಲ್ಲಿ ಚಾನ್ಸ್ ಬಿಡಬೇಡಿ. ಮಳೆ ಸುರಿಯೊಕ್ಕೆ ಶುರುವಾಯಿತ? ಮನೆಯಿಂದ, ರೂಮಿನಿಂದ, ಆಫೀಸಿನಿಂದ ಹೊರಗೆ ಬನ್ನಿ. ಆಕಾಶದಿಂದ ಮುತ್ತಾಗಿ ಬೀಳುತ್ತಿರುವ ಮಳೆಗೆ ಮೈ ಒಡ್ಡಿ ಖುಶಿ ಆಗ್ತಿದೆ ಅಲ್ಲವ? ಉಹೂo ಕಿರುಚಲೇಬಾರದು. ಮೋಡ ಮೌನ ಒಡೆದಿರುವಾಗ ನಿಮ್ಮ ಮಾತಿಗೆ ಬೆಲೆ ಇಲ್ಲ. ಸುಮ್ಮನೇ ಕೇಳಿ,ಸುರಿವ ಧಾರೆಯ ಶಬ್ಧವನ್ನ ಗಾಳಿಯ ಪಿಸುಮಾತನ್ನ.. ಛಳಿ ಆಗ್ತಿದೆಯಾ?? ಪರವಾಗಿಲ್ಲ ರೀ, ಮನಸ್ಸು ಬೆಚ್ಚಾಗಾಗುತ್ತಿದೆಯಲ್ಲ.. ಹೊಟ್ಟೆಯೋಳಗಿನಿಂದ ಇಷ್ಟಿಷ್ಟೇ ಚಿಮ್ಮುತ್ತಿರುವ ನಡುಕ ಎರಡೇ ನಿಮಿಷಕ್ಕೆ ಹತೋಟಿಗೆ ಬರುತ್ತದೆ. ಹೀಗೆ ಇಂಚಿಂಚಾಗಿ ವ್ಯಾಪಿಸುವ ನಡುಕ ನಿಮಗೆ ಮಳೆಯ ಹುಚ್ಚು ಹಿಡಿಸದಿದ್ದರೆ ಕೇಳಿ...

ಈ ಕನ್ನಡ, ಹಿಂದಿ ಚಲನಚಿತ್ರಗಳ ಬಗ್ಗೆ ನನ್ನದೊಂದು complaint ಇದೆ ಯಾವುದಾದರೂ ಭುತಾನೋ, ದೆವ್ವಾನೋ, ಕರಾಳ ರಾತ್ರಿಯ ಮಾಂತ್ರಿಕನನ್ನೋ, ಇಲ್ಲ ಯಾವುದಾದರೂ ಅಪಘಾತವಾನ್ನೋ ತೋರಿಸುವಾಗ ಕಂಪಲ್ಸರಿ ಮಳೆ ಬರ್ತಿರಬೇಕು. ಮಳೆ ಇಲ್ಲದಿದ್ದರೆ ಅಪಘಾತವೇ ಆಗೋಲ್ಲ, ಭೂತ ದೆವ್ವ ಬರೋಲ್ಲ ಅನ್ನೋ ಹಾಗೆ. ಇಂಥದನ್ನ ನೋಡಿದರೆ ಜನ ಮಳೆನ ಹೇಗೆ ಪ್ರೀತಿಸುತ್ತಾರೆ? ಮಳೆ ಅಂದ ತಕ್ಷಣ ಹೆದರಿಕೊಂಡು ಹೊದ್ದುಕೊಂಡು ಮಲಗುತ್ತಾರೆ ಅಷ್ಟೇ.

ಈ ಬಯಲುಸೀಮೆಯವರಿಗೆ ಮಳೆ ಅಂದರೆ ವಿಚಿತ್ರ ಭಯ. ಒಂದು ದಿನ ನಾನು ನನ್ನ ಸ್ನೇಹಿತೆಯರು(ಎಲ್ಲ ಬಯಲುಸೀಮೆಯವರು) ಅವರ ಉರಿನಲ್ಲಿ ಯಾವುದೋ ಚಂದದ ಕೆರೆ ಇದೆ ಅಂತ ಅದನ್ನ ನೋಡೋಕ್ಕೆ ಹೊರಟೆವು ಹತ್ತು ಹದಿನೈದು ನಿಮಿಷ ನೆಡೆದಮೇಲೆ 'ಕಾಡು-ಕಾಡು' ಅಂತ ಕೂಗೊಕ್ಕೆ ಶುರು ಮಾಡಿದರು. ನನಗೆ ದೂರದವರೆಗೂ ಕಾಡು ಕಾಣಿಸುತ್ತಿರಲಿಲ್ಲ ಇವರು ನೋಡಿದರೆ ಕಾಡು ಕಾಡು ಅಂತ ಕುಣೀತಿದಾರೆ.. "ಎಲ್ರೆ ಕಾಡು?" ಅಂದ್ರೆ ನೋಡು ಅಂತ ಒಂದಷ್ಟು ಪೊದೆ, ಹತ್ತು ಹದಿನೈದು ಮರ ಬೆಳೆದಿರುವ ಕಡೆ ಬೊಟ್ಟು ಮಾಡುತ್ತಿದ್ದರು.ಇವರನ್ನು ನೋಡಿ ನಗಬೇಕೋ ಅಳಬೆಕೋ ಗೊತ್ತಾಗಲಿಲ್ಲ ನನಗೆ.
ಹಾ ಎಲ್ಲಿಗೋ ಬಂದುಬಿಟ್ಟೆ ಸರಿ ಅಲ್ಲೇ ಪಕ್ಕದಲ್ಲಿದ್ದ ಕೆರೆ ಕಡೆ ಹೋಗುತ್ತಿದ್ದೇವೆ, ದಪ್ಪ ದಪ್ಪ ಹನಿಗಳು ಆಕಾಶದಿಂದ ಉದುರಲು ಶುರು. ಈ ಹುಡುಗೀರೆಲ್ಲ "ಅಯ್ಯೋ ಮಳೆ! ಬೇಗ ಬಾರೆ" ಅಂದುಕೊಂಡು ರೈಟ್ ಅಬೌಟ್ ಟರ್ನ್ ಅಂತ ಮನೆ ಕಡೆ ಒಂದೇ ಸಮ ಓಡಿದರು. ನನಗೆ ಕಕ್ಕಾಬಿಕ್ಕಿ. ನಾನು ಆರಾಮಾಗಿ ಮಳೆಲಿ ನೆಂದುಕೊಂಡು ನಾವೆಲ್ಲ ಉಳಿದುಕೊಂಡಿದ್ದ ನನ್ನ ಸ್ನೇಹಿತೆಯ ಮನೆ ಸೇರಿದೆ.
"ಯಾಕ್ರೆ ಹಂಗೆ ಓಡಿ ಬಂದ್ರಿ" ಅಂದ್ರೆ

"ಅಯ್ಯೋ ಮಳೆ ಬರೊಕ್ಕೆ ಶುರುವಾಯಿತು ಭಯ ಆಗೋಲ್ವಾ?" ಅಂದಳು ಶಿಲ್ಪ.

ಭಯ ಯಾಕೆ ಅಂದ್ರೆ, ಮಳೆ ಬಂದಾಗ ಕರ್ನಾಟಕದಲ್ಲಿ ಸತ್ತವರ ಕಥೆಗಳನ್ನೆಲ್ಲಾ ಬಿಡದೆ ಕೊರೆದಳು 'ಅತಿವೃಷ್ಟಿಯಿಂದ ಉಂಟಾಗುವ ಹಾನಿಗಳು' ಅಂತ ನಾನು ಪ್ರಭoದ ಬರೀಬಹುದೇನೋ ಅಷ್ಟು ಮಳೆಯಿಂದ ಆಗುವ ಹಾನಿಗಳ ಬಗ್ಗೆ ಇನ್ನೊಬ್ಬಳು ಹೇಳಿದಳು. ನಾನು "ಅದೆಲ್ಲ ಸರಿ ನಿಮ್ಮೂರಲ್ಲಿ ಮಳೆ ಬರೋದೆ ಅಪರೂಪ. ಅದು ಏನು ತುಂಬಾ ಜೋರಾಗಿ ಬರುತ್ತಿರಲಿಲ್ಲ ನಾನು ನೆಂದುಕೊಂಡು ಬಂದೆನಲ್ಲ ಏನಾಯ್ತು?" ಅಂದ್ರೆ ನೀನು ಬಿಡು ಅಂದಳು. ನೀನೊಂದು ಮೆಂಟ್ಲೂ ನಿಂಗೆನು ಹೇಳಿದ್ರು ಪ್ರಯೋಜನ ಇಲ್ಲ ಅನ್ನೋ ಅರ್ಥ.

ಸರಿ ಅದು ಬಿಡಿ ಎಲ್ಲಿದ್ಡೀವಿ? ಮಳೆಲಿ ನೆನಿತಾ ಇದ್ದೀವಿ. ತೃಪ್ತಿಯಾಗಿ ನೆಂದಾಯಿತ? ವಾಪಸ್ಸು ರೂಮಿಗೆ, ಮನೆಗೆ, ಬನ್ನಿ. ನೀವು ಆಫೀಸಿನಲ್ಲಿದ್ರೆ ದಯವಿಟ್ಟು ರಜ ಹಾಕಿ ಮನೆಗೆ ಹೋಗಿ. ಬೆಚ್ಚಗಿನ ಬಟ್ಟೆ ಹಾಕಿಕೊಳ್ಳಿ ನಂತರ ಒಂದು ಅತ್ಯದ್‍ಭುತವಾದ ಕಾಫಿ ಮಾಡಿಕೊಂಡು ಒಂದು ದೊಡ್ಡ ಬಟ್ಟಲಿಗೆ ಅದನ್ನ ಸುರಿದುಕೊಂಡು ಅದರ ಹಿತವಾದ ಬಿಸಿ ಮೈ ಮನಗಳನ್ನು ವ್ಯಾಪಿಸುವಂತೆ ತೊಟ್ಟು ತೊಟ್ಟಾಗಿ ಹೀರುತ್ತಿದ್ದರೆ ಅದೇನೋ ಹೇಳುತ್ತಾರಲ್ಲ.... ಸ್ವರ್ಗಕ್ಕೆ ಮೂರೇ ಗೇಣು.

Monday, June 11, 2007

ಕಾಣದ ಕಡಲಿಗೆ ಹಂಬಲಿಸುವ ಮನ. . .

ನನಗೆ ಅಹಂಕಾರ!

ನನಗೇ ಅಹಂಕಾರ! ಅದಕ್ಕೆ ಹೀಗಾಯ್ತು, ಅಂತ ಗಟ್ಟಿಯಾಗಿ ನನಗೆ ನಾನೇ ಕೇಳೋ ಹಾಗೆ ಹೇಳಿಕೊಂಡೆ.
ಭಾವ ಗೀತೆ ಕೇಳಿದ್ರೆ ಮನಸ್ಸಿಗೆ ಸಮಾಧಾನ ಆದ್ರೂ ಆಗುತ್ತೇನೋ ಅನ್ನಿಸಿ ಡಿ ವಿ ಡಿ ಪ್ಲೇಯರ್ ಆನ್ ಮಾಡಿದ್ರೆ ಮೊದಲಿಗೇ ಅವನಿಗಿಷ್ಟವಾದ ಹಾಡು - "ತೊರೆದು ಹೋಗದಿರು ಜೋಗೀ..ಅಡಿಗೆರಗಿಹ ಈ ದೀನಳ ಮರೆತು..."
ಸಿಟ್ಟು ಬಂದು ಮುಂದಿನ ಬಟನ್ ಅಮುಕಿದೆ. ಆದ್ರೆ ಆವನ ನೆನಪು ಬರುತ್ತೆ ಅಂತ ಆ ಹಾಡು ಕೇಳದೇ ಇರೋದು ಪಲಾಯನವಾದ. ಹಾಡು ಅವನದೇನು ಸ್ವತ್ತಲ್ಲವಲ್ಲ! ಒಂದು ಹಾಡು ಅವನ ನೆನಪು ತರಿಸಿ ನನ್ನ ವಿಚಲಿತಗೊಳಿಸುತ್ತೆ ಅನ್ನೋದು ಸುಳ್ಳು ಅನ್ನಿಸಿ, ಮತ್ತೆ ಹಿಂದಿನ ಬಟನ್ ಒತ್ತಿದಳು.

ಸಿಟ್ಟು ಯಾರ ಮೇಲೆ? ಅವನ ಮೇಲೋ?? ಅವನಿಗೆ ಅರ್ಥವಾಗದ ತನ್ನ ವ್ಯಕ್ತಿತ್ವದ ಮೇಲೋ??
ಇಷ್ಟು ವರ್ಷದ ಸ್ನೇಹದಲ್ಲಿ ಎಂತೆಂಥಾ ಕಷ್ಟದ ಗಳಿಗೆಯಲ್ಲೂ ಅವನು ನನಗೆ - ನಾನು ಅವನಿಗೆ ಆಸರೆಯಾಗಿದ್ದೀವಿ, ಒಬ್ಬರಿಗೊಬ್ಬರು ಸಮಾಧಾನ ಮಾಡಿದ್ದೀವಿ, ತುಂಬಾ ಭಾವುಕರಾಗಿ ಭಾವನೆಗಳನ್ನ ಹಂಚಿಕೊಂಡಿದ್ದೀವಿ, ಒಬ್ಬರಿಗೊಬ್ಬರು ವಾಸ್ತಾವಿಕತೆಯ ಪಾಠ ಹೇಳಿದ್ದೀವಿ, ಬದುಕನ್ನ ಸಮರ್ಥವಾಗಿ ರೂಢಿಸಿಕೊಳ್ಳೋದನ್ನ ಕಲಿತಿದ್ದೀವಿ ಅಂದುಕೊಳ್ಳುತ್ತಿದ್ದಾಗ.. "ಅಮ್ಮಾ.." ಅಂತ ಪುಟ್ಟಿ ಕರೆದಿದ್ದು ಕೇಳಿಸಿತು. ಅವಳು ಕಟ್ಟಿದ ಆಟದ ಮನೆ ನೋಡಿ ಇವಳ ತಂದೇನೋ ತಾಯಿನೋ ಸಿವಿಲ್ ಎಂಜಿನೀರ್ ಇರ್ಬೇಕು ಅನ್ನಿಸಿತು."ಚೆನ್ನಾಗಿದೆ ಕಂದ, ಆದ್ರೆ ಆ ಮರ ರಸ್ತೆ ಮಧ್ಯ ಇದೆ ಅನ್ಸುತ್ತೆ , ಮನೆ ಪಕ್ಕದಲ್ಲಿಡು" ಅಂದೆ.

ಮಗು ದತ್ತು ತೊಗೋತೀನಿ ಅಂದಾಗ ಮನೆಯವರೆಲ್ಲ ಎಷ್ಟು ಕೂಗಾಡಿದರು! ಅಪ್ಪ ಮಾತು ಬಿಟ್ಟರು .ಮದುವೆನೇ ಆಗದೇ ಮಗು ಹುಚ್ಚು ಯಾಕೆ ನಿಂಗೆ ? ಅಂತ ಅಮ್ಮ ಎಷ್ಟು ಬೈದರು.. ಇವನು ನನಗೆ ಒತ್ತಾಸೆಯಾಗಿ ನಿಲ್ಲದಿದ್ದರೆ ಮಗು ದತ್ತು ತೊಗೋಳಕ್ಕಾಗುತ್ತಿತ್ತ ನನಗೆ? ಅನ್ನೋದು ಜ್ಞಾಪಕಕ್ಕೆ ಬಂದು, "ಎಷ್ಟು ಒಳ್ಳೆಯವನಲ್ಲವ." ಅಂದುಕೊಂಡೆ.

ಮೊದಲೆಲ್ಲಾ ಎಷ್ಟು ಜಗಳ ಆಗಿದೆ! ಆವಾಗಲೆಲ್ಲ ಜಗಳದ ನಂತರದ ಮೌನ ರಾಜಿಗೆ ಹಾತೊರೀತಿತ್ತು. ಆದರೆ ಮೊನ್ನೆ ಮೌನವಾಗಿ ಅಕ್ಕಪಕ್ಕದಲ್ಲೇ ಅರ್ಧಗಂಟೆ ಕೂತಿದ್ವಲ್ಲ ! ಮೌನಾನೂ ಜಗಳ ಆಡ್ತಿದೆ ಅನ್ನಿಸಿ ಹಿಂಸೆ ಆಗ್ತಿತ್ತು ನಂಗೆ. ಅವನು ಅಲ್ಲಿಂದ ಎದ್ದು ಹೋಗಿ ಒಳ್ಳೆಯ ಕೆಲಸ ಮಾಡಿದ ಅನ್ನಿಸಿತು.

ಅವನು ಪುಸ್ತಕಗಳನ್ನು ತುಂಬಾ ಪ್ರೀತಿಸ್ತಿದ್ದ.. ಯಾವಾಗಲು ಶಾಪಿಂಗೂ, ಸಿನೆಮಾ ಅಂತ ತಿರ್ಗತಿರ್ತೀಯಾ ಈ ಪುಸ್ತಕ ಓದು ಅಂತ ಕಾರಂತರ 'ಬೆಟ್ಟದ ಜೀವ' ಕೈಯಲ್ಲಿಟ್ಟಿದ್ದ. ಆಮೇಲೆ ನಾನಂತೂ ಪುಸ್ತಕಗಳಲ್ಲೇ ಮುಳುಗಿ ಹೋದೆ. ಆಮೇಲೇನು ಪುಸ್ತಕಗಳ ಬಗ್ಗೆನೇ ಮಾತಾಡಿದ್ದು, ಭೈರಪ್ಪ, ಕಾರಂತ, ಬೀ ಜಿ ಎಲ್ ಸ್ವಾಮಿ, ಮಾಸ್ತಿ, ಗೊರೂರು, ಕುವೆಂಪು.. ಇವರುಗಳ ಮಧ್ಯಾನೇ ಓಡಾಡಿದ್ದು.

ಈಗ್ಯಾಕ್ ಹಿಂಗಾಡ್ತಿದಾನೆ? ದುಬೈ ನಿಂದ ಬಂದವನು ಸೀದ ನನ್ನ ಮನೆಗೆ ಬಂದ. ಅವನು ನನ್ನ ಕಡೆಗೆ ನೋಡಿದ ನೋಟದಲ್ಲೇ ಅನ್ನಿಸಿತು ನನ್ನ ಬಗೆಗೆ ಇರೋ ಭಾವ ಬಾರಿ ಸ್ನೇಹದ್ದ್ಡಾಗಿ ಉಳಿದಿಲ್ಲ, ಮತ್ತೆ ಅವನನ್ನು ಸ್ನೇಹದ ಟ್ರಾಕ್ಗೆ ತರೊಕ್ಕೆ ಎರಡು ದಿನ ಆದ್ರೂ ಬೇಕು ಅಂತ.

ಮಕ್ಕಳು ಅಂದರೆ ಅವನಿಗೆ ಪ್ರಾಣ. ತನ್ನ ಅಣ್ಣನ ಮಗು ಇನ್ನೂ ತೊಟ್ಟಿಲಲ್ಲಿರುವಾಗಲೇ ಎಷ್ಟು ಮಾತಾಡಿಸುತ್ತಿದ್ದ, ಆಟ ಆಡಿಸುತ್ತಿದ್ದ .. 'ಜನ ಗಣ ಮನ', 'ಸಾರೆ ಜಹಾನ್ಸೆ ಅಛ್ಚಾ' ಹೇಳಿ ಮಲಗಿಸುತ್ತಿದ್ದ ! ಇವನನ್ನು ಹೊರಗಡೆಯವರು ನೋಡಿದರೆ ಮೆಂಟ್ಲೂ ಅಂತ ಅಂದುಕೋತಿದ್ರು. ಯಾರಾದರೂ ಯಾಕೆ ಈ ಹಾಡು ಹಾಡಿ ಮಲಗಿಸುತ್ತೀಯ ? ಅಂದ್ರೆ "ಚಿಕ್ಕ ವಯಸ್ಸಿನಿದಲೇ ದೇಶ ಭಕ್ತಿ ಬರಲಿ" ಅಂತ ಅನ್ನುತ್ತಿದ್ದ.ಆದ್ರೆ ನನ್ನ ಹತ್ರ ಮಾತ್ರ 'ನಂಗೆ ಅವೆರೆಡು ಹಾಡು ಬಿಟ್ರೆ ಬೇರೆ ಯಾವ ಹಾಡು ಪೂರಾ ಬರೋಲ್ಲ ಕಣೆ' ಅಂದಿದ್ದ.ಅವರ ಅಣ್ಣನ ಮಗು ಅಂತೂ ಇವನನ್ನೇ ಅಪ್ಪ ಅನ್ನುತ್ತಿತ್ತು. ಈಗ ನನ್ನ ಮಗುನೂ ನನಗಿಂತ ಹೆಚ್ಚಾಗಿ ಅವನೇ ಪ್ರೀತಿಸುತ್ತಾನೆ ಅನ್ನಿಸುತ್ತೆ. ಪುಟ್ಟಿಯಂತೂ ಇವನನ್ನ ತುಂಬಾ ಹಚ್ಚಿಕೊಂಡುಬಿಟ್ಟಿದೆ . ಪುಟ್ಟಿನ ದತ್ತು ತಗೊಂಡಾಗ ಯಾವತ್ತೂ ಮಗುವಿಗೆ ತಾನು ದತ್ತು ಮಗು ಅನ್ನೋ ಭಾವನೆ ಬರದ ಹಾಗೆ ನೋಡಿಕೊ ಅಂತ ಭೋದಿಸಿದ್ದ.

ಈಗ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾನೆ ಇಲ್ಲ. ಅನ್ಯ ಮನಸ್ಕನಾಗಿ ಏನೇನೋ ಮಾತಾಡುತ್ತಿದ್ದ. ಅಲ್ಲಿನ ಮುಸ್ಲಿಮ್ ಗಂಡಸರ ಬಗ್ಗೆ, ಯಾವಾಗಲೂ ಬುರಖಾದಲ್ಲಿ ಮುಳುಗಿರೋ ಅವರ ಹೆಂಡತೀರ ಬಗ್ಗೆ, ಅಲ್ಲಿ ಚೀಪಾಗಿ ಸಿಗೋ ಚಿನ್ನದ ಬಗ್ಗೆ- ಹೀಗೆ ಏನೇನೋ... ನನಗೆ ಹಿಂಸೆ ಆಗುತ್ತಿತ್ತು. "ದಯವಿಟ್ಟು ಕಣೋ , ಅದೇನು ಮನಸ್ಸಿನಲ್ಲಿದೆಯೋ ಹೇಳು. ಸುಮ್ಮನೇ ಏನೇನೋ ಮಾತಾಡಬೇಡ ನೀ ನಾಟಕ ಮಾಡೋದನ್ನ ನನ್ನಕೈಲಿ ನೋಡಕ್ಕಾಗಲ್ಲ "ಅಂದೆ.

ಅವನಿಗೆ ದುಂಡು ಮಲ್ಲಿಗೆ ತುಂಬಾ ಇಷ್ಟ ಆಗೋದು. ಇನ್ನೂರು ಮುನ್ನೂರು ಗ್ರಾಂ ಬಿಡಿ ದುಂಡು ಮಲ್ಲಿಗೆ ತಂದು ಅತ್ತಿಗೆಗೆ ಕೊಟ್ಟು 'ಅತ್ತಿಗೆ ಹೂಕಟ್ಟಿ ದೇವರಿಗೆ ಇಟ್ಟು, ನೀವು ಮುಡುಕೊಳಿ, ಅಮ್ಮನಿಗೂ ಕೊಡಿ.' ಅಂತಿದ್ದನ್ನ ನಾನೇ ನೋಡಿದ್ದೆ. ಇನ್ನು ನನ್ನ ಮನೆಗೆ ಬಂದರೆ ಅವನೇ ದೇವರ ಮನೆಗೆ ಹೋಗಿ ಅಲ್ಲಿ ನಾನು ಹಾಕಿರೋ ರಂಗೋಲಿ ತುಂಬಾ ಸಾವಧಾನವಾಗಿ ದುಂಡು ಮಲ್ಲಿಗೆ ತುಂಬಿಸಿ 'ನೋಡೇ! ಎಷ್ಟು ಚೆನ್ನಾಗಿ ಕಾಣುತ್ತೇ ನಿನ್ನ ರಂಗೋಲಿ, ನನ್ನ ದುಂಡು ಮಲ್ಲಿಗೆ ಹೂವಿಲ್ಲ ಅಂದ್ರೆ ಚೆನ್ನಾಗಿ ಕಾಣೋದೇ ಇಲ್ಲ' ಅಂತ ತನ್ನ ಬೆನ್ನು ತಾನೇ ತಟ್ಟಿಕೊಂಡಿದ್ದ.

"ಮನೇಲಿ ಹುಡುಗಿ ಹುಡುಕ್ತಿದಾರೆ ಕಣೇ, ನಿನ್ನನ್ನ ಎಲ್ಲಿ ಕಳೆದುಕೊಂಡು ಬಿಡ್ತೀನೋ ಅಂತ ಭಯ ಆಗ್ತಿದೆ. ನಾನು ಮದುವೆ ಆದಮೇಲೆ ನಿನ್ನ ಜೊತೆ ಹೀಗೆ ಇರಕ್ಕಾಗುತ್ತಾ?? ಮನಸ್ಸು ಬಂದಾಗಲೆಲ್ಲ ನಿನ್ನ ಮನೆಗೆ ಬಂದು ಗಂಟೆಗಟ್ಲೆ ಮಾತಾಡಿ ಬದ್ನೇಕಾಯಿ ಬಜ್ಜಿ , ಅಕ್ಕಿ ರೊಟ್ಟಿ, ಆಲೂ ಪರಾಟಾ, ಚಿನೀಸ್ ನೂಡಲ್ಸ್ ಅಂತ ಅಡುಗೆಗಳಲ್ಲಿ ಎಕ್ಸ್ಪೇರಿಮೆಂಟ್ ಮಾಡೋಕ್ಕಾಗುತ್ತಾ?? ನಿನ್ನ ಮಗೂನ ಹೀಗೆ ಮುದ್ದುಗರೆಯೊಕ್ಕಾಗುತ್ತಾ?? "
ಅಂತ ನನ್ನ ಕಣ್ಣುಗಳಲ್ಲಿ ಉತ್ತರ ಹುಡುಕಿದ. ಆದರೆ ನನ್ನ ಕಣ್ಣುಗಳು ಪ್ರಶ್ನೆ ಕೇಳುತ್ತಿದ್ದವು.. ಎಷ್ಟು ಸರ್‍ರ್ ಅಂತ ಸಿಟ್ಟು ಹತ್ತಿತು ಅವನಿಗೆ.

" ನಿನಗೆ ಅಹಂಕಾರ ಕಣೆ ಯಾಕೆ ಎಲ್ಲದನ್ನು ನನ್ನ ಬಾಯಲ್ಲೇ ಹೇಳಿಸಬೇಕು ಅಂತೀಯ ಅರ್ಥಮಾಡ್ಕೋ ನನ್ನ! ಸರಿ. ನಾನೇ ಹೇಳ್ತೀನಿ ಕೇಳು, ಹೌದು ನಿನ್ನ ಪ್ರೀತಿಸುತ್ತೀನಿ ನಾನು ನೀನು ನಂಗೆ ಪೂರ್ತಿ ಪೂರ್ತಿಯಾಗಿ ಬೇಕು. ಮದುವೆ ಆಗ್ತೀಯಾ ನನ್ನ?" ಅಂದ.

ಮೂರು ವರ್ಷದ ಹಿಂದೆ ನಾನು ಇವನಿಗೆ ಕೇಳಿದ ಮಾತನ್ನು ನನಗೆ ವಾಪಸ್ಸು ಕೇಳ್ತಿದಾನೆ ಅನ್ನಿಸಿ ಅವನ ಮುಖ ನೋಡಿದೆ.
"ಅಪ್ಪ ಅಮ್ಮನ ಚಿಂತೆ ಮಾಡ್ಬೇಡ ನಿಮ್ಮ ಮನೆಯೊರನ್ನ ಒಪ್ಪಿಸೋ ಜವಾಬ್ದಾರಿ ನಂದು ಹೇಗಾದ್ರೂ ಮಾಡಿ ಒಪ್ಪಿಸುತ್ತೀನಿ" ಅಂದ .

ಅಪ್ಪ ಅಮ್ಮನ್ನ ಹೇಗಾದ್ರೂ ಮಾಡಿ ಒಪ್ಸಾಣ ಕಣೋ.. ನಾನು ಆವತ್ತು ಅಂದಿದಕ್ಕೆ -
"ಹೇಗೆ ಒಪ್ಪಿಸುತ್ತಿಯ? ನಿಮ್ಮ ಜಾತಿಯವರಿಗೂ ನಮ್ಮ ಜಾತಿಯವರಿಗೂ ನಾವೇ ಮೇಲೂ ಅನ್ನೋ ಹಮ್ಮೂ... ನಮ್ಮ ಮನೇಲಿ ಶಿವಾಪೂಜೆ ನಿಷಿದ್ಧ, ನಾವು ಶ್ರೀ ವೈಷ್ಣವರು ಅನ್ನೋ ಅಹಂಕಾರ.. ನಿಮ್ಮ ಮನೇಲಿ ಶಿವನನ್ನು ಬಿಟ್ಟರೆ ಇಲ್ಲ ಅನ್ನುತ್ತಾರೆ, ಲಿಂಗಾಯಿತರು ಬ್ರಾಹ್ಮಣರಿಗಿಂತ ಶ್ರೇಷ್ಠ ಅನ್ನೋ ಭಾವನೆ. ಹೇಗಾದ್ರೂ ಅಂದ್ರೆ ಹೇಗೆ? ಅಂತ ಯೋಚಿಸಿದ್ದೀಯ? ಅಪ್ಪ ಅಮ್ಮನಿಗೆ ನೂವು ಮಾಡೋದು ಬೇಡ"
ಮೂರು ವರ್ಷದ ಹಿಂದೆ ಅಂದದ್ದು ನೆನಪಾಗಿ ಅವನ ಕಂಗಳನ್ನೇ ದಿಟ್ಟಿಸಿದೆ.
"ನೀ ಹಾಗೆ ನನ್ನ ನೋಡಬೇಡ ಏನಾದ್ರೂ ಮಾತಾಡು ಏನ್ ತಿಳ್ಕೊಳ್ಳಲಿ ನಾನು" ಅಂದ.

ಮೊದಮೊದಲು ಅವನನ್ನು ತನ್ನ ಕಣಿವೆಯಾಳಕ್ಕೆ ಇಳಿಸಿಕೊಂಡ ಹೆಣ್ಣಿನ ಬಗ್ಗೆ ಹೇಳಿಕೊಂಡಾಗ ನನಗೇನಾದರೂ ಅನ್ನಿಸಿತ್ತಾ ?? ಅನ್ನಿಸಿದ್ದು ಒಂದೇ.. ಸಧ್ಯ ಇವನು ದುಡ್ಡು ಕೊಟ್ಟು ಯಾರ ಹತ್ತಿರವೂ ಹೋಗಲಿಲ್ಲವಲ್ಲ ಅಂತ.ಅವಳು ಅಮೇರಿಕನ್ ಆದ್ದರಿಂದ ಏನು ಅನ್ನಿಸಲಿಲ್ಲವ? ಅಂತ ಮತ್ತೆ ಕೇಳಿಕೊಂಡಳು. ಅವಳು ಇವನಿಗೆ "dont kiss me - ಪ್ರೀತಿ ಇಲ್ಲದಿರೊವಾಗ ಕಿಸ್ಸಿಂಗ್ ಬೇಕಿಲ್ಲ" ಅಂದಿದ್ದಳಂತೆ.


ಆದರೆ ಪ್ರೀತಿಯೇ ಇಲ್ಲದಿರೋವಾಗ ಅಂತಹ ಸಂಬಂಧ ಹೇಗೆ ಸಾಧ್ಯವಾಗುತ್ತೆ? ಅದೂ ಇಷ್ಟೆಲ್ಲಾ ಯೋಚಿಸೋ ಹುಡುಗನಿಗೆ ಅಂತಹ ಜರೂರತ್ತಾದರೂ ಏನಿತ್ತು ಅನ್ನಿಸಿತು. ಈ ಪ್ರಶ್ನೆಯನ್ನೇ ಕೇಳಿದ್ದಕ್ಕೆ-

"ಊಟಕ್ಕೆ ಕರೆದಿದ್ದಳು, ಹಾಗೆ ಈ ಊಟವನ್ನೂ ಮಾಡಿಸುತ್ತಾಳೆ ಅಂತ ಗೊತ್ತಿರಲಿಲ್ಲ. ಅವಳ ಅವತ್ತಿನ ಜರೂರತ್ತಿರಬಹುದು ನಾನು, ಇಲ್ಲ ಭಾರತದ ಗಂಡಸುತನ ಹೇಗಿರುತ್ತೆ ಅಂತ ನೋಡೋ ಆಸೆ ಇರಬಹುದು, ಅದೇನೇ ಆಗಲಿ ನಾನು ಪರಿಪೂರ್ಣ ಗಂಡು ಅನ್ನೋ ಭಾವನೆ, ಅಹಂಕಾರ ತರಿಸಿದ್ದೇ ಅವಳು" ಅಂದವನ ಮೇಲೆ ಭಯಂಕರ ಸಿಟ್ಟು ಬಂದಿತ್ತು.

"ಮಿಲನ ಅಂದರೇನೇ ಎರಡು ಒಂದಾಗೋದು. ಎರಡು ಒಂದರೊಂದರಲ್ಲಿ ಮಿಳಿತವಾಗೋದು. ಐಕ್ಯದಲ್ಲಿ ಅಹಂಕಾರಕ್ಕೆ ಅರ್ಥ ಎಲ್ಲಿ ನಾನು ವಿಜ್ರಂಭಿಸಿದೆ ಅನ್ನೋವಾಗಲೇ ಅಹಂಕಾರ ಬರೋದು ಮೇಲನ ಬರೀ ವಿಜ್ರಂಭಣೆ ಆದರೆ ಅದು ಮಹೋತ್ಸವವಾಗೋಲ್ಲ, ಬರೀ ಕಾಮ ಅನ್ನಿಸಿಕೊಳ್ಳುತ್ತೆ. ಮುಗಿಲು ಕಣಿವೆಯೊಳಕ್ಕೆ ಮಳೆಯಾಗಿ ಇಳಿಯುತ್ತೆ, ನೆಲವನ್ನು ತಣಿಸುತ್ತೆ, ತಣಿಸಿ ತಾನು ಸುಖಿಸುತ್ತೆ. ಕಣಿವೆಯನ್ನ ಮಳೆಯಿಂದ ತುಂಬಿಸಿ ವಿಜ್ರಂಭಿಸುತ್ತೇನೆ ಅನ್ನೋ ಹುಂಬತನಕ್ಕೆ ಇಳಿಯೋಲ್ಲ" ಅಂತ ಆವೇಶದಲ್ಲಿ ಮಾತಾಡಿದ ಮೇಲೆ, ಮಾತಾಡಿದ್ದು ಹೆಚ್ಚಾಯಿತೇನೋ,ಇವೆಲ್ಲ ಅನುಭವವಿಲ್ಲದ ಪುಸ್ತಕದ ಬದನೇಕಾಯಿಯಾಗಿರುವ ತನ್ನ ಮಾತುಗಳೇನೋ ಎಂದು ಅನ್ನಿಸಿದರೂ ಕಣ್ಣುಗಳಲ್ಲಿನ ಕಾನ್ಫಿಡೆನ್ಸ್ ಬಿಟ್ಟುಕೊಡದೇ ಅವನನ್ನೇ ದಿಟ್ಟಿಸುತ್ತಿದ್ದರೆ ಅವನೂ ತುಂಬಾ ಹೊತ್ತು ದಿಟ್ಟಿಸಿ-
"ನೀನು, ನಿನ್ನ ಮೊದಲ ಮಿಲನ ಮಹೋತ್ಸವದ ಬಗ್ಗೆ ಹೇಳುತ್ತೀಯ ಅದು ಆದಾಗ?? ಅಂದಿದ್ದ. ಧ್ವನಿಯಲ್ಲಿ ವ್ಯಂಗ್ಯವಿತ್ತಾ? ಗೊತ್ತಿಲ್ಲ..

"ತಿಂಗಳಿಗೆ ಒಂದು ಲಕ್ಷ ಸಂಬಳ, ಓಡಾಡೋಕ್ಕೆ ಕಾರು, ಇಂದ್ರನಗರದಲ್ಲಿ ಮನೆ, ದಿನದ ಇಪ್ಪತ್ತುನಾಲ್ಕು ಗಂಟೆ ಇಂಟರ್ನೆಟ್ಟು ಫೆಸಿಲಿಟಿ, ಎಲ್ಲದಕ್ಕಿಂತ ಹೆಚ್ಚಾಗಿ ನಿನ್ನ ಕನಸುಗಳನ್ನು ನನ್ನ ಕನಸಾಗಿಸಿಕೊಂಡಿರುವ ಮತ್ತು ಎಲ್ಲರಿಗಿಂತ ನಿನ್ನನ್ನು ಹೆಚ್ಚಾಗಿ ಅರ್ಥ ಮಾಡಿಕೊಂಡಿರುವ ನಾನು. ಇನ್ನೇನು ಬೇಕು ಹೇಳೇ ನಿಂಗೆ? ನಿನಗೂ ಬಹಳಷ್ಟು ಹುಡುಗರು ಸ್ನೇಹಿತರಿದ್ದಾರೆ , ಯಾರಾದರೂ ನನಗಿಂತ ನಿನ್ನ ಅರ್ಥಮಾಡಿಕೊಂಡೋರು ಇದ್ದಾರ? ಇದ್ದರೆ ಹೇಳು. ನಾವು ಒಂದು ದಿನ ಆದ್ರೂ ಒಬ್ಬರನ್ನೊಬ್ಬರು ಇಂಪ್ರೆಸ್ ಮಾಡೋಕ್ಕೆ ಪ್ರಯತ್ನಿಸಿದ್ದೀವ? ನೀನು ನೀನಾಗಿ ಬರಿ ವಸುಂಧರೆಯಾಗಿ, ನಾನು ನಾನಾಗಿ ಬರೀ ರಾಜೇಶನಾಗಿ ಇನ್ಯಾರ ಜೊತೆಗಾದರೂ ಇರೋಕ್ಕೆ ಸಾಧ್ಯವಾಗಿದೆಯಾ? "

"ನೀ ಪ್ರೋಪೋಸ್ ಮಾಡ್ತೀಡೀಯಾ?" ಅಂತ ನಾನು ಕೇಳಿದೆ

"ಇಲ್ಲ ಕಣೆ, ನಾಳೆ ನಮ್ಮ ಆಫೀಸಿನಲ್ಲ್ಲಿ ಭಾಷಣ ಇದೆ. ಅದಕ್ಕೆ ಪ್ರಾಕ್ಟೀಸ್ ಮಾಡ್ತೀದೀನಿ." ಅಂದವನಿಗೆ ಸಿಟ್ಟು ನೆತ್ತಿಗೇರಿತ್ತು.

ಆದರೆ ನನ್ನ ಬದುಕಿನ ದಾರಿಯೇ ಬೇರೆಯಲ್ಲವ? ನಾನು ಇವನನ್ನ ಮದುವೆಯಾದರೆ ಅತ್ಯದ್ಭುತ ದಂಪತಿಗಳು ಅನ್ನಿಸಿಕೊಳ್ಳಬಹುದು. ಇವನು ನನ್ನಲ್ಲಿ ಮುಳುಗಬಹುದು, ನಾನು ಇವನ ಬೆಚ್ಚನೆಯ ಆಸರೆಯಲ್ಲಿ ತೇಲಬಹುದು..ಆದರೆ ನನಗೆ ಬೇಕಾಗಿರೋದು ಏನು? ಎಲ್ಲ ಹುಡುಗಿಯರಂತೆ ಮದುವೆಯಾಗಿಬಿಡೋದ? ಛೇ ಎಲ್ಲರನ್ನು ಯಾಕೆ ತರಲಿ ! ಹೋಲಿಕೆಗಳನ್ನು ಮಾಡಿಕೊಳ್ಳಬಾರದು. ನಾನೇ ಹೆಚ್ಚು ಎಲ್ಲರಿಗಿಂತ ಅನ್ನೋ ಅಹಂಕಾರ ಬರುತ್ತೆ.. ಆದರೆ ನನಗೆ ಬೇಕಾಗಿರೋದೇನು? ಗೊತ್ತಾಗುತ್ತಿಲ್ಲ.. ಮದುವೆಯಂತೂ ಬೇಡ ಅನ್ನಿಸುತ್ತಿದೆ.. ಆದರೆ ಇದನ್ನು ಅವನಿಗೆ ವಿವರಿಸಲಾಗಲಿಲ್ಲ.

'ಇಲ್ಲ ನನಗೆ ಮದುವೆ ಬೇಡ' ಅಂದೆ. ಅವನೂ ಒಳಗೊಳಗೆ ಕುದ್ದು ಹೋಗುತ್ತಿರುವುದು ಗೊತ್ತಾಗುತ್ತಿತ್ತು . ಅರ್ಧ ಗಂಟೇ ಏನೂ ಮಾತಾಡಾದೇ "ನಿನಗೆ ಅಹಂಕಾರ!" ಎಂದಷ್ಟೇ ಹೇಳಿ ಎದ್ದು ಹೋದ. ನನಗೆ ಅಹಂಕಾರವೇ?
ಕೇಳಿಕೊಳ್ಳುತ್ತಿದ್ದೇನೆ ಪ್ಲೇಯರ್‌ನಲ್ಲಿ - ಕಾಣದಾ ಕಡಲಿಗೇ ಹಂಬಲಿಸಿದೇ ಮನಾ... ಅಂತ ಅಶ್ವಥ್ ರು ಹಾಡುತ್ತಿದ್ದಾರೆ.....

Tuesday, June 5, 2007

ಗಾಡಿ- ಪತ್ರ- ಮೊಬೈಲು..

ಕಾಲೇಜಿನಲ್ಲಿ ಎಂತದ್ದೋ ಕಾನ್ಫರೆನ್ಸು ನಮಗೆಲ್ಲ ಒಂದು ವಾರ ರಜೆ. ಮನೆಗೆ ಬಂದೆ . ಊಟ- ಮಾತು ಆದ ಮೇಲೆ ಅಪ್ಪ ಏನೇನು ಹೊಸದು ತಂದಿದ್ದಾರೆ ಅಂತ ಚೆಕಿಂಗ್ ಮಾಡಿದೆ. ಬಂದ ರಿಸಲ್ಟು ನಾಲ್ಕು ಸೀಡಿ, ಎರಡು ಪುಸ್ತಕ...

ಮೂರು ಸೀಡಿಗಳು ಶಾಸ್ತ್ರೀಯ ಸಂಗೀತದ್ದು. ನಾಲ್ಕನೆಯದು ಅಶ್ವಥರ ಸಂಗೀತದಲ್ಲಿ, ಕೆ.ಎಸ್.ನ ಅವರ ಮೈಸೂರು ಮಲ್ಲಿಗೆ! ನನಗೆ ಕುಣಿಯೋಷ್ಟು ಖುಷಿ.

ಬಳೆಗಾರ ಚೆನ್ನಯ್ಯ ಬಂದು, "ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು" ಅಂತ ಶುರು ಮಾಡಿ "ಹೋಗಿ ಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು ಅಮ್ಮನಿಗೆ ನಿಮ್ಮದೇ ಕನಸು" ಎಂದು ಮುಗಿಸುವಾಗ ನನಗೇ ದುಃಖ ಮಡುವುಗಟ್ಟಿತ್ತು. ರಾಯರಂತು ಹೆಂಡತಿಯನ್ನ ನೋಡೋಕೆ ತಕ್ಷಣ ಹೊರಟಿರಬೇಕು..


ತವರು ಮನೆಯ ಸುದ್ದಿ ತಿಳೀಯೋಕೆ ಕಾತುರಳಾಗಿರುವ ಮಗಳು .. ಮಗಳು ಮೊಮ್ಮೊಕ್ಕಳ ವಿಷಯವನ್ನ ಕೇಳೋಕೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ತಂದೆ ತಾಯಿ ..ಮದುವೆಯಾಗಿ ಬೇರೆ ಬೇರೆ ಊರು ಸೇರಿರುವ ಅಕ್ಕತಂಗಿಯರು, ಒಡಹುಟ್ಟಿದವರ ವಿಷಯವನ್ನ ತಿಳಿಯೋಕೆ ಪಡುವ ಧಾವಂತಗಳು... ದೂರದ ಊರಲ್ಲಿ ಓದುತ್ತಿರುವ ಮಗನ ಬಗ್ಗೆ ಚಿಂತಿಸುವ ಅಮ್ಮ, ಇವರಿಗೆಲ್ಲ ಆಗ - ಅಂದರೆ ತುಂಬಾ ಹಿಂದೆ ಊರಿಂದ ಊರಿಗೆ ಸುತ್ತಾಡುತ್ತಿದ್ದ ಈ ಬಳೆಗಾರರು ಅಥವ ಊರಿಗೆ ಯಾವುದೋ ಕೆಲಸದ ಮೇಲೆ ಬಂದಿರುವ ಆ ಊರಿನ ಜನ ಅಥವ ಆಳುಗಳು ಇವರುಗಳೇ ಸಂದೇಶವಾಹಕರು... messengers.

ಇವರುಗಳ ಬರವನ್ನ ಜನ ಹೇಗೆ ಚಾತಕ ಪಕ್ಷಿಯಂತೆ ಕಾಯುತ್ತಿರಬಹುದು ಅಂತ ಕಲ್ಪಿಸಿಕೊಂಡು, ನಾನೇ ಕಾಯುತ್ತಿರುವ ಹಾಗೆ ಅನ್ನಿಸಿ ರೋಮಾಂಚನವಾಗುತ್ತದೆ.. ಕಲ್ಪನೆಯೇ ಇಷ್ಟು ರೋಮಾಂಚನಗೊಳಿಸಿದರೆ ನಿಜವಾದ ಅನುಭವ ಹೇಗಿರಬಹುದು?

ಈಮೇಲ್ ಮೊಬೈಲ್ ಯುಗದವರಾದ ನಮಗೆ ಸಂದೇಶವಾಹಕರ ಬಗ್ಗೆ, ಗಾಡಿ ಪ್ರಯಾಣಗಳ (ಎತ್ತಿನ ಗಾಡಿ) ಬಗ್ಗೆ ಒಂದು ಕಲ್ಪನೆ ಹುಟ್ಟಿದರೆ ಅದಕ್ಕೆ ಕೆ.ಎಸ್.ನ ಅವರ ಕವಿತೆ, ಕುವೆಂಪು, ಬೈರಪ್ಪ, ಅನಂತಮೂರ್ತಿಯವರ ಕಾದಂಬರಿಗಳೇ ಕಾರಣ.. ನಮ್ಮ ಅಪ್ಪ ಅಮ್ಮಂದಿರೆ ಈ ಮೆಸ್ಸೆಂಜರ್ಸ್ನ ನೋಡಿಲ್ಲ. ಅವರದು ಪತ್ರಗಳು , ಟ್ರಂಕ್ ಕಾಲ್ ಗಳ ಕಾಲ...

ಪತ್ರಗಳು ಪರ್ವಾಗಿಲ್ಲ , ಅವು ಒಂಥರ exitementಏ! ನಮ್ಮಗಳಿಗೆ ಆ exitemenಟು ಇಲ್ಲ. ಹೋಗ್ಲಿ ನಾನು ಪತ್ರ ಬರೆದರೆ ನನಗೆ ಉತ್ತರ ಆದ್ರೂ ಬರೀಬೇಕಲ್ಲ ಅನ್ನಿಸಿ ಮೂರು ಜನ ಸ್ನೇಹಿತರಿಗೆ ಪತ್ರ ಬರೆದೆ. ಮೂರು ಜನಾನು ಫೋನ್ ಮಾಡಿ ನಿನ್ನ ಲೇಟರ್ ಸಿಕ್ಕಿತು ಅಂದ್ರು. ಒಬ್ಬಳು "ಸಕತ್ತಾಗಿ ಬರೀತಿಯ ಕಣೆ" ಅಂದ್ರೆ ಇನ್ನೊಬ್ಬ "ಏನು ಸೆಂಟಿಯಾಗಿ ಬರ್ದಿದೀಯಾ.. ಸ್ಕೂಲ್ ಡೇಯ್ಸ್ ನೆನಪು ಬಂತು" ಅಂದ!. ಮತ್ತೊಬ್ಬಳು "ಇದೇನೇ ಹೊಸಾ ಹುಚ್ಚು" ಅಂದಳು... ನನಗೆ ಒಂದಲ್ಲ ಒಂದು ಹುಚ್ಚು ಹಿಡಿದಿರುತ್ತೆ ಅನ್ನೋ ಇವರನ್ನೆಲ್ಲ ಕುಟ್ಟಿ ಹಾಕಬೇಕು ಅನ್ನಿಸಿತ್ತು.


ಭೈರಪ್ಪನವರ 'ಸಾರ್ಥ' ಓದಿದಾಗ, ಅಲ್ಲ ಅದಕ್ಕಿಂತ ಮೊದಲು ಡಾ.ಪಿ ವಿ ನಾರಾಯಣ್ ಅವರ 'ಅಂತರ' ಓದಿದಾಗ ಗಾಡಿ ಪ್ರಯಾಣದ ಕಲ್ಪನೆ ಬಂದಿತ್ತು ನನಗೆ.

ನೀನು ಗಾಡೀಲಿ ಪ್ರಯಾಣ ಮಾಡಿದೀಯಾ? ಅಂತ ಸೌತೇಕಾಯಿ ಹೆಚ್ಚುತ್ತಿದ್ದ ಅಮ್ಮನನ್ನು ಕೇಳಿದಾಗ
"ಹೂಂ, ದಯಣ್ಣನ ಉಪನಯನಕ್ಕೆ ಗಾಡೀಲೇ ಹೋಗಿದ್ದು, ರಾತ್ರಿ ಹೊತ್ತಿನ ಪ್ರಯಾಣ ನಾಲ್ಕು ಗಾಡಿ. ಆಗ ನಾವೆಲ್ಲ ತುಂಬಾ ಚಿಕ್ಕವರು"

ಮಧ್ಯದಲ್ಲಿ ನನ್ನ ತಂಗಿಯ ಪ್ರಶ್ನೆ "ನೀನು, ಮಾಮಾ, ದೊಡ್ಡಮ್ಮ, ಚಿಕ್ಕಮ್ಮ ಎಲ್ಲ ಒಟ್ಟಿಗೆ ಕೂತಿದ್ರ?"

"ಹಾಗೆಲ್ಲಾ ಚಿಕ್ಕ ಚಿಕ್ಕವರನ್ನು ಒಂದೇ ಗಾಡೀಲಿ ಕೂರಿಸುತ್ತಾರ?" ಮತ್ತೆ ಅಮ್ಮನ ವರ್ಣನೆ..
"ನಿಮ್ಮಜ್ಜಿ, ಚಿಕ್ಕಜ್ಜಿ, ನನ್ನ ಸೋದರತ್ತೆ ಏನೇನೋ ಮಾತಾಡ್ತಿದ್ರು. ಅಕ್ಕ ಪಕ್ಕಾ ಸಾಲು ಸಾಲು ಮರಗಳು, ಗವ್ ಅನ್ನುವ ಕತ್ತಲು, ಗಾಡಿ ಹೊಡಿಯೋ ಭೈರ ಹಾಡು ಹೇಳುತ್ತಿದ್ದ ಸಣ್ಣ ದನಿಯಲ್ಲಿ...." ಅಂತ ಅವರ ಒಂದು ರಾತ್ರಿಯ ಗಾಡಿ ಪ್ರಯಾಣದ ಬಗ್ಗೆ ಹೇಳಿ ಮುಗಿಸೋ ಹೊತ್ತಿಗೆ ಸೌತೆ ಕಾಯಿ ಪೂರಾ ಹೆಚ್ಚಿ ಸಾಂಬಾರೂ ಮಾಡಾಗಿತ್ತು.

ನಮ್ಮಮ್ಮ ಒಂದು ರಾತ್ರಿ ಗಾಡಿ ಪ್ರಯಾಣ ಮಾಡಿದರೆ, ನಾನೂ ಮಾಡಿದೀನಿ ,ಅರ್ಧ ಗಂಟೆಯ ಪ್ರಯಾಣ ನಮ್ಮ ಸೋದರತ್ತೆಯ ಮನೆಯಲ್ಲಿ ! ಎಂತದೋ ಫಂಕ್ಷನ್ನು.. ಅವರದು ತೀರಾ ಒಳಗಡೆ ಹಳ್ಳಿ - ಒಂದು ಆಟೋ ಇರಲಿಲ್ಲ. ಆಗ ಅತ್ತಂಬಿ (ಅತ್ತೆಯ ಗಂಡ) ಎತ್ತಿನ ಗಾಡಿ ಕಳಿಸಿದ್ರು. ನನ್ನ ಆ ಗಾಡಿ ಹೊಡೀಯೋನು ಎತ್ತಿ ಸೀದಾ ಗಾಡಿಯೊಳಗೆ ಕೂರಿಸಿದ್ದಷ್ಟೇ ಜ್ಞಾಪಕ. ಅದರಿಂದ ಇಳಿದಿದ್ದು ನೆನಪಿಲ್ಲ .. ಆಗ ನಾಲ್ಕು ವರ್ಷದವಳಿರಬೇಕು ನಾನು.

ಈಗಂತು ಈ ಅನುಭವಗಳು ಆಗೊಕೆ ಸಾಧ್ಯಾನೆ ಇಲ್ಲ.. ಮೆಸ್ಸೆಂಜರ್ಸ್ ಇಲ್ಲ, ಪತ್ರಗಳಂತೂ ಪಿತೃಗಳಿಗೇ ಅರ್ಪಿತವಾಗಿವೆ.. ಗಾಡಿಪ್ರಯಾಣ outdatedಉ. ಈಗಿನವರಿಗೆ ಕಾಯುವ ಗೋಜೇ ಇಲ್ಲ .ಒಬ್ಬರೊಬ್ಬರ ಬಗ್ಗೆ ತಿಳಿದುಕೊಳ್ಳಲು ಪೋನ್ ಇದೆ, ಮೊಬೈಲ್ ಇದೆ. ಅಕ್ಕ ಪಕ್ಕದಲ್ಲಿ ಕೂತು ಮಾತಾಡ್ತಿರೋ ಹಂಗೆ ಕಾಡು ಹರಟೆ ಹೊಡೀಬಹುದು...


ಇನ್ನು ಈ ಮೊಬೈಲು ಕಾತುರತೆಯನ್ನ ಕಸದ ಬುಟ್ಟಿಗೆ ಸೇರಿಸಿದೆ . ಉದಾಹರಣೆಗೆ ನನ್ನ ಸ್ನೇಹಿತೆ ವಿಷಯ ಹೇಳ್ತೀನಿ - ಅವಳು ಅವರ ಊರಿಂದ ಹಾಸ್ಟೆಲಿಗೆ ಬರೋದು ಅವರ ಅಪ್ಪ ಅಮ್ಮನಿಗೆ live telecast ತರ..ಬಸ್ಸು ಹತ್ತುವಾಗ ಸೀಟು ಸಿಕ್ಕಿದಾಗ, ಒಂದು ಕಾಲ್. ಬಸ್ಸಿಂದ ಇಳಿದು ಟ್ರೇನ್ ಗೆ ಟಿಕೆಟ್ ತಗೊಂಡಾಗ ಇನ್ನೊಂದು. ಟ್ರೇನ್ ಮಧ್ಯದಲ್ಲಿ ನಿಂತು ಬೋರಾದಾಗ , ಹಾಸ್ಟೆಲ್ ಸೇರಿದಾಗ - ಹೀಗೆ ಪ್ರತಿ ಸಲ ಕಾಲು, ಮಾತು ಮಾತು ಮಾತು...ಎಷ್ಟು ವಿಚಿತ್ರ ಅಲ್ಲವ?


ನನ್ನ ರೂಮ್ ಮೇಟ್ ಹಳ್ಳಿಯವಳು . ನನಗಿಂತ ಅವಳಿಗೆ ಹಳ್ಳಿಯ ಹಿಂದಿನ ಕಾಲದ ಕಲ್ಪನೆ ಜಾಸ್ತಿ ಇದೆ. ಅವಳಿಗೆ ಇದನ್ನೆಲ್ಲ ಹೇಳಿದ್ರೆ, ಅವಳು ಇನ್ನು ಏನೇನೋ ಹತ್ತು ಹನ್ನೆರಡು ಕಂಪ್ಯಾರಿಸನ್ ಮಾಡಿ, ನಮಗೆಲ್ಲ ಆ ಅನುಭವಗಳು ಇಲ್ವಲ್ಲ ಅಂತ ನಾನು ಹೊಟ್ಟೆ ಉರ್ಕೋಳ್ಳೋದನ್ನ ನೋಡಿ.. "ನೀನು ಈ ಕಾಲದಲ್ಲಿ ತಪ್ಪಿ ಹುಟ್ಟಿದ್ದಿಯ ಇನ್ನೂರು ಮುನ್ನೂರು ವರ್ಷಗಳ ಹಿಂದೆ ಹುಟ್ಟಬೇಕಿತ್ತು "ಅಂತ ಗೇಲಿ ಮಾಡಿದಳು .. ನಾನು "ನಾನು ಅವಾಗ ಕೂಡ ಇದ್ದೆ ಇದು ನನ್ನ ಇನ್ನೊಂದು ಜನ್ಮ ಅಂತ ..ನಾನು ಹೇಳೋದು ನಿಜ ಇರಬಹುದು ಅಲ್ಲವ??" ಅಂದರೆ,

"ಇಲ್ಲ ಕಣೆ ಸಕತ್ ಸುಳ್ಳು... ನಿಂದು ಇದೆ ಲಾಸ್ಟ್ ಜನ್ಮ ಇದೆ ಮೊದಲ ಜನ್ಮ...ಹೆಹೆಹೆಹೆ" ಅಂತ ನಕ್ಕಳು ಅವಳು.

Monday, June 4, 2007

ಬೆಳ್ಳಿಯ ಭಾವನೆ

ಕಾಡು ಕುದುರೆಯ ಆವೇಗವೇ,

ಈಗಷ್ಟೇ ನೀನು ಎದ್ದು ಹೋದೆ. ಮೃದು ಹಾಸಿಗೆಯ ಮೇಲೆ ಮಲಗಿರುವ ನೀಲಿ ಬಣ್ಣದ ಹೂಗಳಿರುವ ಆ ಮೇಲು ಹಾಸಿನ ಮುದುರುಗಳಲ್ಲಿ ನಿನ್ನ ಘಮ.ಬೆಳಗಿನ ನಾಲ್ಕು ಘಂಟೆಗೆ ನೀನು ನನ್ನ ಮಳೆಯಾಗಿ ಸೇರುತ್ತಿದ್ದರೆ ಮೊದಲ ಮಳೆಗೆ ಘಂ ಎನ್ನುವ ಭುವಿಯಂತೆ ನಾನು ಕರಗುತ್ತಿದ್ದೆ.

ನೀನು ಮುಗಿಲು ನಾನು ನೆಲ

ನಾನು ಎಳೆವೆ ನೀನು ಮಣಿವೆ
ನಾನು ಕರೆವೆ ನೀನು ಸುರಿವೆ

ನಾ ಅಚಲದ ತುಟಿ ಎತ್ತುವೆ
ನೀ ಮಳೆಯೊಳು ಮುತ್ತನಿಡುವೆ


ಹೊದಿಕೆಯೋ ಎಂಬಂತೆ ಸುಮ್ಮನೇ ನಿನ್ನ ಮೇಲಿದ್ದವಳಿಗೆ ಕರೆಗಂಟೆಯ ಸದ್ದು ಇಷ್ಟವಾಗಲಿಲ್ಲ. ಆದರೂ ಇಷ್ಟು ಮುಂಜಾನೆ ಬಾಗಿಲು ಬಡಿಯುತ್ತಿದ್ದಾರೆಂದರೆ ಯಾವುದೋ ಸೀರಿಯಸ್ ಕೇಸೇ ಬಂದಿರಬೇಕೆಂದು ಓಲ್ಲದ ಮನಸ್ಸಿನಿದ ಬಾಗಿಲು ತೆರೆದರೆ ಕಂಡಿದ್ದು ಕೆಂಡದಂತೆ ಮೈ ಸುಡುತ್ತಿರುವ 8ವರ್ಷದ ಹುಡುಗಿಯ ಜೊತೆ ಚಿಂತೆಗಣ್ಣಿನ ಅವರಪ್ಪ.ನನಗೆ ಗೊತ್ತು ನೀನು ಜಾಣ ಹುಡುಗ ಆ ಹುಡುಗಿಗೆ ಬೇಗ ವಾಸಿಯಾಗುತ್ತೆ.


ಬೆಳಗಿನ ಆ ಚಳಿಯಲ್ಲಿ ಮಗುವಿನ ಜೊತೆ ಬಂದ ತಂದೆಗೆ ಕಾಫಿಯ ಅವಶ್ಯಕತೆ ಇದೆ ಅನ್ನಿಸಿ ಹಬೆಯಾಡುವ ಕಾಫಿ ತಂದಿಟ್ಟಾಗ ನಿನ್ನ ಕಣ್ಣುಗಳಲ್ಲಿ ನನ್ನೆಡೆಗಿದ್ದ ಮೆಚ್ಚುಗೆ ನೋಡಿ ಹಿತವಾಯಿತು ಮನಸಿಗೆ.
ನಮ್ಮಿಬ್ಬರದು ಅರೆಂಜ್ ಮ್ಯಾರೇಜ್ ಅಂದರೆ ಯಾರು ನಂಬುವುದಿಲ್ಲ...ಏನೆಂದು ಕರೆಯಲಿ ನಿನ್ನ??ಗಂಡ? ಗೆಳೆಯ? ಆತ್ಮಸಖ??
ಆಸ್ಪತ್ರೆ ವಾಸನೆ ಅಂದರೆ ವಾಕರಿಸುತ್ತಿದ್ದ ನಾನು ದಿನಾ ಅದೇ ವಾಸನೆಯನ್ನು ಹೊತ್ತು ತರುವ ವೈದ್ಯನನ್ನು ಮದುವೆಯಾದದ್ದು ಹೇಗೆ??ಇದಕ್ಕೆ ಋಣಾನು ಬಂಧ ಎನ್ನುವುದ??


ಈಗ ನೀನು ಮಹಡಿ ಮೇಲಿನ ಕೊಣೆಯ ಆರಾಮು ಖುರ್ಚಿಯ ಮೇಲೆ ಕುಳಿತುಕೊಂಡು ಯಾವುದೋ medical journal ಓದುತ್ತಿರುತ್ತೀಯ. ಹಾಗೆ ನೀನು ಓದುವುದನ್ನು ದೂರದಿಂದ ನಿನಗೆ ಗೊತ್ತಾಗದ ಹಾಗೆ ನೋಡುವುದು ನನಗೆ ತುಂಬಾ ಖುಷಿ ಕೊಡುತ್ತೆ.

ಸ್ನಾನ ಮಾಡಿ ಬಾ ಹುಡುಗ, ನಿನಗಿಷ್ಟವಾದ ದೋಸೆ ತಿನ್ನುತ್ತಾ ಈ ಪತ್ರ ಓದುವೆಯಂತೆ. ನಿನ್ನನ್ನು ಆಸ್ಪತ್ರೆಗೆ ಕಳುಹಿಸಿ ನಾನು ಬ್ಯಾಂಕಿನ ಕೆಲಸಕ್ಕೆ ಹೊರಡುವೆ. ಸಂಜೆ ಬೇಗ ಬಾ ಕಲಾಕ್ಷೇತ್ರದಲ್ಲಿ ಅಶ್ವತರ ಸಂಗೀತವಂತೆ. ಹೋಗೋಣ..ಅವರ ಭಾವ ಲೀಲೆಯಲ್ಲಿ ಮಿಂದುಬರೋಣ.

...................................................ನಿನ್ನ ಬೆಳ್ಳಿ


(ಇದನ್ನು ಓ ಮನಸೇ communityಲಿ ಪೋಸ್ಟ್ ಮಾಡಿದ್ದೆ ಇಲ್ಲೂ ಇರಲಿ ಎಂದು ಹಾಕಿರುವೆ )

Friday, June 1, 2007

ಮುಟ್ಟಾದ ಹುಡುಗಿ!

ಅವತ್ತು ಸಂಜೆ ಅವಳ ಓದ್‌ಕೊಳೋ ಕೋಣೆಯಿಂದ ವಾರೆಂಡಾದವರೆಗೂ ಬಂದಿದಾಳೆ "ಅಮ್ಮ.. ಹೊಟ್ಟೆಲಿ ಒಂಥರ ನೋವು- ಸಂಕಟ, ತಲೆನೋವು ಅಳು ಬರ್ತಿದೆ." ಅಂದಳು. ಅವಳ ಅಮ್ಮ "ಏನಾಯ್ತೆ ಕಂದ" ಅಂತ ಹುಡುಗಿ ಹತ್ರ ಹೋಗಿ ನೋಡಿದ್ರೆ ಒಂದು ತೊಟ್ಟು ರಕ್ತ ನೆಲಕ್ಕೆ ಬಿತ್ತು.ಸರಿಯಾಗಿ ಗಮನಿಸಿದಾಗ ರೂಮಿನಿಂದ ವರೆ0ಡಗೆ ಬರೋ ದಾರಿಯಲ್ಲಿ ಒಂದೊಂದು ತೊಟ್ಟು ರಕ್ತ ಬಿದ್ದಿದೆ ಅವಳು ಮೈ ನೆರೆದಿದಾಳೆ her body is matured.

'ಅಯ್ಯೂ.. ಇಷ್ಟು ಬೇಗ ಆಗ್‌ಬಿಟ್ಲಲ್ಲ' ಅಂತ ತಾಯಿಗೆ ಹಿಂಸೆ ಆದ್ರೂ ತೋರಿಸಿಕೊಳ್ಳದೇ ತಮ್ಮ ಮಲಗೋ ಕೋಣೆಯಲ್ಲಿ ಯಾವುದೋ ಪುಸ್ತಕದಲ್ಲಿ ಮುಳುಗಿದ್ದ ಗಂಡನಿಗೆ ವಿಷಯ ತಿಳಿಸಿ, ಅವರ ಅಮ್ಮನಿಗೆ ಫೋನ್ ಮಾಡಿದಳು. ಮೊಮ್ಮಗಳು ಮೈನೇರೆದಳು ಅಂತ ತಿಳಿಸೋಣ ಅಂತಾನೂ? ಅಥವಾ ಅವಳಿಗೆ ಇನ್ನೂ ಮುಂದೆ ಏನು ಆರೈಕೆ ಮಾಡೋಣ ಅಂತ ಕೆಳೊಕ್ಕೋ? ಅಥವಾ ಎರಡಕ್ಕೂ?

ಹೀಗೆ ಒಂದಲ್ಲ ಒಂದು ರೀತಿಲಿ ಹುಡುಗೀರು ಮೈ ನೆರೆದಿರೋದು ಅವರ ಮನೆಯೋರಿಗೆ ಗೊತ್ತಾಗುತ್ತೆ.ಕೆಲವರಿಗೆ ಅವರ ತಾಯಿನೋ, ಇನ್ಯಾರೋ ಮೊದಲೇ 'ಹುಡುಗಿ ವಯಸ್ಸಿಗೆ ಬಂದಿದಾಳೇ' ಅನ್ನಿಸಿದಾಗ ಇದರ ಬಗ್ಗೆ ಸೂಚ್ಯವಾಗಿ ತಿಳಿಸಿರುತ್ತಾರೆ. ಇನ್ನೂ ಕೆಲವು ಹುಡುಗೀರಿಗೆ ಅದೂ ಲಭ್ಯವಿಲ್ಲ.

ಮುಟ್ಟಾಗೋಕೆ ಮುಂಚೆ ತಿಳಿಸಬೇಕೋ ಬೇಡವೋ? ಮುಟ್ಟಾದಮೇಲೆ ಅವರಿಗೆ ಆರತಿ ಮಾಡಬೇಕಾ? ಆರೈಕೆ ಮಾಡಬೇಕಾ? ಇದರ ಬಗ್ಗೆ ನಾನು ಮಾತಾಡ್ತಾ ಇಲ್ಲ! ನಾನು ಹೇಳ್ತೀರೂದೇ ಬೇರೆ.

ನನ್ನ ಸ್ನೇಹಿತೆ ಒಬ್ಬಳು ಮೈನೆರೆದಾಗ "ಜೀವನದಲ್ಲಿ ಒಂದೇ ಸತಿ ಹೀಗೆ ಆಗೋದು ಹಾಳಾಗ್ ಹೋಗ್ಲಿ" ಅಂತ ಅಂದುಕೊಂಡಿದ್ದಳಂತೆ. ಮುಂದಿನ ತಿಂಗಳು ಮತ್ತೆ ಆದಾಗ ಅವಳಿಗೆ ಆಘಾತ, ನಿರಾಶೆ, ದು:ಖ. ಮೊದಲನೆದಾಗಿ ನಾವು ಫಿಸಿಕಲ್ ಹಿಂಸೇಗಳಾದ ರಕ್ತ ಸ್ರಾವ, ತಲೆನೋವು, ಹೊಟ್ಟೆನೋವು, ಬೆನ್ನುನೋವು, ಕೈ ಕಾಲು ಬಿದ್ದುಹೋದಹಾಗೆ ಅನ್ನಿಸುವುದು(ಒಬ್ಬೊಬ್ಬರಿಗೆ ಒಂದೊಂದು ರೀತಿ )ಇವುಗಳನ್ನ ಮೊದಲನೆ ಸಾರಿ ಅನುಭವಿಸುತಿರ್ತಿವಿ.
ಇದರ ಜೊತೆಗೆ ಅಮ್ಮಂದಿರ ಆರೈಕೆ ಮೊದಲು ಚಿಗಲಿ ಉಂಡೆ, ಒಂದೆರೆಡು ತಿಂಗಳು ಆದ ಮೇಲೆ ಕೊಬ್ಬರಿ ಬೆಲ್ಲ, ಅದಾದ ಒಂದು ತಿಂಗಳಿಗೆ ಸಜ್ಜಿಗೆ,ಮೇಂತೆ ಮುದ್ದೇ.. ಇವೆಲ್ಲವನ್ನು ಹಾಗೆ ಕೊಡ್ತಾರೆ ಅಂದುಕೋಬೆಡಿ ಪ್ರತಿಯೊಂದನ್ನು ತುಪ್ಪದಲ್ಲಿ ಮುಳುಗಿಸಿ ಕೊಟ್ಟಿರುತ್ತಾರೆ. ತುಪ್ಪದ ಹೊಳೇಲಿ ಚಿಗಲಿ ಉಂಡೆ, ಕೊಬ್ಬಾರಿ ಬೆಲ್ಲದ ಉಂಡೆ ತೇಲುತ್ತಿರುತ್ತದೆ.ಊಹಿಸಿಕೊಳ್ಳಿ ತುಪ್ಪ ಅಂದರೆ ಅಲರ್ಜಿ ಆಗಿಹೋಗುತ್ತೆ.ಇವನೆಲ್ಲಾ ನೋಡಿದರೆ ಓಡಿಹೋಗೋಣ ಅನ್ನೋಷ್ಟು ಅಸಹ್ಯ, ಹಿಂಸೆ ಆಗುತ್ತಿರುತ್ತೆ,ಕಣ್ಣಲ್ಲಿ ನೀರು.. ಆದರೆ ಅಮ್ಮಂದಿರು ಇದ್ಯಾವುದಕ್ಕೂ ಕ್ಯಾ ರೇ ಅನ್ನುವುದಿಲ್ಲ.
ತಣ್ಣೀರು ಮುಟ್ಟೋಹಂಗೆ ಇಲ್ಲ, ಕುಡಿಯೋಹಂಗೆ ಇಲ್ಲ! ಸುಡು ಬೇಸಿಗೆಲೂ ಶಾಲೆಗೆ ಸ್ವೇಟೆರ್ ಹಾಕಿಕೊಂಡು ಹೂಗಬೇಕು ಯಾರಾದರೂ ಸ್ನೇಹಿತೆಯರು ಯಾಕೆ ಸ್ವೇಟರ್ ಅಂತ ಕೇಳಿದರೆ ಹುಷರಿಲ್ಲ ಅಂತ ಸುಳ್ಳು ಹೇಳಬೇಕು..

ಮುಟ್ಟಾದಾಗ ಹುಡುಗೀರು ತಾವು ಮುಟ್ಟಾಗಿರೋದು ಯಾರಿಗೂ ಗೊತ್ತಾಗಬಾರದು ಅನ್ಕೊಂಡಿರ್ತಾರೆ ಹುಡುಗೀರು ಕಷ್ಟಪಟ್ಟು ಶಾಲೆಲಿ ಹೊರಗಡೆ ಯಾರಿಗೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಿಕೊಂಡಿದ್ರೆ, ಮನೇಲಿ ಅವರ ಅಮ್ಮ ತನ್ನ ಎಲ್ಲ ಸಂಭಂಧಿಕರಿಗೂ ಸ್ನೇಹಿತೆಯರಿಗೂ ಆರಾಮಾಗಿ ಒಂದು ಚೂರು ಗುಟ್ಟು ಮಾಡದೇ ಹೇಳುತ್ತಿರುತ್ತಾರೆ.. ಆಗ ಆ ಹುಡುಗಿ ಎಷ್ಟು irritate ಆಗ್ತಾಳೆ! 'ದೇವರೇ! ನಂಗೆ ಯಾಕೆ ಇಷ್ಟೆಲ್ಲಾ ಕಷ್ಟ ಕೊಡ್ತೀಯಾ? ಈ ಅಮ್ಮಂಗೆ ಸ್ವಲ್ಪ ಬುದ್ದಿ ಕೊಡಪ್ಪಾ..' ಅಂತ ಮೊರೆ ಇಡ್ತಾಳೆ..

ಈಗ ಅದೆಲ್ಲ ನನಪಿಸಿಕೊಂಡರೆ ಎಷ್ಟೊಂದು ಸಾಮಾನ್ಯ ವಿಷಯ ಅನ್ಸುತ್ತೆ. ಮುಟ್ಟಾಗೋ ದು ತಿಂಗಳಿಗೊಂದು ಸತಿ ಅನುಭವಿಸಬೇಕಾದ ಖರ್ಮ! ಅಂತ ಗೊತ್ತಾಗೋಗಿದೆ. ಆದರೆ ಪ್ರತಿಯೊಬ್ಬ ಹುಡುಗಿಯ ಮನಸಿನ ಡೈರಿಯಲ್ಲಿ ಮೊದಲ ಸಲ ಮುಟ್ಟಾದಾಗ ಉಂಟಾದ ಭಾವನೆಗಳು, ಒಂದು ಅಳಿಸಲಾಗದ ಹಾಳೆ - ಮರೆಯಲಾಗದ ನೆನಪು!

Tuesday, May 29, 2007

ಕಡಲಾಳದ ನೀಲಿಯಿಂದ ಒಂದು ಪತ್ರ !!!

ನನಗಿನ್ನು ಆ ದಿನ ಚೆನ್ನಾಗಿ ನೆನಪಿದೆ. ನಾನು ಅಪ್ಪ ಅಮ್ಮನ ಜೊತೆ ನಮ್ಮ ಕಾಲೇಜಿನ ಆ ನರಿ ಮೂತಿ ಮ್ಯಾನೇಜರ್ ಕೋಣೆ ಮುಂದೆ ಕೂತಿದ್ವಿ. ಅವನ ಹೆಸರೇನೋ ನನಗಿನ್ನು ಗೊತ್ತಿಲ್ಲ ದಿನೇಶಾನೋ ಗಣೇಶಾನೊ ಇರ್ಬೇಕು...

ನೀನು ನಿನ್ನ ತಂಗಿ ಜೊತೆ ಬಂದೆ. ಬಂದು, ಸೀದ ನುಗ್ಗುತ್ತಿದ್ದೀಯ ಮ್ಯಾನೇಜರ್ ಕೋಣೆಗೆ ಅಷ್ಟ್ ಹೊತ್ತಿನಿಂದ ಕಾದು ಕಾದು ರೋಸಿಹೋಗಿದ್ದ ನನಗೆ ಬರ್ತೀರೋ ಸಿಟ್ಟನ್ನೆಲ್ಲಾ ನಿನ್ನ ಮೇಲೆ ಕಕ್ಕೋಹಾಗಿತ್ತು. cant you see we are waiting here ಅಂದೆ ನಾನು. ನಿನ್ನ ಮುಖದಲ್ಲಿ ಒಂದು ತುಂಟ ನಗೆ...

ನಾನು ನಿನ್ನ ದುರುಗುಟ್ಟಿಕೊಂಡು ನೋಡುತಿದ್ರೆ,ನೀನು ನನ್ನ ಕಣ್ಣುಗಳನ್ನ ಅಷ್ಟೇ ಪ್ರೀತಿಯಿಂದ ನೋಡುತಿದ್ದೆ. ನಾನು ಸ್ವಲ್ಪ ಅಹಂಕಾರದ ಹುಡುಗಿ ಅಂತ ಎಲ್ಲರಿಗೂ ಗೊತ್ತು. ನನ್ನ ಮುಂದೆ ಹುಡುಗರ ಗುಂಪೇ ಹೋಗುತಿದ್ರೂ ಕುತೂಹಲಕ್ಕಾದರೂ ನಾನು ಕಣ್ನೆತ್ತಿ ನೋಡಿದವಳಲ್ಲ ನನ್ನ ಕಣ್ಣುಗಳಲ್ಲಿ ಅದೇ ನಿರ್ಲಿಪ್ತ ಅಹಂಕಾರ...

ಆದರೆ ಅವತ್ತು ಏನಾಯ್ತು ನನಗೆ? ನಿನ್ನನ್ನು ನನ್ನ ಕಣ್ಣುಗಳು ಪದೇ ಪದೇ ಯಾಕೆ ಹುಡುಕ ಹತ್ತಿದವು ? ? ಮತ್ತೆ ನೀ ಸಿಕ್ಕುಬಿಟ್ಟೆಯಲ್ಲ ನಿನ್ನ ಗುರು ಗುಟ್ಟೋ ಬೈಕಿನ ಮೇಲೆ! ನನಗೆ ಅಸೂಯ ಆಗುವಷ್ಟು ಆ ಬೈಕಿನ ಜೊತೆಗೇ ಇರತಿದ್ಯಲ್ಲ! ನೀನು ನೆಡದಿದ್ದೆ ನಾನು ನೋಡಿಲ್ಲ.

ನನ್ನ ಕಣ್ಣುಗಳು ನಿನ್ನ ಹುಡುಕುತ್ತಿದ್ದವು ಅನ್ನೋದೇನೊ ನಿಜ. ಆದರೆ, ಈ ಪರಿ ನೀನು ನನ್ನ ಆವರಿಸಿಕೊಂಡಿರಲಿಲ್ಲ. ನಿನ್ನ ಸ್ನೇಹಕ್ಕಾಗಿ ಒಂದು ಚಿಕ್ಕ ಪ್ರಯತ್ನ ಕೂಡ ಮಾಡಿರಲಿಲ್ಲ ನಾನು...

ಅವತ್ತು ನಿನ್ನ ತಂಗಿ ಲ್ಯಾಬ್ ನಲ್ಲಿ ನನ್ನ ಹತ್ರ ಬಂದು 'ಅಣ್ಣ ನಿಮ್ಮ ಹತ್ರ ಮಾತಾಡಬೇಕಂತೆ' ಅಂದಾಗ ಆಷ್ಚರ್ಯ ಆಯ್ತು ನೀನು ಮಾತಾಡಬೇಕು ಅಂತ ಹೇಳಿಕಳಿಸಿದ್ದಕ್ಕಲ್ಲ.. ನಿನ್ನ ತಂಗಿ ಮಾತಾಡಿದಳಲ್ಲ ಅದಕ್ಕೆ ಆ ಹುಡುಗೀನ ಏನು protectedಆಗಿ ಬೆಳಸಿದ್ದೀರೋ ಮಾರಾಯ? ಅವಳಿಗೆ ಮಾತಡಕ್ಕೆ ಬರುತ್ತೆ ಅಂತ ಗೊತ್ತಾಗಿ ಖುಷಿ ಆಯ್ತು ನನಗೆ...

ನಮ್ಮ ಭೇಟಿ ಬಿಡು ಎಲ್ಲಾ ಹುಡುಗ-ಹುಡುಗಿ ಭೇಟಿಗಳoತೆ ಒಂದು ಸಾಮಾನ್ಯ ಭೇಟಿ, ಅರ್ಧ ಅರ್ಧ ದಾಳಿಂಬೆ ಹಣ್ಣಿನ ಜ್ಯೂಸ್ ನಿಂದ ಶುರುವಾಗಿದ್ದು..ನಿನ್ನ ಜೊತೆ ಅರ್ಧ ಗ್ಲಾಸಿನ ದಾಳಿಂಬೆ ಜೂಸ್ ಕುಡಿಯುವಾಗ ನಮ್ಮ ಸ್ನೇಹ ಇಷ್ಟು ಗಟ್ಟಿಯಾಗಿ ಬೆಳೆಯುತ್ತೆ ಅನ್ನೋ ಕಲ್ಪನೆ ಖಂಡಿತ ಇರಲಿಲ್ಲ..

ಮೊದಮೊದಲು ನೀನು ನಂಗೆ ಇಷ್ಟ ಆಗಲಿಲ್ಲ ಉಹೂ...ನಿನ್ನ ಪ್ರೀತಿ ಹಂಚೋ ಕಣ್ಣುಗಳಷ್ಟೆ ಇಷ್ಟವಾಗಿದ್ದು ನನಗೆ!!

ಆದರೆ ಬರುಬರುತ್ತಾ ಏನಾಯ್ತ್ತು? ನಮ್ಮಿಬ್ಬರಿಗೂ? ಒಬ್ಬರನ್ನೊಬ್ಬರು ಅಷ್ಟು ಹಚ್ಚಿಕೊಂಡ್ವಿ. ಎಷ್ಟು ವಿಷಯ ಮಾತಡಿಲ್ಲ ನಾವು? ಬದುಕಿನೆಡೆಗೆ, ಪ್ರೀತಿಯೆಡೆಗೆ, ಕಾಮದೆಡೆಗೆ , ಆದ್ಯಾತ್ಮದೆಡೆಗೆ...ನನ್ನಲ್ಲಿದ್ದ ಪ್ರಶ್ನೆಗಳನ್ನ ನಾನು ಕೇಳುತ್ತಿದ್ದರೆ, ನೀನು ಆ ಎಲ್ಲಾ ಪ್ರಷ್ನೆಗಳಿಗೆ ಅತ್ಯಂತ ಸರಳವಾಗಿ, ಮುಜುಗರ ಆಗದೆ ಇರೊ ಹಾಗೆ ಉತ್ತರಿಸುತ್ತಿದ್ದೆ. ನಿನ್ನ ಉತ್ತರಗಳು ಯಾವತ್ತೂ ಭಾಷಣ ಅನ್ನಿಸಲಿಲ್ಲ ನಂಗೆ ನೀನು ಯಾವತ್ತು ನಿನ್ನ ಭಾವನೆಳಗನ್ನಾಗಲಿ, ಉತ್ತರಗಳನ್ನಾಗಲಿ, ಅನಿಸಿಕೆಗಳನ್ನಾಗಲಿ ಯಾವುದನ್ನು ನನ್ನ ಮೇಲೆ ಹೇರಲಿಲ್ಲ, ನನ್ನ ಉಸಿರುಕಟ್ಟಿಸಲಿಲ್ಲ! ಅದಕ್ಕೆ ನಾನು ಅಷ್ಟು ಇಂಪ್ರೆಸ್ಸ್ ಆಗಿದ್ದ?


ನಾವು ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದೀವಿ ಅಂತ ಗೊತ್ತಾದರೂ ಯಾಕೆ ಹೇಳಿಕೊಳ್ಳಲಿಲ್ಲ? ನಾನಾದರೂ ಹೇಳಿಕೊಳ್ಳುತ್ತಿದ್ದೆನೇನೋ...ಆದರೆ ನೀನು ಪ್ರಭಾವ ಬೀರಿಬಿಟ್ಟಿದ್ದೆ..ಭಾವನೆಗಳ ಅಲೆಯಲ್ಲಿ ತೇಲಿ ಹೋಗದೇ ವಾಸ್ತವತೆಯಲ್ಲಿ ಹೇಗೆ ಬದುಕಬೇಕು ಅನ್ನೋದನ್ನ ನಿನ್ನಿಂದ್ಲೇ ಅಲ್ವ ನಾನು ಕಲಿತಿದ್ದು?

ಆದ್ರೆ ನೀನು ಯಾಕೆ ಫ್ಲರ್ಟ್ ಮಾಡ್ತೀಯ ಎಲ್ಲರ ಜೊತೆ? ನಿನ್ನ ಮಾತನ್ನ ನಂಬೋದೇ ಕಷ್ಟ! ಆದರೂ ನಿನ್ನ ಯಾಕೆ ಅಷ್ಟು ಇಷ್ಟಪಡ್ತೀನಿ ಅಂತ ಯೋಚಿಸಿದರೆ ನಿನ್ನ ತುಂಟತನ ಮತ್ತು ನೀನು ಎಲ್ಲಾ ವಿಷಯದೆಡೆಗೂ ಬೆಳಸಿಕೊಂಡಿರುವ ದಿವ್ಯವಾದ ನಿರ್ಲಕ್ಷವೇ ಕಾರಣ ಅನ್ನಿಸುತ್ತೆ...

ಇಷ್ಟೆಲ್ಲಾ ಬರೆದರೂ ಇದನ್ನ ನಿನಗೆ ಕೊಡಬೇಕೆ? ಅಂತ ಯೋಚಿಸ್ತಿದ್ದಿನಿ..ಉಹೂಂ..ನಾಚಿಕೆ ಅಲ್ಲ, ಭಯ ಮೊದಲೇ ಇಲ್ಲ, ಆದರೂ ಕೊಟ್ರೆ ಏನು ಸಾಧಿಸಿದ ಹಾಗಾಯ್ತು ಅನ್ನುವ ನಿರ್ಲಕ್ಷ...ಆದರೂ ಕೊಡುತೀನಿ ಯಾಕೆ ಗೊತ್ತ? ನನ್ನ ತುಂಬಾ ಪ್ರೀತಿಸ್ತಿರೋ ಹುಡುಗನ್ನ ಮದುವೆಯಾಗ್ತಿದೀನಿ. ಅವನನ್ನೆ ಪ್ರಜ್ನಾಪೂರ್ವಕವಾಗಿ ಪ್ರೀತಿಸಬೇಕು, ಪ್ರೀತಿಸ್ತೀನಿ...

ಇಲ್ಲ! ನಾನು ನೀನು ಖಂಡಿತಾ ಮದುವೆ ಆಗಬಾರದು.` ಹೀಗೆ ಒಬ್ಬರೆಡೆಗೆ ಒಬ್ಬರು ಕುತೂಹಲವನ್ನು ಉಳಿಸಿಕೊಂಡೇ ಬದುಕಿಬಿಡಬೇಕು..ಮುಂದೆ ನನ್ನ ಗಂಡನ ಜೊತೆ ಒಂದು ಚಿಕ್ಕ ಜಗಳ ಆದಾಗ ನಿನ್ನ ನೆನಪು ಬರಬೇಕು, ನೀನು ಇದ್ದಿದ್ರೆ ಹೇಗೆ ರಿಯಾಕ್ಟ್ ಮಾಡ್ತಿದ್ದೆ ಅಂತ ಕಲ್ಪಿಸಿಕೊಳ್ಳಕ್ಕಾದರೂ ನಾವಿಬ್ಬರೂ ಬರೀ ಸ್ನೇಹಿತರಾಗೆ ಉಳಿದುಬಿಡೋಣ ...

ಸಂಜೆ ಕಾಫೀ ಡೇನಲ್ಲಿ ಸಿಗೋಣ" ಏನೆ ಹುಡುಗಿ ನಿನ್ನ ಪತ್ರ ನನ್ನ ಸೆಂಟಿ ಮಾಡಿಬಿಟ್ಟಿತ್ತಲ್ಲ" ಅಂತ ..ನಿನ್ನ ಎವರ್ಗ್ರೀನ್ ಡೈಲಾಗ್ ಹೊಡೆಯುತ್ತ...ಮುಖದಲ್ಲಿ ತುಂಟನಗೆ ಹೊತ್ತು ಒಳಗೆ ಬಾ.....

ಕಾಫಿಗಾಗಿ ಕಾದಿರುವವಳು

Saturday, May 26, 2007

ಬಂಧ!!!

ಯಾವತ್ತು 6 15ಕ್ಕೆ ಎಚ್ಚರ ಆಗೋಗೂತ್ತೆ ನಂಗೆ ಅಂದುಕೊಂಡು ಗಡಿಯಾರ ನೋಡಿದರೆ 6 23ಆಗಿತ್ತು ಸಧ್ಯ 7-8ನಿಮಿಷ ಜಾಸ್ತಿ ನಿದ್ದೆ ಬಂದಿದೆ ಅನ್ನಿಸಿ ಸಮಾಧಾನ ಮಾಡ್ಕೊಂಡೆ. ಎದುರುಗಡೆ ಬೆಡ್ ನೋಡಿದಾಗ ಮನಸ್ಸು ಖಾಲಿ ಅನ್ನಿಸುತ್ತಿದೆ..ಅವಳು ಅಲ್ಲಿ ಇದ್ದಿದ್ರೆ ಅವಳ ನಿದ್ದೆ ಕಣ್ಣನ್ನ ನೋಡುತ್ತಾ 'ನೆನ್ನೆ ರಾತ್ರಿ ನೀನು ಹಿಂಗೆ ಏನೇನೋ ಬಡಬಡಿಸುತ್ತಿದೆ' ಅಂತ ಹೇಳಿ ಗೋಳು ಹುಯ್ಕೋಬಹುದಿತ್ತು..



ಹಾ ಅವಳ ಹೆಸರು ವಾತ್ಸಾಲ.. ಇವತ್ತಿಗೆ ಸರಿಯಾಗಿ ಒಂದು ವಾರದ ಹಿಂದೆ ಅವಳು ಭಾರತಕ್ಕೆ ಹಾರಿಹೋದಳು. ನನ್ನ ಜೊತೆಗೆ ಕೆಲಸ ಮಾಡೊಳು ನಾವಿಬ್ಬರೂ ಒಂದೇ ಕಂಪನೀಲೀ ಕೆಲಸ ಮಾಡುತ್ತಿದ್ದೀವಿ...ನನಗಿಂತ ಮೊದಲೇ ಹಾಲೆಂಡ್‌ಗೆ ಬಂದವಳು. ಚೆನ್ನಾಗಿದ್ಲೂ ನೋಡೊಕ್ಕೆ.. ಅವಳೂ ಕನ್ನಡದವಳು ಅಂತ ಗೊತ್ತಾಗಿ ನಾನು ಸ್ವಲ್ಪ ಜಾಸ್ತಿನೇ ಸಲುಗೆಯಿಂದ ವರ್ತಿಸೊಕ್ಕೆ ಶುರು ಮಾಡ್ದಾಗ "ನೀವು ನನ್ನ ಜೊತೆ ಫ್ಲಾರ್ಟ್ ಮಾಡ್ತಿದ್ದೀರಾ ಅಂತ ಗೊತ್ತಗ್ತಿದೆ.. ಆದ್ರೂ ಇಷ್ಟ ಆಗ್ತಿರ ಅಂದಿದ್ಲು."



ಒಂದು ದಿನ ಆಫೀಸಿನಲ್ಲಿ ಜೋಲುಮುಖ ಹಾಕ್ಕೊಂದು ಕಾಫಿ ಕುಡೀತಿದ್ದೊಳ ಹತ್ತಿರ ಹೋಗಿ ಏನಾಯ್ತು ಅಂದಿದ್ದಕ್ಕೆ.. "ಒಂದು ವಾರದಿಂದ ಹೊಸಮನೆ ಹುಡುಕುತ್ತಾ ಇದ್ದೀನಿ, ಈಗಿನ ಒನರ್‍ದು ಸ್ವಲ್ಪ ಕಿರಿಕ್ಕು. ಮನೆ ಚೆನ್ನಾಗಿದ್ರೆ ಅಲ್ಲಿನ ಜನ ಸರಿ ಇಲ್ಲ, ಜನ ಸರಿ ಇದ್ರೆ ಮನೆ ಸರಿಯಾಗಿರಲ್ಲ, ಸಾಕಾಗ್ ಹೋಯ್ತು." ಅಂದಳೂ..'ಸರಿ ಹಾಗಾದ್ರೆ ನಮ್ಮನೆಗೆ ಬನ್ನಿ, ನಾವು ಮೂರು ಜನ ಇದ್ದೀವಿ. ನನ್ನ ಇಬ್ಬರು ಸ್ನೇಹಿತರು ಬೇರೆ ಕಂಪನೀಲಿ ಕೆಲಸ ಮಾಡ್ತಿದಾರೆ.' ಅಂತ ತಮಾಶೇ ಮಾಡಿ ಹಲ್ಲು ಕಿರಿದ್ರೆ.."ನಿಮ್ಮನೇ ಅಡ್ರೆಸ್ಸು ಕೊಡಿ" ಅಂತ ಸೀರಿಯಸ್ಸಾಗಿ ಅಡ್ರೆಸ್ಸು ಈಸ್‌ಕೊಂಡು ಸಂಜೆ ಮಾನೆಗ್ ಬಂದು ಸಂದೀಪ, ಸರ್ವನರನ್ನ ಮಾತಾಡ್ಸ್‌ಕೊಂಡು..ಮಾರನೇ ದಿನಾನೇ ಗಂಟು ಮೂಟೆ ಸಮೇತ ಮನೆ ಮುಂದೆ ಇಳಿದಳು!!!



ಅವಳು ಒಂಥರ ಮೂಡಿ..ಒಂದಿನ ಪಟಪಟಾ ಅಂತ ಮಾತಾಡೋದು, ಇನ್ನೊಂದು ದಿನಾ ಪೂರಾ ಮೌನವಾಗಿ ಇರೋದು.. ರಾತ್ರಿ ಇಡೀ ತಪಸ್ಸು ಮಾಡೊರ ಥರ ನನಗೆ ತಲೆ ಬುಡ ಅರ್ಥವೆ ಆಗದ ಪುಸ್ತಕನ ಓದೋದು..ಇನ್ನುಸ್ವಲ್ಪ ದಿನ ನಂಗೆ ಫ್ರೆಂಚ್ ಕಲೀಬೇಕು ಅಂತ ಆಸೆ ಅಂತ ಫ್ರೆಂಚ್ ಕಲಿಯೂಕ್ಕೆ ಇರೋ ಸೀಡಿ- ಪುಸ್ತಕಗಳನ್ನ ಗುಡ್ಡೆ ಹಾಕ್ಕೊಂಡು ಅದರಲ್ಲಿ ಮುಳುಗಿಹೋಗದು..ಅಯ್ಯೂ ಈ ಹಾಳಾದ್ ಭಾಷೆ ಕಲಿಯೂಕ್ಕೆ ಹೋಗಿ ಎಷ್ಟು ಸಮಯ ಹಾಳು ಮಾಡಿದೆ ಅಂದುಕೊಂಡು..ಭಾರತದಲ್ಲಿರೋ ತನ್ನ ಸ್ನೇಹಿತೆಗೆ ಫೋನ್ ಮಾಡಿ ಗಂಟೆಗಟ್ಟಲೆ ಹರಟೆ ಹೊಡೆಯೋದು,ಇದ್ದಕ್ಕಿಧಂಗೆ ಒಂದು ದಿನ ಜ್ಞಾನೋದಯ ಆದ್ಹಂಗೆ ಆಗಿ, ಸಕತ್ ದಪ್ಪ ಆಗಿದೀನಿ, ಅನ್ನಿಸಿ ಜಿಮ್‌ಗೆ ಹೋಗಿ ಯಾದ್ವಾ ತದ್ವಾ ವೊರ್ಕ್ ಔಟ್ ಮಾಡೋದು..ಹೀಗೆ!!!



ಮೊದಲು ಬೇರೆ ರೂಮ್ ನಲ್ಲಿ ಇರುತ್ತಿದ್ದ ಅವಳು ಸ್ವಲ್ಪ ದಿನದಲ್ಲೇ ನನ್ನ ಜೊತೆ ನನ್ನ ರೂಮ್ನಲ್ಲೇ ಇರೊಕ್ಕೆ ಶುರು ಮಾಡಿದಳು. ಒಂದು ದಿನಕ್ಕೂ ಸಂಬಂಧ ಕ್ಕೆ ಹೆಸರು ಕೊಡೋ ಪ್ರಯತ್ನ ಮಾಡಲಿಲ್ಲ ಅವಳು ಅದು ನನಗೂ ಬೇಕಿರಲಿಲ್ಲ ಅವಳನ್ನ ಮದುವೆ ಆಗ್ತೀನಾ ಅಂತ ಕೂಡ ಯೋಚಿಸಿರಲಿಲ್ಲ ನಾನು. ಸಂದೀಪ ಸರ್ವನರೇ ಗರ್ಲ್ ಫ್ರೆಂಡ್- ಬಾಯ್ ಫ್ರೆಂಡ್ ಅನ್ನೊಕ್ಕೆ ಶುರು ಮಾಡಿದ್ದರು 'ನೀನು ಅವಳನ್ನ ಪ್ರೀತಿಸುತ್ತಿಯ' ಅಂತ ಸರ್ವನ ಕೇಳಿದ್ದ 'ಇಲ್ಲ ,ಅವಳು ನಂಗೆ ಇಷ್ಟ ಆಗ್ತಾಳೆ ಅಷ್ಟೇ' ಅಂದಿದ್ದೆ ಅವಳನ್ನ ಇದೆ ಪ್ರಶ್ನೆ ಕೇಳಿದ್ದಕ್ಕೆ.."ಹಾ ಪ್ರೀತಿಸುತ್ತೀನಿ, ಆದರೆ ಅವನಿಗೆ ಈ ವಿಷಯ ಹೇಳಬೇಡ. ಅವನು ಹೇಗೆ ಅಂತ ನಂಗೆ ಗೊತ್ತು ಅವನಿಗೆ ಉಸಿರುಕಟ್ಟೋ ಹಂಗೆ ಆಗಬಾರದು. ನನ್ನ ಅವನ ಸಂಬಂಧಕ್ಕೆ ಹೆಸರು ಬೇಡ" ಅಂದಿದ್ದಳಂತೆ.



ದಿನಾ ರಾತ್ರಿ ನಿದ್ದೇಲಿ ಮಾತಾಡೋ ಅಭ್ಯಾಸ ಇತ್ತು ಅವಳಿಗೆ. ಅವಳು ರಾತ್ರಿ ಹಿಂಗ್ ಕಿರಿಚುತ್ತಿದ್ದಳು, ಹಂಗೆ ಮಾತಡುತ್ತಿದ್ದಳು, ಅಂತ ಸಂದೀಪ ಸರ್ವನರಿಗೆ ಹೇಳಿ..ಮೂರು ಜನಾನು ಅವಳನ್ನ ಸಕತ್ತು ಚುಡಾಯಿಸುತ್ತಿದ್ದವಿ..ಅವಳೂ ಅದಕ್ಕೆ ಆಯುರ್ವೇದಿಕ್ಕು, ಆಲೋಪತಿ, ಹೋಮಿಯೋಪತಿ, ರೇಖಿ, ಯುನಾನೀ, ಎಲ್ಲ ಟ್ರೀಟ್ಮೆಂಟ್ ಮಾಡಿಸಿಕೊಂಡು ಯಾವುದು ಸರಿ ಹೋಗದೇ, "ನಾನು ರಾತ್ರಿ ಮಾತಾಡೋದೇ ಸರಿ' ಅಂತ ನಿರ್ಧಾರ ಮಾಡಿದ್ಲು.



ಹೊರಡೋಕ್ಕೆ ಮುಂಚೆ ಚಿಗರೇ ಥರ ಆಗೋಗಿದ್ದಳು ಅವಳು. ಅಪ್ಪನಿಗೆ, ಅಮ್ಮನಿಗೆ, ತಮ್ಮನಿಗೆ, ಅಜ್ಜಿ- ತಾತನ್ಗೆ, ಸ್ನೆಹಿತರಿಗೇ ಅಂತ ಎಲ್ಲರಿಗೂ ಶೋಪಿಂಗ್ ಮಾಡಿ, ನಮ್ಮ ಮೂರು ಜನರಿಗೆ ಒಂದು ಚಂದದ ಪಾರ್ಟಿ ಕೊಟ್ಟಳು.ಅವಳಿಗೇನು ಕೊಟ್ಟಿರಲಿಲ್ಲ ನಾನು ಏನು ಕೊಡೋದು ಅಂತ ಯೋಚಿಸಿ ಒಂದು ಅತ್ಯಂತ ದುಬಾರಿಯಾದ ಟೆಡ್ಡಿ ಬೆರ್ ಕೊಟ್ಟೆ ಅವಳಿಗೆ ಅದರ ಹಾಲಿನ ಕೆನೆ ಬಣ್ಣ ಇಷ್ಟ ಆಯ್ತು.



ತೀರಾ ಹೊರೋಡೋ ಮುಂಚೆ ಏರ್‌ಪೋರ್ಟ್ ನಲ್ಲಿ ನನ್ನ ಕೈಗೆ ಒಂದು ಕವರ್ ಕೊಡುತ್ತಾ ನಾನು "ಇಲ್ಲಿಂದ ಹೋಗಿ ಒಂದೆರೆಡು ವರ್ಷಕ್ಕೆ ಮದುವೆ ಆಗಬಹುದು..ಆದರೆ ನನಗೆ ಇಷ್ಟವಾದವನ ಜೊತೆ ಯಾವುದೇ ಬಂಧನವಿಲ್ಲದೇ, ಬಂಧನ ಹಾಕದೆ, ಇದ್ದ ಸಂತೋಷವಿದೆ ನನಗೆ. ನಿನ್ನ ಮದುವೆಗೆ ನನ್ನ ಕರೆಯೋದು ಮರೀಬೇಡ" ಅಂತ ಹೇಳಿ ಹೊರಟೆ ಹೋದಳು. ಕವರು ಬಿಚ್ಚಿ ನೋಡಿದರೆ ಮೊಲದ ಬಿಳುಪಿನ ಟವೆಲ್ ಅದಕ್ಕಂಟಿಸಿದ ಚೀಟಿ "ನನ್ನ ಮಿಸ್ ಮಾಡಿಕೊಂಡಾಗ ಇದು ನಿನ್ನ ಮೈ- ಮನಗಳನ್ನ ಸವರಲಿ" ಅಂತ!!

ಆಫೀಸಿಗೆ ಲೇಟಾಯ್ತು ಅನ್ನೋದು ನೆನಪಾಗಿ ಅವಳು ಕೊಟ್ಟಿದ್ದ ಟವೆಲ್ ತೆಗೆದುಕೊಂಡು ಸ್ನಾನದ ಮನೆ ಹೊಕ್ಕೆ.....

Tuesday, May 22, 2007

ಒಂದು ಮುತ್ತಿನ ಕಥೆ

ನಮ್ಮ ಮನೆ ಎದುರಿಗೆ ಒಬ್ಬ ನಿವೃತ್ತ ಸೇನೆಯ ಅಧಿಕಾರಿ ತಮ್ಮ ಕುಟುಂಬದ ಜೊತೆ ವಾಸವಾಗಿದ್ದರು. ಅವರಿಗೆ ಮೂರು ಜನ ಮಕ್ಕಳು ಮೊದಲನೆಯ ಅಣ್ಣ ವೈದ್ಯರು, ಮಧ್ಯದ ಹುಡುಗಿ ಟೀಚರ್, ಮೊರನೆಯ ಹುಡುಗ ಏನೂ ಮಾಡುತ್ತಿರಲಿಲ್ಲ ಏಕೆಂದರೆ ಅವನಿಗೆ ಬುದ್ಧಿಮಾoದ್ಯವಾಗಿತ್ತು.

ಆ ಮನೆಯವರು ತುಂಬಾ ಒಳ್ಳೇ ಜನ. ತಮ್ಮ ಕೈಯಲ್ಲಿ ಆದಷ್ಟು ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ನಾವು ಮನೆ ಕಟ್ಟಿಸುವಾಗಲೂ ಕಬ್ಬಿಣ, ಸೆಮೆಂಟು ಏನೂ ಕಳ್ಳತನ ಆಗದ ಹಾಗೆ ನೋಡಿಕೊಂಡಿದ್ದರು.ನಾವು ಆ ಮನೆ ಕಟ್ಟಿಸಿ ಗೃಹ ಪ್ರವೇಶ ಮಾಡಿದಾಗ ನಾನು 10ನೇ ತರಗತೇಲಿದ್ದೆ.

ಅವರ ಕೊನೇ ಹುಡುಗ ಕೈಗೆ ಸಿಕ್ಕಿದ ಚಪ್ಪಲಿ, ಟೀ ವಿಯ ರೆಮೋಟು ,ಚೇರು, ಪುಸ್ತಕ ಎಲ್ಲವನ್ನು ಹೊರಗೆ ಎಸೀತಿದ್ದ ಅವೆಲ್ಲ ನಮ್ಮ ಮನೆ ಮುಂದೆ ಬಂದು ಬೇಳುತ್ತಿದ್ದವು.ಆ ಮೇಂಟಲೀ ರಟಾರ್ಡೆಡ್ ಹುಡುಗ ಇವತ್ತು ಟೇಪ್ ರೆಕೊರ್ಡೆರ್ ಹೊರಗೆ ಎಸ್ದ ಕಣೆ ಅಂತ ನನ್ನ ತಂಗಿಗೆ ನಾನು ಹೇಳುವುದಕ್ಕೂ, ಅಪ್ಪ ಆಫೀಸಿನಿದ ಬರುವುದಕ್ಕೂ ಸರಿಯಾಯಿತು. "ಏನಮ್ಮ ಇದನ್ನೇನ ನಾನು ಕಲಿಸಿರೋದು ನಿಮಗೆ ಎಷ್ಟು ಓದಿದ್ರೆ ಏನು ಬಂತು? ಮನುಶ್ಯತ್ವ ಇಲ್ಲದಿರೊವಾಗ" ಅಂದರೂ ಅಪ್ಪ ನನಗೆ ಅರ್ಥವಾಗದೇ 'ನಾ ಏನು ಮಾಡ್ ದೇ ಈಗಾ..' ಅಂತ ರಾಗ ಎಳೆದೆ ."ಆ ಹುಡುಗನಿಗೆ ಹೆಸರಿಲ್ಲವ ಯಾವಾಗಲೂ ಮೇಂಟಲೀ ರಟಾರ್ಡೆಡ್ ಹಂಗೆ ಮಾಡ್ದ, ಹಿಂಗೆ ಮಾಡ್ದ ಅಂತಿರಲ್ಲ.... ಅವನ ಹೆಸರಿನಿಂದ ಕೆರೆಯೊಕ್ಕೆ ಏನು ಕಷ್ಟ ನಿಮಗೆ" ಅಂದರು. ನಾನು ಪುಟ್ಟಿ ಅಪ್ಪನ್ನ ಸಾರಿ ಕೇಳಿದ್ವಿ. ಅವನ ಹೆಸರು ರಾಮು ಅಂತ ಇಟ್ಕೋಳಿ.

ಈಗ ಮುಖ್ಯ ವಿಷಯಕ್ಕೆ ಬರೋಣ. ಆ ಮನೆಗೆ ಬಂದು ಎರಡು ವರ್ಷ ಆಗಿದ್ರೂ ಎದೂರುಗಡೆ ಮನೆಗೆ ನಾನು ಒಂದು ಸಲನು ಹೋಗಿರಲಿಲ್ಲ.ಅವರ ಮನೇಲಿ ಏನೇ ಫ್‌ಂಕ್ಷನ್ನು ಆದ್ರೂ ಅಪ್ಪ ಅಮ್ಮ ಪುಟ್ಟಿ ಹೋಗ್ತಿದ್ರು ನಾನು ಹೋಗ್ತಿರ್ಲಿಲ್ಲ. ನಾನು ಸೆಕೆಂಡ್ ಪಿ ಯು ಸಿ ನಲ್ಲಿದ್ದೆ ಅವತ್ತು ದೀಪಾವಳಿ ನಾನು ಸಚ್ಚು (ನನ್ನ ಕ್ಲಾಸ್ಸ ಮೇಟು) ಮತ್ತೆ ಪುಟ್ಟಿ ಮಾತಾಡುತ್ತಾ ನಿಂತಿದ್ವಿ.ಅಮ್ಮ ಬಂದು "ನೀನು ಇಷ್ಟು ದಿನ ಆದ್ರೂ ಅವರ ಮನೆಗೆ ಹೋಗಿಲ್ಲ ಜಂಬ ಅಂತ ತಿಳ್ಕೋತಾರೆ ಹೋಗಿ ಹೋಳಿಗೆ ತಿಂದು ಬಾ. ಸಚ್ಚು ನೀನು ಹೋಗಮ್ಮ, ಪುಟ್ಟಿ ನೀನು ಹೊಗೆ" ಅಂದ್ರೂ. ಸರಿ ಹೋಗಲೆ ಬೇಕಾಯ್ತು.

ಹೊದ್ವಿ ಡಾಕ್ಟರ್ ಅಣ್ಣ ಮಾತಾಡಿಸಿದರು.ಸಚ್ಚು, ಪುಟ್ಟಿ ಒಂದು ಸೊಫಾ ಮೇಲೆ ಕೊತ್ಕೊಂಡ್ರೂ. ನಾನು ಇನ್ನೊಂದರ ಒಂದು ಬದೀಲಿ ಕೊತ್ಕೊಂಡೆ ಆಂಟಿ ಹೋಳಿಗೆ ಕೊಟ್ರೂ.ಅಷ್ಟರಲ್ಲಿ ಆ ರಾಮು ನನ್ನ ಪಕ್ಕಾ ಖಾಲಿ ಇದ್ದ ಜಾಗದಲ್ಲಿ ಕೂತುಕೊಂಡ.ನನಗೆ ಎದೆಯಲ್ಲಿ ಅವಲ್ಕ್ಕಿ ಕುಟ್ಟಿದ ಹಾಗೆ ಆಗುತ್ತಿತ್ತು. ನಾನು ಹೋಳಿಗೆ ಮುರೀತಿದೀನಿ, ಅಷ್ಟರಲ್ಲಿ ನನ್ನ ಎರಡು ತೋಳು ಗಟ್ಟಿಯಾಗಿ ಹಿಡಿದುಕೊಂಡು ನನ್ನ ಎಡಗೆನ್ನೆಗೆ ಮುತ್ತಿಟ್ಟ ನಾನು ಕಿಟಾರ್.... ಅಂತ ಕಿರುಚಿಕೊಂಡು ತಟ್ಟೇನ ತ್ರೋ ಬಾಲ್ ತರ ದೂರಕ್ಕೆ ಎಸೆದು ಅಲ್ಲಿಂದ ಓಡಿದೆ.ಅಮ್ಮಂಗೆ ಕಿರುಚು ಕೇಳಿಸಿರಬೇಕು ಬಾಗಿಲ ಹತ್ತಿರ ಬಂದಿದ್ದರು. ಅಷ್ಟರಲ್ಲಿ ಪುಟ್ಟಿ, ಸಚ್ಚು, ಆಂಟಿಯು ಬಂದರೂ.ನನಗೆ ಹೇಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತಾಗುತ್ತಿರಲಿಲ್ಲ.ಆಕಸ್ಮಾತ್ ಅವನು ತುಟಿಗೆ ಏನಾದರೂ ಮುತ್ತು ಕೊಟ್ಟಿದ್ದರೆ ಏನು ಗತಿ ಅಂತ ಯೋಚಿಸುತ್ತಿದ್ದೆ.

ಅಮ್ಮ ತುಂಬಾ ಆರಾಮಾಗಿ 'ಹೋಗ್ಲಿ ಬಿಡು ಪಾಪ ಆ ಹುಡುಗನಿಗೆ ತಲೆ ಸರಿ ಇಲ್ಲ' ಅಂತ ನನಗೆ ಗೊತ್ತಿರೋದನ್ನೇ ಹೊಸ ವಿಷಯ ಅನ್ನೋಹಾಗೆ ಹೇಳಿದರು..ಅಮ್ಮ ಜೀವನದ ಮೊದಲನೆ ಕಿಸ್ಸು.. ಅಂತ ಏನೇನೋ ಗೊಣಗಿದೆ..ನೀನು ಚಿಕ್ಕವಳಾಗಿದ್ದಾಗ ಇಡೀ ರೋಡಿನವರು ನಿನ್ನ ಕೆನ್ನೆ ಹಿಂಡಿ, ಮುದ್ದು ಮಾಡಿ, ಮುತ್ತು ಕೊಟ್ಟು ಕಳಿಸೋರು ಇದನ್ನು ಹಾಗೆ ಅಂತ ತಿಳುಕೋ ಅಂದ್ರು.ಇದನ್ನು ಹಾಗೆ ಅಂತ ಹೇಗೆ ತಿಳ್ಕೋಳೋದು ಅಂತ ನನಗೆ ಅರ್ಥ ಆಗಲಿಲ್ಲ.ಆದ್ರೂ ಬೇರೆ ವಿಧಿ ಇಲ್ಲದೇ ಸುಮ್ಮನಾದೆ

Wednesday, May 16, 2007

ಒಂದು ಆಲೋಚನೆ!!!!

ನಾನು ಎಷ್ಟೋ ಸಲ ಯೋಚಿಸಿದ್ದೀನಿ ಈ ಜಗಳಗಳು ಅಸಮಾಧಾನ ಯಾಕೆ ಉಂಟಾಗುತ್ತೆ? ಏಷ್ಟು ಚೆನ್ನಾಗಿರೋರು ಆಷ್ಟೆ ಕೆಟ್ಟಾದಾಗಿ ಯಾಕೆ ಜಗಳ ಆಡ್ತಾರೆ? ಒಬ್ಬರಿಗೊಬ್ಬರು ಸ್ನೇಹದಿಂದ, ಪ್ರೀತಿಯಿಂದ ಇರೋಕೆ ಸಾದ್ಯನೇ ಇಲ್ಲವ?...

ಸಾಮನ್ಯವಾಗಿ ಇಬ್ಬರು ಜಗಳ ಆಡಿದ್ರೆ ಅವರಲ್ಲಿ ಒಬ್ಬರ ಸಣ್ಣತನದಿಂದ (ಅಥವಾ ಇಬ್ಬರದೂ ಇರಬಹುದು) ಅಥವಾ ತಪ್ಪು ತಿಳುವಳಿಕೆಯಿಂದ ಜಗಳ ಆಗಿರುತ್ತೆ.. ತಪ್ಪು ಗ್ರಹಿಕೆಯಿಂದ ಆಗಿರೋ ಜಗಳಗಳಿಗೆ ಸಮಾಧಾನ ಹುಡುಕಬಹುದು, ಆದರೆ ಈ ಸಣ್ಣತನಕ್ಕೆ ಏನು ಮಾಡೋದು?

ನಾನು ವಿಧ್ಯಾರ್ಥಿನಿಲಯದಲ್ಲಿ ಇರೋದ್ರಿಂದ ಸಣ್ಣತನಗಳ ಅನುಭವ ಚೆನ್ನಾಗಿ ಆಗಿದೆ. ಹುಡುಗೀರೆ ಹೀಗ? ಅಥವ ಹುಡುಗರಲ್ಲೂ ಹೀಗಾಗುತ್ತ? ಯಾಕೆ ಸಣ್ಣ ಪುಟ್ಟವಿಷಯಗಳನ್ನು ಹೀಗೆ ದೊಡ್ಡದು ಮಾಡಿ ಜಗಳ ಆಡ್ತಾರೆ? ಒಂದು ಕಡೆ ಮೂರು ಜನ ಇದ್ರು ಅಂತ ಇಟ್ಕೋಳ್ಳಿ.. ಅವರಲ್ಲಿ ಒಬ್ಬರು ಹೊರಗೆ ಹೋದ ತಕ್ಷಣ ಇನ್ನೊಬ್ಬರು ಅವರ ಬಗ್ಗೆ ಯಾಕೆ ಇಲ್ಲ ಸಲ್ಲದ ಮಾತಾಡಬೇಕು?ಯಾಕೆ ಒಬ್ಬರಿಗೊಬ್ಬರಿಗೆ ಪ್ರೀತಿ ಇರಲ್ಲ?ಮನೆಯವರು ಆಗಿದ್ರೆ ಚಿಕ್ಕ ಪುಟ್ಟ ತಪ್ಪುಗಳನ್ನ ಕ್ಷಮಿಸುತ್ತಿದ್ದರು ಅಲ್ಲವ? ನಮ್ಮ ಜೊತೆ ಇರುವವರು ಅವರ ಮನೆಯವರು ಅಲ್ಲ ಅಂದ ತಕ್ಷಣ ಯಾಕಿಷ್ಟು ಒರಟುತನ?

ಎಲ್ಲ ಹುಡುಗೀರು ಹೀಗೆ ಇರ್ತಾರೆ ಅಂತ ಅಲ್ಲ..ಆದ್ರೆ ಸ್ವಲ್ಪ ಜನ ಅಂತೂ ಹೀಗೆ ಇರ್ತಾರೆ..ನಿಜ ಹೇಳಬೇಕು ಅಂದ್ರೆ ಅವರು ಬೆಳೆದ ರೀತಿನೆ ಹಾಗಿರುತ್ತೆ, ಅವರ ಒರಟುತನ, ಅವರು ಸಂಸ್ಕೃತಿ ಇಲ್ಲದೆ ಬೆಳೆದ ರೀತಿ ಅಥವ ಚಿಕ್ಕವಯಸ್ಸಿನಿಂದ ಪ್ರೀತಿ ಸಿಗದೇ ಇರೋದು ಅಥವ ಇನ್ನು ಏನೇನೋ ಕಾರಣಗಳು ಅವರನ್ನ ಹಾಗೆ ಮಾಡಿರುತ್ತವೆ....

ಹೆಂಡತಿ ಗಂಡನನ್ನ, ಮಕ್ಕಳನ್ನ ಪ್ರೀತಿಸಬೇಕು. ಅತ್ತೆ, ಮಾವ, ನಾದೀನೀನ ದ್ವೇಶಿಸಬೇಕು ಅಂತ ಏನು ಇಲ್ಲವಲ್ಲ? ತಾಯಿ ಕೂಡ ಮಗನನ್ನ ಪ್ರೀತಿಸೋದು ಸೊಸೆಯನ್ನು ಗೋಳು ಹುಯ್ಕೋಳೊದು ಅಂತ ಏನು ಇಲ್ಲ?.. ಹೆಂಡತಿಗೆ ಗಂಡ ಮಾಡಿದ ತಪ್ಪು ಅಷ್ಟು ದೊಡ್ದದು ಅಂತ ಅನ್ನಿಸೊದಿಲ್ಲ; ಅನ್ನಿಸಿದರೂ ಅದನ್ನ ರಣರಂಪ ಮಾಡೋಲ್ಲ, ಅದೇ ತಪ್ಪು ಅತ್ತೆಯಿಂದ ಆದ್ರೆ ಯಾಕಿಷ್ಟು ಸಿಡಿ ಮಿಡಿ?

ನಾವು ಯಾವಾಗ ಬೆಳೆಯೋದು ನಾವು ಯಾವಾಗ ಎಲ್ಲರನ್ನ ಪ್ರೀತಿಸೋದನ್ನ ಕಲಿಯೋದು. ಈ ಸಣ್ಣತನಗಳಿಂದ ಹೊರಗೆ ಉಳಿಯೋದು ಹೇಗೆ?

ನಾವುಗಳೆ ಬದಲಾಗಬೇಕು, ಬದಲಾವಣೆ ತರಬೇಕು. ನಮಗೆ ಗೊತ್ತಿರೋರಿಂದ ಮತ್ತು ಹತ್ತಿರ ಇರೋರ 'ಮಾತು- ನಡುವಳಿಕೆಯಿಂದ' ನಮಗೆ ನೋವಾದರೆ ಎಲ್ಲರ ಮುಂದೆ ಹಿಂಗೆ ಮಾಡಿದರು, ಅವನು ಹಾಗಂದ, ಅವಳು ಹಾಗಂದಳು ಅಂತ ಕೊರಗೋದು ಅಥವ ಬೇರೆಯವರ ಹತ್ತಿರ ನಿಮಗೆ ನೋವು ಮಾಡಿರೋರ ಬಗ್ಗೆ, ಅವರ ವಯಕ್ತಿಕ ವಿಷಯಗಳ ಬಗ್ಗೆ ಗಾಸಿಪ್ ಮಾಡೊ ಬದಲು, ಅವರಿಗೇ ವಿಷಯ ಹೇಳಿ ಅರ್ಥ ಮಾಡಿಕೊಂಡ್ರೆ ಸರಿ..if not forget it ....
ನಿಮಗೆ ಹತ್ತಿರದೋರು ಮಾಡುತ್ತಿರುವುದು ತಪ್ಪು ಅನ್ನಿಸಿದರೆ ಅವರಿಗೇ ನೇರವಾಗಿ ಹೇಳಿ ಅವರನ್ನು ಪ್ರೀತಿಸ್ತೀರ ಆದ್ದರಿಂದ ಅವರ ಒಳ್ಳೇದನ್ನೆ ಬಯಸುತ್ತೀರ ಅನ್ನೋದು ಅವರಿಗೇ ಸ್ಪಷ್ಟವಾಗಲಿ.. ಬೇರೆ ಯಾರೋ ಮೂರನೆ ವ್ಯಕ್ತಿ ಬಗ್ಗೆ ಕುಹಕದ ಮಾತು ನಗು ಬೇಡವೇ ಬೇಡ ...ಅವರಿಗೆ ನೀವು ಹೇಳೋದು ಏನು ಇಲ್ಲ. ಅವರ ಹತ್ತಿರದವರು ಅವರಿಗೆ ಹೇಳ್ಕೋತಾರೆ.ಯಾರಾದರು ಇಬ್ಬರು ಜಗಳ ಆಡ್ತಿದ್ರೆ ದಯವಿಟ್ಟು ಅಲ್ಲಿಂದ ಹೊರಗೆ ಬಂದುಬಿಡಿ.ನೀವಿದ್ರೆ ನಿಮ್ಮ ಮುಂದೆ ಇನ್ನೊಬ್ಬರಿಗೆ ಸೋಲಬಾರದು ಅಂತ ಒಬ್ಬರಿಗೊಬ್ಬರು ಪ್ರತಿ ಮಾತು ಹೇಳ್ತಾನೇ ಇರ್ತಾರೆ..ನೀವು ಆ ರೂಮಿನಿಂದಹೋದ ತಕ್ಷಣ ಪಾತಾಳ ಶಾಂತ....

ಇಂದಿನ ಹುಡುಗ ಹುಡುಗೀರು ನಾವು- ನಮ್ಮ ಜೀವನ ಬದಲಾಗಬೇಕು, ನಮ್ಮದು ಸುಂದರವಾದ ಜೀವನವಾಗಬೇಕು..ಜಗಳ, ಅಸಮಧಾನ, ಇನ್ಯಾರದೋ ವಿಷಯಗಳಲ್ಲಿ ಮುಳುಗೋದು ಬೇಡ. ನಮ್ಮಗಳಿಗೆ ಬೇಕಾಗಿರೋದು ಬರೀ ಬೇಸಿಕ್ ನೀಡ್ಸ್ ಅಷ್ಟೇನ? ಬರೀ ಅಷ್ಟಕ್ಕೆ ಇಷ್ಟೆಲ್ಲ ಒದ್ದಾಡುತ್ತೀವ? ಎನಾದರು ಕಂಡು ಹಿಡಿಯೋಣ, ಮಾಡೋ ಕೆಲಸಗಳನ್ನೇ ಹೊಸ ಹೊಸ ರೀತಿಯಲ್ಲಿ ಸಮರ್ಥವಾಗಿ ಮಾಡೋಣ, ಚಿಕ್ಕ ಪುಟ್ಟ ಕ್ಷಣಗಳಲ್ಲಿ ಸಂತೋಷ ಹುಡುಕೋಣ.ದೊಡ್ಡ ದೊಡ್ಡ ಅಘಾತ ಅಸಂತೋಷವನ್ನ ಮರೆಯೋಣ..
ಭೈರಪ್ಪನವರ ವೈಚಾರಿಕ ದೃಷ್ಟಿ ಇರಲಿ,ರವಿ ಮಾಮನ ಥರ frankಆಗೋಣ , ತೇಜಸ್ವಿಯವರ ಹುಡುಕಾಟದಲ್ಲಿ ನಮ್ಮದೂ ಒಂದು ಹೆಜ್ಜೆ ಇರಲಿ, ಮಾಳವಿಕ ಅಕ್ಕನಿಂದ ಧೈರ್ಯ ಕಲಿಯೋಣ, ನಮ್ಮಲ್ಲಿ ಕೆ.ಎಸ್.ನ ಅವರ ಪ್ರೀತಿ ಇರಲಿ ದ್ರಾವಿಡ್ steadyness,ಸೆಹವಾಗ್ ಭೋರ್ಗರೆತದ ಜೊತೆಗೆ ಸುಬ್ಬಲಕ್ಷ್ಮಿ ಲತಾ ಚಿತ್ರ ಜಾನಕಿಯವರ ಸಂಗೀತದ ಮಾಧುರ್ಯವಿರಲಿ ನಮ್ಮ ನಿಮ್ಮಗಳ ಮದ್ಯೆ...

ಪ್ರಶ್ನೆ!!???

ಕಪ್ಪೆ ಸದ್ದು ಕೇಳಿ ಸಣ್ಣಗೆ ರೋಮಾಂಚನಗೊಳ್ಳುತ್ತಿದ್ದಳು ಅವಳು..ಮಳೆ ಬರುತ್ತೆ ಅಂತು ಮನಸ್ಸು..

ಅಜ್ಜಯ್ಯ ತನ್ನ ಪುಟ್ಟ ಮೊಮ್ಮಕ್ಕಳಿಗೆ ನಾಳೆ ಖಂಡಿತ ನವಿಲು ತೋರುಸ್ತೀನಿ ಅಂತ ಆಸೆ ತೋರಿಸುತ್ತಿರೋದು ..God promise ಮಾಡು ತಾತಾ mother promiseಮಾಡು ತಾತಾ ಅಂತ ಅವು ಗೋಳು ಹುಯ್ಕೋತಿರೋದು ಕೆಳುಸ್ತಿತ್ತು.

ಮನೆಯ ದೊಡ್ಡ ಮೊಮ್ಮಗಳಲ್ಲವೇ ಅವಳು...ತಾತ ಅವಳಿಗೂ ಮೊದಮೊದಲು ನವಿಲು ತೋರಿಸಿದ್ದ ಅವಳ ನಾಲ್ಕನೇ ವರ್ಷದಲ್ಲಿ...ಅವಳಿಗೆ ಒಂದು ಚಂದದ ಹೆಸರು ಇತ್ತು..ಅರುಂಧತಿ ಅಂತ 'ಅರೂ' ಅಂತ ಕರೀತಿದ್ರು ಪುಟ್ಟದಾಗಿ ಪ್ರೀತಿಯಿಂದ.... ಆದರೆ ತನ್ನ ಇಪ್ಪತ್ತನೆ ವಯಸ್ಸಿನಲ್ಲಿ ಸಿಕ್ಕ ಚುಂಬನ ಕೂಡ ನವಿಲಿನ ಮುಂದೇನೇ ಆಗುತ್ತೆ ಅಂತ ಖಂಡಿತ ಉಹೆ ಇರಲಿಲ್ಲ ಅವಳಿಗೆ.ಆ ಹುಡುಗನ ಎತ್ತರ ನೆನಪಿಗೆ ಬಂದು ಮುತ್ತು ಕೊಡೋಕ್ಕೆ ಅವನು ಬಗ್ಗಬೇಕಾಯ್ತಾಲ್ಲ... ಅನ್ನಿಸಿ ನಕ್ಕಳು.

ಬೆಳಗ್ಗೆ ತೋಟದ ಬಾವಿ ನೀರಲ್ಲಿ ಈಜಾಡಬೇಕು ಅಂತ ಬೇಗನೆ ಎದ್ದು, ತಾತನ ಜೊತೆ ಅಷ್ಟು ದೂರ ಬಾವಿ ಕಡೆ ಹೋದ್ರೆ.."ನಿನ್ನ ಚಿಕ್ಕಪ್ಪ ಇನ್ನೂ ವಂದಿಲ್ಲೇ ಅವನು ಬಂದ್ರೆ ಬೇಕಾದ್ರೆ ಈಜಡಿಕೊ" ಅಂತ ಕನ್ನಡ ತಮಿಳು mix ಮಾಡಿ ಹೇಳಿದ ತಾತನ ಮೇಲೆ ಸಿಟ್ಟು ಬಂದಿತ್ತು. "ಚಿಕ್ಕಪ್ಪ ವರಲ್ಲೇ ಅಂತ ಗೊತ್ತಾಗಿ ಅಲ್ಲೇ ಮಣ್ಣು ನೆಲದ ಮೇಲೆ ಅಡ್ಡಾದಳು ..ಜೂರು ನಿದ್ದೆ..

ಕರಿಯ ಬಂದು ಸಾಮಿ ಎದ್ದೇಳಿ ಮನೆ ತಾಕ್ಕೆ ಹೋಗ್‌ಬೇಕಂತೆ ದೊಡ್ಡ ಸಾಮಿ ಹೇಳ್ಟು ಅಂದಾಗ ಎಚ್ಚರ ಆಯ್ತು ಈ ಕರಿಯಂಗೆ ಹೆಣ್ಣು, ಗಂಡು, ದೊಡ್ಡವರು, ಚಿಕ್ಕವರು, ಅನ್ನೋ ಭೇದನೆ ಇಲ್ಲ ಅಪ್ಪಾಂಗು ಸಾಮಿ, ತಾತಂಗುಸಾಮಿ, ಅಜ್ಜಿಗೂ ಸಾಮಿ, ಮೊಮ್ಮಗಳಿಗೂ ಸಾಮಿ, ಮನೆ ಪುಟ್ಟ ಕಂದ - ರಾಘವಂಗು ಸಾಮಿ, ಅಂತನಲ್ಲ ಅನ್ನಿಸಿ.. ನಿದ್ದೆ ಕಣ್ಣಲ್ಲೇ ಅವನನ್ನೇ ನೋಡುತ್ತಿದ್ದಳು..ಅವನಿಗೆ ಗೊಂದಲವಾಗಿ 'ದೊಡ್ಡ ಸಾಮಿ ಕರಿತತೆ..' ಅಂತ ರಾಗ ಎಳೆದ...

ಈ ಕರಿಯ ಅಜ್ಜಯ್ಯನಿಗಿಂತ ಹತ್ತು ವರ್ಷಕ್ಕೆ ಚಿಕ್ಕವನಿರಬಹುದು ಮೊದಲನೆ ಸತಿ ಅವನನ್ನು ನೋಡಿದಾಗ ಸಂಜೆ ತಂಪಲ್ಲಿ ಅವನು ಕಾಯಿಸುಲೀತಿದ್ದ... ಆಗ ನಾನು ಮೂರನೇ ಕ್ಲಾಸ್‌ನಲ್ಲಿದ್ದನಾ ಅಂತ ಜ್ಞಾಪಿಸಿಕೊಂಡಳು ಅರೂ.. ಅಜ್ಜಿ ಸಕ್ಕರೆ ನೀರು ಕಾಸಿ, ಹಳೆ ಕಾಫಿಗೆ ಆ ನೀರನ್ನು ಸೇರಿಸಿ ಒಂದು ದೊಡ್ಡ ಲೋಟ ಕಾಫಿ ಮಾಡಿದಳು. "ಇದನ್ನ ಕರಿಯನ ಲೋಟಕ್ಕೆ ಮೇಲಿಂದ ಸುರಿದು ಬಾ, ಅವನ ಲೋಟಕ್ಕೆ ಈ ಲೋಟ ತಾಗುಲಿಸ ಬೇಡ" ಅಂತ ಭೋಧಿಸಿ ಕಳುಹಿಸಿದಳು. ಆ ಛತ್ರದಂತಹ ಮನೆಯ ಅಡುಗೆ ಮನೆ, ಆರಂಗು, ಹಾಲೂ , ವಾರಂಡ ದಾಟಿ ಜಗುಲಿಗೆ ಬರೋಹ್ತೊತ್ತಿಗೆ ಅಜ್ಜಿಯ ಮಾತು ಮರೆತಿತ್ತು ಮೂರನೇ ಕ್ಲಾಸಿನ ಪುಟ್ಟ ಅರುಗೆ. ಕಯ್ಯಲ್ಲಿ ಕಾಫಿ ಇದ್ದಿದ್ದರಿಂದ ಅದನ್ನ ಕರಿಯನಿಗೆ ಹಾಕ್‍ಬೇಕು ಅಂತ ಗೊತ್ತಾಯ್ತು 'ಸಾಮಿ ಇಲ್ಲ್ಹಾಕಿ' ಅಂತ ಲೋಟ ಇಟ್ಟು ಬೆವರು ಒರೆಸಿಕೊಳ್ಳುತ್ತಾ ದೂರ ಹೋದ ಕರಿಯ.ಅರೂ ಕಾಫಿ ಕೆಳಗೆ ಚಲ್ಲದಂತೆ ನೀಟಾಗಿ ಹಾಕಬೇಕು ಅಂತ ಆ ಲೋಟಕ್ಕೆ ಈ ಲೋಟ ತಗುಲಿಸಿಯೇ ಹಾಕಿದ್ಲು..ಅಲ್ಲೇ ಇದ್ದ ಅವಳ ಅಪ್ಪ "ಹಂಗೆ ಲೋಟ ತಗುಲಿಸಿ ಹಾಕಬಾರದು ಕಂದ ಅಜ್ಜಿಗೆ ಬೇಜಾರಾಗುತ್ತೆ ನೋಡಿದ್ರೆ ನಿನ್ನ ಗ್ರಹಚಾರ ಬಿಡಿಸೋಳು" ಅಂದ್ರು.

ಮಳೆ ಬಂದ್ರೆ ಅಜ್ಜಿ ನೆನೆಯಕ್ಕೆ ಬಿಡ್ತಾಳಾ.. ಅಂತ ಕೇಳಿಕೊಂಡಳು ..ಆದ್ರೆ ನಾನು ನೆಂದರೆ ಈ ಚಿಲ್ತಿ ಪಿಲ್‌ಟಿಗಳು ನೆನೆಯಕ್ಕೆ ಶುರು ಮಾಡುತ್ತವೆ.. ಚಿಕ್ಕಮ್ಮಂಗೆ ಬೇಜಾರಾಗುತ್ತೆ ಅನ್ನಿಸಿತು. ಹಾಳಾಗ್ ಹೋಗ್ಲಿ ನೆನೀದಿದ್ರೂ ಪರ್ವಾಗಿಲ್ಲ ಈ ಪುಟ್ಟ ಮಕ್ಕಳು ಗಲಾಟೆ ಮಾಡದಿದ್ರೆ ಮಳೆ ಸದ್ಡನ್ನಾದರೂ ಕೇಳಬೇಕು,ಜಗುಲಿಮೇಲೆ ಕೂತ್ಕೊಂಡು ಮಳೆ ನೋಡಬೇಕು ಅಂತ ಜಗುಲಿ ಕಡೆಗೆ ಹೋದ್ಲು.
ಮಲೆನಾಡಿನಲ್ಲಿ ಹುಟ್ಟಿ ಬೆಳೆದು ರಜಾದಲ್ಲಿ ಅಜ್ಜನ ತೋಟದ ಮನೇಲಿ ಸಮಯ ಕಳೆದ ಅವಳಿಗೆ ಮಳೆ everlasting ಅಚ್ಚರಿ ..ಬೆಳಗು, ಕಾಡು, ಕಡಲು, ಸಂಜೆ, ಉರಿಬಿಸಿಲು, ಬೆಳದಿಂಗಳು, ಎಲ್ಲಾನೂ ಒಂದು exitement..

ಬೇಕಂತಲೇ ಕಾಲೇಜಿಗೆ ಛತ್ರಿ ತೊಗೊಂಡು ಹೋಗದೇ ವಾಪಾಸಾಗುವಾಗ ಬರೋ ಮಳೆಯಲ್ಲಿ ಪೂರ್ತಿ ನೆನೆದು, ಕುಣಿದು..ಮನೆಗೆ ಬಂದಾಗ 'ಛೇ! ಎಂಥ ಮಳೆ! ಪೂರ್ತಿ ಬಟ್ಟೆ ನೆಂದು ಹೋಗಿದೆ..ಕಾಲೇಜು ಬಿಟ್ಟಾಗಲೇ ಬರಬೇಕಾ ಈ ಮಳೆ ಏನು ಖರ್‍ಮಾನೋ' ಅಂತ ದಪ್ಪ ಟೆವಲಿನಲ್ಲಿ ತಲೆ ಒರೆಸುತ್ತೀರೋ ಅಮ್ಮನ ಮುಂದೆ ನಾಟಕ ಆಡಿದ್ದು, ರಸ್ತೆಯಲ್ಲಿ ಮಳೆ ನೀರು ತುಂಬಿದ ಹೋಂಡಗಳ ಪಕ್ಕವೇ ನೆಡೆದು ಹೋಗುತ್ತಿರುವಾಗ ಲಾರಿಯೋ ಬಸ್ಸೊ ಬರ್‍ರ್‍ರ್ ಅಂತ ಅದರ ಮೇಲೆ ಹೋಗಿ ಇವಳ ಮೇಲೆ ನೀರಿನ ಅಭಿಷೇಕ ಆದಾಗ ಮನಸ್ಸಿನಲ್ಲಿ ಕುಣಿಯೊಅಷ್ಟು ಖುಷಿ ಆಗ್ತಿದ್ದ್ರೋ 'ಥತ್ ಈ ಲಾರಿ ಬಸ್ಸಿನವರಿಗೆ ಸರಿಯಾಗಿ drive ಮಾಡೋಕ್ಕೋ ಬರೋಲ್ಲ' ಅಂತ ಸುಮ್ಮನೇ ಬೈದಿದ್ದು ನೆನಪಾಯಿತು.

ಯಾರೋ ಕಪ್ಪಗಿನ ಹುಡುಗ ಬರುತ್ತಿರೋದು ಕಾಣಿಸಿತು ಜಗುಲಿ ಮೇಲೆ ಕೂತಿದ್ದವಳಿಗೆ..ನನ್ನ ಹುಡುಗನೂ ಹೇಗೆ ಇದಾನಲ್ಲ ಅನ್ನಿಸುತ್ತಿತ್ತು..ಆ ಹುಡುಗ ಬಂದದ್ದೆ "ಅಪ್ಪ ಎಲ್ಲೈತೆ ಗೊತ್ತಾ ಸಾಮಿ" ಅಂದ..ನೀ ಯಾರು ಅಂದಿದ್ದಕ್ಕೆ.."ಏ... ಕರಿಯನ ಕೊನೇ ಮಗ ಕನ ಸಾಮಿ" ಅಂದ ತೆಲೆ ಕೆರೆದುಕೊಳ್ಳುತ್ತಾ.."ತಾತನ ಜೊತೆ ತೋಟದ ಕಡೆಗೆ ಹೋದ ಎಂದಳು".

ಈ ಹುಡುಗನ ತರ ಇರೋದು ಮಾತ್ರವಲ್ಲ ನನ್ನ ಹುಡುಗನ ಜಾತಿ ಕೂಡ ಇವರದೇ ಜಾತಿ ಎಂದು ನೆನಪಿಗೆ ಬಂದಾಗ ಸಣ್ಣಗೆ ಬೆವರಿದಳು.....
'ಅಜ್ಜಿ ನೋಡಿದ್ರೆ ಗ್ರಹಚಾರ ಬಿಡಿಸೋಳು' ಅಂದಿದ್ದ ಅಪ್ಪ ಈ ಜಾತಿ ಹುಡುಗನ್ನ ಮದುವೆ ಆಗ್ತೀನಿ ಆಂದ್ರೆ ಏನುಹೇಳಬಹುದು ಅಂತ ಯೋಚಿಸುತ್ತಾ ಕುಳಿತ ಅವಳಿಗೆ ಮಳೆ ಸದ್ದು ಕೇಳುತ್ತಿರಲಿಲ್ಲ.....

ಒಂದು ಸತ್ಯ ಘಟನೆ

ಮೊನ್ನೆ ಶ್ರೀನಿಧಿಯವರು ಬರೆದಿದ್ದ ಪಲ್ಲಕ್ಕಿ movie review ನೋಡಿದಾಗ ಜ್ಞಾಪಾಕಕ್ಕೆ ಬಂದ ಘಟನೆ. ನಾನು ಶಿಲ್ಪ 'ಜೊತೇಜೊತೆಯಲಿ..' movie ನೊಡ್‌ಕೆ ಹೋಗಣ ಅಂತ ready ಆಗಿ ಹೊರಟಿದ್ವಿ. ಆಗ Indu(ಅವಳು ಉತ್ತರ ಭಾರತೀಯ ಹುಡುಗಿ) ಬಂದು where r u going ಅಂದ್ಲು ಕನ್ನಡ movie ಅಂದೆ . I too will come, I m getting bored ಅಂದ್ಲು. ಸರಿ ಬಾ ಅಂತ ಕರ್ಕೊಂಡ್ ಹೊದ್ವಿ ಇನ್ನೂ ಇವ್ಲಿಗೆ ಟ್ರಾನ್ಸ್ಲಟೆ ಮಾಡಿ ಬೇರೆ ಹೇಳ್‌ಬೆಕಲ್ಲ.. ಅಂತ ನನ್ನ ಯೋಚನೆ ಆಗಿತ್ತು.ಸರಿ movie ಮಧ್ಯದಲ್ಲಿ ಪ್ರೇಂ ಅಳುತ್ತಾ ಇದ್ದಾನೆ.... ಅವ್ನು ಅಳುತ್ತಾ ಇದ್ದಾನ ಅಥ್ವ ನಗ್ತಾ ಇದ್ದಾನ ಗೊತ್ತಾಗದೆ ನಾವು ಕಕ್ಕಾಬಿಕ್ಕಿ.ಅಷ್ಟ್ರಲ್ಲಿ ಇಂದು ನಗಕ್ಕೆ ಶುರು ಮಾಡಿದ್ಲು ಯಾಕೆ ನಗ್ತಿದ್ಯಾ ಅಂತ ಕೇಳಿದ್ದಕ್ಕೆ do u think I cant understand Kannad??I know he is laughing at some joke ಅಂದ್ಲು.
ನಾನು ಶಿಲ್ಪ ಮುಖ ಮುಖ ನೋಡ್ಕೊಂಡು ಸುಮ್ಮನಾದ್ವಿ

Tuesday, May 15, 2007

ಮನಸು ಹಗುರ ಹಗುರ..ನೆನಪು ಬಚ್ಚಲಲ್ಲಿ ಭದ್ರ .......

ಸ್ನಾನ ಅನ್ನೋದು ಎಷ್ಟು ಚೆನ್ನಾದ ಕೆಲಸ ಅಂತ ಅನ್ನಿಸುತ್ತೆ. ಕೆಲಸ ಅಂದ ತಕ್ಷಣ ಅದು ಎಷ್ಟೇ ಚೆನ್ನಾಗಿರಲಿ ಅದಕ್ಕೊಂದು ಕಷ್ಟದ ಲೇಪ ಹಚ್ಚಿಬಿಡ್ತೀವಿ . ಆದರೆ ಸ್ನಾನ ಮಾತ್ರ ಇಷ್ಟದ ಕೆಲಸಾನೆ.

ಸ್ವಚ್ಹ, ಶುಭ್ರವಾಗಿರೋದಕ್ಕೆ ಸ್ನಾನ ಮಾಡ್ತೀವಿ ಅಂದ್ರೂ ಅದೊಂದು ನೆಪ ಮಾತ್ರ.
ಗಡಿಬಿಡಿಲಿ ಸ್ನಾನ ಮಾಡೋದು ಬಿಟ್ಟು ಬಿಡಿ..... ಅರಾಮಾಗಿ ನೀವು ಸ್ನಾನ ಮಾಡಿರೋದು ಜ್ಞಾಪಿಸಿಕೊಳ್ಳಿ.. ಅದೊಂದು ಅದ್ಭುತ feeling...

ಟವೆಲ್ಲು ಬಟ್ಟೆ ತೊಗೊಂಡು ಸ್ನಾನದ ಮನೆಯನ್ನ ಹೊಕ್ಕು, ಒಂದು ಚೊಂಬು ಬಿಸಿ ನೀರು ಮೈಮೇಲೆ ಬಿದ್ದ ತಕ್ಷಣ ನೆನಪು-ರಿವರ್ಸ್ ಗೇರ್ ನಲ್ಲಿ! - ಅಮ್ಮನ ಹಾಡು, ತಂಗಿ ಜೊತೆ ಕೀಟಲೆ ,ಅಪ್ಪನ ತಮಾಷೆ-ಕಾಳಜಿಯ ಮಾತು, ತಾತನ ನಗು- ಪ್ರೀತಿ, ಅಜ್ಜಿಯ ಧಾವಂತಗಳು, ಚಿಕ್ಕಪ್ಪನ ಧೈರ್ಯ, ಪಕ್ಕದ ಮನೆ ಕುಳ್ಳೀ ಜಲಜನ ಜೊತೆ ಜಗಳ, ಹೀಗೆ ನೂರಾರು ನೆನಪುಗಳು ಸ್ನಾನದ ಕೋಣೆಯ ಪ್ರತಿ ನಲ್ಲಿಗು, ಷವರ್ ಗೂ, ಅಲ್ಲಿನ ಸೋಪ್ ಸ್ಟಾಂಡ್ ಗೂ, ಅಪ್ಪನ ಸಿಂತಾಲ್ ಸೋಪ್ ಗೂ - ಹೀಗೆ ನೂರು-ನೂರು ನೆನಪು ಹಂಚಬಹುದು.

ಇಲ್ಲಾ..ನಿಮ್ಮ ಮನಸ್ಸೆಂಬ ಹಕ್ಕಿಗೆ ನೂರಾರು ಕನಸು. ಇವತ್ತು ನಾನು ಮಾಡಬೇಕಾಗಿರೊ ಕೆಲಸಾನ ಹೇಗೆ ಮಾಡಬೇಕು, ಏನೇನು ವ್ಯವಸ್ಥೆ ಮಾಡಬೇಕು, ಮುಂದೆ ದುಡ್ಡಿದಾಗ ಅಂಥಾ ಮನೆ ಕಟ್ಟಿಸಬೇಕು, ಮತ್ತು ಎಲ್ಲೆಲ್ಲಿಗೆ ಪ್ರವಾಸ ಹೋಗಬೇಕು ಇನ್ನು ಏನೇನೋ ಕನಸುಗಳು....

ನಾನು ಸಾಮಾನ್ಯ ಸಂಜೆ ಸ್ನಾನ ಮಾಡ್ತೀನಿ.ಕ್ಲಾಸ್ ಅದಮೇಲೆ, ಅರಾಮಾಗಿ ಆರರಿಂದ ಏಳು. "ಈ ಹುಡುಗಿಗೆ ಏನಾಗಿದೆ ಸ್ನಾನದ ಮನೆಯಲ್ಲೆ ಎಷ್ಟೊಂದು ಹೊತ್ತು ಕಳೀತಾಳಲ್ಲ ಎಷ್ಟೊಂದು ಟೈಮ್ ವೇಸ್ಟ್".. ಅಂತ ಅಪ್ಪಂಗೆ ಚಿಂತೆ ಆದ್ರೆ "ಸೋಲಾರಿನ ಬಿಸಿ ನೀರೆಲ್ಲ ಇವಳೇ ಸುರುಕೊಂಡಾಗಿರುತ್ತೆ. ಛೇ.. ಬೆಳಗ್ಗೆ ಎದ್ದು ಗೀಸರ್ ಆನ್ ಮಡಬೇಕು.. ಎಷ್ಟೊಂದು ಕರೆಂಟ್ ವೇಸ್ಟ್" ಅನ್ನೋ ಚಿಂತೆ ಅಮ್ಮಂಗೆ.

ಗೀಸರ್, ಸೋಲಾರ್, ಬಾಯ್ಲರ್ಗಿಂತ ಹಂಡೇಲಿ ಕಾಸಿದ ನೀರು ಎಷ್ಟು ಚೆಂದ. ಒಂಥರ ಹಿತ.. ಸೌದೆ ಒಲೆ ಹತ್ತಿಸೋದು, ಅದರ ಹೊಗೆ ಈಗಿನ ಕಾಲದ ನಮಗೆ ರೇಜಿಗೆ ಅನ್ನಿಸಬಹುದು ಆದ್ರು ಹಂಡೆ ನೀರು ಅಂದ್ರೆ ಏನೋ ಒಂದು ಅಟ್ಯಾಚ್ ಮೆಂಟ್.. ರಜದಲ್ಲಿ ಅಜ್ಜನ ಮನೆಗೆ ಹೋದಾಗ ಎಷ್ಟು ಆರಾಮ..ಹಂಡೆ- ಬಿಸಿ ನೀರು -ಕರೆಗಟ್ಟಿದ ಬಚ್ಚಲು- ಮೂಲೇಲಿ ಮಣೆ- ತಾಮ್ರದ ಚೊಂಬು- ಗೂಡಲ್ಲಿ ಅರಿಶಿನ, ಪಕ್ಕದಲ್ಲಿ ಸೀಗೇಕಾಯಿ ಮೆಲೆ ಚಿಕ್ಕಪ್ಪನ ಮೈಸೂರು ಸ್ಯಾಂಡಲ್ ಸೋಪು ಘಮ್ ಅಂತ...

ಯಾರು ಸ್ನಾನ ಮಾಡ್ಕೊಳ್ಳೊಕೆ ಮಾತ್ರ ಬೇಜಾರು ಪಟ್ಟುಕೋಬಾರದು.ಯಾವಾಗಲಾದರೂ ಮಾಡಿ ದಿನಕ್ಕೊಂದು ಸಲ ಅರಾಮಾಗಿ. ಸ್ನಾನದಮನೆಯಿಂದ ಬಂದ ತಕ್ಷಣ-
ನಿಮ್ಮ ಮನಸು ಹಗುರ ಹಗುರ..ನೆನಪು ಬಚ್ಚಲಲ್ಲಿ ಭದ್ರ- ಕನಸು ಬಿಸಿನೀರಿನ ಆವಿ, ಹೊಗೆ ರೂಪದಲ್ಲಿ ಆಕಾಶದ ಹತ್ತಿರ...

Monday, May 14, 2007

ಬರೆಯೊಕ್ಕೆ ಶುರು ಮಾಡಿದ್ದರ ಬಗ್ಗೆ

ನನ್ನ ಬಗ್ಗೆ ಹೇಳಿಕೊಂಡು ನಿಮ್ಮ ತೆಲೆ ತಿನ್ನೋಕೆ ಇಷ್ಟ ಇಲ್ಲ..
ಆದ್ದರಿಂದ ಬರೆಯೊಕ್ಕೆ ಶುರು ಮಾಡಿದ್ದರ ಬಗ್ಗೆ ಹೇಳ್ತೀನಿ... ಹೋದ ವರ್ಷದ ಒಂದು ಛಳಿಗಾಲದ ಸಂಜೆ
ಒಂದು ಘಮ್ಮನೆಯ, ಬಿಸಿನೀರಿನ, ಅದ್ಭುತ ಸ್ನಾನ ಮಾಡ್ಕೊಂಡು ರೂಮಿಗ್ ಬಂದೆ.. ಏನಾದ್ರೂ ಬರೆಯೊಕ್ಕೆ ಕೈ ಚಡಪಡಿಸುತ್ತಿತ್ತು. ದೀಪ ಹಚ್ಚಿ, ಪೂಜೆ ಮಾಡಿದ್ ನೆಪ ಮಾಡಿ, ವಿಷ್ಣುಸಹಸ್ರನಾಮನ ಸಹಸ್ರಾರು ಮೈಲಿ ವೇಗದಲ್ಲಿ ಬಡಬಡಿಸಿ, ಯಾವುದೋ record ಬರಿತಿದ್ದ friend ಪೆನ್ ಕಿತ್ತುಕೊಂಡು ಬರೆಯೋಕ್ ಶುರು ಮಾಡಿದೆ. ಸ್ನಾನದ ಬಗ್ಗೆನೇ ನನ್ನ ಮೊದಲ ಬರಹ. ಈಗ ಏಳು ಎಂಟು ಬರಹಗಳು 3 ಕಥೆ ನನ್ನಲ್ಲಿವೆ.ವಾರಕ್ಕೊಂದು ಪೋಸ್ಟ್ ಮಾಡೋ ಆಲೋಚನೆ ಇದೆ ಲಹರಿಯಲ್ಲಿದ್ದರೆ ಬರೀತೀನಿ..ನಿಮ್ಮ ಅನಿಸಿಕೆಗಳನ್ನು ತಿಳಿಸುವಿರಲ್ಲವೇ??