Tuesday, June 10, 2008

ಮನಸು ಮಹಾಮರ್ಕಟದ ಸುಳಿ

1
"ಕೊಲ್ಲುವ ಭಯ, ಹಸಿದುಕೊಂಡಿರುವ ಭರವಸೆ, ತಣ್ಣಗಿನ ನೋವು, ನನ್ನದಲ್ಲವೆನಿಸುವ ಕೆಲಸ, ಮಡುವುಗಟ್ಟುವ ಆತಂಕ ಅನುಮಾನಗಳು, ಗೊತ್ತೇ ಇಲ್ಲದ ಹೆಸರಿಸಲಾಗದ ದುಖ , ಕುರುಡು ಯೋಚನೆಗಳು ದಟ್ಟವಾಗಿ ಮೋಡದಂತೆ ನನ್ನನ್ನು ಆವರಿಸಿಕೊಳ್ಳುತ್ತಿದೆ ಅಂದುಕೊಳ್ಳುತ್ತಿರುವಾಗಲೇ, ಅವಳಿದ್ದಿದ್ದರೆ "ಇವೆಲ್ಲ ಮೋಡದಂತೆ ಆವರಿಸಿಕೊಳ್ಳುತ್ತಿವೆ ಅಂತ ಯಾಕೆ ಅಂದುಕೋತಿಯ? ದುಖಕ್ಕೆ ಮೋಡಾನೆ ಯಾಕೆ ಉಪಾಮಾನವಾಗಿ ಬಳಸಿಕೊಳ್ಳಬೇಕು?" ಅಂತ ಕೇಳಿರೋಳು. ಮೋಡ ಬೇಡ, ಮತ್ತೇನು? ಉಸಿರುಗಟ್ಟಿಸುವ ಗಾಳಿಯಂತೆ, ಮುಳುಗಿಸುವ ನೀರಿನಂತೆ, ಗಡಚಿಕ್ಕುವ, ಆಕ್ರಂದನದಂತೆ, ಯಾವುದಂತೆಯೋ ಆವರಿಸಿಕೊಳ್ಳುತ್ತಿರುವ ಈ ಎಲ್ಲವುಗಳಿಂದ ದೂರ ಹೋಗಿ ದನ ಕಾಯಬೇಕು, ರಂಜೆ ಮರದಡಿಯ ಹೂವು ಹೆಕ್ಕಬೇಕು,ನೆಲ್ಲಿಕಾಯಿ ತಿನ್ನಬೇಕು. ನಾನು ಕೇವಲ ಹತ್ತು ವರ್ಷದವನಾಗಿದ್ದಾಗ ಪಕ್ಕದ ಮನೆಯ ೨೧ ವರ್ಷದ ಹುಡುಗಿ ನನ್ನ ಕರೆದು ತೋರಿಸಿದ ಅವಳ ಬೆತ್ತಲು ದೇಹವನ್ನು ಮತ್ತೆ ಸುಮ್ಮನೇ ಅದೇ ಮುಗ್ಧತೆಯಿಂದ ನೋಡಬೇಕು, ಕೃಷ್ಣನ ಜೊತೆ ಪಂದ್ಯ ಕಟ್ಟಿ ನರ್ಮದೆಯಲ್ಲಿ ಕೈಸೋಲೋವರೆಗೂ ಈಜಬೇಕು, ತೆಳ್ಳಗೆ ಹರಡಿದ ಕಾಡುಗಳಲ್ಲಿ, ಅವಳ ಜೊತೆ ಕೈ ಕೈ ಹಿಡಿದುಕೊಂಡು ಮಾತೇ ಆಡದೆ ಅಲೆಯಬೇಕು" ಕಾರಿನ ಸೀಟನ್ನು ಹಿಂದಕ್ಕೆ ಮಾಡಿ ಒರಗಿಕೊಂಡು ಕಣ್ಣು ಮುಚ್ಚಿದ.

ಇಪ್ಪತ್ತು ವರ್ಷದ ಹಿಂದೆ ಓದಿದ್ದ ಅರುಣ್ ಜೋಶಿಯವರ ಕಾದಂಬರಿಯ ಮೊದಲ ಪುಟದಲ್ಲಿದ್ದ ಸಾಲು "it irked him to be here, he could not rest ", ನೆನಪಾಯಿತು. ಅನಘಗೆ ಈ ಕಾದಂಬರಿಯನ್ನು ಓದಲು ಹೇಳಬೇಕು ಅಂದುಕೊಂಡ.ಆ ಸಾಲು ಯಥಾವತ್ತಾಗಿ ಯಾಕೆ ನೆನಪಾಯಿತು? ಕಿಟಕಿ ಹೊರಗಡೆ ನೋಡಿದ ಬೆಳಕು ನಿಧಾನವಾಗಿ ಹೊಂಬಣ್ಣವಾಗುತ್ತಾ ಕಿತ್ತಲೆಯ ರಸದಂತೆ ಆಕಾಶವನೆಲ್ಲ ತುಂಬುತ್ತಿದೆ ಅನಿಸುತಿದ್ದರೆ ಇದಕ್ಕೆ ಸಂಜೆ ಎಂಬ ಮುದ್ಡಾದ ಹೆಸರಿದೆಯಲ್ಲ ಅಂದುಕೊಳ್ಳುತ್ತಾ ಅವನ ಮನಸ್ಸು ಖುಷಿಯಾಗುತ್ತಿರುವಾಗಲೇ ತನ್ನ ಭಾರವಾದ ಕಂಗಳನ್ನು ಇನ್ನೂ ಭಾರವಾಗಿಸಿಕೊಂಡು ನೆಲ ನೋಡುತ್ತಾ ಶಮಾ ಕಾರ್ ಬಳಿ ಬಂದಳು. "ಶಿವು ನೀನು ಇಲ್ಲಿರ್ತಿಯ ಅಂತ ಗೊತ್ತಿತ್ತು. ಅಲ್ಲಿ ಕ್ಯಾಬಿನ್ ಹತ್ರ ಇಲ್ಲ ಅಂದ್ರೆ ಇಲ್ಲೇ ಇರ್ತಿಯ ಅಂತ ಬಂದೆ" ನಕ್ಕಳು. ಇವಳ್ಯಾಕೆ ಅನವಶ್ಯಕವಾಗಿ ಅಗತ್ಯಕ್ಕಿಂತ ಹೆಚ್ಚಾಗಿ ನಗುತ್ತಾಳೆ ಅಂದುಕೊಂಡ. ಇವಳು ಪರಿಚಯವಾದ ದಿನ ನೆನಪಾಯಿತು " ಇವಳು ಶಮಾ ನನ್ನ ಅಕ್ಕನ ಮಗಳು ಅಂತ ಕೃಷ್ಣ ಪರಿಚಯ ಮಾಡಿ ಕೊಡುವಾಗ ಇವಳ ಕಣ್ಣುಗಳು ತುಂಬಾ ಭಾರಾವಾಗಿದೆ ಅನಿಸಿದ್ದು ಬಿಟ್ಟರೆ ಇವಳಲ್ಲಿ ನನ್ನನ್ನು ಹಿಡಿದಿದಬಹುದಾದದ್ದು ಏನು ಇಲ್ಲ ಅಂತ ಅನಿಸಿದ್ದು ಜ್ಞಾಪಕವಾಯಿತು. "ನಿದ್ದೆ ಮಾಡ್ತಿದ್ದೆ, ಬಾ ಕ್ಯಾಂಟಿನ್ ಗೆ ಹೋಗಿ ತಿನ್ನುತ್ತಾ ಮಾತಾಡೋಣ..." ಶಮಾ ಬಂದಿದ್ಲು ಅಂದ್ರೆ ಅನಘ ಎಷ್ಟೊಂದು ಚುಡಾಯಿಸಬಹುದು ಅಂದುಕೊಂಡ.

2

ಮುದ್ಡಾದ ನಿದ್ದೆ ಮುಗಿಸಿ ಎದ್ದು ಕಿಟಕಿ ಹೊರಗಡೆ ನೋಡಿದಳು ಅನಘ. ಭುವಿಗೆ ಎಲ್ಲವನ್ನು ಸುರಿದುಖಾಲಿಯಾದ ಆಕಾಶ ಹಿತವಾಗಿ ಮುಲುಗುಟ್ಟುತ್ತಿದೆ ಅನ್ನಿಸಿತು. ಅವಳಿಗೆ ಹಾಗೆ ತನ್ನ ರೂಮಿನಿಂದ ಹೊರಗಡೆ ನೋಡುತ್ತಾ ಕೂರುವುದೆಂದರೆ ಬಹಳ ಇಷ್ಟ ಅನ್ನುವುದು ಅವಳು ಕೂತಿರುವುದನ್ನು ನೋಡಿದರೆ ಗೊತ್ತಾಗುತಿತ್ತು. ಕತ್ತಲು, ಕಡಲು, ಮಳೆ, ಅಮ್ಮ ನನಗೆ ಪೂರ್ತಿ ಅರ್ಥ ಆದ ದಿನ ಬದುಕೊಕ್ಕೆ ಏನು ಉಳಿದೇ ಇರೋಲ್ಲ ಅಂತ ಹೊಳೀತು. ಆದರೆ ನದಿ, ಹಕ್ಕಿ, ನಗು, ನಕ್ಷತ್ರ ಇಲ್ಲ ಅಂದ್ರೆ ನಂಗೆ ಬದುಕೊಕ್ಕೆ ಆಗಲ್ಲ ಅಂದಿದ್ದ ಅವನ ಮಾತುಗಳ ಪುನರಾವರ್ತನೆಯೇ ತನ್ನ ಮನಸಿನಲ್ಲಿ ಮೂಡಿದ್ದು ಅನ್ನಿಸಿದರೂ ಅವನ ನೆನಪೇ ಉಸಿರಲ್ಲಿ ಸಣ್ಣ ಪುಳಕವನ್ನು ತುಂಬಿತು.


ಅವತ್ತು ಅವನು ಬೆಂಗಳೂರಿನಲ್ಲಿ ಸಿಕ್ಕಾಗ ತುಂಬಾ ಬೇಜಾರಾಗಿದ್ದಾನೆ ಅಂತ ಗೊತ್ತಾಗುತ್ತಿತ್ತು. ಬೇಜಾರ್ ಯಾಕೆ? ಕಾರಣ ಹೇಳು ಅಂತ ಕೇಳಿದ್ದು ಸ್ಟುಪಿಡಿಟಿ. ಎಷ್ಟೊಂದು ಸತಿ ಬೇಜಾರಾಗಿರೋವಾಗ ಯಾರಾದರು ಕಾರಣ ಕೇಳಿದರೆ "ಕಾರಣ ಗೊತ್ತಿಲ್ಲ ನಂಗ್ ಒಂದೊಂದ್ ಸತಿ ಹಿಂಗಾಗುತ್ತೆ ಅಂತ ನಾನೇ ಹೇಳಿಲ್ಲವ...."

ಅಡುಗೆ ಮನೆಗೆ ಎದ್ದು ಹೋದಳು.ಅಜ್ಜಿ ಎಂದಿನಂತೆ ಬಿಡದೆ ಮಾತಾಡುತಿದ್ರೆ ಚಿಕ್ಕಮ್ಮ ತಾನು ಈ ಲೋಕದವಳೇ ಅಲ್ಲ ಅನ್ನೋತರ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಾ ಅಜ್ಜಿಯ ಮಾತು ತನಗೆ ತಾಕುತ್ತಲೇ ಇಲ್ಲ ಅನ್ನೋ ರೀತಿ ಇರುವುದು ಕಂಡಿತು.ಇದು ದಿನಾ ನೋಡುವ ದೃಶ್ಯವಾದರೂ ಚಿಕ್ಕಮ್ಮಂಗೆ ಹಂಗೆ ಹೇಗೆ ಇರೋಕೆ ಸಾಧ್ಯ ಅಂತ ಮತ್ತೆ ಅಶ್ಚರ್ಯವಾಯಿತು. "ಕಾಫಿ ಫ್ಲಾಸ್ಕ್ ನಲ್ಲಿದೆಯ?" ತಾನು ಯಾರನ್ನು ಕೇಳಿದೆ? ಚಿಕ್ಕಮ್ಮನನ್ನೋ, ಅಜ್ಜಿಯನ್ನೋ ಎಂದು ಗೊಂದಲಗೊಳ್ಳುತ್ತಲೇ, ಗ್ರೈಂಡರ್ ನಿಂದ ದೋಸೆ ಹಿಟ್ಟನ್ನು ಇಳಿಸುತಿದ್ದ ಚಿಕ್ಕಮ್ಮನನ್ನು ಹೊಸದಾಗಿ ಅನ್ನುವಂತೆ ನೋಡಿದಳು. ಚಿಕ್ಕಮ್ಮ ಎಷ್ಟು ಲಕ್ಷಣ ಅಲ್ಲವ ಮತ್ತೆ ಅನ್ನಿಸಿತು. "ಒಂದೈದೆ ನಿಮಿಷ ಕಾಯಿ ಪುಟ್ಟಾ, ಬಿಸಿ ಕಾಫಿ ಮಾಡ್ಕೊಡ್ತಿನಿ." ಅಂದರು ಅಜ್ಜಿ.


ಮತ್ತೆ ರೂಮಿಗೆ ಬಂದರೆ ಅಲ್ಲಿ ಅವನದೇ ಘಮ. ಅವನು ಈ ಮನೆಗೆ ಬಂದದ್ದೆ ಇಲ್ಲ ಆದ್ರೆ ಇಲ್ಲಿ ಮಾತ್ರ ನನಗೆ ಅವನ ಸಾಮಿಪ್ಯದ ಅನುಭವವಾಗುತ್ತೆ. ಅವನು ಯಾಕೆ ಇಷ್ಟು ಡಿಜೆಕ್‌ಟೆಡ್ ಆಗಿದಾನೆ ಈ ಮೆಲಂಖಲಿಗೆ ಕಾರಣ ಏನು ಅಂದುಕೊಳ್ಳುತ್ತಿರುವಾಗಲೇ ಡಿಜೆಕ್ಷನ್, ಮೆಲಂಖಲಿ, ಡೆಸ್ಪಾಂಡನ್ಸೀ, ಮಾರ್ಬಿಡಿಟೀ ಎಲ್ಲ ಹತ್ತಿರ ಹತ್ತಿರದ ಪದಗಳು ಆದರೆ ಒಂದಕ್ಕೊಂದಕ್ಕೆ ಇರುವ ವ್ಯತ್ಯಾಸ ಏನಂತ ನೋಡಲು ಡಿಕ್ಷನರಿ ಪುಟಗಳನ್ನು ತಿರುವಿದಳು. ಖಿನ್ನತೆ, ಮ್ಲಾನತೆ, ಉಮ್ಮಳ, ನಿರಾಸೆ, ಮಂಕು ಕವಿ, ಗೀಳು ಹಿಡಿದ ಮನಸ್ಸು ಅಂತೆಲ್ಲಾ ಎಲ್ಲ ಪದಗಳಿಗೂ ಒಂದೇ ತರ ಇರುವ ಅರ್ಥಗಳನ್ನು ನೋಡುವಾಗ, "ಡಿಕ್ಷನರಿಗಳು ಇರಬಾರದು ಕಣೇ ನಮ್ಮ ಮನಸಿಗೆ ಬಂದ ಹಾಗೆ ಪದಗಳನ್ನ ಬಳಸಿಕೊಳ್ಳಬಹುದು ಅನ್ನೋ ಸ್ವಾತಂತ್ರನ ಕಿತ್ತುಕೊಳ್ಳತ್ತೆ ಅದು" ಅಂತ ಅವನು ಯಾವತ್ತೋ ಅಂದಿದ್ದು ಜ್ಞಾಪಕವಾಗಿ ಡಿಕ್ಷನರಿಯನ್ನ ಟಪ್ ಅಂತ ಮುಚಿಟ್ಟು ಅದರ ಮೇಲೆ ಸಿಟ್ಟು ಮಾಡಿಕೊಂಡಳು.


ನಿರಾಸೆ, ಮ್ಲಾನತೆ, ಖಿನ್ನತೆ, ಇತ್ಯಾದಿಗಳ ಮೂಲ ಯಾವುದು? ಯಾಕೆ ಯಾವಾಗಲಾದರೊಮ್ಮೆ ಎಲ್ಲರಿಂದ ದೂರ ಹೊರಟು ಹೋಗೋಣ ಅನ್ನಿಸುತ್ತೆ? ಯಾಕೆ ಎಲ್ಲರ ಮೇಲೆ ಅಘಾಧವಾಗಿ ಸಿಟ್ಟು ಬರುತ್ತೆ? ಬೇಜಾರಾಗುತ್ತೆ?ಸಂಕಟ, ಹಿಂಸೆ ಆಗುತ್ತೆ? ಸಿಟ್ಟನ್ನು ಚಲ್ಲಲಾರದೆ ಅಸಹಾಯಕವಾಗಿ ಯಾಕೆ ಓದ್ದಾಡುತ್ತೇವೆ? ಅಹಂಗೆ ತುಂಬಾ ಪೆಟ್ಟಾದರೆ ಹಾಗಾಗುತ್ತಲ್ಲವ? ನಮ್ಮನ್ನು ಯಾರಾದರೂ ಅಸಡ್ಡೆ ಮಾಡಿದಾಗ, ಗಮನಿಸದೇ ಹೋದಾಗ, ಅವಮಾನ ಮಾಡಿದಾಗ, ಅರ್ಥವೇ ಮಾಡಿಕೊಳ್ಳುತ್ತಿಲ್ಲ ಅನ್ನಿಸಿದಾಗ ಹೀಗೆ ಆಗುತ್ತೆ ಆದರೆ ನಾವು ನಮ್ಮ ದುಃಖವನ್ನ, ನಿರಾಸೆಯನ್ನ ಇನ್ನ್ಯಾವುದೋ ಕಾರಣದಿಂದ ಆಗಿದೆ ಅಂದುಕೊಳ್ಳುತ್ತೇವೆ. "ನಿನ್ನ ಅಹಂಗೆ ಪೆಟ್ಟು ಕೊಟ್ಟೋರು ಯಾರು? ಯಾರಾದರಾಗಲಿ ಹೇಳಬೇಡ ಆದರೆ ಇನ್ನೂ ಮುಂದೆ ಅದಕ್ಕೆಲ್ಲಾ ತಲೆಕೆಡಸಿಕೊಳ್ಳಬೇಡ." ಅಂತ ನಾನು ಹೇಳಿದ್ದು ಸರಿ ಅಂದುಕೊಂಡಳು .


3

ಆಂಧ್ರ ಹೊಟೇಲಿನಲ್ಲಿ ಉಟಕ್ಕೆ ಅಂತ ಆಫೀಸಿನವರ ಜೊತೆ ಹೋದಾಗ ಅಲ್ಲಿ ಅವರು ಬಡಿಸಿದ ಚಟ್ನಿಪುಡಿ ನೋಡುತ್ತಲೇ ಅನಘಳ ನೆನಪಾಯಿತು. ಅವಳು ಹೇಳಿದ್ದನ್ನು ನೆನಪಿಸಿಕೊಳ್ಳತೊಡಗಿದ................. " ಅಪ್ಪನ ಜೊತೆ ನಾನು ನನ್ನ ತಮ್ಮ ಉಟ ಮಾಡ್ತಿದ್ದಿದ್ದು ಅಂದ್ರೆ ಶನಿವಾರ, ಭಾನುವಾರದ ದಿನ ಮಾತ್ರ. ಭಾನುವಾರ ಪುಲಾವೋ, ಬಿಸಿಬೇಳೆ ಬಾತ್, ಪುಳಿಯೊಗ್ರೆನೊ ಏನಾದ್ರೂ ಮಾಡಿರೋರು, ಜೊತೆಗೆ ಕಂಪಲ್ಸರಿ ಜಿರಿಗೆ,ಮೆಣಸು, ತೆಂಗಿನ ಕಾಯಿ ಹಾಕಿದ ಮೊಸರನ್ನ. ಅಪ್ಪ ಅಮ್ಮಂಗೆ ಮೊಸರನ್ನಕ್ಕೆ ತೆಂಗಿನಕಾಯಿ ಹಾಕೋದರ ಬಗ್ಗೆ ಯಾವಾಗಲೂ ಪುಟ್ಟ ಜಗಳ ಆಗೋದು. "ನೀ ಕಾಯಿ ತುರ್ದಿದ್ದು ಕಮ್ಮಿ ಆಯ್ತು ಸಾಕಾಗಲ್ಲ." ಅಂತ ಅಪ್ಪ ಅಮ್ಮಂಗ್ ಹೇಳದು, "ನೀವು ಮೊಸರನ್ನಕ್ಕೆ ಒಂದ್ ರಾಶಿ ಕಾಯಿ ಪೆಟ್ಟಿದ್ರೆ ನಾ ತಿನ್ನಲ್ಲ" ಅಂತ ಅಮ್ಮ ಕೂಗಾಡದು ರೂಮಿನಲ್ಲಿ ಓದ್‌ಕೊಂಡು ಕೂರುತಿದ್ದ ನಂಗೆ ನನ್ನ ತಮ್ಮನಿಗೆ ಕೇಳಿಸುತ್ತಿತ್ತು. ನೀ ಹಿಂಗ್ ಕೂಗಿದ್ರೆ ಮಕ್ಕಳು ಏನ್ ಓದ್ತಾರೆ ಅನ್ನೋರು ಅಪ್ಪ. ಆಮೇಲೆ ವಾದ ತುಂಬಾ ಮೆತ್ತಗೆ ನಡೆಯುತ್ತಿತ್ತು. ಅರ್ಥ ಆಗದ ವಿಷಯ ಅಂದ್ರೆ ಪ್ರತಿ ವಾರ ಅದೇ ವಿಷಯದ ಮೇಲೆ ಜಗಳ ಆಡ್ತಿದ್ರಲ್ಲ ಅಂತ.


ನನಗೆ ಇವತ್ತಿಗೂ ಕಾಡೋದು ಅಂದ್ರೆ ಶನಿವಾರದ ಮಧ್ಯಾನ್ಹದ ಉಟ. ನಾನು ನನ್ನ ತಮ್ಮ ಅಪ್ಪ ಬರೋಹೊತ್ತಿಗೆಲ್ಲಾ ಉಟ ಮುಗಿಸಿರ್ತಿದ್ವಿ.ಅಪ್ಪ ಅಮ್ಮ ಉಟಕ್ಕೆ ಕೂತ್ರೆ, ನಾ ಬಡಿಸುತ್ತಿದ್ದೆ. ನಮ್ಮ ಊಟ ಹಿಂಗಿರ್ತಿತ್ತು.... ಅನ್ನ ಸಾರು ನೆಂಚಿಕೊಳ್ಳೋಕೆ ಯಾವುದಾದರೂ ಪಲ್ಯ ಅಥವಾ ಸಂಡಿಗೆ, ಹಪ್ಪಳ, ಆಮೇಲೆ ಅನ್ನ ಚಟ್ನಿ ಪುಡಿ ಎಣ್ಣೆ ಹಾಕಿ ಕಲ್ಸೊದು, ಅದಕ್ಕೆ ನೆಂಚಿಕೊಳ್ಳೊಕ್ಕೆ ಸಾರಿನ ತಳದಲ್ಲಿರೊ ಬೇಳೆ. ಆಮೇಲೆ ಅನ್ನ ಮೊಸರು ಉಪ್ಪಿನಕಾಯಿ. ವಾರದಲ್ಲಿ ಮೂರು ನಾಲ್ಕು ದಿನ ಸಾರಿನ ಬದಲು ಹುಳಿನೊ ಅಥವಾ ಮಜ್ಜಿಗೆ ಹುಳಿನೊ ಇರ್ತಿತ್ತು. ಆದ್ರೆ ಚಟ್ನಿ ಪುಡಿ ಅನ್ನ ಮೊಸರನ್ನ ಇರಲೇ ಬೇಕು. ಚಟ್ನಿ ಪುಡಿ ಖಾಲಿಯಾದ ಒಂದೆರಡು ದಿನ ಪುಳಿಯೊಗ್ರೆ ಗೊಜ್ಜಿನಲ್ಲೋ ಅಥವಾ ಉಪ್ಪಿನಕಾಯಿ ರಸದಲ್ಲೋ ಕಲಸಿಕೊಂಡು ತಿನ್ನುತಿದ್ವಿ. ಅಷ್ಟರೊಳಗೆ ಅಮ್ಮ ಚಟ್ನಿ ಪುಡಿ ಮಾಡಿರೋಳು. ಮತ್ತೆ ಅದೇ ರೊಟೀನು.

ಶನಿವಾರ ಮಧ್ಯಾನ್ಹ ನಾವು ಸ್ಕೂಲಿನಿಂದ ಬಂದು ಉಟ ಮಾಡಿ ಟೀವಿ ನೋಡ್ತಾ ಕೂರ್ತಿದ್ವಿ. ೨ ಕಾಲು ೨.೩೦ ಹೊತ್ತಿಗೆ ಅಪ್ಪ ಆಫೀಸಿನಿಂದ ಬಂದು ಕೈ ಕಾಲ್ ತೊಳೆದು ಅಮ್ಮನ ಜೊತೆಗೆ ಉಟಕ್ಕೆ ಕೂರೋರು. ನಾನು ಬಡಿಸ್ಟಿದ್ದೆ. ಅಪ್ಪ ಚಟ್ನಿ ಪುಡಿ ಅನ್ನದಲ್ಲಿ ಕಲಸಿಕೊಂಡು ತಿನ್ನೋವಾಗ ಬರೋ ಘಮ ಇದೆಯಲ್ಲಾ ನಂಗೆ ತುಂಬಾ ಇಷ್ಟ್ಟ ಅದು. ನಾ ಕಲ್ಸಿಕೊಂಡಾಗ ಯಾಕೆ ಹಂಗೆ ಘಮ ಬರ್ತಿರ್ಲಿಲ್ಲ ಅಂತ ಇನ್ನೂ ಗೊತ್ತಾಗಿಲ್ಲ. ನಾನು ಎಲ್ಲಾ ರೀತಿಯ ಕಾಂಬಿನೇಷನ್ ಅಂದರೆ ಒಂದು ದಿನ ಚಟ್ನಿ ಪುಡಿ ಜಾಸ್ತಿ ಹಾಕೊಂಡು, ಇನ್ನೊಂದಿನ ಎಣ್ಣೆ ಕಮ್ಮಿ ಹಾಕೊಂಡು, ಎರಡೂ ಜಾಸ್ತಿ ಹಾಕೊಂಡು, ಇನ್ನೂ ಹೀಗೆ ಏನೇನೋ ಪ್ರಯತ್ನ ಮಾಡಿ ಕೊನೆಗೆ ಅಪ್ಪ ಎಷ್ಟು ಚಟ್ನಿ ಪುಡಿ ಎಷ್ಟು ಎಣ್ಣೆ ಹಾಕ್ಕೊತಾರೆ ಅಂತ ಗಮನಿಸಿ ಅದೇ ರೀತಿ ಹಾಕ್ಕೊ೦ಡು ಪ್ರಯತ್ನ ಮಾಡಿದ್ರೂ ಅಪ್ಪ ತಿನ್ನೋವಾಗ ಬರ್ತಿದ್ದ ಘಮ ಬೇರೇನೆ. ಜಸ್ಟ್ ಔಟ್ ಆಫ್ ದ್ ವರ್ಲ್ಡ್ ಅಂತಾರಲ್ಲ ಹಾಗೆ. ಅಪ್ಪ ತಿನ್ನೋವಾಗ ನಂಗೆ ಎಷ್ಟು ಟೆಂಪ್ಟ್ ಆಗೋದು ಅಂದ್ರೆ ಅಪ್ಪನ ತಟ್ಟೆಗೆ ಕೈಹಾಕಿ ತಿಂದುಬಿಡಣ ಅನ್ನ್ಸೋದು. ಆದ್ರೆ ಯಾವತ್ತೂ ಹಂಗ್ ಮಾಡಿರ್ಲಿಲ್ಲ ನಾನು. ಹಂಗ್ಯಾಕೆ ಮಾಡಲಿಲ್ಲ ಅಂತ ನಂಗೆ ಗೊತ್ತಿಲ್ಲ. ಅಪ್ಪ ಒಂದ್ಚೂರು ತಿನ್ಸೂ ಅಂದ್ರೆ ಅಪ್ಪ ಖಂಡಿತ ತಿನ್ಸಿರೋರು.ಆದ್ರೆ ನಂಗೆ ಕೇಳಬೇಕು ಅಂತಾನೆ ಗೊತ್ತಾಗುತ್ತಿರಲಿಲ್ಲ. ಹಂಗೇನಾದ್ರೂ ತಿನ್ನಿಸಿಬಿಟ್ಟಿದ್ದಿದ್ರೆ, ನಿರಾಶೆ ಆಗೋಗದೇನೋ..ಅಥವಾ ಚಟ್ನಿ ಪುಡಿ ಅನ್ನ ಕಲಸ್‌ಕೊಂಡು ತಿನ್ನೋವಾಗ್ಲೆಲ್ಲ ಅಪ್ಪನ ನೆನಪು ಬರ್ತಿಲಿಲ್ವೇನೋ ಅಂದಿದ್ದಳು. ವಾಸ್ತವತೆಯ ನಿರಾಸೆಗೆ ಹೆದರಿ ಕಲ್ಪನೆಯಲ್ಲೇ ಸುಖ ಕಂಡುಕೊಳ್ಳುವ ಹುಡುಗಿ ಅವಳು.ಅದಕ್ಕೆ ಮತ್ತೊಮ್ಮೆ ಪುರಾವೆ ಸಿಕ್ಕಿತಲ್ಲಾ....


ನಾವು ಅಂದು ಮೊದಮೊದಲು ಸೇರಿದ್ದೆವು ಅವತ್ತು ಎರಡನೆ ಸುತ್ತು ಪ್ರೀತಿ ಮುಗಿದ ಮೇಲೆ ಅವಳು ಮಾತಾಡದೆಕೂತಿದ್ದಳು ಕಣ್ಣುಗಳಲ್ಲಿ ಶೂನ್ಯ ಸುಸ್ತಾಗಿರಬೇಕು ಅನ್ನಿಸಿತು.
"ಅನಘ ಸುಸ್ತಾಯ್ತಾ' ಕೇಳಿದೆ.
"ಉಹೂ.." ಮಾತು ಮುಂದುವರಿಸುತ್ತಾಳೆ ಎಂದು ತಿಳಿದಿತ್ತು ಸ್ವಲ್ಪ ಹೊತ್ತು ಸುಮ್ಮನಿದ್ದೆ.
"ಶಿವು ಇದು ಬರಿ ಇಷ್ಟೇನಾ ಇದನ್ನೇ ಕವಿಗಳು, ಲೇಖಕರು ಅಷ್ಟು ಪರಿಪರಿಯಾಗಿ ಬಣ್ಣಿಸುತ್ತಾರ? ಇಷ್ಟ್ಟಕ್ಕಾಗಿ ಜನ ಅಷ್ಟೊಂದು ಹಾತೊರೆಯುತ್ತಾರ? ಹುಚ್ಚಾರಾಗುತ್ತರ? ಇದೇ ಉತ್ಕಟತೆಯ ಔನತ್ಯ ಅನ್ನುವಂತೆ ಆಡುತ್ತಾರ, ನಿನಗೆ ನನ್ನ ಜೊತೆಗೆ ಸಿಕ್ಕ ಅನುಭವವೇ ಬೇರೆ ಶಮಾಳ ಜೊತೆ ಸಿಗೋ ಅನುಭವವೇ ಬೇರೆ ಅನ್ನಿಸುತ್ತಾ? ಅಥವಾ ನಾನೇ ಏನೇನೋ ಕಲ್ಪಿಸಿಕೊಂಡಿದ್ದೇನಾ? ಅದಕ್ಕೆ ನಂಗೆ ನಿರಾಸೆ ಆಗ್ತಿದೆಯಾ?" ಅಂತ ಅವಳು ಪ್ರಶ್ನಿಸುತ್ತಲೊ ತನ್ನನ್ನೇ ತಾನು ಕೇಳಿಕೊಳ್ಳುತ್ತಳೋ ಇದ್ದರೆ ನನಗೆ ಮೊದಮೊದಲು ಇಜಿಪ್ಟ್ ನ ಪಿರಮಿಡ್ ನೋಡಿದಾಗ ಆದ ನಿರಾಸೆ ನೆನಪಾಯಿತು. ಎಲ್ಲರೂ ಹೊಗಳುತಿದ್ದ ಜಗತ್ತಿನ ಅಧ್ಬುತಗಳಲ್ಲಿ ಒಂದಾದ ಅವನ್ನು ನೋಡಿದಾಗ ಅನ್ನಿಸಿದ್ದು ಇದು ಬರಿ ಇಷ್ಟೇನಾ? ನನ್ನ ಕಲ್ಪನೆಯಲ್ಲಿ ಅಖಂಡವಾದದ್ದು ಬೇರೇನೋ ಇತ್ತಲ್ಲಾ ಅಂತ ತಳಮಳವಾಗಿತ್ತು. ವಾಸ್ತವಿಕತೆಗೂ ಕಲ್ಪನೆಗೂ ಎಷ್ಟೊಂದು ವ್ಯತ್ಯಾಸ ಅಲ್ಲವ? "supremecy of fantacy over fact" ಅಂತ ಒಂದು ಎಡವಟ್ಟಾದ ಸಾಲು ಹೊಳೆದು, ಸಾಲು ಎಡವಟ್ಟಾಗಿದ್ದರು ಹಿತವಾಗಿದೆ ಅನ್ನಿಸಿತು. 'ಪಿರಮಿಡ್ದಿನ ಬಗ್ಗೆ ಏನೇನೋ ಕಲ್ಪಿಸಿಕೊಂಡು ನಿರಾಸೆಗೊಂಡಿದ್ದು ನನ್ನ ತಪ್ಪಲ್ಲವ? ಪಿರಮಿಡ್ದೆನು ತನ್ನ ಬಗ್ಗೆ ತಾನು ಹೇಳಿಕೊಂಡಿರಲಿಲ್ಲವಲ್ಲ ಅಂತ ತನಗೆ ಅನ್ನಿಸಿದ್ದು, ಅವಳ ಕಲ್ಪನೆಯ ಎತ್ತರಕ್ಕೆ, ಅದರ ಆಳ ವಿಸ್ತಾರಗಳಿಗೆ ತಕ್ಕಂತೆ ತನಗೆ ಅವಳನ್ನು ತೃಪ್ತಿ ಪಡಿಸಲಾಗಲಿಲ್ಲವಲ್ಲ ಎಂಬ ಸುಪ್ತ ಮಾನಸಿನ ಹತಾಶೆಗೆ ಮುಲಾಮಿನಂತೆ ಹೊಳೆದ ಸಮರ್ಥನೆಯಿರಬಹುದ? "ಪಿರಮಿಡ್ದೆನು ತನ್ನ ಬಗ್ಗೆ ತಾನು ಹೇಳಿಕೊಂಡಿರಲಿಲ್ಲ ಅನ್ನುವುದು ನಾನು ಅವಳಿಗೆ ನಿನ್ನ ಸುಖದ ಉತ್ಕಟತೆಯನ್ನು ಮೀಟುತ್ತೇನೆ ಎಂದೇನೂ ಹೇಳಿರಲಿಲ್ಲವಲ್ಲಎಂಬುದರ ರೂಪಕವಾ?' ಅನಿಸಿದ್ದು ನೆನಪಾಗಿ ನಿಟ್ಟುಸಿರಿಟ್ಟ.ಹಾಗಾದರೆ ಅವಳ ಚಟ್ನಿಪುಡಿಯ ಅನುಭವಾದಂತೆ ಬರಿ ಕಲ್ಪನೆಗಳಲ್ಲೇ ಉಳಿದುಹೋಗಬೇಕಾ? ವಾಸ್ತವಕ್ಕೆ ಎದುರಾಗಬಾರದ? ಕೇಳಿಕೊಂಡ.

"ನಿನಗೆ ನನ್ನ ಜೊತೆಗೆ ಸಿಗೋ ಅನುಭವವೇ ಬೇರೆ ಶಮಾಳ ಜೊತೆ ಸಿಗೋ ಅನುಭವವೇ ಬೇರೆ ಅನ್ನಿಸುತ್ತಾ?" ಅಂತ ಅವಳು ಯಾಕೆ ಕೇಳಿದ್ದಳು? ಶಮಾಳನ್ನು ನಾನು ಸೇರುತ್ತೇನೆ ಅಂತ ಅವಳು ಅಂದುಕೊಂಡದ್ದು ಯಾಕೆ? ಶಮಾ ನನ್ನ ಆಸಕ್ತಿ ಕೆರಳಿಸಲು ಪ್ರಯತ್ನಿಸುತ್ತಾ ನನ್ನ ಜೊತೆ ಮಾತಾಡೋವಾಗಲೆಲ್ಲ , ವ್ಯವಹರಿಸೋವಾಗಲೆಲ್ಲ ನನ್ನ ಒರಗಿಕೊಂಡೋ ಪಕ್ಕದಲ್ಲಿ ಕೂತುಕೊಂಡೋ ಇರುವುದನ್ನು ಹಾಗೂ ನಾನು ಇದ್ಯಾವುದನ್ನು ವಿರೋಧಿಸದೆ ಸುಮ್ಮನೇ ಇರುವುದನ್ನು ನೋಡಿದ್ದರಿಂದ ಹಾಗೆಂದುಕೊಂಡಳ, ನಿಜವಾಗಲೂ ನಾನು ಶಮಾಳನ್ನುಕೂಡಿದ್ದು ಮೊನ್ನೆ ಮೊನ್ನೆ, ಅವಳನ್ನು ಕೂಡಿದ್ದು ನನ್ನ ಇಚ್ಛೆಯಿಂದ ಅಂತೂ ಅಲ್ಲ. ಅವಳು ಎಡೆಬಿಡದೆ ನನ್ನ ಬೆನ್ನು ಬಿದ್ದಿದರಿಂದ ಅಲ್ಲವ. ಸುಮ್ಮನಿದ್ದವನು ಆಫೀಸಿನವರ ಮೇಲಿದ್ದ ಸಿಟ್ಟನ್ನ ತೀರಿಸಿ ಕೊಳ್ಳಲು,ಅಲ್ಲಿ ಆದ ಅವಮಾನ ಅಸಡ್ಡೆಯನ್ನು ನೀಗಿಕೊಳ್ಳಲು ಇವಳನ್ನು ಬಳಸಿಕೊಂಡೆನ? ಬಳಸಿಕೊಂಡೆ ಅನ್ನುವುದು ಸರಿಯಾದ ಪದವೇ ಅಲ್ಲ.. ಬಳಸಿಕೊಂಡೆ ಅನ್ನಬೇಕಾದರೆ ನನಗೆನಾದರೂ ಉಪಯೋಗವಗಿರಬೇಕು ಅಲ್ಲವಾ? ಆದರೆ ನನಗೇನು ಅನ್ನಿಸಲೇ ಇಲ್ಲವಲ್ಲ.. ನನ್ನ ಮನಸಿನಲ್ಲಿ ಕಡೆಯುತ್ತಿದ್ದ ಕಳಮಲಗಳು ಕಡೆದು ನಿರಾಗುವ ಬದಲು ಇನ್ನೂ ಹೆಪ್ಪುಗಟ್ಟಿದುವಲ್ಲ. ಬಳಸಿಕೊಂಡಿದಿದ್ದು ನಾನಾ ಅವಳಾ..' ನಿಟ್ಟುಸಿರಿಟ್ಟ!

4

ಅವಳು ಭಾನುವಾರಕ್ಕೆ ಇಟ್ಟಿರುವ ಮತ್ತೊಂದು ಹೆಸರೇ, ಅಭ್ಯಂಜನದ ದಿನ ಎಂದು. ಭಾನುವಾರ ಬೆಳಿಗ್ಗೆ ಏಳುತ್ತಲೇ ಹಲ್ಲುಜ್ಜಿ ಅಜ್ಜಿ ಮಾಡಿರುವ ಸಕ್ಕರೆ ಪಾನಕದಂತೆ ಇರುವ ಕಾಫಿಯನ್ನ ಲೋಟಕ್ಕೆ ಬಗ್ಗಿಸಿಕೊಂಡು ಹಾಲಿಗೆ ಬಂದು ಕಸಾಗುಡಿಸುತ್ತಿರುವ ಬೈರನ ಹೆಂಡತಿಯನ್ನ ನೋಡುತ್ತಾ ತಾನು ಚಿಕ್ಕವಳಿದ್ದಾಗ ಅಮ್ಮನ ಹಳೆ ಸೀರೆಯನ್ನು ಉಟ್ಟಿದ್ದ ಅವಳನ್ನೇ ಅಮ್ಮ ಎಂದುಕೊಂಡಿದ್ದು ನೆನಪಾಗುತ್ತಿರುವಾಗಲೆ ಅಮ್ಮ ಬಂದು "ಬೇಗ ಬೇಗ ಕಾಫಿ ಕುಡಿ ಎಣ್ಣೆ ಹಾಕ್ಬಿಡ್ತೀನಿ ಸ್ನಾನ ಮಾಡ್ಕೊಂಬಿಡು. ಇಲ್ಲ ತಿಂಡಿ ತಿಂದು ಎಣ್ಣೆ ಹಾಕ್ಕೋತಿಯೋ?" ಎಂದು ಕೇಳಿದ ಪ್ರಶ್ನೆಗೆ
"ತಿಂಡಿ ಬೇಕು.." ಎಂದು ಉತ್ತರಿಸಿದ್ದು ಅವಳಿಗೆ ಕೇಳಿಸಿತೋ ಇಲ್ಲವೋ ಎಂದುಕೊಳ್ಳುತ್ತಿರುವಾಗಲೇ
"ದೋಸೆ ಹಾಕಾಗಿದೆ ಆಮೇಲೆ ಆರ್ ಹೋಯ್ತು ಅಂತಿಯ ಬಂದು ತಿನ್ನು." ಎಂದು ಕೂಗಿಕೊಳ್ಳುತ್ತಿರುವ ಅಮ್ಮನ ಮಾತು ಕೇಳಿಸಿ, ತಿಂಡಿ ತಿಂದು, ಆಮೇಲೆ ಎಣ್ಣೆ ಹಾಕಿಕೊಂಡು ಒಂದರ್ಧ ಗಂಟೆ ಬಿಟ್ಟು ಸ್ನಾನಕ್ಕೆ ಇಳಿದಾಗ, "ಅಮ್ಮ ಹಂಡೆಯಿಂದ ಸುರಿವ ಬಿಸಿನೀರಿಗೆ ಬಚ್ಚಲಿನ ಬಿಳಿ ಗೋಡೆಗಳೇ ಕೆಂಪಾಗಿವೆ ನಾನು ಕೆಂಪಾಗುವುದು ಏನು ಮಹಾ..." ಎಂದು ಕೊಂಡು ಸ್ನಾನ ಮುಗಿಸಿ ಅಮ್ಮ ಹೊದೆಸುವ ಕಪ್ಪು ರಗ್ಗಿನೊಳಗೆ ಸಾದ್ಯಾಂತವಾಗಿ ಬೆವರಿ,ಎದ್ದು,ಬಟ್ಟೆ ಹಾಕಿಕೊಂಡು, ದೇವರಿಗೆ ನಮಸ್ಕಾರ ಮಾಡಿ, ಜಗುಲಿಗೆ ಬಂದರೆ ಎಳನೀರು ಕೊಚ್ಚಿ ಕೊಡುವ ಭೈರ........


ಸೊಂಟದ ಕೆಳಗಿನವರೆಗೂ ಇಳಿಬಿಟ್ಟ ತಲೆಗೂದಲು ತುಂಬಾ ಕಪ್ಪಗೆನಿಲ್ಲ ಅದಕ್ಕೆ ಹೊಂಬಣ್ಣದ ಲೇಪನವಿದೆ. ಅವಳು ಅಭ್ಯಂಜನ ಮಾಡಿದ ಸಂಜೆ ನೀಲಿ ಬಣ್ಣದ ದೂರ ದೂರ ಹಲ್ಲಿರುವ ಹಾಗೂ ಜೇನಿನ ಬಣ್ಣದ ಹತ್ತಿರ ಹತ್ತಿರ ಹಲ್ಲಿರುವ ಬಾಚಣಿಗೆಗಳನ್ನು ಪಕ್ಕ ಪಕ್ಕದಲ್ಲಿಟ್ಟುಕೊಂಡು, ಸಿ ಡಿ ಯಲ್ಲಿ ಮಂದ್ರ ಸ್ವರದಲ್ಲಿ ಬರುತ್ತಿರುವ ಗಜಲ್ಗಳಿಗೆ ಕಿವಿಯಾಗುತ್ತಾ, ಕಿಟಕಿಯ ಹೊರಗೆ ಕಾಣುವ ಸಂಜೆಯ ಬಣ್ಣಗಳಿಗೆ ಬೆರಗಾಗುತ್ತಾ, ಅವುಗಳ ಆಳವನ್ನು ಅಳೆಯುತ್ತಾ, ಕೂದಲ ಒಂದೊಂದು ಸಿಕ್ಕು ಬಿಡಿಸಿದಾಗಲೂ ಹಾಯ್...ಎನಿಸಿ, ಹಾಯ್... ಎನಿಸುತ್ತಲೇ ಅವನ ನೆನಪಾಗಿ, ಅವನ ನೆನಪಾಗುತ್ತಲೇ ಯಾವುದೋ ಯೋಚನೆಯಲ್ಲೋ, ನೆನಪಿನಲ್ಲೋ, ಕಲ್ಪನೆಯಲ್ಲೋ ಕಳೆದು ಹೋಗುವ, ಕಳೆದುಹೋದಂತೆಲ್ಲಾ ತಿಳಿಯಾಗುವ ಪ್ರಕ್ರಿಯೆಗೆ ಅವಳು ಸಿಕ್ಕುಬಿಡಿಸಿಕೊಳ್ಳುವುದು ಎಂದು ಹೆಸರಿಟ್ಟಿರುವುದು ಎಷ್ಟೊಂದು ಸೂಕ್ತವಾದದ್ದು ಅನಿಸುತ್ತದೆ.

ಹೀಗೆ ಸಿಕ್ಕು ಬಿಡಿಸಿಕೊಳ್ಳುತ್ತಲೇ ಅವನು ಹೇಳಿದ್ದನ್ನು ಜ್ಞಾಪಿಸಿಕೊಂಡಳು " ನಾನು ಅಷ್ಟೆಲ್ಲಾ ಸುತ್ತಿ ಮಾಡಿ ಆ ಬಳ್ಳಾರಿ , ಬಿಜಾಪುರಗಳ ಸುಡು ಬಿಸಿಲಿನಲ್ಲಿ ಕೆಲಸಮಾಡಿಕೊಂಡು ಬಂದರೆ ನನ್ನ ಯಾವುದೊಂದು ರಿಪೋರ್ಟು ಸರಿಯಾಗಿ ಪ್ರಕಟ ಆಗಿಲ್ಲ. ಹೀಗೆ ಮಾಡುವುದಾಗಿದ್ದಾರೆ ನನ್ನನ್ನೇ ಅಷ್ಟು ದೂರ ಕಳುಹಿಸುವ ಅವಶ್ಯಕತೆ ಏನಿತ್ತು? ನನಗೆ ಇವರ್ಯಾರು ಬೆಲೆ ಕೊಡ್ತಿಲ್ಲ ನನ್ನ ಅವಶ್ಯಕತೆ ಇವರಿಗಿಲ್ಲ ಅಂತ ಅನ್ನಿಸುತ್ತೆ. "ಹೀಗ್ಯಾಕೆ ಮಾಡಿದಿರಿ? ಹೀಗೇಕಾಯ್ತು?" ಅಂದರೆ "ಈ ಸರಿ ಅಡ್ಜಸ್ಟ್ ಮಾಡ್‌ಕೊಳಿ ಶಿವು, ಮುಂದಿನ ಸತಿಯಿಂದ ಈ ತಪ್ಪುಗಳು ಆಗದಂತೆ ನೋಡ್ಕೋತಿವಿ." ಅಂತಾರೆ. ನನ್ನನೆಲ್ಲ ಇವರು ತುಳಿಯಕ್ಕೆ ಪ್ರಯತ್ನ ಪಡ್ತಿದ್ದಾರೆ, ನಾನು ಖ್ಯಾತಿಗೆ ಬರುತ್ತಿರೋದು ಇವರಿಗೆ ತಡೆಯೊಕ್ಕೆ ಆಗ್ತಿಲ್ಲ ಅದಕ್ಕೆ ಹೀಗೆ ಮಾಡ್ತಿದಾರೆ ಅಂತ ಸ್ಪಷ್ಟವಾದಾಗ ಹಿಂಸೆ ಆಗುತ್ತೆ. ಎಲ್ಲರೂ ಹೀಗೆ ಮಾಡಿ ನನ್ನ ಬೆಳೆಯೋಕೆ ಬಿಡಲ್ಲವೇನೋ ಅಂತ ಭಯವಾಗುತ್ತೆ." ಅಂದಿದ್ದ ಅವನ ಕಣ್ಣ ಅಂಚಿನಲ್ಲಿ ನೀರು ಹೆಪ್ಪುಗಟ್ಟಿದ್ದು ಕಂಡದ್ದು ನನ್ನ ಕಲ್ಪನೆಯೋ ಅಥವಾ ನಿಜವೋ ಎಂದು ಗೊಂದಲವಾಯಿತು. ಅವನು ಆ ರೀತಿ ಇದ್ದದ್ದು ನೆನಪಾಗಿ ಸಂಕಟವಾಯಿತು.

5

"ದೇಹಕ್ಕೆ ಗಾಯವಾದರೆ ಮುಲಾಮು ಹಚ್ಚಿ ಸರಿಪಡಿಸಿಕೊಳ್ಳಬಹುದು, ಆದರೆ ಮನಸ್ಸಿಗೆ ಗಾಯವಾದರೆ ಏನು ಮಾಡಲಾಗುವುದಿಲ್ಲ." ಅಂತ ಯಾವುದೋ ಒಂದು ಉಪನ್ಯಾಸದಲ್ಲಿ ಕೇಳಿದ್ದ ನೆನಪಾಗಿ ಮನಸ್ಸಿನ ಗಾಯಕ್ಕೆ ಮರೆವೆಂಬ ಮುಲಾಮಿದೆಯಲ್ಲಾ ದಿನಗಳು ಉರುಳಿದಂತೆ ಎಂಥಾ ಗಾಯಗಳು ವಾಸಿಯಾಗುತ್ತದೆ ಅಂದುಕೊಂಡ.

'ಸಿರಿಗೆರೆಯ ನೀರಿನಲ್ಲಿ ಅರಳಿದ ತಾವರೆಯಲಿ ಕೆಂಪಾಗಿ ನಿನ್ನ ಹೆಸರು......', ಎಂದು ಸಿ ಡಿ ಇಂದ ಹಾಡು ಹೊಮ್ಮುತಿತ್ತು. ಹಾಡು ಮುಗಿಯುತ್ತಲೇ ಕೆ. ಎಸ್. ನಾ ರ ಈ ಹಾಡಿನ ಹುಡಿಗಿಯ ಹೆಸರೆನಿರಬಹುದೆನ್ದು ಅಶ್ಚರ್ಯವಾಯಿತು! ಯೋಚಿಸಿದ "ಹೊಂದಾಳೇ ಹೂವಿನಲಿ ಹೊರಟ ಪರಿಮಳದಲಿ ಕೆಂಪಾಗಿ ನಿನ್ನ ಹೆಸರು.." ಎಂದು ಖುಷಿಯಿಂದ ಗುನುಗಿದ. ಹೆಸರೇನೆಂದು ಹೋಳಿಯಲಿಲ್ಲ 'ಶಾರದೆ ಇರಬಹುದ?' ಕೇಳಿಕೊಂಡ. ಅನಘನನ್ನು ಕೇಳೋಣ ಅನ್ನಿಸಿತು. ಆದರೆ ಅವಳು ಕೊಡಬಹುದಾದ ಉತ್ತರ ಹೊಳೆಯಿತು. "ಹೆಸರು ಮುಖ್ಯ ಅಲ್ಲ ಕಣೋ ಅವಳ ನೆನಪಿನಲ್ಲಿ ಅವರು ಹಾಡಿದ ಹಾಡಿನ ಭಾವ ಮುಖ್ಯ" ಆದರೂ ಫೋನು ಮಾಡಿ " ಅನಘ , ಕೆ. ಎಸ್. ನಾ ರ 'ನಿನ್ನ ಹೆಸರು...' ಪದ್ಯದ ಹುಡುಗಿ ಹೆಸರೆನಿರಬಹುದೆ?" ಕೇಳಿದ. ಅವನು ಅಂದುಕೊಂಡಿದಕ್ಕಿಂತ ಭಿನ್ನವಾಗಿ ತಕ್ಷಣ ಅವಳು " ಉಲ್ಲಸಿನಿ" ಅಂದಳು. ಅಶ್ಚರ್ಯವಾಗಿ "ಯಾಕೆ?" ಕೇಳಿದ. " ಅಷ್ಟು ಬೇಜಾರಾಗಿದ್ದವನಿಗೆ ಉಲ್ಲಾಸ ತುಂಬಿದ ಹುಡುಗಿಯ ಹಾಡಲ್ಲವ ಅದು ಅದಕ್ಕೆ" ಅಂದಳು ಖುಷಿಯಿಂದ....ಖುಷಿ ಹರಡಿತು...