Friday, November 2, 2007

ಗೋಡೆ

1
ನನ್ನ ಬಿಟ್ಟು ಹೋಗ್ತೀಯ ಮೈತ್ರಿ? ನನ್ಗೆ ಭಯ ಆಗ್ತಿದೆ. ನಾನೇನ್ ತಪ್ಪು ಮಾಡಿದೀನಿ? ನೀನು ಹೇಳಿದ ಹಾಗೆ ಕೇಳ್ತೀನಿ, ನೀ ಹೇಳಿದ್ದರ ವಿರುದ್ದ ಏನಾದರೂ ಮಾಡಿದೀನ ಇಲ್ಲಿವರೆಗೂ? ದಯವಿಟ್ಟು ಬಿಟ್ಟು ಹೊಗಬೇಡ ಮೈತ್ರಿ. 'ನಾವು ಒಬ್ಬರಿಗೊಬ್ಬರು ಜೊತೆಯಾಗಿರ್ತೀವಿ ಕಷ್ಟ ಆಗ್ಲಿ, ಸುಖ ಆಗ್ಲಿ.' ಅಂತ ದೇವರ ಮುಂದೆ ಪ್ರಮಾಣ ಮಾಡಿದೀವಿ. ನಂಗೆ ಭಯ ಆಗ್ತಿದೆ, ನನ್ನ ಬಿಟ್ಟು ಹೋಗಬೇಡ... ಅಂತ ಪಕ್ಕದಲ್ಲಿ ಮಲಗಿದ್ದ ನನ್ನ ಗಂಡ ಒಂದೇ ಸಮನೆ ಬಡಬಡಿಸತೊಡಗಿದಾಗ ವ್ರಶಾಂಕ್ ಇವನ ಹತ್ತಿರ ಮಾತಾಡಿದಾನೆ ಅಂತ ಗೊತ್ತಾಯ್ತು..ಉತ್ತರ ಕೊಡೋಕ್ಕೂ ಹಿಂಸೆ ಆಗಿ ಎದ್ದು ಹೊಗಿ ವೆರೆಂಡಾದ ಈಸಿ ಕುರ್ಚಿ ಮೆಲೆ ಕೂತೆ.


ವರೆಂಡಾದ ಕಿಟಕಿಯಿಂದ ಕಾಣುತ್ತಿದ್ದ ಮನೆಯ ಮುಂದಿನ ನಲ್ಲಿಕಾಯಿ ಮರದ ರುಚಿ ಇಲ್ಲದ ಚಿಕ್ಕ ಚಿಕ್ಕ ಕಾಯಿಗಳ ಬಗ್ಗೆ ಏನೂ ಅನ್ನಿಸಲಿಲ್ಲ. ತನ್ನ ಗಂಡನ ಅತೀ ಒಳ್ಳೆಯತನದ, ಪ್ರತಿಯೊಂದಕ್ಕೂ 'ನೀ ಹೇಳಿದ ಹಾಗೆ' ಅನ್ನುವ, ನನ್ನ ಮುಂದೆ ತಾನು ಬುದ್ದಿವಂತ ಅಂತ ತೋರಿಸಿಕೊಳ್ಳಲು ಹೋಗಿ ಪೆಚ್ಚಾಗುವ, ತನ್ನ ಬಸುರಿ ಮಾಡಿದ್ದನ್ನೇ ದೊಡ್ಡ ಸಾಧನೆ ಅನ್ನುವಂತೆ ಆಡಿದ್ದ ಅವನ ಬಗ್ಗೆ ಅಸಹ್ಯ ಆಗುವುದೂ ನಿಂತು ಹೊಗಿತ್ತು. ಎನೂ ಅನ್ನಿಸುವುದಿಲ್ಲ ಅವನ ಬಗ್ಗೆ. ಯಾರ ವ್ಯಕ್ತಿತ್ವವೂ 'ಇಷ್ಟು' ಎಂದು ಅಳೆದು ಮುಗಿಸಿಬಿಡುವಂತೆ ಇರಬಾರದು ಗಟ್ಟಿಯಾಗಬೇಕು- ದೊಡ್ಡದಾಗಬೇಕು- ಅಗಲವಾಗಬೇಕು -ವಿಸ್ತಾರವಾಗಬೇಕು. ಇಲ್ಲವೇ ಚಿಕ್ಕದಾಗಬೇಕು- ಪುಟ್ಟದಾಗಬೇಕು- ಜೊಳ್ಳಾಗಬೇಕು. ಇರ್ಬಾರ್ದು ಹೀಗೆ, ಏನೂ ಅನ್ನಿಸದ ನಲ್ಲೀಕಾಯಿ ಮರದಂತೆ ಅನ್ನಿಸಿತು ಹೀಗೆ ಅನ್ನಿಸಿದ್ದು ಮೊದಲ ಸಲವೇನಲ್ಲವಲ್ಲ ಅಂದುಕೊಂಡಳು.


ಹುಡುಗರಿಗೆ ವಿಷಯಗಳು ಅರ್ಥವಾಗುವುದು ಎಲ್ಲಾ ಬಾಗಿಲು ಮುಚ್ಚಿ ಹೋಗಿದೆ, ಇನ್ನು ಬಿಡಿಸಿಕೊಂಡು ಹೋಗಲು ದಾರಿ ಇಲ್ಲ ಅನ್ನುವಾಗಲ? ಬಾಗಿಲು ತೆಗೆದಿದ್ದರೂ ನೆಡೆದುಕೊಂಡು ಹೋಗಲಾರೆ ಎನ್ನುವಷ್ಟು ನಿಷಕ್ತರಾಗಿ ತೋರುವವರು, ಎಲ್ಲಾ ಬಾಗಿಲು ಮುಚ್ಚಿದಮೇಲೆ ಗೋಡೆ ಒಡೆಯಲೂ ಹೆದರುವುದಿಲ್ಲ.


ನನ್ನ ಒಂದು ವರ್ಷದ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು, 'ಇದು ನನ್ನ ಮಗು ಅಂತಾನೆ ನೋಡ್ಕೊತೀನಿ ದಯವಿಟ್ಟು ನೀ ನನ್ನ ಜೊತೆ ಬಾ' ಅಂದ.ನನ್ನ ಗಂಡ ಬದುಕಿದ್ದಾನೆ ಮತ್ತು ನನಗೂ ಅವನಿಗೂ ಡೈವೋರ್ಸ್ ಆಗೋ ಯಾವ ಛಾನ್ಸು ಇಲ್ಲ ಅಂತ ಹೇಳಿ ಜೋರಾಗಿ ನಕ್ಕಿದ್ದೆ.ಅವ್ನು 'ನಾನು ಜೊಕ್ ಮಾಡ್ತಿಲ್ಲ ಹುಡುಗಿ, ಅರ್ಥ ಮಾಡ್ಕೊ ನನ್ನ' ಅಂದ. ಆವಾಗ ನೀ ನನ್ನ ಅರ್ಥಮಾಡ್ಕೊಬಹುದಿತ್ತು ನಮ್ಮ ಸಂಭಂದದ ಬಗ್ಗೆ, ಅದರ ಸಾರ್ಥಕತೆ ಬಗ್ಗೆ ನಿಶ್ಚಿತತೆ ಇತ್ತು. ನೀನು ಅದನ್ನ ಅರ್ಥ ಮಾಡ್ಕೊಳಲಿಲ್ಲ. ಯಾರಿಗೋ ಪ್ರಾಮಿಸ್ ಮಾಡ್ಬಿಟ್ಟಿದ್ದೆ. ಪಾಪ... ನಿಂಗೆ ಆವಾಗ ಅರ್ಥ ಆಗ್ಲಿಲ್ಲ ,ನಿನ್ನ ತಪ್ಪೇನಿಲ್ಲ ಬಿಡು ಅಂದು ನಕ್ಕೆ. 'ನನ್ನ ಚುಚ್ಚ ಬೇಡ ಕಣೆ ನಂಗೆ ಅರ್ಥ ಆಗಿದೆ, ನಿನ್ನ ಬಿಟ್ಟು ಇರೊಕ್ಕಾಗಲ್ಲ ನಂಗೆ ಅಂತ. ನಾನು ನಿನ್ನ ಗಂಡನ್ನೇ ಕೇಳ್ತಿನಿ, ನನ್ನ ಹುಡುಗಿನ ನಂಗೆ ಕೊಡು ಅಂತ, ನೀ ಬೇಡ ಅನ್ನಬೇಡ' ಅಂದ. ಕೇಳು ಅಂದೆ.


2

'ವ್ರಶಾಂಕ್, ಲಾವಣ್ಯ ಅನ್ನೋ ಹುಡುಗೀನ ಪ್ರೀತಿಸ್ತಿದಾನೆ ಕಣೆ' ಅಂತ ಆದಿ ಹೇಳ್ದಾಗ ಒಂದು ದೊಡ್ಡ ನಿಟ್ಟುಸಿರು ಹೊರಟಿತ್ತು.ಲಾವಣ್ಯ ಹೆಸರು ಚೆನಾಗಿದೆ ಅಂದುಕೊಂಡಳು. ಎರಡು ತಿಂಗಳು ಬಿಟ್ಟು ವ್ರಶಾಂಕೇ ಫೋನ್ ಮಾಡಿ, ಮೈತ್ರಿ... ಅಂದಾಗ ಆಶ್ಚರ್ಯ ಆಗಿತ್ತು. ಮನೆಗೆ ಬಾ ಅಂದಳು, ಬಂದ. ಅಪ್ಪ ಅಮ್ಮ ಹಳ್ಳಿಗೆ ಹೋಗಿದ್ದರು ಅಲ್ಲಿಯ ದೇವಸ್ತಾನದಲ್ಲಿ ಎನೋ ಪೂಜೆ ಮಾಡಿಸಲು, ಆದ್ರೆ ಅಜ್ಜಿ ಮಾತ್ರ ಇದ್ದಳು ಮನೆಯಲ್ಲಿ, ಆಗಾಗ ಕೆಮ್ಮುತ್ತಾ.


ಏನೇನೋ ಮಾತಾಡಿದೆವು ಸ್ನೇಹಿತರ ವಿಷಯ,ಅವನ ಕೆಲಸದ ವಿಷಯ, ಅವಳ ಕೆಲಸದ ವಿಷಯ, ಲಾವಣ್ಯ ಹೇಗಿದಾಳೆ ಕೇಳಿದಳು 'ಅದು ಮಗು ಬಿಡು' ಅಂದ. ಇರಬಹುದು ಅನ್ನಿಸಿತು ಅವಳಿಗೆ. ಅಮ್ಮ ಬೆಳಗ್ಗೆ ಮಾಡಿಹೋಗಿದ್ದ ಉಪ್ಪಿಟ್ಟನ್ನೇ ಹಾಕಿಕೊಟ್ಟಳು, ಬಟ್ಟಲಲ್ಲಿ ಬಿಳಿ ಮೊಸರು. ನಿನಗೆ ಕೆನೆ ಮೊಸರು ಅಂದ್ರೆ ಈಗಲೂ ಆಗೋಲ್ಲವ? ಅಂದ. ಪರವಾಗಿಲ್ಲ ಹಳೇದೆಲ್ಲ ಇನ್ನು ನೆನಪಿದೆಯಲ್ಲ ಅಂದು ನಕ್ಕಳು. ಹತ್ತಿರ ಬಾರೆ ಅಂದ, ಹೋಗಿ ಪಕ್ಕದಲ್ಲಿ ಕೂತಳು. ಕಾಲೇಜಿನಲ್ಲಿ ನೀ ನನ್ನ ಪ್ರೀತಿಸ್ತಿದ್ದೆ ಅಲ್ವ? ಅಂದ.ಇಷ್ಟು ಹೊತ್ತು ಕೇಳಿಸಿದರು ಕೇಳಿಸದ ಹಾಗೆ ಇದ್ದ ಅಜ್ಜಿಯ ಕೆಮ್ಮು ಕೇಳಿಸತೊಡಗಿತ್ತು. ನೀನೂ ನನ್ನ ಪ್ರೀತಿಸುತ್ತಿದ್ಡೆ ವ್ರಶಾಂಕ್ ಅಂದಳು. ನಿನ್ನ ಅಜ್ಜಿಗೆ ತುಂಬ ಕೆಮ್ಮು ಅಲ್ವ? ಅಂದ, ಮುಗುಳ್ನಕ್ಕಳು. ಇನ್ನು ಎನೇನೊ ಮಾತಾಡಿದರು ಹೊರಡೋ ಮುಂಚೆ ಅಜ್ಜಿ..ನಿಮ್ಮ ಆರೋಗ್ಯ ನೋಡ್ಕೊಳಿ ಅಂದ. ದೂರ ಹೋದ ಮೇಲೆ ಲಾವಣ್ಯಳ ಫೋಟೊ ಮೇಲ್ ಮಾಡ್ತೀನಿ ಅಂತ ಕೂಗ್ದ.

ಸರಿಯಾಗಿ ಮೊಳಕೆಯೇ ಒಡೆಯದ್ದಿದ್ದ ಸಂಭಂದ, ಅಂದಿನಿಂದ ಜೀವ ಪಡೆಯಲು ಕಾತರಿಸುತ್ತಿತ್ತು, ಹಸಿರಾಗಲು ಶುರುವಾಗಿತ್ತು, ರಸ ಒಸರಲು ಪ್ರಾರಂಭಿಸಿತ್ತು.ಅದೇ ಸಮಯಕ್ಕೆ ಸರಿಯಾಗಿ ಅವಳಿಗೆ ಗಂಡು ನೋಡಲು ಶುರು ಮಾಡಿದ್ದರು ಪ್ರತಿಯೊಂದು ಹುಡುಗನನ್ನೂ ಬೇಡ ಬೇಡ ಎಂದು ನಿರಾಕರಿಸುತ್ತಿದ್ದಳು. ಏಕೆ ಅಂತ ಅವಳಿಗೇ ಗೊತ್ತಿರಲಿಲ್ಲ. ಅವಳ ಅಮ್ಮ ಅಳಲು ಶುರು ಮಾಡಿದ್ದರು, ಹಿಂಸೆ ಆಗುತಿತ್ತು ಮನೆಯಲ್ಲಿ. ಇವತ್ತು ನಿರ್ಧಾರಕ್ಕೆ ಬಂದೇ ಬಿಡಬೇಕು ಅಂತ ವ್ರಶಾಂಕ್ ಬಳಿ ಹೋಗಿ 'ನನ್ನ ಮದುವೆ ಆಗು ವ್ರಶಾಂಕ್' ಅಂದಿದ್ದಳು ನಾನೇನೋ ತಯಾರಿದ್ದೀನಿ ಆದ್ರೆ ಲಾವಣ್ಯಾಗೆ ಪ್ರಾಮಿಸ್ ಮಾಡಿಬಿಟ್ಟಿದೀನಲ್ಲ, ಪ್ರಾಮಿಸ್ ಮುರಿಯೋದು ತಪ್ಪಲ್ಲವ? ಅಂದಿದ್ದ. ತನ್ನ ಬಳಿ ಇರೋವಾಗ, ತನ್ನ ಸೇರೋವಾಗ, ಸುಖಿಸುವಾಗ, ಆಣೆ- ಪ್ರಮಾಣ, ನಂಬಿಕೆ, ಮನಸ್ಸು- ಮನಸ್ಸಾಕ್ಷಿ, ಎಲ್ಲವನ್ನೂ ಬೀದಿಗೆ ಎಸೆದಂತೆ ಆಡುತ್ತಿದ್ದವನಿಗೆ ಆಣೆ ಪ್ರಮಾಣದ ಜ್ನಾಪಕ ಬಂದ್ದಿದ್ದು ನೋಡಿ ಹೇಡಿ ಅನ್ನಿಸಿ 'ಸರಿ ನೀನು ನಿನ್ನ ಆಣೆ ಉಳಿಸಿಕೋ ಅವಳನ್ನೇ ಮದುವೆ ಆಗು.' ಅಂದಿದ್ದಳು. ಇದಾದ ಎರಡೇ ತಿಂಗಳಲ್ಲಿ ಮೈತ್ರಿಯ ಮದುವೆ ಆಗಿಹೋಗಿತ್ತು.


3
ಛೇ.. ನಾವು ಮತ್ತೆ ಸಿಗಲೇಬಾರದಿತ್ತು ಅವತ್ತು ಫೋನ್ನಲ್ಲಿ ಮಾತಾಡೋವಾಗ ನಾನು ಕೇರಳಕ್ಕೆ ಹೋಗ್ತಿದೀನಿ ಒಂದು ವಾರ ಅಂದೆ. ಲಾವಣ್ಯ ಬರ್ತಿದಾಳ ಅಂತ ಕೇಳಿದಳು, ಇಲ್ಲ ಅಂದೆ. ನಾ ಬರ್ತೀನಿ ವ್ರಶಾಂಕ್ ಅಂದಳು. ಆಶರ್ಯ ಆಯ್ತು ನಿಜವಾಗ್ಲು ಮೈತ್ರಿ!!! ಅಂದೆ. 'ನನಗು ತಿರುಗಬೇಕು ಅಂತ ಮನಸ್ಸಾಗಿದೆ, ಒಂದೇ ಕಡೆ ಇದ್ದು ಬೊರು. ಕೆಲಸಕ್ಕು ಒಂದುವಾರ ರಜೆ ಹಾಕಿಬಿಡ್ತೀನಿ, ಇವರೂ ಫಾರಿನ್ ಟೂರ್ನಲ್ಲಿದಾರೆ, ಮಗೂನು ಕರ್ಕೊಂಡು ಬರ್ತೀನಿ. ನಿನ್ನ ಕೆಲಸಕ್ಕೆ ತೊಂದರೆ ಮಾಡೋಲ್ಲ ಅಂದಿದ್ದಳು.

ಒಂದು ವಾರ ಪೂರ್ತಿ ಜೊತೆಲಿ ಕಳೆದೆನಲ್ಲ ಆವಾಗಲೇ ಗೊತ್ತಾಗಿದ್ದು ಅವಳಿಗೂ ಇವಳಿಗೂ ಎಷ್ಟು ವ್ಯತ್ಯಾಸ ಎಂದು. ಮೊದಮೊದಲು ಇನೊಸೆಂಟ್ ಅನ್ನಿಸುತ್ತಿದ್ದ ಲಾವಣ್ಯ, ಈಗ ನಾಟಕ ಮಾಡ್ತಾಳೆ ಅನ್ನಿಸುತಿತ್ತು. ಅವಳ ಜೊತೆ ಇರೋವಾಗಲೆಲ್ಲಾ ಉಸಿರುಕಟ್ಟುತ್ತಿರುವ ಭಾವನೆ. ಚಿಕ್ಕ ಚಿಕ್ಕ ವಿಷಯಗಳನ್ನೂ ದೊಡ್ಡದು ಮಾಡುವ, ನಾನು ಬೇರೆ ಹುಡುಗಿಯರನ್ನು ನೋಡಿದರೆ ಸಾಕು ಉರಿದು ಬೀಳುವ, ನನ್ನ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳದ, ಸಂದರ್ಭಗಳಿಗೆ ಸರಿಯಾಗಿ ಸ್ಪಂದಿಸದ, ಅತ್ಯಂತ ಹಠಮಾರಿ-ಪೊಸೆಸ್ಸಿವ್ ಹುಡುಗಿ ಅವಳು. ಪಕ್ಕದಲ್ಲೇ ಕುಳಿತುಕೊಂಡು ನಾನು ಹುಡುಗಿಯರ ಜೊತೆ ಫ್ಲರ್ಟ್ ಮಾಡುವುದನ್ನು ಎಂಜಾಯ್ ಮಾಡುತ್ತಾ, ನನ್ನ ಚುಡಾಯಿಸುತ್ತಾ, ಹೆಚ್ಚು ಸ್ಪೇಸ್ ಕೊಡುವ, ಬೇಕಾದಲ್ಲಿ ಮಾತಾಗುವ-ಬೇಡವಾದಲ್ಲಿ ಮೌನವಾಗುವ, ಬರೀ ಪ್ರೀತಿ ಪ್ರೇಮದ ಮಾತಡಿ ಬೋರ್ ಮಾಡದೆ, ಏನೇ ವಿಷಯ ಎತ್ತಿಕೊಂಡರೂ ಸಮರ್ಥವಾಗಿ ವಾದ ಮಾಡುವ, ಆದರೆ ಜಗಳ ಆಡದ ಅಷ್ಟೇ ಪ್ರೀತಿಸುವ ಹುಡುಗಿ ಮೈತ್ರಿ.

ಹೌದು ನಾನಾಗ ತಪ್ಪೇ ಮಾಡಿರಬಹುದು. ಅವಳನ್ನ ಅರ್ಥ ಮಾಡಿಕೊಂಡಿದ್ದು ಬಹಳ ನಿಧಾನ ಇರಬಹುದು, ಆದ್ರೆ ಅವಳನ್ನ ತುಂಬಾ ಪ್ರೀತಿಸುತ್ತೇನೆ. ಅವಳ ಗಂಡ ಅವಳನ್ನ ನೋಡಿಕೊಳ್ಳೋದಕ್ಕಿಂತ ಚೆನ್ನಾಗಿ ನೋಡಿಕೊತೆನೆ ನಾನು. ಲಾವಣ್ಯಾಗೆ ಮೊನ್ನೇನೆ ಹೇಳಿಬಂದೆನಲ್ಲ ನನಗೂ ನಿನಗೂ ಆಗಿಬರೋಲ್ಲ, ನಮ್ಮಿಬ್ಬರ ಸ್ವಭಾವಗಳು ಬೇರೆ ಬೇರೆ, ಜೊತೇಗಿರೋದು ಕಷ್ಟ ಆಗುತ್ತೆ ಅಂತ. ಇದನ್ನ ಎಷ್ಟು ಹೊತ್ತು ಅವಳಿಗೆ ವಿವರಿಸಿದೆ ಆದ್ರೆ ಅವಳು ಮೊನ್ನೇನೂ ಅದೇ ಥರ ಆಡಿದಳು, ಅತ್ತಳು, ಬಾಯಿಗೆ ಬಂದ ಹಾಗೆ ಬೈದಳು, ಹೊಡೆದಳು, ನಾನು ಎದ್ದು ಬಂದೆ. ಆದ್ರೆ ಇನ್ನು ಮುಂದೆ ಎಲ್ಲಾ ಚೆನ್ನಾಗಿರುತ್ತೆ ನಾನು-ನನ್ನ ಮೈತ್ರಿ-ಅವಳ ಮಗು, ಅಲ್ಲ ನಮ್ಮ ಮಗು ಆ ಮಗುನ ನನ್ನ ಮಗು ಥರನೇ ನೋಡಿಕೊಳ್ತೀನಿ. ಅವಳ ಗಂಡನಿಗೂ ಹೇಳಿಯಾಯಿತು, ಆ ಪ್ರಾಣಿ ನನ್ನ ಹೆಂಡತಿ ಹತ್ತಿರ ಮಾತಾಡ್ತೀನಿ ಅಂತ ಹೇಳಿದಾನೆ.'ಈಗ ಮನೆಗೆ ಬಾ' ಅಂತ ಮೈತ್ರಿ ಫೋನ್ ಮಾಡಿದ್ದಳಲ್ಲ, 'ಮಾತಾಡಬೇಕು' ಅಂತ. ನನಗೆ ಗೊತ್ತು ಮೈತ್ರಿ ನನ್ನ ಜೊತೆಗೆ ಬಂದೇ ಬರ್ತಾಳೆ, ನನ್ನ ತುಂಬ ಪ್ರೀತಿಸುತ್ತಾಳೆ ಅವಳು, ಅಂದುಕೊಂಡು ಕಾರಿನ ಕೀ ತೆಗೆದುಕೊಂಡು ಹೊರಟ.


4
ತನ್ನ ದುಃಖ ದುಮ್ಮಾನವನ್ನೆಲ್ಲಾ ಬಸಿದು ಹಾಕುವ ಹವಣಿಕೆ ಇರಬೇಕು, ರಾತ್ರಿಯೆಲ್ಲಾ ಆಕಾಶವು ಬಿಕ್ಕಳಿಸಿ ಅಳುತ್ತಿತ್ತು. ಏಕೋ ನನಗರಿವಿಲ್ಲದೆಯೇ ನನ್ನ ಕೆನ್ನೆಯ ಮೇಲೂ ಇಳಿದ ನೀರು, ಕಾರಣ ತಿಳಿಯದು. ಸುಮ್ಮನೆ ಕಲ್ಪಿಸಿಕೊಂಡ ಆತಂಕಗಳು ನನ್ನ ಕಾಡುತ್ತಿದ್ದರೆ ನನ್ನ ಕಲ್ಪನೆಗಳ ಬಗ್ಗೆ ನನಗೇ ಭಯ ಮೂಡಿ, ಟೀವಿ ನೋಡಲು ಬೇಸರವಾಗಿ, ಓದಲು ತಂದ ಪುಸ್ತಕದಲ್ಲಿ ಮನಸ್ಸು ಇಳಿಯದೆ, ಏನೂ ಮಾಡಲು ಹೊಳಿಯದೆ, ಆ ರಾತ್ರಿಯಲ್ಲಿ ಮನೆ ಒರೆಸತೊಡಗಿದೆ.

ಯಾವಾಗ ಮಲಗಿದೆನೋ!! ಬೆಳಗ್ಗೆ ಎದ್ದು ರಂಗೋಲಿ ಹಾಕುತ್ತಿರುವಾಗ, ರಾತ್ರಿಯೆಲ್ಲಾ ಅತ್ತಿದ್ದರಿಂದಲೋ ಏನೋ ಎನ್ನುವಂತೆ ಕಣ್ಣು ಕೆಂಪಗಾಗಿರುವ ಆಕಾಶ, ದುಃಖ ಹೊರಹಾಕಿದ ಸುಖದ ಜೊತೆ. ಸುಮ್ಮನೆ ಅಚ್ಚರಿಯಿಂದ ನೋಡಿದೆ, ರಂಗೋಲಿ ಹಾಕುವುದನ್ನೂ ಮರೆತು- ಹಕ್ಕಿಯೊಂದು ತನ್ನ ಮೇಲಿದ್ದ ಮಳೆ ನೀರನ್ನು ಕೊಡಗಿಕೊಳ್ಳುತ್ತಿತ್ತು, ಅಲ್ಲೊಂದು ಮೈನಾ ಹಕ್ಕಿ ಮಾತಾಡುತ್ತಿದ್ದರೆ, ಹೆಸರೇ ಗೊತ್ತಿಲ್ಲದ ಹಕ್ಕಿಯೊಂದು ಹಾಡಾಗಿ ಉತ್ತರಿಸುತ್ತಿತ್ತು...

ಅವನ ಕಾರು ದೂರದಲ್ಲಿ ಬರುತ್ತಿರುವುದು ಕಾಣಿಸುತ್ತಿತ್ತು, ಅವನಿಗೆ ಉತ್ತರ ಹೇಳಬೇಕಲ್ಲ. ಪಾಪು ಅಮ್ಮಾ ಎಂದು ಕರೆದ ಹಾಗೆ ಅನ್ನಿಸಿತು ಒಳಗೆ ಹೋಗಿ ನಿದ್ದೆಗಣ್ಣಿನ ಮಗುವನ್ನು ಎತ್ತಿಕೊಂಡು ಬಂದೆ. ಅವನು ನಲ್ಲೀಕಾಯಿ ಮರಕ್ಕೆ ಒರಗಿ ನಿಂತ್ತಿದ್ದ. ವ್ರಶಾಂಕ್,ನಿನಗೆ ನನ್ನ ಗಂಡನ್ನ ಕೇಳೋಕ್ಕೆ ಒಪ್ಪಿಗೆ ಕೊಟ್ಟಿದ್ದರಲ್ಲಿ ನನ್ನ ಸ್ವಾರ್ಥವಿದೆ, ಏನೂ ಅನ್ನಿಸದಂತಹ ವ್ಯಕ್ತಿತ್ವದ ಅವನಿಗೆ ನೀ ಹೇಳುವ ವಿಚಾರದಿಂದ ಏನಾದರೂ ಅನ್ನಿಸಬಹುದು, ರೊಚ್ಚಿಗೆ ಬೀಳಬಹುದು, ರೇಗಬಹುದು, ಸಿಟ್ಟಾಗಬಹುದು ಅನ್ನೋ ಆಸೆಯಿಂದ, ಆದರೆ ಅಂತದೇನೂ ಆಗಲಿಲ್ಲ.

ಏನೂ ಅನ್ನಿಸದವನ ಜೊತೆ ಬದುಕಲು ಕಲಿತಿದೀನಿ, ಅಭ್ಯಾಸ ಆಗಿಹೋಗಿದೆ.ಅವನಿಗೆಪ್ರಾ ಪ್ರಾಮಿಸ್ ಮಾಡಿದೀನಿ ಅದಕೆ ಬರ್ತಿಲ್ಲಾ, ಅಥವಾ ಸಮಾಜಕ್ಕೆ ಹೆದರಿ ಬರ್ತಿಲ್ಲಾ ಅನ್ಕೊಬೇಡ. ನನಗೆ ಇದ್ಯಾವುದರ ಭಯ ಇಲ್ಲ. ಸೋ ಕಾಲ್ಡ್ 'ಎಥಿಕ್ಸ್', 'ಮಾರಲ್ಸ್' ಗಳಲ್ಲಿ ನನಗೆ ನಂಬಿಕೆ ಇಲ್ಲ. ಆದ್ರೂ, ನಾ ಬರೋಲ್ಲ. ಅಂದು ತೆರೆದ ಬಾಗಿಲಿಂದ ನೆಡೆದು ಹೋಗಲು ನೀನು ಒಪ್ಪಲಿಲ್ಲ, ಧೈರ್ಯ ಮಾಡಲಿಲ್ಲ, ನಿನಗೆ ತುಂಬ ಬಾಗಿಲುಗಳಿದ್ದವು. ಇಂದು ನನ್ನ ಬಾಗಿಲುಗಳು ಮುಚ್ಚಿವೆ, ಗೋಡೆ ಒಡೆಯುವ ಧೈರ್ಯ ಇದೆ ಆದರೆ ಮನಸಿಲ್ಲ. ನಾನು ಬರೋಲ್ಲ ಅಂದೆ, ನಲ್ಲೀ ಕಾಯಿ ಮರಕ್ಕೆ ಒರಗಿ ನಿಂತವನನ್ನು ನೋಡುತ್ತ.. ತೊಡೆಯ ಮೇಲಿನ ಮಗಳು ನಕ್ಕಂತಾಯ್ತು.