Tuesday, June 5, 2007

ಗಾಡಿ- ಪತ್ರ- ಮೊಬೈಲು..

ಕಾಲೇಜಿನಲ್ಲಿ ಎಂತದ್ದೋ ಕಾನ್ಫರೆನ್ಸು ನಮಗೆಲ್ಲ ಒಂದು ವಾರ ರಜೆ. ಮನೆಗೆ ಬಂದೆ . ಊಟ- ಮಾತು ಆದ ಮೇಲೆ ಅಪ್ಪ ಏನೇನು ಹೊಸದು ತಂದಿದ್ದಾರೆ ಅಂತ ಚೆಕಿಂಗ್ ಮಾಡಿದೆ. ಬಂದ ರಿಸಲ್ಟು ನಾಲ್ಕು ಸೀಡಿ, ಎರಡು ಪುಸ್ತಕ...

ಮೂರು ಸೀಡಿಗಳು ಶಾಸ್ತ್ರೀಯ ಸಂಗೀತದ್ದು. ನಾಲ್ಕನೆಯದು ಅಶ್ವಥರ ಸಂಗೀತದಲ್ಲಿ, ಕೆ.ಎಸ್.ನ ಅವರ ಮೈಸೂರು ಮಲ್ಲಿಗೆ! ನನಗೆ ಕುಣಿಯೋಷ್ಟು ಖುಷಿ.

ಬಳೆಗಾರ ಚೆನ್ನಯ್ಯ ಬಂದು, "ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು" ಅಂತ ಶುರು ಮಾಡಿ "ಹೋಗಿ ಬನ್ನಿರಿ ಒಮ್ಮೆ ಕೈಮುಗಿದು ಬೇಡುವೆನು ಅಮ್ಮನಿಗೆ ನಿಮ್ಮದೇ ಕನಸು" ಎಂದು ಮುಗಿಸುವಾಗ ನನಗೇ ದುಃಖ ಮಡುವುಗಟ್ಟಿತ್ತು. ರಾಯರಂತು ಹೆಂಡತಿಯನ್ನ ನೋಡೋಕೆ ತಕ್ಷಣ ಹೊರಟಿರಬೇಕು..


ತವರು ಮನೆಯ ಸುದ್ದಿ ತಿಳೀಯೋಕೆ ಕಾತುರಳಾಗಿರುವ ಮಗಳು .. ಮಗಳು ಮೊಮ್ಮೊಕ್ಕಳ ವಿಷಯವನ್ನ ಕೇಳೋಕೆ ಚಾತಕ ಪಕ್ಷಿಗಳಂತೆ ಕಾಯುತ್ತಿರುವ ತಂದೆ ತಾಯಿ ..ಮದುವೆಯಾಗಿ ಬೇರೆ ಬೇರೆ ಊರು ಸೇರಿರುವ ಅಕ್ಕತಂಗಿಯರು, ಒಡಹುಟ್ಟಿದವರ ವಿಷಯವನ್ನ ತಿಳಿಯೋಕೆ ಪಡುವ ಧಾವಂತಗಳು... ದೂರದ ಊರಲ್ಲಿ ಓದುತ್ತಿರುವ ಮಗನ ಬಗ್ಗೆ ಚಿಂತಿಸುವ ಅಮ್ಮ, ಇವರಿಗೆಲ್ಲ ಆಗ - ಅಂದರೆ ತುಂಬಾ ಹಿಂದೆ ಊರಿಂದ ಊರಿಗೆ ಸುತ್ತಾಡುತ್ತಿದ್ದ ಈ ಬಳೆಗಾರರು ಅಥವ ಊರಿಗೆ ಯಾವುದೋ ಕೆಲಸದ ಮೇಲೆ ಬಂದಿರುವ ಆ ಊರಿನ ಜನ ಅಥವ ಆಳುಗಳು ಇವರುಗಳೇ ಸಂದೇಶವಾಹಕರು... messengers.

ಇವರುಗಳ ಬರವನ್ನ ಜನ ಹೇಗೆ ಚಾತಕ ಪಕ್ಷಿಯಂತೆ ಕಾಯುತ್ತಿರಬಹುದು ಅಂತ ಕಲ್ಪಿಸಿಕೊಂಡು, ನಾನೇ ಕಾಯುತ್ತಿರುವ ಹಾಗೆ ಅನ್ನಿಸಿ ರೋಮಾಂಚನವಾಗುತ್ತದೆ.. ಕಲ್ಪನೆಯೇ ಇಷ್ಟು ರೋಮಾಂಚನಗೊಳಿಸಿದರೆ ನಿಜವಾದ ಅನುಭವ ಹೇಗಿರಬಹುದು?

ಈಮೇಲ್ ಮೊಬೈಲ್ ಯುಗದವರಾದ ನಮಗೆ ಸಂದೇಶವಾಹಕರ ಬಗ್ಗೆ, ಗಾಡಿ ಪ್ರಯಾಣಗಳ (ಎತ್ತಿನ ಗಾಡಿ) ಬಗ್ಗೆ ಒಂದು ಕಲ್ಪನೆ ಹುಟ್ಟಿದರೆ ಅದಕ್ಕೆ ಕೆ.ಎಸ್.ನ ಅವರ ಕವಿತೆ, ಕುವೆಂಪು, ಬೈರಪ್ಪ, ಅನಂತಮೂರ್ತಿಯವರ ಕಾದಂಬರಿಗಳೇ ಕಾರಣ.. ನಮ್ಮ ಅಪ್ಪ ಅಮ್ಮಂದಿರೆ ಈ ಮೆಸ್ಸೆಂಜರ್ಸ್ನ ನೋಡಿಲ್ಲ. ಅವರದು ಪತ್ರಗಳು , ಟ್ರಂಕ್ ಕಾಲ್ ಗಳ ಕಾಲ...

ಪತ್ರಗಳು ಪರ್ವಾಗಿಲ್ಲ , ಅವು ಒಂಥರ exitementಏ! ನಮ್ಮಗಳಿಗೆ ಆ exitemenಟು ಇಲ್ಲ. ಹೋಗ್ಲಿ ನಾನು ಪತ್ರ ಬರೆದರೆ ನನಗೆ ಉತ್ತರ ಆದ್ರೂ ಬರೀಬೇಕಲ್ಲ ಅನ್ನಿಸಿ ಮೂರು ಜನ ಸ್ನೇಹಿತರಿಗೆ ಪತ್ರ ಬರೆದೆ. ಮೂರು ಜನಾನು ಫೋನ್ ಮಾಡಿ ನಿನ್ನ ಲೇಟರ್ ಸಿಕ್ಕಿತು ಅಂದ್ರು. ಒಬ್ಬಳು "ಸಕತ್ತಾಗಿ ಬರೀತಿಯ ಕಣೆ" ಅಂದ್ರೆ ಇನ್ನೊಬ್ಬ "ಏನು ಸೆಂಟಿಯಾಗಿ ಬರ್ದಿದೀಯಾ.. ಸ್ಕೂಲ್ ಡೇಯ್ಸ್ ನೆನಪು ಬಂತು" ಅಂದ!. ಮತ್ತೊಬ್ಬಳು "ಇದೇನೇ ಹೊಸಾ ಹುಚ್ಚು" ಅಂದಳು... ನನಗೆ ಒಂದಲ್ಲ ಒಂದು ಹುಚ್ಚು ಹಿಡಿದಿರುತ್ತೆ ಅನ್ನೋ ಇವರನ್ನೆಲ್ಲ ಕುಟ್ಟಿ ಹಾಕಬೇಕು ಅನ್ನಿಸಿತ್ತು.


ಭೈರಪ್ಪನವರ 'ಸಾರ್ಥ' ಓದಿದಾಗ, ಅಲ್ಲ ಅದಕ್ಕಿಂತ ಮೊದಲು ಡಾ.ಪಿ ವಿ ನಾರಾಯಣ್ ಅವರ 'ಅಂತರ' ಓದಿದಾಗ ಗಾಡಿ ಪ್ರಯಾಣದ ಕಲ್ಪನೆ ಬಂದಿತ್ತು ನನಗೆ.

ನೀನು ಗಾಡೀಲಿ ಪ್ರಯಾಣ ಮಾಡಿದೀಯಾ? ಅಂತ ಸೌತೇಕಾಯಿ ಹೆಚ್ಚುತ್ತಿದ್ದ ಅಮ್ಮನನ್ನು ಕೇಳಿದಾಗ
"ಹೂಂ, ದಯಣ್ಣನ ಉಪನಯನಕ್ಕೆ ಗಾಡೀಲೇ ಹೋಗಿದ್ದು, ರಾತ್ರಿ ಹೊತ್ತಿನ ಪ್ರಯಾಣ ನಾಲ್ಕು ಗಾಡಿ. ಆಗ ನಾವೆಲ್ಲ ತುಂಬಾ ಚಿಕ್ಕವರು"

ಮಧ್ಯದಲ್ಲಿ ನನ್ನ ತಂಗಿಯ ಪ್ರಶ್ನೆ "ನೀನು, ಮಾಮಾ, ದೊಡ್ಡಮ್ಮ, ಚಿಕ್ಕಮ್ಮ ಎಲ್ಲ ಒಟ್ಟಿಗೆ ಕೂತಿದ್ರ?"

"ಹಾಗೆಲ್ಲಾ ಚಿಕ್ಕ ಚಿಕ್ಕವರನ್ನು ಒಂದೇ ಗಾಡೀಲಿ ಕೂರಿಸುತ್ತಾರ?" ಮತ್ತೆ ಅಮ್ಮನ ವರ್ಣನೆ..
"ನಿಮ್ಮಜ್ಜಿ, ಚಿಕ್ಕಜ್ಜಿ, ನನ್ನ ಸೋದರತ್ತೆ ಏನೇನೋ ಮಾತಾಡ್ತಿದ್ರು. ಅಕ್ಕ ಪಕ್ಕಾ ಸಾಲು ಸಾಲು ಮರಗಳು, ಗವ್ ಅನ್ನುವ ಕತ್ತಲು, ಗಾಡಿ ಹೊಡಿಯೋ ಭೈರ ಹಾಡು ಹೇಳುತ್ತಿದ್ದ ಸಣ್ಣ ದನಿಯಲ್ಲಿ...." ಅಂತ ಅವರ ಒಂದು ರಾತ್ರಿಯ ಗಾಡಿ ಪ್ರಯಾಣದ ಬಗ್ಗೆ ಹೇಳಿ ಮುಗಿಸೋ ಹೊತ್ತಿಗೆ ಸೌತೆ ಕಾಯಿ ಪೂರಾ ಹೆಚ್ಚಿ ಸಾಂಬಾರೂ ಮಾಡಾಗಿತ್ತು.

ನಮ್ಮಮ್ಮ ಒಂದು ರಾತ್ರಿ ಗಾಡಿ ಪ್ರಯಾಣ ಮಾಡಿದರೆ, ನಾನೂ ಮಾಡಿದೀನಿ ,ಅರ್ಧ ಗಂಟೆಯ ಪ್ರಯಾಣ ನಮ್ಮ ಸೋದರತ್ತೆಯ ಮನೆಯಲ್ಲಿ ! ಎಂತದೋ ಫಂಕ್ಷನ್ನು.. ಅವರದು ತೀರಾ ಒಳಗಡೆ ಹಳ್ಳಿ - ಒಂದು ಆಟೋ ಇರಲಿಲ್ಲ. ಆಗ ಅತ್ತಂಬಿ (ಅತ್ತೆಯ ಗಂಡ) ಎತ್ತಿನ ಗಾಡಿ ಕಳಿಸಿದ್ರು. ನನ್ನ ಆ ಗಾಡಿ ಹೊಡೀಯೋನು ಎತ್ತಿ ಸೀದಾ ಗಾಡಿಯೊಳಗೆ ಕೂರಿಸಿದ್ದಷ್ಟೇ ಜ್ಞಾಪಕ. ಅದರಿಂದ ಇಳಿದಿದ್ದು ನೆನಪಿಲ್ಲ .. ಆಗ ನಾಲ್ಕು ವರ್ಷದವಳಿರಬೇಕು ನಾನು.

ಈಗಂತು ಈ ಅನುಭವಗಳು ಆಗೊಕೆ ಸಾಧ್ಯಾನೆ ಇಲ್ಲ.. ಮೆಸ್ಸೆಂಜರ್ಸ್ ಇಲ್ಲ, ಪತ್ರಗಳಂತೂ ಪಿತೃಗಳಿಗೇ ಅರ್ಪಿತವಾಗಿವೆ.. ಗಾಡಿಪ್ರಯಾಣ outdatedಉ. ಈಗಿನವರಿಗೆ ಕಾಯುವ ಗೋಜೇ ಇಲ್ಲ .ಒಬ್ಬರೊಬ್ಬರ ಬಗ್ಗೆ ತಿಳಿದುಕೊಳ್ಳಲು ಪೋನ್ ಇದೆ, ಮೊಬೈಲ್ ಇದೆ. ಅಕ್ಕ ಪಕ್ಕದಲ್ಲಿ ಕೂತು ಮಾತಾಡ್ತಿರೋ ಹಂಗೆ ಕಾಡು ಹರಟೆ ಹೊಡೀಬಹುದು...


ಇನ್ನು ಈ ಮೊಬೈಲು ಕಾತುರತೆಯನ್ನ ಕಸದ ಬುಟ್ಟಿಗೆ ಸೇರಿಸಿದೆ . ಉದಾಹರಣೆಗೆ ನನ್ನ ಸ್ನೇಹಿತೆ ವಿಷಯ ಹೇಳ್ತೀನಿ - ಅವಳು ಅವರ ಊರಿಂದ ಹಾಸ್ಟೆಲಿಗೆ ಬರೋದು ಅವರ ಅಪ್ಪ ಅಮ್ಮನಿಗೆ live telecast ತರ..ಬಸ್ಸು ಹತ್ತುವಾಗ ಸೀಟು ಸಿಕ್ಕಿದಾಗ, ಒಂದು ಕಾಲ್. ಬಸ್ಸಿಂದ ಇಳಿದು ಟ್ರೇನ್ ಗೆ ಟಿಕೆಟ್ ತಗೊಂಡಾಗ ಇನ್ನೊಂದು. ಟ್ರೇನ್ ಮಧ್ಯದಲ್ಲಿ ನಿಂತು ಬೋರಾದಾಗ , ಹಾಸ್ಟೆಲ್ ಸೇರಿದಾಗ - ಹೀಗೆ ಪ್ರತಿ ಸಲ ಕಾಲು, ಮಾತು ಮಾತು ಮಾತು...ಎಷ್ಟು ವಿಚಿತ್ರ ಅಲ್ಲವ?


ನನ್ನ ರೂಮ್ ಮೇಟ್ ಹಳ್ಳಿಯವಳು . ನನಗಿಂತ ಅವಳಿಗೆ ಹಳ್ಳಿಯ ಹಿಂದಿನ ಕಾಲದ ಕಲ್ಪನೆ ಜಾಸ್ತಿ ಇದೆ. ಅವಳಿಗೆ ಇದನ್ನೆಲ್ಲ ಹೇಳಿದ್ರೆ, ಅವಳು ಇನ್ನು ಏನೇನೋ ಹತ್ತು ಹನ್ನೆರಡು ಕಂಪ್ಯಾರಿಸನ್ ಮಾಡಿ, ನಮಗೆಲ್ಲ ಆ ಅನುಭವಗಳು ಇಲ್ವಲ್ಲ ಅಂತ ನಾನು ಹೊಟ್ಟೆ ಉರ್ಕೋಳ್ಳೋದನ್ನ ನೋಡಿ.. "ನೀನು ಈ ಕಾಲದಲ್ಲಿ ತಪ್ಪಿ ಹುಟ್ಟಿದ್ದಿಯ ಇನ್ನೂರು ಮುನ್ನೂರು ವರ್ಷಗಳ ಹಿಂದೆ ಹುಟ್ಟಬೇಕಿತ್ತು "ಅಂತ ಗೇಲಿ ಮಾಡಿದಳು .. ನಾನು "ನಾನು ಅವಾಗ ಕೂಡ ಇದ್ದೆ ಇದು ನನ್ನ ಇನ್ನೊಂದು ಜನ್ಮ ಅಂತ ..ನಾನು ಹೇಳೋದು ನಿಜ ಇರಬಹುದು ಅಲ್ಲವ??" ಅಂದರೆ,

"ಇಲ್ಲ ಕಣೆ ಸಕತ್ ಸುಳ್ಳು... ನಿಂದು ಇದೆ ಲಾಸ್ಟ್ ಜನ್ಮ ಇದೆ ಮೊದಲ ಜನ್ಮ...ಹೆಹೆಹೆಹೆ" ಅಂತ ನಕ್ಕಳು ಅವಳು.

7 comments:

ಸುಸಂಕೃತ said...

ಮೈಸೂರ ಮಲ್ಲಿಗೆಯ ಘಮ ನಿಮ್ಮ ಬರವಣಿಗೆಯಲ್ಲಿ ಇಣುಕೋದು ನೋಡಿ ಮತ್ತೂ ಖುಷಿಯಾಯ್ತು!

ಈ ಗಾಡಿಯ ಬಗ್ಗೆ (ಎತ್ತಿನ ಗಾಡಿ ಅಲ್ಲ, ಹೊಗೆ ಉಗುಳುವ ಹಿಂದಿನ ಕಾಲದ ಇದ್ದಿಲ ರೈಲು!)ಕೆ.ಎಸ್.ನ ಒಂದು ಕವನದಲ್ಲಿ ಹೇಳ್ತಾರೆ!(ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ...) ಆಹ್! ಎಷ್ಟೋ ಸಲ ನನಗೂ ಅನ್ನಿಸಿದ್ದಿದೆ ಒಂದ್ ಐವತ್ ವರ್ಷ ಮುಂಚೆ ಹುಟ್ಟಬೇಕಿತ್ತು ಅಂತ! ನಾಸ್ಟಾಲ್ಜಿಕ್...

ಇನ್ನು ಇಂದಿನ ಪ್ರಯಾಣದ ಲೈವ್ ಟೆಲಿಕಾಸ್ಟ್ ಬಗ್ಗೆ ಅಚ್ಚರಿಯೇನಲ್ಲ ಬಿಡಿ...ರಸ್ತೆಬದಿಯ ಕಡಲೇಕಾಯಿ ಮಾರೋ ಹುಡುಗನೂ ಮೊಬೈಲ್ ಹಿಡ್ಕೊಂಡು ಮೊಬೈಲ್ ಆಗಿರುವಾಗ ಅದ್ರಲ್ಲೇನ್ ಆಶ್ಚರ್ಯ!

ಬ್ಲಾಗ್ ಅಪ್‍ಡೇಟ್ ಆಗ್ತಿದ್ದ ಹಾಗೆ ಮೊಬೈಲಿಗೆ ಚಿಕ್ಕಂಚೆ(ಎಸ್ಸೆಮ್ಮೆಸ್) ಬರೋದು ಇನ್ನೂ ಮಜ ಅಲ್ವೆ! ;)

Appu said...

ಅಜ್ಜನ ಮನೆಗೆ ಹೋದಾಗ ನಾನು ಅವರ ಹಳೆ ನೆನಪುಗಳನ್ನ ಕೆದಕಿ ವಿಷ್ಯಗಳನ್ನ ಹೊರತಗೀತ ಇದ್ದೇ. ತುಂಬಾ ಖುಷಿ ಅನ್ನಿಸೋದು....ಮತ್ತೆ ನನಗೆ ಹಳೆ ನೆನಪುಗಳನ್ನ ಮೆಲುಕು ಹಾಕೋ ಅವಕಾಶ ಆಯ್ತು.....

ತುಂಬಾ ಧನ್ಯವಾದಗಳು....

ಮೃಗನಯನೀ said...

ಧನ್ಯವಾದಗಳು ಸುಸಂಸ್ಕೃತ.

ಬ್ಲಾಗ್ ಅಪ್‍ಡೇಟ್ ಆಗ್ತಿದ್ದ ಹಾಗೆ ಮೊಬೈಲಿಗೆ ಚಿಕ್ಕಂಚೆ ಮಾಡಿದೋರು ಯಾರು good ನಾನು ಮುಂದೆ ಹಾಗೆ ಮಾಡ್ತೀನಿ;-)

ಮೃಗನಯನೀ said...

@APPU

ನಾನು ಕೇಳದಿದ್ದರು ನಮ್ಮ ಅಜ್ಜ 1958ಅಲ್ಲಿ ಹಿಂಗಾಗ್ತಿತ್ತು 1967ನಲ್ಲಿ ಹಂಗ್ ಮಾಡ್ತಿದ್ದೆ ಅಂತ ಹೇಳ್ತಿರ್‌ತಾರೆ ಅವರ ಮಾತುಗಳು ತುಂಬಾ interesting...ಈಗ ನೀವು ಹೇಳಿದಮೇಲೆ ಅನ್ನ್ಣಿಸುತ್ತಿದೆ ತಾತನ ಹತ್ರ ಗಾಡಿ ಪ್ರಯಾಣದ experience ಬಗ್ಗೆ ಕೇಳ್‌ಬೇಕಿತ್ತು ಅಂತ. ಈಗ್ಲೂ ಕೇಳ್ತಿನಿ ಬಿಡೊಲ್ಲ.

Prashanth said...

Ee vishaya eshto baari nannannu kaadidduntu. Hindinavara reeti patra vyavahara ittukollonavendare samaana manassulla snehitarilla....Nanagoo eshto baari anisutte...Naanu ee kaaladalli huttabaaradittu...1960 athava 1970-li huttabekittu...R K Narayan-ravara kathegalu oduvaga athava Shankar Nag-ra Malgudi Days noduvaga eno aparimita ananda...Hageye Dr. Raj-ra black and white chitragalannu noduvaga "Hai" enisuva feeling...Intha feeling iruva mattobbarannu kandaaga helalaarada khushiyagutte...Thanks for rekindling some of my fantasies and old memories Mruganayanee....

ಮೃಗನಯನೀ said...

My pleasure Prashant.
thank 4r the comment

Crazy said...

ಬಹಳ ಸೊಗಸಾಗಿದೆ ನಿಮ್ಮ ಈ ಲೇಖನ. ನನಗಂತೂ ಯಾವಾಗ್ಲೂ ಅನ್ನಿಸ್ತಾನೇ ಇರತ್ತೆ ನಂಗೆ ಯಾರಾದ್ರೂ ಒಬ್ರು ಕಾಗದ ಬರೀಬಾರ್‍ದಾ ಅಂತ ಆದ್ರೆ ಎನ್ ಮಾಡದು ಹೇಳಿ ಒಬ್ರೂ ಇಲ್ಲ...ಇನ್ನು ಪ್ರೇಮ ಪತ್ರ ಅಂತ ಅನ್ಕೊಂಡ್ರೆ ನಂಗೆ ಯಾವ ಗರ್ಲ್ ಫ್ರೆಂಡ್ ಇಲ್ಲ. :)

ಈಗ ಇಲ್ಲಿ ಅಮೇರಿಕಾ ದಲ್ಲಿ ಕೂತುಕೊಂಡು ಯಾವ ಕಾಗದನ ನಿರೀಕ್ಷೆ ಮಾಡಕ್ಕೆ ಆಗತ್ತೆ ಹೇಳಿ ಅಲ್ವಾ ?.

ನಿಮ್ಗೆ ಒಂದು ಹೇಳ್‌ಬೇಕು... ನನ್ನ ಶೃಂಗೇರಿ ಅಜ್ಜ ಅಂದ್ರೆ ನಂಗೆ ಇನ್ನಿಲ್ಲದ ಆಸೆ ಆದ್ರೆ ಅವರು ಈಗ ಇಲ್ಲ. ಆದ್ರೆ ಅವರು ಬದುಕಿದ್ದಾಗ ಅವರು ನನಗೆ ಬರೆದ 2 ಕಾಗದನ ತುಂಬಾ ಜತನದಿಂದ ಕಾಪಾಡಿಕೊಂಡು ಬಂದಿದೀನಿ ಮತ್ತೆ ಅದು ನಾನು ಬದುಕಿರೋ ವರೆಗೂ ನನ್ನ ಹತ್ರಾನೇ ಇರತ್ತೆ..

ಅಜ್ಜ ಅಂತ ಅಂದ ಹಾಗೆ ನಂಗೆ ಎಲ್ಲ ಬಾಲ್ಯದ ನೆನಪುಗಳು ಧಾವಿಸಿ ಬರತ್ತೆ, ದುಖ ಆಗತ್ತೆ but can't help it ashte..