Wednesday, August 1, 2007

ಮರೆತು ಹೋದವಳು

ಕಣ್ಣೀರು ತಡೆಯಕ್ಕೆ ಆಗ್ತಾ ಇಲ್ಲ...

ಗಂಡಸರು ಅಳಬಾರದು ಅಂತಾರಲ್ವ?? 'ಮದುವೇಲಿ ಹುಡುಗಿ ಅತ್ತರೆ ಎನೇ ಕಾರಣ ಇದ್ದರೂ ತವರು ಮನೆ ಬಿಟ್ಟು ಹೋಗುತ್ತಿದ್ದಾಳೆ ಅಂತ ಅಳುತ್ತಿದ್ದಾಳೆ' ಅಂದುಕೊಳ್ತಾರೆ ಈ ಮದುವೆ ಆಗಿ ನಿನ್ನಿಂದ ದೂರ ಆಗ್ತಿದೀನಿ ಅಂತ ಗೊತ್ತಾದರೂ ದು:ಖ ಆಗಬಾರದ? ಅಳು ಬಂದರೆ ಏನು ತಪ್ಪು?

ಮೊದಲನೇ ಸಾರಿ ನಾನು ಸಾಗರ ಸಮ್ಮುಖದಲ್ಲಿ ನಿನ್ನೊಳಗಿಳಿದಾಗ ನಿನ್ನ ಬಿಳಿಗೆನ್ನೆಮೇಲಿದ್ದ ಕಣ್ಣೀರು, ಕೂಗಬಾರದೆಂದು ನೀನು ತುಟಿ ಕಚ್ಚಿದ್ದರಿಂದ ಜಿನುಗಿದ ರಕ್ತ, ನನ್ನ ಕಣ್ಣು ಚ್ಚುಚ್ಚುತ್ತಿದೆ.
ಹ್ಮ್ ಮ್... ನಿನ್ನ ಆಸೆಗಳೇ ಹಾಗೆ ನೀನು ಎಷ್ಟು ಹತ್ತಿರವಾಗಿ ಸಿಕ್ಕಿದ್ದೆ ನನ್ನ ರೂಮಿನಲ್ಲೇ ಆದರೆ ನನಗೆ ನಿನ್ನ ಕೈ ಮುಟ್ಟೊಕ್ಕೆ ಬಿಟ್ಟಿರಲಿಲ್ಲ ನೀನು ನಿನ್ನ ಸೇರಬೇಕೆಂದರೆ ಅದು ಕಡಲ ಮುಂದೆಯೋ, ಜಲಪಾತದೆದುರಿಗೋ, ಹರಿಯುವ ನದಿ ಪಕ್ಕದಲ್ಲೋ ,ಸುಡುವ ಬಂಡೆಗಲ್ಲ ಮೇಲೊ....

ಅವತ್ತು ನನ್ನ ಮನೆಯಲ್ಲಿ ನಾವಿಬ್ಬರೇ ನಾನು ನಿನ್ನ ಆಸೆಯಿಂದ ನೋಡುತ್ತಿದ್ದರೆ
"ಯಾವುದೊ ರೂಮಿನ ಮೂಲೆಯಲ್ಲಿ ನನ್ನ ಮೀಸಲು ಮುರಿಯೋಕ್ಕೆ ಇಷ್ಟ ಇಲ್ಲ. ಕಡಲೆಂದರೆ ಆಸೆ ನಂಗೆ, ನೀನು ಕಡಲೂರಿನವನು ಸಮುದ್ರದೆದುರಿಗೆ ಬೆಳ್ದಿಂಗಳ ರಾತ್ರಿಯಲ್ಲಿ ಕಡಲ ಶಬ್ಧ ಕೇಳುತ್ತಾ ನಮ್ಮಿಬ್ಬರ ಮಿಲನವಾಗಲಿ ನನಗೂ ಇನ್ನು ಹೆಚ್ಚು ವರ್ಷ ತಡೆಯೋಕ್ಕಾಗಲ್ಲ ವರ್ಷ 24ಆಯಿತು ಅಂದಿದ್ದೆ.

ನೀನು ಯಾವತ್ತೂ ಹೀಗೆ.. ನೇರ- ನೇರ. ನನ್ನ ಕಣ್ಣ ಬೇಡಿಕೆ ಅರ್ಥವಾಗುತ್ತಿತ್ತು ನಿನಗೆ.
"ಕಾಡು ಕುದುರೆ ಸವಾರಿಗೆ ಸಿದ್ದವೇ ಹುಡುಗ?" ಎಂಡು ಕೇಳಿ ಝಲ್ಲನೆ ನಗುತ್ತಿದ್ದೆ ಅಷ್ಟೇ ಬೇಗ ತೆಕ್ಕೆಗೆ ಬಂದು ಬಿಡುತ್ತಿದ್ದೆ.
ಕ್ರೂರಿ ನೀನು ಯಾಕೆ ಹೀಗೆ ನೆನಪಾಗ್ತಾ ಇದ್ದೀಯ?? ಪುರೋಹಿತರು ಗೊಣಗುತ್ತಾ ಇದ್ದಾರೆ ಸರಿಯಾಗಿ ಮಂತ್ರ ಹೆಳುತ್ತಿಲ್ಲ ನಾನು ಅಂತ. ನಿನ್ನ ನೆನಪುಗಳಿಂದ ಕಳಚಿಕಂಡು ಮಂತ್ರ ಪಠಿಸೋದಾದರೂ ಹೇಗೆ?

ನನ್ನ ಪಕ್ಕದಲ್ಲಿ ಕುಳಿತಿರುವ ಹುಡುಗಿ ಎಷ್ಟು ಸಪೂರ- ಸಪೂರ ಬಗ್ಗಿಸಿದ ಕತ್ತು ಎತ್ತಿಲ್ಲ ,ನೀನೇ ಇಲ್ಲಿದ್ದಿದ್ದರೆ ದಿಟ್ಟ ಕಣ್ಣುಗಳಿಂದ ನನ್ನೇ ನೋಡುತ್ತಿರುತ್ತಿದ್ದೆ.. ಆದರೆ ನೀ ಇಲ್ಲಿರಲು ಹೇಗೆ ಸಾಧ್ಯ?

ಅವತ್ತು ನೀನು ನನ್ನ ಭುಜದ ಮೇಲೆ ಗಲ್ಲವನ್ನಿಟ್ಟುಕೊಂಡು ಮುದ್ದುಮುದ್ದಾಗಿ
"ಜಲತರಂಗದ ಸದ್ದು ಇದಕ್ಕಿಂತ ಚೆನ್ನಗಿರುತ್ತಾ?"
ಅಂತ ಕೇಳಿದ್ದೆ ಜಿಂಕ್ ಶೀಟಿನ ಮೇಲೆ ಬೀಳುತ್ತಿದ್ದ ಮಳೆ ಸದ್ದು ಕೇಳುತ್ತ.. ನಿನ್ನ ತುಂಬಿದ ಬಿಳಿಗೆನ್ನೆ ಕಚ್ಚಿಹಾಕಬೇಕೆನಿಸಿತ್ತು ಆವಾಗ.

ನಿನ್ನಷ್ಟು ಚಂದದ ಹುಡುಗಿ ಸುಮ್ಮನೆ ನನ್ನ ಬಳಿ ಬಂದ್ದಾದರೂ ಹೇಗೆ? ಎಂದು ಯೋಚಿಸುತ್ತಿರುತ್ತೇನೆ ಬಹಳ ಸಲ, ಅಂತೆಯೇ ಏನೂ ಕಾರಣ ಕೊಡದೆ ನನ್ನಿಂದ ದೂರವಾದ ಮೇಲೂ...

ನಿಂಗೆ ಅವತ್ತಿನ ದಿನ ನೆನಪಿದೆಯ? ಎಂದಿನಂತೆ ಬೆಳದಿಂಗಳ ರಾತ್ರಿಯಲ್ಲಿ ಕಡಲೆದುರಿಗೆ ಕುಳಿತಿದ್ದೆವು ಭೊರ್ಗರೆಯುವ ಕಡಲೆದುರಿಗೆ ಮೌನ ದೇವತೆ ನೀನು. ಆದರೆ ಅವತ್ತು ಕೇಳಿದ್ದೆ

"ಈಗ ಕಡಲನ್ನು ನೋಡಿದ್ರೆ ಹೇಗನ್ನಿಸುತ್ತೆ ನಿಂಗೆ... "

"ಅದರ ಭೋರ್ಗರೆತ ಗಂಡಸಿನ ಆವೇಷದಂತೆ.." ಎನ್ನುವುದು ನನ್ನ ಉತ್ತರ..

ನೀನು ಸ್ವಲ್ಪ ಹೊತ್ತು ಸುಮ್ಮನಿದ್ದು ಮುಂದುವರಿದೆ

"ನಮ್ಮ ಕವಿಗಳು ನದೀನ ಹೆಣ್ಣಿಗೆ ಸಮುದ್ರನ ಗಂಡಸಿಗೆ ಹೋಲಿಸುತ್ತಾರೆ .ಪೌರಾಣಿಕ ಪುಸ್ತಕಗಳಲ್ಲಿ ಸಮುದ್ರ ರಾಜನ ಕಲ್ಪನೆ ಬರುತ್ತೆ...ಅದಕ್ಕೆ ನಾವೆಲ್ಲ ಸಮುದ್ರದ ಭೊರ್ಗರೆತದಲ್ಲಿ ಗಂಡಸಿನ ಆವೇಶ ಕಾಣುತ್ತೀವಿ. ಆದ್ರೆ ನಂಗೆ ಈ ಬೆಳ್ದಿಂಗಳ ರಾತ್ರಿಯಲ್ಲಿ ಕಡಲು ಹೆಣ್ಣಾಗಿ ಕಾಣ್ತಾಳೆ, ಅವಳ ನಗ್ನತೆಯನ್ನು ತನ್ನ ತೆಳು ಬೆಳ್ಳನೆ ಹೊದಿಕೆಯಿಂದ ಮುಚ್ಚಿದಾನೆ ಎನ್ನಿಸುವ ಚಂದ್ರ, ನಿದ್ದೆಯಲ್ಲಿ ಮಗ್ಗಲು ಬದಲಿಸುತ್ತಿರುವಳೋ ಎನ್ನುವಂತೆ ದಡ ಮುಟ್ಟುವ ಅಲೆಗಳು... "
ಅವತ್ತಿನಿಂದ ನನಗೆ ಕಡಲನ್ನು ಗಂಡೆಂದು ನೋಡಲು ಸದ್ಯವೇ ಆಗಿಲ್ಲ....

ನೀನು ಹೇಳದೇ ಕೇಳದೇ ನನ್ನ ಬಿಟ್ಟು ಹೋಗಿ ಐದು ವರ್ಷಗಳಾದರೂ ನಾನು ಬೇರೆಯವರನ್ನು ಮದುವೆಯಾಗಲು ಒಪ್ಪಿರಲಿಲ್ಲ ನಿನ್ನ ಬಂಗಾರು ಬಣ್ಣದ ಕಣ್ಣುಗಳು ನಿನ್ನನ್ನು ಮರೆಯಲು ಬಿಟ್ಟಿರಲಿಲ್ಲ...ಆದರೆ ಮದುವೆಯಾಗಲೇಬೇಕಿತ್ತು ನಿನ್ನ ಮರೆಯಲಾದರೂ ಈ ಹುಡುಗಿಯಲ್ಲಿ ನಿನ್ನ ಹುಡುಕುವುದಿಲ್ಲ ನಾನು. ನನಗೆ ಒಂದು ಮಾತೂ ಹೇಳದೇ ಹೋದವಳಿಗೆ ಇನ್ನೇನು ಶಿಕ್ಷೆ ಕೊಡಲಿ?

"ಸಂತು ನೆನಪು ಬರ್ತಾ ಇದೆ ಬೀಚ್ ಹತ್ರ ಹೋಗ್ತೀನಿ"
ಅಂತ ನಿನ್ನ ಸ್ನೇಹಿತೆಗೆ ಹೇಳಿ ಹೋದವಳು ಎಷ್ಟು ಹೊತ್ತಾದರೂ ವಾಪಸ್ಸು ಬಂದಿರಲಿಲ್ಲ ಅವಳು ಗಾಭರಿಗೊಂಡು ಫೊನ್ ಮಾಡಿದ್ದಳು ನಾನು ದಡಬಡಿಸಿ ಬೆಂಗಳೂರಿನಿಂದ ಓಡಿ ಬಂದಿದ್ದೆ... ನಮ್ಮ ಘಾಬರಿ ಧಾವಂತಗಳು ಕಡಲಾಳಡಲ್ಲಿ ನೆಮ್ಮದಿಯ ಚಿರನಿದ್ದೆಗೆ ಇಳಿದವಳಿಗೆ ಹೇಗೆ ಗೊತ್ತಾಗಬೇಕು ನೆನಪಾಗಿ ಕಾಡಬೇಡ ಇನ್ನು ನಿನ್ನವನಲ್ಲ ನಾನು....

22 comments:

Sushrutha Dodderi said...

>> ಅವಳ ನಗ್ನತೆಯನ್ನು ತನ್ನ ತೆಳು ಬೆಳ್ಳನೆ ಹೊದಿಕೆಯಿಂದ ಮುಚ್ಚಿದಾನೆ ಎನ್ನಿಸುವ ಚಂದ್ರ, ನಿದ್ದೆಯಲ್ಲಿ ಮಗ್ಗಲು ಬದಲಿಸುತ್ತಿರುವಳೋ ಎನ್ನುವಂತೆ ದಡ ಮುಟ್ಟುವ ಅಲೆಗಳು...
-ಇಷ್ಟವಾದ ಸಾಲುಗಳು.

Ranju said...

ತುಂಬಾ ದಿನಗಳ ನಂತರ ಮೃಗನಯನಿ back to the pavilion. welcome madam.

ಅದ್ಭುತ ಬರಹ ಕಣ್ರಿ."ನಿನ್ನ ಮರೆಯಲಾದರೂ ಈ ಹುಡುಗಿಯಲ್ಲಿ ನಿನ್ನ ಹುಡುಕುವುದಿಲ್ಲ ನಾನು" ತುಂಬಾ ಇಷ್ಟ ಆಯಿತು. ಇಲ್ಲಾ ಯಾವತ್ತು ಪ್ರೀತಿಸಿದವರನ್ನು ನಾವು ಮರೆಯಲು ಸಾದ್ಯವೇ ಇಲ್ಲಾ ಎಲ್ಲಿ ನಿಜವಾದ ಪ್ರೀತಿ ಇರುತ್ತೋ ಅಲ್ಲಿ ಮರೆಯುವುದು!

ಮತ್ತೆ ಟ್ರಾಜಡಿ ಎಂಡಿಂಗ್ ಕೊಟ್ಟಿದ್ದಿರಲ್ಲ ಮೆಡಮ್.
ದುಃಖದಲ್ಲಿ ಅಷ್ಟೊಂದು ಸುಖ ಸಿಕ್ತಾ ಇದಿಯಾ.
ಬೇಗ ಬೇಗ ಮುಂದಿನ ಕಥೆ ಬರಲಿ.

ಅಮರ said...

ಹಾ!!! ಇದು ನನ್ನ ಮೊದಲೆ ಅನಿಸುಕೆ ... ಬರಹ ರೂಪದಲ್ಲಾದರು ..... ನಿನ್ನ ಮೊದ ಮೊದಲ ಸಾಲುಗಳನ್ನ ಓದಿ .... ನನಗನ್ನಿಸಿದ್ದನ್ನ ಹೇಳಿದ್ದೆ. "ಮರೆತು ಹೋದವಳು"
ಒಂದು ಲಯ ಬದ್ದವಾಗಿ ಚಿತ್ರಿತವಾಗಿದೆ.... ಭಾಷಾ ಪ್ರಯೋಗ..... ಮನಸ್ಸಿನ ಭಾವವನ್ನ .... ಬರವಣಿಯಲ್ಲಿ ಮೂದಿಸುವ ಸುಂದರ ಪ್ರಯೋಗವಾಗಿದೆ ....ಮುಂದಿನ ದಿನಗಳಲ್ಲಿ .... ಚಂದದ ಬರವಣಿಗೆಯ ನಿರೀಕ್ಷೆಯಲ್ಲಿ...

ಒಲವಿನಿಂದ
ಅಮರ

ಸಂತೋಷಕುಮಾರ said...

"ಸಂತು ನೆನಪು ಬರ್ತಾ ಇದೆ ಬೀಚ್ ಹತ್ರ ಹೋಗ್ತೀನಿ"
ಥಾಂಕ್ಸ ಕಣ್ರಿ! ಅಂತೂ ನಮ್ಮ ಹೆಸರೂ ಸಹಾ "ಲವ್ ಟ್ರಾಜಿಡಿಗೆ" ಮಾತ್ರ ಲಾಯಕ್ಕು ಅಂತ ಖಾತ್ರಿಯಾಯ್ತು.ನನ್ನ ಹೆಸರು ಬದಲಾಯಿಸಿ ಪ್ರಯತ್ನಿಸುವಾ! :-)

ಇಷ್ಟ ಆಯ್ತು. ಆದ್ರೆ ಒಂದಕ್ಕಾದ್ರು ಸುಖಾಂತ್ಯ ಅಂತ ಮಾಡ್ರಿ.
ಯಾಕೆ ಸುಮ್ನೆ ಹೊಟ್ಟೆ ಉರಿಸ್ತಿರಾ..

ಭಾವಜೀವಿ... said...

ಎಲ್ಲೋ, ಯಾರದ್ದೋ ಬ್ಲಾಗಿನಂಗಳದಲ್ಲಿ ನಿಮ್ಮ ಈ ಬ್ಲಾಗಿನ ಜಾಡು ದೊರಕಿತು, ಅದನ್ನೇ ಹಿಂಬಾಲಿಸಿ ಬಂದವನ ಮನಸ್ಸನ್ನು ಒದ್ದೆಯಾಗಿಸಿದಿರಿ!!
ಕಥೆ ಒಂದಿಷ್ಟು ಅಲ್ಲಲ್ಲಿ ಜಾಡು ತಪ್ಪಿದಂತೆ ಅನಿಸಿದರು, ಅದರ ಆಶಯ, ಪಾತ್ರಗಳ ಅಭಿವ್ಯಕ್ತಿ ಅದ್ಭುತವಾಗಿ ಮೂಡಿ ಬಂದಿದೆ..!
ಕಥೆಯೊಳಗಿನ ಸಣ್ಣ ಸಣ್ಣ ಚಿತ್ರಣಗಳು, ಅದನ್ನು ಒಂದು ಸುಂದರವಾದ ಕೊಲಾಜಿನಂತಾಗಿಸಿದೆ!

"ನಿನ್ನ ಮರೆಯಲಾದರೂ ಈ ಹುಡುಗಿಯಲ್ಲಿ ನಿನ್ನ ಹುಡುಕುವುದಿಲ್ಲ ನಾನು. ನನಗೆ ಒಂದು ಮಾತೂ ಹೇಳದೇ ಹೋದವಳಿಗೆ ಇನ್ನೇನು ಶಿಕ್ಷೆ ಕೊಡಲಿ?...."

"ಕಡಲಾಳಡಲ್ಲಿ ನೆಮ್ಮದಿಯ ಚಿರನಿದ್ದೆಗೆ ಇಳಿದವಳಿಗೆ ಹೇಗೆ ಗೊತ್ತಾಗಬೇಕು ನೆನಪಾಗಿ ಕಾಡಬೇಡ ಇನ್ನು ನಿನ್ನವನಲ್ಲ ನಾನು..."

ಈ ಸಾಲುಗಳು ನನ್ನನ್ನು ಕಾಡದೇ ಹೇಗೆ ಬಿಟ್ಟಾವು ಹೇಳಿ!!??
ವಿಪರೀತ ಕಾಡಿದಾಗೆಲ್ಲಾ ನಿಮ್ಮ ಬ್ಲಾಗಂಗಳದಲ್ಲಿ ಬಂದು ನಿಲ್ಲುತ್ತೇನೆ, ಇನ್ನಷ್ಟು ಭಾವನೆಯ ಬೀಜಗಳನ್ನು ಆಯಲು!!.. ಬರಿಗೈಯಲ್ಲಿ ಕಳಿಸಲಾರಿರೆಂದು ನನ್ನ ನಂಬಿಕೆ!!

Unknown said...

thumba chennagi ide kathe.. nange nimmalli ishta aagodu enu gotta , !! tragic endings !!! .. yaakandre tragic endings nalle nijavaada bhavanegalanna hora haakodakke avakaasha irodu alwa ?..

ವಿಜಯ್ ಜೋಶಿ said...

I like your blog and your style of writing.. It seems you have read a lot.. To be frank, I like socially concerned articles. Write about various social issues. But don't stop writing on your current subjects.

- Vijay Joshi.

ಮೃಗನಯನೀ said...

ಧನ್ಯವಾದಗಳು ಸುಶ್

ಮೃಗನಯನೀ said...

ರಂಜು ದಯವಿಟ್ಟು ನನ್ನ ಮೇಡಮ್ ಅಂತ ಕರೀಬೇಡಿ.ತುಂಬ ಚ್ಚಿಕ್ಕವಳು ನಾನು.thnx 4r the welcome:-} ನನಗ್ಯಾಕೋ ಟ್ರಜಿಕ್ ಎಂಡಿಂಗಳು ಇಷ್ಟ ಆಗುತ್ತೆ.ಮುಂದಿನ ಕಥೆಗಳಲ್ಲಿ ಬೆರೆ ಥರ ಬರೆಯೊಕ್ಕೆ ಪ್ರಯತ್ನಿಸುತ್ತೇನೆ.ಧನ್ಯವಾದಗಳು ಕಾಮೆಂಟಿಸಿದ್ದಕ್ಕೆ..

ಮೃಗನಯನೀ said...

@ Amar
ನಿಮ್ಮ ನಿರೀಕ್ಷೆಗೆ ತಕ್ಕಂತೆ ಬರೆಯಲು ಪ್ರಯತ್ನಿಸುವೆ

ಮೃಗನಯನೀ said...

@chiravirahi
ಅಯ್ಯೂ ಅದು ನಿಮ್ಮ ಹೆಸರು ಅಂತ ಖಂಡಿತ ಗೊತ್ತಿರಲಿಲ್ಲ.
ನನ್ನ ಕತೆಗಳ ಪಾತ್ರಗಳಿಗೆ ಹೆಸರು ಕೊಡೊದು ಇಷ್ಟ ಇಲ್ಲ ನಂಗೆ ಆದ್ರೆ ಓದುವವರಿಗೆ confuseಆಗುತ್ತೆ ಅಂತ ಹೆಸರು ಕೊಡುತ್ತೀನಿ.

ಮೃಗನಯನೀ said...

@Bhavajeevi
ನನ್ನ ಬರವಣಿಗೆಯನ್ನು ಹೀಗೇ ಗಮನಿಸುತ್ತಾ ಇರಿ.ತಪ್ಪುಗಳಿದ್ದರೆ ತ್ತಿದ್ದಿ. ಭಾವನೆಗಳ ಬೀಜಗಳನ್ನು ಬಿತ್ತಲು ನಾನು ರಡಿ ಆಯ್ದುಕೊಳ್ಳಲು ನೀವಿರುವಾಗ.

ಮೃಗನಯನೀ said...

@crazy
ಹ್ಮ್ಮ್ ಮ್... ಮೆಚ್ಚಿಕಂಡಿದ್ದಕ್ಕೆ ಧನ್ಯವಾದಗಳು.ಹುಡುಗ ಹುಡುಗಿ ಸೇರಲಿಲ್ಲ ಅಂದರೆ ಎಲ್ಲರೂ ಟ್ರಾಜಿಕ್ ಅಂತಾರೆ ಯಾಕೆ? ಆದ್ರೆ ಇದು ಮಾತ್ರ ಟ್ರಜಿಕ್ ಕಥೆನೇ.. ಮನುಷ್ಯ ಮನುಷ್ಯ ನ ನಡುವಿನ ಸಂಬಂಧಗಳ ಬಗ್ಗೆ ನನಗೆ ಆಸಕ್ತಿ ಹೆಚ್ಚು

ಮೃಗನಯನೀ said...

thnx 4r ur sujjestion Joshi

Unknown said...

It makes me think of marriage. I don't know why but I'm getting a deja vu! I must admire most parts of the article.

----------------------------------

For the use of a hassle free kannada anywhere you want directly from the internet.. use http://quillpad.in
It's best for the true Kannadiga!

Harsha Narayana said...

ನಮ್ಮ ಘಾಬರಿ ಧಾವಂತಗಳು ಕಡಲಾಳಡಲ್ಲಿ ನೆಮ್ಮದಿಯ ಚಿರನಿದ್ದೆಗೆ ಇಳಿದವಳಿಗೆ ಹೇಗೆ ಗೊತ್ತಾಗಬೇಕು ನೆನಪಾಗಿ ಕಾಡಬೇಡ ಇನ್ನು ನಿನ್ನವನಲ್ಲ ನಾನು....

ಇವು ತುಂಬ ಚೆನ್ನಾಗಿವೆ.... ಅಂದಂಗೆ ನಾನು ನಿಮ್ಮ ಬರಹಗಳಿಂದ ಗಮನಿಸಿದ ಒಂದು ಅಂಶ ಅಂದರೆ ನೀವು ಭಾವನೆಗಳನ್ನ ತುಂಬಾ ಚೆನ್ನಾಗಿ, ಮನಮುಟ್ಟುವಂತೆ ಬರಿತೀರ,....

ರೀ ನೀವು ಸ್ವಲ್ಪ ಪ್ರಯತ್ನ ಮಾಡಿದ್ರೆ ಮುಂಗಾರು ಮಳೆ ಗಿಂತ ಚೆನಾಗಿರೊ ದುಃಖಾಂತ್ಯ ಇರೊ ಕಥೆ ಬರಿತೀರ ಅನ್ಸುತ್ತೆ... ಪ್ರಯತ್ನ ಮಾಡಿ....
looking forward for ur next blog....

Susheel Sandeep said...

ಮೃಗನಯನಿ:
ಎಂದಿನಂತೇ ಮತ್ತೊಂದು ಅತ್ಯುತ್ತಮ ಕತೆ!
ನಿಜಕ್ಕೂ ಭಾವನೆಗಳನ್ನು ನೀವು ವ್ಯಕ್ತಪಡಿಸೋ ರೀತಿ ಇಷ್ಟವಾಗತ್ತೆ.
"ಅವಳ ನಗ್ನತೆಯನ್ನು ತನ್ನ ತೆಳು ಬೆಳ್ಳನೆ ಹೊದಿಕೆಯಿಂದ ಮುಚ್ಚಿದಾನೆ ಎನ್ನಿಸುವ ಚಂದ್ರ, ನಿದ್ದೆಯಲ್ಲಿ ಮಗ್ಗಲು ಬದಲಿಸುತ್ತಿರುವಳೋ ಎನ್ನುವಂತೆ ದಡ ಮುಟ್ಟುವ ಅಲೆಗಳು.." - ವಾವ್!! ಸೂಪರ್...
ಇನ್ನಷ್ಟು ಮತ್ತಷ್ಟು ಬರವಣಿಗೆಗಳು ಮೂಡಿಬರಲಿ

Ganumaamanigondu namana said...

Nanaganniso prakaara, bhaavanegale jeevana...Baavanaa rahita jeevana kalpanaateeta anta.

Samudra noodtaa nodta kanneeraago hudugee, manassina olage yestondu yochanaamagnalu....! Ee nenapugalige katte kattodikke aagattaaaa.???

anu said...

Mruganayani, yaraddu blog spotnalli nodi nimma bali bandavalanna yaake eethara alisidri. really nimma ee kathe tumba .............chanagide. nanagu tragidy ending stories andre bahala ista. aveno manasige bega tattatte. kep writing. nimma mail id yake kottilla

ಮೃಗನಯನೀ said...

nanna id malnadhudgi@gmail.com

ದಾರಿ ತಪ್ಪಿದವನು .. said...

ಅಮ್ಮಾ ... ಎಂಥ ಕಥೆ.. ಕೊನೆವರಗೂ ಪಾಪ ಅವ್ಳು ಇನ್ನಿಲ್ಲ ಅಂತ ಗೊತ್ತೆ ಆಗೋಲ್ಲ.. ಗೊತ್ತಾದ ಮೇಲೆ , ಮನಸ್ಸು ಖಿನ್ನವಾಗುತ್ತೆ.. ತುಂಬಾ ಮನುಮುತ್ತುವಂತೆ ಬರೆದ್ದಿದ್ದಿರಿ ..

ದಾರಿ ತಪ್ಪಿದವನು .. said...

ಎಂಥ Climaxu.. ತುಂಬಾ ದಿನ ಆದ ಮೇಲೆ ಒಂದು ತರಹದ ವಿಷಾದ ಆವರಿಸಿದೆ .. ದುರಂತ ಕೊನೆ.. ಮನಸಿಗೆ ತುಂಬಾ ಹತ್ತಿರವಾಗಿದೆ..